ಬತ್ತಿಯ ಬತ್ತದ ಕಥೆ

ಬತ್ತಿಯ ಬತ್ತದ ಕಥೆ
ಹಾಸ್ಯ ಲೇಖನ  - ಅಣುಕು ರಾಮನಾಥ್


ಹೊಸ್ತಿಲ ಮೇಲೆ ಕುಳಿತಿದ್ದೆ. ಪಕ್ಕದಲ್ಲಿ ನನ್ನ ಅಜ್ಜಿ. ನಮ್ಮೆದುರಿನ ಕಾಗದದ ಪೊಟ್ಟಣದಲ್ಲಿ ಒಂದಿಷ್ಟು ಹತ್ತಿ. ಅಜ್ಜಿ ಆ ರಾಶಿಯಿಂದ ಇಷ್ಟೇ ಹತ್ತಿಯನ್ನು ಕೈಗೆತ್ತಿಕೊಂಡು, ಹಿಂಭಾಗವನ್ನು ಗುಪ್ಪೆಯಾಗಿಸಿ, ಮುಂಭಾಗವನ್ನು ಚೂಪಾಗಿಸುತ್ತಾ ಸಾಗಿದಳು. ‘ಏನ್ಮಾಡ್ತಿದ್ದೀಯ ಅಜ್ಜಿ?’ ಎಂದೆ. ‘ಬತ್ತಿ’ ಎಂದಳು ಅಜ್ಜಿ.

ನನ್ನ ಜೀವನದಲ್ಲಿ ಬತ್ತಿ ಪ್ರವೇಶಿಸಿದ್ದು ಹೀಗೆ. ಬರುಬರುತ್ತಾ ಬತ್ತಿಯ ಇತಿಹಾಸ, ಪುರಾಣ, ಅಗಾಧತೆಗಳು ನನ್ನನ್ನು ಬೆರಗಾಗಿಸಿದವು. ಎಷ್ಟೇ ಮೊಗೆಮೊಗೆದು ಗುಣಗಾನ ಮಾಡಿದರೂ ಇನ್ನೂ ಅಷ್ಟೇ ಬತ್ತದ ಸೆಲೆಯುಳ್ಳದ್ದು ಈ ಬತ್ತಿ. ಮೂರು ಮಾತ್ರೆಗಳು ಅಥವಾ ಎರಡಕ್ಷರದ ಬತ್ತಿ ಬೆಳಕು ಹರಡುವ ವೈಶಿಷ್ಟ್ಯಗಳ ಪೈಕಿ ಹೆಣ್ಣು ಜಾತಿಯದು. ಪುರುಷರ ಜಾತಿಗೆ ಸೇರುವುದೇ ದೊಂದಿ, ಹಿಲಾಲು, ಇತ್ಯಾದಿ ಹೆಸರುಗಳಿಂದ ಖ್ಯಾತವಾದ ಪಂಜು. ಬತ್ತಿ ಸೀಮಿತ ವಲಯದಲ್ಲಿ ಇರುವ ಹೆಣ್ಣು; ಪಂಜು ಸೀಮೆ ಮೀರಿ ಹರಿದಾಡುವ ಗಂಡು. ಬತ್ತಿಗೆ ಬಂಧನ, ಎಲ್ಲೆ, ಚೌಕಟ್ಟುಗಳುಂಟು. ಬತ್ತಿಯಿಂದ ಹೊಮ್ಮುವ ಜ್ವಾಲೆ ಸೌಮ್ಯ ರೂಪದ್ದು. ಪಂಜು ಬೀರುವ ಬೆಳಕು ಚೆನ್ನಾಗಿ ಕುಡಿದವನ ನಾಲಿಗೆಯಂತೆ, peak hours ನಲ್ಲಿ ಓಡುವ ಆಟೋಗಳ ಜಾಡಿನಂತೆ - ಬರೀ ಅಡ್ಡಾದಿಡ್ಡಿ. ಬತ್ತಿ ಭೂಮಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಮುಂಚೆ ಸುರಲೋಕದಲ್ಲಿ ಇದ್ದಿತೆಂಬ ಶಂಕೆ ನನಗಿದೆ. ಸಣ್ಣಪುಟ್ಟ ಕೆಲಸಗಳನ್ನು ಕೈಗೊಳ್ಳುವ ಸಂದರ್ಭದಲ್ಲೇ ‘ದೀಪಂ ದರ್ಶಯಾಮಿ’ ಎನ್ನುವ ಪದ್ಧತಿ ಇರುವಾಗ ಸಮುದ್ರಮಥನಕ್ಕೆ ಮುಂಚೆ ದೀಪವನ್ನು ಬೆಳಗಿರಲೇಬೇಕಲ್ಲವೆ! ಬೆಂಕಿ ಇಲ್ಲದೆ ಹೊಗೆ ಇಲ್ಲ ಎನ್ನುವುದು ಎಷ್ಟು ದಿಟವೋ, ಬತ್ತಿ ಇಲ್ಲದೆ ದೀಪವಿಲ್ಲ ಎನ್ನುವುದೂ ಅಷ್ಟೇ ದಿಟ. ನನಗೊಂದು ಒರಿಜಿನಲ್ ಡೌಟ್... ಸಣ್ಣಪುಟ್ಟ ದೀಪಗಳನ್ನು ಬೆಳಗಿದಾಗಲೇ ಹತ್ತಿರದಲ್ಲಿರುವ ಗೋಡೆಯೋ, ಹಲಗೆಯೋ ಕಪ್ಪಾಗುತ್ತದೆ. ಸಮುದ್ರಮಥನ ಕಾಲದಲ್ಲಿ ಸಾಕಷ್ಟು ದೊಡ್ಡ ದೀಪವನ್ನೇ ಬೆಳಗಿದ್ದು, ಅದರ ಆಕರ್ಷಣೆಗೆ ಒಳಗಾದ ರಕ್ಕಸರು ಅದನ್ನು ಹತ್ತಿರದಿಂದ ನೋಡಲೆಂದು ಹೋಗಿ ಮೈಕೈ ಸುಟ್ಟುಕೊಂಡರೋ ಅಥವಾ ಅದಕ್ಕೂ ಮೊದಲೇ ಅವರು ಕಪ್ಪಗಿದ್ದರೋ ಎನ್ನುವುದನ್ನು ಪುರಾಣ ಸಂಶೋಧನಾ ಇಲಾಖೆಯೇ ತಿಳಿಸಬೇಕು.

