ಎಫ್‌ಬಿ ಭುವನ ಮನಮೋಹಿನಿ

ಎಫ್‌ಬಿ ಭುವನ ಮನಮೋಹಿನಿ

ಹಾಸ್ಯ ಲೇಖನ - ಅಣುಕು ರಾಮನಾಥ್

ಬರವಣಿಗೆ ಅಂದರೆ ಫೇಸ್‌ಬುಕ್ ಬರವಣಿಗೆಯೇ. ಈಗಲೇ ಭೂತಗಳಂತೆಯೂ, ಭವಿಷ್ಯಕಾರರಂತೆಯೂ ಕಾಡುವ ಹಲವಾರು ಪೋಸ್ಟಿಗರಂತೂ ನ ಭೂತೋ ನ ಭವಿಷ್ಯತಿ. ‘ಪೇಸುಬುಕ್ಕನೆ ಲೋಕಪ್ರೀಯನೆ ತೇ ನಮೋಸ್ತು ನಮೋಸ್ತು ತೇ. ಪೋಸ್ಟುಗರ್ಭದಿ ಸಲಹು ನಮ್ಮನು ತೇ ನಮೋಸ್ತು ನಮೋಸ್ತುತೇ’ ಎಂದು ದೇಶಕಾಲಲಿಂಗಧರ್ಮಾತೀತವಾಗಿ ಪ್ರಾರ್ಥಿಸುವರು ಇರುವ ಏಕೈಕ ಚೌಚೌತಾಣವೆಂದರೆ ಫೇಸ್‌ಬುಕ್ಕೇ.



ಬೆಳ್ಳನೆ ಬೆಳಗಾಯಿತು ಎಂದು ನಮಗೆ ತಿಳಿಯುವುದೇ ಎಫ್ಬಿಯ ‘ಗುಡ್ ಮಾರ್ನಿಂಗ್’ನಿಂದ. ಉದ್ಯಾನದ ಪುಷ್ಪಗಳಂತೆ, ವಿಧಾನಸೌಧದ ಕೇಡಿಗಳಂತೆ, ಮಾರ್ಕೆಟ್ಟಿನ ಸದ್ದುಗಳಂತೆ ಒಂದೊಂದು ಪೋಸ್ಟೂ ನಿತ್ಯನೂತನ, ಚಿತ್ತಾಕರ್ಷಕ, ಚಿತ್ತಾಕ್ರೋಶಕ! ಕಾಗೆ ಕರ್ ಎನ್ನುವುದಕ್ಕೆ ಮುಂಚೆ, ಹಾಲಿನವನು ‘ಆಲ್’ ಎನ್ನುವುದಕ್ಕೆ ಮುಂಚೆ, ಕೋಳಿಗಳು ಇನ್ನೂ ಮುದುರಿಕೊಂಡು ಸೆಕೆಂಡ್ ರೌಂಡ್ ನಿದ್ರೆಗೆ ಜಾರುತ್ತಿರುವಾಗಲೇ, ಸೂರ್ಯ ಮನೆಯಿಂದ ಹೊರಡಲೆಂದು ಮುಖ ತೊಳೆದುಕೊಳ್ಳುತ್ತಿರುವಾಗಲೇ ಇವರ ‘ಗುಡ್ ಮಾರ್ನಿಂಗ್’ ಪೋಸ್ಟ್ ಆಗುತ್ತದೆ. ‘ಬೆಳ್ಳಿ ಮೂಡಿತೋ ಪೋಸ್ಟು ಕಂಡಿತೋ; ಕಾಮೆಂಟು ಲೈಕುಗಳ ರಿಯಾಕ್ಷನ್ನು ಬೇಡಿ ನಿಂತ ಬೆಳ್ಳಿ ಮೂಡಿತೋ ಪೋಸ್ಟು ಕಂಡಿತೋ’ ಎಂದೇ ಭಾಸವಾಗುವ ಆ ಪೋಸ್ಟಿಗೆ ಎತ್ತಿದ ಹೆಬ್ಬೆಟ್ಟು, ಕಿವಿಯವರೆಗೆ ತೆರೆದ ಬಾಯಿ, ಕೋವಿಡ್ ಕಾಲದಲ್ಲಿ ಗ್ರೀಟಿಸಲೆಂದು ಜೋಡಿಸಿದ ಹಸ್ತಗಳಂತಹ ಚಿತ್ರಗಳ ಸಾಲುಗಳು ಮೂಡುತ್ತವೆ. ನ್ಯೂಝಿಲೆಂಡಿನ ಮಾರ್ನಿಂಗಿನಿಂದ ಆರಂಭವಾಗುವ ಈ ಪ್ರತಿಕ್ರಿಯೆಗಳು ವೆಸ್ಟಿಂಡೀಸಿನಲ್ಲಿ ಬೆಳಗಾದರೂ ಇನ್ನೂ ಮುಂದುವರಿಯುತ್ತಿರುತ್ತದೆಂಬುದೇ ಸೋಜಿಗ.

