ಮರೆಯಲಾಗದ ಮೈಸೂರು ಭಾಗ 3



ಮರೆಯಲಾಗದ ಮೈಸೂರು ಭಾಗ 3
ಪ್ರವಾಸ ಲೇಖನ - ಕನಕಾಪುರ ನಾರಾಯಣ 

ಹಿಂದಿನ ಭಾಗದಲ್ಲಿ ….....

ಸಿಡ್ನಿಯಿಂದ ಬೆಂಗಳೂರಿಗೆ ಅಮ್ಮನನ್ನು ನೋಡಲು ಹೋಗಿದ್ದಾಗ  ಬಿಡುವು ಮಾಡಿಕೊಂಡು ಮೈಸೂರಿಗೆ ಭೇಟಿನೀಡಿದ ಪ್ರವಾಸ ಅನುಭವದ ಮೊದಲ ಅರ್ಧ ದಿನ ಶ್ರೀ ಹರ್ಷ ಅವರ ಮನೆ,ಶ್ರೀನಿವಾಸ ಪುಟ್ಟಿಯವರ ಕಲಾ ಪ್ರದರ್ಶನದ ಮನೆ, ವಾಸುದೇವಾಚಾರ್ಯರ ಮನೆ, ಬಿಡಾರಂ ಕೃಷ್ಣಪ್ಪನವರ ರಾಮಮಂದಿರ ಇಷ್ಟೆಲ್ಲಾ ನೋಡಿ, ಸಂಜೆ ಕಳಲೆ, ಹೆಮ್ಮರಗಾಲ, ಹೆಡತಲೆ ದೇವಸ್ಥಾನದ ಶಿಲ್ಪಕಲೆ ಕಂಡು ಮರುದಿನ ಕಾಮ ಕಾಮೇಶ್ವರಿ ದೇವಸ್ಥಾನದ  ಅದ್ಭುತ ಶಿಲ್ಪಕಲೆ ವೀಕ್ಷಿಸಿ ಖ್ಯಾತ ಸಾಹಿತಿ ಕೆ ಎಸ್  ನರಸಿಂಹ ಸ್ವಾಮಿಯವರ  ಮನೆಯನ್ನು ಅರಸಿ ಕಿಕ್ಕೇರಿ ಕಡೆ  ಪ್ರಯಾಣ ಬಳಸಿದೆವು..........

ಸಾಲು ಮರಗಳ ರಸ್ತೆ 

                                  ದಾರಿಯ ಎಡಬಲಕ್ಕೆ ಕಬ್ಬಿನ  ಗದ್ದೆಗಳು, ಸ್ವಚ್ಛವಾದ  ರಸ್ತೆ, ಅಲ್ಲಲ್ಲಿ ಎಳನೀರು ಕುಡಿಯುತ್ತಾ, ಬಿಡಿಸಿಟ್ಟ ಹಲಸಿನ ತೊಳೆ ಕೈಲಿಟ್ಟುಕೊಂಡು ತಿನ್ನುತ್ತಾ    ಮೈಸೂರು - ಅರಸೀಕೆರೆ ರಸ್ತೆಯಲ್ಲಿ "ಚಿನಕುರುಳಿ" ಎಂಬ ಊರಿನ ಮಾರ್ಗವಾಗಿ ಕೆ ಆರ್ ಪೇಟೆಗೆ ತಲುಪಿದೆವು. ಮಧ್ಯಾನ್ಹ ಒಂದು ಘಂಟೆ ಸಮಯ ಆಗಿರಬಹುದು.  ಮುಂದಿನ ಊರಿನಲ್ಲಿ ಒಳ್ಳೆಯ ಊಟ ಸಿಗುವ ಲಕ್ಷಣಗಳು ಇಲ್ಲವಾದುದರಿಂದ ಕೆ ಆರ್ ಪೇಟೆಯಲ್ಲೇ ರಾಮದಾಸ್ ಹೋಟೆಲಿನಲ್ಲಿ ಊಟ ಮಾಡಲು ಹೋದೆವು. ಯಾರೂ ತಿಳಿಯದ ಊರಿನಲ್ಲಿ ಶ್ರೀಹರ್ಷ ಅವರೊಡನೆ ಮಾತಾಡುತ್ತಾ ಹಾಯಾಗಿ ಕುಳಿತು ಊಟ ಮಾಡಬಹುದು ಎಂದು ಅಂದುಕೊಂಡು ಕೈತೊಳೆದು ಕುಳಿತೆವು. ಶ್ರೀಹರ್ಷರವರೇ ಉತ್ತರಭಾರತ ಶೈಲಿಯ ಊಟ ಆರ್ಡರ್ ಮಾಡಿದರು. ಊಟ ಮುಗಿಯುವ ಹೊತ್ತಿಗೆ ಸಾಕಷ್ಟು ಜನ ಶ್ರೀಹರ್ಷ ಅವರೊಡನೆ  ಸೆಲ್ಫಿ ತೆಗೆಸಿಕೊಳ್ಳಲು ಸಾಲಾಗಿ ನಿಂತಿದ್ದರು. ನಾನಿನ್ನೂ ಊಟ ಮುಗಿಸಿರಲಿಲ್ಲ ಅಷ್ಟರಲ್ಲಿ ಅವರ ಅಭಿಮಾನಿಗಳು  ಹೋಟೆಲ್ ಒಳಗೆ ಬೆಳಕು ಕಡಿಮೆಯಾದ್ದರಿಂದ ಶ್ರೀಹರ್ಷ ಅವರನ್ನು ಹೊರಗೇ  ಕರೆದು ಗುಂಪಾಗಿ ನಿಂತು ನಂತರ ಒಬ್ಬೊಬ್ಬರೇ ಸೆಲ್ಫಿ ತೆಗೆದುಕೊಳ್ಳಲು ಶುರು ಮಾಡಿದರು. ಅದಾದ ನಂತರ ಸಧ್ಯ ಮುಗೀತಲ್ಲಪ್ಪಾ ಅಂದುಕೊಂಡರೆ ಹೋಟೆಲ್ ನೌಕರರು ತಮ್ಮ ಸಮವಸ್ತ್ರ (ಕೋಟು) ತೆಗೆದು ಸೆಲ್ಫಿ ಹಾಗು ಸಮೂಹ  ಫೋಟೋ ತೆಗೆಸಿಕೊಂಡರು. ಕಾರಿನಲ್ಲಿ ವಾಪಸ್ ಬಂದು ಕೂಡುವವರೆಗೂ ಬಾಯ್  ಹೇಳಲು ಬರುವವರು ಕೆಲವರಾದರೆ ಕಾರ್ ಬಾಗಿಲು ತೆರೆದು ನಾವು ಕುಳಿತ ನಂತರ ಬಾಗಿಲು ಮುಚ್ಚುವವರು ಕೆಲವರು.ಅಬ್ಬಬ್ಬಾ ಕಲೆ ಮತ್ತು ಕಲಾವಿದರಿಗೆ ಎಷ್ಟು ಅಭಿಮಾನ ! 

