ನಾವು ಭಾಷೆಗೆ ಏನು ಮಾಡಿದ್ದೀವಿ....


 “ನಾವು ಭಾಷೆಗೆ ಏನು ಮಾಡಿದ್ದೀವಿ ಎಂದು ಅನ್ನುವುದಕ್ಕಿಂತ, ಭಾಷೆಯಿಂದ ನಾವು ಏನನ್ನು ಪಡೆದುಕೊಂಡಿದ್ದೀವಿ” 
 ಲೇಖನ - ಬದರಿ ತ್ಯಾಮಗೊಂಡ್ಲು

ಎಳೆಮಗುವಿನ ಲೀಲೆಗಳು ದುಃಖಿತ ಮನಕ್ಕೂ ಸಂತಸ ತಂದುಕೊಡುವಂತೆ, ತಾಯ್ನುಡಿಯು ಪ್ರತಿಯೊಬ್ಬರ ಬದುಕಿನಲ್ಲೂ ಎಂತಹ ಸಮಯದಲ್ಲೂ ಹೃದಯಕ್ಕೆ ಪ್ರಫುಲ್ಲತೆಯನ್ನು ತಂದುಕೊಡುತ್ತದೆ. ಬೆಳಗಿನ ಸೂರ್ಯೋದಯವು ನಮ್ಮೊಳಗೆ ಇದ್ದಕ್ಕಿದ್ದಂತೆ ಪುಟಿದೇಳಿಸುವ ರೋಮಾಂಚನದಂತೆ ನಮ್ಮ ಕನ್ನಡ ನುಡಿಯನ್ನು ಓದಿದಾಗ, ಕೇಳಿಸಿಕೊಂಡಾಗ ಅಥವಾ ಸುಮ್ಮನೇ ನೆನೆಪಿಸಿಕೊಂಡಾಗ ಕೂಡ ಆದರೆ, ಅದು ಅಚ್ಚರಿಯಿಲ್ಲ. ಅದು ಸಹಜವಾಗಿ
ಮನುಜರೆಲ್ಲರೆಲ್ಲರಲ್ಲಿಯೂ ಚಿಲುಮೆಯಂತೆ ಹೊಮ್ಮಬೇಕಾದ ಭಾವನೆ.
ಈ ಭಾಷೆಯ ಸೆಳೆತೆ ಎಷ್ಟು ಗಟ್ಟಿ ಅಂದರೆ, ಬದುಕಿನ ಅನೇಕ ಘಟ್ಟ, ಸ್ಥಿತಿ, ಕಾಲಗಳಲ್ಲಿ ಎಲ್ಲವನ್ನೂ ಮೀರಿ ನಮ್ಮನ್ನು ಅಪ್ಪಿಕೊಂಡು ಬಿಡುತ್ತದೆ. ಅದಕ್ಕೆ ನಾವು ತೆರೆದುಕೊಂಡಿರಬೇಕಷ್ಟೇ. ಹೀಗಾಗಿಯೇ ಪ್ರಶ್ನೆ ಮೂಡಬೇಕಾದ್ದು “ನಾವು ಭಾಷೆಗೆ ಏನು ಮಾಡಿದ್ದೀವಿ ಎಂದು ಅನ್ನುವುದಕ್ಕಿಂತ, ಭಾಷೆಯಿಂದ ನಾವು ಏನನ್ನು ಪಡೆದುಕೊಂಡಿದ್ದೀವಿ” ಎನ್ನುವುದರ ಬಗ್ಗೆ. ಏಕೆಂದರೆ, ಭಾಷೆಯಿಂದ ನಾವು ಹೆಚ್ಚು ಹೆಚ್ಚು ಪಡೆದುಕೊಂಡಷ್ಟು, ನಮ್ಮ ಸೀಮಿತ ಜ್ಞಾನವು ವಿಸ್ತಾರಗೊಂಡು, ಸೃಜನ ಸಾಮರ್ಥ್ಯವು ಹೆಚ್ಚುತ್ತದೆ. ಹಾಗೆಂದು ನಮಗೆ ಪಂಪನ ವಿಕ್ರಮಾರ್ಜುನ ವಿಜಯವೋ, ಹರಿಹರ ರಾಘವಾಂಕರ ರಗಳೆ ಸಾಹಿತ್ಯವೋ ಅಥವಾ ವಚನ, ದಾಸ ಸಾಹಿತ್ಯದಿಂದ ಹಿಡಿದು ನವನವೀನ ನವೋದಯದ ಮುನ್ನುಡಿಗಳು ತಿಳಿದಿರಲೇ ಬೇಕು ಎಂದು ಹೇಳುತ್ತಿಲ್ಲ. ಇಂತಹ ಮಾಹಾ ಕೃತಿಗಳು ನಮ್ಮ ಕನ್ನಡದಲ್ಲಿ ಆಗಿವೆ ಎನ್ನುವ ಒಂದು ಸ್ಮರಣೆಯೇ ಸಾಕು, ನಮ್ಮನ್ನು ಭಾಷೆಯೊಂದಿಗೆ ಬೆಸೆದುಬಿಡುತ್ತದೆ. ಈ ಆತ್ಮೀಯ ಭಾವನೆಯೇ ನುಡಿಯ ಬಗೆಗಿನ ಸಂಬಂಧವನ್ನು ಹಸಿರಾಗಿಡುವುದು.

