ಟಾಂಗಾಸಾಬ ಮತ್ತ್ ಸಂವೇದನೆ...

 ಟಾಂಗಾಸಾಬ ಮತ್ತ್ ಸಂವೇದನೆ...

ಲೇಖನ - ನಾಶ್ರೀ ಹೆಬ್ಳೀಕರ್  

(ನೊಡಿದ್ದು ಅದ, ಕೇಳಿದ್ದು ಅದ..ಅನುಭವಿಸಿದ್ದು ಅದ)

ಎಲ್ಲಾ ಊರಾಗ ಇದ್ದಂಗ ಗಾಂಧಿಚೌಕ ಧಾರವಾಡದಾಗೂ ಒಂದು. ಚೌಕಿನ ಮಗ್ಗಲಕ ಹಾಲಕೇರಿ ದಂಡಿಮ್ಯಾಲೆ ನಾಲ್ಕ ಗಡಗಡೆ ಭಾವಿ. ಬರಗಾಲ ಬಿದ್ದಾಗ ಶುಕ್ರವಾರ ಪ್ಯಾಟಿ ಮಂದಿನೂ ಬಂದ ಭಾವಿಗೆ ಹಗ್ಗಾ ಹಾಕಿ ನೀರ ಜಕೊಂಡ ಹೊಗತಿದ್ದರಂತ. ದುಂಡಗಿನಭಾವಿ ಕಟ್ಟಿ`ಗೆ ಹಚ್ಚಿ ಟಾಂಗಾಗೊಳ ನಿಲ್ಲತಿದ್ದವು. 

ರಾಜಾಸಾಬಂದ ಒಂದನೇ ನಂಬರ ಟಾಂಗಾ ಹೆಸರಿಗೆ ತಕ್ಕಂಗ ಕಾಠೆವಾಡಿ ಕುದುರಿ,ರಿಬ್ಬನ್ನು ಗೊಂಡೆ ಕೆಸರಿ ಬಣ್ಣದ ಟಾಂಗಾದ ಗಾಲಿಗೆ ಹಿತ್ತಳಿ

ಬಿಲ್ಲಾ ಬಡದಿರೊದು. ಮಸಿಯಣ್ಣಿಗಟ್ಟಿದ ಚರ್ಮದ ಪಟ್ಟಿಲೆ ಮಾಡಿದ ಕುದರಿಗ ಹಣಿಪಟ್ಟಿ. ಮುಂಗಾಲ ಬೆನ್ನ ಮ್ಯಾಲ ತೂಗಾಡತಿರೊ ಕಂಚಿನ ಘಂಟಿಗಳು. ಅದರ ನಡಕ ಒಂದ ಹಾರ್ಯಾಡೊ ತಿರಂಗಾ ಧ್ವಜಾ. ಟಾಂಗಾ ಕುದರಿಗೆ ಬಿಗಿಲಿಕ್ಕೆ ದೊಡ್ಡು ಬಕ್ಕಲ್. ಘಲ್ ಘಲ್ ಗೆಜ್ಜಿ ಸಪ್ಪಳಾ ಮಾಡಕೊಂತ ಹೊಂಡತ್ಯಂದರ ದಾರಿ ಬಾಜು ನಿಂತ ನೊಡೊಹಂಗ ಇರತಿತ್ತ. ಹಂಗ ಹೊಸೆನಸಾಬಂದ ಎಂಟನೇ ನಂಬರ ಟಂಗಾ, ಕಾಸಿಮಂದ ನಲ್ಕನೆ ನಂಬರ, ಹಿಂಗ ಎಂಟ-ಹತ್ತ ಟಾಂಗಾ ನಿಂತಿರತಿದ್ದವು.

