ಅಪ್ಪ ಅಂದ್ರೆ ವಿಲ್ಲನ್ನಾ ?

 ಅಪ್ಪ ಅಂದ್ರೆ ವಿಲ್ಲನ್ನಾ ?

ಹಾಸ್ಯ ಲೇಖನ    - ಬೇಲೂರು ರಾಮಮೂರ್ತಿ

ಪ್ರೆಶ್ನೆ ಸುಂದರರಾಯರನ್ನು ಈಚೆಗೆ ಕಾಡೋಕೆ ಷುರು ಮಾಡಿದೆ. ಅವರಿಗೆ ಸ್ನೇಹ ಬಳಗ ಹೆಚ್ಚು. ಆದರೆ ಅಲ್ಲಿ ಪ್ರೆಶ್ನೆಗೆ ಉತ್ತರ ಪಡ್ಕೊಳೋದು ಅವರಿಗೆ ಇಷ್ಟ ಇಲ್ಲ. ಒಂದು ವೇಳೆ ಪ್ರೆಶ್ನೆ ಕೇಳಿದರೂ ಇದು ಯಾರ ಮನೆ ವಿಚಾರ ಅಂತ ಸ್ನೇಹಿತರು ಕೇಳುತ್ತಾರೆ. ಆಗ ಇದು ತಮ್ಮ ಮನೆಯ ವಿಚಾರ ಅನ್ನಬೇಕು. ಆಗ ಸ್ನೇಹಿತರು ತಲೆಗೊಂದೊಂದು ಮಾತಾಡಬಹುದು. ಕೆಲವರು ಮಕ್ಕಳನ್ನು ದೂರಬಹುದು. ಇನ್ನು ಕೆಲವರು ನೀನು ಮಕ್ಕಳನ್ನು ಬೆಳೆಸಿದ ರೀತಿ ಸರಿಯಿಲ್ಲ ಅಂತ ತಮ್ಮನ್ನೇ ದೂರಬಹುದು. ಅವರ ಮನೆ ವಿಷಯ ಬೇರೆಯವರಿಗೆ ಆಡ್ಕೊಳೋ ವಸ್ತುವಾಗೋದು ಸುಂದರರಾಯರಿಗೆ ಇಷ್ಟವಿಲ್ಲ. ಅದಕ್ಕೇ ಎಲ್ಲವನ್ನೂ ತಮ್ಮೊಳಗೇ ಅನುಭವಿಸಿಕೊಂಡಿದ್ದಾರೆ. ಇಂಥಾ ವಿಚಾರಗಳನ್ನು ಹಂಚಿಕೊಳ್ಳಬಹುದಾಗಿದ್ದ ಏಕೈಕ ವ್ಯಕ್ತಿ ಅಂದರೆ ಪತ್ನಿ. ಅವರು ಸುಂದರರಾಯರನ್ನು ಅಗಲಿ ಐದಾರು ವರ್ಷಗಳೇ ಕಳೆದಿವೆ. ನನ್ನ ಈಚಿನ ಪರಿಸ್ಥಿತಿಗೆ ಒಂದು ರೀತಿಯಲ್ಲಿ ಹೆಂಡತಿಯೇ ಕಾರಣ. ಏಕೆಂದರೆ ಅವಳು ಬದುಕಿದ್ದಿದ್ದರೆ ಹೀಗಾಗುತ್ತಿರಲಿಲ್ಲ ಅಂದುಕೊಂಡಿದ್ದಾರೆ ಸುಂದರರಾಯರು. 

 

ಸುಂದರರಾಯರು ತಮ್ಮ ನಡೆ ನುಡಿಗಳನ್ನು ಆಗಾಗ ಅವಲೋಕನ ಮಾಡಿಕೊಳ್ತಾರೆ. ತಾವು ಮೊದಲಿಂದ್ಲೂ ಹೀಗೇನೋ ಅಥವಾ ಈಚೆಗೆ  ಬದಲಾಗಿದ್ದೀನೋ ಅಂತ ಅವರಿಗೆ ಅನುಮಾನ ಬರುತ್ತಿದೆ. ಇಂದಿನ ಯುಗದಲ್ಲಿ, ಮಕ್ಕಳ, ಮೊಮ್ಮಕ್ಕಳ ಎದುರಿಗೆ ಸರಿಯಿಲ್ಲದಿರುವುದನ್ನು  ಸರಿಯಿಲ್ಲ ಅಂತ ಹೇಳೋದು ಕೂಡಾ ಸರಿಯಲ್ಲ ಅನಿಸಿಬಿಟ್ಟಿದೆ ಅವರಿಗೆ. ಇದನ್ನು ಜನರೇಷನ್ ಗ್ಯಾಪ್ ಅನ್ನಬಹುದೇನೋ. ಒಂದೊಂದು ಸಾರಿ ಯಾವುದು ಎತ್ಲಾಗಾದ್ರೂ ಹಾಳಾಗಿ ಹೋಗ್ಲಿ ನನ್ನ ಪಾಡಿಗೆ ನಾನಿದ್ರೆ ಸಾಕು ಅಂದುಕೊಂಡರೂ ಹಾಳಾದ್ದು ವಯಸ್ಸು, ಅನುಭವ, ಹಿರಿತನ ಇವೆಲ್ಲಾ ಸುಮ್ಮನಿರಗೊಡೋದಿಲ್ಲ. ಅವರ ಸ್ನೇಹಿತರ ಮಗ ಒಂದು ಸಾರಿ ವಯಸ್ಸಾದವರ ಸಮಸ್ಯೆಗಳ ಬಗೆಗೆ ಮಾತಾಡ್ತಾ       ಅಂಕಲ್ ವಯಸ್ಸಾದ ಮೇಲೆ ಸುಖವಾಗಿ, ನೆಮ್ಮದಿಯಾಗಿರ್ಬೇಕಾದ್ರೆ  ಮುಖ್ಯವಾದ ಎರಡು ಕೆಲಸ ಮಾಡಬೇಕು. ಏನು ಗೊತ್ತಾ ? ಒಂದು ತಿನ್ನೋದು, ಇನ್ನೊಂದು ತಲೆ ತಿನ್ನೋದುಅಂದಿದ್ದ. ಹೌದು ಜೀರ್ಣಶಕ್ತಿಗೆ ಅನುಗುಣವಾಗಿ ತಿನ್ನೋದು ಕಡಿಮೆ ಮಾಡಬಹುದು. ಆದರೆ ತಲೆ ತಿನ್ನೋದು ಅಂದ್ರೇನು. ವಯಸ್ಸಾದವನು ಏನು ಮಾತಾಡಿದರೂ ತಲೆ ತಿನ್ನೋದು ಅಂತಾದರೆ ವಯಸ್ಸಾದವರು ಮನೇಲಿ ಮಾತಾಡಲೇಬಾರದೇ? 

