ಸಂಗೀತ ಜೀವನ ತಪಸ್ಯಾ - ಪುಸ್ತಕ ಪರಿಚಯ

ಸಂಗೀತ ಜೀವನ ತಪಸ್ಯಾ  -  ಪುಸ್ತಕ ಪರಿಚಯ

ಲೇಖಕರು: ಶ್ರೀ ನಾಗಶೈಲ ಕುಮಾರ್ 

(ನಾನೋದಿ ಮೆಚ್ಚಿದ ಪುಸ್ತಕವನ್ನು ನಿಮಗೆ ಪರಿಚಯಿಸುವ ಹಂಬಲದಿಂದ....)

ಪಂಡಿತ ದತ್ತಾತ್ರೇಯ ಸದಾಶಿವ ಗರುಡರು ಸುಮಾರು ೫೦ರ ನಂತರದ ದಶಕಗಳಲ್ಲಿ ಬೆಂಗಳೂರಿನಲ್ಲಿ ಹೆಸರಾಗಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತಬಲಾ ವಾದಕರು, ಗಾಯಕರು ಮತ್ತು ಸಂಗೀತ ತಜ್ಞರು. ಅವರ ಆತ್ಮಕತೆಯೇ ಸಂಗೀತ ಜೀವನ ತಪಸ್ಯಾ.


ನಿಜಕ್ಕೂ ಸಂಗೀತ ಸಾಧನೆಯಲ್ಲಿ ಕಠಿಣ ತಪಸ್ಸನ್ನೇ ಗೈದಿರುವ ಇವರು, ಸಂಸಾರಿಯಾಗಿಯೂ ಋಷಿಗಳ ಸಮಾನ ಬದುಕು ನಡೆಸಿದವರು. ಸ್ವಾಭಿಮಾನ, ಛಲ ಇವುಗಳಿಂದ ಯಾವುದೇ ಆಮಿಷಗಳಿಗೆ ಬಲಿಯಾಗದೆ, ತಮ್ಮ ದೀರ್ಘ ಜೀವನದುದ್ದಕ್ಕೂ ಸಂಘರ್ಷದ ಬದುಕು ನಡೆಸಿ, ತಾವು ನಂಬಿದ ಸಿದ್ಧಾಂತಕ್ಕೆ ಬದ್ದರಾಗಿದ್ದರು.

ಸುಮಾರು ಎಂಟು ಒಂಬತ್ತು ದಶಕಗಳ ಹಿಂದೆ, ಗರುಡ ಸದಾಶಿವರಾಯರು ಕರ್ನಾಟಕದಲ್ಲಿ ಪ್ರಖ್ಯಾತ ನಾಟಕಕಾರರು. ಅವರ ಮಕ್ಕಳಲ್ಲೊಬ್ಬರು ದತ್ತಾತ್ರೇಯ ಗರುಡ. ಬಾಲ್ಯದಲ್ಲೇ ಅಂಗವೈಕಲ್ಯಕ್ಕೆ ತುತ್ತಾದವರು. ಆದರೆ ಜೀವನದಲ್ಲಿ ಎಂದಿಗೂ ತಮ್ಮ ತಂದೆಯವರ ಹೆಸರಿನಿಂದಾಗಲೀ, ಅಥವಾ ಅಂಗವಿಕಲನೆಂಬ ಅನುಕಂಪವನ್ನಾಗಲೀ, ತಮ್ಮ ಏಳಿಗೆಗಾಗಿ ಬಳಸಿಕೊಳ್ಳಲಿಲ್ಲ. ಹಗಲಿರುಳು, ಊಟ ತಿಂಡಿಗಳ ಲೆಕ್ಕಿಸದೆ ನಡೆಸುತ್ತಿದ್ದ ಸಾಧನೆಯ ಫಲವೇ ಅವರು ಗಳಿಸಿದ ಕೀರ್ತಿ, ಅಪಾರ ಶಿಷ್ಯ ವೃಂದ, ಕಟ್ಟಿ ಬೆಳೆಸಿದ ಸಂಗೀತ ಶಾಲೆ. ವಿದೇಶೀಯರೂ ಸಹ ಅರಸಿ ಬಂದು ಅವರ ಬಳಿ ವಾದ್ಯ ಕಲಿತಿದ್ದಾರೆ.