ಯಾವದ ಸವಾರಿ ಯಾರು ಇಲ್ಲಂದ್ರ ಭಾವಿ ಕಟ್ಟಿಮ್ಯಾಲೆ ಬಿಡಿಸೇದಕೊತ, ಚಕ್ಕಾ ಆಡಕೊಂತ ಹರಟಿ ಹೊಡಿಯವರ. ಅವರ ಮಾತಾಡೊದನ್ನ ಕೇಳೊದ ಒಂದ ಮಜಾ.

-೧-

ಹುಸೇನ್ ಸಾಬಾ ತನ್ನ ಕಥಿ ಸುರು ಮಾಡಿದಾ, 'ಆಜ ಸುಬ ಶುಕ್ರವಾರ ಪ್ಯಾಟಿಯಿಂದ ಭಟ್ಟ ಆ'ಕು, ಮಾಳಮಡ್ಡಿ ರಾಮದೇವರ ಗುಡಿಗೆ ಬರತಿಎನ್' ಕರಕು ಪುಚಾ, ಅದಕ ನಾನ ಸವ್ವಾ ರೂಪಾಯಿ ಕೊಡು' ಕರಕು ಬೊಲ್ಯಾ. ಅದಕ್ಕ ಇಲ್ಲ ಇಲ್ಲ ಎಂಬತ್ತ ಪೈಸಾ ಕೊಡತೆನ ನೊಡ... ಬರತಿದ್ರ ಬಾ ಇಲ್ಲಾಂದ್ರ ಬಿಡ' ಕರಕು ಭಟ್ಟಾ ಬೊಲ್ಯಾ. ಕಡೆಕ ಒಂದ ರೂಪಾಯಗ ಹೊಂದಿಸಿಕೊಂಡ ಭಟ್ಟಾಕು ಬಿಠಾಕು ಚಲಾ. ಮ್ಯಾದಾರ ಓಣಿ ದಾಟುದಕು' ಕುದರಿ ಸ್ವಲ್ಪ ಮಂದಿಮೆ ಚಲಾ. ಅದಕ ಸಿಟ್ಟಿಗೆ-ಎದ್ದ ಭಟ್ಟಾ, ಲಗೂ ಲಗೂ ನಡಿಯೋ ಮಾರಯಾ, ಟಾಂಗಾ ಹೊಡ್ಯಾಕತ್ತಿಯೊ ಎನ್ ಚಕಡಿ ಹೊಡ್ಯಾಕತ್ತಿಯೋ, ಮುಂಜವಿ ಮೂರ್ತದ ಒಳಗ ಎಲ್ಲಾ ಪೂನ್ನೆವಚನ ಮುಗಸಬೇಕ್ ಕರಕು ಕ್ಯಾಕಿ ಬೊಲಕು, ಕೈಚೀಲದಾಗಿಂದ ಮುಷ್ಠಿ ಮುಷ್ಠಿಗಟ್ಟಲೆ ಕೊಬ್ಬರಿ, ಕಲಸಕ್ಕರಿ,ಉತ್ತತ್ತಿ ಔರ ಒಣಾದ್ರಾಕ್ಷಿ ಕೊಟ್ಟಾ. ಇದನ್ನೆಲ್ಲಾ ನೋಡಿ ಮುಂದ ಕುದರಿಗೆ ಖಿಲಾನೆ ಕೊ ಇಟ್ಟ ಹುಲ್ಲಿನ ಚೀಲದ ಮ್ಯಾಲ ಇದ್ದ ಚಾಬುಕ್ ಹೊರಗ ಬಂದದ್ದನ ನೋಡಿ ಘೊಡಾ ಭಾಗನೆ ಲಗಾ, ರಾಮ ಮಂದಿರ ಪೌಚನೆ ತಕ್ ಭಾಗಾ. ಭಟ್ಟಾ ಉತರಕೂ ಎಕ ರೂಪೈ ದಿಯಾ. ಹೊಳ್ಳಿ ಬರ್ತ ಭಟ್ಟಾ ಕೊಟ್ಟಿದ್ದನ್ನ ಖಾಖಾಕು... ಖಾಖಾಕು ಯತ್ತಾ ಬಚಾ. ಲೊ ಲೋ ತುಂಬ್ಹಿ ಖಾಲೊ... ಬಾತೆ ಅಚ್ಚಾ ಕರತಾಥಾ ಭಟ್ಟಾ...'