ಮೆಗಾಭಾರತದ ಸಿರಿಕೃಷ್ಣ ಈಗೇನಾದರೂ ಇದ್ದಿದ್ದರೆ ‘ಚಾತುರ್ಡಿವಿಷನ್ ಮಯಾ ಕೃತ್ಯಂ ಗುಣಕರ್ಮವಿಭಾಗಶಃ’ ಎನ್ನುತ್ತಾ ‘ತಲೆಗೆ ಮಾತ್ರ ಕೆಲಸ ಕೊಡುವಂತಹ ಕಗ್ಗ, ಸರ್ವಜ್ಞನ ಪದಗಳು, ಶರಣರ ವಚನಗಳು, ಶ್ಲೋಕಗಳು, ಗೀತಾಸಾರ, ಗೀತಾ ಅನ್ನ, ಗೀತಾ ಪಲ್ಯ ಮುಂತಾದವುಗಳನ್ನು ಪೋಸ್ಟಿಸುವರು ಗುರುಜಾತಿಯವರು; ರಾಹುಲ ಗ್ರೇಟ್, ಮೋದಿ ಗ್ರೇಟ್, ಟ್ರಂಪ್ ಗ್ರೇಟ್, ಇಸ್ಣು ಗ್ರೇಟ್, ಅಣ್ಣೋರ್ ಗ್ರೇಟ್ ಎನ್ನುತ್ತಾ ವಿರೋಧಿಸುವದನ್ನೇ ಕಾಯುತ್ತಾ ವರ್ಚುಯಲ್ ಕತ್ತಿ ಚೂಪು ಮಾಡಿಕೊಳ್ಳುವವರು ಕ್ಷಾತ್ರಕುಲದವರು; ಇಷ್ಟು ಬರೆದರೆ ಇಷ್ಟು ಲುಕ್ಸು, ಲೈಕ್ಸು, ಕಮೆಂಟ್ಸು ಬರುತ್ತವೆ; ಮುದ್ದುಬರಹಕ್ಕಿಂತ ಮೊದ್ದು ಮುಖಕ್ಕೇ ಹೆಚ್ಚು ಪ್ರತಿಕ್ರಿಯೆ ಎಂದೆಲ್ಲಾ ಲೆಕ್ಕಾಚಾರ ಹಾಕಿ, ಇಂದು ಇಂತಿಷ್ಟು ಲೈಕ್ಸ್ ಬರಲೇಬೇಕೆಂಬ ದೃಷ್ಟಿಯಿಂದಲೇ ‘ಪೋಸ್ಟಿಂಗ್ ವ್ಯವಹಾರ’ಕ್ಕೆ ಇಳಿಯುವವರು ಶುದ್ಧ ವ್ಯವಹಾರಸ್ಥಜಾತಿಯವರು. ತಮ್ಮದೇನನ್ನೂ ಪೋಸ್ಟಿಸದೆ ಪ್ರತಿ ಎಂಕ ನೊಣ ಸೀನರ ಟೈಮ್‌ಲೈನಿಗೂ ತೂರಿ, ಅವರ ಪ್ರೀತ್ಯರ್ಥ ತಮ್ಮ ಅನಿಸಿಕೆಗಳನ್ನು ಪೋಸ್ಟಿಸುವವರು ‘ಕರ್ಮಣ್ಯೇವಾಧಿಕಾರಸ್ತೇ ಮಾ ಪ್ರೊಮೋಷನ್ ಕದಾಚನ’ ಸಂಸ್ಕೃತಿಗೆ ಒಗ್ಗಿದ ಜೈಕಾರ್ ಜಾತಿಗೆ ಸೇರಿದವರು’ ಎಂದು ನುಡಿಯುತ್ತಿದ್ದನೋ ಏನೋ. ಎಫ್‌ಬಿ ನಿಮಿತ್ತಂ ಬಹು ಕೃತಕ ವೇಷಂ!

