ಮೈಸೂರು ಒಡೆಯರ ರಾಜವಂಶ ಮತ್ತು ...


ಮೈಸೂರು ಒಡೆಯರ ರಾಜವಂಶ ಮತ್ತು ಅಲುಮೇಲಮ್ಮನ ಶಾಪ

ಲೇಖನ - ರಾಮಮೂರ್ತಿ, ಬೇಸಿಂಗ್ ಸ್ಟೋಕ್

                                   ಮೈಸೂರಿನ ಒಡೆಯರು ತಾಳಿಕೋಟೆ ಅಥವಾ ರಕ್ಕಸತಂಗಡಿ ಯುದ್ಧವಾದ ( ಜನವರಿ ೧೫೬೫ ) ನಂತರ ವಿಜಯನಗರದ ಸಂಪ್ರದಾಯವನ್ನು  ನಡೆಸಿಕೊಂಡು ಬಂದರು. ೧೫ನೇ ಶತಮಾನದಲ್ಲಿ ಇವರ ಪೂರ್ವಜರು ದಕ್ಷಿಣ ಮೈಸೂರಿನಲ್ಲಿ ನೆಲೆ ಊರಿ   ಸುಮಾರು ೫೦೦ ವರ್ಷ ಆಳಿದರು. ೧೩೯೯ ರಲ್ಲಿ ಯಾದವ ವಂಶದ ಯದುರಾಯ ಮತ್ತು ಕೃಷ್ಣರಾಯ ಎಂಬ ಸಹೋದರರು ಈ ವಂಶದ  ಮೂಲ ಪುರುಷರು ಅನ್ನುವುದುಕ್ಕೆ ಸಾಕಷ್ಟು ಮಾಹಿತಿ ಇದೆಯೆಂದು ಅನೇಕ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಸಣ್ಣ ಪಾಳೇಪಟ್ಟಿನಿಂದ ಶುರುವಾದದ್ದನ್ನು ಯದುರಾಯರು ತಮ್ಮ  ೨೪ ವರ್ಷದ ಆಡಳಿತದಲ್ಲಿ ರಾಜ್ಯವನ್ನಾಗಿ ವಿಸ್ತರಿಸಿದರು. ಇವರ ಕಾಲದಲ್ಲಿ  ಬೆಟ್ಟದ ಮೇಲೆ  ಯೋಗಾ ನರಸಿಂಹನ ದೇವಸ್ಥಾನದಲ್ಲಿ ನಾಲಕ್ಕು ಕೋಟೆಗಳನ್ನು ಕಟ್ಟಿ ಈ ಊರಿಗೆ “ಮೇಲುಕೋಟೆ” ಎಂದು ನಾಮಕರಣವಾಯಿತು. ಹಾಗೆಯೆ ಮೈಸೂರಿನ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೂ ಅನೇಕ  ಸುಧಾರಣೆಗಳನ್ನು ಮಾಡಿದರು.  ಯದುರಾಯರ  ನಂತರ ೧೫ ವರ್ಷದ ಹಿರಿಯಮಗ ಬೆಟ್ಟದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದು ೩೬ ವರ್ಷ  ರಾಜ್ಯಭಾರ ಮಾಡಿದರು. ಈ ಅರಸರು ಹಿಂದೂ ಧರ್ಮದ ವಿವಿಧ ಶಾಖೆಗಳನ್ನು ಬಹಳ ಉದಾರತೆಯಿ೦ದ ಬೆಳಸಿಕೊಂಡು ಬಂದರು.