ಹಿಂತಾ ಮಾತಗಳು ನಲವತ್ತು ನಲವತ್ತೈದ ವರ್ಷ ಆದರೂ ಇವತ್ತಿಗೂ ಕಿವ್ಯಾಗ ಗುಯ್ಯಗುಡತಾವ. ಭಟ್ರು ಮತ್ತ ಸಾಬಿ ನಡುವಿನ ಬಾಂಧವ್ಯ ಧಾರವಾಡ ಮಣ್ಣಿನೊಳಗ ಸಿಗಲಿಕ್ಕೆ ಸಾದ್ಯ ಅದ. ಹೌದ ಅಂತಿರೊ ಅಲ್ಲೊ ನೀವ ಹೇಳ್ರಿ...

-೨-

ಕೆರಿತಳಗಿನ ಓಣ್ಯಾಗ ಎಲ್ಲಾ ಟಾಂಗಾಸಾಬಿಗಳದು ಒಂದಕ್ಕ-ಒಂದ ಹತ್ತಿದ ಮನಿಗಳು. ಅವಗಳ ಸಮೀಪ ಘಾಣೇಕರ ಭಡ್ಜಿ ಕಿರಾಣಿ ಅಂಗಡಿ.

ಒಂದ ದಿನಾ ನಾ ಮುಂಜಾನೆ ಹೊತ್ತಿನ್ಯಾಗ ಅಂಗಡಿಗೆ ಹೊದಾಗ, ಸಾಬಿ ಆರ ವರ್ಷದ ಮಗಳ ಕೈಯಾಗ ಗಿಂಡಿ ಹಿಡಕೊಂಡ ಬಂದ, ನಮ್ಮಪ್ಪಾ ಹೆಳ್ಯಾನ, ಚಾರ ಪೈಸೆಕಾ ಶಕ್ಕರ, ಚಾರ ಪೈಸೆಕಾ ಚಾಪತ್ತಾ, ದೊ ಪೈಸೆಕಾ ದೂದ, ಎಕ ಆಣೆಕಾ ಬಟ್ರಾ' ಔರ್ ಚಾರ ಪೈಸೆಕಾ ತೀಸ್ ನಂಬರ್ ಬೀಡ್ಯಾ' ಕೊಡ್ರೀ... ಅಂತ ಭಡ್ಜಿ ಕೈಯಾಗ ನಾಲ್ಕ ಅಣೆ ಕೊಟ್ಟಳು. ಹೊಟ್ಟಿ ಮ್ಯಾಲ ಇರೊ ವಳಾಂಗಿ ಹಾಕೊಂಡ, ಎಂಟ ಮಳದ ಪಂಜಾ ಉಟಗೊಂಡ ಘಾಣೇಕರ ಭಡಜಿ ರೊಕ್ಕಾ ಹೊಟ್ಟಿ ಮ್ಯಾಲಿನ ಕಿಸೆಕ ಇಳಸಿ, ಗಿಂಡ್ಯಾಗ ಗಿರ್ದಾ-ಪಾವ ಲೀಟರ್ ತಿಳಿ ಹಾಲಿನ ನೀರ' ಹಾಕಿ ಚಾಪೂಡಿ+ಸಕ್ಕರಿ+ಬಟರ್+ಬೀಡಿ ಹಾಳ್ಯಾಗ ಹಾಳಿ ಸುತ್ತಿ ಧಾರಾಕಟ್ಟಿ ಮ್ಯಾಲೆ ಉಳದ್ದ ಐದ ಪೈಸಾ ಕೊಟ್ಟ, *ಘಟ್ಟ ಪಕಡಕೂ ಜಾ ಮಾ* ಅಂತ ಹೇಳಿ ಶಾಂತ ಮನಸ್ಸಿನಿಂದ ಈ ರೀತಿಯಿಂದ ಘಾಣೆಕರ ಭಡಜಿ ಕೊಟ್ಟ ಕಳಸೊವರ. ಆ ಸಾಮರಸ್ಯ, ಆ ಸಂತೃಪ್ತಿಯ ಜೀವನ ಇನ್ನ ಮುಂದ ಎಲ್ಲಿ ಸಿಗತದ.

