ಮರೆಯಲಾಗದ ಮೈಸೂರು ಭಾಗ - 2


ಮರೆಯಲಾಗದ ಮೈಸೂರು ಭಾಗ 2
ಪ್ರವಾಸ ಲೇಖನ - ಕನಕಾಪುರ ನಾರಾಯಣ 

ಹಿಂದಿನ ಭಾಗದಲ್ಲಿ ….
ಕಾಮಕಾಮೇಶ್ವರಿ ದೇವಸ್ಥಾನ, ಮೈಸೂರು 
(ಸಿಡ್ನಿಯಿಂದ ಬೆಂಗಳೂರಿಗೆ ಅಮ್ಮನನ್ನು ನೋಡಲು ಹೋಗಿದ್ದಾಗ  ಬಿಡುವು ಮಾಡಿಕೊಂಡು ಮೈಸೂರಿಗೆ ಭೇಟಿನೀಡಿದ ಪ್ರವಾಸ ಅನುಭವದ ಮೊದಲ ಅರ್ಧ ದಿನ ಶ್ರೀ ಹರ್ಷ ಅವರ ಮನೆ,ಶ್ರೀನಿವಾಸ ಪುಟ್ಟಿಯವರ ಕಲಾ ಪ್ರದರ್ಶನದ ಮನೆ, ವಾಸುದೇವಾಚಾರ್ಯರ ಮನೆ, ಬಿಡಾರಂ ಕೃಷ್ಣಪ್ಪನವರ ರಾಮಮಂದಿರ ಇಷ್ಟೆಲ್ಲಾ ನೋಡಿ ಅಲ್ಲಿನ ವಿಷಯ ವಿಶೇಷತೆ ತಿಳಿದು ಮಧ್ಯಾಹ್ನದ ಊಟ ಮುಗಿಸಿ......  
ಭಾಗ 2
ಶ್ರೀ ಹರ್ಷ ಅವರ ಮನೆಯಿಂದ ನೇರ ಕಳಲೆ ಎಂಬ ಊರಿಗೆ ಹೊರಟೆವು ನಂಜನಗೂಡಿನಿಂದ ಸುಮಾರು ಏಳು ಕಿ ಮೀ ಪ್ರಯಾಣ. ಅಲ್ಲಿರುವುದೇ ದ್ರಾವಿಡ ಶೈಲಿಯ ಲಕ್ಷ್ಮಿ ಕಾಂತಸ್ವಾಮಿ ದೇವಸ್ಥಾನ. ೧೬-೧೭ ನೇ ಶತಮಾನದ ದೇವಾಲಯ ಎಂದು ಸ್ಥಳೀಯರ ಮಾತಿದೆ.  ೧೮ನೇ ಶತಮಾನದಲ್ಲಿ  ಮೈಸೂರು ರಾಜರು ಸಾಕಷ್ಟು ಖರ್ಚುಮಾಡಿ ದೇವಾಲಯವನ್ನು ಉದ್ಧರಿಸಿದ್ದರು,  ಹಾಗೂ ೧೮ನೇ ಶತಮಾನದಲ್ಲಿ ದಳವಾಯಿ ದೇವರಾಜಯ್ಯ ಕೂಡಾ ಶ್ರೀ ರಾಮನ ಸುಂದರ ಲೋಹದ  ಶಿಲೆಯನ್ನು ದಾನವಿತ್ತನು. ಈಗಲೂ ಇದು ದೇವಾಲಯದ ಆವರಣದಲ್ಲಿದೆ.  ಈ ದೇವಾಲಯ ಬಹುದೊಡ್ಡ ಆವರಣ ಹೊಂದಿದೆ.
ಕಳಲೆ
ಸಾವಿರಾರು ಜನರು ಬಂದರೂ ಆರಾಮವಾಗಿ ದರ್ಶನ ಹಾಗೂ ಎಲ್ಲರಿಗೂ ಓಡಾಡುವಷ್ಟು ಸ್ಥಳಾವಕಾಶವಿದೆ. ಆ ದಿನ ಸಂಜೆ ವೇಳೆ ನಿರ್ಜನವಾಗಿದ್ದ ದೇವಸ್ಥಾನದಲ್ಲಿ ಪುರೋಹಿತರನ್ನು ಹಲವಾರು ಪ್ರಶ್ನೆ ಕೇಳಿದ ನಮ್ಮನ್ನು  ಅಲ್ಲಿನ ಮುಜರಾಯಿ ಇಲಾಖೆಯವರು ಅನುಮಾನಾಸ್ಪದವಾಗಿ ಕಂಡು ನಾವು ಮಾತಾಡುತ್ತಿದ್ದಂತೆಯೇ ಅವರ ಮೊಬೈಲಿನಲ್ಲಿ ನಮ್ಮ ಫೋಟೋ ತೆಗೆದುಕೊಂಡರು. ಪಾಪ ಅವರ ಕೆಲಸ ದೇವಸ್ಥಾನದ ರಕ್ಷಣೆ, ಮಾಡಲಿ ಬಿಡಿ ಎಂದು ಮುಂದೆ ಹೊರಟೆವು. ಶ್ರೀಹರ್ಷ ಆ ಹಳ್ಳಿಯ ದಾರಿಯಲ್ಲಿ ಸಾಗುತ್ತಿರಲು  "ಹಳ್ಳಿ ದಾರಿಯಲ್ಲಿ ತಂಪು ಬೀದಿಯಲ್ಲಿ" ಎಂಬ ಹಾಡು ಹೇಳುತ್ತಾ ಕಾರ್ ಚಾಲನೆ ಮಾಡುತ್ತಿದ್ದರೆ ನನಗೂ ಅವರ ಜೊತೆ  ದನಿಗೂಡಿಸುವ ಸಂತೋಷ. ಅದೇ ದಾರಿಯಲ್ಲಿ ದೊಡ್ಡ ಕಾಲುವೆಯೊಂದನ್ನು ನೋಡಿದೆವು. ಬೇಸಿಗೆಯ ಕಾರಣ ಅದರಲ್ಲಿ ನೀರು ಇತ್ತೇ ಹೊರತು ಹರಿಯುತ್ತಿರಲಿಲ್ಲ. ಮುಂದೆ ಮೈಸೂರು ಊಟಿ ಹೆದ್ದಾರಿ ದಾಟಿ ಹೆಡತಲೆ ಎನ್ನುವ ಊರಿನ ಕಡೆ ಹೊರಟೆವು.
ಕಾಲುವೆ

