ಮಹಿಷಾಸುರನ ಸುರಗುಣ ವ್ಯಾಖ್ಯಾನ

 ಮಹಿಷಾಸುರನ ಸುರಗುಣ ವ್ಯಾಖ್ಯಾನ

Anitvirus ಇದ್ದರೆ ಕಂಪ್ಯೂಟರ್ ಸೇಫ್ ಅನ್ನೋ ಕಾಂನ್ಸೆಪ್ಟೇ ದೇವತೆಗಳದೂ ಸಹ” ಗಹಗಹಿಸಿದ ಮಹಿಷಾಸುರ.

“ಎಲೈ ಮೀನ್ ಮೆಂಟಾಲಿಟಿಯವನೇ, what do you mean?” ಕೇಳಿದಳು ಚಾಮುಂಡಿ ಬೆಟ್ಟದ ಮೇಲಿನ ಮಹಿಷಾಸುರನ ಪ್ರತಿಮೆಯ ಬಳಿಯೇ ನವರಾತ್ರಿ ವಿಶೇಷಾಂಕಕ್ಕೆಂದು ರಕ್ಕಸನನ್ನು ಸಂದರ್ಶಿಸಲು ಬಂದಿದ್ದ ಫ್ರೀಲ್ಯಾನ್ಸ್ ರೈಟರ್ ಕಮಲಿ. 




“ನಾವು ರಾಕ್ಷಸರು ವೈರಸ್ಗಳಿದ್ದಂತೆ. ದೇವ/ದೇವಿಯರು ಆಂಟಿವೈರಸ್. ಆಂಟಿವೈರಸ್ಗಳಿಗೆ ಇಂತಿಷ್ಟೇ ದಿವಸ ಎಂದು expiry date ಇರುತ್ತದೆ; ದೇವನದು ಇಂತಿಷ್ಟೇ ಎಂದು ಫಿಕ್ಸ್ ಆಗಿರುವ ದಶಾವತಾರ; ದೇವಿಯದು ನವರಾತ್ರಿಯಲ್ಲಿನ ದಶಾವತಾರ –

ಟೋಟಲಿ  ಟ್ವೆಂಟಿ ಅವತಾರಾಸ್ ಆಗಿಬಿಟ್ಟರೆ  ಅವತಾರಗಳ ಚಾಪ್ಟರ್ ಕ್ಲೋಸ್. ನಾವು ವೈರಸ್ಗಳು – demons – ಹಾಗೆಲ್ಲ ಲಿಮಿಟ್ ಇಟ್ಕೊಳಕ್ಕೆ ಹೋಗೇ ಇಲ್ಲ. ‘ಯದಾ ಯದಾ ದುಷ್ಕೃತ್ಯಸ್ಯ ಯೋಗಂ ಭವತಿ ಭಾರತ ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ’ ಎನ್ನುವುದೇ ನಾವು ದಾನವರ ಮಂತ್ರ. ಜಗದಲ್ಲಿ ಗುಡಿಸುವ ಕೆಲಸ ನಿಯಮಿತ, ಕಸ ಬೀಳುವುದು ನಿರಂತರ. To cleanse is divine; to sully is demon” ಗಹಗಹಿಸುವಿಕೆಯ ಸೆಕೆಂಡ್ ಇನಿಂಗ್ಸ್ ಆರಂಭಿಸಿದ ಮಹಿಷಾಸುರ.

“ಕಲಿಯುಗದ ಬಗ್ಗೆ ನಿನಗೆ ಏನೆನಿಸುತ್ತದೆ?” ಕೇಳಿದಳು ಕಮಲಿ.