-೩-

ಇದು ನಮ್ಮ ಮನ್ಯಾಗ ಆದ ಒಂದ ಘಟನೆ. ೧೯೬೯ನೇ ಇಸ್ವಿ ಹೆಚ್ಚುಕಡಿಮಿ ಎಪ್ರಿಲ್ ಸೂಟಿ. ಮೊಗಲಾಯಿ ಕಡಿಂದ ನಮ್ಮಕ್ಕನ್ನ ನೊಡಾಕ' ಬರೊರಿದ್ದಾರಂತ ಪತ್ರ ಮನಿಗ ಬಂತ. ನನಗ ಅವಾಗ ಒಂಬತ್ತ ವರ್ಷ. ಮನ್ಯಾಗೆಲ್ಲಾ ಒಮ್ಮಿಂದ ಒಮ್ಗಿಲೆ ಹಬ್ಬದ ವಾತಾವರಣ. ಅಣ್ಣಂದ್ರು ಭತ್ತದ ಚೀಲಕ್ಕ ಕೈಹಾಕಿ ಅವಲಕ್ಕಿ ಸಲುವಾಗಿ ನಾಲ್ಕ ಚಿಟ್ಟಿ ಭತ್ತಾ ನೀರಿನ' ಹಂಡೆಕ್ಕ ಸುರ್ವೆಬಿಟ್ಟರು. ಪದ್ದಕಜ್ಜಿ ಮನಿಗ ನನ್ನ ಓಡಿಸಿ ಒಣಗಿದ ಉದ್ದಿನ ಹಪ್ಪಳ,ಅವಲಕ್ಕಿ ಹಪ್ಪಳ, ಬೂದಗುಂಬಳಕಾಯಿ ಸಂಡಗಿ ತರಸಿದರು. ಹಾಲಿನ ಬೂಬು ಮುಂಜಾನೆ ಬಂದಾಗ' ದಿನಾ ಕೊಟ್ಟಂಗ ಹಾಲ ಕೊಡಾಕ ಹೊಗಬ್ಯಾಡ... ನಾಳೆ ಮಂದಿ ಬರೊರ ಅದಾರ ಕೆಚ್ಚಲಕಷ್ಟ ನೀರ ಗೊಜ್ಜಿ ಗಟ್ಟಿ ಹಾಲ ತೊಗೊಂಡ ಬಾ ಅಂತ ಅಪ್ಪ ಅವರಿಂದ ಆಕಿಗೆ ತಾಕೀತು ಆತು. ಒಟ್ಟಿನ ಮ್ಯಾಲೆ ಎಲ್ಲಾ ತಯಾರಿನೂ ಆತು.

ಆ ದಿನಾ ಬಂದು ಆತು. ಮುಂಜಾನೆ ಎಂಟ ಗಂಟೆಕ್ಕ ಟಾಂಗಾದ ರಾಜಾಸಾಬ'ಗ ಮನಿಗ ಬರಾಕ ಬಲಾವ ಆತು. ತಂದೆಯವರಿಂದ, ನೊಡ ರಾಜಾಸಾಬ್ ಹತ್ತುವರಿಗೆ ಬರೊ ರಾಯಚೂರ ಬಸ್ಸಿಗೆ ಆಗೊ ಬೀಗರ ಬರಖತ್ತಾರ, ಮದಲೆಕ ಹೋಗಿ ನಿಂತ ಚಂದಾಗಿ ಕರಕೊಂಡ ಬಾ ಅಂತ ಹೇಳಿ ಕಳಸಿದರು.

