ಸುಭಾಷಿತಗಳು ಮತ್ತು ಹಾಸ್ಯ

ಸುಭಾಷಿತಗಳು ಮತ್ತು ಹಾಸ್ಯ

ಲೇಖನ - ಡಾ  ಸಿ ವಿ ಮಧುಸೂದನ 

ಸಂಸ್ಕೃತದಲ್ಲಿ ಸುಭಾಷಿತ ಎಂದರೆ ಒಳ್ಳೆಯ ಮಾತು ಎಂದು ಅರ್ಥ. ಸುಭಾಷಿತಗಳಲ್ಲಿ ಅನೇಕ ವಿಧ. ಸಮಾಜದಲ್ಲಿ ನಮ್ಮ ನಡವಳಿಕೆ ಹೇಗಿರಬೇಕು, ಯಾವುದನ್ನು ಮಾಡಿದರೆ ನಮಗೆ ಹಿತ, ಬುದ್ಧಿವಂತನ ಲಕ್ಷಣಗಳೇನು, ಮೂರ್ಖನ ಲಕ್ಷಣಗಳೇನು, ಮಹಾತ್ಮರ ಗುಣಗಳೆಂಥವು, ವಿದ್ಯೆಯ ಮಹಿಮೆ ಇತ್ಯಾದಿ ಹಲವಾರು ವಿಷಯಗಳನ್ನು ಮನದಟ್ಟುವಂತೆ ಸಂಕ್ಷಿಪ್ತವಾಗಿ ತಿಳಿಯ ಹೇಳುವುದು ಸುಭಾಷಿತಗಳ ವೈಶಿಷ್ಟ್ಯ. ಈಗ ಬಳಕೆಯಲ್ಲಿರುವ ಸುಭಾಷಿತಗಳ ಮೂಲಗಳು ಹಲವಾರು:


  • ನಮ್ಮ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ
  • ನೀತಿಬೋಧಕ ಕಥಾಸಂಕಲನಗಳಾದ ಪಂಚತಂತ್ರ ಮತ್ತು ಹಿತೋಪದೇಶ
  • ಸೋಮದೇವನ ಕಥಾಸರಿತ್ಸಾಗರ
  • ಎಲ್ಲಕ್ಕಿಂತ ಹೆಚ್ಚಾಗಿ ಭರ್ತೃಹರಿಯ ನೀತಿಶತಕ ಮತ್ತು ಚಾಣಕ್ಯನ ನೀತಿ.


                              ಆದರೆ ಮೇಲಿನ ಯಾವ ಮೂಲಕ್ಕೂ ಸೇರದ ಅಥವಾ ಮೂಲ ಯಾವುದೆಂದೇ ತಿಳಿಯದ ಸುಭಾಷಿತಗಳೂ ಬೇಕಾದಷ್ಟಿವೆ. ಸಾಧಾರಣವಾಗಿ ಸುಭಾಷಿತಗಳು ಎರಡೇ ಸಾಲಿನ ಶ್ಲೋಕಗಳು ಮತ್ತು ಇವುಗಳ ಭಾಷೆ ತುಂಬ ಸರಳ; ಆದಕಾರಣ ಇವನ್ನು ನೆನಪಿನಲ್ಲಿಡುವುದು ಕಷ್ಟವಿಲ್ಲ. ಆದ್ದರಿಂದಲೇ ಇವುಗಳು ನೂರಾರು, ಏಕೆ ಸಾವಿರಾರು ವರ್ಷಗಳಷ್ಟು ಹಳೆಯವಾದರೂ, ಭಾರತದ ಆದ್ಯಂತ ಅನೇಕ ಜನ ಇವುಗಳಲ್ಲಿ ಕೆಲವನ್ನಾದರೂ ಉದ್ಧರಿಸಬಲ್ಲರು. ಉದಾಹರಣೆಗೆವಸುಧೈವ ಕುಟುಂಬಕಂಎಂಬ ಎಲ್ಲರಿಗೂ ಪರಿಚಿತವಾಗಿರುವ ಪದಗುಚ್ಛ ಕೆಳಗಿನ ಸುಭಾಷಿತದಲ್ಲಿದೆ:

ಅಯಂ ನಿಜಃ ಪರೋವೇತಿ ಗಣನಾ ಲಘು ಚೇತಸಾಂ |
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ ||