                     ಬತ್ತಿಯನ್ನು ವಿಧವಿಧವಾಗಿ ವರ್ಗೀಕರಿಸಬಹುದು. ಮೊದಲಿಗೆ ನೈಸರ್ಗಿಕ ಮತ್ತು ಮಾನವನಿರ್ಮಿತ ಬತ್ತಿಗಳ ವಿಂಗಡಣೆಯನ್ನು ನೋಡೋಣ. ಜಗದಲ್ಲಿ ಹತ್ತಿ ಹುಟ್ಟಿ (ಇದೂ ಒಂದು ವಿಸ್ಮಯವೇ. ಮೊದಲು ದೇವ ಹುಟ್ಟಿದನೋ ಅಥವಾ ಹತ್ತಿಯೋ? ರೋಮನ್ ದೇವತೆಗಳಲ್ಲಿ ಕೆಲವು ನಗ್ನ ದೇವತೆಗಳು ಇರುವುದು ಕಂಡುಬರುತ್ತದೆ. ಹಿಂದೂ ದೇವತೆಗಳೆಲ್ಲರೂ ಸಂಪೂರ್ಣ ಪೋಷಾಕಿನಲ್ಲಿ ರಾರಾಜಿಸುವವರೇ. ದೊಡ್ಡ ದೇವತೆಗಳು ಸಿಲ್ಕ್ (ವಿಷ್ಣು), ಲೆದರ್ (ಶಿವ) ಗಾರ್ಮೆಂಟ್ಸ್ ಧರಿಸಿದ್ದರು. ಆದರೆ ಉಪದೇವತೆಗಳು? ‘ದಿಗಂಬರಿ’ ಎಂದರೆ ದಿಕ್ಕುಗಳನ್ನೇ ಧರಿಸಿದವಳು ಎಂಬ ಅರ್ಥ ಬರುವಂತೆಯೇ ‘ಕೋಸಂಬರಿ’ ಎಂದರೆ ಕೋಸನ್ನೇ ಬಟ್ಟೆಯಾಗಿ ಧರಿಸಿದವಳೆಂಬ ಅರ್ಥ ಬರುವುದಾದರೂ, ನಮ್ಮ ಯಾವ ದೇವ-ದೇವಿಯರಿಗೂ ಕರ್ಕಟೀಫಲ ಧಾರಿಣಿಯೈ ನಮಃ, ಪರ್ಣಾಂಬರಾಯ ನಮಃ, ಹಾರಿತಕವಸ್ತ್ರಧಾರ್ಯೈ ನಮಃ ಎಂದೆಲ್ಲ ಮಂತ್ರಗಳು ಇಲ್ಲದಿರುವುದರಿಂದಲೂ, ಆ ಕಾಲದಲ್ಲಿ ನೈಲಾನ್, ರೆಯಾನ್ ವಸ್ತ್ರಗಳನ್ನು ವಿಶ್ವಾಮಿತ್ರ ಸಹ ಕಂಡುಹಿಡಿಯದಿದ್ದುದರಿಂದಲೂ, ನಾರುಮಡಿಗಳು ಕೇವಲ ಋಷಿಗಳು, ವನವಾಸಿಗಳಿಗೆ ಸೀಮಿತವಾಗಿದ್ದರಿಂದಲೂ  ಹಾಗೂ ಸಿಲ್ಕ್ ಬಿಟ್ಟರೆ ಪ್ಯೂರ್ ಕಾಟನ್ನೇ ಹೆಚ್ಚಿನ ಬೆಲೆ ಬಾಳುವುದಾದ್ದರಿಂದಲೂ ಉಪದೇವತೆಗಳು ಹತ್ತಿಯನ್ನೇ ಧರಿಸಿದ್ದಿರಬೇಕೆಂದು ಶುಕ್ಲಾಚಾರ್ಯ ಸಿಂಡಿಕೇಟ್ ಅಧ್ಯಯನದಲ್ಲಿ ಕಂಡುಬರುವುದಂತೆ. ಎಂದರೆ, ರೇಷ್ಮೆಯನ್ನು ಬಿಟ್ಟರೆ ಹತ್ತಿ ಇದ್ದೀತೆಂಬ ಗುಮಾನಿಯೂ, ಹತ್ತಿ ಬಟ್ಟೆಯಾಗಿ ರೂಪುಗೊಳ್ಳುವುದಕ್ಕೂ ಮುಂಚೆ  ‘Divine handicraft center’ ನಲ್ಲಿ ಕರಕುಶಲತೆಯ ಮೂಲಕ ಬತ್ತಿಯ ರೂಪವನ್ನು ಪಡೆದಿತ್ತು, ಆ ಬತ್ತಿಯೇ ಸಮುದ್ರಮಥನ ಕಾಲದಲ್ಲಿ ‘ದೀಪ ಬೆಳಗುವಿಕೆ’ಯಲ್ಲಿ ರಾರಾಜಿಸಿತ್ತು ಎನ್ನಬಹುದು. ಅಲ್ಲಿಗೆ ಬತ್ತಿ ಸುರನಿರ್ಮಿತ ಎನ್ನಬಹುದಾದರೂ ಯಾವುದೇ ದೇವರು ಯಾವುದೇ ಕರಕುಶಲ ಕೆಲಸವನ್ನು ಮಾಡಿದ ಉಲ್ಲೇಖ (ಬ್ರಹ್ಮನೊಬ್ಬನ ಹೊರತಾಗಿ – ಆತ ಜಗದ ಮೊದಲ ಸಾಫ್ಟ್‍ವೇರ್ ಇಂಜಿನಿಯರ್. ಒಂದು ನಿಮಿಷವೂ ಬಿಡುವಿಲ್ಲದೆ ‘production is my watchword’ ಎನ್ನುವ ಕರ್ತವ್ಯನಿಷ್ಠ ಕಾರ್ಮಿಕನಾತ) ಇಲ್ಲವಾದ್ದರಿಂದಲೂ, ರಕ್ಕಸರಿಗೆ ಕುಶಲತೆಯೇ ಇಲ್ಲದ್ದರಿಂದಲೂ, ಹತ್ತಿಯನ್ನು ಸಪ್ತರ್ಷಿ ಮಂಡಲದಲ್ಲಿನ ಯಾವುದೋ ಋಷಿಯೇ ಸಿದ್ಧಪಡಿಸಿಕೊಟ್ಟಿರಬೇಕೆಂದು ‘theory of elimination’ ಮೂಲಕ ಸಾಬೀತುಗೊಳಿಸಬಹುದು. Therefore ಬತ್ತಿ is man made thing. ನೈಸರ್ಗಿಕ ಉತ್ತಮ ವಸ್ತುಗಳಿಗೂ, ದ್ರೌಪದಿಗೂ ಅಪೂರ್ವ ಸಂಬಂಧವಿದೆ. ಎಲ್ಲಿಯೋ ಇದ್ದ ಸೌಗಂಧಿಕಾ ಪುಷ್ಪವನ್ನು ಭೂಮಿಗೆ ಇಳಿಸಿ, ತನ್ನ ಕುಟೀರದ ಕಾಂಪೌಂಡಿನಲ್ಲಿ ಬೆಳೆಸಿಕೊಂಡ ಹೆಗ್ಗಳಿಕೆ ಈಕೆಯದು. ನೈಸರ್ಗಿಕ ಬತ್ತಿಯನ್ನು ಸಹ ದ್ರೌಪದಿಯೇ ಜನಪ್ರಿಯಗೊಳಿಸಿದ್ದು ಎಂಬುದಕ್ಕೆ ಇದೋ ಒಂದು ಸಟೆಯಾದ ಉಪಕಥೆ.