                                     ಅಷ್ಟೇನೂ ದೂರವಲ್ಲದ ಹೊಸಹೊಳಲು ಎಂಬ ಊರಿಗೆ ಸುಡು ಬಿಸಿಲಿನ ಮಧ್ಯಾನ್ಹ ಬಂದು ತಲುಪಿದೆವು. ದೇವಸ್ಥಾನದ ಬಾಗಿಲು ಮುಚ್ಚಿತ್ತು. ಶ್ರೀಹರ್ಷ ಅಲ್ಲಿನ ಅರ್ಚಕರ ಮನೆಗೆ ಫೋನ್ ಮಾಡಿ ಬರಹೇಳಿದರು. ಹತ್ತೇ ನಿಮಿಷದಲ್ಲಿ ಅರ್ಚಕರು ಹಾಜರ್! ಇನ್ನೂ ಕೆಲವರು ದೇವಸ್ಥಾನದ ಜಗಲಿಯಲ್ಲಿ ದರ್ಶನಕ್ಕಾಗಿ  ಕಾಯುತ್ತಿದ್ದವರಿಗೂ ಸಂತೋಷವಾಯಿತು.

ಹೊಸ ಹೊಳಲು ದೇವಾಲಯ 


ಹೊಸ ಹೊಳಲು ದೇವಾಲಯ 
ಬೆರಳು ಗಾತ್ರದ  ಹನುಮ
                                       






ಹೊಸಹೊಳಲು ಎಂಬ ಊರು ದೇವಸ್ಥಾನಕ್ಕೆ ಖ್ಯಾತಿಯಾದರೂ ಶಿಲ್ಪಕಲೆಯಲ್ಲಿ ಅತಿಹೆಚ್ಚು ಆಕರ್ಷಣೀಯ ಸ್ಥಳ. ಹಚ್ಚ ಹಸಿರು ಹುಲ್ಲಿನ ಹೊರಾಂಗಣ ಬಹಳ ಸರಳವಾದ ದ್ವಾರವುಳ್ಳ ದೇಗುಲ ಒಳಗೆ ಭವ್ಯವಾಗಿದೆ. ಇದು  ಹೊಯ್ಸಳ ವಾಸ್ತು ಶೈಲಿಯ ಮತ್ತೊಂದು ಅದ್ಭುತ ತ್ರಿಕೂಟಾಚಲ ದೇಗುಲ. ಗಂಗ-ಚೋಳರ ಆಳ್ವಿಕೆಯಲ್ಲಿದ್ದ ಊರು ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ದೇವಾಲಯದಿಂದ ಪ್ರಸಿದ್ಧಿಯಾಯಿತು. ನಕ್ಷತ್ರಾಕಾರದ  ತಳವಿನ್ಯಾಸವಿರುವ ಒಳಾಂಗಣದಲ್ಲಿ ಮೂರುಗರ್ಭಗುಡಿಗೆ ಸೇರಿದಂತೆ ಒಂದು ನವರಂಗವಿದೆ. ನವರಂಗದ ಪೂರ್ವಭಾಗಕ್ಕೆ ಭದ್ರಮಂಟಪ ಇದೆ. ನವರಂಗದ ಕಂಬಗಳು ನುಣುಪಾಗಿದ್ದು ಸುಂದರ ಸೂಕ್ಷ್ಮ ಕೆತ್ತನೆ ಇದೆ. ಗೋಪಾಲಕೃಷ್ಣ ಹಾಗೂ ನರಸಿಂಹ ದೇವರ ಗುಡಿಗಳೂ ಸೇರಿ ಇದು ತ್ರಿಕೂಟಾಚಲ ದೇವಾಲಯವಾಗಿದೆ. ಮುಖ್ಯ ದೇಗುಲದ ಗರ್ಭಗುಡಿಯ ಎಡ  ಮತ್ತು ಬಲಭಾಗದಲ್ಲಿ ಅಪರೂಪದ ಎರಡು ಎರಡಡಿ ಎತ್ತರದ ವಿಗ್ರಹಗಳಿವೆ. ಬಲಕ್ಕೆ ಬಾಲಗಣಪತಿ ಮತ್ತು ಎಡಕ್ಕೆ ಚಾಮುಂಡಿಯ ವಿಗ್ರಹವಿದೆ. ದೇವರ ವಿಗ್ರಹ ಬಹಳ ವಿರಳ. 
ಬಾಲ ಗಣಪ


                                          ಹೊರಭಾಗದಲ್ಲಿ  ಎರಡಂತಸ್ತಿನ ಎತ್ತರದ  ಹತ್ತು ಕೋಷ್ಠಕಗಳಿದ್ದು ಹೊರನೋಟಕ್ಕೆ  ಭವ್ಯತೆ ತೋರುತ್ತದೆ. ಅಧಿಷ್ಠಾನದ  ಭಿತ್ತಿಗಳಲ್ಲಿ ಆನೆ, ಕುದುರೆ, ಹೂಬಳ್ಳಿ ,ನವಿಲು, ಪೌರಾಣಿಕ ಕಥಾಶಿಲ್ಪ, ಮಕರ ಮತ್ತು ಹಂಸಗಳ ಸಾಲಿನ ಪಟ್ಟಿಗಳಿವೆ.  ಪೌರಾಣಿಕ ಕಥಾಶಿಲ್ಪ ಪಟ್ಟಿಯಲ್ಲಿ ರಾಮಾಯಣ, ಮಹಾಭಾರತ, ಭಾಗವತ, ನರಸಿಂಹಾವತಾರ ಮುಂತಾದ ಘಟನಾವಳಿಗಳಿವೆ. ಭಿತ್ತಿಯ ಮೇಲ್ಭಾಗದಲ್ಲಿ ದೇವತೆಗಳು, ನೃತ್ಯ, ಸಂಗೀತ ವಾದ್ಯ ಪಟುಗಳು ವಿಭಿನ್ನ ಭಂಗಿಗಳಲ್ಲಿ ಇವೆ. ಯೋಗಮಾಧವ, ಧನ್ವಂತರಿ, ನೃತ್ಯ ಸರಸ್ವತಿ, ಕಾಳಿಂಗ ಮರ್ಧನ, ಪರವಾಸುದೇವ ವಿಗ್ರಹಗಳ ಸೂಕ್ಷ್ಮ ಕೆತ್ತನೆ ಅದ್ಭುತವಾಗಿದೆ.ಇಲ್ಲಿನ ಶಿಲ್ಪಕಲೆ  ಭಾಗಶಃ ಹಾಳಾಗದೆ ರಕ್ಷಿಸಲ್ಪಟ್ಟಿದೆ. ಇಷ್ಟಾಗಿ ಇದರ ಕರ್ತೃ, ಕಾಲ, ಶಿಲ್ಪಿ ಇವುಗಳಿಗೆ ಸಂಪೂರ್ಣ ಮಾಹಿತಿ ದೊರೆತಿಲ್ಲ. ಹಿಂದೆ ಊರಿನ ಸುತ್ತಲೂ ಭದ್ರ ಕೋಟೆ ಇತ್ತು ಎನ್ನುವ ಮಾತೂ ಇದೆ. ವಾಸ್ತವದಲ್ಲಿ ಇಲ್ಲಿನ ಮನೆಗಳನ್ನು ಕಟ್ಟಿರುವ ಶೈಲಿ ವಿಭಿನ್ನವಾಗಿವೆ.