ಹೆಡತಲೆ ೭೦೦ ವರ್ಷ ಹಳೆಯ ಹೊಯ್ಸಳ ಶೈಲಿಯ ತ್ರಿಕೂಟಾಚಲ ದೇವಾಲಯ.  ಲಕ್ಷ್ಮಿಕಾಂತ, ಲಕ್ಷ್ಮಿನರಸಿಂಹ ಮತ್ತು ಗೋಪಾಲ ಕೃಷ್ಣ ಮೂರು ಗುಡಿಗಳ ದೇಗುಲ. ಅಲ್ಲಿನ ವಿಶೇಷ ಎಂದರೆ ದೇವಸ್ಥಾನದ ಮಧ್ಯ ಭಾಗದಲ್ಲಿ ಒಂದು ಸುಂದರ ಆಂಡಾಳ್ ದೇವಿಯ ವಿಗ್ರಹ ಮತ್ತು ಹದಿನಾರು ಮುಖದ  ಚಾವಡಿ ಇದೆ. ಹಿಂದೆ ಈ ಹೆಡತಲೆ ಎಂಬ ಊರು  ಹೊಯ್ಸಳ ರಾಜರ ಸಾಮಂತ ರಾಜರಾದ ಭೀಮಣ್ಣ ದಂಡನಾಯಕ ಎಂಬ ಪಾಳೇಗಾರನ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು. ಆತನಿಗೆ ಹದಿನಾರು ಜನ ಹೆಣ್ಣು ಮಕ್ಕಳು. ಎಲ್ಲರಿಗೂ ಮದುವೆಯಾಗಿತ್ತು. ಒಡ್ಡೋಲಗದಲ್ಲಿ ಅವರೆಲ್ಲರೂ ಒಟ್ಟಿಗೆ ಕುಳಿತಿರಲು ಈ ಜಾಗವನ್ನು ನಿರ್ಮಿಸಲಾಗಿದೆ ಎನ್ನುವ ವಿಷಯ ಬಾಯಿಂದ ಬಾಯಿಗೆ ಹರಿದು ಬಂದಿರುವ ಕಥೆ. ಅಲ್ಲಿ ಮಧ್ಯಭಾಗದಲ್ಲಿ ರಾಜ ರಾಣಿಯರು ಕುಳಿತಿರಲು ಎಡಕ್ಕೆ ಎಂಟು ಕಲ್ಲಿನ ಪೀಠ ಮತ್ತು ಮತ್ತು ಬಲಕ್ಕೆ ಎಂಟು ಕಲ್ಲಿನ ಪೀಠ ಕಟ್ಟಲಾಗಿದೆ. ರಾಜ ರಾಣಿಯರು ಮಧ್ಯೆ ಕುಳಿತಾಗ, ಎಡ ಮತ್ತು ಬಲಕ್ಕೆ ಎಂಟೆಂಟು ಮಕ್ಕಳು ಅಳಿಯಂದಿರು ಕುಳಿತಾಗ  ರಾಜನಿಗೆ ತನ್ನ ಹದಿನಾರು ಅಳಿಯಂದರು ಹಾಗೂ ಹೆಣ್ಣು ಮಕ್ಕಳು ಕಾಣುತ್ತಾರೆ, ಆದರೆ ರಾಣಿಗೆ ತನ್ನ ಹದಿನಾರು ಹೆಣ್ಣು ಮಕ್ಕಳು ಮಾತ್ರ ಕಾಣುತ್ತಾರೆ. ಅಳಿಯಂದಿರು ಮಾತ್ರ ಕಂಬಗಳ ಹಿಂದೆ ಮರೆಯಾಗಿರುತ್ತಾರೆ. ಹಿಂದಿನ ಕಾಲದಲ್ಲಿ ಅತ್ತೆ ಅಳಿಯಂದಿರನ್ನು ನೇರ ನೋಡುತ್ತಿರಲಿಲ್ಲ ಎನ್ನುವುದು ಇಲ್ಲಿ ನೆನೆಯಬಹುದು. ವಿಚಿತ್ರ ಎನಿಸಿದರೂ ನಿಜವಾಗಿ ನೋಡಿದಾಗ ಆಶ್ಚರ್ಯವಾಗುತ್ತದೆ.
ಆಂಡಾಳ್ ಆರತಿಗೆ ಮುನ್ನ

