ಸ್ಥಾಲೀ ಪುಲಾಕ ಮತ್ತು ಇತರ ನ್ಯಾಯಗಳು


ಸ್ಥಾಲೀಪುಲಾಕ
ಮತ್ತು
ಇತರ ನ್ಯಾಯಗಳು
ಲೇಖನ - ಡಾ ಸಿ.ವಿ. ಮಧುಸೂದನ


ನೀತಿಶಾಸ್ತ್ರ ಎಂಬ ಹಳೆಯ ಸುಭಾಷಿತ ಸಂಕಲನದ ಆರಂಭದಲ್ಲಿ ಕವಿಯು ಈ ರೀತಿ ಬಿನ್ನವಿಸಿಕೊಳ್ಳುತ್ತಾನೆ:

ವಂದೇ ಸತ್ಪುರುಷಾನ್ ಲೋಕೇ ಗುಣಗ್ರಹಣತತ್ಪರಾನ್ |
ರಾಜಹಂಸಾನಿವ ಜಲಾತ್ ಕ್ಷೀರ ಗ್ರಹಣ ಕೋವಿದಾನ್ ||


           ಈ ಪ್ರಪಂಚದಲ್ಲಿ ನೀರು ಬೆರಸಿದ ಹಾಲಲ್ಲಿ ನೀರನ್ನು ಬಿಟ್ಟು ಹಾಲನ್ನು ಮಾತ್ರ ತೆಗೆದುಕೊಳ್ಳುವ ರಾಜಹಂಸಗಳಂತೆ, ಗುಣವನ್ನು ಮಾತ್ರ ಗ್ರಹಿಸುವುದರಲ್ಲಿ ಆಸಕ್ತಿಯುಳ್ಳ ಸತ್ಪುರುಷರನ್ನು ವಂದಿಸುತ್ತೇನೆ.
     ಒಂದು ಕಾಲದಲ್ಲಿ ಯಾವುದಾದರೊಂದು ಭಾಷಣವನ್ನು ಪ್ರಾರಂಭಿಸುವ ಮುಂದಾಗಲಿ, ಯಾವುದಾದರೂ ಗ್ರಂಥವನ್ನು ಓದುಗರ ಮುಂದಿಡುವಾಗಲಿ, ಈ ಬಗೆಯ ವಿನಂತಿ ರೂಢಿಯಲ್ಲಿತ್ತು.  ಕೇಳುಗರೂ ಓದುಗರೂ ಒಳ್ಳೆಯದನ್ನು ಮಾತ್ರ ಗ್ರಹಿಸಿ, ತಪ್ಪುಗಳನ್ನು ಮನ್ನಿಸಬೇಕು ಎಂದು ಇದರ ತಾತ್ಪರ್ಯ. ಇದಕ್ಕೆ ಹಂಸಕ್ಷೀರ ನ್ಯಾಯ ಎನ್ನುತ್ತಾರೆ. 