 

ಸಂಜೆ ವಾಯುವಿಹಾರದಲ್ಲ್ಲಿ ಸಿಗುವ ಸ್ನೇಹಿತರ ಪೈಕಿ ಪಟ್ಟಾಭಿ ತುಂಬಾ ಆತ್ಮೀಯ. ಅವನು ಆಗಾಗ ಅವನ ಮನೆ ಸಮಸ್ಯೆಗಳನ್ನು ಹೇಳ್ಕೊತಾನೆ. ಅವನೊಂದು ಸಾರಿನೋಡು ಸುಂದರು, ಕಣ್ಣಿಗೆ ಕಾಣೋ ಸಂಬಂಧಗಳಿಂದ ದೂರವಾಗಿ ಕಣ್ಣಿಗೆ ಕಾಣದ ಬೇರೆಯೇ ಸಂಬಂಧಗಳನ್ನು ಕಟ್ಕೊ. ಆಗ ಎಲ್ಲರೂ ನಿನ್ನವರಾಗುತ್ತಾರೆ. ಹೇಗೆ ಗೊತ್ತಾ, ಮಗ, ಸೊಸೆ, ಮಗಳು, ಅಳಿಯ, ಹೆಂಡತಿ  ಸಂಬಂಧಗಳೆಲ್ಲಾ ಸಮಯ ಕಳೆದಂತೆ ಹಳಸುತ್ತವೆ. ಆಗುವ ಅನುಭವಗಳಿಂದಾಗಿ ಯಾಕೆ ಇವರೆಲ್ಲಾ ನನ್ನನ್ನು ಹೀಗೆ ಕಾಣ್ತಿದಾರೆ ಅನಿಸುತ್ತೆ. ಕಡೆ ಕಡೆಗೆ ಇವರ್ಯಾರೂ ನನ್ನವರಲ್ಲ ಅನಿಸುವಷ್ಟು ಬೇಜಾರಾಗಿಬಿಡುತ್ತೆ. ನಿನ್ನ ಬದುಕನ್ನು ಆಳವಾಗಿ ಅಭ್ಯಾಸ ಮಾಡಿದರೆ ವರ್ಯಾರೂ ನಿನ್ನವರಲ್ಲ, ನೀನೂ ಅವರವನಲ್ಲ. ಬದಲಿಗೆ ಇರುವ ತನಕ ಹಾಗೆ ಪಾತ್ರ ಮಾಡ್ತಿರೋರು ಅನಿಸೋಲ್ವ. ಯಾಕಂದರೆ ಬರುವಾಗ ಅವರು ಯಾರೂ ನಿನ್ನ ಜೊತೆ ಬರಲಿಲ್ಲ. ಹೋಗುವಾಗಲೂ ವರ್ಯಾರೂ ನಿನ್ನ ಜೊತೆ ಬರೋಲ್ಲ. ಅಂದ ಮೇಲೆ ಸಂಬಂಧಗಳಿಗೆ, ಅವುಗಳ ನಡವಳಿಕೆಗೆ ಎಷ್ಟು ಬೆಲೆ ಕೊಡಬೇಕು ಹೇಳು. ಅದಕ್ಕೇ  ವಯಸ್ಸಾಗ್ತಾ ಬಂದ ಹಾಗೆ ಆಧ್ಯಾತ್ಮದತ್ತ ವಾಲಿದರೆ, ಮಕ್ಕಳು ನಮ್ಮವರಲ್ಲ, ಮೊಮ್ಮಕ್ಕಳು ನಮ್ಮವರಲ್ಲ, ಅಷ್ಟೇ ಯಾಕೆ ಸ್ನೇಹಿತರು, ನೆಂಟರು ಯಾರೂ ನನ್ನವರಲ್ಲ, ಬದಲಿಗೆ ನಾವು ಆರಾಧಿಸುವ, ಪೂಜಿಸುವ ರಾಮ, ಕೃಷ್ಣ, ಶಿವ, ಪಾರ್ವತಿಲಕ್ಷ್ಮಿ, ಸರಸ್ವತಿ, ಎಲ್ಲರೂ ನನ್ನವರು ಅನಿಸುತ್ತೆ. ನಾವು ಅವರಿಗೆ ಹತ್ತಿರವಿದೀವಿ ಅನ್ನೋ ನೆಮ್ಮದಿ ಇರುತ್ತೆಅಂದಿದ್ದ.   ಯಾಕೋ ಇತ್ತೀಚೆಗೆ ಪಟ್ಟಾಭಿ ಮಾತು ನಿಜ ಅನಿಸ್ತಿದೆ.