ಎರಡಂತಸ್ತಿನ ಮನೆಗಳು

ಎಲ್ಲಿ ನೋಡಿದರೂ ಎರಡಂತಸ್ತಿನ ಜಗಲಿ ಮನೆಗಳು. ಊರಿಗೆ ಊರೇ ಬೇರೆ ಕಡೆಗೆ ಹೋಲಿಸಿದರೆ ಹೊಸನೋಟ ಅನಿಸುತ್ತದೆ. 
ಚಾಮುಂಡಿ ವಿಗ್ರಹ 











  ಬಿಸಿಲು ಹೆಚ್ಚಿದ್ದರಿಂದ ಕಾಲಿಡಲು ನೆಲ ಸುಡುತ್ತಿದ್ದ ಕಾರಣ ಹೊರಗೆ ಎಲ್ಲಾ ಕಲಾಕೃತಿಗಳನ್ನು ನಮಗೆ ಕೂಲಂಕುಶವಾಗಿ ನೋಡಲು ಆಗಲಿಲ್ಲ ಎನ್ನುವ ಬೇಸರ ಬಿಟ್ಟರೆ ಬೇಲೂರು,ಜಾವಗಲ್, ನುಗ್ಗೇಹಳ್ಳಿ, ಹಳೇಬೀಡಿನಷ್ಟೇ ಸುಂದರ ಕೆತ್ತನೆ ಇಲ್ಲಿ ಕಾಣಬಹುದು. 

 ಮುಖ್ಯ ದ್ವಾರದಬಳಿ ಕಲ್ಲಿನ ಜಗಲಿಯಮೇಲೆ ಸ್ಥಳೀಯ ಜನರು ಅಥವಾ ಮಕ್ಕಳು  ಅಳಗೂಳಿಮಣೆ (ಹಳ್ಳಗುಳಿ) ಆಟಕ್ಕೆ ಕಲ್ಲಿನಲ್ಲೇ ಗುಣಿಗಳನ್ನು ತೋಡಿಬಿಟ್ಟಿದ್ದಾರೆ.ಬಹುಶಃ ಹಿಂದೆ ಸರ್ಕಾರದ ಕಾವಲು ಇಲ್ಲದ ಕಾಲದಲ್ಲಿ ಇದು ಆಗಿರಬಹುದು. ಅಥವಾ ಕಾಲಹರಣ ಮಾಡಲು ತಂಪಾದ ದೇಗುಲ ಅವಕಾಶ ಮಾಡಿಕೊಟ್ಟಿತ್ತು ಅನಿಸುತ್ತದೆ.


ಹೊಸಹೊಳಲು ಹೊರಾಂಗಣ ಕೆತ್ತನೆ
ಹೊಸಹೊಳಲಿನಿಂದ ನೇರವಾಗಿ ಕಿಕ್ಕೇರಿಯ ಕಡೆ ಪ್ರಯಾಣ ಬಳಸಿದೆವು. ಸುಮಾರು ೨೦-೨೨ ಕಿಮೀ ಪ್ರಯಾಣ. ಮತ್ತೆ ಸಾಲು ಮರಗಳ ನೆರಳಿನಲ್ಲಿ ಪ್ರಯಾಣ, ರಸ್ತೆಬದಿಯಲ್ಲಿ ತಲೆಯ ಮೇಲೆ ಹುಲ್ಲಿನ ಹೊರೆಹೊತ್ತ ಹಳ್ಳಿಯ ಜನ, ಹಳೆಯ ನೆನಪು ಮರುಕಳಿಸಿದಂತೆ ಅಲ್ಲಲ್ಲಿ ಎತ್ತಿನಗಾಡಿಗಳು, ಯಥೇಚ್ಛವಾಗಿ ಕಾಣುವ ಗುಬ್ಬಚ್ಚಿ ಗುಂಪುಗಳು. ಮತ್ತೊಮ್ಮೆ ನನಗೆ ಬಾಲ್ಯದ ನೆನೆಪು ಹರಿದು ಬರುತ್ತಿತ್ತು.ಬಾಲ್ಯದಲ್ಲಿ ನನ್ನ ತಾಯಿಯ ಊರಿಗೆ ಹೋದಾಗ ಸಂಜೆಯ ವೇಳೆ  ತಾತನ ಜೊತೆ ದೇವಸ್ಥಾನಕ್ಕೆ ಅವರ ದೊಡ್ಡ ದೊಡ್ಡ ಕೈ ಬೇರಳು  ಹಿಡಿದು ನಡೆದು ಹೋಗುತ್ತಿದ್ದಾಗ ಅವರು ಹೇಳುತ್ತಿದ್ದ ಸಣ್ಣ ಸಣ್ಣ ನೀತಿ ಕಥೆಗಳು, ಪುರಾಣದ ಕಥೆಗಳು,ನಾವುಗಳು ತುಂಟತನದಿ ಚಲಿಸುತ್ತಿರುವ ಎತ್ತಿನ ಗಾಡಿಯ ಹಿಂದೆ ಓಡುತ್ತಾ ಅದರ ಹಿಂದೆ ಜೋತು ಬಿದ್ದು ಸ್ವಲ್ಪದೂರ ಹೋಗಿ ತಾತನ ಕೈಲಿ ಬೈಸಿಕೊಂಡಿದ್ದು, ಕುಂಡಿಯಮೇಲೆ ಲಾತ ಬಿದ್ದದ್ದು ಎಲ್ಲವೂ ನೆನಪಿಗೆ ಬಂದು ಸಂತೋಷಕ್ಕೆ ಈಗ ಕಣ್ಣು ತುಂಬಿ ಬರುತ್ತಿತ್ತು. ಸವಿ ನೆನಪುಗಳು ಎಂದಿಗೂ ಮರೆಯಲಾಗದು ಆದರೆ ಅವೆಲ್ಲಾ ಮತ್ತೆ ನೋಡಿದ  ಅನುಭವ ಈಗ ಆಯಿತು.