ಹಾಗೇ ದೇವಸ್ಥಾನದ ಮಧ್ಯ ಭಾಗದಲ್ಲಿ ಒಂದು ಸುಂದರವಾದ ಆಂಡಾಳ್ ದೇವಿಯ ವಿಗ್ರಹದ ಬಗ್ಗೆ ಹೇಳಲೇ ಬೇಕು. ಆ ಸುಂದರ  ವಿಗ್ರಹದ ಕೆತ್ತನೆಗೆ ಬಳಸಿರುವ ಕಲ್ಲೋ ಅಥವಾ ಚಮತ್ಕಾರವೋ ತಿಳಿಯದು, ಆ ದೇವಿಯ ವಿಗ್ರಹದ ಸುತ್ತಲೂ ಕತ್ತಲು ಮಾಡಿ ಮಂಗಳಾರತಿ ತಟ್ಟೆಯನ್ನು ಮುಖದ ಬಳಿ ತಂದು  ಮೇಲಿಂದ ಕೆಳಗೆ ತರಲು ದೇವಿಯ ಅರ್ಧ ತೆರೆದ ಕಣ್ಣು ಪೂರ್ತಿ ತೆರೆಯುತ್ತದೆ. ನಾವೇ ಈ ಅದ್ಭುತವನ್ನು ಕಂಡಾಗ ಅರೆರೆ ! ಹೇಗಿದು? ಎಂದು ಆಶ್ಚರ್ಯ ಆನಂದ ಎರಡೂ ಒಮ್ಮೇಲೇ ಆಗುತ್ತದೆ. ಇದು ಮರೆಯಲಾಗದ ದೃಶ್ಯ. (ಎರಡು ಫೋಟೋ ಗಳಲ್ಲಿ ಮೊದಲನೆಯದು ಆರತಿ ಮಾಡುವ ಮೊದಲು, ಎರಡನೆಯದು ಆರತಿ ಮುಖದ ಬಳಿ ತಂದಾಗ ಕಣ್ ತೆರೆದದ್ದು) 
ಆಂಡಾಳ್ ಆರತಿ ನಂತರ
ಇನ್ನು ಶ್ರೀಹರ್ಷ ಅವರು ಆ ಪ್ರಶಾಂತ ವಾತಾವರಣದಲ್ಲಿ ಜಯಚಾಮರಾಜೇಂದ್ರ ಒಡೆಯರ ಶ್ರೀ ಮಹಾ ತ್ರಿಪುರ ಸುಂದರಿ ಎಂಬ ಕೃತಿಯನ್ನು ಮನಮೋಹಕವಾಗಿ ಹಾಡಿದುದು ಇನ್ನೂ  ನನ್ನ ಕಿವಿಯಲ್ಲಿ ಅಚ್ಚಳಿಯದೆ ಗುನುಗುತ್ತಿದೆ. ಸಂಸ್ಕೃತ ರಚೆನೆಯ ಆ ಹಾಡಿನ ಸಾಲುಗಳು "ಅನಾದಿ ಘೋರ ಸಂಸಾರ ವ್ಯಾಧಿ ಧ್ವಂಸೈಕ ಹೇತು ಭೂತ, ಸಿಂಹಾಸನಾದಿ  ಮಾಯಾಂಧಕಾರ  ಧ್ವಂಸೈಕ ಹೇತು ಭೂತ....." ಸತ್ ಸಾಹಿತ್ಯ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.
ಹೊರಾಂಗ ಕೂಡಾ ಎಲ್ಲಾ ಹೊಯ್ಸಳ ದೇಗುಲಗಳಂತೆ ಕೆತ್ತನೆಯ ಆಗರ. 