ಮಾರ್ನಿಂಗಿನ ಮೂನಿಂಗ್, ಮೋನಿಂಗ್, ಮೌರ್ನಿಂಗ್ ಮತ್ತು ಮಧ್ಯೆಮಧ್ಯೆ ಸೆಲಿಬ್ರೇಷನ್ ಮುಗಿಯುತ್ತಿದ್ದಂತೆ ಸ್ವಯಂಘೋಷಿತ ಕವಿಗಳು ಎಫ್ಬಿ ಜಮೀನಿಗೆ ಕದಳೀವನಚರಮದಗಜದೋಪಾದಿಯೋಳ್ ನುಗ್ಗಿ ದಾಂಧಲೆ ಎಬ್ಬಿಸುವ ಪರಿಯಂ ಎಂತು ವರ್ಣಿಪುದೋ! ಪದಗಳಿಗೆ ಆಪದ ಒದಗಿಸಿ, ಲಯವನ್ನು ಲಯಕರ್ತನಿಗೇ ಒಪ್ಪಿಸಿ, ಅಕಾರಗಳ ಅಸುನೀಗಿಸಿ, ಹಕಾರಗಳ ಹರಣ ಮಾಡಿ, ಮಹಾಪ್ರಾಣಗಳ ಪ್ರಾಣ ತೆಗೆದು, ‘ಕಾವ್ಯದೊಳ್ ಮಾತ್ರೆಗಳ ಎಣಿಕೆಯುಂಟು’ ಎಂದರೆ ‘ಅದನ್ನು ನಮ್ಮ ಕವನ ಓದುವವರು ತೆಗೆದುಕೊಳ್ಳಲಿ’ ಎಂದುಲಿಯುವ ಕವಿಪಡೆ ಚೂತವನದ ಕಪಿಗಳಿಗಿಂತ ಹೆಚ್ಚಿನದೇ ಆಗಿರುತ್ತದೆ. ಆದಿಪ್ರಾಸವನ್ನು ಹೊರಹಾದಿಗೇ ಒಪ್ಪಿಸಿದ ಇವರ ಅಂತ್ಯಪ್ರಾಸಪ್ರಿಯತೆ ಮಾತ್ರ ಅದ್ಭುತ, ಅಮೋಥ, ಅದ್ವಿತೀಯ.