ಕಿಕ್ಕೇರಿಗೆ ಬಂದ ಮುಖ್ಯ ಉದ್ದೇಶ ಖ್ಯಾತ ಕವಿ  ಕೆ ಎಸ್  ನರಸಿಂಹ ಸ್ವಾಮಿಯವರು ಹುಟ್ಟಿ ಬೆಳೆದ ಮನೆಯನ್ನು ನೋಡಲು. ಅವರ ಮೈಸೂರು ಮಲ್ಲಿಗೆ ಹಾಡುಗಳು ಕೇಳದವರಿಲ್ಲ ಬಿಡಿ. ಮದುವೆಯಾದ ಹೊಸತರಲ್ಲಿ ಅವುಗಳು ನಮಗೇ ಬರೆದಿದ್ದಾರೇನೋ ಎನ್ನುವ ರೀತಿ  ಇವೆ. ಉಂಗುರ, ಐರಾವತ, ಮನೆಯಿಂದ ಮನೆಗೆ, ದೀಪದ ಮಲ್ಲಿ, ದೀಪದ ಸಾಲಿನ ನಡುವೆ,ಇರುವಂತಿಕೆ, ತೆರೆದ ಬಾಗಿಲು, ಮಲ್ಲಿಗೆಯ ಮಾಲೆ, ಎದೆ ತುಂಬ ನಕ್ಷತ್ರ, ಹಾಡು ಹಸೆ, ಇಕ್ಕಳ ಇನ್ನೂ ಅನೇಕ ಕವನ ಸಂಕಲನಗಳು ಇವರಿಂದ ರಚಿಸಲ್ಪಟ್ಟಿದ್ದು ಕೆಲವು ಪುಸ್ತಕ, ಇನ್ಕೆಲವು ಧ್ವನಿಸುರಳಿಯಲ್ಲಿ ಓದಿದ ಕೇಳಿದ ಅನುಭವವಿದ್ದರೂ "ಮೈಸೂರು ಮಲ್ಲಿಗೆ" ಮಾತ್ರ ಬಹಳ ಜನಪ್ರಿಯ. ಇತ್ತೀಚಿಗೆ ರಂಗಶಂಕರದಲ್ಲಿ ಮುಖ್ಯಮಂತ್ರಿ ಚಂದ್ರು ಅವರ ಆಹ್ವಾನದ ಮೇರೆಗೆ ರಾಜಾರಾಮ್ ನಿರ್ದೇಶನದಲ್ಲಿ ಮೈಸೂರು ಮಲ್ಲಿಗೆ ಕವನಗಳನ್ನು ಆಧಾರಿಸಿ ನಾಟಕ ನೋಡಿದಾಗ ಮತ್ತಷ್ಟು ಅಭಿಮಾನ ಅನಿಸಿತು.ಟಿ ಎಸ್ ನಾಗಾಭರಣ ಚಲನ ಚಿತ್ರವನ್ನಾಗಿ ಚಿತ್ರಿಸಿ ಮತ್ತಷ್ಟು ಮೆರಗು ಕೊಟ್ಟಿದ್ದರು. ನಾನು ಭಾರತ ಬಿಟ್ಟು ಬರುವ ಮೊದಲು  ೧೯೯೧ರಲ್ಲಿ ಅವರು ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರನ್ನು ಭೇಟಿಮಾಡಿದ್ದ ನೆನೆಪು ಇನ್ನೂ ಅಚ್ಚಳಿಯದೆ ಮನಸ್ಸಿನಲ್ಲಿತ್ತು.
ಕೆ ಎಸ ನ ಅವರು ಹುಟ್ಟಿ ಬೆಳೆದ ಮನೆ