 

ಹಬ್ಬಗಳಲ್ಲಿ  ಮಗ ಸೊಸೆ ಮೊಮ್ಮಕ್ಕಳಿಗೆ ಅಂತ ಷಾಪಿಂಗ್ ಅಂತ ಹೊರಟಾಗ ಸುಂದರರಾಯರು ಮಗನಿಗೆನೋಡು ರಾಮು, ಬಟ್ಟೆ ಚನ್ನಾಗಿದೆ ಅಂತ ಸಿಕ್ಕಾಪಟ್ಟೆ ದುಡ್ಡು ಕೊಟ್ಟು ತರಬೇಡ. ಮಕ್ಕಳು ಬೆಳೆಯೋ ದಿನಗಳಲ್ಲಿ ಬಟ್ಟೆಯ ಅಳತೆ ದಿನೇ ದಿನೇ ಬದಲಾಗ್ತಿರುತ್ತೆ. ಇನ್ನು ನೀನು ತರೋ ದುಬಾರಿ ಬಟ್ಟೆಗಳನ್ನು ಮಕ್ಕಳು ಮತ್ತು ನೀನು ಒಂದೋ ಎರಡೋ ಸಾರಿ ಹಾಕ್ಕೊಂಡು ಆಮೇಲೆ ಬಣ್ಣ ಮಾಸಿತು ಅಂತಲೋ, ಚಿಕ್ಕದಾಯಿತು ಅಂತಲೋ, ಹಳೇ ಡಿಸೈನ್ ಆಯಿತು ಅಂತಲೋ ಬಿಸಾಕ್ತೀರ. ಇದು ಬರೀ ಬಟ್ಟೆಗಲ್ಲ, ನಿನ್ನ ಷೂ, ಮೊಬೈಲು ಎಲ್ಲದಕ್ಕೂ ಅನ್ವಯಿಸುತ್ತೆ. ಅದಿಕ್ಕೆ ಹೆಚ್ಚು ದುಬಾರಿಯದನ್ನು ಕೊಳ್ಳಬೇಡ, ಹೆಂಡತಿ ಮಕ್ಕಳಿಗೆ ಕೊಡಿಸಲೂ ಬೇಡ  ಅಂದಿದ್ದಕ್ಕೆ ಮಗಅಪ್ಪಾ ಇದು ನಿಮ್ಮ ಕಾಲ ಅಲ್ಲ, ನಮ್ಮ ಕಾಲ. ಈಗ ಹೀಗೇ ನಡೆಯೋದು. ನಿನ್ನ ದುಡಿಮೆಯ ಕಾಲದಲ್ಲಿ ನೀನೇ ಹೇಳುವ ಹಾಗೆ ಹಾಸಕ್ಕೆ ಇದ್ರೆ ಹೊದಿಯೋಕೆ ಇರುತ್ತಿರಲಿಲ್ಲ, ಇನ್ನು ನಮ್ಮ ಕಾಲದಲ್ಲಿ ಹೀಗಲ್ಲ. ಒಂದೊಂದು ಸಾರಿ ಸಂಪಾದನೆ ಎಷ್ಟೂಂದ್ರೆ,  ಎಷ್ಟು ಖರ್ಚು ಮಾಡಿದರೂ ತಿಂಗಳ ಕೊನೆಗೆ ಇನ್ನೂ ಬೇಕಾದಷ್ಟು ಹಣ ಉಳಿದಿರುತ್ತೆ. ಅದಿಕ್ಕೆ ನಾವು ಖರ್ಚು ಮಾಡೊಕೆ ಹಿಂದು ಮುಂದು ನೋಡಲ್ಲಅಂದಿದ್ದ. ಇನ್ನೊಮ್ಮೆ ಯಾವುದೋ ವಸ್ತುವಿಗೆ ಕೊಟ್ಟ ಬೆಲೆ ಬಹಳ ದುಬಾರಿ ಅಲ್ವೇನೋ ಅಂದ್ರೆ  ಅಪ್ಪಾ ಚನ್ನಾಗಿರೋದು ಬೇಕೂಂದ್ರೆ ದುಡ್ಡು ಹೆಚ್ಚಾಗಿ ಕೊಡಬೇಕುಅಂದಿದ್ದ. ಅವನ ಭುಜದ ಮೇಲೆ ಕೈ ಹಾಕಿಕೊಡು ಯಾರು ಬೇಡಾಂದೋರು ಆದರೆ ದುಡ್ಡು ಖರ್ಚು ಮಾಡುವಾಗ ಇದಕ್ಕೆ ಇಷ್ಟು ಬೆಲೆ ಸರಿಯೇ? ಇಷ್ಟೊಂದು ಬೆಲೆ ಕೊಟ್ಟು ನಾನು ಇದನ್ನು ಖರೀದಿಸಬೇಕೇ ಅಂತ ಒಮ್ಮೆ ಯೋಚನೆ ಮಾಡು. ಏಕೆಂದರೆ ನೀನು ಸಂಪಾದಿಸೋ ಒಂದೊಂದು ರೂಪಾಯಿಗೂ ನೀನು ಕಷ್ಟ ಟ್ಟಿರ್ತೀಯ. ತಿಂಗಳ ಕೊನೆಗೆ ನಿನ್ನ ಅಕೌಂಟಿಗೆ ಲಕ್ಷ ಲಕ್ಷ ಬಂದು ಬೀಳಬಹುದು. ಆದರೆ ಲಕ್ಷ ಲಕ್ಷ ಬಂದು ಬೀಳೋಕೆ ನೀನು ಎಷ್ಟು ದಿನ ನಿದ್ದೆಗೆಟ್ಟಿರ್ತೀಯ, ಊಟ ಬಿಟ್ಟಿರ್ತೀಯ, ಸುಖ, ಸಂತೋಷ ತೊರೆದಿರ್ತೀಯ ಅಂತ ಯೋಚನೆ ಮಾಡು. ಅಳೆದೂ ತೂಗಿ ಖರ್ಚು ಮಾಡಿದರೇ ಸುಖಅಂದಿದ್ದರು. ಅವರ ಮಾತುಗಳನ್ನೇನೂ ಮಗ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಆದರೆ ಅವನ ಹೆಂಡತಿ ಕಿವಿ ಒಳಗೆ ತುರುಕಿದ. ಅವಳು ಮರುದಿನ ತಿಂಡಿ ತಟ್ಟೆ ಅವರ ಮುಂದೆ ತಳ್ಳುವಾಗಮಾವಾ, ನಮ್ಮ ಖರ್ಚು, ವೆಚ್ಚ ಇವೆಲ್ಲಾ ನಿಮಗ್ಯಾಕೆ, ಇಷ್ಟಕ್ಕೂ ನಾವೇನು ನಿಮ್ಮನ್ನ ದುಡ್ಡು ಕೇಳ್ತಿಲ್ಲವಲ್ಲ. ಅವರೂ ದುಡೀತಾರೆ, ನಾನೂ ದುಡೀತೇನೆ. ಅಷ್ಟು ದುಡಿಯುವಾಗ ಕಣ್ಣಿಗೆ ಕಂಡದ್ದನ್ನು ಕೊಂಡು ಸಂತೋಷ ಪಡೋದ್ರಲ್ಲಿ ಏನು ತಪ್ಪು. ನಿಮ್ಮ ಕಾಲದ ಹಾಗೆ ನಾವು ಸಂಬಳಕ್ಕೆ ಒಂದನೇ ತಾರೀಖು ಅಂತ ಕಾಯಬೇಕಿಲ್ಲ. ನಿಮ್ಮ ಮಕ್ಕಳನ್ನು ನೀವು ಬಡತನದಲ್ಲೇ ಬೆಳೆಸಿದ್ರಿ. ಹಾಗಂತ ನಾವೂ ನಮ್ಮ ಮಕ್ಕಳನ್ನು ಬಡತನದಲ್ಲೇ ಬೆಳೆಸಬೇಕಿಲ್ಲ. ನಿಮ್ಮ ಕೆಲಸ ನೋಡ್ಕೊಂಡು ನೀವು ಸುಮ್ಮನಿದ್ದುಬಿಡಿಅಂದಿದ್ದಳು. ಮಗ ತಾನು ತಂದೆಗೆ ಹೇಳಲಾರದ ಮಾತುಗಳನ್ನು ಹೆಂಡತಿಯಿಂದ ಹೇಳಿಸಿದ್ದ.