                                                     ತಿಮ್ಮರಾಜ ಒಡೆಯರು (೧೪೫೮-೧೪೭೮), ಎರಡನೇ ಚಾಮರಾಜ ಒಡೆಯರು (೧೪೭೮-೧೫೧೩),  ಮತ್ತು ಮೂರನೇ ಚಾಮರಾಜ ಒಡೆಯರು (೧೫೧೩-೧೫೫೩), ನಲವತ್ತು ವರ್ಷಗಳ ಕಾಲ ಈ ರಾಜ್ಯವನ್ನು ಆಳಿ ಅನೇಕ ಸುಧಾರಣೆಗಳನ್ನು ತಂದು ಜನರು ಶಾಂತಿಯಿಂದ ಬಾಳುವಂತೆ ಮಾಡಿದರು. ಚಾಮುಂಡಿ ಬೆಟ್ಟದಮೇಲೆ ಕೆರೆ ನಿರ್ಮಾಣ ಆದದ್ದು ಇವರಿಂದಲೇ. ಇವರ ಮಗ ತಿಮ್ಮರಾಜ ಒಡೆಯರ್ ೧೫೫೩ರಲ್ಲಿ ಪಟ್ಟಕ್ಕೆ ಬಂದು ನೆರೆಯ ಪಾಳೇಗಾರನ್ನು ಗೆದ್ದು “ಬಿರುದುಳ್ಳವರೆಗೆಲ್ಲಾ ಪ್ರಭು ” ಅನ್ನುವ ಬಿರುದನ್ನೂ ಪಡೆದರು. ಇವರ ಕೊನೆಯ ತಮ್ಮ “ಬೋಳ” ಚಾಮರಾಜ ಒಡೆಯರು (೧೫೭೨ -೧೫೭೬), ನಾಲಕ್ಕು ವರ್ಷ ಮಾತ್ರ ಇವರ ಆಡಳಿತ. ಇವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಸಿಡಿಲು ಹೊಡೆದು ಇವರ ಕೂದಲ್ಲೆಲ್ಲಾ ಉದುರಿದ್ದರಿಂದ ಈ ಹೆಸರು ಬಂತಂತೆ!! ಇವರ ಮಗ ಬೆಟ್ಟದ ಚಾಮರಾಜ ಒಡೆಯರು ಎರಡು ವರ್ಷ ಮಾತ್ರ ಆಳಿದರು, ಕಾರಣ, ಅಸಾಮರ್ಥ್ಯತನ (sacked for being inefficient !!) ೧೫೭೮ ರಲ್ಲಿ ಇವರ ತಮ್ಮ ರಾಜ ಒಡೆಯರು ಪಟ್ಟಕ್ಕೆ ಬಂದರು.

ಮೈಸೂರಿನಲ್ಲಿ ಯಾದವ ವಂಶವನ್ನು ಸ್ಥಾಪಿಸುವ ಗೌರವ ಯದುರಾಯರದಾದರೆ, ಒಂದು ಸಣ್ಣ ಮೈಸೂರು ಪ್ರದೇಶವನ್ನು ದೊಡ್ಡ ರಾಜ್ಯವನ್ನಾಗಿ ಮಾಡಿದವರು ರಾಜ ಒಡೆಯರು. ಇವರು ಸುತ್ತಮುತ್ತಲ ಪ್ರದೇಶಗಳನ್ನು ಆಕ್ರಮಿಸಿ ಬಲವಾದ ಕೋಟೆಯನ್ನು ಕಟ್ಟಿ ಪ್ರಬಲರಾದರು ಮತ್ತು ೧೬೦೮ ರಲ್ಲಿ ೨೫೦೦೦ ವರಹ ವರಮಾನವುಳ್ಳ ಮೂವತ್ತುಮೂರು ಗ್ರಾಮಗಳಿಗೆ ಅರಸರಾದರು.
ವಿಜಯನಗರದ ಅರಸ ಎರಡನೇ ವೆಂಕಟರಾಯನ  ಆಡಳಿಕೆಯಲ್ಲಿ ಅವನ ಸಬ೦ಧಿಕ  ತಿರುಮಲ ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯಾಗಿದ್ದ. ಆದರೆ ಇವರಿಬ್ಬರಲ್ಲಿ ಸೌಹಾರ್ದತೆಯಿರಲಿಲ್ಲ. ಈ ಪರಿಸ್ಥಿತಿಯನ್ನು ರಾಜ ಒಡೆಯರು  ಉಪಯೋಗಿಸಿಕೊಂಡು ೧೬೧೦ ರಲ್ಲಿ ತಿರುಮಲನನ್ನು  ಹೊರಗೆ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿ,  ವಿಜಯನಗರದ ರಾಜಪ್ರತಿನಿಧಿಯಿಂದ  ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು  ಮೈಸೂರು ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನೆ ಪ್ರಾರಂಭಿಸಿದರು. ಇವರ ಆಡಳಿತದ ಕಾಲ ನಲವತ್ತು ವರ್ಷಗಳು. ಇವರ ಕಾಲದಲ್ಲಿ ಶ್ರೀರಂಗಪಟ್ಟಣ  ರಾಜಧಾನಿಯೂ ಆಯಿತು, ಈ ವರ್ಷದಲ್ಲಿ  ನವರಾತ್ರಿ ಹಬ್ಬದ ಆಚರಣೆ ಇವರಿಂದಲೇ ಶುರುವಾಗಿದ್ದು. 