ಇಂತಹ ಕವಿವರ್ಯನೋರ್ವನನ್ನು ತನ್ನ ಕವನ ಕಟ್ಟುವ ಕಲೆಯ ಬಗ್ಗೆ ವಿಚಾರಿಸಿದೆ. ‘ತುಂಬ ಸುಲಭ ಸಾರ್. ಮೊದಲು ಗೊಂಬೆ, ರಂಬೆ, ಗೂಬೆ, ದ್ರಾಬೆ ಪದಗಳನ್ನು ಬರೆದುಬಿಡುತ್ತೇನೆ. ಆಮೇಲೆ ಅದರ ಹಿಂದಕ್ಕೆ ಸಾಲುಗಳನ್ನು ಸೇರಿಸಿಬಿಡುತ್ತೇನೆ. ಹುಡುಗಿಯದು ಮುಖ ಗೊಂಬೆ; ಹತ್ತಿ ಕೂತಳು ರೋಜಾಗಿಡದ ರಂಬೆ; ನೋಡದನೊಬ್ಬ ಹುಡುಗ ಅವನ ಮುಖ ಗೂಬೆ; ಹುಡುಗಿ ಹೇಳಿದಳು ಹೋಗೋ ದ್ರಾಬೆ’ ಅಂತ ಅದನ್ನ ಕಂಪ್ಲೇAಟ್ ಮಾಡಿಬಿಡ್ತೀನಿ ಸಾರ್’ ಎಂದ. ‘ರೋಜಾಗಿಡದ ರೆಂಬೆಯ ಮೇಲೆ ಹುಡುಗಿ ಕೂತ್ಕೊಳ್ಳಕ್ಕೆ ಆಗತ್ತೇನ್ರೀ?’ ಎಂದರೆ ‘ಅದಕ್ಕೆ ಪೊಯೆಟಿಕ್ ಲೈಸೆನ್ಸ್ ಅಂತಾರೆ ಸಾರ್. ಏಳುಮಲ್ಲಿಗೆ ತೂಕದವಳು ಅಲ್ಲಿ ಕೂತ್ಕೋಬಹುದು ಸಾರ್’ ಎಂದ. ಇವನ ವಿರುದ್ಧ ಧ್ವನಿಯೆತ್ತುವಿರೆ? ಕೂಡಲೆ ಕ್ರೂರ, ಭಾರ, ಘೋರ, ಚೋರ ಪದಗಳನ್ನು ಕೊನೆಯಲ್ಲಿ ಬರೆದಿಟ್ಟು ನಿಮ್ಮ ಮೇಲೆಯೇ ಒಂದು ಕವನ ಬರೆಯದಿದ್ದರೆ ಅಂದು ಆತ ತಿಂದ ಅನ್ನ ಜೀರ್ಣವಾಗದಿರುವುದು ನಿಶ್ಚಿತ.


ಸಮಯ ಹನ್ನೊಂದು ದಾಟಿತೆ? ಸ್ವೀಕರಿಸಿ ಇಡ್ಲಿ ಸಾಂಬಾರ್, ಪತ್ರೊಡೆ, ಚಿತ್ರಾನ್ನಗಳ ಚಿತ್ರಗಳ ಭರಾಟೆ! ನೋಡಿದಾಕ್ಷಣ ಕಂಪ್ಯೂಟರಿಗೇ ಸ್ಪೂನ್ ಹಾಕಬೇಕೆಂಬ ಆಸೆ ಹುಟ್ಟಿಸುತ್ತಿದ್ದ ಚಿತ್ರಾನ್ನದ ಚಿತ್ರ ಪೋಸ್ಟಿಸಿದ ಚಿತ್ರಾಳಿಗೆ ಫೋನಾಯಿಸಿ ‘ಎಷ್ಟು ಚೆನ್ನಾಗಿ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿ ‘ಕೊಂಚ ಕೊಡ್ತೀಯಾ? ಬರಲೇನು?’ ಎಂದೆ. ‘ಸ್ಸಾರಿ ಸರ್. ಅದನ್ನ ಕೊಡಕ್ಕಾಗಲ್ಲ’ ಎಂದಳಾಕೆ. ‘ಆಗ್ಹೋಯ್ತೇನು?’; ‘ಊಹೂಂ. ಫೋಟೋದಲ್ಲಿ ಚೆನ್ನಾಗಿ ಬಂದಿರಲಿಲ್ಲಾAತ ಅದಕ್ಕೆ ಕೊಂಚ ಕಾಸ್ಟ್ರಾಯಿಲ್, ಗ್ರೀಸ್ ಮೆತ್ತಿದ್ದೆ. ಗುಡ್ ಟು ಲುಕ್ಕು ಬಟ್ ನಾಟ್ ಟು ಲಿಕ್ಕು’ ಎಂದಳವಳು. ಸೌಂದರ್ಯದ ಮುಖದ ಹಿಂದೆ ಎನಿತೆನಿತು ಮೇಕಪ್ಪುಗಳೋ!