ದೇಶದ ಅನೇಕ ಮಹಾನ್ ಕಲಾವಿದರಿಗೆ ಸಾಥಿಯಾಗಿ ಪ್ರಶಂಸೆ ಗಳಿಸಿದ್ದಾರೆ.

ಆದರೂ ಹಣ, ಹೆಸರು ಬಯಸದೆ ಎಲೆಮರೆಯ ಕಾಯಿಯಂತೆ ಸಂಗೀತಕ್ಕಾಗಿ ತಮ್ಮ ಬದುಕನ್ನು ಮುಡಿಪಿಟ್ಟ ಅಪರೂಪದ, ಶ್ರೇಷ್ಠ ಕಲಾವಿದರು ಇವರು.

ಇವರ ಜೀವನ ಚರಿತ್ರೆ ಎಂದು ಬರೆದಿರುವ ಈ ಪುಸ್ತಕವನ್ನು ಓದುತ್ತಿರಲು, ನೇರವಾಗಿ ಅವರ ಎದುರಿನಲ್ಲೇ ಕುಳಿತು, ಅವರ ಮಾತುಗಳನ್ನು ಕೇಳುತ್ತಿರುವ ಅನುಭವವಾಗದೆ ಇರದು. ಸರಳ ನೇರ ನುಡಿಗಳು, ಯಾವದೂ ಅತಿರಂಜಿತ ಇಲ್ಲದ ವಿವರಣೆಗಳು, ನೆನಪಿನಾಳದಿಂದ ಹೆಕ್ಕಿ ತೆಗೆದ ಸ್ವಾರಸ್ಯಕರ ಅನುಭವಗಳು, ನುರಿತ ಬರಹಗಾರರ ಲೇಖನಗಳಿಗಿಂತಲೂ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತವೆ.

ತಂದೆಯವರ ನಾಟಕ ಮಂಡಳಿಯಲ್ಲಿ ಕಳೆದ ಬಾಲ್ಯ, ಅವರಿಂದ ಕಲಿತ ನೀತಿ ನಿಯಮ, ನೇಮ ನಿಷ್ಠೆಗಳ ಜೀವನದ ಪಾಠ, ಕಂಪೆನಿಯೊಂದಿಗೆ ಊರೂರು ತಿರುಗಾಟ, ಕಂಪೆನಿಯ ಏಳು ಬೀಳುಗಳು, ಇವುಗಳು ನಮ್ಮನ್ನು ದಶಕಗಳ ಹಿಂದಕ್ಕೆ  ಕರೆದೊಯ್ಯುತ್ತದೆ. ಕಂಪನಿಯ ಮಾಲೀಕರಾಗಿ ಗರುಡ ಸದಾಶಿವರಾಯರು ತೋರುವ ಕಲಾವಿದರ ಬಗೆಗಿನ ಕಾಳಜಿ, ಕಲೆಯ ಮೇಲಿನ ಒಲವು, ಶ್ರದ್ಧೆ, ಕಂಪನಿಯನ್ನು ನಡೆಸಿಕೊಂಡು ಹೋಗಲು ಪಡುವ ಪಾಡು, ಇವೆಲ್ಲವೂ ಅವರ ಬಗ್ಗೆ ಗೌರವ ಮೂಡಿಸುತ್ತದೆ.