ರಾಜಒಡೆಯರು ೧೬೧೭ ರಲ್ಲಿ  ತೀರಿದರು, ಇವರ ಗಂಡು ಮಕ್ಕಳು ಆಗಲೇ ತೀರಿದ್ದರಿಂದ ಅವರ ಮೊಮ್ಮಗ ೧೪ ವರ್ಷದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದಿದ್ದರೂ ಆಡಳಿತ  ದಳವಾಯಿ ಬೆಟ್ಟದ ಅರಸರದ್ದು. ಇವರು ಸುತ್ತ ಮುತ್ತಲಾದ ಪಾಳೆಯಪಟ್ಟುಗಳ ಮೇಲೆ ಧಾಳಿ ನಡೆಸಿ ರಾಜ್ಯವನ್ನು ವಿಸ್ತರಿಸಿದರು.  ಇಪ್ಪತ್ತು ವರ್ಷ ಚಾಮರಾಜ ಒಡೆಯರ ಆಳಿಕೆಯಲ್ಲಿ ಅನೇಕ ಸುಧಾರಣೆಗಳು ಬಂದವು. ಮೊದಲನೆಯ ಬಾರಿಗೆ ಸೈನ್ಯದ ಬೆನ್ನೆಲುಬಾಗಿ ಗಜದಳ ಸ್ಥಾಪಿತವಾಯಿತು. ಈಗ  ಮೈಸೂರು ರಾಜ್ಯ ವಿಸ್ತಾರವಾಗಿ ಹರಡಿತ್ತು. ಕಾವೇರಿ ನದಿಗೆ ನಾಲೆ, ಮೇಲುಕೋಟೆಯಲ್ಲಿ ಸ್ನಾನ ಘಟ್ಟ ಮತ್ತು ಕೆರೆಗಳ ನಿರ್ಮಾಣವಾಯಿತು. ಇವರು ಸಾಹಿತ್ಯ ಪ್ರಿಯರು. ವಾಲ್ಮೀಕಿ ರಾಮಾಯಣದ ಕನ್ನಡ ರೂಪವಾದ ಚಾಮರಾಜೊಕ್ತಿ ವಿಲಾಸವನ್ನು ಸ್ವತಃ ರಚಿಸಿದರು.
ಇವರು ನಿಧನವಾದ (೧೬೩೭) ನಂತರ ೨೫ ವರ್ಷದ ಎರಡನೇ ರಾಜ ಒಡೆಯರು ಪಟ್ಟಕ್ಕೆ ಬಂದರು. ಆದರೆ ೧೬೩೮ ರಲ್ಲಿ ಇವರು ನಿಧನವಾದರು. ಇವರ ಉತ್ತರಾಧಿಕಾರರು ಸುಪ್ರಸಿದ್ದ ರಣಧೀರ ಕಂಠೀರವ ನರಸರಾಜ ಒಡೆಯರು. ಇವರ ಕತ್ತಿವರಸೆ, ದೈಹಿಕ ಬಲ ಮತ್ತು ಶೌರ್ಯ ಇಂದಿಗೂ ಜನಪ್ರಿಯವಾಗಿದೆ.  ಇವರ ಆಡಳಿತದಲ್ಲಿ ಅನೇಕ ಕಷ್ಟಗಳು ಬಂದರೂ ಮೈಸೂರು ರಾಜ್ಯವನ್ನು, ಈಗಿನ ಕೊಡಗು ಪ್ರದೇಶದವರೆಗೂ ವಿಸ್ತರಿಸಿದರು. ಟಂಕಸಾಲೆಯನ್ನು ಸ್ಥಾಪಿಸಿ ತಮ್ಮ ಹೆಸರಿನ ನಾಣ್ಯಗಳನ್ನು ತಂದರು. ಇವರ ಆಡಳಿತದಲ್ಲಿ ರಚಿತವಾದ ಗ್ರಂಥಗಳು, ಚಕ್ರಬಡ್ಡಿ, ಚದರ ಮತ್ತು ಸರಪಣಿ ಅಳತೆ ಮತ್ತು ಮಾರ್ಕಂಡೇಯ ರಾಮಾಯಣ ಮುಂತಾದವು. ಇವರು ನಲವತೈದನೇ ವರ್ಷದಲ್ಲಿ (೧೬೫೯) ನಿಧನರಾದರು. 