“ಧರ್ಮದ ಪ್ರತೀಕವಾದ ದೇವಿಯನ್ನು ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರ ಮಧ್ಯೆ ಬಂಧಿಸಿ, ಹೊರಗೆ ಅಧರ್ಮದ ಪ್ರತೀಕವಾದ ನನ್ನ ಪ್ರತಿಮೆಯನ್ನು ಮುಕ್ತವಾಗಿ ನಿಲ್ಲಿಸಿದಾಗಲೇ ಧರ್ಮವನ್ನು ಒಳಗಿರಿಸಿ ಅಧರ್ಮವನ್ನು ಮೆರೆಸುವುದು ನಿಮ್ಮ real intent ಎಂದು ತಿಳಿಯಿತು” ಎಂದ ಮಹಿಷಾಸುರ.

“ಕೃತದಿಂದ ದ್ವಾಪರದವರೆಗೆ ಇದ್ದ ಎಲ್ಲ ರಾಕ್ಷಸರೂ ಹತರಾದರು ಎನ್ನುತ್ತದೆ ಪುರಾಣ. ಮಿಕ್ಕೆಲ್ಲ ರಕ್ಕಸರು ಪ್ರತಿಮೆಗಳಲ್ಲೂ ಇಲ್ಲದಂತೆ ಕಾಣೆಯಾಗಿರುವಾಗ ನೀನೊಬ್ಬ ಹೇಗೆ ಉಳಿದುಕೊಂಡೆ?”

“ನನ್ನ ದೇಹದ ಹತ್ಯೆ ಆಯಿತು, ಆತ್ಮ ಉಳಿದುಬಿಟ್ಟಿತು. ಮೋಕ್ಷವಿಲ್ಲದ ಆತ್ಮದ್ದು ರಿಕ್ಷಾದಂತೆ ಅಡ್ಡಾದಿಡ್ಡಿ ಚಲನೆ. ಬೊಕ್ಕಸಕ್ಕಳಿವುಂಟು, ಕಸ ಮತ್ತು ರಕ್ಕಸತನಕ್ಕಳಿವಿಲ್ಲ. ನಮ್ಮ ಸರ್ವನಾಶ ಆಗದಿರುವುದಕ್ಕೆ ಇಂದ್ರನ ಬುದ್ಧಿಯೇ ಕಾರಣ. ಇಂದ್ರನ ಕೆಲವು ನಿರ್ಣಯಗಳ ಪರಿಣಾಮವಾಗಿ ರಾಕ್ಷಸರಿಗೆ expiry date ಬದಲು renewal dateಗಳೇ ಹೆಚ್ಚಾಗಿ ಸಿಕ್ಕಿವೆ. ಇಂದ್ರಾಕೀ ಜೈ” ಎಂದ ದೈತ್ಯ.

“ಅದು ಹೇಗೆ?”

“ಕರ್ಣನ ವಿಷಯವನ್ನೇ ತೆಗೆದುಕೊ. ಸೂರ್ಯನ ಮಗನಾದರೂ ಕರ್ಣ ದುರ್ಯೋಧನನ ಸಹವಾಸದಿಂದ ರಾಕ್ಷಸಗುಣಗಳನ್ನು ಹೊಂದಿದ. ಇಂದ್ರ ಅವನ ಕವಚಕುಂಡಲಗಳನ್ನು ದಾನವಾಗಿ ಪಡೆದ. ಪಾರ್ಥ ಕರ್ಣನನ್ನು ಮುಗಿಸಿದ. ಆದರೆ ಕರ್ಣ ಸತ್ತನೇನು? ದೇಹ ಸತ್ತಿತು, ಗುಣಗಳು ಉಳಿದವು.”

“ಎಲ್ಲಿ? ಹೇಗೆ?”