 

ಮಗ ಸೊಸೆ ಆಫೀಸಿಗೆ ಮತ್ತು ಮಕ್ಕಳು ಕಾಲೇಜಿಗೆ ಹೋಗಿ ಮನೆಯಲ್ಲಿ ಒಂಟಿಯಾಗಿದ್ದ ಒಂದು ದಿನ  ಯಾಕೋ ಸ್ವಲ್ಪ ಮೈ ಕೈ ನೋವು, ಸುಸ್ತು ಸಂಕಟ ಅಂತ ಡಾಕ್ಟರತ್ರ ಹೋದಾಗ ಅವರು ಮಾತ್ರೆ, ಇಂಜಕ್ಷನ್ನು ಕೊಟ್ಟರು. ಸಂಜೆ ಮಗ ಮನೆಗೆ ಬಂದಾಗ ಸುಂದರರಾಯರು ಮಲಗಿದ್ದರು. “ಯಾಕಪ್ಪಾ ಮಲಗಿದೀರಅಂತ ಕೇಳಿದ ಮಗನಿಗೆಬೆಳಗಿನಿಂದ ಯಾಕೋ ಮೈ ಸರಿ ಇಲ್ಲ ಕಣೋ, ಡಾಕ್ಟರ ಹತ್ರ ಹೋಗಿದ್ದೆ ಅಂದಾಗ ಮಗನೀವು ಒಬ್ಬರೇ ಯಾಕೆ ಹೋದ್ರಿ, ನನಗೆ ಹೇಳಿದ್ರೆ ನಾನು ಕರ್ಕೊಂಡು ಹೋಗ್ತಿರಲಿಲ್ವಾ. ನೋಡಿದೋರು ಮಗ ಅಪ್ಪನನ್ನು ನಿರ್ಲಕ್ಷಿಸಿದ್ದಾನೆ ಅಂದ್ಕೊಬೇಕಲ್ಲ. ನೀವು ಮಾಡೋದು ಒಂದೊಂದಲ್ಲಅಂತ ರೇಗಿದ್ದ. ಸುಂದರರಾಯರುಅಲ್ವೋ ನೀನು ಅದೇ ತಾನೇ ಆಫೀಸಿಗೆ ಇಪ್ಪತ್ತು ಕಿಲೋಮೀಟರು ಡ್ರೈವ್ ಮಾಡಿಕೊಂಡು ಹೋಗಿರ್ತೀಯ. ನಾನು ಫೋನ್ ಮಾಡಿದರೆ ಮತ್ತೆ ಇಪ್ಪತ್ತು ಕಿಲೋಮೀಟರು ಡ್ರೈವ್  ಮಾಡಿಕೊಂಡು ಬರಬೇಕು. ನಿನಗೇ ಎಷ್ಟು ಕಷ್ಟ ನೋಡುಅಂದರೂ ಮಗನಿಗೆ ವಿವರಣೆ ಸರಿ ಎನಿಸದೇ ಗೊಣಗಿಕೊಂಡು ಹೋಗಿದ್ದ. ಇನ್ನೊಮ್ಮೆ ಎರಡು ದಿನದಿಂದ ಮೈ ಕೈ ಎಲ್ಲ ನೋವು, ಯಾಕೋ ಸುಸ್ತು, ಸಂಕಟ, ಹೊಟ್ಟೆಗೆ ಸರಿಯಿರಲಿಲ್ಲ. ಆಗ ಮಗನನ್ನುನನ್ನನ್ನು ಡಾಕ್ಟರ ಹತ್ರ ಕರ್ಕೊಂಡು  ಹೋಗ್ತೀಯಅಂತ ಕೇಳಿದ್ದಕ್ಕೆಇಷ್ಟಕ್ಕೆಲ್ಲ ಡಾಕ್ಟರ ಹತ್ರ ಯಾಕೆ. ಎರಡು ದಿನ ಸ್ವಲ್ಪ ಬಾಯಿ ಚಪಲ ಬಿಟ್ಟು ಆರಾಮವಾಗಿರಿ ಎಲ್ಲ ಸರಿಹೋಗುತ್ತೆಅಂದಿದ್ದ. ಆಗಲೂ ಮಗನಿಗೆ ಹೇಳದೇ ಡಾಕ್ಟರ ಹತ್ರ ಹೋಗಿ ಬಂದು ಅವರು ಕೊಟ್ಟ ಮಾತ್ರೆಗಳನ್ನು ಕದ್ದು ಮುಚ್ಚಿ ತಗೊಂಡು ಸರಿಹೋಗಿದ್ದರು. ಆದರೆ ಈಗ ಡಾಕ್ಟರ ಹತ್ರ ಹೋಗಿದ್ದನ್ನು ಹೇಳಿದ್ದಕ್ಕೂ ಕೋಪ ಮಾಡ್ಕೊಂಡ. ಹಾಗಾದರೆ ನಾನು ಏನು ಮಾಡಲಿ ಅಂತ ತೊಳಲಾಡಿದ್ದರು. ಆದರೆ ಸುಂದರರಾಯರಿಗೆ ಅರ್ಥವಾಗಿದ್ದೆಂದರೆ ವಯಸ್ಸಾದ ಮೇಲೆ ಮಕ್ಕಳ ಜೊತೆ ಬದುಕೋಕೆ ಒಂದು ರೀತಿಯ ವಿಶೇಷ ಬುದ್ಧಿವಂತಿಕೆ ಬೇಕು ಅಂತ.