“ಕುಮಾರವ್ಯಾಸನು ಹಾಡಿದನೆಂದರೆ, ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು, ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು” – ಹೀಗೆಂದು ಕುವೆಂಪುರವರು ಹೇಳಿದ್ದಾರೆಂದು ಎಲ್ಲರಿಗೂ ಗೊತ್ತಿರಬಹುದು. ಇಲ್ಲಿ ಕವಿಯು ಕುಮಾರವ್ಯಾಸನ ಹಿರಿಮೆಯನ್ನು ಕಣ್ಣಿಗೆ ಕಟ್ಟಿದ ಹಾಗೆ ಪ್ರಸ್ತುತಪಡಿಸುತ್ತಿದ್ದಾರೆ. ಬಳಸುವ ವಿಶೇಷಣಗಳನ್ನೂ ಗಮನಿಸಿ. ಕಲಿಯುಗದಲ್ಲಿ ಶ್ರೀ ಕೃಷ್ಣನ ದ್ವಾಪರ ಯುಗ, ಮಹಾಭಾರತವೇ ಕಣ್ಣಿನ ಮುಂದೆ ಅಲ್ಲ ಕಣ್ಣಿನ ಒಳಗೆ ಕಾಣಿಸುತ್ತದೆ ಎನ್ನುತ್ತಾರೆ. ಮುಂದುವರಿದು ಮಯ್ಯಲ್ಲಿ ರೋಮಾಂಚನ ಹುಟ್ಟುತ್ತದೆ ಎನ್ನುವುದನ್ನು “ಮಿಂಚಿನ ಹೊಳೆಯೇ ತುಳುಕಾಡುವುದು” ಎಂದು ಬಣ್ಣಿಸುತ್ತಾರೆ. ಈ ಸಾಲುಗಳನ್ನು ಕುವೆಂಪು ನಮಗೆ ಕೊಟ್ಟು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ ನಿಜ. ಆದರೆ ಈ ಪುಳಕಿಸುವ ಸಾಲುಗಳನ್ನು ಕೊಡಲು, ಗದುಗಿನ ವೀರನಾರಯಣನ ಭಾರತದಿಂದ ಅವರು ಅದೆಷ್ಟು ಸಂಪತ್ತನ್ನು ಪಡೆದಿರಬೇಕು ಯೋಚಿಸಿ. ಹೀಗಾಗಿಯೇ ಸಾಹಿತ್ಯವು ನಮ್ಮಲ್ಲಿ ಪ್ರಚೋದನೆ ಉಂಟು ಮಾಡುವ ಒಂದು ಅಗ್ನಿಯೇ ಸರಿ. ಆ ದಿವ್ಯಾಗ್ನಿಯಿಂದ ಪಡೆಯುವ ಬೆಳಕಿಗೆ ಸಾಟಿಯೇ ಇಲ್ಲ.

ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯವನ್ನು ಭಕ್ತಿಗೀತೆಯ ಭಂಡಾರವಾಗಿ ನೋಡುವುದೇ ಹೆಚ್ಚು. ಹೀಗಾಗಿ ನಾಸ್ತಿಕರಿಗೆ ಇದು ಸಲ್ಲದು ಎಂದು ಚಿಂತಿಸಿದಿರಾದರೆ ಕಳೆದುಕೊಳ್ಳುವುದೇ ಜಾಸ್ತಿ. ಹೃದಯವನ್ನು ಸೂರೆಗೊಳ್ಳುವ ವರ್ಣನಾಯುಕ್ತವಾದ ಆ ರಚನೆಗಳಿಂದ ಭಾವ ಭಿನ್ನತೆಯನ್ನು ನಾವು ಪಡೆದುಕೊಳ್ಳಬಹುದು. ನವರಸ ಭಾವಗಳನ್ನು ಉಳ್ಳ ರಚನೆಗಳು, ಭಕ್ತಿಪೂರ್ವಕವಾದಂತಹ ರಚನೆಗಳು ಜೊತೆಗೆ ದೇವನನ್ನು ಬಯ್ಯುತ್ತಲ್ಲೇ ಒಲಿಸಿಕೊಳ್ಳುವ ನಿಂದಾಸ್ತುತಿಗಳು. ಒಂದೇ ಎರಡೇ. ಒಂದೊಂದೂ ವಿಶಿಷ್ಟ ಕೃತಿಗಳೇ ಸರಿ. ಹಾಗೆಯೇ, ನಾವು ಅಧುನಿಕ ಶಿಕ್ಷಣದಲ್ಲಿ ಪರಿಣತಿ ಹೊಂದಿದವರು ಎನ್ನುವ ಜಂಭ ನಮ್ಮ ಮೇಲೆ ಬಂದು ಬಿಟ್ಟು, ಹಳ್ಳಿಗಾಡಿನ ಭಾಷೆಯನ್ನು ಮರೆತರೆ, ಗ್ರಾಮ್ಯ ಭಾಷೆಯ ಸೊಗಡು ನಮಗೆ ತಿಳಿಯದಾಗುತ್ತದೆ. “ಬೆಟ್ ಹತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ” ಎಂದು ಎಷ್ಟು ಸರಳವಾಗಿ ತತ್ವಗಳನ್ನು ನಮ್ಮ ಆಡುನುಡಿಯಲ್ಲಿ ಬೆರೆಸಿದ್ದಾರೆ ಈ ನಾಮಾಂಕಿತವಿಲ್ಲದ ಅನಾಮಧೇಯರು. ಜನಪದ ಗಾಯಕರಾದ ನೀಲಗಾರರಿರಬಹುದು, ಗೀಗಿ ಪದ ಹಾಡುವ ಲಾವಾಣಿಕರಿರಬಹುದು, ಜನಪದವಾಗಿ ಹಾಡುತ್ತ ಬಂದಿರುವ ಶಿಶು ಗೀತೆಗಳ, ದಿನನಿತ್ಯದ ಕೆಲಸದ ನಡುವೆ ಹಾಡುವ ಪದ್ಯಗಳ ರಚನಕಾರರಿರಬಹುದು. ಆಹಾ! ಅದೆಷ್ಟು ಸೊಗಸು ಒಂದೊಂದರಲ್ಲೂ. ಈ ಎಲ್ಲಾ ರಚನಕಾರರೂ ನಿತ್ಯ ಸ್ಮರಣೀಯರೇ ಸರಿ. “ಆಡಿ ಬಾ ಎಲೆಕಂದ, ಅಂಗಾಲ ತೊಳದೇನು, ಅಂಗಾಲ ತೊಳೆದು, ತೆಂಗಿನ ಕಾಯ್ ಒಡೆದು ಎಳನೀರ ತಕ್ಕೊಂಡು, ಬಂಗಾರ ಪಾದಾವಾ ತೊಳೆದೇನೂ.” – ಹೀಗೆನ್ನುವಲ್ಲಿ ತನ್ನ ಕಂದನ ಪಾದ ಬಂಗಾರ ಎನ್ನುವ ಭಾವ ಮೂಡಿಸುತ್ತಲ್ಲ. ಎಷ್ಟು ದುಡ್ಡು ಕೊಟ್ಟು ಈ ಭಾವವನ್ನು ಖರೀದಿಸಬಹುದು. ಈ ಭಾವವನ್ನು ನಮ್ಮ ತಾಯ್ನುಡಿಯಲ್ಲಿ ಗುನುಗಿದಾಗಲೇ ಪಡೆಯುವಂತಹದ್ದು. ಹೀಗಾಗಿಯೇ ಭಾಷೆಯಿಂದ ನಾವು ಪಡೆದುಕೊಳ್ಳುವುದಕ್ಕೆ ಶುರುಮಾಡಿಕೊಂಡರೆ, ನಮ್ಮ ನಮ್ಮ ಸಾಮರ್ಥ್ಯದಲ್ಲಿ ಭಾಷಾ ನದಿಗೆ ನಮ್ಮ ಭಾವ ಬಿಂದುಗಳನ್ನು (ಸಾಹಿತ್ಯವನ್ನು) ವರ್ಷಿಸಿ, ನುಡಿಯೆಂಬ ಜೀವನದಿಗೆ ನಮ್ಮ ಅರ್ಪಣೆಯನ್ನು ಸಲ್ಲಿಸಬಹುದು.