                                        ಕತ್ತಲಾಗುತ್ತಿದ್ದ ಸಮಯವಾದುದರಿಂದ ನಾವು ಮುಂದೆ ಒಂದೂವರೆ ಕಿ.ಮೀ ದೂರದ ಹೆಮ್ಮರಗಾಲ ಎಂಬ ಊರಿನ ಸಂತಾನ ಗೋಪಾಲನ ದೇಗುಲವನ್ನು ಬಾಗಿಲು ಮುಚ್ಚುವ ಮುನ್ನ ನೋಡುವ ಅವಸರವಿತ್ತು, ಅಲ್ಲಿಗೆ ಪ್ರಯಾಣ ಬಳಸಿದೆವು. ಪ್ರಶಾಂತ ಸಂಜೆಯ ವಾತಾವರಣ.ಅಲ್ಲಿನ ಪುರೋಹಿತರು ಟಿ ವಿ ಯಲ್ಲಿ ಕಂಡ ಶ್ರೀಹರ್ಷ ಅವರನ್ನು ಕಣ್ಣಾರೆ ಕಂಡು ಸಂತೋಷದಿಂದ ತಮ್ಮ ಮನೆಯವರನ್ನೆಲ್ಲಾ ಆ ಕೂಡಲೇ ಅಲ್ಲಿಗೇ  ಬರಮಾಡಿದರು. ಅವರ ಕೋರಿಕೆಯ ಮೇರೆಗೆ ಶ್ರೀಹರ್ಷ ಶ್ರೀ ಕೃಷ್ಣ  ವೇಣು ಗಾನ ಲೋಲ ತ್ರಿಭುವನ ಪಾಲ ಗಾನ ಮೂರ್ತಿ  ಎಂಬ ಸೊಗಸಾದ ಹಾಡನ್ನು ಹಾಡಿದರು. ಕೇಳುಗರೆಲ್ಲರಿಗೂ ಕರ್ಣಾನಂದವಾಯಿತು. ನಂತರ ಪುರೋಹಿತರು ಅಲ್ಲಿನ ಸ್ಥಳ ಮಹಿಮೆಯನ್ನು ವಿವರಿಸಿದರು.

೧೮೦೦ ವರ್ಷಗಳ ಇತಿಹಾಸವಿರುವ ಈ ಸ್ಥಳ ಕೌಂಡಿಣ್ಯ ಮಹರ್ಷಿಗಳ ತಪೋ ಭೂಮಿಯಾದ ಇಲ್ಲಿ ಚೋಳಮಹಾರಾಜ ಕಾಲದಲ್ಲಿ  ದೇವಸ್ಥಾನವನ್ನು ಕಟ್ಟಿಸಿದರು ಎನ್ನುವ ಮಾತಿದೆ.   ಆದರೂ  ಒಳಗೆ ಗರ್ಭಗೃಹದ ಬಳಿ ಇರುವ ಕೆತ್ತನೆ ಹೊಯ್ಸಳ ಶೈಲಿಯಾಗಿದೆ. ಇಲ್ಲಿನ ಕೃಷ್ಣನ ವಿಗ್ರಹ ತ್ರಿಭಂಗಿ ಅವತಾರದಲ್ಲಿದೆ. ಶಿರಸ್ಸು ಒಂದು ಭಂಗಿ, ಸೊಂಟ ಒಂದು ಭಂಗಿ ಹಾಗೂ ಪಾದ ಒಂದು ಭಂಗಿ ಹೀಗೆ ಮೂರೂ ಒಂದೊಂದು ಭಂಗಿಯಲ್ಲಿದೆ. ಪ್ರಭಾವಳಿಯಲ್ಲಿ ರುಕ್ಮಿಣಿ ಸತ್ಯಭಾಮೆಯರ ಸಖನಾಗಿ, ಸ್ನೇಹಿತ ಮಕರಂದ, ಗೋವುಗಳ ಸಹಿತನಾಗಿ, ಶಂಖಚಕ್ರಧಾರಿಯಾಗಿ ಆದಿಶೇಷನ ಹೆಡೆಯ ಅಡಿಯಲ್ಲಿ, ಗರುಡದೇವರ ಸೋಮಸೂತ್ರದ ಪೀಠದ ಮೇಲೆ ನಿಂತಿದ್ದಾನೆ ಕೃಷ್ಣ. ಅಭಿಷೇಖದ ಮುಹೂರ್ತದಲ್ಲಿ ಮಾತ್ರ ಇವು ಗೋಚರ. ಫೋಟೋ ತೆಗೆಯುವುದು ಅಲ್ಲಿ ನಿಷೇಧ. ಗರ್ಭಗುಡಿಯ ದ್ವಾರದಲ್ಲಿ ಉದ್ಭವ ನರಸಿಂಹ ಇರುವುದು ಇಲ್ಲಿ ವಿಶೇಷ. ಹೊರಾಂಗಣ ಕೆತ್ತನೆ ಕೆಲಸ ವಿಜಯನಗರದ ಅರಸರ ಕಾಲದ್ದಾಗಿದೆ.ಒಟ್ಟಾರೆ  ಎಲ್ಲರಿಂದ ಪೋಷಿಸಲ್ಪಟ್ಟ ದೇಗುಲ ಇದು ಎನ್ನಬಹುದು.
ಹೆಮ್ಮರಗಾಲ ಅರ್ಚಕರ ಜೊತೆ