ದ್ರೌಪದಿ ಸುರಸುಂದರಿ. ಎಲ್ಲ ಸುಂದರಿಯರೂ ಫಿಗರ್ ಕಾಂಷಿಯಸ್. ಅರಮನೆಯಂತೆ ಕಾಡಿನಲ್ಲಿ ಯಾವುದೇ ಡ್ರಿಲ್ ಮಾಸ್ಟರ್ ಅಥವಾ ಜಿಮ್ ಎಕ್ವಿಪ್‍ಮೆಂಟ್ಸ್ ಇರಲಿಲ್ಲವಾದ್ದರಿಂದ ದಿನವೂ ಸಂಜೆಯ ಸಮಯದಲ್ಲಿ ಲಾಂಗ್ ವಾಕ್ ಹೋಗುವುದನ್ನು ರೂಢಿಸಿಕೊಂಡಿದ್ದಳು. ಹೀಗೊಮ್ಮೆ ಬುಡಕಟ್ಟು ಜನರು ವಾಸಿಸುವ ತಾಣದ ಹೊರಭಾಗವನ್ನು ತಲುಪಿದಾಗ, ಬುಡಕಟ್ಟಿನ ಸುಂದರಿಯೊಬ್ಬಳು ಗಿಡವೊಂದರ ಕೆಲವು ಮೊಗ್ಗುಗಳನ್ನು ಮಣ್ಣಿನ ತಟ್ಟೆಯಲ್ಲಿ ತೆಗೆದುಕೊಂಡು ಹೋದುದನ್ನು ಕಂಡಳು. ಆ ಬುಡಕಟ್ಟಿನ ಯಾವ ಹೆಣ್ಣೂ ತುರುಬಿನಲ್ಲಿ ಹೂವನ್ನು ಮುಡಿಯದಿರುವುದನ್ನು ಗಮನಿಸಿದ ದ್ರೌಪದಿಗೆ ಈ ಮೊಗ್ಗನ್ನು ಒಯ್ದುದೇಕೆಂಬ ಕುತೂಹಲ ಮೂಡಿತು. ಬುಡಕಟ್ಟಿನ ಸುಂದರಿ ಕೆಲವು ಮಣ್ಣಿನ ಹಣತೆಗಳನ್ನು ಹೊರತಂದಳು. ಮಣ್ಣಿನ ಹೂಜಿಯೊಂದರಿಂದ ತೈಲವನ್ನು ಹಣತೆಗಳಿಗೆ ಹಾಕಿದಳು. ನಂತರ ಒಂದೊಂದು ಹಣತೆಯಲ್ಲೂ ತಾನು ತಂದ ಮೊಗ್ಗುಗಳನ್ನು ಇರಿಸಿ, ಚಕಮಕಿ ಕಲ್ಲುಗಳಿಂದ ಪಕ್ಕದಲ್ಲಿದ್ದ ಪುರುಲೆಗಳಿಗೆ ಬೆಂಕಿ ಹೊತ್ತಿಸಿ, ಉರಿಯುತ್ತಿದ್ದ ಒಂದು ದೊಡ್ಡ ಎಲೆಯನ್ನು ಹೊತ್ತೊಯ್ದು ಮೊಗ್ಗಿನ ಬಳಿ ಹಿಡಿದಳು. ಮೊಗ್ಗು ಹೊತ್ತಿಕೊಂಡು ದೀಪವಾಗಿ ಜ್ವಲಿಸಲಾರಂಭಿಸಿತು. ಆ ಹಣತೆಯಿಂದ ಆ ಸುಂದರಿ ಇತರ ಹಣತೆಗಳನ್ನೂ ಬೆಳಗಿದಳು. ದ್ರೌಪದಿ ಸುಮಾರು ಎರಡು ವಿಘಟಿಗಳಷ್ಟು ಸಮಯ ನಿಂತು ನೋಡಿ, ‘ಓಹೋ! ಹಸ್ತಿನಾವತಿಯಿಂದ ತಂದ ಬತ್ತಿ ಮುಗಿದುಹೋದಾಗ ಈ ಮೊಗ್ಗನ್ನು ಬಳಸಬಹುದು’ ಎಂದುಕೊಂಡಳು. ಆ ಬುಡಕಟ್ಟಿನ ಸುಂದರಿ ಮೊಗ್ಗು ಕಿತ್ತ ಗಿಡದ ಬಳಿ ಸಾರಿ ಒಂದೇ ಒಂದು ಮೊಗ್ಗನ್ನು  ಕಿತ್ತು ಇಟ್ಟುಕೊಂಡಳು. ಇದಾಗಿ ಎಷ್ಟೋ ದಿನಗಳು ಕಳೆದನಂತರ ಹಸ್ತಿನಾಪುರದ ಬತ್ತಿ ಮುಗಿದುಹೋಯಿತು. ಅಷ್ಟರಲ್ಲಿ ದ್ರೌಪದಿಗೆ ಬುಡಕಟ್ಟಿನ ಸ್ಥಳಕ್ಕೆ ಹೋಗುವ ದಾರಿಯೂ ಮರೆತುಹೋಗಿತ್ತು. ಆದರೇನು... ಒಂದು ಮೊಗ್ಗಿತ್ತಲ್ಲ! ‘ಎಲೈ ಭೀಮಸೇನ... ನನಗೆ ಈ ವಿಧದ ಮೊಗ್ಗು ಈಗಲೇ ಬೇಕು’ ಎಂದಳು. ‘ಪ್ರಿಯೆ, ಈಗ ಸಮಯ ಆರು ಗಂಟೆಯಾಗಲಿದೆ. ಕತ್ತಲೆ. ಇದನ್ನೀಗ ಹೇಗೆ ಹುಡುಕಲಿ?’ ಎಂದ ಭೀಮಸೇನ. ‘ನೀನು ವಾಯುಪುತ್ರ. ವಾಯು ಎಲ್ಲಿಂದೆಲ್ಲಿಗೋ ವಾಸನೆಯನ್ನು ಒಯ್ಯುವ ಶಕ್ತಿ ಹೊಂದಿರುವಾಗ ಅದರ ಪುತ್ರನಾದ ನಿನಗೂ ಆ ಗುಣ ಹೆರಿಡಿಟರಿಯಾಗಿ ಬಂದಿರುತ್ತದೆ. ಇಗೋ, ಈ ಹೂವನ್ನು ಒಮ್ಮೆ ಮೂಸು. ನಂತರ ನಡೆ ಹೊರಗೆ, ಹುಡುಕಿ ತಾ ಪುಷ್ಪವನ್ನು’ ಎಂದಳು. ಭೀಮ ಒಲ್ಲೆ ಎಂದ. ದ್ರೌಪದಿ ಕೆಂಡಾಮಂಡಲವಾದಳು. ಭೀಮ ಮೂಗು ಮುಂದೆ ಮಾಡಿಕೊಂಡು ಹೋಗಿ, ಮೊಗ್ಗಿರುವ ಗಿಡವನ್ನು ಪತ್ತೆ ಹಚ್ಚಿ, ಬುಡಸಮೇತ ಗಿಡವನ್ನು ತಂದು ಕುಟೀರದ ಮುಂದೆ ನೆಟ್ಟ. ದ್ರೌಪದಿ ‘to cut costs’ ಅಂದಿನಿಂದ ಬತ್ತಿ ತರಿಸುವುದನ್ನು ಬಿಟ್ಟು, ಮೊಗ್ಗಿನಿಂದಲೇ ದೀಪ ಬೆಳಗಲು ತೊಡಗಿದಳು. ವಾಸನೆಯ ಮೂಲಕವೇ ಭೀಮನು ಇದನ್ನು ಕಂಡುಹಿಡಿದಿದ್ದರಿಂದ ಇದಕ್ಕೆ ದೊಡ್ಡ ನಾತದ ಗಿಡ ಎಂದೂ, ಅದನ್ನು ತರುವುದಿಲ್ಲ ಎಂದಾಗ ದ್ರೌಪದಿ ಭೀಮನಿಗೆ ಸರಿಯಾಗಿ ಮಂಗಳಾರತಿ ಮಾಡಿದುದರಿಂದ ಆರತಿ ಗಿಡ ಎಂದೂ, ಪಾಂಡವರ ಮನೆಯಲ್ಲಿ ಈ ಮೊಗ್ಗು ದೀಪಕ್ಕಾಗಿ ಬಳಸಲಾದ್ದರಿಂದ ಪಾಂಡವರ ಬತ್ತಿ ಎಂದೂ ಪ್ರಸಿದ್ಧವಾಯಿತು. ಜಗದಲ್ಲಿ ಇಂದಿಗೂ ತಿಳಿದಿರುವ ನೈಸರ್ಗಿಕ ಬತ್ತಿ ಕಾಲಕ್ರಮೇಣ ವಿಜ್ಞಾನಯುಗದಲ್ಲಿCallicarpa tomentosa  ಎಂದು ಜನಪ್ರಿಯವಾಯಿತೆಂಬಲ್ಲಿಗೆ ಈ ಉಪಕಥೆಯು ಸಂಪೂರ್ಣವು.