  ಸಂಸ್ಕೃತ ಸಾಹಿತ್ಯದಲ್ಲಿ ಈ ಬಗೆಯ ನೂರಾರು “ನ್ಯಾಯ”ಗಳಿವೆ. ಉದಾಹರಣೆಗೆ: ಕರತಲಾಮಲಕ (ಹಸ್ತಾಮಲಕ) ನ್ಯಾಯ, ಕಾಕತಾಲೀಯ ನ್ಯಾಯ, ಕೂಪ ಮಂಡೂಕ ನ್ಯಾಯ, ಸಿಂಹಾವಲೋಕನ ನ್ಯಾಯ ಮುಂತಾದ ನ್ಯಾಯಗಳನ್ನು ಅನೇಕರು ಬಲ್ಲರು.
    ಇಂತಹ ಸುಮಾರು ಐನೂರು ನಿಯಮಗಳನ್ನು Colonel G.A. Jacob ಎಂಬುವರು ಸಂಗ್ರಹಿಸಿ ಮೂರು ಭಾಗಗಳಲ್ಲಿ ೧೯೦೦-೧೯೦೪ರ ಅವಧಿಯಲ್ಲಿ, ಎಂದರೆ ಇಂದಿಗೆ ಸುಮಾರು 120 ವರ್ಷಗಳ ಹಿಂದೆ, “ಲೌಕಿಕ ನ್ಯಾಯಾಂಜಲಿ” ಅಥವಾ A Handful of Popular Maxims ಎಂಬ ಹೆಸರಿನಿಂದ ಪ್ರಕಟಿಸಿದರು. ಈ ಗ್ರಂಥದಲ್ಲಿ ಪ್ರತಿಯೊಂದು ಸಾಮತಿಗೂ ಇಂಗ್ಲೀಷಿನ ಭಾಷಾಂತರವಲ್ಲದೆ, ಯಾವ ಕೃತಿಯಲ್ಲಿ ಇದನ್ನು ಉಪಯೋಗಿಸಲಾಗಿದೆ ಎಂಬುದನ್ನೂ ಸಾಧ್ಯವಾದ ಮಟ್ಟಿಗೆ ತಿಳಿಸುತ್ತಾರೆ.
ವಾಮನ ಆಪ್ಟೆ ಅವರ ಸಂಸ್ಕೃತ ನಿಘಂಟಿನಲ್ಲೂ, ಕನ್ನಡ ಕಸ್ತೂರೀ ಕೋಶದಲ್ಲೂ ಉದಾಹರಣೆಗಾಗಿ ಒಂದು ಹತ್ತಿಪ್ಪತ್ತು ನ್ಯಾಯಗಳನ್ನು ಉದ್ಧರಿಸಿದ್ದಾರೆ.
ನನಗೆ ಸ್ವಾರಸ್ಯವೆನಿಸಿದ ಮತ್ತು ಸ್ವಲ್ಪ ಅಪರೂಪವಾದ ನ್ಯಾಯಗಳಲ್ಲಿ ಕೆಲವನ್ನು ಮಾತ್ರ ಈ ಲೇಖನದಲ್ಲಿ ವಿವರಿಸಿದ್ದೇನೆ.

1.        ಅಶ್ಮಲೋಷ್ಟ ನ್ಯಾಯ ಅಥವಾ ಕಲ್ಲು ಮತ್ತು ಮಣ್ಣಿನ ಹೆಂಟೆಗಳಂತೆ. ಕಲ್ಲಿಗೆ ಹೋಲಿಸಿದರೆ ಹೆಂಟೆ ಮಿದುವಾಗಿದೆ ಎನಿಸುತ್ತದೆ. ಆದರೆ ಹತ್ತಿ, ಹೂವು ಮುಂತಾದುವುಗಳಿಗೆ ಹೋಲಿಸಿದರೆ ಹೆಂಟೆಯೇ ಬಿರುಸು ಎನಿಸುತ್ತದೆ. ಈ ನಿಯಮ ಸಾಪೇಕ್ಷ ಸಿದ್ಧಾಂತವನ್ನು (theory of relativity) ಸೂಚಿಸುತ್ತದೆ ಅಲ್ಲವೇ?

2.            ಇಕ್ಷುರಸ ನ್ಯಾಯ. ಕಬ್ಬಿನಿಂದ ಹಾಲು ತೆಗೆದಂತೆ. ಕಬ್ಬಿನ ರಸ ತುಂಬಾ ಸ್ವಾದಿಷ್ಟವಾದದ್ದು, ಬೆಲ್ಲ, ಸಕ್ಕರೆಗಳನ್ನು ಮಾಡಲು ಅವಶ್ಯವಾದದ್ದು, ಸರಿ. ಆದರೆ ಈ ರಸವನ್ನು ತೆಗೆಯುವ ಮುನ್ನ ಸುಂದರವಾಗಿ ಬೆಳೆದಿದ್ದ ಕಬ್ಬಿನ ಜಲ್ಲೆಗಳನ್ನು ಕಡಿದು, ಅವನ್ನು ಗಾಣದಲ್ಲೋ, ಅಥವಾ ಇನ್ಯಾವ ಯಂತ್ರದಲ್ಲೋ ಜಜ್ಜಬೇಕಾಗುತ್ತದೆ.  ಎಂದರೆ ನಾವು ಅಗತ್ಯವಾದ ಕಾರ್ಯವನ್ನು ಸಾಧಿಸುವ ಹಾದಿಯಲ್ಲಿ, ಹಲವು ಅಪ್ರಿಯವಾದ ಕೆಲಸಗಳನ್ನೂ ಮಾಡಬೇಕಾಗಬಹುದು. P.G. Wodehouseನ ಹಾಸ್ಯ ಕಥೆ ಕಾದಂಬರಿಗಳಲ್ಲಿ ಬರುವ Jeeves ಎಂಬ ಕುಶಾಗ್ರಮತಿಯಾದ ಭೃತ್ಯ ತನ್ನ ಒಡೆಯನಾದ Bertie Wooster ಗೆ ಇದೇ ಅರ್ಥ ಬರುವ “You cannot make an omelette without breaking eggs” ಎಂದು ಆಗಾಗ್ಗೆ ಹೇಳುತ್ತಿರುತ್ತಾನೆ!