ಸುಂದರರಾಯರಿಗೆ ಸದಾ ಮಗನ ಹತ್ತಿರ ತುಂಬಾ ಮಾತಾಡಬೇಕು ಅಂತ ಆಸೆ. ಆದರೆ ಮಗನಿಗೆ ಮಾತ್ರ ಪುರುಸೊತ್ತು ಇಲ್ಲ. ಆಫೀಸಿಗೆ ಹೊರಟ್ಯಾ, ಊಟ ತಗೊಂಡಿದೀಯ, ಎಷ್ಟೊತ್ತಿಗೆ ಬರ್ತೀಯ, ಪರ್ಸು ಜೋಪಾನ ಅಂತೆಲ್ಲ ಹೇಳಬೇಕು ಅಂತ ಅವರಿಗೆ ಆಸೆ. ಆದರೆ ಮಗ ಅದಕ್ಕೆಲ್ಲ ಬ್ರೇಕ್ ಹಾಕಿದಾನೆ. ಇನ್ನು ರಾತ್ರಿ ಊಟ ಮಾಡುವಾಗಲೂ ಹೆಚ್ಚು ಮಾತಿಲ್ಲ. ಅದಕ್ಕೇ ಸುಂದರರಾಯರು ಒಂದು ದಿನ ಮಗನೊಂದಿಗೆ, “ ರಾಮು, ಎಷ್ಟೋ ಸಾರಿ ನಾನು ನಿನ್ನತ್ರ ಮಾತಾಡಬೇಕು ಅಂತ ಬಂದಾಗ ನೀನು ಲ್ಯಾಪ್ ಟಾಪ್ ನೋಡ್ತಿರ್ತೀಯ, ಇಲ್ಲಾ ಮೊಬೈಲ್ ಕೆದಕ್ತಾ ಇರ್ತೀಯನಿನ್ನತ್ರ ಮಾತಾಡೋಕೆ ನಾನು ಅಪಾಯಿಂಟ್ಮೆಂಟ್  ತಗೋಬೇಕು ಅನ್ನೋ ಹಾಗಾಗಿದೆ. ಇನ್ನು ನಾನು ಮಾತಾಡೋಕೆ ಬಂದ್ರೆ ನೀನು ಮೊಬೈಲಿಂದ ಮುಖ ತೆಗೀದೇ ಏನಪ್ಪಾ ಅಂತೀಯ. ಆಗ ನನಗೆ ನಿನ್ನನ್ನು ಮಾತಾಡಿಸೋ ಉತ್ಸಾಹವೇ ಹೋಗುತ್ತೆಅಂದಿದ್ದಕ್ಕೆ ಮಗ ಸಿಟ್ಟಿನಿಂದಯಾಕೋ ಬರ್ತಾ ಬರ್ತಾ  ನೀವು ವಿಚಿತ್ರವಾಗಿ ಆಡ್ತಿದೀರಅಂದಿದ್ದ.

 

ಇಂಥಾ ಒಂದೊಂದೇ  ವಿಚಾರಗಳಿಂದಾಗಿ ತಂದೆ ಮಗನ ನಡುವೆ ಮಾತು ಕಡಿಮೆಯಾಗಿದೆ. ಬದುಕು ಹೇಗೆ ಬರುತ್ತೋ ಹಾಗೆ ಸ್ವೀಕರಿಸೋದು ಸುಂದರರಾಯರಿಗೆ ಅನಿವಾರ್ಯ ಅನಿಸಿದೆ. ಮಾತು ಬೆಳ್ಳಿ ಮೌನ ಬಂಗಾರ ಅನ್ನುವಂತೆ ಇದ್ದುಬಿಡಬೇಕು ಅಂದ್ಕೊಂಡು  ಅವರೇ ಮಾತು ಕಡಿಮೆ ಮಾಡಿದ್ದಾರೆ. ಆಡಿದರೆ ದೇವರ ಫೋಟೋಗಳ ಮುಂದೆ, ಹೆಂಡತಿಯ ಫೋಟೋ ಮುಂದೆ ಮಾತಾಡ್ತಾರೆ. ಈಚೀಚೆಗೆ ಮನೆಗೆ ಪೇಪರ್ ಹಾಕೋನು, ಹಾಲು ಹಾಕೋನು ತರಕಾರಿ ತರೋನು ಕೂಡಾ ತಮ್ಮ ಬಗ್ಗೆ ಕೇವಲವಾಗಿ ಮಾತಾಡೋದು ಅವರಿಗೆ ಹಿಡಿಸ್ತಿಲ್ಲ. ಅವತ್ತು ತರಕಾರಿಯವನು ಬಂದಾಗಎಷ್ಟಪ್ಪಾ ಕ್ಯಾರೆಟ್ಟುಅಂತ ಕೇಳಿದ್ದಕ್ಕೆಅದೆಲ್ಲ ನಿಮಗ್ಯಾಕೆ ಸ್ವಾಮಿ ನಿಮ್ಮ ಸೊಸೆನ ಕರೀರಿ ಅವರು ದುಡ್ಡು ಕೊಡೋರು, ಅವರು ತರಕಾರಿ ತಗೋಳೋರು ಮಧ್ಯದಲ್ಲಿ ನಿಮ್ಮದೇನು  ಅಂದಿದ್ದ. ತರಕಾರಿಯವನು ಹೀಗಂದ ಅಂತ ಕೂಡಾ ಸೊಸೆ ಮಗನೊಂದಿಗೆ ಹೇಳಬಾರದು.