          ಬತ್ತಿಯನ್ನು ಭೌತಿಕ ಬತ್ತಿ ಮತ್ತು ಮಾನಸಿಕ ಬತ್ತಿ, ಅಲಂಕಾರಿಕ ಬತ್ತಿ ಎಂದೂ ವಿಂಗಡಿಸಬಹುದು. ಭೌತಿಕ ಬತ್ತಿಯು ‘ಅಳತೆ ಚಿಕ್ಕದಾದರೂ ಬೆಳಕು ದೊಡ್ಡದು’ ಎಂಬ ಕೀರ್ತಿವೆತ್ತ ಮೋಂಬತ್ತಿಯ ಬಳಗಕ್ಕೆ ಸಲ್ಲುತ್ತದೆ. ಒಮ್ಮೆ ಸೂರ್ಯನು ‘ನಾನು ನಾಳೆಯಿಂದ ಒಂದು ವಾರ ಸಿಕ್ ಲೀವ್ ಹಾಕ್ತೀನಿ’ ಎಂದಾಗ ಮೋಂಬತ್ತಿ ಎದ್ದುನಿಂತು ‘ಪರವಾಯಿಲ್ಲ. ಅಷ್ಟು ಸಮಯ ನಾನು ನೋಡಿಕೊಳ್ಳುತ್ತೇನೆ’ ಎಂದಿತಂತೆ. ಅಡಿಗರು ತಮ್ಮ ಕವನದಲ್ಲಿ ‘ನೀವು ದೊಡ್ಡವರಿರಬಹುದು, ಆದರೆ ನಾವೇನೂ ಕುಬ್ಜರಲ್ಲ’ ಎಂದು ಹೇಳಿರುವುದು ಇದೇ ಅರ್ಥದಲ್ಲಿ.