ನಂತರ ತಬಲಾ ಕಲಿಕೆ, ಸಿಕಂದ್ರಾಬಾದ್, ಬೆಂಗಳೂರು, ಮದ್ರಾಸು, ಮುಂಬಯಿ ಎಂದು ಒಂದು ನೆಲೆ ಕಂಡುಕೊಳ್ಳಲು ಮಹಾನಗರಗಳ ಸುತ್ತಾಟ, ಎಲ್ಲ ಕಡೆಯಲ್ಲೂ ಅನುಭವಿಸುವ ತೊಂದರೆಗಳು ಮನಕಲುಕುತ್ತವೆ. ಹೈದರಾಬಾದ್- ಸಿಕಂದರಾಬಾದ್ ಗಳಲ್ಲಿ ನಡೆದ ಹಿಂದೂ ರಜಾಕ್ ರ ಗಲಭೆಗಳಲ್ಲಿ ಸಿಕ್ಕಿ ಪಡುವ ಪಾಡು ಭಯ ಮೂಡಿಸುತ್ತದೆ. ಮದ್ರಾಸಿನಲ್ಲಿ ಸಿನೆಮಾದವರ ಸಹವಾಸ, ಬೆಂಗಳೂರಿನಲ್ಲಿ ಸರಿಯಾಗಿ ನೆಲೆ ಸಿಗದೆ ಪರದಾಟದ ಅನುಭವಗಳು ಕಣ್ಣಿಗೆ ಕಟ್ಟುತ್ತವೆ. ಇವರು ಸ್ವಾಭಿಮಾನ, ಹಠ, ಮುಂಗೋಪಗಳಿಂದಾಗಿ ಎಷ್ಟೊಂದು ಅವಕಾಶಗಳಿಂದ ವಂಚಿತರಾಗುತ್ತಾರೆ. ಆರ್ಥಿಕವಾಗಿ ಬಹಳಷ್ಟು ಕಷ್ಟವನ್ನು ಅನುಭವಿಸುವ ಇವರು, ಒಮ್ಮೆ ಮದರಾಸಿನಲ್ಲಿ ತಮ್ಮಲ್ಲಿದ್ದುದೆಲ್ಲವನ್ನೂ ಕಳೆದುಕೊಂಡಾಗ, ತಾಯಿ ತಮಗೆ ಕಟ್ಟಿಕೊಟ್ಟಿದ್ದ ರೊಟ್ಟಿಗಳು ತಮಗೆ ಆಧಾರವಾಯಿತೆಂದು, ತಾಯಿಯ ಕಕ್ಕುಲತೆಯನ್ನು ನೆನೆಯುತ್ತಾರೆ. ಆದರೆ ತನಗೆ ಒಗ್ಗದ್ದನ್ನು ಒಲ್ಲೆ ಎನ್ನುವ ಸ್ವಭಾವ, ಇವರ ಪ್ರತಿಭೆಗೆ ಇದ್ದ ಮನ್ನಣೆಯನ್ನು ಎಂದೂ ಕುಂದಿಸುವುದಿಲ್ಲ. 

ದತ್ತಾತ್ರೇಯ ಗರುಡರ ಜೀವನದಲ್ಲಿ ಸ್ನೇಹಿತರ ಪಾತ್ರ ಬಹಳ ದೊಡ್ಡದಾಗಿ ಕಾಣುತ್ತದೆ. ಎಲ್ಲರೂ ಇವರಂತೆ ಸಂಗೀತದಲ್ಲಿ ಆಸಕ್ತಿಯುಳ್ಳವರೇ. ಇವರ ಮುಂಗೋಪ, ಹಠ, ನಿಷ್ಠುರ ಸ್ವಭಾವಗಳಿಗೆ ವಿರುದ್ಧವಾಗಿ, ಸಂಯಮ, ಹಾಸ್ಯ ಸ್ವಭಾವಗಳವರೇ ಎಲ್ಲರೂ. ಆದರೂ ಎಲ್ಲರೂ ಇವರಿಗೆ ಸಹಾಯ ಮಾಡುತ್ತಾರೆ, ಪ್ರೀತಿಯಿಂದ ಕಾಣುತ್ತಾರೆ. ಸಿಕಂದರಾಬಾದ್ ನಲ್ಲಿ ಇವರಿಗೆ ದೊರೆಯುವ ಸ್ನೇಹಿತ ನಾರಾಯಣ ಸ್ವಾಮಿ. ಇವರೀರ್ವರ ಸ್ನೇಹದ ಪ್ರಸಂಗಗಳು ಹೃದಯಸ್ಪರ್ಶಿಯಾಗಿವೆ.

ಹಲವಾರು ನಗರಗಳನ್ನು ಸುತ್ತಿ, ಬೆಂಗಳೂರೇ ತಾವು ನೆಲೆಸಬೇಕಾಗಿರುವ ಸ್ಥಳ ಎಂದು ಅವರು ನಿರ್ಧರಿಸಿದರು ಎಂದಾಗ, ಬೆಂಗಳೂರಿನವರ ಭಾಗ್ಯ ಅದು, ಎನಿಸದೆ ಇರುವುದಿಲ್ಲ. ತಾವು ಕಾರ್ಯಕ್ರಮಗಳನ್ನು ನೀಡಿ, ಹೆಸರು, ಹಣ ಮಾಡುವುದಕ್ಕಿಂತಲೂ ಹೆಚ್ಚಾಗಿ ಸಂಗೀತ ಕಲಿಸುವುದರತ್ತಲೇ ಇವರ ಒಲವು. ಪರಿಶುದ್ಧ ಸಂಗೀತ, ಕಠಿಣ ಅಭ್ಯಾಸಗಳಲ್ಲಿ ಶಿಷ್ಯರನ್ನು ತೊಡಗಿಸಿ, ಉತ್ತಮ ಶಿಷ್ಯವೃಂದವನ್ನು ಸೃಷ್ಠಿಸುತ್ತಾರೆ. ಶಿಷ್ಯರ ಕಾರ್ಯಕ್ರಮಗಳಿಗೆ ಸ್ವತಃ ತಾವೇ ಸಾಥಿಯಾಗಿ ಹೋದಂತ ಅಪರೂಪದ ಗುರು ಇವರು. ಮಲ್ಲೇಶ್ವರದಲ್ಲಿ ಪ್ರಾರಂಭವಾಗುವ ’ಸಂಗೀತ ಕಲಾ ಭವನ’ ಇವರ ಆಶಯದಂತೆ ಪ್ರಾರಂಭವಾದ ಸಂಗೀತ ಶಾಲೆ.

