ದ್ವಾರ್ಕಿಯ ಸಂಗೀತ ಛೀಮಾಂಸೆ

ದ್ವಾರ್ಕಿಯ ಸಂಗೀತ ಛೀಮಾಂಸೆ
ಹಾಸ್ಯ ಲೇಖನ - ಅಣುಕು ರಾಮನಾಥ್ 



‘ಜನರು ದೈನಂದಿನ ಬದುಕಿನ ಒತ್ತಡದ ನಡುವೆಯೂ ಸಂಗೀತದತ್ತ ಒಲವನ್ನು ತೋರುತ್ತಿರುವುದು ಸಂತೋಷದ ವಿಷಯ ಅಂತ ಮಂತ್ರಿಗಳೊಬ್ಬರು ಹೇಳಿದರಂತೆ ದ್ವಾರ್ಕೀ’ ಎಂದೆ.
‘ಹೌದು. ಯಾರನ್ನ ಏನೇ ಕೇಳಿದ್ರೂ ಏನೋ ಒಂದು ಗುನುಗು. ಏನಾದ್ರೂ ಒಂದು ಅಪಸ್ವರ ಇದ್ದೇ ಇರತ್ತೆ. ಅಂದ್ಹಾಗೇ, ಅಪಸ್ವರ ಅಂದ್ರೆ ಏನು ಗೊತ್ತಾ?’
ಎಂದಿನಂತೆ ನನ್ನ ಮೊದ್ದು ಮುಖಮುದ್ರೆಯನ್ನೇ ಮುಂದು ಮಾಡಿದೆ. ‘ನಿನ್ನದು ನಾಟಿ ರಾಗದ ಮುಖ. ಎಂದೂ ಅದು ಫಾರಮ್‌ಗೆ ಬರೋದೇ ಇಲ್ಲ ಬಿಡು. ‘ಅಮ್ಮಸ್ವರ’ ಅಂದ್ರೆ ಕಾದಸೀಸದಂತೆ ಕಿವಿಯಿಂದ ಹಾದು ತಲೆಗೆ ಸೇರಿ ಆಲೋಚನಾಶಕ್ತಿ ಬಂದ್, ಸೇವಾಮನೋಭಾವ ಜಾಗೃತಿ ಆಗುವಂತೆ ಮಾಡುವ ಸ್ವರ. ಅಪ್ಪಸ್ವರ ಎಂದರೆ ಮೇಕೆಯ ‘ಮ್ಯಾ’ದಂತೆಯೇ ಕೊಂಬು ಕಳೆದುಕೊಂಡು ಗಂಡ ಆದ ಗಂಡು ಹೊರಡಿಸುವ ‘ಹೂಂ’ ಎಂಬ ಏಕಾಕ್ಷರ ಸ್ವರ’
‘ಅಪಸ್ವರದ ಬಗ್ಗೆ ಹೇಳೋ ಅಂದ್ರೆ ಅಪ್ಪಸ್ವರದ ಬಗ್ಗೆ ಹೇಳಿದೆಯಲ್ಲೋ... ಅಪ್ಪ ಪದದಲ್ಲಿ ಒತ್ತಿದೆ’
‘ನನಗೂ ಅದು ಗೊತ್ತಿದೆ. ಆದರೆ ಸಂಸಾರದಲ್ಲಿ ಒತ್ತು ಕೊಡುವವಳು ಹೆಣ್ಣು, ಒತ್ತು ಕಳೆದುಕೊಂಡವನು ಗಂಡು ಅಂತಾನೂ ಗೊತ್ತಿದೆ. ಇಂಗ್ಲಿಷ್‌ನಲ್ಲಿ ಹೆಣ್ಣನ್ನು ಮಿಸೆಸ್ ಮತ್ತು ಗಂಡನ್ನು ಮಿಸ್ಟರ್ ಎಂದು ಕರೆಯಕ್ಕೆ ಕಾರಣವೇ ಅದು’
ಮತ್ತೆ ಮೊದ್ದುಮುಖದ ಪ್ರದರ್ಶನ ಮುಂದುವರೆಸಿದೆ.
‘ಸ್ಟರ್ ಆಗುವುದು, ಎಂದರೆ ಮಿಸುಕಾಡುವುದನ್ನೂ ಮಿಸ್ ಮಾಡಿಕೊಂಡು ಬಿದ್ದಲ್ಲೇ ಬಿದ್ದಿರುವವನೇ ಮಿಸ್‌ಸ್ಟರ್ ಉರುಫ್ ಮಿಸ್ಟರ್. ಮಿಸುಕಾಡದವನನ್ನು ಕಾಡಿ, ತನ್ನ ಮಾತುಗಳಿಗೆ ಎಸ್ ಎನ್ನುವಂತೆ ಪಳಗಿಸುವ ಮಿಸ್ಸೇ ಮಿಸೆಸ್ಸು’
‘ಮಿನಿಸ್ಟರ್ ಎಂದರೆ?’
‘ಸ್ಟರ್ ಎಂದರೆ ಗೊಂದಲ ಎಂದೂ ಅರ್ಥವಿದೆಯಲ್ಲ. ಮಿನಿ ಉರುಫ್ ಸಣ್ಣ ಗೊಂದಲವನ್ನು ಉಂಟುಮಾಡುವವನೇ ಮಿನಿಸ್ಟರ್. ಒತ್ತಡದ ಮಧ್ಯೆಯೂ ಸಂಗೀತದತ್ತ ಜನರ ಒಲವಿದೆ ಅಂತ್ಹೇಳಿ ಆ ಮಿನಿಸ್ಟರ್ ನನ್ನ ತಲೆಯಲ್ಲೊಂದು ಮಿನಿ ಸ್ಟರ್ ಆರಂಭಿಸಿದ’ ನುಡಿದ ದ್ವರ‍್ಕೀ
‘ಅದೆಂತಹ ಗೊಂದಲವೋ?’
‘ಯಾರು ಯಾರಿಗೆ ಯಾವ ಯಾವ ರಾಗ ಹೊಂದತ್ತೆ ಅನ್ನೋ ಆಲೋಚನೆಯನ್ನ ಆ ಹೇಳಿಕೆ ಬಡಿದೆಬ್ಬಿಸಿದೆ. ವಾತಾಪಿ ಗಣಪತಿಂ ಭಜೆ ಹಾಡು ಯಾವ ರಾಗದ್ದು ಗೊತ್ತಾ?’
‘ಹಂಸಧ್ವನಿ’

ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೆ ಹಂ ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೆ
ದಾಸ ನಾ ಸೋಷ್ಯಲ್ ಮೀಡ್ಯಾಗಳಿಗೆ... ದಾಸನಾ...
ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೇ....
ಟ್ವೀಟಾದಿ ಚ್ಯಾಟ್ಸ್ ಸಮಯದ ಹರಣಂ ವೂಟು ಇನ್ಸ್ಟಾಗ್ರಾಂ ಪ್ರಚಂಡ ಮಥನಂ
ಪೋಸ್ಟು ವಾಚನಂ ವಿಡಿಯೋ ದರ್ಶನಂ ಲೈಕು ಒತ್ತುವೆಂ ಪೋಕು ಮಾಡುವೆಂ
ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೆ
ಪುರಾ ತುಂಬ ಸುತ್ತುವೆಂ ಪ್ರತಿದಿನಂ ಇರ‍್ರುಫೋನ್ ಕರ್ಣದೊಳ್ ಗಿಡುಕುತಲಿಂ
ಕಿರೋ ಕರ‍್ಲೊ ಪ್ರಮುಖಾದಿ ಆರ್‌ಜೇ ಸ್ತುತಂ ಮ್ಯೂಸಿಕ್ ಫ್ಯಾನು ಆಗಿರ್ಪೆ ನಾಂ
ಪ್ರಚೋದನಾ ಸತ್ವ ಫಿಲ್ಮ್ ಆ್ಯಪ್‌ಗಳಂ ಡೌನ್‌ಲೋಡ್ ಮಾಡಿ ನೋಡುತಿರ್ಪೆಂ
ನಿರಂತರಂ ನೆಟ್ಟು ಬ್ಲಾಗು ನೋಟಂ ನಿಜ ಫ್ಯಾಮಿಲಿಗೆ ನಾ ದಂಡಪಿಂಡಂ
ನೆಟ್ವರ್ಕಿನ ಪಾಶ ಪ್ರಖರಂ ತೀವ್ರಂ ಸೆಳೆತ ಬೆಳೆವುದು ಭೂತಾಕಾರಂ
ಪಾರಾಗಕ್ಕಿರುವುದು ಒಂದೇ ಸೂತ್ರಂ ಸೆಲ್‌ಫೋನ್ ದೂರ ಇಡುವುದೆ ಕ್ಷೇಮಂ
ವ್ಯಾಟ್ಸ್ಯಾಪ್ಪು ಟ್ವಿಟರ್ ಎಫ್‌ಬೀಂ ಭಜೇ....