ಇವನು ನಮ್ಮವ, ಇವನು ಪರಕೀಯ ರೀತಿ ನೆನಸುವುದು ಕೀಳುಬುದ್ಧಿಯವರ ಲಕ್ಷಣ. ಔದಾರ್ಯದ ಸ್ವಭಾವದವರಿಗಾದರೋ ಸಮಸ್ತ ಪ್ರಪಂಚವೇ ಒಂದು ಕುಟುಂಬದಂತೆ. ಎಂದರೆ ಸ್ವಭಾವತಃ ಧಾರಾಳ ಮನಸ್ಸಿನವರಿಗೆ ಯಾವ ಬಗೆಯ ಪೂರ್ವದ್ವೇಷವೂ (prejudice) ಇರುವುದಿಲ್ಲ

 ಮಾತನಾಡಿದರೆ ಎಂತಹ ಮಾತನ್ನಾಡಬೇಕು ಎಂಬುದನ್ನು ಸುಭಾಷಿತ ತಿಳಿಸುತ್ತದೆ:

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ಬ್ರೂಯಾತ್ ಸತ್ಯಮಪ್ರಿಯಂ |
ನಾಸತ್ಯಂ ಪ್ರಿಯಂ ಬ್ರೂಯಾತ್ ಏಷ ಧರ್ಮಃ ಸನಾತನಃ ||

                    ಸತ್ಯವನ್ನು ನುಡಿಯಬೇಕು, ಕೇಳುವವರಿಗೆ ಇಷ್ಟವಾದದ್ದನ್ನು ನುಡಿಯಬೇಕು. ಅಪ್ರಿಯವಾದ ಸತ್ಯವನ್ನು ನುಡಿಯಕೂಡದು. ಕೇಳುವವರಿಗೆ ಅದು ಇಷ್ಟವಾಗಬಹುದಾದರೂ ಅಸತ್ಯವನ್ನು ನುಡಿಯಬಾರದು - ಇದೇ ಸನಾತನ ಧರ್ಮ
ಶ್ಲೋಕದಲ್ಲಿನ ಬ್ರೂಯಾತ್ ಸತ್ಯಮಪ್ರಿಯಂಎಂಬ ಹಿನ್ನೆಲೆಯಲ್ಲಿ ವಾಲ್ಮೀಕಿ ರಾಮಯಣದ ಒಂದು ಸಂದರ್ಭ ನೆನಪಿಗೆ ಬರುತ್ತದೆ. ಸೀತೆಯನ್ನು ಅಪಹರಣ ಮಾಡಲು ತನಗೆ ಸಹಾಯ ಮಾಡಬೇಕೆಂದು, ರಾವಣನು ಮಾರೀಚನನ್ನು ಕೇಳಿಕೊಳ್ಳುತ್ತಾನೆ. ಮಾರೀಚನು ಹಾಗೆ ಮಾಡುವುದು ತಪ್ಪೆಂದೂ, ಸೀತಾಪಹರಣದಿಂದ ರಾವಾಣನಿಗೆ ಯಾವ ಶ್ರೇಯಸ್ಸೂ ಉಂಟಾಗಲಾರದೆಂದೂ ವಿಧವಿಧವಾಗಿ ಬೋಧಿಸುತ್ತಾನೆ. ಆದರೆ ರಾವಣನು ಮಾರೀಚನ ಯಾವ ಮಾತಿಗೂ ಕಿವಿಗೊಡುವುದಿಲ್ಲ. ಆಗ ಮಾರೀಚನು ಹೀಗೆ ಹೇಳುತ್ತಾನೆ:

ಸುಲಭಾಃ ಪುರುಷಾಃ ರಾಜನ್ ಸತತಂ ಪ್ರಿಯವಾದಿನಃ |
ಅಪ್ರಿಯಸ್ಯ ಪಥ್ಯಸ್ಯ ವಕ್ತಾ ಶ್ರೋತಾ ದುರ್ಲಭಃ ||