ಇವರ ನಂತರ ದೇವರಾಜ ಒಡೆಯರು, ಚಾಮುಂಡಿಬೆಟ್ಟಕ್ಕೆ ಸಾವಿರ ಮೆಟ್ಟಲು ಮತ್ತು ಮಧ್ಯದಲ್ಲಿ ಸುಂದರವಾದ ವೃಷಭದ ಶಿಲಾಮೂರ್ತಿ ನಿರ್ಮಾಣ ಇವರದ್ದೇ. ೧೬೭೧ ರಲ್ಲಿ ಐರೋಪ್ಯ ಮತ್ತು ಮೈಸೂರು ರಾಜ್ಯದ ವಾಣಿಜ್ಯ ಸಂಪರ್ಕ ನಡೆಯಿತೆಂದು ಚರಿತ್ರೆಕಾರ ಆಮ್ಲೆ ಎಂಬಾತ ಹೇಳಿದ್ದಾನೆ. ೧೬೭೩ ರಲ್ಲಿ ಇವರು ನಿಧನರಾದರು. 
ಇವರ ನಂತರ ೨೮ ವರ್ಷದ ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬಂದು ಕೇವಲ ಐದು ದಿನಗಳಲ್ಲೇ ಮಧುರೆಯ ಚೊಕ್ಕನಾಥನ ಧಾಳಿಯನ್ನು ಎದುರಿಸಬೇಕಾಯಿತು , ನಂತರ ಇಕ್ಕೇರಿ ಮತ್ತು ಬಿಜಾಪುರ, ೧೬೭೭ ರಲ್ಲಿ ಮರಾಠದ ಪ್ರಬಲ ಶಿವಾಜಿಯನ್ನು ಎದುರಿಸಿ ವಿಜಯರಾದರು. ಇವರಿಗೆ ಅನೇಕ ಬಿರದುಗಳು ಬಂದು ಮೈಸೂರಿನ ಸಾರ್ವಭೌಮ ಪ್ರಭುಗಳೆಂದು ಪ್ರಸಿದ್ಧವಾದರು. ೧೬೮೭ರಲ್ಲಿ ಮೊಗಲ್ ಚಕ್ರವರ್ತಿಯ ಪ್ರತಿನಿಧಿ ಖಾಸಿಂಖಾನ್ ನಿಂದ ಬೆಂಗಳೂರನ್ನು ಮೂರು ಲಕ್ಷ ರೂಪಾಯಿಗಳಿಗೆ ಕ್ರಯಕ್ಕೆ ಪಡೆದರು. ಇವರ ಮಂತ್ರಿ ಸಂಪುಟ ಅನೇಕ ಸುಧಾರಣೆಗಳನ್ನು ಜಾರಿ ಮಾಡಿ ಕಂದಾಯ ವಸೂಲಿ ಮತ್ತು ಗ್ರಾಮಕಲ್ಯಾಣಕ್ಕಾಗಿ ಹದಿನೆಂಟು ಇಲಾಖೆಗಳನ್ನು ತೆರೆದರು, ಬೆಂಗಳೂರಿನಲ್ಲಿ ೧೨,೦೦೦ ನೇಯಿಗೆಯವರನ್ನು ತಂದು ಅವರು ತಯಾರಿಸಿದ್ದ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದುಇವರ ಕಾಲದಲ್ಲೇ. ಚಿಕ್ಕದೇವರಾಯ ಒಡೆಯರು ಮೂವತ್ತೆರಡು ವರ್ಷದ ಅಡಳಿಕೆಯ ನಂತರ ೧೭೦೪ರಲ್ಲಿ ನಿಧನರಾದರು.
ಮುಂದಿನ ೭೫ ವರ್ಷಗಳು ಒಡೆಯರ ಮನೆತದಲ್ಲಿ ಅನೇಕ ಏರು ಪೇರು ಗಳಾಗಿ ದಳವಾಯಿಗಳು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಈ ರಾಜ್ಯವನ್ನು ಆಳಿದರು. ೧೭೯೯ ರಲ್ಲಿ ಮೈಸೂರು ಮೂರನೇ ಯುದ್ಧದಲ್ಲಿ ಬ್ರಿಟಿಷ್ ಸೈನ್ಯ ಟಿಪ್ಪುಸುಲ್ತಾನ್ ಆಡಳಿತವನ್ನು ಕೊನೆ ಮಾಡಿ ಮೈಸೂರ್ ರಾಜ್ಯವನ್ನು ವಶಪಡಿಸಿಕೊಂಡರು. ನಂತರ ಆಗಿನ ರಾಜಮಾತೆ ಆಗಿದ್ದ ಮಹಾರಾಣಿ ಲಕ್ಷಿ ಅಮ್ಮಣ್ಣಿ ಮತ್ತು ಅರ್ಥರ್ ವೆಲ್ಲೆಸ್ಲಿ (ನಂತರ ಡ್ಯೂಕ್ ಆಫ್ ವೆಲ್ಲಿಂಗ್ಟನ್ ) ಜೊತೆ ಒಪ್ಪಂದ ಆಗಿ ಮೂರು ವರ್ಷದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟಕ್ಕೆ ತಂದರು. 
ದಿವಾನ್ ಪೂರ್ಣಯ್ಯನವರು ಇವರಿಗೆ ನೆರವಾಗಿ ರಾಜ್ಯದ ಅಡಿಳಿತಕ್ಕೆ ಮಾರ್ಗದರ್ಶಕರಾದರು. ಹತ್ತು ವರ್ಷಗಳ ನಂತರ ಮಹಾರಾಣಿ ಮತ್ತು ಪೂರ್ಣಯ್ಯನವರು ತೀರಿಕೊಂಡು ಮೈಸೂರು ಪ್ರದೇಶದಲ್ಲಿ ಅನೇಕ ಗಲಭೆಗಳು ನಡೆದು ಮೈಸೂರು ಸೈನ್ಯ ಬ್ರಿಟಿಷ್ ನೆರವು ಪಡೆದು ಈ ದಂಗೆಗಳನ್ನು ಅಡಗಿಸಿತು. ಗವರ್ನರ್ ಜನರಲ್ ವಿಲಿಯಂ ಬೆಂಟಿಂಗ್ ಮೈಸೂರು ರಾಜ್ಯವನ್ನು ಬ್ರಿಟಿಷ ನೇರ ಅಡಳಿತಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕೆಂದು ನಿರ್ಧರಿಸಿ ೧೮೩೧ ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಡಳಿತವನ್ನು ಕೊನೆ ಮಾಡಿದನು. ಹೀಗೆ ಬ್ರಿಟಿಷ್ ಅಧಿಕಾರಿಗಳು ೧೮೩೧-೧೮೮೧ ವರಗೆ ಮೈಸೂರು ರಾಜ್ಯವನ್ನು ಆಳಿದರು. ಈ ರಾಜರಿಗೆ ಮಕ್ಕಳಿರಲಿಲ್ಲವಾದ್ದರಿಂದ ಹತ್ತಿರದ ಸಬಂಧಿಕ ಚಾಮರಾಜ ಒಡೆಯರ್ ರವರನ್ನು ದತ್ತು ಪುತ್ರನಾಗಿ ಆರಿಸಿಕೊಂಡು, ಬ್ರಿಟಿಷ್ ಒಪ್ಪಂದದ  ನ೦ತರ ಒಡೆಯರ್ ರಾಜ ವಂಶದವರು ಪುನಃ ಪಟ್ಟಕ್ಕೆ ಬಂದರು. ಆದರೆ ೧೮೯೪ ನಲ್ಲಿ ಇವರಿಗೆ ಕೇವಲ ೩೨ ವರ್ಷದ ವಯಸ್ಸಿನಲ್ಲಿ ಕಲಕತ್ತೆಗೆ ಭೇಟಿ ಇತ್ತಾಗ ರೋಗಕ್ಕೆ ತುತ್ತಾಗಿ ತೀರಿಕೊಂಡರು. ಇವರ ಮಗ ನಾಲ್ವಡಿಕೃಷ್ಣರಾಜಒಡೆಯರ್ ೧೯೦೨ ರಲ್ಲಿ ತನ್ನ ೧೮ ವರ್ಷ ತುಂಬಿದಾಗ ಪಟ್ಟಕ್ಕೆ ಬಂದರು. 