ರಾಜಾಸಾಬ ಅಂದ್ರ ಮನಿ ಮನಷ್ಯಾ ಇದ್ದಂಗ ಇದ್ದ. ಮನೆತನದ ಹೆಚ್ಚುಕಡಿಮೆ ಎಲ್ಲಾ ವಿಷಯ ಗೋತ್ತಯಿರತಿತ್ತ. ಅದಕ ಅವನ ಮ್ಯಾಲೆ ಅಷ್ಟ ವಿಶ್ವಾಸ.ಹೇಳಿದಂಗ ಬಸ್ಸದಿಂದ ಆಗೊ ಬಿಗರನ ಮನಿಗ ಕರಕೊಂಡು ಬಂದಿದ್ದಾ.

ನಾಲ್ಕ ಜನಾ ಬಂದಿದ್ರು.ಅವರ ತಂದೆ,ಅಣ್ಣಾ ಮತ್ತ ಅವರ ವೈನಿ. ಬಂದವರೆಲ್ಲ ಕೈಕಾಲು ತಂಪಾಗಿಸಿಕೊಂಡು ಮಂಚ ಮತ್ತು ಆರಾಮಕುರ್ಚಿಯ ಮೇಲೆ ಆಸೀನರಾದರು. ಎಲ್ಲರಿಗೂ ಹಚ್ಚಿದ ವಗ್ಗರಣಿ ಅವಲಕ್ಕಿ ಮ್ಯಾಕ ಹಸಿ ಕೊಬ್ಬರಿ ಕೊಟ್ಟ ಆಗಿತ್ತು. ಚಹಾದ ಜೊತೆಗೆ ಬಸಿ ತುಂಬ ಪಾರಲೇ ಬಿಸ್ಕಿಟು ಅಡುಗೆಮನೆಯಿಂದ ನಡುಮನೆ ಹಾಯ್ದು ಪಡಸಾಲಿಗೆ ಬರುವಷ್ಟರಲ್ಲಿ ಎರಡು ಬಿಸ್ಕಿಟು ನನಗೆ ಗೊತ್ತಾಗದಂತೆ ನನ್ನ ಖಾಖಿ ಚಡ್ಡಿಯಲ್ಲಿ ಇಳದಿತ್ತು. ಪರಪಂರೆಯಂತೆ ಅಕ್ಕಳಿಂದ ದೇವರ ನಾಮ, ಉಭಯ ಕುಶಲೋಪರಿ ಆಗಿ, ಉಡಿ ತುಂಬುವ ಕಾರ್ಯಕ್ರಮ ಮುಗಿದಾಗ ಒಂದ ಘಂಟೆ.ನಮ್ಮ ರಾಜಾಸಾಬಂದು ಅವಲಕ್ಕಿ ತಿಂದು ಚಹಾ ಮುಗಿಸಿ ಆಗಿತ್ತು.

ಎಲ್ಲರೂ ಊಟಕ್ಕೆ ಏಳಿರಿ, ಎಲೆ ಹಾಕಿದೆ ಎಂಬ ಆಹ್ವಾನ ಒಳಗಿನಿಂದ ಬಂದಾಗಿತ್ತು. ಹಬ್ಬದ ಸರಳ ಊಟ ಮುಗಿಸಿ ತಾಂಬೂಲ ಸೇವಿಸಿ, ನಾವು ಊರಿಗೆ ಹೋಗಿ ನಮ್ಮ ಅಭಿಪ್ರಾಯ ತಿಳಿಸತೆವೆ ಎಂದು ಹೇಳಿ ಅವರು ಎದ್ದಾಗ ಹೊರಗಡೆಗೆ ಅದೆ ರಾಜಾಸಾಬನ ಟಾಂಗಾ ಸಜ್ಜಾಗಿ ನಿಂತಿತ್ತು.