ಅನೇಕ ಅನುಭವಗಳ ನೆನೆಪಿನ ಬುತ್ತಿಯನ್ನು ಬಿಚ್ಚಿ ಉಣಬಡಿಸುವ ಇವರ ನುಡಿಗಳು, ನಮ್ಮನ್ನೂ ಅವರೊಡನೆಯೇ ಆ ಕಾಲಕ್ಕೆ ಕರೆದೊಯ್ಯುತ್ತವೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ಅನೇಕ ದಿಗ್ಗಜರು ಹಾಗೂ ವಿವಿಧ ರಂಗಗಳ ಆ ಸಮಯದ ಅನೇಕ ಖ್ಯಾತ ವ್ಯಕ್ತಿಗಳ ಪರಿಚಯ, ಆ ದಶಕಗಳ ಬೆಂಗಳೂರಿನ ವಿವರಣೆ, ಇವೆಲ್ಲವೂ ಈ ಪುಸ್ತಕದಲ್ಲಿ ಹಾಸು ಹೊಕ್ಕಾಗಿ, ಓದುವ ಆಸಕ್ತಿಯನ್ನು ಹೆಚ್ಚಿಸುತ್ತವೆ. 

ತಮ್ಮ ಕಷ್ಟಗಳಲ್ಲಿ ಆಸರೆಯಾಗಿ ಒದಗಿ ಬರುತ್ತಿದ್ದ ತಾಯಿ, ಸಹೋದರಿಯರು, ಮತ್ತು ಸಂಘರ್ಷಮಯ ಜೀವನಕ್ಕೆ ಜೊತೆಯಾಗಿ ಬಂದ, ಪತ್ನಿ ಗೌರಾಂಬಾ ಇವರುಗಳನ್ನು ವಿಶೇಷವಾಗಿ ನೆನೆದಿದ್ದಾರೆ. ಹೆಚ್ಚು ಮಾತನಾಡದ, ಮೃದು ಹೃದಯಿ ಗೌರಂಬಾ ತುಂಬಿದ ಸಂಸಾರಕ್ಕೆ ಬಂದು, ಎಲ್ಲರ ಮನಗೆದ್ದು, ಅನೇಕ ಕಷ್ಟಕಾರ್ಪಣ್ಯಗಳ ಎದುರಿಸಿ, ಪತಿಯ ವ್ಯಕ್ತಿತ್ವವನ್ನು ಅರಿತು, ಅದಕ್ಕೆ ಸರಿಯಾಗಿ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಾರೆ.

ಅವರ ಕುಟುಂಬದವರ ಮತ್ತು ಶಿಷ್ಯರು ಅವರು ಕಂಡಂತೆ ದತ್ತಾತ್ರೇಯ ಗರುಡರ ಬಗ್ಗೆ ಬರೆದ ಲೇಖನಗಳು ಕೆಲವಿದ್ದು, ಇವುಗಳಲ್ಲಿ ಇತರರ ಕಣ್ಣಿಂದ ಕಾಣುವ ದತ್ತಾತ್ರೇಯ ಗರುಡರ ಕಿರು ಪರಿಚಯವಾಗುತ್ತದೆ