ನನ್ನಂತಹವರದ್ದು ಇನ್ನೊಂದು ಖಯಾಲಿ. ಎಂದೋ ಬರೆದ ಕವನವೊಂದು ಎಲ್ಲಿಯೋ ಬೈ ಮಿಸ್ಟೇಕ್ ಮುದ್ರಣವಾಗಿರುತ್ತದೆ. ಅಂದಿಗೇ ಅಪ್ರಸ್ತುತವಾಗಿದ್ದರೂ ಪೇಜ್ ಫಿಲ್ಲರ್ ಆಗಿ ‘ಅನಿವಾರ್ಯ ಪ್ರಕಟಣೆ’ ಆದ ಅದರ ಫೋಟೋ ಕ್ಲಿಕ್ಕಿಸಿ ಅಂದು ಎಫ್ಬಿಗೆ ಪೋಸ್ಟಿಸಿದ್ದೇ ಮಹಾಪರಾಧ. ನೀರಿಗೆ ಬಿದ್ದವನ ಶವವನ್ನು ಮತ್ತೆ ಹೊರಗೆಸೆಯುವ ಸಮುದ್ರದಂತೆ ಎಫ್‌ಬಿ ‘ಯುವರ್ ಮೆಮೊರೀಸ್ ಟೂ ಇಯರ್ಸ್ ಎಗೋ’ ಎಂದು ಈಗ ಅದನ್ನು ಹೊರಹಾಕಿರುತ್ತದೆ. ಅದನ್ನು ಪುನರ್ಷೇರಿಸಿ ‘ಮರುಕಾಟ’ ಕೊಡುವ ವರ್ಚುಯಲ್ ನಕ್ಷತ್ರಿಕರ ಪಡೆಗೆ ಇಲ್ಲಿ ಇನಿತೂ ಕೊರತೆಯಿಲ್ಲ. ‘ಯುವರ ಮೆಮೊರೀಸ್’ನ ಅಂಗವಾಗಿ ಎಂದೋ ಜೋಲುಮುಖ ಹೊತ್ತ ಗಂಡಿನೊಡನೆ ಬೆಳದಿಂಗಳೇ ಮೂರ್ತಿವೆತ್ತಂತಹ ಹೆಣ್ಣಿನ ‘ಆನಿವರ್ಸರಿಯ’ ಫೋಟೋಗಳು, ಫ್ರೆಷ್ ಆಗಿ ಜಗತ್ತಿಗೆ ಬಂದಿಳಿದ ಪುಟ್ಟ ಪೋರಪೋರಿಯರ ಚಿತ್ರಗಳು, ನಿಜಸುಂದರಿಯರು ಸ್ವಸೌಂದರ್ಯದ ಹುಚ್ಚಿನಿಂದ ಪೋಸ್ಟಿಸುವ ಅಗಣಿತ ಸೆಲ್ಫಿಗಳೇ ಎಫ್ಬಿಯೆಂಬ ಮರಳುಗಾಡಿನ ಓಯಸಿಸ್ಸುಗಳು.