3.       ದೇಹಲೀದೀಪ ನ್ಯಾಯ. ಹೊಸಲಿನ ಮೇಲೆ ದೀಪವಿಟ್ಟಂತೆ. ಹಾಗೆ ದೀಪವಿಟ್ಟಾಗ ಮನೆಯ ಹೊರಗೂ ಒಳಗೂ ಒಂದೇ ಸಮಯದಲ್ಲಿ ಬೆಳಕಾಗುತ್ತದೆ. ಎಂದರೆ ಒಂದೇ ಯತ್ನದಿಂದ ಎರಡು ಕಾರ್ಯಗಳನ್ನು ಸಾಧಿಸುವುದು. ಹಿಂದಿಯಲ್ಲಿ “ಏಕ್ ಪಂಥ್ ದೋ ಕಾಜ್” ಎಂಬ ನಾಣ್ಣುಡಿ ಈ ಅರ್ಥವನ್ನೇ ಸೂಚಿಸುತ್ತದೆ.


4.                        ಪಂಕಪ್ರಕ್ಷಾಲನ ನ್ಯಾಯ ಅಥವಾ ಕೆಸರು ಮೆತ್ತಿಕೊಂಡು ತೊಳೆದುಕೊಂಡಂತೆ. ಕೆಸರು ಮೆತ್ತಿಕೊಂಡರೆ ತೊಳೆದುಕೊಳ್ಳಬೇಕು, ನಿಜ. ಆದರೆ ಕೆಸರೇ ಮೆತ್ತಿಕೊಳ್ಳದಂತೆ ಜಾಗ್ರತೆ ವಹಿಸಿದರೆ, ತೊಳೆದುಕೊಳ್ಳುವ ಅವಶ್ಯಕತೆಯೇ ಇಲ್ಲ. Prevention is better than cure. ಈ ನ್ಯಾಯ ಪಂಚತಂತ್ರದ ಒಂದು ಕಥೆಯಲ್ಲಿ ಹೀಗೆ ಉಲ್ಲೇಖಿತವಾಗಿದೆ. “ಪ್ರಕ್ಷಾನಲಾದ್ಧಿ ಪಂಕಸ್ಯ ದೂರಾದಸ್ಪರ್ಶನಂ ವರಂ” (ಕೆಸರನ್ನು ತೊಳೆದುಕೊಳ್ಳುವುದಕ್ಕಿಂತ ಅದನ್ನು ದೂರದಲ್ಲಿದ್ದು ಮುಟ್ಟದಿರುವುದೇ ಲೇಸು).

5.           ಪಿಷ್ಟಪೇಷಣ ನ್ಯಾಯ. ಹಿಟ್ಟನ್ನು ಬೀಸಿದಂತೆ. ಧಾನ್ಯ ಒಮ್ಮೆ ನುಣ್ಣಗೆ ಹಿಟ್ಟಾದ ಬಳಿಕ ಮತ್ತೆ ಎಷ್ಟು ಸಲ ಬೀಸುವಕಲ್ಲಿನಲ್ಲಿ ಬೀಸಿದರೂ ಪ್ರಯೋಜನವಿಲ್ಲ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ಅಥವಾ ಮಾಡಿದ್ದನ್ನೇ ಪುನಃ ಮಾಡುತ್ತಾ ಕಾಲಕಳೆಯುವರನ್ನು ಕುರಿತು ಅನ್ನುವ ಮಾತಿದು.