ಭೌತಿಕ ಬತ್ತಿಯಲ್ಲಿ ಹತ್ತಿಯ ಬತ್ತಿ ಮತ್ತು ಕಾಗದದ ಬತ್ತಿಗಳೇ ಪ್ರಮುಖ. ‘ನಿರಾಶ್ರಯಾ ನ ಶೋಭಂತೇ ಪಂಡಿತಾ, ವನಿತಾ, ಲತಾ’ ಎನ್ನುವುದನ್ನು ಎಕ್ಸ್‍ಟೆಂಡ್ ಮಾಡಿ ‘ತೈಲಿನೀ’ಯನ್ನೂ ಸೇರಿಸುವುದು ಸೂಕ್ತ. ಮೋಂಬತ್ತಿ, ಸ್ಟೌಬತ್ತಿ, ಲಾಂದ್ರದ ಬತ್ತಿಗಳು ಸ್ಟಿಫ್ ಆಗಿರಬೇಕಾದರೆ ಅವುಗಳಿಗೆ ಸತುವನ್ನೋ, ತವರವನ್ನೋ ಸೇರಿಸುವುದು ರೂಢಿಯಲ್ಲಿದೆ. ಹೆಣ್ಣಿಗೆ ತವರು ಬೆನ್ನೆಲುಬಾದರೆ ಬತ್ತಿಗೆ ತವರ! ಹೆಣ್ಣು, ಬತ್ತಿಗಳಿಗೆ ಎನಿತು ಸಾಮ್ಯ! ಬತ್ತಿ ಮನೆಗೆ ಬೆಳಕಿತ್ತರೆ ಹೆಣ್ಣು ಮನೆತನಕ್ಕೇ ಬೆಳಕು ನೀಡುತ್ತಾಳೆ. ಹೆಣ್ಣಿನಂತೆಯೇ ಬತ್ತಿಯೂ ಮೂರು ಹಂತಗಳನ್ನು ಕಾಣುತ್ತದೆ. ಹಣತೆಯನ್ನು ತಲುಪುವುದಕ್ಕೆ ಮುನ್ನ ಪ್ಲಾಸ್ಟಿಕ್ ಚೀಲದಲ್ಲೋ, ಸ್ಟೀಲ್ ಡಬ್ಬಿಯಲ್ಲೋ ನಳನಳಿಸುತ್ತಾ ಏನೇನೂ ಜವಾಬ್ದಾರಿ ಇಲ್ಲದ ಅವಿವಾಹಿತ ಸುಂದರಿ; ಹಣತೆಯ ಎಣ್ಣೆಯ ಜೊತೆ ಸೇರಿದಾಗ ಬೆಳಕು ಚೆಲ್ಲುವ ಜವಾಬ್ದಾರಿಗೆ ಅಣಿಯಾಗುವ ನವವಿವಾಹಿತ ಪತ್ನಿ. (ಇಲ್ಲಿ ಎಣ್ಣೆಯನ್ನು ಗಂಡಿಗೆ ಹೋಲಿಸಿರುವುದು ಕಾಕತಾಳೀಯವೇನಲ್ಲ!) ತುದಿಗೆ ಬಿಸಿ ಮುಟ್ಟಿದಾಗ (ಜವಾಬ್ದಾರಿ ಹೆಗಲೇರಿದಾಗ) ತಾನೇ ಸವೆದರೂ, ಕಷ್ಟಗಳನ್ನು ಅನುಭವಿಸಿದರೂ, ಮನೆಗೆ ಬೆಳಕಾಗಿಯೇ ಉಳಿಯುವ ತಾಯಿ.