ಅಂದೊಮ್ಮೆ ‘ಡೆತ್ ಕ್ಲಾಕ್ ಡಾಟ್ ಕಾಮ್’ ಹೆಸರಿನ ಜಾಲತಾಣವು ‘ನಿಮ್ಮ ಸಾವಿನ ದಿನವನ್ನು ತಿಳಿದುಕೊಳ್ಳಿ’ ಎಂದಿತು. ಜನ ಮುಗಿಬಿದ್ದರು. ಅದು ಹೇಳಿದ ದಿನಾಂಕ ಎಫ್ಬಿಯ ಟೈಮ್ ಲೈನ್ ಏರಿತು. ನನಗೆ ಅದೇ ಗೊಂದಲ, ಕುತೂಹಲಗಳ ಉಗಮ ಎನ್ನಬಹುದು. ಪೋಸ್ಟಿಗ ತನ್ನ ಸಾವಿನ ದಿನಾಂಕವನ್ನು ಪೋಸ್ಟಿಸಿದಾಗ ‘ಲೈಕ್’ ಒತ್ತಿದ ಹಲವಾರು ಜನರು ಅವನ ಸಾವನ್ನು ಇಷ್ಟ ಪಡುತ್ತಾರೆಂದು ಹೇಳುತ್ತಿದ್ದರೋ ಅಥವಾ ಇಂತಹದ್ದೊAದು ಜಾಲತಾಣ ಇದೆಯೆಂಬುದನ್ನು ಲೈಕಿಸಿದ್ದರೋ ಎಂಬುದು ಒಂದು ಗೊಂದಲವಾದರೆ ಆ ಪೋಸ್ಟಿಗೆ ಕೋಪದ ಇಮೋಜಿ ಹಾಕುವವರು ಸಾವಿನ ಬಗ್ಗೆ ಮಾತನಾಡಿರುವುದಕ್ಕೆ ಕೋಪಗೊಂಡಿದ್ದರೋ ಅಥವಾ ಅಷ್ಟೊಂದು ದಿನ ಇನ್ನೂ ಇರುತ್ತಾನೆಂಬುದಕ್ಕೆ ಕೋಪಗೊಂಡಿದ್ದರೋ ಎನ್ನುವ ಕುತೂಹಲ ಇನ್ನೂ ತಣಿದಿಲ್ಲ. ಕೆಲವರಂತೂ ‘ಕಂಗ್ರಾಚುನೇಷನ್ಸ್’, ‘ಅಭಿನಂದನೆಗಳು’, ‘ಆ ದಿನಕ್ಕಾಗಿ ಎದುರುನೋಡುತ್ತಿದ್ದೇವೆ’ ಎಂದೂ ಪ್ರತಿಕ್ರಿಯೆ ನೀಡಿದ್ದರು. ಆ ಪ್ರತಿಕ್ರಿಯೆಗಳು ‘ಕ್ಷಮಿಸಿ ನಾವ್ಹೇಳೋದೆಲ್ಲ ತಮಾಷೆಗಾಗಿ” ವಾಕ್ಯವನ್ನು ಸೂಚಿಸುವ ಸ್ಸ್ಮೈಲಿಗಳನ್ನು ಅಟ್ಯಾಚಿಸಿದ್ದರೂ ಆ ಬರಹದ ಹಿಂದಿನ ಭಾವ ಪಾರದರ್ಶಕವಾಗಿತ್ತು.