ಇದು ಯಾವ ರಾಗದ್ದು?’
‘ಇದೂ ಅದೇ ರಾಗ ಅಲ್ವಾ?’
‘ಪರಿಣಾಮದ ಮೇಲೆ ರಾಗ ತೀರ್ಮಾನ ಮಾಡಬೇಕು. ಮಳೆ ಬರಿಸಿದರೆ ಮೇಘಮಲ್ಹಾರ, ದೀಪ ಹೊತ್ತಿಸಿದರೆ ದೀಪಕ ರಾಗ. ಮನಕ್ಕೆ ಮುದ ನೀಡಿದರೆ ಹಂಸಧ್ವನಿ. ಸಮಾಜಕ್ಕೇ ಕೋಟಲೆ ಕೊಟ್ಟರೆ ಹಿಂಸೆಧ್ವನಿ. ಈ ಸೆಲ್‌ಫೋನ್ ಹಾಡಿನದು ಹಿಂಸೆಧ್ವನಿ ರಾಗ. ಒಂದೊಂದು ಕಾಲಕ್ಕೆ ಒಂದೊಂದು ರಾಗ ಮುಖ್ಯವಾಗಿರತ್ತೆ’
‘ನಾನು ಅಂಜಲೀಬದ್ಧನಾಗಿದೇನೆ. ಅದಾವ ರಾಗ ಅದಾವ ಸಮಯಕ್ಕೆಂದು ಪೇಳ್ ದ್ವರ‍್ಕೀ... ನೀನೇ ನನಗೆ ರಾಗಾಲಯದ ದ್ವಾರದ ಕೀ’ ಎಂದೆ.
‘ಮೊದಲಿಗೆ ಪುರುಷರ ವಿಷಯವನ್ನೇ ತೆಗೆದುಕೊಳ್ಳೋಣ. ಮೊದಮೊದಲಿಗೆ ಇವರಿಗೆ ‘ಚಕ್ರವಾಕ’ ಅಥವ ಅದರ ಹಿಂದೂಸ್ತಾನಿ ಕಸಿನ್ ಆದ ‘ಆಹಿರ್ಭೈರವಿ’ ರಾಗ ಹೊಂದುತ್ತದೆ. ಚಕ್ರವನ್ನು ಹಿಡಿದು ಅರ್ಥಾರ್ ಡ್ರೈವ್ ಮಾಡುತ್ತಲೇ ವಾಕ್ಕಿನಲ್ಲೂ ತೊಡಗುವ ಕಾರಣದಿಂದ ಚಕ್ರವಾಕ ಇವರಿಗೆ ಹೊಂದುವುದಲ್ಲದೆ ಆಹಿರ್ಭೈರವಿಯ ‘ಪಿಬರೇ ರಾಮರಸಂ’ ಹಾಡನ್ನು ಗುನುಗುನಿಸುತ್ತಲೇ ರಾಮರಾಮಾ ಎನ್ನುವಂತಹ ರಸಗಳನ್ನೂ ಸೇವಿಸುವುದೂ ಮತ್ತೊಂದು ಕಾರಣವಾಗಿದೆ. ಕ್ರಮೇಣ ಗೂಳಿಯಂತೆ ನುಗ್ಗುವ ಇವರಿಗೆ ರಿಷಭಪ್ರಿಯ ರಾಗವೂ, ರೋಡ್ ರೇಜ್ ಕಾರಣದಿಂದ ಕತ್ತೆಯಂತೆ ಅರಚುತ್ತಾ ಜಗಳವಾಡುವುದರಿಂದ ಖರಹರಪ್ರಿಯ ರಾಗವೂ, ಚೆಲುವೆಯೊಬ್ಬಳು ರಸ್ತೆಯ ಆ ತುದಿಯಿಂದ ಈ ತುದಿಯವರೆಗೆ ಹಾದುಹೋಗುವವರೆಗೆ ಅವಳತ್ತಲೇ ಮುಖ ಮಾಡಿ ಕೂಡುವ ಚಾಳಿ ಇರುವುದರಿಂದ ಸೂರ್ಯಕಾಂತ ರಾಗವೂ ಹೊಂದುತ್ತದೆ. ಕೆಲವು ಹುಡುಗರ ಮುಖ ಆಂಜನೇಯನನ್ನು ಹೋಲುತ್ತಿದ್ದು, ನೋಡಿದವರಿಗೆ ‘ಹನುಮತೋಡಿ’ ರಾಗವು ನೆನಪಾಗುವುದಾದರೂ, ಕೆಲವು ಹುಡುಗಿಯರಿಗೆ ‘ವನಸ್ಪತಿ’ ರಾಗಕ್ಕೆ ಹೊಂದುವ ಉರುಫ್ ಒರಟು