ಮೈಸೂರು ದೇಶ ಆ ಕಾಲದಲ್ಲಿ ಪ್ರಾಮುಖ್ಯತೆ ಪಡೆಯುವುದಕ್ಕೆ ಈ ನಾಲ್ವಡಿ ಮಹಾರಾಜರು ಕಾರಣ. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್, ಮೈಸೂರ್ ಬ್ಯಾಂಕ್, ಸಹಕಾರಿ ಸಂಘಗಳು ಮತ್ತು ಅನೇಕ ಕೈಗಾರಿಕೆಯ ಸಂಸ್ಥೆಗಳು ಇವರ ಪ್ರೇರಣೆಯಿಂದಲೇ ಪ್ರಾರಂಭವಾಗಿದ್ದು. ೧೯೪೦ ಆಗಸ್ಟ್ ನಲ್ಲಿ ಇವರು ನಿಧನರಾದರು. ಅವರ ತಮ್ಮನ ಮಗ ಜಯಚಾಮರಾಜ ಒಡೆಯರ್ ೨೩ ನೇ ವಯಸ್ಸಿನಲ್ಲಿ  ಮೈಸೂರು ರಾಜ್ಯದ ೨೫ನೇ ರಾಜರಾಗಿ ಸಿಂಹಾಸನಕ್ಕೆ  (೩/೮/೧೯೪೦) ಏರಿದರು .  ಭಾರತದ ಸ್ವತಂತ್ರ ಬಂದಮೇಲೆ ೨೬/೧/೧೯೫೦ ರಲ್ಲಿ ರಾಜಪ್ರಮುಖರಾದರು. ಜಯಚಾಮರಾಜಒಡೆಯರ್ ಬಹಳ ದೊಡ್ಡ ಮೇಧಾವಿ ಮತ್ತು ಸಂಗೀತ ಪ್ರೇಮಿಯೂ  ಆಗಿದ್ದರು. ಇವರು ಲಂಡನ್ Phil-harmonica Concert Societyಯ ಮೊದಲನೇ ಅಧ್ಯಕ್ಷರು ಮತ್ತು Fellow of Trinity College of Music  ಆಗಿದ್ದರುಇವರು ೨೩/೦೯/೧೯೭೪ ನಲ್ಲಿ ನಿಧನರಾದರು.  ಸುಮಾರು ೧೩೯೯ ನಲ್ಲಿ ಶುರುವಾದ ಮೈಸೂರು ರಾಜ್ಯ ಮನೆತನ ಇಲ್ಲಿ ಕೊನೆಯಾಯಿತು.