ಭೌತಿಕ ಬತ್ತಿ ಸ್ತ್ರೀತ್ವದ ಸಫಲ ಜೀವನದ ಸಾಕಾರ. ಮಾನಸಿಕ ಬತ್ತಿ?  ಆಹಾ! ಇದರ ಪರಿಯೇ ಪರಿ. ಈ ಪರಿಯ ಬತ್ತಿಯನ್ನು ನೆನೆದಾಗಲೆಲ್ಲ ಮೊಟ್ಟಮೊದಲಿಗೆ ನೆನಪಿಗೆ ಬರುವವರೇ ನಾರದರು. ಪ್ರಹ್ಲಾದನಲ್ಲಿ ಹರಿಯೆಂಬ ಮಾನಸಿಕ ಬತ್ತಿಯನ್ನು ಹಚ್ಚಿ, ಜಗತ್ತಿಗೆ ಮಾರಕವಾದ ರೀತಿಯಲ್ಲಿ ಮೈಯೆಲ್ಲಾ ಮದ್ದನ್ನು ತುಂಬಿಕೊಂಡಿದ್ದ ಹಿರಣ್ಯಕಶಿಪುವೆಂಬ ಪಟಾಕಿಯನ್ನು ಢಂ ಎನಿಸಿದ್ದು ನಾರದರೇ. ‘ಕೊಡು ನಿನ್ನಲ್ಲಿರುವ ಮೌಲ್ಯಯುತವಾದುದನ್ನೆಲ್ಲ’ ಎನ್ನುತ್ತಾ ಭಯಂಕರ ರತ್ನಾಕರನು ಅಡ್ಡ ನಿಂತಾಗ, ರತ್ನಾಕರನನ್ನು ವಾಲ್ಮೀಕಿಯಾಗಿ ಪರಿವರ್ತಿಸಲು ಅಗತ್ಯವಾದ ‘ಮಾನಸಿಕ ಬತ್ತಿ’ಯಾದ ರಾಮಮಂತ್ರವನ್ನು ನೀಡಿ, ರಾಮಾಯಣದ ಬೆಳಕನ್ನು ಹರಡಲು ಪ್ರೇರಕರಾದವರೂ ನಾರದರೇ. ಲೋಕಕಲ್ಯಾಣಕ್ಕಾಗಿ ಬತ್ತಿಯನ್ನು ಇಡುತ್ತಾ ಜ್ಞಾನದ ಜ್ವಾಲೆಯನ್ನು ಹರಡಿದವರಲ್ಲಿ ನಾರದರೇ ಅಗ್ರಗಣ್ಯರು.  ಮಾನಸಿಕ ಬತ್ತಿಯನ್ನು ಮಂಥರೆಯೂ ಸೊಗಸಾಗಿ ಬಳಸಿದಳು. ರಾವಣನ ಸಂಹಾರಕ್ಕೆಂದು ಅವತಾರ ಎತ್ತಿದ ರಾಮನು ಪಟ್ಟಾಭಿಷಿಕ್ತನಾಗಿ ಅಯೋಧ್ಯೆಯಲ್ಲಿ ಉಳಿದರೆ ಅನರ್ಥವಾಗುವುದೆಂದು ಅರಿತ ಮಂಥರೆ  ಕೈಕೇಯಿಗೆ ಬತ್ತಿ ಇಟ್ಟು, ಬೆಂಕಿ ಹಚ್ಚಿಸಿ, ರಾಮನು ಮನೆಯಿಂದ ಹೊರಹೊರಟು  ತನ್ನ ಅವತಾರಸಾರ್ಥಕ್ಯವನ್ನು ಹೊಂದಲು ಕಾರಣಳಾದಳು. ಮಂಥರೆಯಿಟ್ಟ ಬತ್ತಿ  ಅವತಾರದ ಸಫಲತೆಗೆ ಕಾರಣವಾಯಿತು.

ಎಲ್ಲಾ ಮಾನಸಿಕ ಬತ್ತಿಗಳೂ ಒಳಿತೇ ಮಾಡುವುದೆಂದು ಹೇಳಲಾಗದು. ಶೂರ್ಪನಖಿ ರಾವಣನ ಮನದಲ್ಲಿ ಬತ್ತಿ ಇಟ್ಟಳು; ಕಾಮದ ಹೊಗೆಯಲ್ಲಿ ರಾವಣ ಸುಟ್ಟುಹೋದ. ದುರ್ಯೋಧನನ ಮನಸ್ಸಿನಲ್ಲಿ ಶಕುನಿ ಅಸೂಯೆಯ ಬತ್ತಿ ಹಚ್ಚಿದ. ಇಡೀ ಕುರುವಂಶ ಕರಕಲಾಯಿತು. ಹಿಟ್ಲರನ ಕ್ರೌರ್ಯವನ್ನು ತಾಳಲಾರದೆ ಜನರಲ್ ಹೆಸ್ ಸ್ವಾಮಿದ್ರೋಹದ ಬತ್ತಿ ಇಟ್ಟ; ಹಿಟ್ಲರ್ ನೆಗೆದುಬಿದ್ದ. ಭಾರತದ ಹಲವಾರು ರಾಜರು ಪರಸ್ಪರ ಬತ್ತಿ ಇಟ್ಟು ತಮ್ಮ ತಮ್ಮ ಸಾಮ್ರಾಜ್ಯಗಳನ್ನು ಬೂದಿ ಮಾಡಿಕೊಂಡರು. ಬ್ರಿಟಿಷ್ ತೈಲದಲ್ಲಿ ಈ ರಾಜರಿತ್ತ ಬತ್ತಿಯು ಉರಿದು ಬ್ರಿಟನ್ ಸಾಮ್ರಾಜ್ಯದ ಬೆಳಕನ್ನು ಭಾರತದ ಮೇಲೆ ಚೆಲ್ಲಿತು. ಆ  ಬೆಳಕು ದಳ್ಳುರಿಯಾದಾಗ ಗಾಂಧೀಜಿ ಅಹಿಂಸೆಯ ನೀರೆರಚಿ ಆ ಜ್ವಾಲೆಯನ್ನು  ಹತ್ತಿಕ್ಕಬೇಕಾಯಿತು.