 

ಮೊಮ್ಮಗ ಎಸ್. ಎಸ್. ಎಲ್. ಸಿ. ಪಾಸಾದ ತಕ್ಷಣ ಮಗ ಅವನಿಗೆ ಲಕ್ಷ ರೂಪಾಯಿ ಕೊಟ್ಟು ಮೋಟರ್ ಸೈಕಲ್ ತೆಗೆಸಿಕೊಟ್ಟಾಗ ಸುಂದರರಾಯರು, “ನೋಡು ರಾಮು ಈಗಲೇ ಮಕ್ಕಳಿಗೆ ಷೋಕಿ ಕಲಿಸಿದ್ರೆ ಅವರಿಗೆ ದುಡ್ಡಿನ ಬೆಲೆನೂ ಗೊತ್ತಾಗೋಲ್ಲ, ಜೀವನದ ಅರ್ಥನೂ ಆಗೋದಿಲ್ಲ.” ಅಂದಿದ್ದರು.  ಮೊಮ್ಮಕ್ಕಳಿಗೆ ಪಾಕೆಟ್ ಮನಿ ಅಂತ ಮಗ ಅವರು ಕೇಳಿದಷ್ಟು ದುಡ್ಡು ಕೊಡ್ತಿದ್ದ. ಇನ್ನು ಮೊಮ್ಮಗಳಿಗೆ ಅದೆಂಥದೋ ವಿನ್ಯಾಸವಿರುವ ಬಟ್ಟೆಗಳು, ಅವುಗಳಿಗೆ ಎಷ್ಟು ದುಡ್ಡೋ ಬಲ್ಲವರು ಯಾರು. ಇನ್ನು ಅಂಥಾ ಬಟ್ಟೆಗಳನ್ನು ಹಾಕಿಕೊಂಡು ಓಡಾಡಿದರೆ ನೋಡಿದೋರು ಏನಂತಾರೆ ಅನ್ನೋ ಆತಂಕ ಸುಂದರರಾಯರಿಗೆ. ಅದಕ್ಕೇ ಒಂದು ದಿನ ಮೊಮ್ಮಗಳೊಂದಿಗೆನೋಡಮ್ಮಾ ಹೆಣ್ಣು ಮಕ್ಕಳು ವಯಸ್ಸಿಗೇ ಇಂಥಾ ಉಡುಪು ಧರಿಸೋದು ಸರಿಯಲ್ಲಅಂದಿದ್ದಕ್ಕೆ ಮೊಮ್ಮಗಳುತಾತ ನೀನು ಸುಮ್ನಿರು, ನನ್ನಿಷ್ಟ. ಅಪ್ಪ ಕೊಡಿಸ್ತಾನೆ ನಾನು ಹಾಕ್ಕೊತೀನಿಅಂದಿದ್ಲು. ಮೊಮ್ಮಕ್ಕಳು ಎಲ್ಲಿ ಹೋಗ್ತಾರೆ, ಎಷ್ಟು ಹೊತ್ತಿಗೆ ಬರ್ತಾರೆ, ಅವರ ಸ್ನೇಹಿತರು ಯಾರು ಇವುಗಳ ಮೇಲೆ ಒಂದು ಕಣ್ಣಿಟ್ಟಿರು ಅಂತ ಮಗ ಸೊಸೆಗೆ ಕಿವಿ ಮಾತು ಹೇಳಿದ್ದರ ಪರಿಣಾಮ ಊಟಕ್ಕೆ ಕೂತಾಗ ಸುಂದರರಾಯರನ್ನು ಎಲ್ಲರೂ ತರಾಟೆಗೆ ತಗೊಂಡ್ರು. ಮೊಮ್ಮಕ್ಕಳುಏನ್ ತಾತ ನಮ್ಮ ಮೇಲೆ ಅಪ್ಪನ ಹತ್ರ ಫಿಟ್ಟಿಂಗ್ ಇಡ್ತೀರ, ಅಮ್ಮನ ಹತ್ರ ಅಪ್ಪನ ಬಗ್ಗೆ ಫಿಟ್ಟಿಂಗ್ ಇಡ್ತೀರ, ಇನ್ನು ಅಪ್ಪನ ಮೇಲೆ ನಮ್ಮತ್ರನೂ ಫಿಟ್ಟಿಂಗ್ ಇಡ್ತೀರ, ಅಮ್ಮನತ್ರನೂ ಫಿಟ್ಟಿಂಗ್ ಇಡ್ತೀರ. ನಿಮಗೆ ಮನೇಲಿ ಫಿಟ್ಟಿಂಗ್ ಇಡೋದೇ ಕೆಲಸಾನಾಅಂತ ಕೇಳಿದ್ರು. “ಏನೋ ರಾಮು ನಿನ್ನ ಮಕ್ಕಳು ಹೀಗೆ ಮಾತಾಡ್ತಾರೆಅಂತ ಮಗನ ಕಡೆ ನೋಡಿದರೆ ಮಗ ಊಟ ಮಾಡುತ್ತಾ ಅವರಿಗೆ ಉತ್ತರ ಕೊಡಿ ಅನ್ನುವಂತೆ ನೋಡಿದ. ಸೊಸೆ ಅನ್ನ ಹಾಕಿ ಮೊಸರು ಬಡಿಸಿ  ನಿಮ್ಮ ಪಾಡಿಗೆ ನೀವು ರಾಮ ಕೃಷ್ಣ ಅಂತ ಇರಬಾರದೇ? ನಿಮಗ್ಯಾಕೆ ಇಲ್ಲದ ಉಸಾಬರಿವಯಸ್ಸಾದೋರ್ನ  ಕಟ್ಕೊಂಡು ಏಗೋದು ನಮ್ಮ ಹಣೆಬರಹಅಂದಳು.  ಅವತ್ತು ಸುಂದರರಾಯರಿಗೆ ಸಿಟ್ಟು ಬಂದುನನ್ನನ್ನು ಕಟ್ಕೊಂಡು ಯಾಕೆ ಏಗ್ತೀಯ,  ಯಾವುದಾದರೂ ವೃದ್ಧಾಶ್ರಮಕ್ಕ್ಕೆ ತಳ್ಳಿಬಿಟ್ಟು ನೀವೆಲ್ಲಾ ನೆಮ್ಮದಿಯಾಗಿರಿಅಂದು ಊಟ ಮುಗಿಸಿ ಎದ್ದಿದ್ದರು. ಅವತ್ತು ರಾತ್ರಿಯೆಲ್ಲಾ ಅವರಿಗೆ ನಿದ್ದೆ ಬರಲಿಲ್ಲ. ವೃದ್ಧಾಶ್ರಮಕ್ಕೆ ಹೊರಟು ಹೋದರೆ ಹೇಗೆ ಎನ್ನುವ ಪ್ರೆಶ್ನೆ ಅವರನ್ನು ಇಡೀ ರಾತ್ರಿ ಕಾಡುತ್ತಿತ್ತು.