“ಕರ್ಣ ಎಂದರೆ ಕಿವಿ. ಕಿವಿಯ ಸಹವಾಸ ಶಾಸನದ ಜೊತೆಗೆ ಇರಬೇಕೇ ವಿನಹ ದುಶ್ಶಾಸನದ ಜೊತೆ ಅಲ್ಲ. ವ್ಯಾಸರೇ ಕರ್ಣ-ದುರ್ಯೋಧನ, ಕರ್ಣ-ದುಶ್ಯಾಸನರು ಜೊತೆಗಿದ್ದರು ಎಂದಿದ್ದಾರೆ. ಕರ್ಣನಿಗೆ ಎರಡು ವಿಧವಾದ ಕವಚಗಳಿದ್ದವು. ಒಂದು ದೇಹವನ್ನು ಆವರಿಸಿದ್ದ ಜನ್ಮಜಾತ ಕರ್ಣಕುಂಡಲ; ಇನ್ನೊಂದು ಮನವನ್ನು ಕವಿದಿದ್ದ ದುರ್ಯೋಧ-ದುಃಶಾಸನ ಕವಚ. ಇಂದ್ರ ದೇಹದ ಹೊದಿಕೆ ಕಳೆದ. ಕರ್ಣನ ಮಾನಸಿಕ ಕವಚವಾದ ‘ದುರ್ಯೋಧ’ತನ ಮತ್ತು ‘ದುಃಶಾಸನ’ದ ಮಿಶ್ರಣದಿಂದ  ಹಿತ್ತಾಳೆ ಕರ್ಣ ಉರುಫ್ ಹಿತ್ತಾಳೆಕಿವಿಯ ರೂಪದಲ್ಲಿ ಕರ್ಣಕವಚ ಮರುಜನ್ಮ ಪಡೆಯಿತು.” ಎಂದ ಮಹಿಷ.


“ಕರ್ಣ ಎಂದರೆ ಡಯಾಗೊನಲ್ ಎಂದೂ ಇದೆ. ಅದು ನಿನಗೆ ತಿಳಿದಿರಲಾರದು”

‘ಹ್ಹ! ನನ್ನ ಪಾದತಲದಲ್ಲಿ ಆ ವಿಷಯಗಳನ್ನು ವಿದ್ಯಾರ್ಥಿಗಳನ್ನು ಮಾತನಾಡುತ್ತಿದ್ದುದನ್ನು ಕೇಳಿ ಬಲ್ಲೆ. ಡಯಾಗೊನಲ್ ಎಂದರೆ ಅಡ್ಡರಸ್ತೆ – ಶಾರ್ಟ್ ಕಟ್. ಇಂದಿನ ಅಡ್ಡದಾರಿಯ ಅಡ್ಡಕಸುಬಿಗಳೆಲ್ಲದರೂ ಶಾರ್ಟ್ ಕಟ್ಟೇ ಆದ್ದರಿಂದ ಅವರೆಲ್ಲರೂ ದುಃಶಾಸನ-ಸ್ನೇಹಿ ಕರ್ಣನ ಪಥದವರೇ”

“ಅದನ್ನು ಸರಿಪಡಿಸುವುದು ಹೇಗೆ?”

“ದಾನವನನ್ನು ಸಂಸ್ಕೃತ, ಸಂಸ್ಕೃತಿಯ ಬಗ್ಗೆ ಕೇಳಿ ಪ್ರಯೋಜನವಿಲ್ಲ ಕಮಲಿ. ರಾಮನಿಗೆ ವೀರಕಂಕಣ ಕಟ್ಟುವುದರ ಮೂಲಕ ತನ್ನ ಡೆತ್ ನೋಟ್ ತಾನೇ ಬರೆದುಕೊಂಡ ರಾವಣ ಸಂಸ್ಕೃತಿಯನ್ನು ಮೆರೆದ. ಇತರ ರಾಕ್ಷಸರು ‘ಸಂಸ್ಕೃತಿ ಈಸ್ ಇಂಜ್ಯೂರಿಯಸ್ ಟು ಹೆಲ್ತ್’ ಅಷ್ಟೇ ಅಲ್ಲ, ಇಟ್ ಕುಡ್ ಲೀಡ್ ಟು ಡೆತ್, ದೇರ್ಫೋರ್ ಸಂಸ್ಕೃತಿ = ಪಾಯ್ಸನ್ ಎಂದು ತೀರ್ಮಾನಿಸಿ ಸಂಸ್ಕೃತಿಯನ್ನು ಹೊರಗಿಟ್ಟರು. ಸಂಸ್ಕೃತಕ್ಕೂ ದಾನವರಿಗೂ ಎಣ್ಣೆ-ಸೀಗೇಕಾಯಿ ಆಗಲು ಇಂದ್ರನೇ ಕಾರಣ.” 