6.      ಬೀಜಾಂಕುರ ನ್ಯಾಯ. ಬೀಜ ಮತ್ತು ಸಸಿಯಂತೆ. ಪ್ರಕೃತಿಯಲ್ಲಿ ಸಾಮಾನ್ಯವಾಗಿ ಪರಿಣಾಮ (effect) ಎನ್ನುವುದು ಕಾರಣ (cause) ವನ್ನು ಅವಲಂಬಿಸಿರುತ್ತದೆ. ಆದರೆ ಬೀಜ ಮತ್ತು ಸಸಿಗಳನ್ನು ಗಮನಿಸಿದರೆ ಬೀಜ ಮೊದಲು ಬಂತೋ, ಅಥವಾ ಸಸಿ ಮೊದಲು ಬಂತೋ ಎಂಬ ಜಿಜ್ಞಾಸೆ ಬರುತ್ತದೆ. ಕಾರಣ-ಪರಿಣಾಮಗಳು ಒಂದನ್ನೊಂದು ಅವಲಂಬಿಸಿರುವಾಗ ಈ ನ್ಯಾಯ ಅನ್ವಯವಾಗುತ್ತದೆ. English ನಲ್ಲಿ ಹೇಳುವ ಹಾಗೆ: Which came first, the chicken or the egg?

7.      
              ವೃದ್ಧಕುಮಾರೀವಾಕ್ಯ ನ್ಯಾಯ  ಒಬ್ಬ ಹೆಂಗಸು, ಅವಿವಾಹಿತೆ, ಬಡವೆ, ವಯಸ್ಸೂ ಹೆಚ್ಚಾಗಿತ್ತು. ಇಂದ್ರನನ್ನು ಕುರಿತು ತಪಸ್ಸು ಮಾಡಿದಳು. ಇಂದ್ರನು ಪ್ರತ್ಯಕ್ಷನಾಗಿ “ಏನು ವರ ಬೇಕೋ, ಕೇಳಿಕೋ” ಎಂದನು. ಅದಕ್ಕೆ ಆಕೆ “ಪುತ್ರಾ ಮೇ ಬಹುಕ್ಷೀರಘೃತಮೋದನಂ ಕಾಂಸ್ಯಪಾತ್ರ್ಯಾಂ ಭುಂಜೀರನ್” ಎಂದರೆ “ನನ್ನ ಮಕ್ಕಳು ಹಾಲು-ತುಪ್ಪ ಸಹಿತವಾದ ಅನ್ನವನ್ನು ಕಂಚಿನ ಪಾತ್ರೆಗಳಲ್ಲಿ ಸೇವಿಸುವಂಥವರಾಗಲಿ” ಆ ನಿರ್ಗತಿಕಳಿಗೆ ಆಗ ಮದುವೆಯೂ ಆಗಿರಲಿಲ್ಲ. ಇನ್ನು ಪುತ್ರರೆಲ್ಲಿ, ಹಾಲು ಕೊಡುವ ದನಗಳೆಲ್ಲಿ, ಅಕ್ಕಿ ಎಲ್ಲಿ, ಕಂಚಿನ ಪಾತ್ರೆ ಎಲ್ಲಿ?. ಹೀಗೆ ಒಂದೇ ವರದಲ್ಲಿ, ಆಯುಸ್ಸು, ಪತಿ, ಮಕ್ಕಳು, ಸಂಪತ್ತು ಎಲ್ಲವನ್ನೂ ಪಡೆದುಕೊಂಡಳು. ಆದರೆ ಚಿನ್ನದ ಪಾತ್ರೆಗಳನ್ನು ಕೇಳುವ ಬದಲು, ಕಂಚಿನ ಪಾತ್ರೆಯನ್ನು ಏಕೆ ಕೇಳಿಕೊಂಡಳೋ ತಿಳಿಯದು.
ಇದೇ ಅರ್ಥ ಬರುವ ಇನ್ನೊಂದು ನ್ಯಾಯ “ಅಂಧಬ್ರಾಹ್ಮಣವರ ನ್ಯಾಯ” ಇದರಲ್ಲಿ ಒಬ್ಬ ಮುದುಕ ಬ್ರಾಹ್ಮಣನು ಬಡವನು ಮಾತ್ರವಲ್ಲ, ಕುರುಡನೂ ಆಗಿದ್ದನು. ಅವನು ಕೇಳಿದ ವರವೇನೆಂದರೆ “ಸ್ವಪೌತ್ರಂ ರಾಜಸಿಂಹಾಸನಸ್ಥಿತಂ ಈಕ್ಷಿತುಮಿಚ್ಛಾಮಿ”, (ನನ್ನ ಮೊಮ್ಮಗನು ರಾಜಸಿಂಹಾಸನದ ಮೇಲೆ ಕುಳಿತಿರುವುದನ್ನು ನೋಡಲು ಇಚ್ಛಿಸುತ್ತೇನೆ). 