ಅವರಿಗೆ ಬೈ ಬೈ ಹೇಳಿ ಉಳಿದ ನಾವೆಲ್ಲ ಊಟ ಮಾಡಿದಾಗ ನಾಲ್ಕಾಗಿತ್ತು.

ಅಷ್ಟರಲ್ಲಿ ಟಾಂಗಾ ಮನಿಮುಂದ ಬಂದು ನಿಂತ ಸಪ್ಪಳವಾಯಿತು. ರಾಜಾಸಾಬ ಪಡಸಾಲ್ಯಾಗ ಗೋಡೆಗೆ ಆತು ಕೂಡುತ್ತ, 'ಸಾಡೆ ತೀನ್ ಬಜೆ ಬಸ್ಸಾ ಆಯಾ ಸಾಬ. ಉನಸಬಕೊ ಬಸ್ಸಮೆ ಬಿಠಾಕೆ ಅಬಿ ಆಯಾಸಾಬ. ಅಡೈ ರೂಪೈ ನಿಕಾಲೋಸಾಬ.

ಅದಕ ನಮ್ಮ ತಂದಿ, ಯಾಕಪಾ ರಾಜಾ, ಅವರ್ನ ಕರಕೊಂಡ ಬಂದ ಬಿಟ್ಟ ಬರಾಕ ದೀಡ ರೂಪಾಯಿ. ನೀ ಎನ್ ಒಂದ ರೂಪಾಯಿ ಹೆಚ್ಚ ಕೆಳಾಖತ್ತಿಯಲ್ಲಾ? ಅಂದ್ರು....

ನಹಿ ಸಾಬ, ಆಪ್ ಬೊಲೆಸೊ ಬರಾಬರ, ಸವಾರಿ ಕಾ ದೀಡ'ಚ್ ರೂಪಾಯಿ. ಜಾತೆ ವಕತ್ತ್' ಸಿದಾ ಸುಭಾಸ ರೋಡ್ ಸೆ ನಹಿ ಲೆಕೆ ಗಯಾ. ಮ್ಯಾದಾರ ಓಣಿಯಿಂದ ಲೈನ್ ಬಜಾರ ದಿಬ್ಬಾ ಎರಿ, ಟಿಕಾರೆ ರೋಡ ಕೋ ನಿಚೆ ಉತರನೆ ತಕ ಉನಕಾ ಬಾತೆ ಪೂರಾ ಸುನರಹಾತಾ... ಜನಾ ಭಾಳ ಒಳ್ಳೆಯವರ ಅದಾರ. ಮತ್ತ ಬ್ಯಾರಬ್ಯಾರೆ ಕನ್ಯಾ ನೊಡಕೊಂತ ಹೊಗೊದ ಬ್ಯಾಡ ಕರ ಕೂ ಬೊಲರಹೆತೆ. ಉನ ಲೊಗೊಂಕೊ ಹಮಾರಾ ಬೇಟಿ ಪಸಂದ ಆಗಯಿ ಹೈ. ಇಸ್ಸ್ ಕೆ ಲಿಯೆ ಎಕ ರೂಪೈ ಖುಷಿ ಸಾಬ. ಅವನ ಮಾತನ್ನ ಕೇಳಿ ನಮ್ಮ ತಂದೆ ಭಪ್ಪರೆ ಮಗನೆ ಎಂದು ಹೇಳಿ ಎರಡುವರೆ ರೂಪಾಯಿ ಕೊಟ್ಟು ಕಳುಹಿಸಿದರು...