“ಹೇಗೆ?”

“ಕುಂಭಕರ್ಣನ ಸಂಸ್ಕೃತದಲ್ಲಿ ಸಂಭಾಷಿಸುವ ಬಯಕೆಯನ್ನು ಇಂದ್ರ ನುಚ್ಚುನೂರುಮಾಡಿದ.”

“ಇದು ಯಾವ ಪುರಾಣದಲ್ಲಿದೆ?”

“ಪ್ರಕ್ಷಿಪ್ತ ಪುರಾಣದಲ್ಲಿ. ಇಂದ್ರನು ಸರಸ್ವತಿಯ ಮೇಲೆ ಪ್ರೆಷರ್ ತಂದು ‘ಇಂದ್ರಾಸನಂ ದೇಹಿ’ ಎನ್ನುವುದನ್ನು ‘ನಿದ್ರಾಸನಂ ದೇಹಿ’ ಎಂದು ಉಚ್ಚರಿಸುವಂತೆ ನಾಲಿಗೆ ಟ್ವಿಸ್ಟಿಸಿದುದರ ಪರಿಣಾಮವಾಗಿ ಕುಂಭಕರ್ಣನಿಗೆ ಸಂಸ್ಕೃತದಲ್ಲಿ ಮಾತನಾಡುವ ಕಾಂಫಿಡೆನ್ಸೇ ಹೊರಟುಹೋಯಿತು. ಆ ತಪ್ಪುಚ್ಚಾರದ ಫಲವಾಗಿ ಕುಂಭಕರ್ಣನಿಗೆ ತನಗೆ ಬೇಡವಾದ ದೀರ್ಫನಿದ್ರೆಯ ವರ ದೊರಕಿತು. ಕುಂಭಕರ್ಣ ಯುದ್ಧದಲ್ಲಿ ಮಡಿಯುವ ಸಮಯ ಬಂದಾಗ ‘ಈ ನಿದ್ರೆ, ಈ ಉಚ್ಚಾರಗಳು ನನ್ನೊಂದಿಗೇ ಕೊನೆಯಾದರೆ ಹೇಗೆ? Who is after Kumbhakarna ಎನ್ನುವುದಕ್ಕೆ ಉತ್ತರ ಇರಲೇಬೇಕು’ ಎಂದು ತೀರ್ಮಾನಿಸಿ, ಆ ಗುಣಗಳನ್ನು ಕಲಿಯುಗದ ಜನರಿಗೆಂದು ಮೀಸಲಾಗಿರಿಸಿ, ವರ್ಗಾಯಿಸಿದ.”

“ಯಾರು ಪಡೆದರು ಆ ಗುಣಗಳನ್ನು?”

“ನಿದ್ರೆಯನ್ನು ಸೆಷನ್ ನಿರತ ಮಂತ್ರಿಗಳು, ಪರೀಕ್ಷಾಸಮಯದ ವಿದ್ಯಾರ್ಥಿಗಳು, ಸಂಗೀತಕಚೇರಿಯ ಮುಂದಿನ ಸೀಟಿನ ಶ್ರೋತೃಗಳು ಪಡೆದರು.”

“ತಪ್ಪುಚ್ಚಾರವನ್ನು?”