ಚೋಳರಾಜನೊಬ್ಬನಿಗೆ ವಂಶಕ್ಕೆ ಗಂಡುಮಕ್ಕಳಿರಲಿಲ್ಲ, ಒಂದರ ನಂತರ ಎಲ್ಲಾ ೧೧  ಹೆಣ್ಣುಮಕ್ಕಳೇ ಆದ ಕಾರಣ ಆತ ತನ್ನ ಹನ್ನೊಂದನೇ ಹೆಣ್ಣುಮಗುವನ್ನು ದೇವರ ಸಾನಿಧ್ಯದಲ್ಲಿ ಇಟ್ಟು ಬೇಡಲು, ಗೋಪಾಲ ಕೃಷ್ಣನ ಅನುಗ್ರಹದಿಂದ ಅದು ಗಂಡಾಗಿ ಪರಿವರ್ತನೆಯಾಯಿತು ಎನ್ನುವ ಕಥೆ ಇದೆ. ಆದ್ದರಿಂದ ಆ ಸ್ವಾಮಿಗೆ ಹುಚ್ಚುಗೋಪಾಲ, ಸಂತಾನ ಗೋಪಾಲ ಎನ್ನುವ ಹೆಸರೂ ಇದೆಯೆಂದು ತಿಳಿಯಿತು. ದೇವರ ದರ್ಶನ, ತೀರ್ಥ ಪ್ರಸಾದದ ನಂತರ ಪುರೋಹಿತರ ಮನೆಗೆ ನಮ್ಮಿಬ್ಬರನ್ನು ಕರೆದು ಶಲ್ಯ ಹೊದಿಸಿ ದೊನ್ನೆ ತುಂಬಾ ಗೊಜ್ಜವಲಕ್ಕಿ ಪ್ರಸಾದ ಕೊಟ್ಟು ಕಳುಹಿಸಿಕೊಟ್ಟರು. ಶ್ರೀಹರ್ಷ ಅವರ ಮೇಲಿನ ಅಭಿಮಾನ ಮತ್ತು ನಾನು ದೂರದ ಊರಿನಿಂದ ಬಂದಿದ್ದು ಅದಕ್ಕೆ ಕಾರಣವಾಗಿತ್ತು. ರಾತ್ರಿ ಕಾಡಿನ ಹಾದಿಯಲ್ಲಿ ಪ್ರಯಾಣ ಬಳಸುತ್ತಾ ನಂಜನಗೂಡು ಮೈಸೂರು ಹಾದಿಯಲ್ಲಿ ಮರಳಿ ಮನೆ ಸೇರಿದೆವು.  
 
ಎಳನೀರು ವಿತ್ ಹರ್ಷ
ಆದಿನ ಶ್ರೀಹರ್ಷ ಅವರ ಮನೆಯಲ್ಲೇ ಅವರ ತಂದೆತಾಯಿಯರ ಜೊತೆ ಉಳಿದ ಸಮಯ ಕಳೆದು ಎಲ್ಲರೂ ಒಟ್ಟಿಗೇ ಊಟ ಮಾಡಿ ಸಾಕಪ್ಪಾ ಎನ್ನುವಷ್ಟು ಮಾತಾಡಿ, ಮಲಗಿದೆವು. 

ಅವರ ತಂದೆ ತಾಯಿಯರಿಗೆ ಗನ ಮೇಲೆ ತುಂಬಾ ಪ್ರೀತಿ, ಅದೆಷ್ಟು ಹೆಮ್ಮೆ, ಅಪಾರ ಅಭಿಮಾನ, ಭರವಸೆ.  ಮಾತನಾಡುವಾಗ ಅರವ ಕಣ್ಣುಗಳಲ್ಲಿ ಎದ್ದು ಕಾಣುತ್ತದೆ. ಅವರು ಮಗನಿಗೆ ಕೊಟ್ಟ ಸಂಸ್ಕೃತಿ ಸಂಸ್ಕಾರಗಳಿಗೆ ತಕ್ಕ ಫಲ ಸಾರ್ಥಕವಾಗಿ ದೊರಕಿದೆ ಎಂದನಿಸುತ್ತದೆ.
ಶ್ರೀ ಹರ್ಷ ಅವರ ತಂದೆ ತಾಯಿ

ಶ್ರೀಹರ್ಷ ತಮ್ಮ ಎಲ್ಲಾ ಕ್ಷೇತ್ರದಲ್ಲಿ ಈವರೆಗೆ ಸಾಧನೆ ಎಷ್ಟೇ ಮಾಡಿರಬಹುದು ಆದರೆ ಈಗಲೂ ಬೆಳಗ್ಗೆ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ಪಿತೃಗಳ ಪಾದಕ್ಕೆ ನಮಿಸಿಯೇ  ಮುಂದಿನ ಕೆಲಸ ಆರಂಭ ಮಾಡುವುದು. ಇದನ್ನು ಕಂಡಾಗ ಅವರ ಮುಂದಿನ ಸಾಧನೆಗೆ ಗೆಲುವು ಗಟ್ಟಿ ಎಂದೆನಿಸಿತು.ಪೋಷಕರು ಇತ್ತ ಪ್ರೀತಿಗೆ ತಕ್ಕ ಪ್ರತಿಫಲವಾಗಿ ಪೋಷಕರ ಮೇಲೂ ಮೇಲೆ ಶ್ರೀಹರ್ಷ ಅವರಿಗೂ ಅಷ್ಟೇ ಅಪಾರ ಗೌರವ.