ಬತ್ತಿಯ ವಿಶೇಷ ಗುಣವೆಂದರೆ capillary action  ಮೂಲಕ ಎಣ್ಣೆಯನ್ನು ಮೇಲಕ್ಕೆಳೆದು ಜ್ವಾಲೆ ಉರಿಯಲು ನೆರವಾಗುವುದು. ತೈಲವನ್ನು ಮೇಲಕ್ಕೆ ಸೆಳೆಯುವ ಈ ಕಾರಣದಿಂದಲೇ ಬತ್ತಿಯನ್ನು ಸಂಸ್ಕೃತದಲ್ಲಿ ‘ತೈಲಿನಿ’ ಎಂದು ಕರೆಯುತ್ತಾರೆ. ಎಣ್ಣೆ, ಕೆಪಿಲರಿ ಕ್ರಮ, ಇತ್ಯಾದಿಗಳ ವಿಷಯ ಬಂದಾಗ ಥಟ್ಟನೆ ನೆನಪಿಗೆ ಬರುವುದು ಕವಿವರೇಣ್ಯ ರಾಜರತ್ನಂರ ‘ರತ್ನನ ಪದಗಳು’ ಪುಸ್ತಕದಲ್ಲಿನ ‘ಯಿಷ್ಣು ಪಡಚ’ದ ಸಾಲುಗಳು:

ಏನ್ ಯಿಸ್ನೂನೋ ಬೆಪ್ಪಂಗ್ ಬಿದ್ದೌನ್ ಆಲಿನ್ ಸೌಂದ್ರದ್ ಮದ್ದ
ಆಲ್ನಲ್ ಬೆಳ್ನಾಕ್ ಚೀಪ್ತಾನಿರಾಕ್ ಅಸ್ಮಗೂನ ಸುದ್ದ ?||
ಬುಳ್ಡೇಲ್ ಔಂಗ್ ಒಂದ್ ಇಂಕ್ರಾನಾರ ಬುದ್ದಿ ಗಿದ್ದಿ ಇದ್ರೆ
ಯೋಚ್ನೆ ಬೇಡ್ವ – ಯಾವಾಗ್ನಾರ ಆಲ್ ಒಡದ್ ಉಳ ಬಿದ್ರೆ||
ನಾನೇನಾರ ಯಿಸ್ನಾಗಿದ್ರೆ ಗೊತ್ತಾ ಏನ್ಮಾಡ್ತಿದ್ದೆ?
ಯೆಂಡದ್ ಸೌಂದ್ರದ್ ಮದ್ದಕ್ಕೋಗಿ ಝಾಂಡ ಆಕ್ಬಿಡ್ತಿದ್ದೆ||
ಸೇಸನ್ ಸಾವಿರ್ ತಲೆಗೊಳ್ನೂವೆ ಸಾಲ ಈಸ್ಕೊಂಡ್ಬುಟ್ಟು
ಸೌಂದ್ರಕ್ ಬಾಯ್ ಇಟ್ ಈರ್ದಾಂತ್ ಅಂದ್ರೆ ಸೌಂದ್ರಕ್ ಸೌಂದ್ರೆ ಛಟ್ಟು||

ಎಂದು ಬರೆಯುತ್ತಾ ಹಾವಿನ ಹೆಡೆಗಳಲ್ಲೂ capillary action suction power ಕಂಡ್ಕೊಂಡಿದ್ದು ವಿಶೇಷವೇ ಸೈ. ರತ್ನನಿಗೆ ಎಂಡ ಎಷ್ಟು ಖುಷಿ ಕೊಡ್ತಿತ್ತೋ ಅಷ್ಟಾದರೂ ಖುಷಿಯನ್ನ ಕತ್ತಲೆಯಲ್ಲಿ ಕುಳಿತವರಿಗೆ ಬೆಳಕು ನೀಡುವುದು ದಿಟ. ಬೆಳಕಿನ ಬಗ್ಗೆ ಕವಿ ಜರಗನಹಳ್ಳಿ ಶಿವಶಂಕರ್ ಬರೆದಿರುವ ಈ ಕವನವೂ ಉಲ್ಲೇಖನೀಯವೇ:

ಕುಂಬಾರನು ಮಾಡಿದ ಹಣತೆಯಲ್ಲಿ
ಸಿಂಪಿಗನು ನೀಡಿದ ಬತ್ತಿ ಇಟ್ಟು
ಗಾಣಿಗನು ನೀಡಿದ ಎಣ್ಣೆ ಸುರಿದು ಕಡ್ಡಿ ಗೀರಿದರೆ
ಕುಲಗೆಟ್ಟ ಬೆಳಕು ನೋಡಾ!