ಸ್ವಭಾವದ ಪತಿಯೇ ಇಷ್ಟವಾಗುವುದರಿಂದ, ಅಂತಹ ಹುಡುಗಿಯರಿಂದ ಆಕರ್ಷಿತರಾದ ಹುಡುಗರು ಅವರನ್ನು ಮೆಚ್ಚಿಸುವ ಸಲುವಾಗಿ ಹಣ ಹೊಂದಿಸಲೆಂದು ‘ಸಾಲಗ’ ರಾಗಕ್ಕೆ ಮೊರೆಹೋಗಿ ಸಾಲಗಾರರಾಗುತ್ತಾರೆ. ಕ್ರಮೇಣ ‘ರೂಪವತಿ’, ‘ಮಾನವತಿ’, ‘ನೀತಿಮತಿ’ ರಾಗಗಳ ಲಯಕ್ಕೆ ಸಿಲುಕುತ್ತಾ ವಿವಾಹವಾಗಿ ಕದನಕುತೂಹಲದಲ್ಲಿ ಇವರ ರಾಗ ವಿಲೀನವಾಗುತ್ತದೆ’
‘ಗಂಡಿನ ರಾಗವಾಯ್ತು, ಹೆಣ್ಣಿನ ಅನುರಾಗವೇನು?’
‘ಸರಿಯಾಗಿ ಹೇಳಿದೆ. ಅಂದಿನಂದಿನ ಇಚ್ಛೆಗೆ ಅನುಸಾರವಾಗಿ ರಾಗವನ್ನು ಅನುಸರಿಸುವುದರಿಂದ ಇವರದನ್ನು ಅನುರಾಗ ಅನ್ನಬಹುದು. ಕೇವಲ ಚಿನ್ನದ ಆಭರಣಗಳನ್ನೇ ಬಯಸುವ ಕಾಲದಲ್ಲಿ ಇವರದು ‘ಕನಕಾಂಗಿ’ ರಾಗ. ಕ್ರಮೇಣ ಹರಳುಗಳನ್ನು ಹುದುಗಿಸಿಕೊಳ್ಳುವ ಕಾರಣದಿಂದ ‘ರತ್ನಾಂಗಿ’ ರಾಗ ಹಿಡಿಯುವ ಇವರು ಅವೆಲ್ಲಕ್ಕೂ ಅಪ್ಲಿಕೇಶನ್ ಹಾಕಿದಾಗ ‘ಕೋಕಿಲಪ್ರಿಯ’ ರಾಗವನ್ನು ಹಿಡಿಯುತ್ತಾರೆ. ಇದೇ ಸಮಯದಲ್ಲಿ ‘ಸರಸಾಂಗಿ’ ಮತ್ತು ‘ಕೀರವಾಣಿ’ ರಾಗಗಳ ಪ್ರಯೋಗವೂ ಆಗುತ್ತದೆ’
‘ಪತಿಯೇನಾದರೂ/ಬಾಯ್‌ಫ್ರೆಂಡೇನಾದರೂ ಇವರ ಇಚ್ಛೆಗೆ ವಿರೋಧ ವ್ಯಕ್ತಪಡಿಸಿದರೆ?’
‘ಶ್ಯಾಮಲವರ್ಣದ ಲಾಂಗ್ ಆಗಿರುವ ರೆಪ್ಪೆಗಳನ್ನು ಪಟಪಟನೆ ಬಡಿದು ‘ಶ್ಯಾಮಲಾಂಗಿ’ ರಾಗದಲ್ಲಿ ಆಲಾಪ ತೆಗೆದು ‘ನಾಗಾನಂದಿನಿ’ ರಾಗದಲ್ಲಿ ಫೂತ್ಕರಿಸಿ, ‘ಸಿಂಹೇAದ್ರಮಧ್ಯಮ’ ರಾಗಕ್ಕೆ ತಕ್ಕಂತಹ ಪೋಸ್ ಕೊಡತ್ತಾ ನಿಲ್ಲುತ್ತಾರೆ. ಕೂಡಲೆ ಪತಿ/ನಲ್ಲನು ‘ಚಲನಾಟ’ ರಾಗದಲ್ಲಿ ಆರಂಭಿಸಿ, ‘hurry, calm ಹೋ ಜೀ’ ರಾಗದ ಆಲಾಪ ತೆಗೆದು ‘ಶೂಲಿನಿ’ ರಾಗದ ಉಪಸಂಹಾರ ಮಾಡುತ್ತಾನೆ’
‘ವ್ಯಕ್ತಿವಿಶೇಷವೇನೋ ಸರಿ; ಕಾಲವಿಶೇಷ?’