“ಆಧುನಿಕ ಕಾರ್ಯಕ್ರಮ ನಿರೂಪಕರು! ನಿಮ್ಮ ಟಿವಿಗಳಲ್ಲಿ ತಪ್ಪುಚ್ಚಾರ, ಹುಚ್ಚುಚ್ಚಾರಗಳು ಕ್ಷಣಕ್ಷಣಕ್ಕೂ ಕಂಡುಬರುತ್ತಿವೆ. ‘ಅಗ್ಗ ಆಕ್ಕೊಂಡು ನೇಣಾಕ್ಕೊಂಡ’, “ಅಕ್ಕಿ ಆರ್ತಾ ಇದೆ’, ‘ಇಡಿದು ಒಡೆದರೆ ಅಣ್ಣಅಣ್ಣಾಗಿಬಿಡ್ತೀಯ’ ಅಂತ ಹುಚ್ಚಾರ ಮಾಡೋ ಹ್ಯಾಕ್ಟರ್ಸೇ ಇದ್ದಾರೆ ನರರಲ್ಲಿ”

“ಅದು ಹ್ಯಾಕ್ಟರ್ ಅಲ್ಲ...”

“ಮೈಸೂರಿನವನು ನಾನು. ಕನ್ನಡ ಸರಿಯಾಗಿ ಮಾತಾಡಕ್ಕೆ ಬರತ್ತೆ. ಭಾಷೆಯನ್ನ ಹ್ಯಾಕ್ ಮಾಡೋ actorನ ಹ್ಯಾಕ್ಟರ್ ಅಂತ ಕರೆಯೋದು ತಪ್ಪಲ್ಲ.”

“ನಿನ್ನ ಭಾಷೆ ಮೈಸೂರಿಗಿಂತ ಬೆಂಗಳೂರಿನ ಕನ್ನಡಕ್ಕೇ ಹತ್ತಿರವಾಗಿದೆ. ಇಂದ್ರನ ಕಥೆಯನ್ನು ಮುಂದುವರಿಸು”

“ನನಗೊಂದು ಡೌಟ್.”

“ಏನು?”

“ಈ ಕತ್ತಿಯನ್ನು ನೋಡು, ಯಾರೋ ಕಳ್ಳರು ನನ್ನ ಕತ್ತಿಯನ್ನು ಕದಿಯಲು ಬಂದಾಗ ಅವರಿಗೆ ಅದರಿಂದಲೇ ಹೊಡೆದೆ. ಕತ್ತಿ ಬೆಂಡಾಯಿತು. ಮತ್ತೆ ಒರೆಯಲ್ಲಿ ತೂರಿಸಲು ಹೋದರೆ ತೂರಲೇ ಇಲ್ಲ. ಅಂದಿನಿಂದ ಬಂದಬಂದ ಕಮ್ಮಾರರನ್ನೆಲ್ಲ ಕೇಳಿದೆ. ಎಲ್ಲರೂ “ನಾಳೆ ಸೇಮ್ ಟೈಮ್ ಬರ್ತೀನಿ” ಎಂದರೇ ಹೊರತು ಒಬ್ಬರೂ ಬರಲಿಲ್ಲ. ಕಮ್ಮಾರರು, ಬಡಗಿಗಳು, ಬಣ್ಣ ಬಳಿಯುವವರು, ದರ್ಜಿಗಳು ಸಮಯಕ್ಕೆ ಸರಿಯಾಗಿ ಬರದಿರುವುದು ಪೃಥ್ವಿಯಲ್ಲಿನ ಕಲಿಯುಗದ ನಿಯಮ ಎಂದುಕೊಂಡಿದ್ದೆ. ಇದು ತ್ರೇತಾಯುಗದಲ್ಲಿಯೂ ಇದ್ದಿತೇನು?”

“ಈ ಪ್ರಶ್ನೆಗೂ, ತ್ರೇತಾಯುಗಕ್ಕೂ, ಇಂದ್ರನಿಗೂ ಏನು ಸಂಬಂಧ?”