ಪಂಡಿತ ದತ್ತಾತ್ರೇಯ ಗರುಡರಿಗೆ ಸಂಗೀತದಷ್ಟೇ ಒಲವು ಅಧ್ಯಾತ್ಮದತ್ತ. ಪುಸ್ತಕದಲ್ಲಿ ಎರಡನೆಯ ಭಾಗದಂತೆ ಸಂಗೀತದ ಬಗ್ಗೆ ಅಪರೂಪವಾದ ಕೆಲವು ಲೇಖನಗಳಿವೆ. ಆಧ್ಯಾತ್ಮಿಕ ಸಂಗೀತ, ಅಷ್ಟಾಂಗ ಯೋಗ, ನಾದ ವೈಶಿಷ್ಟ್ಯ, ಸಂಗೀತದ ರಸಾನುಭವ ಹೀಗೆ ಆಸಕ್ತಿಕರ ವಿಷಯಗಳನ್ನು ಇಲ್ಲಿ ತಿಳಿಸಿದ್ದಾರೆ. ದತ್ತಾತ್ರೇಯ ಗರುಡರ ವಿಚಾರಧಾರೆಗಳು ಸಂಗೀತದ ಬಗ್ಗೆ ಅನೇಕ ವಿಷಯಗಳನ್ನು ತಿಳಿಸಿಕೊಡುತ್ತವೆ. ಎಷ್ಟು ಆಳವಾಗಿ ಸಂಗೀತ ಮತ್ತು ಆಧ್ಯಾತ್ಮವನ್ನು ಬೆಸೆದಿದ್ದಾರೆಂದರೆ, ಸಂಗೀತಕ್ಕೆ ಎಷ್ಟೊಂದು ಶಕ್ತಿಯಿದೆಯೆಂದು ಅಚ್ಚರಿ ಮೂಡುತ್ತದೆ. 

ಸಂಗೀತಗಾರರೇ ಅಲ್ಲ ಪ್ರತಿಯೊಬ್ಬ ಸಾಹಿತ್ಯ ಪ್ರೇಮಿಯೂ ಓದಿ ಸವಿಯಬಹುದಾದ ಪುಸ್ತಕವಿದು. ನಾವು ಕಲಿಯುವ ವಿದ್ಯೆ ಯಾವುದೇ ಇರಲಿ, ಅದರಲ್ಲಿ ಉನ್ನತಿಯನ್ನು ಹೊಂದಲು ಎಷ್ಟು ಪರಿಶ್ರಮ, ಛಲ, ಸಾಧನೆಗಳು ಬೇಕು ಎಂದು, ದತ್ತಾತ್ರೇಯ ಗರುಡರ ಸಂಘರ್ಷದ ಹಾದಿಯನ್ನು ಓದಿ ತಿಳಿಯಬಹುದು.

ಪಂಡಿತ ದತ್ತಾತ್ರೇಯ ಗರುಡರ ಶಿಷ್ಯರಾದ ಶ್ರೀಶಂಕರ್ ಮೇಲುಕೋಟೆ, ಮತ್ತು ಸೌಮ್ಯಾ ಭಟ್ ಈ ಪುಸ್ತಕವನ್ನು ಸಂಪಾದಿಸಿದ್ದಾರೆ.

ಅವಕಾಶ ಸಿಕ್ಕರೆ ಕೊಂಡು ಓದುವಿರಲ್ಲ....


(ನಾನೋದಿ ಮೆಚ್ಚಿದ ಪುಸ್ತಕ) 

ಸಂಗೀತ ಜೀವನ ತಪಸ್ಯಾ (ಜೀವನ ಚರಿತ್ರೆ)

ಲೇಖಕರು: ಪಂ. ದ.ಸ.ಗರುಡ

ಪ್ರಕಾಶಕರು:- ಸಂಗೀತ ಕಲಾಭವನ ವಿದ್ಯಾರ್ಥಿ ವೃಂದ.

ಈ ಪುಸ್ತಕ ಕೊಳ್ಳಲು ಇಚ್ಚಿಸುವವರು ಶ್ರೀಮತಿ ವೇದಾಗೋಪಾಲಸ್ವಾಮಿ,

ದೂರವಾಣಿ ಸಂಖ್ಯೆ 08023411882 ನಂಬರ್ ಗೆ ಕರೆಮಾಡಿ ಕೊಳ್ಳಬಹುದು.

ಬೆಲೆ;- ರೂ ೨೫೦/-

Comments

  1. Very nice introduction to kannada books. Your writing has inspired me to read that book. Thanks for providing details where it is available. I`m from Bangalore residing in NewDelhi. Sure will try to get this book. Glad to read about our Kannada music legends.