ಮೈಸೂರು ಅರಸರ ಕುಟಂಬಕ್ಕೆ ಅಲುಮೇಲಮ್ಮನ ಶಾಪ
ಇದು ೧೬೧೨ ನಲ್ಲಿ ನಡೆದ ಸ್ವಾರಸ್ಯಕರವಾದ ಒ೦ದು ಪ್ರಸಂಗ. ದೊರೆತ ಮಾಹಿತಿಗಳ ಪ್ರಕಾರ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದ ತಿರುಮಲ ( ಶ್ರೀರಂಗರಾಯ ಅಂತಲೂ ಅವನ ಹೆಸರು ) ಅವರಿಗೆ ಬೆನ್ನುಪಣಿ ಅನ್ನುವ ರೋಗ ಬಂದು ಅದರ ನಿವಾರಣೆಗೆ ಅವನ ಎರಡನೇ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಾನೆ. ಇದನ್ನು ಕೇಳಿ ಮೈಸೂರಿನ ಅರಸ ರಾಜ ಒಡೆಯರ್ ಇದೇ ಸೂಕ್ತ ಸಮಯವೆಂದು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳುತ್ತಾರೆ. ಇದನ್ನು ಕೇಳಿಯೋ ಅಥವಾ ರೋಗದಿಂದಲೋ ತಿರುಮಲರಾಜ ತಲಕಾಡಿನಲ್ಲಿ ತೀರಿಕೊಳ್ಳುತ್ತಾನೆ. ನ೦ತರ ಅಲುಮೇಲಮ್ಮ ಹತ್ತಿರದಲ್ಲೇ ಇರುವ ಮಾಲಂಗಿ ಗ್ರಾಮದಲ್ಲಿ ನೆಲಸುತ್ತಾಳೆ. ಅಮೂಲ್ಯವಾದ ವಜ್ರದ ಮೂಗುಬಟ್ಟು ಮತ್ತು ಅನೇಕ ಒಡೆವೆಗಳು ಈಕೆಯ ಹತ್ತಿರ ಇರುವ ವಿಚಾರ ರಾಜ ಒಡೆಯರಿಗೆ ತಿಳಿದು ಅವುಗಳನ್ನು ವಶಪಡಿಸಿಕೊಳ್ಳಲು ಕೆಲವು ಸೈನಿಕರನ್ನು ಕಳಿಸುತ್ತಾರೆ. ಅಲುಮೇಲಮ್ಮ ತನ್ನ ಒಡೆವೆಗಳ ಜೊತೆ ಮನೆಯಿಂದ ತಪ್ಪಿಸಿಕೊಂಡು ಕಾವೇರಿ ನದಿಯಲ್ಲಿ ಬೀಳುತ್ತಾಳೆ ಮತ್ತು ಬೀಳುವ ಮುಂಚೆ ಕೋಪದಿಂದ “ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಪಿಸುತ್ತಾಳೆ. ಈ ಮಾತುಗಳನ್ನು ಅಟ್ಟಿಸಿಕೊಂಡು ಬಂದ ಸೈನಿಕರು ಕೇಳಿ ರಾಜ ಒಡೆಯರಿಗೆ ತಿಳಿಸಿದಾಗ ಅವನಿಗೆ ತನ್ನ ದುರಾಸೆಯೇ ಇದಕ್ಕೆ ಕಾರಣ ಎಂದು ಅರಿವಾಗಿ,ಅರಮನೆಯ ಪುರೋಹಿತರ ಸಲಹೆಯ ಮೇಲೆ ಅಲುಮೇಲಮ್ಮನ ವಿಗ್ರಹವನ್ನು ಅರಮನೆಯ ಗುಡಿಯಲ್ಲಿ ಪ್ರತಿಷ್ಠೆ ಮಾಡಿದನು. ಮೈಸೂರು ರಾಜವಂಶದವರು  ಇಂದಿಗೂ ನವರಾತ್ರಿ ಹಬ್ಬದ ಪ್ರಾರಂಭ ಈ ಪೂಜೆಯಿಂದಲೇ ಪ್ರಾರಂಭಿಸುವುದು.