8.             ಸುಂದೋಪಸುಂದ ನ್ಯಾಯ. ಸುಂದ-ಉಪಸುಂದರ ಕಥೆ ಮಹಾಭಾರತದ ಆದಿಪರ್ವದಲ್ಲಿ ವಿಸ್ತಾರವಾಗಿಯೂ, ಕಥಾಸರಿತ್ಸಾಗರದಲ್ಲಿ ಸಂಕ್ಷಿಪ್ತವಾಗಿಯೂ ಉಲ್ಲೇಖಿತವಾಗಿದೆ.
ಸುಂದ ಮತ್ತು ಉಪಸುಂದ ಎಂಬ ಎರಡು ರಾಕ್ಷಸ ಸಹೋದರರ ಪರಾಕ್ರಮ ಮತ್ತು ಶೌರ್ಯಕ್ಕೆ ಸಮಾನರಾದವರು ಮೂರು ಲೋಕಗಳಲ್ಲೇ ಯಾರೂ ಇರಲಿಲ್ಲ. ಅವರನ್ನು ನಾಶ ಪಡಿಸುವ ಸಲುವಾಗಿ ಬ್ರಹ್ಮನು ವಿಶ್ವಕರ್ಮನ ಮೂಲಕ ತಿಲೋತ್ತಮೆ ಎಂಬ ಅಪ್ಸರೆಯನ್ನು ಸೃಷ್ಟಿಸಿದನು. ಆಕೆ ಅಪ್ರತಿಮ ಸುಂದರಿ. ಅವಳು ಶಿವನನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡುತ್ತಿದ್ದಾಗ ಅವಳನ್ನು ಸದಾ ನೋಡಬೇಕೆಂದಿದ್ದ ಶಿವನಿಗೂ ನಾಲ್ಕು ಮುಖಗಳಾದುವಂತೆ! ಸುಂದೋಪಸುಂದರನ್ನು ಮರುಳುಗೊಳಿಸುವ ಸಲುವಾಗಿ ಬ್ರಹ್ಮನು ತಿಲೋತ್ತಮೆಯನ್ನು ಅವರಿದ್ದ ಕೈಲಾಸಪರ್ವತದ ವನಕ್ಕೆ ಕಳುಹಿಸಿದನು. ಆಕೆಯನ್ನು ನೋಡಿದ ಕೂಡಲೇ ರಾಕ್ಷಸರಿಬ್ಬರೂ ಮೋಹಿತರಾಗಿ ಅವಳ ಒಂದೊಂದು ಕೈಯನ್ನೂ ಒಬ್ಬೊಬ್ಬನು ಹಿಡಿದುಕೊಂಡು ತಮ್ಮ-ತಮ್ಮ ಕಡೆ ಎಳೆಯಲು ಪ್ರಾರಂಭಿಸಿದರು. ಪರಿಣಾಮವಾಗಿ ಇಬ್ಬರೂ ಒಬ್ಬರನ್ನೊಬ್ಬರು ಹೊಡೆದುಕೊಂಡು ನಾಶವಾದರು.
ಇದರ ತಾತ್ಪರ್ಯ, ಇಬ್ಬರು ಸಮಾನ ಬಲಶಾಲಿಗಳಲ್ಲಿ ಕಲಹವಾದರೆ, ಇಬ್ಬರ ನಾಶವೂ ಆಗುವುದು ಖಂಡಿತ. ಅಣ್ಣ-ತಮ್ಮಂದಿರ ನಡುವೆ ಯಾವುದೋ ಆಸ್ತಿ-ಪಾಸ್ತಿಯ ವಿಚಾರದಲ್ಲಿ ಜಗಳವಾಗಿ, ಇಬ್ಬರೂ ಕೋರ್ಟು ಮೆಟ್ಟಲುಗಳನ್ನು ಹತ್ತಿ ಎಲ್ಲವನ್ನೂ ಕಳೆದುಕೊಂಡಿರುವುದನ್ನು ಅನೇಕರು ಕಂಡಿದ್ದಾರೆ, ಕೇಳಿದ್ದಾರೆ. ಅಮೆರಿಕಾಗೂ, ರಷ್ಯಾಗೂ ಯುದ್ಧವಾದರೆ, ಪರಿಣಾಮ ಏನಾಗಬಹುದು ಎಂಬುದನ್ನು ನೀವೇ ಊಹಿಸಿ.