 

ಸುಂದರರಾಯರ ತಂದೆ ಆಗಿನ ಕಾಲದಲ್ಲಿ ನೂರಿಪ್ಪತ್ತು ಎಂಭತ್ತು ಅಳತೆಯ ಜಾಗದಲ್ಲಿ ಬಹಳ ದೊಡ್ಡದಾದ ಮನೆ ಕಟ್ಟಿಸಿದ್ದರು. ಆಗ ಮನೆ ತುಂಬಾ ಜನ, ಬರೋರು ಹೋಗೋರು ಜಾಸ್ತಿ, ಮಕ್ಕಳ ನಾಮಕರಣ, ಜುಟ್ಟು, ಮುಂಜಿ ಇವೆಲ್ಲಾ ಮನೇಲೇ ನಡೀತಾ ಇದ್ದಿದ್ದು. ನೂರಿನ್ನೂರು ಜನ ಬಂದರೂ ಊಟಕ್ಕೆ ಹಾಕಲು ತೊಂದರೆ ಇರಲಿಲ್ಲ. ಬರುಬರುತ್ತಾ ಜನ ಬರೋದು ಕಡಿಮೆ ಆಯಿತು. ಒಬ್ಬೊಬ್ಬರೇ ಖಾಲಿ ಆದರು. ಒಂದೊಂದು ಸಾರಿ ನಮಗೆ ಇಷ್ಟು ದೊಡ್ಡ ಮನೆ ಬೇಕೇ ಅನಿಸಿಬಿಡುತ್ತೆ. ಆದರೆ ಅದು ಅಪ್ಪನ ಕಾಲದ ಆಸ್ತಿ. ಬಹಳ ದೊಡ್ಡ ಮನೆ. ಹೇಗಾದರೂ ನಾನಿರುವ ತನಕ ಕಾಪಾಡಿಕೊಳ್ಳೋಣ ಅನಿಸಿತ್ತು.

 

ಒಂದು ದಿನ ಮಗಅಪ್ಪಾ ಇಷ್ಟು ದೊಡ್ಡ ಮನೆ ನಮಗೆ ನೋಡ್ಕೊಳೋದು ಕಷ್ಟ ಅದಿಕ್ಕೆ ಮನೇನ ಅಪಾರ್ಟ್ಮೆಂಟ್ ಕಟ್ಟೋರಿಗೆ ಕೊಡೋಣ. ನಮಗೆ ಒಂದು ಅಪಾರ್ಟ್ಮೆಂಟ್ ಕೊಟ್ಟು ಜೊತೆಗೆ ದುಡ್ಡೂ ಕೊಡ್ತಾರೆಅಂದ. ಸುಂದರರಾಯರು ಒಪ್ಪಲಿಲ್ಲ. ಮಗ ಒತ್ತಾಯಿಸಿದ. ಸುಂದರರಾಯರುನಾನು ಬದುಕಿರೋತನಕ ಇದು ಸಾಧ್ಯವಿಲ್ಲಅಂದರು. ಒಳ್ಳೆ ರಾಮಾಯಣ ಇವರನ್ನು ಕಟ್ಕೊಂಡು ಅಂದು ಮಗ ಸೊಸೆ ಅವರ ಜೊತೆ ಮಾತಾಡೋದನ್ನೇ ಬಿಟ್ಟರು. ಬರುಬರುತ್ತಾ ಸೊಸೆ ಹೇಳಿದ ಹೊತ್ತಿಗೆ ಸ್ನಾನ ಮಾಡಬೇಕು, ಅವಳು ಕೊಟ್ಟಾಗ, ಕೊಟ್ಟ ತಿಂಡಿ ತಿನ್ನಬೇಕು, ಮನೆಗೆ ನಮ್ಮ ಸ್ನೇಹಿತರು ಬರ್ತಾರೆ ನೀವು ಎಲ್ಲಾದರೂ ಹೊರಗೆ ಹೋಗಿ ಬನ್ನಿ ಅಂದರೆ ಹೋಗಬೇಕು. ಮಗ ತಂದುಕೊಟ್ಟ ಷರಟು ಹಾಕ್ಕೊಬೇಕು, ತಂದುಕೊಟ್ಟ ಚಪ್ಪಲಿ ಮೆಟ್ಟಬೇಕು. “ಅಲ್ವೋ ನನಗೆ ಬಟ್ಟೆ, ಚಪ್ಪಲಿ ಕೊಂಡ್ಕೊಳೋದಾದ್ರೆ ನನ್ನನ್ನೂ ಕರ್ಕೊಂಡು ಹೋಗೋಅಂದ್ರೂ ಕೇಳಲ್ಲ. ಹಾಕ್ಕೊಳ್ಲಿಲ್ಲ ಅಂದ್ರೆ ಅದಕ್ಕೂ ಸಿಟ್ಟು. ನನ್ನ ಸ್ನೇಹಿತರು ಕಾಶಿಗೆ ಟೂರ್ ಹೊರಟಿದಾರೆ ನಾನೂ ಹೋಗಿಬರ್ತೀನಿ ಅಂದ್ರೆ ವಯಸ್ನಲ್ಲಿ ಅಲ್ಲೆಲ್ಲಾ ಹೋಗಿ ಏನಾದರೂ ತೊಂದರೆ ಮಾಡ್ಕೊಂಡ್ರೆ ನಿಮ್ಮನ್ನು ನೋಡೋರು ಯಾರು? ಎಲ್ಲಿಗೂ ಬೇಡ ಸುಮ್ನಿರಿ ಅಂತಾನೆ. ಹಠ ಹಿಡಿದು ವಯಸ್ನಲ್ಲಿ ಮಗನನ್ನು ಎದುರು ಹಾಕ್ಕೊಳೋದು ಸರಿನಾ ಅಂತ ಯೋಚಿಸ್ತಾರೆ.