          ಮೈಸೂರು ಅರಸರ ಇತಿಹಾಸವನ್ನು ಗಮನಿಸಿದರೆ ರಾಜರ ದತ್ತು ಪಡೆದ ಮಗನಿಗೆ ಮಕ್ಕಳಾಗಿವೆ ಆದರೆ ಆತನಿಗೆ ಹುಟ್ಟುವ ಮಗನಿಗೆ ಮಕ್ಕಳಾಗದಿರುವುದನ್ನು ಕಾಣಬಹುದು. ಇತ್ತೀಚಿನ ಉದಾಹರಣೆಗೆ ಕೊನೆಯ ಮಹಾರಾಜರು ದತ್ತು ಪುತ್ರ ಜಯಚಾಮರಾಜ ಒಡೆಯರ್ ಗೆ ಶ್ರೀಕಂಠದತ್ತ ಜನಿಸಿದರೂ ಇವರಿಗೆ ಮಕ್ಕಳಿರಲಿಲ್ಲ. ಇವರ ದತ್ತು ಈಗಿನ ಯದುವೀರ್ ಒಡೆಯರ್ ಅವರಿಗೆ ಈಗ ಪುತ್ರ ಸಂತಾನವಾಗಿದೆ. ಕೊನೆಯದಾಗಿ ಈ ರಾಜವಂಶದ ೫೦೦ ವರ್ಷದ ಚರಿತ್ರೆ ಎಲ್ಲ ಕನ್ನಡಿಗರಿಗೂ ಹೆಮ್ಮೆ ತರುವ ವಿಚಾರ. ಈ ರಾಜ್ಯದ ಅಭಿವೃದ್ಧಿಗೆ ಈ ವಂಶವದವರೇ ಕಾರಣ ಎಂದೂ ಹೇಳಬಹುದು.