“ಕುಂಭಕರ್ಣ ಇದ್ದದ್ದು ತ್ರೇತಾಯುಗ, ಕೇಳುತ್ತಿದ್ದದ್ದು ಇಂದ್ರಾಸನವನ್ನೇ ಹೊರತು ಇಂದ್ರಪದವಿಯನ್ನಲ್ಲ. ಕಾರ್ಪೆಂಟರ್ ಸಿಗುವಂತಿದ್ದರೆ ಕುಂಭಕರ್ಣನ ಅಳತೆಗೆ ಹೊಂದುವಂತಹ ಕುರ್ಚಿಯೊಂದನ್ನು ಮಾಡಿಸಿಕೊಡಬಹುದಿತ್ತಲ್ಲವೆ?”

ವಾಹ್! ರಕ್ಕಸನಿಗೆ ಹೊಳೆದ ಲಾ ಪಾಯಿಂಟ್ ಇಂದ್ರನಿಗೆ ಹೊಳೆದಿರಲಿಲ್ಲ. ಛೆ! ಆಗಲೇ ಎಲ್ಲೆಲ್ಬಿಗಳು ಇದ್ದಿದ್ದರೆ ಇಂದ್ರಪದವಿಯೂ, ಕುಂಭಕರ್ಣನ ಆಸೆಯೂ ಪೂರೈಸುವಂತೆ ಯಾರಾದರೂ ಕೇಸ್ ನಡೆಸಿರುತ್ತಿದ್ದರು.

“ಆಸನ ಎಂದರೆ ಪದವಿ ಎಂದೂ ಅರ್ಥವಿದ್ದೀತು” ಎಂದಳು ಕಮಲಿ.

“ಹಾಗಾದರೆ ಶವಾಸನ ಎಂದರೆ ಶವ ಪದವಿ ಎಂದು ಅರ್ಥವಾಗುವುದೇನು?” ಮರುನುಡಿದ ರಕ್ಕಸ.

ರಕ್ಕಸರ ಜೊತೆ ವಾದಕ್ಕಿಳಿದರೆ ಸಮುದ್ರಮಥನವೇ ಆದೀತೆಂದು ಪುರಾಣಗಳಿಂದ ತಿಳಿದಿದ್ದ ಕಮಲಿ “ಇಂದ್ರನ ಮೇಲೆ ಇನ್ನೇನಾದರೂ ಆರೋಪ ಇದೆಯೇನು?” ಎಂದಳು.


“ಸೋತ ತಕ್ಷಣ ತಲೆ ಮರೆಸಿಕೊಳ್ಳುವುದು, ಕಷ್ಟ ಬಂದಾಗ ಹೈಕಮಾಂಡ್ ಗಳಾದ ವಿಷ್ಣು/ಶಿವರ ಬಳಿ ಓಡುವುದು, ಅವರಿವರ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವುದು, ಇವೆಲ್ಲವೂ ನರಮುಖಂಡರಲ್ಲಿಯೂ ಕಾಣುವ ಅಂಶಗಳಾದ್ದರಿಂದ ನರರಿಗೆ ಇಂದ್ರ ಸರಿಕಂಡಾನು. ದಾನವರು ‘ಜೆಂಟಲ್ ಮೆನ್’. ಹಾರಿಸಿಕೊಂಡುಹೋದ ಹೆಣ್ಣನ್ನು ಗಾರ್ಡನ್ ರೆಸಾರ್ಟಲ್ಲಿ ‘ವಿತ್ ಸರ್ವೆಂಟ್ಸ್ & ವಿತೌಟ್ ಜಿಎಸ್ಟಿ’ ಇರಿಸುವರು, ಆತ್ಮನಿರ್ಭರತಾ ಅನುಸರಿಸುವವರು. ‘ಸೆಲ್ಫ್ ಹೆಲ್ಪ್ ಈಸ್ ದ ಬೆಸ್ಟ್ ಹೆಲ್ಪ್’ ಎನ್ನುವುದನ್ನು ಅರಿತವರು. ಇಂತಹ ರಕ್ಕಸರಿಗೆ ಇಂದ್ರನ ಗುಣ ಸರಿಬರದು” ಎಂದ ದಾನವ.