ಭಾಷಾ ಪ್ರಾಂತ್ಯದಿಂದ ಹೊರಬಂದಿರುವ ಜನರನ್ನು ಒಮ್ಮೆ ಮಾತನಾಡಿಸಿ ಕೇಳಿದರೆ ಭಾಷೆಯ ಬಗೆಗಿನ ಹಂಬಲವು ಎಷ್ಟು ಆಪ್ಯಾಯನವಾಗಿರುತ್ತದೆ, ಆ ಸ್ಮರಣೆಯಲ್ಲೇ ಅದೆಂತಹ ಸುಖ ಪಡೆಯುತ್ತಾರೆ ಎಂದು ತಿಳಿಯುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಆಸ್ಟ್ರೇಲಿಯಾದ ಸಿಡ್ನಿ ನಗರಕ್ಕೆ ಬಂದ ಹೊಸತರಲ್ಲಿ ಎಲ್ಲೂ ಕಾಣದ ಕನ್ನಡದ ಅಕ್ಷರವನ್ನು ನಾನು ಮೊದಲು ನೋಡಿದ್ದು ಭಾರತೀಯ ವಸ್ತುಗಳು ಸಿಗುವ “ಇಂಡಿಯನ್ ಸ್ಟೋರ್ಸ್” ನಲ್ಲಿ. ಅಕ್ಕಿ ಚೀಲದ ಮೇಲೆ ಕನ್ನಡದಲ್ಲಿ ಮುದ್ದಾಗಿ ಬರೆದಿದ್ದ “ಸೋನಾ ಮಸೂರಿ ಅಕ್ಕಿ” ನೋಡಿದ ಆ ಕ್ಷಣ, ಬೆರಗು ಮಾಡಿದ ರೀತಿ ಇಂದೂ ಹಚ್ಚ ಹಸಿರು. ಆ ರೋಮಾಂಚಕ ಕ್ಷಣವು ಎಲ್ಲರೂ ಸಿಡ್ನಿಯಲ್ಲಿ ನೋಡಬಯಸುವ ಒಪೇರಾ ಹೌಸ್, ಹಾರ್ಬರ್ ಬ್ರಿಜ್ ನೋಡಿದಾಗಿನ ಹಿತಕ್ಕಿಂತ ಹೆಚ್ಚು ಎಂದು ಮಾತ್ರ ಹೇಳಬಲ್ಲೆ. ಹೀಗೆ ರೋಮಾಂಚನಗೊಳ್ಳುವುದು ಕನ್ನಡ ನನಗೆ ಕೊಟ್ಟಿರುವ ನಿಧಿಯೂ ಹೌದು.

Comments

  1. ಚೆನ್ನಾದ ಲೇಖನ. ಆದರೆ midflight ನಲ್ಲಿ ನಿಂತುಹೋದಂತಿದೆ. ಲಂಬಿಸಬಹುದಿತ್ತೇನೋ.... ಸಮಯ ಒದಗಿದರೆ ಮತ್ತಷ್ಟು ರಸಮಯ ಲಂಬನವಾಗಲಿ.

    ReplyDelete
  2. ಕನ್ನಡ ಭಾಷೆಯ ಸೆಳೆತದ ಬಗ್ಗೆ ಸೊಗಸಾದ ಕಾರಣ ಕುರುಹು ಕೊಟ್ಟಿದ್ದೀರಿ. ತಮ್ಮ ಲೇಖನ ಪುಟ್ಟದಾದರೂ ಘನವಾದ ವಿಷಯ ಎತ್ತಿ ಹಿಡಿದಿದೆ. ಎಲ್ಲರಲ್ಲೂ ಅದನ್ನು ತುಂಬುವ ಕೆಲಸ ಮಾಡಬೇಕಿದೆ.

    ಕಡೆಗೆ ಸೋನಾ ಮಸೂರಿ ಅಕ್ಕಿ ಚೀಲದ ಮೇಲಿನ ಅಕ್ಷರಗಳು ನನ್ನ ಚಿಕ್ಕಮಗಳೂರು ಕಾಫಿ ಚೀಲದ ಅನುಭವದ ನೆನೆಪು ಮಾಡಿತು.

    ReplyDelete
  3. Nice article about our language and reason to love it.

    ReplyDelete

Post a Comment