ಅವೆಲ್ಲಾ ನೆನೆಯುತ್ತಾ ಕಿಕ್ಕೇರಿಯಲ್ಲಿ ಕೆಲವರನ್ನು ವಿಚಾರಿಸಿ ಕೆ ಎಸ್ ಅವರ ಮನೆ ಹುಡುಕಿದೆವು. ಹಳೇ  ಅಂಚೆ ಕಚೇರಿಯ ಎದುರಿಗೆ ಪುಟ್ಟ  ಹೆಂಚಿನ ಮನೆ ಕಂಡು ಅರೆ! ಕವಿಗಳ ಮನೆ ಬಂದೇ ಬಿಟ್ಟಿತು ಎಂದು  ಭಾವುಕತೆಯಿಂದ ನೋಡುತ್ತಿರಲು ಮನೆಯಲ್ಲಿದ್ದವರು "ಬನ್ನಿ ಸಾಮಿ, ಪರವಾಗಿಲ್ಲ ಒಳೀಕ್ ಬರ್ಬೋದು, ಅವಾಗವಾಗ ಜನ ಕೇಳ್ಕೊಂಡ್ ಬರ್ತಿರ್ತಾರೆ" ಎಂದರು. ಪುಟ್ಟ ಬಾಗಿಲುಗಳುಳ್ಳ ಮನೆಯೊಳಗೆ ತಲೆ ತಗ್ಗಿಸಿ ಒಳಗೆ ಹೋಗಿ (ಎರಡು ಕಾರಣಕ್ಕೆ -ಕವಿಗಳ ಮೇಲಿನ ಅಭಿಮಾನ, - ನಾಲ್ಕೇ ಅಡಿಯ ಬಾಗಿಲುಗಳು ಅವು) ಮನೆತುಂಬಾ ಕಣ್ಣಾಡಿಸಿ, ಬಾಗಿಲು ಗೋಡೆಗಳನ್ನು ಒಮ್ಮೆ ಸವರಿ ಕೈಗೆಟಕುವ ಹೆಂಚು, ಮರದ ದಿಮ್ಮಿಗಳನ್ನು ಅವರೂ ಮುಟ್ಟಿರಬಹುದು ಎನ್ನುವ ಅನಿಸಿಕೆಯಿಂದ ನಾವೂ ಮುಟ್ಟಿ ಹೊರಗೆ ಜಗಲಿಯ ಮೇಲೆ ಕೆಲಕ್ಷಣ ಕುಳಿತು ಹೊರಟೆವು.  ತಮಾಷೆಯೇನೆಂದರೆ ಮನೆಯಲ್ಲಿ ವಾಸವಿದ್ದ ಒಬ್ಬ ಹುಡುಗಿಗೆ ಆಕೆಯ ಪಾಠದಲ್ಲಿ ಕವಿಗಳ ಪದ್ಯವಿದೆ ಎಂದು ಹೇಳಿದಳು. ಯಾವುದು? ಎಂದು ಕುತೂಹಲದಿಂದ ಕೇಳಲು "ಮಾವನು ಬಂದನು ರಾಯರ ಮನೆಗೆ" ಎಂದಳು, ಛೆ !ಪಾಪ ಅನ್ನಿಸಿತು.  ನಂತರ ಅದನ್ನು ತಿದ್ದಿದೆವು ಅಂತಿಟ್ಕೊಳ್ಳಿ.

                                             ಸಂಜೆ ಹಿಂತಿರುಗಿ ಮೈಸೂರು ಕಡೆಗೆ ಪ್ರಯಾಣ.  "ಹಳ್ಳಿದಾರಿಯಲ್ಲಿ ತಂಪು ಬೀದಿಯಲ್ಲಿ" ಎಂಬ  ಹಾಡನ್ನು ಶ್ರೀ ಹರ್ಷ ಹಾಯಾಗಿ  ಹಾಡುತ್ತಾ ಹೊರಟಿರಲು, ನನಗೆ ಮಾತ್ರ ಎರಡುದಿನಗಳು ಎಷ್ಟುಬೇಗ ಕಳೆದು ಹೋಯಿತೇ ಎನ್ನುವ ಕೊರಗು ಕಾಡಿತ್ತು.ವಿವಿಧ ಬಗೆಯ ಸಂಗೀತ, ಸಾಹಿತ್ಯ, ವೇದ ಅನೇಕ ವಿಷಯಗಳ ಬಗ್ಗೆ ಅಪಾರವಾದ ಜ್ಞಾನವುಳ್ಳ  ಶ್ರೀಹರ್ಷ ಅವರೊಡನೆ ಕಳೆದ ಕ್ಷಣಗಳು  "ಮರೆಯಲಾಗದ ಮೈಸೂರು" ತೃತೀಯ ಅಧ್ಯಾಯ ಇಲ್ಲಿಗೆ ಸಂಪೂರ್ಣವಾಯಿತು ಎಂದು ಹೇಳಲು ಸಂತೋಷ ದುಃಖ ಎರಡೂ ಆಗುತ್ತದೆ. ಮತ್ತೊಮ್ಮೆ ಅನುಕೂಲವಾದಾಗ ಸಲ ನೋಡಲಾಗದ, ಮರೆತಿದ್ದ ಮೈಸೂರಿನ ತಾಣಗಳನ್ನು ಮುಂದೊಮ್ಮೆ ನೋಡುವ ಆಸೆ ಇದೆ.