Comments

  1. ತುಂಬಾ ಒಳ್ಳೆಯ ವಿವರಗಳಿವೆ. ಓದಿ ಸಂತೋಷವಾಯಿತು. ಲೇಖಕರಿಗೆ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  2. ಸ್ತುತ್ಯರ್ಹ ಕಾರ್ಯ, ಮೈಸೂರು ಚರಿತ್ರೆ ಈಗಿನ ತಲೆಮಾರಿನ ಜನಕ್ಕೆ ತಿಳಿದಿಲ್ಲ. ಧನ್ಯವಾದಗಳು.

    ReplyDelete
  3. Ramamurthy sir thanks for writing such an informative article. we should be thankful to the Mysore rulers such a wonderful contribution. thanks again for such a nice narration

    ReplyDelete
  4. ಲೇಖಕರೇ ಅರಸರ ಆಳ್ವಿಕೆ, ಕಾಲ ಘಟ್ಟ ಮತ್ತು ಆಗಿನ ಪರಿಸ್ಥಿತಿಗಳನ್ನೂ ವಿಚಾರವಾಗಿ ವರ್ಣಿಸಿದ್ದೀರಿ. ಅಲುಮೇಲಮ್ಮನ ಶಾಪಡಾ ವಿಷಯ ಬಹಳ ಜನರಿಗೆ ಅರಿಯದ ವಿಷಯ. ಸೂಕ್ತವಾದ ಭಾವಚಿತ್ರ ಮತ್ತು ಇಸವಿಗಳನ್ನೂ ತಿಳಿಸಿರುವುದು ಗಮನಾರ್ಹ. ಕರ್ನಾಟಕದ ಜನತೆ ಮನೆ ಮನೆಗಳಲ್ಲೂ ಅರಸರ ಭಾವಚಿತ್ರ ಇಟ್ಟು ನಮಿಸಬೇಕು ಅಷ್ಟು ಸೇವೆ ಅವರಿಂದಾಗಿದೆ ಎಂದರೆ ತಪ್ಪಿಲ್ಲ.

    ReplyDelete

Post a Comment