9.             ಸ್ಥಾಲೀಪುಲಾಕ ನ್ಯಾಯ. ಪಾತ್ರೆಯಲ್ಲಿನ ಅಗುಳಿನಂತೆ. ಅಕ್ಕಿಯನ್ನು ಕುದಿಸಿ, ಅನ್ನ ಮಾಡಿದ ಮೇಲೆ, ಅದು ಸರಿಯಾಗಿ ಬೆಂದಿದೆಯೋ, ಇಲ್ಲವೋ ಎಂದು ತಿಳಿಯಲು ಪ್ರತಿ ಅಗುಳನ್ನೂ ಹಿಸುಕಿ ನೋಡಬೇಕಾಗಿಲ್ಲ – ಒಂದೆರಡನ್ನು ಪರೀಕ್ಷಿಸಿದರೆ ಸಾಕು. ಸಂಖ್ಯಾಶಾಸ್ತ್ರದ (statistics) ಮೂಲ ತತ್ತ್ವಗಳಲ್ಲಿ ಇದು ಒಂದು ಮುಖ್ಯವಾದ ಅಂಶ. Gallup Poll ಮುಂತಾದ ಜನಾಭಿಪ್ರಾಯ ಸಂಗ್ರಹಣೆಗಳೂ ಈ ನ್ಯಾಯವನ್ನೇ ಅವಲಂಬಿಸಿವೆ.

ಈ ಕಿರುಲೇಖನವು ತಮಗೂ ಇಷ್ಟವಾಯಿತೆಂದು ನಂಬುತ್ತೇನೆ. ಇದರಲ್ಲಿನ ತಪ್ಪು-ಒಪ್ಪುಗಳನ್ನು ಹಂಸಕ್ಷೀರ ನ್ಯಾಯದಂತೆ ಪರಿಗಣಿಸಬೇಕೆಂದು ನನ್ನ ಬೇಡಿಕೆ.

Comments

  1. ಡಾ ಮಧುಸೂದನ ಧನ್ಯವಾದಗಳು ಸೊಗಸಾದ ಲೇಖನ ಕೊಟ್ಟಿದ್ದೀರಿ,
    ಒಂಭತ್ತು ಉದಾಹರಣೆಯ ನ್ಯಾಯಗಳೂ ಲೇಖನಕ್ಕೆ ಪುಷ್ಟಿ ಕೊಟ್ಟಿದೆ. ಸರಳವಾಗಿದೆ ಹಾಗೂ ನಿಜ ಜೀವನಕ್ಕೆ ಅಳವಡಿಸಬಹುದಾದ ಸುಲಭ ಉಪಾಯಗಳು ಎನ್ನಬಹುದು. ಈ ಥರದ ಸಣ್ಣ ಪುಟ್ಟ ವಿಚಾರಗಳು ಬೇಗ ಮನ ಮುಟ್ಟುತ್ತವೆ.

    ReplyDelete
  2. Very simple and meaningful information. Thanks for publishing these kind of special article. I personally liked all the justice (Nyaaya) bit ವೃದ್ಧಕುಮಾರೀವಾಕ್ಯ ನ್ಯಾಯ was the best smart way of asking the boon from Indra.

    ReplyDelete

Post a Comment