                                        ಮೈಸೂರಿನ ಬಸ್ ನಿಲ್ದಾಣ ತಲುಪಿ ಶ್ರೀಹರ್ಷ ಅವರಿಗೆ ಹೃತ್ಪೂರ್ವಕ ಧನ್ಯವಾದ ವಿದಾಯ ಹೇಳಿದೆ. ಯಾರ್ರೀ ಬೆಂಗ್ಳುರ್ , ಯಾರ್ರೀ ಬೆಂಗ್ಳುರ್  ಎಂದು ಕೂಗುತ್ತಿದ್ದ ನಿಲ್ದಾಣದಲ್ಲಿ ಪ್ರತಿ ಐದು-ಹತ್ತು ನಿಮಿಷಕ್ಕೊಮ್ಮೆ ಬೆಂಗಳೂರಿಗೆ ಬಸ್ ಹೋರಾಡಲು ಸಿದ್ಧವಾಗಿದ್ದವು. ಮತ್ತೆ ಐರಾವತ ಏರಿ ಸವಿನೆನಪುಗಳ ಮೆಲಕುಹಾಕುತ್ತಾ ರಾತ್ರಿ ಮನೆ ಸೇರಿದೆ.  

Comments

  1. ಹೆಬ್ಬೆಟ್ಟಿನಷ್ಟು ಹಗಲವಿರುವ ಎಳನೀರು ಕುಡಿಯುತ್ತಿರುವ ಆಂಜನೇಯನನ್ನು ನೋಡಿದಿರಲ್ಲ. ಹೇಗೆ ಅನ್ನಿಸಿತು?

    ReplyDelete
  2. ಹೊಸ ಹೊಳಲಿನಲ್ಲಿ ಒಳಗೂ ಹೊರಗೂ ಎಲ್ಲಾ ಕೆತ್ತನೆ ಚೆನ್ನ. ಬೆರಳು ಗಾತ್ರದ ಆಂಜನೇಯ ಕೆತ್ತಿರುವ ಹಿಂದಿನ ಕಥೆ ಅಥವಾ ವಿಚಾರ ತಮಗೆ ತಿಳಿದಿದ್ದರೆ ಹಂಚಿಕೊಳ್ಳಿ. ಹೊಯ್ಸಳರ ಶೈಲಿಯಲ್ಲಿ ಎಲ್ಲಾ ಕಡೆ ಈ ಥರದ ಕೆತ್ತನೆಗಳಿವೆ. ಹಳೇಬೀಡಿನ ದ್ವಾರಗಳಲ್ಲಿ ಇರುವ ಪಾಲಕರ ಹಾರದ ಹೆಬ್ಬೆರಳು ಗಾತ್ರದ ಟೊಳ್ಳು ಬುರುಡೆಗಳಲ್ಲಿ ಒಂದು ಕಡೆ ಕಿವಿಯಲ್ಲಿ ಬೆಂಕಿ ಕಡ್ಡಿ ತುರುಕಿದರೆ ಮತ್ತೊಂದು ಕಿವಿಯಲ್ಲಿ ಹೊರ ಬರುತ್ತದೆ.

    ReplyDelete
  3. ನಿಮ್ಮ ಮೈಸೂರು ಪ್ರವಾಸದ ಮೂರನೆಯ ವರದಿಯನ್ನೂ ತುಂಬಾ ಸ್ವಾರಸ್ಯವಾಗಿ ಬರೆದಿದ್ದೀರಿ. ಹೊಸಹೊಳಲು, ಚಿನಕುರುಳಿ ಎಂಬ ಹೆಸರುಗಳನ್ನು ಕೇಳಿದ ಮಾತ್ರವೇ ಆ ಊರುಗಳನ್ನು ನೋಡಬೇಕೆನ್ನುವ ಆಸಕ್ತಿ ಮೂಡುತ್ತದೆ. ಜತೆಗಿರುವ ಚಿತ್ರಗಳೂ ಲೇಖನಕ್ಕೆ ಒಂದು ಪರಿಪೂರ್ಣತೆಯನ್ನು ಕೊಡುತ್ತವೆ. “ಮಾವನು ಬಂದನು ರಾಯರ ಮನೆಗೆ” ಎಂದು ಆ ಹುಡುಗಿ Spoonerism ಮಾಡಿದ್ದು ಒಂದು ವಿಧದಲ್ಲಿ ಸರಿಯೇ ಎನಿಸುತ್ತದೆ – ಏಕೆಂದರೆ ಈಗಿನ ಕಾಲದಲ್ಲಿ, ಅದೂ ಹೊರಗೆ ನೆಲಸಿರುವ ಭಾರತೀಯರಲ್ಲಿ, ಮಾವನವರು ಅಳಿಯನ ಮನೆಗೆ ಬರುವುದೂ ಸಾಮಾನ್ಯವಾಗಿದೆ ಅಲ್ಲವೇ?