ಮರುದಿನ  ಪೂರಿ, ಪಲ್ಯ, ಮಾವಿನ ಸೀಕರಣಿ ಬಾರಿಸಿ ಮೇಲೊಂದು ಗುಟುಕು ಫಿಲ್ಟರ್ ಕಾಫಿ ಏರಿಸಿ ನೇರ ಹೊರಟಿದ್ದು ಮೈಸೂರಿನ ಪ್ರಸಿದ್ಧ ನೂರೊಂದು ಗಣಪತಿ ದೇವಸ್ಥಾನ. ಇಲ್ಲಿ ಪಾರ್ಕಿಂಗ್ ಸಿಗದ ಕಾರಣ ನಾನೊಬ್ಬನೇ ಹೋಗಿ ಒಂದು ನಮಸ್ಕಾರ ಹಾಕಿ ಬರಬೇಕಾಯಿತು. ಹೊಸ ವಾಹನಗಳನ್ನು ಕೊಂಡಾಗ ಜನ ಇಲ್ಲಿಗೆ ಪೂಜೆ ಮಾಡಿಸಲು ಬರುವ ಸ್ಥಳ ಇದು.
101 ಗಣಪತಿ
ಇನ್ನು ಸಂಕಷ್ಟಿಯಲ್ಲಿ ಇಲ್ಲಿ ದರ್ಶನಕ್ಕೆ ದೊಡ್ಡ ಕ್ಯೂ.ಅಲ್ಲಿಂದ ಅಷ್ಟೇನೂ ದೂರವಲ್ಲದ ಒಂದು ಅದ್ಭುತ ಶಿಲ್ಪಕಲೆ ಎಲ್ಲರೂ ನೋಡಲೇಬೇಕಾದ, ನೂತನವಾಗಿ ಕಟ್ಟಲ್ಪಟ್ಟಿರುವ ಕಾಮ ಕಾಮೇಶ್ವರಿ ದೇವಸ್ಥಾನಕ್ಕೆ ಬಂದೆವು. 
ಕಾಮಕಾಮೇಶ್ವರಿ ದೇವಸ್ಥಾನ

ಅಬ್ಬಬ್ಬಾ ಅದೇನು ಅಚ್ಚುಕಟ್ಟಾದ ಕೆತ್ತನೆ. ಕಾಲದಲ್ಲೂ ಈರೀತಿಯ ಕೆತ್ತನೆ ಮಾಡುವವರು ಇದ್ದಾರೆ ಎಂದು ನಂಬಲಾಗಲಿಲ್ಲ. ಆದರೆ ಅಲ್ಲಿನ ಶಿಲ್ಪಕಲೆ ಪ್ರತ್ಯಕ್ಷ  ನೋಡಿದಾಗ ನಿಜವಾಗಿಯೂ ಹುಬ್ಬೇರಿಸುವಂತಿದೆ.ಬೆಳಗ್ಗೆ ಹನ್ನೊಂದಕ್ಕೆ ದೇವಸ್ಥಾನ ಬಾಗಿಲು ಮುಚ್ಚುತ್ತಾರೆ ಎಂದು ಆದಷ್ಟು ಬೇಗ ಅಲ್ಲಿಗೆ ತಲುಪಿದೆವು. ಸಧ್ಯ ಯಾವುದೋ ಹೋಮ ಕಾರ್ಯಕ್ರಮ ನಡೆಯುತ್ತಿದ್ದು ಬಾಗಿಲು ತೆರೆದಿದ್ದರು.ನಿಧಾನವಾಗಿ  ಆವರಣ ಸುತ್ತೂ ಇರುವ ಅಪರೂಪದ ಶಿಲಾಕೃತಿಗಳನ್ನು ನೋಡುವದಾವಕಾಶವಾಯಿತುಪರಶಿವನ ಮಹಿಮೆಯ ನಾನಾ ರೂಪಗಳ ಕೆತ್ತನೆ ಬಹು ಅಪರೂಪವೂ ಅಮೋಘವಾಗಿಯೂ ಇವೆ. ಸುಮಾರು ಎರಡರಿಂದ ಮೂರು ಅಡಿ ಎತ್ತರವಿರುವ ಎಲ್ಲ ಕಪ್ಪು ಲೋಹದ ಬಣ್ಣ ಮತ್ತು ಹೊಳಪಿನಿಂದ ಮೀರಾ ಮಿರನೇ ಹೊಳೆಯುತ್ತಿವೆ. ಕಂಬಗಳು ಮತ್ತು ಮೇಲ್ಛಾವಣಿಯ ಕೆತ್ತನೆ ಸೂಕ್ಷ್ಮ ಹಾಗೂ ಅಚ್ಚುಕಟ್ಟು ಎನಿಸಿದರೆ, ಹೊರಗೆ ಕುಳಿತಿರುವ ನಂದಿಯ ವಿಗ್ರಹ ಎಷ್ಟು ಹೊತ್ತು ನೋಡಿದರೂ ಸಾಲದು ಎನಿಸುತ್ತದೆ.
ಕಾಮಕಾಮೇಶ್ವರಿ ದೇವಸ್ಥಾನ
ಮುಖದಲ್ಲಿನ ಎದ್ದುನಿಂತ ನರಗಳು, ನಿಜವಾಗಿಯೂ ಕೂದಲನ್ನೇ ಇಟ್ಟಿದ್ದಾರೇನೋ ಎಂದು ಭಾಸವಾಗುವಂತೆ ಬಾಲದ ಕೊನೆ. ಗುರುತ್ವಾಕರ್ಷಣೆಗೆ ತೂಗಿಬಿದ್ದ ಗಂಟೆಗಳ ಸರಮಾಲೆ. ಪದಗಳು ಸಾಲದು ನಂದಿಯ ಕೆತ್ತನೆ ಬರೆಯಲು. ದೇವಸ್ಥಾನದ ಸುತ್ತ ಮಾರ್ಕಂಡೇಯ,ವಿಘ್ನೇಶ್ವರ ವರಪ್ರಸಾದ, ಕಾಮಸಂಹಾರ,ಅರ್ಧನಾರೀಶ್ವರ,ಏಕಪಾದ, ಮಹಾ ಲಿಂಗೋದ್ಭವ , ಹರಿಹರೇಶ್ವರ, ಚಕ್ರಧಾನ, ಸೋಮಸ್ಕಂದ,ವಿಷಪಾನ,ಕಲ್ಯಾಣಸುಂದರ ಮೂರ್ತಿಗಳು ಒಂದೊಂದರಲ್ಲೂ ಒಂದೊಂದು ವಿಶೇಷ ಇದೆ
ಕಾಮಕಾಮೇಶ್ವರಿ ದೇವಸ್ಥಾನ