ಸಾವಿನ ವಿಷಯದಲ್ಲಿಯೂ ಎಫ್ಬಿಯದು ಎತ್ತಿದ ಕೊರಳು. ‘ಸತ್ತ’ ಅಕ್ಷರಗಳಿರುವ ಪೋಸ್ಟ್ ಕೆಳಗೆಲ್ಲಾ ರಿಪ್ ರಿಪ್ಪನೆ ಹರಿಯುವ ಸಾಲುಗಳು; ಹ್ಞಾಂ; ರಿಪ್ ಎಂದರೆ ಹರಿ ಎಂದೇ ಅರ್ಥ. ಅನುಮಾನಾಸ್ಪದ ಸಾವಿನ ಸಂದರ್ಭದಲ್ಲಿ ಪೋಸ್ಟ್ಮಾರ್ಟಂಗೆAದು ಶವವನ್ನು ರಿಪ್ ಮಾಡುವುದನ್ನು ಬಿಟ್ಟರೆ ಸತ್ತವರು ರಿಪ್ ಆಗುವುದು ಇಲ್ಲಿಯೇ ಹೆಚ್ಚು. ವ್ಯಕ್ತಿ ಬದುಕಿದ್ದಾಗ ಹರಿದು ಮುಕ್ಕಿದವರೂ ಇಲ್ಲಿ ರಿಪ್ ಎಂದು ಪೋಸ್ಟಿಸುವುದು ಜಗದ ಎನಿತು ಸೊಬಗೋ, ಎನಿತು ಸೋಜಿಗವೋ! ಭಗವನ್ನಾಮ ಸ್ಮರಣೆಯಲ್ಲೇ ನಿರತರಾದವರೊಬ್ಬರೂ ರಿಪ್ ಎಂದಾಗ ‘ರಿಪ್ ಎಂದರೆ ಹರಿ ಎಂದಲ್ಲವೆ?’ ಎಂದರೆ ‘ಹರಿನಾಮವೇ ಚಂದ. ಸತ್ತವರು ಹರಿಪಾದವನ್ನು ಸೇರಲೆಂದೇ ರಿಪ್ ಎನ್ನುವುದು. ಅದು ಹರಿಯನ್ನು ಕೂಗುವುದರ ಮೂಲಕ ಅವನ ಗಮನವನ್ನು ಇತ್ತ ಸೆಳೆಯುವ ಪರಿ’ ಎಂದರು. ಎಫ್ಬಿಯಲ್ಲಿ ಪೋಸ್ಟಿಸಿದ ಪೋಸ್ಟುಗಳನ್ನು ಶತಾಯಗತಾಯ ಸಮರ್ಥಿಸಿಕೊಳ್ಳುವುದರಲ್ಲಿ ಎಫ್ಬೀ ಕುಲ ಒಂದೆ ವಲಂ!



ಸಮಯ ಹನ್ನೊಂದು ಗಂಟೆ; ರಾತ್ರಿ. ಈಗ ಗುಡ್‌ನೈಟ್ ಪೋಸ್ಟಿಸುವ ಸಮಯ. ಯಾರದೋ ಟೈಮ್‌ಲೈನಿನ ಹೂವಿನ ಚಿತ್ರವೊಂದನ್ನು ಕದ್ದು ಕ್ರಾಪ್ ಮಾಡಿ, ಗುಡ್‌ನೈಟ್ ಪದವನ್ನು ಸೇರಿಸಿ ಪೋಸ್ಟಿಸಿದ್ದೇನೆ. ಇನ್ನೊಂದು ಗಂಟೆಯಷ್ಟು ಸಮಯ ಎಲ್ಲರ ಪ್ರತಿಕ್ರಿಯೆಗಾಗಿ ಮೊಬೈಲ್ ಪ್ಲಿಕ್ ಎಂದಾಗಲೆಲ್ಲ ಅತ್ತ ಹಣಕುತ್ತೇನೆ. ಎಫ್ಬಿಯಿರದ ಬಾಳು ಬಾಳಲ್ಲವೆಂದಾಗಿದೆ.

ಲೈಕುಂ ಶರಣಂ ಗಚ್ಛಾಮಿ; ಕಾಮೆಂಟ್ ಶರಣಂ ಗಚ್ಛಾಮಿ ಎಫ್ಬಿ ಶರಣಂ ಗಚ್ಛಾಮಿ.