“ಇಂದ್ರನ ವಿಷಯ ಅತ್ತ ಬಿಡು. ನೀನು ಮರುಜನ್ಮ ಪಡೆದಿದ್ದರೂ ಏಕೆ ಬೆಟ್ಟದಿಂದ ಕೆಳಕ್ಕಿಳಿದಿಲ್ಲ?”

“ಎರಡು ಕಾರಣಗಳು. ಮೊದಲನೆಯದು ನಿಮ್ಮ ಕ್ರೋ ಬೆಂಚ್.”

“ಕ್ರೋ ಬೆಂಚ್? ಅಂದರೆ?”

“ಕಾಗೆಗಳ ಪೀಠವಾಗಿರುವ ಕರೆಂಟ್ ಕಂಬಿಗಳು. ಅವು ನನ್ನ ತಲೆಗೆ ತಗುಲಿ ಶಾಟ್ ಸರ್ಕ್ಯೂಟ್ ಆಗುತ್ತದೆ. ಪರಿಸ್ಥಿತಿ ಮೊದಲಿನಂತಿಲ್ಲ. ಈಗ ಅದರಲ್ಲಿ ಕರೆಂಟ್ ಇರುತ್ತದೆ.”

“ನಿನ್ನಂತಹ ದೈತ್ಯನಿಗೆ ಹನ್ನೊಂದುಸಾವಿರ ಓಲ್ಟ್ ಹೆಚ್ಚೇನಲ್ಲ.”

“ನಿಜ. ಆದರೂ ಮೂತಿಮೂತಿಗೆ ಸಾಲುಕಂಬಿಗಳು ಅಡ್ಡ ಬರುತ್ತಿದ್ದರೆ ಬಹಳ ಕಿರಿಕಿರಿ ಆಗುತ್ತದೆ.”

“ಎರಡನೆಯ ಕಾರಣ?”

“ನನಗಿಂತ ಶ್ರೇಷ್ಠ ರಕ್ಕಸರು ನಿಮ್ಮ ಆಡಳಿತದಲ್ಲೇ ಇದ್ದಾರೆ. ದೊಡ್ಡವರ ಮುಂದೆ ಚಿಕ್ಕವರ ಪುಂಡಾಟಿಕೆ ರಕ್ಕಸತನಕ್ಕೆ ಶೋಭೆಯಲ್ಲ”

ಇದ್ದಕ್ಕಿದ್ದಂತೆ ರಕ್ಕಸನ ಕಣ್ಣುಗಳಲ್ಲಿ ಬೆಳಕು ಕಂಡಿತು. ‘ಹೋಯ್... ನಿಲ್ಲು... ಚಿನ್ನಪ್ಪಾ... ನಿಲ್ಲೂ...’ ಎನ್ನುತ್ತಾ ಒಂದು ಕೈಯಲ್ಲಿ ಕತ್ತಿ, ಒಂದು ಕೈಯಲ್ಲಿ ಒರೆಯನ್ನು ಹಿಡಿದು ಇವನ ದೃಷ್ಟಿ ತಪ್ಪಿಸಲು ಯತ್ನಿಸುತ್ತಿದ್ದ ಕಮ್ಮಾರನತ್ತ ಓಡಿದ ಮಹಿಷಾಸುರ.

ಕಮಲಿ ಪೆನ್ನಿಗೆ ಕ್ಯಾಪ್ ಸಿಕ್ಕಿಸಿದಳು.

Comments

  1. ಶೂನ್ಯಸಂಪಾದನೆ ಆದ ಮೊದಲ ಲೇಖನವಿದು! ಏನು ಕೊರತೆಯೋ ಏನೋ!!!

    ReplyDelete
    Replies
    1. Is this the writer? no Ramanath some times we dont seem to have time to reply. might be reading while travelling. read partial and complete after few days. The article is not less than any others of yours. Your knowledge about purana stories is amazing & the way you relate them to modem times is simply good

      Delete

Post a Comment