‘ಆಗಿನ ಸ್ತ್ರೀಯರದು ‘ಗಾಂಗೇಯಭೂಷಣಿ’ ರಾಗ. ಗಾಂಗೇಯನಾದ ಭೀಷ್ಮನ ಕೇಶರಾಶಿಯಂತೆಯೇ ಹುಲುಸಾದ ಕೇಶರಾಶಿ ಉಳ್ಳವರು. ಈಗಿನ ಸ್ತ್ರೀಯರು ಹುಲು ಕೇಶರಾಶಿಯವರು. ಆದ್ದರಿಂದ ನಾಲ್ಕಿಂಚಿನ ಕೇಶಕ್ಕೇ ಸೀಮಿತರಾದ ಇವರದು ‘ಚಾರುಕೇಶಿ’ ರಾಗ. ಅಂದಿನ ನೃತ್ಯಗಾತಿಯರದು ‘ಶಿವರಂಜಿನಿ’ ರಾಗ. ಈಗ ಮೈಯೆಲ್ಲಾ ಅದುರಿಸಿ ‘shiver’ ಆಗುತ್ತಾ ಅಂಜಿಸುವAತಹ ಶಿರ‍್ರಂಜಿನಿ ರಾಗ’
‘ಗಂಡು ಹೆಣ್ಣಲ್ಲದೆ ಸಾಮಾಜಿಕ ನೋಟದಲ್ಲಿ ನೋಡಿದಾಗ?’
‘ನಾಟಿ ರಾಗ ಎರಡು ಗುಂಪಿಗೆ ಹೊಂದುತ್ತದೆ. ಸಾವಯವ ಬೆಲೆ ಬೆಳೆಯುವ ಕೃಷಿಕರ ‘ನಾಟಿ’ ರಾಗ; ತುಂಟಾಟವೇ ಮೈವೆತ್ತಂತಹ ಹದಿಹರೆಯದವರ ‘naughty’ ರಾಗ. ಕಾರ್ಪೊರೇಷನ್, ಪಾಲಿಕೆ, ಬಿಎಸ್ಸೆನ್ನೆಲ್, ವಿದ್ಯುತ್ ಕಂಪನಿ, ಮುಂತಾದವರು ಯಾವಾಗಲೂ ರಸ್ತೆ ಅಗೆಯುವದನ್ನೇ ಇಷ್ಟ ಪಡುವುದರಿಂದ ಅವರದು ‘ತೋಡಿ’ ರಾಗ. ಆಟೋ, ವೋಲಾಗಳವರು ಒಂದೇ ಸಮಯದಲ್ಲಿ ಹಲವಾರು ದಿಕ್ಕುಗಳಿಗೆ ಸಂಚರಿಸುವುದದ ಅವರದು ‘ಷಡ್ವಿದಮಾರ್ಗಿಣಿ’ ರಾಗ. ನಗರಗಳಲ್ಲಿ ಹವಾಮಾನ ಗಬ್ಬೆದ್ದು ಮಾಲಿನ್ಯಭರಿತವಾಗಿ ‘ಸರ್ವಂ ಮಲಿನಮಯಂ ಜಗತ್’ ಆಗಿರುವುದರಿಂದ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಚಲಿಸುವರಿಗೆ ‘ನಾಸಿಕಭೂಷಣಿ’ ರಾಗ. ಸದನದಲ್ಲಿ ಕಚ್ಚಾಡುವ ಶಾಸಕರಿಗೆ ‘ಸದನಕುತೂಹಲ’ ರಾಗ, ಜೋರಾಗಿ ಹಾರ್ನಿಸುತ್ತಾ ಅಡ್ಡಾದಿಡ್ಡಿ ಸಾಗುವ ಶೂರರಿಗೆ ‘ಧೀರಶಂಖಾಭರಣ’ ರಾಗ; ಸೀರಿಯಲ್‌ಗಳ ದಾಸರಾಗಿ ಗೋಳಳುವಿನ ಮಳೆ ಸುರಿಸುವವರಿಗೆ ‘ವರುಣಪ್ರಿಯ’ ರಾಗ’
‘ನಿನಗಿಷ್ಟವಾದವು ಯಾವುವು ದ್ವಾರ್ಕಿ?’
‘ರಾಗ ಸರಾಗ, ತಾಳ ಬೇತಾಳ’ ಎನ್ನುತ್ತಾ ಯಾವುದೋ ಆಲಾಪ ಆರಂಭಿಸಿದ ದ್ವಾರ್ಕಿ.
ಕಿವಿತಮಟೆಯ ರಕ್ಷಣೆಯೇ ಸಲುವಾಗಿ ನಾನು ‘ಗಮನಶ್ರಮ’ ರಾಗವನ್ನು ಆಶ್ರಯಿಸಿದೆ. 