ದೇಗುಲದಿಂದ ಹೊರಗೆ ಬರಲು ಎದುರಿಗೆ ಒಂದು ಪಾಳು ಬಿದ್ದ ತೆರೆದ ದೊಡ್ಡ ದ್ವಾರವುಳ್ಳ ಮನೆ ಕಾಣುತ್ತದೆ.ರಸ್ತೆಯಿಂದ ನೋಡಿದರೆ ಹತ್ತಾರು ಲಿಂಗಗಳು ಕಾರಂಜಿಯ ಆಕಾರದಲ್ಲಿ ಜೋಡಿಸಿಟ್ಟಹಾಗಿದೆ. ಕುತೂಹಲದಿಂದ ಅಲ್ಲಿಗೆ ನಾವು ಇಣುಕಿ ನೋಡಲು ಹೋದೆವು. ನಿರ್ಜನ ಪ್ರದೇಶ, ಅಲ್ಲೊಂದು ಕಟ್ಟಿಹಾಕಿದ್ದ ನಾಯಿ ಬಿಟ್ಟರೆ ಯಾರೂ ಇಲ್ಲ. ಅರ್ಧಂಬರ್ಧ ಕೆತ್ತಲ್ಪಟ್ಟ ವಿಗ್ರಹಗಳು.
ಶಿಲ್ಪಕಲಾ ಶಾಲೆ
ನಂತರ ನಾನು  ಬೆಂಗಳೂರಿಗೆ ಮರಳಿ ಬಂದ ಮೇಲೆ ವಿದ್ವಾನ ಶಂಕರ್ ಶಾಸ್ತ್ರಿಗಳ ಮೂಲಕ ತಿಳಿಯಿತು ಅದು ಶಿಲ್ಪಕಲಾ ಶಾಲೆ ಎಂದು.
ಆ ಸ್ಥಳದಿಂದ ನೇರ ನಾವು ಹೊರಟದ್ದು ಕೆ ಆರ್ ಪೇಟೆ ಮೂಲಕ ಕೆ ಎಸ್  ನರಸಿಂಹಸ್ವಾಮಿಯವರ ಹುಟ್ಟೂರಾದ ಕಿಕ್ಕೇರಿಗೆದಾರಿಯ ಎಡಬಲ ಬದಿಗಳಲ್ಲೂ ಹಚ್ಚ ಹಸಿರು ಕಬ್ಬಿಣ ಗದ್ದೆಗಳು, ದಾರಿಯುದ್ದಕ್ಕೂ ರುಚಿಕರ ಹಲಸಿನ ಹಣ್ಣು, ಎಳನೀರು ಸವಿಯುತ್ತಾ ಸಾಗಿದೆವು.  

To be continued on part 3............

ಹಲಸಿನ ತೊಳೆ ವಿತ್ ಹರ್ಷ



Comments

  1. Well documented Narayan, When I visit Karnataka next, your info will be very useful.
    Many thanks
    Ramamurthy

    ReplyDelete
    Replies
    1. Thank you Mr Ramamurthy. Lot of temples and sculptures are not promoted properly.If done Karnataka will be able to attract more tourists.