Comments

  1. ಲೈಕುಂ ಪ್ರತೀಕ್ಷ್ಯಾಮಿ, ಕಾಮೆಂಟ್ ಪ್ರತೀಕ್ಷ್ಯಾಮಿ, ಮಾ ನಿರಾಶಾ ಭವತು ಮೇ

    ReplyDelete
    Replies
    1. ಎಫ್‍ ಬಿ ಲೋಕ ವಿಹಾರಿ ಅಹಂ ಭೋ ಅಭಿವಾದಯೇ

      Delete
  2. ಇಷ್ಟು ಬರೆದರೆ ಇಷ್ಟು ಲುಕ್ಸು, ಲೈಕ್ಸು,ha ha ha this is absolutely true. Finding humor covering most of the FB affects and side effects. Death clock & memories few years ago - are very nice examples. Love to read your article

    ReplyDelete
  3. ನಿಮ್ಮ ಲೇಖನಕ್ಕೆ ನನ್ನದೊಂದು ದೊಡ್ಡ ಲೈಕು. ನಾನು ಎಫ್ಬಿ ಅಕೌಂಟ್ ಓಪನ್ ಮಾಡಿದೆ ಎಂದಾಗ ನನ್ನ ಗೆಳೆಯನೊಬ್ಬ, "ಹಾಗಿದ್ರೆ ನೀನೂ ಬೀದಿಗೆ ಬಂದೆ ಅನ್ನು" ಎಂದ. ಕೆಲವರು ವಿಷಯದಲ್ಲಿ ಅದು ಬಹಳಷ್ಟು ನಿಜ. ತಮ್ಮ, ತಮ್ಮ ಮನೆಯ ಆಗು ಹೋಗುಗಳನ್ನೆಲ್ಲಾ ಹಾಕಿಕೊಳ್ಳಲು ಏನೋ ಖುಷಿ.

    ReplyDelete
    Replies
    1. ಅರಳು ಮಲ್ಲಿಗೆ ನರಳು ಮೆಲ್ಲಗೆ ಆಗುವಮಟ್ಟಕ್ಕೆ ತೊಂದರೆ ಕೊಡುವ ತಾಣವದು. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  4. ಯಪ್ಪಾ ಯಪ್ಪಾ ಎಲ್ಲಾ ಆಗು ಹೋಗುಗಳೂ ಅರೆದರೆಡು ಕುಡಿದ ಹಾಗಿದೆ. ಕ್ರಿಯೆ ಪ್ರತಿಕ್ರಿಯೆಗಳು ತಮ್ಮ ಊಹೆ ನೂರಕ್ಕೆ ನೂರು ಸತ್ಯ. ಅದ್ಯಾವ್ದು ಸಾರ್ Death clock ಕೇಳೋಕ್ಕೆ ಭಯವಾಗಿದೆ ಹ್ಹ ಹ್ಹ . ಅರ್ಧ ತಾಸು ನಕ್ಕಿದ್ದೀನಿ ಈ ಒಂದು ಲೈನಿಗೆ - ಕೊಂಚ ಕಾಸ್ಟ್ರಾಯಿಲ್, ಗ್ರೀಸ್ ಮೆತ್ತಿದ್ದೆ. ಗುಡ್ ಟು ಲುಕ್ಕು ಬಟ್ ನಾಟ್ ಟು ಲಿಕ್ಕು ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಗ್ರೀಸ್ ಥೂ !!!

    ReplyDelete
    Replies
    1. ಥ್ಯಾಂಕ್ಸ್ ನಾಣಿ. ಕೈಲಾಸಂ, ಮಾಹಿ ತಿಳಿದವರನ್ನು ನಗಿಸುವುದೊಂದು ಛಾಲೆಂಜ್

      Delete
  5. This comment has been removed by the author.

    ReplyDelete
    Replies
    1. Thank you for your fist opinion... whatever it was!!!

      Delete
  6. Replies
    1. ಬರೆದುದು ಸಿಂಧುವಾಯಿತು. ಧನ್ಯವಾದಗಳು

      Delete

Post a Comment