ಇಲ್ಲಿ ‘ಕುಲಗೆಟ್ಟ’ ಬೆಳಕೆಂದರೆ ಎಲ್ಲ ಕುಲಕ್ಕೂ ಎಟಕುವ ಬೆಳಕು ಎಂದೇ ಆಯಿತಲ್ಲವೆ! ಕೇಡನ್ನು ಬಯಸುವವರು ಇಡುವ ಬತ್ತಿಗೂ, ಬೆಳಕನ್ನು ಪಸರಿಸಲು ಇಡುವ ಬತ್ತಿಗೂ ‘ಎಣ್ಣೆ’ಯದು ಪ್ರಮುಖ ಪಾತ್ರವಿರುವುದೂ ಒಂದು ವಿಶೇಷ ಸಾಮ್ಯ. ಆದರೆ ಸಕಲ ಕೇಡಿಗರಿಗೆ ‘ಎಣ್ಣೆ’ಯೇ ಸ್ಫೂರ್ತಿ ಎಂದೇನಿಲ್ಲ ಎನ್ನುವುದಕ್ಕೆ ನಮ್ಮ ಸೀರಿಯಲ್‍ಗಳೇ ಸಾಕ್ಷಿ. ಒಂದೊಂದು ಸೀರಿಯಲ್‍ನ ಖಳನಾಯಕಿಯೂ ನೂರಾರು ಮನೆಗಳು ಹೊತ್ತಿ ನಿರ್ನಾಮವಾಗುವಷ್ಟು ಬತ್ತಿ ಇಡಲು ಸಮರ್ಥಳು! ಬತ್ತಿಯಿಲ್ಲದ ದೀಪಾವಳಿ, ಉತ್ಥಾನದ್ವಾದಶಿ, ಲಕ್ಷದೀಪೋತ್ಸವಗಳನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ದೀಪಾವಳಿಯಲ್ಲಿ ಬತ್ತಿಗೆ ತುತ್ತಾಗುವ ಒಂದೊಂದು ಪಟಾಕಿಯೂ ಒಂದೊಂದು ದುರ್ಗುಣವನ್ನು ಸುಡಬೇಕೆಂಬುದರ ಸಂಕೇತ. ಕುದುರೆ ಪಟಾಕಿಯನ್ನು ಢಂ ಅನ್ನಿಸುವುದು ‘ಕುದುರೆಯ ಬಾಲಕ್ಕೆ ದುಡ್ಡು ಕಟ್ಟಿದರೆ ನಿನ್ನ ಭವಿಷ್ಯ ಢಂ’ ಎಂದು ಸೂಚಿಸಲು. ಲಕ್ಷ್ಮೀ ಪಟಾಕಿ ಬತ್ತಿ ಹೊತ್ತಿ ಉರಿದಾಗ ‘ಸ್ಫೋಟಕವಾದ ಕಪ್ಪು ಮದ್ದನ್ನು ಉರುಫ್ ಕಪ್ಪುಹಣವನ್ನು ತುಂಬಿಕೊಂಡರೆ ಇಡಿ ದಾಸ್ತಾನೇ ಛಿದ್ರವಾಗುವುದು’ ಎಂಬುದರ ಸಂಕೇತ; ಎಲ್ಲರಿಗೂ ಕಾಣುವಂತೆ ಒಳಗಿರುವುದೆಲ್ಲವನ್ನೂ ತೆಗೆದು ಹೊರಹಾಕಿದರೆ ಎಲ್ಲರೂ ಸಂತೋಷದಿಂದ ಅಂತಹ ಗುಣವನ್ನು ಸ್ವಾಗತಿಸುವರು ಎನ್ನುವುದಕ್ಕೆ ಹೂಕುಂಡ ಸಂಕೇತ; ಹಬ್ಬಕ್ಕೆ ಸರ ತಂದುಕೊಡದಿದ್ದರೆ ಅಕ್ಕಪಕ್ಕದವರು ಇಟ್ಟ ಬತ್ತಿಯಿಂದ ಮನೆಯಲ್ಲಿ ಒಂದೇ ಸಮನೆ ಸದ್ದುಗದ್ದಲ ಎನ್ನುವುದಕ್ಕೆ ಸರಪಟಾಕಿ ಸಂಕೇತ!

ಬತ್ತಿಯೆಂದರೆ ಇಷ್ಟೇ ಅಲ್ಲ; ಬಳಕೆಯ ಆಧಾರದ ಮೇಲೆ ಊದುಬತ್ತಿ, ಸೊಳ್ಳೆಬತ್ತಿ, ಸುರುಸುರುಬತ್ತಿ, ಹೊಗೆಬತ್ತಿ, ಇತ್ಯಾದಿಗಳು ಇವೆ. ಒಂದೊಂದರಲ್ಲೂ ನೂರಾರು ವಿಧಗಳು. ಇವಲ್ಲದೆ ಒಣಕುದುರೆ ಶಾಂತಾರಾಮರ ‘ತೀನ್ ಬತ್ತಿ ಚಾರ್ ರಾಸ್ತಾ’ದ ವಿಷಯಕ್ಕೂ ಒಂದಷ್ಟು ಬತ್ತಿ ಇಡಬಹುದು. ಬರ್ತ್ ಡೇ ಕ್ಯಾಂಡಲ್‍ಗಳಲ್ಲಿನ ಬತ್ತಿಯ ವಿಶೇಷತೆಯ ಬಗ್ಗೆಯೂ ಹೇಳಬೇಕಾಗಿದೆ.

ಓಹ್.... ಕ್ಷಮಿಸಿ.... ನನ್ನ ಬುದ್ಧಿಯೆಂಬ ಬತ್ತಿಗೆ ಕಡಿಮೆಯಾಗುತ್ತಿದೆ.  ಇನ್ನು ಮುಂ...ದು....ವ.....ರೆ.......ಯ.........ಲಾ.............ರೆ.........
ವಿಷ್ ಯೂ ಆಲ್ ಎ ಹ್ಯಾಪಿ ದೀಪಾವಳಿ.

Comments

  1. I believe this needs some editing. Gaps here and there and flaw in one sentence formation are to be rectified.

    ReplyDelete
  2. The ಬತ್ತಿ and its effects since purana period till date explained very nicely. excellent humor.Enjoyed your writing style with lots of background stories and laughter behind them. thanks

    ReplyDelete
    Replies
    1. ಈ ಲೇಖನವನ್ನು ಯಾರೂ ಓದಲೇ ಇಲ್ಲವೇನೋ ಎಂದುಕೊಂಡಿದ್ದೆ. ಅಷ್ಟು ಸುದೀರ್ಘ ಮೌನ ಇದೇ ಮೊದಲು. ನಿಮ್ಮ ಪ್ರತಿಕ್ರಿಯೆ ಓದಿ ನೆಮ್ಮದಿಯಾಯ್ತು. ಧನ್ಯವಾದಗಳು

      Delete
  3. ಧನ್ಯವಾದಗಳು ನಿಮ್ಮ ಅಮೂಲ್ಯ ಸಮಯವನ್ನು ಭಾವನೆಗಳ ಶಬ್ದರೂಪ ಈ ರೀತಿ

    ReplyDelete

Post a Comment