Comments

  1. ಸಂಗೀತ ಕ್ಷೇತ್ರದಲ್ಲಿ ಎಷ್ಟು ವಿಶಾಲವಾಗಿ ಬಾಯಾಡಿಸಿದ್ದೀರಿ.
    ಎಲ್ಲೂ, ಎಂದೂ ಕೇಳರಿಯದ ನಿಮ್ಮ ಸಂಗೀತ ಜ್ಞಾನ ಕಂಡು, ಇಂದೇ ನಿಮ್ಮ ಶಿಷ್ಯನಾಗಬೇಕೆಂದು ತೀರ್ಮಾನಿಸಿದ್ದೇನೆ, ದಯಮಾಡಿ ಸ್ವೀಕರಿಸಿ ಗುರುದೇವ.

    ReplyDelete
    Replies
    1. ಪಿಟೀಲು ಕುಯ್ಯುವ ಸರ್ವ ಶಿಷ್ಯರಿಗೂ ಸ್ವಾಗತ. ಮೊದಲ ದಿನವೇ ಸಾ... passಆ? ಎಂದು ಕೇಳದಿರಿ.

      Delete
  2. Kannada padagala jote ata Chennagide!! Kriyasheelate eddu kanutte.. Abhinandanegalu!

    ReplyDelete
    Replies
    1. That is both my strength and weakness madam. Thank you for your kind comments.

      Delete
  3. ನಿರಂತರಂ ನೆಟ್ಟು ಬ್ಲಾಗು ನೋಟಂ ನಿಜ ಫ್ಯಾಮಿಲಿಗೆ ನಾ ದಂಡಪಿಂಡಂ Only writers like you can imagine like this. ಅಬ್ಬಬ್ಬಬ್ಬ ಅದೇನ್ ಸಂಗೀತ ಜ್ಞಾನ ಸಾರ್

    ReplyDelete
    Replies
    1. ಹಾಸ್ಯವನ್ನು ಅಸ್ತ್ರವಾಗಿಸಿಕೊಂಡರೆ ನಮ್ಮ ಅಜ್ಞಾನವನ್ನೂ ಮರೆಮಾಚಿ ವಿದ್ವಾಂಸರಂತೆ ಕಾಣಬಹುದು ಎನ್ನಲು ಇದೇ ಸಾಕ್ಷಿ ನಾಣಿ.

      Delete
  4. ದಿವ್ಯಮಣಿಗಳಂತೆ ನೀತಿಮತಿಗಳಾಗಿ ರಸಿಕಪ್ರಿಯರನ್ನು ರಂಜಿಸುವ ನಿಮ್ಮ ಕೃತಿಗಳಿಗೆ ತಕ್ಕ ಕಾಮೆಂಟ್ ಮಾಡುವಷ್ಟಾದರೂ ಭಾಷಾ ಸಾಮರ್ಥ್ಯ ಇಲ್ಲವಲ್ಲ ಎಂಬ ಕೊರತೆ ಯಾರಲ್ಲಿ ತೋಡಿಕೊಳ್ಳುವುದು?

    ReplyDelete

Post a Comment