    ReplyDelete
    Replies
    1. ಡಾ ಮಧುಸೂಸೂದನ ಸಾರ್ ನಿಜ, ಈ ಥರದ ಹೆಸರುಗಳು ನಾಡಿನುದ್ದಕ್ಕೂ ಅಲ್ಲಲ್ಲಿ ಇವೆ, ಅಲ್ಲಿ ಸ್ಥಳೀಯರನ್ನು ವಿಚಾರಿಸಬೇಕು ಎನ್ನುವ ಕುತೂಹಲವಾಗುತ್ತದೆ. ಕೆಲವು ಹೆಸರು ಹೇಗೆ ಬಂದುವು ಅನಿಸುತ್ತದೆ. ಉದಾಹರಣೆಗೆ ಹುಲ್ಲಂಬಳ್ಳಿ ಹ್ಯಾಡ್ಯಾಳು, ಮುಡುಕುತೊರೆ, ಗುಬ್ಬಿ, ಬಿಳ್ಚೋಡು (ದಾವಣಗೆರೆ ಬಳಿ) .... ಇನ್ನೂ ಅನೇಕ. ತಾವು ಇತರ ಲೇಖನಗಳನ್ನೂ ಓದಿ ಅಭಿಪ್ರಾಯ ತಿಳಿಸುತ್ತೀರಿ, ಬರೆದವರಿಗೆ ತುಂಬಾ ಖುಷಿಯಾಗುತ್ತದೆ

      Delete
  4. ನಿಮ್ಮ ಮೈಸೂರು ಪ್ರವಾಸ ಕಥನ ಮೂರು ಕಂತುಗಳಲ್ಲಿ ತುಂಬಾ ಸೊಗಸಾಗಿ ಮೂಡಿಬಂತು. ಮುಗಿದು ಹೋಯಿತೇ ಎಂದು, ಇನ್ನೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸಿತು. ಆದರೂ ಮೂರೇ ಕಂತುಗಳಲ್ಲಿ ಸಾಕಷ್ಟು ವಿಷಯಗಳನ್ನು, ಆಸಕ್ತಿ ಮೂಡುವಂತೆ ತಿಳಿಸಿದ್ದೀರಿ. ಅಲ್ಪ ಸಮಯದ ಪ್ರವಾಸವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಂಡಿದ್ದೀರಿ.
    ಧನ್ಯವಾದಗಳು.

    ReplyDelete
    Replies
    1. ಶಿಲ್ಪಕಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರು ನಮ್ಮ ನಾಡು. ನಮ್ಮ ನಾಡು ಭಾಷೆ ಬಗ್ಗೆ ಇನ್ನಷ್ಟು ತಿಳಿಯುವ ಹಂಬಲ ನನಗೆ. ಪ್ರವಾಸ ಮಾಡುವುದು ನಿಮ್ಮನೆಂತೆಯೇ ನನಗೂ ಆಸಕ್ತಿ. ಇನ್ನುಲೇಖನ ತಾವೆಲ್ಲಾ ಬರೆಯುತ್ತಿರುವುದು ನನಗೆ ಸ್ಫೂರ್ತಿಯಾಗಿದೆ ಅಷ್ಟೇ ಧನ್ಯವಾದಗಳು ನಾಗಶೈಲ ಕುಮಾರ್ ತಮ್ಮ ಅಭಿಪ್ರಾಯಕ್ಕೆ.

      Delete
  5. Good to know so many unknown facts about these places. Fortunate to have such company too. I wish on my next visit must see all the places you have mentioned. I live in NewDelhi. Thank you

    ReplyDelete
  6. thanks for your sincere feedback. Sure if time permits there are lot of places like this. must visit.

    ReplyDelete
  7. ಚನ್ನಾಗಿದೆ ಮಾವ👏👏

    ReplyDelete
  8. ಲೇಖನ ಮುಗಿದೇ ಹೋಯಿತೇ ಅನ್ನುವ ಬೇಸರದಿಂದ ಧನ್ಯವಾದಗಳು.

    ReplyDelete
  9. ಮೂರು ಭಾಗಗಳನ್ನು ಓದಿದೆ, ಚೆಂದ ಇದೆ. ಪ್ರವಾಸ ಅನುಭವವ ಚೆಂದ ಪ್ರಸ್ತುತಪಡಿಸಿದ್ದೀರಿ. ಶಶಿ

    ReplyDelete

Post a Comment