ಮುಂದೆ ಒಂದೆ ತಿಂಗಳಲ್ಲಿ ಅಕ್ಕಳ ಮದುವೆಯು ನಡೆದಾಯಿತು. ನಮ್ಮಕ್ಕ+ಮಾಮಾ ಅವರ ಅಖಂಡ ಐವತ್ತೋಂದು ಸಂವತ್ಸರ ಸುಖ, ಸಂತೃಪ್ತಿಯ ಜೀವನ ಮುಂದುವರಸಿದ್ದರೆ. ಹೀಗಿತ್ತು ಆಗಿನ ಆತ್ಮೀಯ ಸಂಬಂಧಗಳು. _ಈ ಲಾಕಡೌನ ಸಂದರ್ಭದಲ್ಲಿ ಹಳೆಯ ಸವಿ ನೆನಪುಗಳನ್ನು ಮೆಲಕು ಹಾಕುತ್ತ ಎಲ್ಲ ಋತುಗಳನ್ನು ಚೈತ್ರದ ಚಿಗುರನ್ನಾಗಿಸುವ ಒಂದು ಹಸಿವು..._

 



Comments

  1. Article with special Kannada language accent and absolute feast to read some authentic Dharavad style words. Increased my vocabulary amazing article and lots of humor wow this seems to be special article. Urdu conversations of Tanga wala is also excellent

    ReplyDelete
  2. ಭಾಷೆ, ನಿರೂಪಣೆ, ವಸ್ತು ವಿಷಯ, ಎಲ್ಲವೂ ಒಂದಕ್ಕಿಂತ ಒಂದು ಸುಂದರವಾಗಿದೆ. ನಿಜಕ್ಕೂ ಹಳೆಯ ನೆನಪುಗಳು ಎಷ್ಟು ಸೊಗಸು. ಅದನ್ನು ಹಂಚಿಕೊಳ್ಳುವುದು ಇನ್ನೂ ಹೆಚ್ಚಿನ ಸೊಗಸು.

    ReplyDelete
  3. This comment has been removed by the author.

    ReplyDelete
  4. ಸರ್ರ ತಮ್ ಲೇಖನ ಓದ್ಕೋತ್ ಕೊತ್ರ ಟೈಮ್ ಹೋಗೋದೇ ತಿಳಿಯಂಗಿಲ್ಲ ನೋಡ್ರಿ. ಹಾಸ್ಯ, ಭಾಷೆಯ ಸೊಗಡು ಬೇರೆ ಜಿಲ್ಲೆಯವರು ಕೇಳರಿಯದ ಪದಗಳು ಓದುತ್ತಿದ್ದರೆ ಮಜ ಬರುತ್ತದೆ.

    ReplyDelete
  5. ಆಹಾ ! ಈ ಲೇಖನ ಧಾರವಾಡದ ಪೇಡಕಿಂತಲೂ ರುಚಿಯಾಗಿದೆ!

    ReplyDelete
  6. ಬರೆದಿರುವ ಶೈಲಿ ಬಹಳ ಇಷ್ಟವಾಯಿತು. ಈ ಭಾಷೆ ಒಂದು ಬೇರೆಯೇ ಕಾಲ ಮತ್ತು ಜಾಗಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.

    ReplyDelete
  7. ಇದನ್ನು ನೋಡಿ ನನ್ನ ಬಾಲ್ಯ ನೆನಪಿಗಿ ಬಂತು.
    ಮೈಸೂರಿನ ನಮ್ಮ ಚಿಕ್ಕಮನ ಮನೆಗೆ ರೈಲ್ ಸ್ಟೇಷನ್ ನಿಂದ ಟಾಂಗ ಸವರಿ ತುಂಬ ಖುಷಿ ತರುತಿದ್ದ ಸಂಗತಿ.
    Thank you 🙏

    ReplyDelete
  8. ಓದಿ ಭಾಳ ಖುಶಿ ಆಯ್ತು. ನಾವು ಸಣ್ಣವರಿದ್ದಾಗಿನ ದಿನಗೊಳು, ಧಾರವಾಡದಾಗ್ ಓಡ್ಯಾಡಿದ್ ದಿನಗೊಳು ಎಲ್ಲಾ ನಿನಪಿಗ್ ಬಂದವು.

    ReplyDelete

Post a Comment