 

ಈಗೀಗ ಮನೇಲಿ ಅವರಿಗೆ ಯಾವ ಕೆಲಸ ಮಾಡಲೂ ಬಿಡಲ್ಲ. ನಿಮಗೆ ವಯಸ್ಸಾಗಿದೆ ಸುಮ್ನೆ ಮನೇಲಿ ಇರಿ ಅಂತಾರೆ. ನನಗೇನು ಮಹಾ ವಯಸ್ಸಾಗಿದೆ. ತರಕಾರಿ ತರ್ತೀನಿ ಅಂದ್ರೆ ಬೇಡ. ವಾಕಿಂಗ್ ಆದ ಹಾಗಾಗುತ್ತೆ ಲೈಟ್ ಛಾರ್ಜ್, ನೀರಿನ ಛಾರ್ಜ್ ಕಟ್ಟಿಬರ್ತೀನಿ  ಅಂದ್ರೆ ಮಗ ಸುಮ್ನೆ ಟ್ರಾಫಿಕ್ನಲ್ಲಿ ಹೋಗಬೇಡಿ ಅವುಗಳನ್ನು ಆನ್ ಲೈನಲ್ಲಿ ಕಟ್ತೀನಿ ಅಂತಾನೆ. ಹಾಗಾದರೆ ನಾನೇನು ಮಾಡಲಿ? ಒಂದೊಂದು ಸಾರಿ ಸುಂದರರಾಯರ ಸ್ನೇಹಿತರು, ಸಮಕಾಲೀನರು ಮನೆಗೆ ಹುಡುಕಿಕೊಂಡು ಬಂದಾಗ ಸೊಸೆಗೆ ನನ್ನ ಸ್ನೇಹಿತರು ಬಂದಿದಾರೆ ಸ್ವಲ್ಪ ಕಾಫಿ ಕೊಡ್ತಿಯಾಮ್ಮ ಅಂದರೆ ಮುಖ ಸಿಂಡರಿಸುತ್ತಾಳೆ. ಸ್ನೇಹಿತರು ಎದ್ದು ಹೋದ ಮೇಲೆ ಸುಮ್ಸುಮ್ನೆ ಯಾರ್ಯಾರನ್ನೋ  ಮನೆಗೆ ಸೇರಿಸಬೇಡಿ. ಬಂದೋರಿಗೆಲ್ಲಾ ನಾನು ಕಾಫಿ ಮಾಡಿಕೊಡೋಕೆ ಗಲ್ಲ ಅಂತಾಳೆ ಸೊಸೆ. ಇಂಥಾ ಸನ್ನಿವೇಶಗಳಲ್ಲಿ ಅವರಿಗೆ ಹಿಂದೊಮ್ಮೆ ಅವರ ಸ್ನೇಹಿತ ಪಟ್ಟಾಭಿ ಹೇಳಿದ ಮಾತು ನೆನಪಾಗಿ book rackನಲ್ಲಿರುವ ಭಗವದ್ಗೀತೆಯನ್ನು ಕೈಗೆ ತೆಗೆದುಕೊಳ್ಳುತ್ತಾರೆ.


ಇಷ್ಟೆಲ್ಲಾ ಆತಂಕಗಳ ನಡುವೆ ಅವರನ್ನು ಈಗ ಕಾಡುತ್ತಿರುವ ಪ್ರೆಶ್ನೆ ಎಂದರೆ ನಾನೂ ಸ್ನೇಹಿತರ ಮನೆಗೆ ಹೋಗಬಾರದು. ಸ್ನೇಹಿತರೂ  ನನ್ನ ಮನೆಗೆ ಬರಬಾರದು. ಹಾಗಾದರೆ ನನ್ನ ಬದುಕು?  ಸೊಸೆ ಅಂದಿದ್ದನ್ನ ಮಗನ ಹತ್ತಿರ ಹೇಳೋ ಹಾಗಿಲ್ಲ.  ಮಗ ಅಂದಿದ್ದನ್ನ ಸೊಸೆ ಹತ್ರ ಹೇಳೊ ಹಾಗಿಲ್ಲ. ಇನ್ನು ಮೊಮ್ಮಕ್ಕಳ ತಂಟೆಗೇ ಹೋಗೋ ಹಾಗಿಲ್ಲ. ಒಟ್ನಲ್ಲಿ ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ ಅನ್ನುವ ಪರಿಸ್ಥಿತಿ ತಮ್ಮದು. ಇಂಥಾ ಸಂಕಟಗಳ ನಡುವೆ ಸುಂದರರಾಯರನ್ನು ಆಗಾಗ ಕಾಡುತ್ತಿರುವ ಪ್ರೆಶ್ನೆ ಅಂದ್ರೆಅಪ್ಪ ಅಂದ್ರೆ ವಿಲ್ಲನ್ನಾ ?”

 

Comments

Post a Comment