    ReplyDelete
    Replies
    1. ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು. ಸಾಹಿತ್ಯ ಮತ್ತು ಸಂಗೀತ ಎರಡೂ ವಿಷಯಗಳು ಹದವಾಗಿ ಮೇಳೈಸಿರುವ ಈ ಪುಸ್ತಕ ನಿಮ್ಮ ಆಸಕ್ತಿಯನ್ನು ತಣಿಸುವುದರಲ್ಲಿ ಸಂದೇಹವಿಲ್ಲ.

      Delete
  2. Thanks very much Nagashayala avare for your interesting insight , will try and get the book.
    I had the good fortune of meeting the amazing artist and getting his blessings

    ReplyDelete
    Replies
    1. ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು ಪೂರ್ಣಿಮಾರವರೆ. ಅಂತಹ ಹಿರಿಯರನ್ನು ಭೇಟಿ ಮಾಡಿ ಮಾತನಾಡಿಸುವದೂ ಒಂದು ಸುಯೋಗ. ನಾನೂ ಸಹ ಅವರನ್ನು ಭೇಟಿ ಮಾಡಿ ಮಾತನಾಡಿದ್ದೆ. ಇನ್ನೂ ಹೆಚ್ಚು ಅವರೊಂದಿಗೆ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ಅನಿಸುತ್ತಿದೆ.
      ಅವಕಾಶ ದೊರಕಿದರೆ ಖಂಡಿತಾ ಈ ಪುಸ್ತಕ ಓದಿ.

      Delete
  3. ಒಳ್ಳೆಯ ಪುಸ್ತಕದ ಒಳನೋಟದ ಪರಿಚಯ ಸೊಗಸಾಗಿದೆ. ಪಂಡಿತರು ಪಟ್ಟ ಕಷ್ಟ , ನಡೆದುಬಂದ ದಾರಿ, ಹೃದಯಸ್ಪರ್ಶಿ ಸನ್ನಿವೇಶಗಳು ನಿಜವಾಗಿಯೂ ಓದಬೇಕು ಎನಿಸುತ್ತಿದೆ ತಮ್ಮ ಲೇಖನ ಓದಿ. ಹಗಲಿರುಳು, ಊಟ ತಿಂಡಿಗಳ ಲೆಕ್ಕಿಸದೆ ದೊಡ್ಡ ಸಾಧಕರಾದ ಪಂಡಿತ ದತ್ತಾತ್ರೇಯ ಗರುಡ ನಮ್ಮ ಸಮುದಾಯದದವರೇ ಆದ ಶ್ರೀಮತಿ ಅಪರ್ಣಾ ನಾಗಶಯನ ಅವರ ತಂದೆ ಎಂದು ತಿಳಿದು ಸಂತೋಷವಾಯಿತು. ಧನ್ಯವಾದಗಳು
    ಮತ್ತೊಂದು ಒಳ್ಳೆಯ ಪುಸ್ತಕ ಪರಿಚಯ ಮಾಡಿಕೊಟ್ಟಿದ್ದಕ್ಕೆ

    ReplyDelete
  4. ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು. ಸಂಗೀತ ಕಲಿಕೆಯಲ್ಲಿ ನಿಜಕ್ಕೂ ಅಚ್ಚರಿ ಪಡುವಂತಹ, ಹೀಗೂ ಉಂಟೆ ಎನ್ನುವಂತಹ ಸಾಧನೆ ಪಂಡಿತ್ ದತ್ತಾತ್ರೇಯ ಗರುಡರದು. ಇಂದಿನ ಸಂಗೀತ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತಹದು.
    ಅವಕಾಶ ದೊರೆತಾಗ ಖಂಡಿತ ಓದಿ.

    ReplyDelete
  5. ಒಳ್ಳೆಯ ಪುಸ್ತಕವನ್ನು ಸುಂದರವಾಗಿ ಪರಿಚಯಿಸಿದ್ದೀರಿ. ಈ ಪುಸ್ತಕವನ್ನು ಕೊಂಡು ಓದಬೇಕೆಂಬ ಹಂಬಲವಾಗುತ್ತಿದೆ

    ReplyDelete
  6. ಬಹಳ ಸಂತೋಷ ..ಸಂಗೀತ ಪ್ರಿಯರಿಗೆ .ಇಂತ ಪುಸ್ತಕ ಮತ್ತು ಕಲಾವಿದರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ReplyDelete

Post a Comment