      Delete
  2. Nicely briefed Narayan. Surely a must to visit next time. I am impressed the way you & busy professor/singer Harsha had a great time!
    Regards,
    Gopal

    ReplyDelete
  3. ನಿಮ್ಮ ಲೇಖನವನ್ನು ಓದಿದಾಗ, ಒಳ್ಳೆಯ company ಇದ್ದರೆ, ಈ ಬಗೆಯ ಕ್ಷೇತ್ರಗಳನ್ನು ಸಂದರ್ಶಿಸುವಾಗ ಆಗುವ ಸಂತೋಷ ಇಮ್ಮಡಿಯಾಗುತ್ತದೆ ಎಂದು ಅರಿವಾಗುತ್ತದೆ. ಸ್ಥಳಪುರಾಣಗಳೂ ಕುತೂಹಲಕಾರಿಯಾಗಿವೆ.

    ReplyDelete
    Replies
    1. ಖಂಡಿತ ಸತ್ಯವಾದ ಮಾತು ಸಾರ್ ಸದಭಿರುಚಿ ಹಾಗು ಕಲೆಯನ್ನು ಅನುಭಾವಿಸುವವರು ಇದ್ದರೆ, ಈ ಥರದ ಕಂಪನಿ ಇದ್ದರೆ ಮತ್ತಷ್ಟು ಅಪರೂಪದ ಸ್ಥಳಗಳು ನೋಡುವ ಇಚ್ಛೆಯಾಗುತ್ತದೆ. ಧನ್ಯವಾದಗಳು

      Delete
  4. ವಿವರಗಳನ್ನು ಓದಿದಾಗ ಅಲ್ಲಿಗೆ ನಾವೂ ಹೋಗಬೇಕು ಅಂತ ಅನ್ನಿಸದೇ ಇರದು. Bookmark ಮಾಡಿದ್ದೀನಿ👍

    ReplyDelete
    Replies
    1. ಖಂಡಿತ ಹೋಗಿಬನ್ನಿ ಸಾರ್. ಈ ದೇವಾಲಯಗಳು ಕಲಾ ರಸಿಕರಿಗೆ ವಿಶೇಷವಾಗಿ ಸ್ಪಂದಿಸುತ್ತವೆ. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

      Delete
  5. ನಿಮ್ಮ ಲೇಖನವನ್ನು ಓದಿ ನಾನೇ ಅಲ್ಲಿಗೆ ಹೋಗಿ ಬಂದ ಅನುಭವವಾಯಿತು.
    ತುಂಬಾ ಚೆನ್ನಾಗಿ ಬರೆದಿದ್ದಿರಿ..

    ಮುಂದಿನ ಸಂಚಿಕೆಯಲ್ಲಿ ನಮ್ಮ ಊರಿಗೆ ಬಂದ ವಿಷಯಗಳು ಹಾಗೂ ಶ್ರೀ ಲಕ್ಶ್ಮಿ ನಾರಾಯಣ ಸ್ವಾಮಿಯ ದರ್ಶನದ ಅನುಭವವನ್ನು ಹಂಚಿಕೊಳ್ಳಿ.

    ಧನ್ಯವಾದಗಳು

    ReplyDelete
    Replies
    1. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಶ್ರೀ ದಯಾನಂದ. ತಮ್ಮ ಊರು ವಿಸಿಟ್ ಮಾಡಿದ್ದು suppriseಆಗಿ. ಹೊಸಹೊಳಲು ತಮ್ಮ ಊರು ಅಲ್ಲಿ ಸುಂದರವಾದ ದೇಗುಲ. ತಾವು ಅಲ್ಲಿನವರು ಎಂದು ಹೇಳಿದಾಗ ಬರೆಯಲು ಮತ್ತಷ್ಟು ಉತ್ಸುಕನಾಗಿದ್ದೇನೆ.

      Delete
  6. ನಾವು ಇಲ್ಲೇ ಇದ್ದು ಈ ಎಲ್ಲ ಸ್ಥಳ ಗಳನ್ನೂ ನೋಡಲಿಲ್ಲ ಅಂತ ಬೇಸರ ಆಯಿತು. ಆದರೂ ನಿಮ್ಮ ಲೇಖನ ಮತ್ತು pic ಗಳಿಂದ ವಿಷಯ ಗಳು ತಿಳಿದು ಸಂತೋಷವಾಯಿತು. ಕಲ್ಪನೆ ಗೆ ನಿಲುಕುವ ಹಾಗಿದೆ ನಿಮ್ಮ ಬರವಣಿಗೆ. ಧನ್ಯವಾದಗಳು.

    ReplyDelete
  7. Aandaal ದೇವಿಯ ಕಣ್ಣಿನ ವಿಸ್ಮಯ ನೋಡಿ ಅಚ್ಚರಿ ಆಯಿತು. ಇಷ್ಟೊಂದು ಶಿಲ್ಪ ಕಲಾ ಸೊಬಗು ನಮ್ಮಲ್ಲಿ ಇದ್ದು ನಾವು ಗಮನಿಸದೆ ಇರುವುದು ಬೇಸರದ ವಿಷಯ.

    ReplyDelete

Post a Comment