            ಮಹಾರಾಜ! ಯಾವಾಗಲೂ ಪ್ರಭುವಿಗೆ ಪ್ರಿಯವಾದುದನ್ನೇ ಮಾತನಾಡುವವರು ಬೇಕಾದಷ್ಟು ಮಂದಿ. ಆದರೆ ಕೇಳುವುದಕ್ಕೆ ಇಷ್ಟವಾಗದೆ ಇರಬಹುದಾದರೂ, ಹಿತವಾದ, ನಮಗೆ ಶ್ರೇಯಸ್ಕರವಾದ ಮಾತನ್ನು ಆಡುವವರೂ ಅಪರೂಪ, ಕೇಳುವವರೂ ಅಪರೂಪ.
ಸುಭಾಷಿತಗಳಲ್ಲಿ ಬುದ್ಧಿ ಮಾತುಗಳನ್ನು ಮಾತ್ರವಲ್ಲ, ಅನೇಕ ವೇಳೆ ಇವುಗಳಲ್ಲಿ ಹಾಸ್ಯವನ್ನೂ, ವಿಡಂಬನೆಯನ್ನೂ, ಪದ ಚಮತ್ಕಾರಗಳನ್ನೂ ಕಾಣಬಹುದು. ಕೆಳಗಿನ ಸುಭಾಷಿತಗಳಲ್ಲಿರುವ ಹಾಸ್ಯಪ್ರಜ್ಞೆಯನ್ನು ನೋಡಿರಿ (ಇವುಗಳ ಅಭಿಪ್ರಾಯಗಳನ್ನು ನೀವು ಒಪ್ಪಬೇಕೆಂಬ ಬಲಾತ್ಕಾರವೇನೂ ಇಲ್ಲ!)

ಕನ್ಯಾ ವರೌತೇ ರೂಪಂ ಮಾತಾ ವಿತ್ತಂ ಪಿತಾ ಶೃತಮ್ |
ಬಾಂಧವಾಃ ಕುಲಮಿಚ್ಛಂತಿ ಮಿಷ್ಟಾನ್ನಂ ಇತರೇ ಜನಾಃ ||

               ಮದುವೆ ಎಂದರೆ, ಕನ್ಯೆಯು ತನ್ನ ವರನು ರೂಪವಂತನಾಗಿರಬೇಕೆಂದು ಇಚ್ಛಿಸುತ್ತಾಳೆ; ತಾಯಿಯು ಐಶ್ವರ್ಯವನ್ನು ಬಯಸುತ್ತಾಳೆ; ತಂದೆಯು ವರನು ಎಷ್ಟು ತಿಳಿದವನು ಎಂಬುದನ್ನು ಗಮನಿಸುತ್ತಾನೆ; ಬಂಧುಗಳು ವರನ ಕುಲ ಎಂತಹುದು ಎಂದು ನೋಡುತ್ತಾರೆ; ಇತರ ಜನರಿಗಾದರೋ ಒಳ್ಳೆಯ ಊಟ ಸಿಕ್ಕಿದರೆ ಸಾಕು.
ಮದುವೆಯಾದ ಹೊಸದರಲ್ಲಿ ಅಳಿಯನಿಗೆ ಅತ್ತೆ ಮಾವಂದಿರಿಂದ ದೊರಕುವ ಉಪಚಾರಕ್ಕೂ, ಆದರಾತಿಥ್ಯಗಳಿಗೂ ಮಿತಿಯಿಲ್ಲ - ಎಂದರೆ ಹೊಸ ಅಳಿಯನಿಗೆ ಮಾವನ ಮನೆ ಒಂದು ಸ್ವರ್ಗದಂತೆಯೇ ತೋರುತ್ತದೆ. ಹರಿ ಹರಾದಿಗಳಿಗೂ ರೀತಿ ಅನಿಸಿರಬಹುದೇನೋ?

ಅಸಾರೇ ಖಲು ಸಂಸಾರೇ ಸಾರಂ ಶ್ವಶುರಮಂದಿರಮ್ |
ಹರೋ ಹಿಮಾಲಯೇ ಶೇತೇ ವಿಷ್ಣುಃ ಶೇತೇ ಮಹೋದಧೌ ||

                 ಈ ಶುಷ್ಕವಾದ ಜಗತ್ತಿನಲ್ಲಿ, ಸಾರಭರಿತವಾವುದೆಂದರೆ ಅದು ಮಾವನ ಮನೆಯೇ. ಆದ್ದರಿಂದಲೇ ಶಿವನು ಹಿಮಾಲಯದಲ್ಲಿ ನೆಲಸಿದ್ದಾನೆ (ಪಾರ್ವತಿಯು ಹಿಮವಂತನ ಮಗಳು); ವಿಷ್ನುವು ಕ್ಷೀರಸಾಗರದಲ್ಲಿ ಪವಡಿಸಿದ್ದಾನೆ (ಲಕ್ಷ್ಮಿಯು ಸಮುದ್ರರಾಜನ ಪುತ್ರಿ).
ಆದರೆ ನಮ್ಮ ನಿಮ್ಮಂಥವರು ಶಾಶ್ವತವಾಗಿ ಮಾವನ ಮನೆಯಲ್ಲಿ ಬೇರೂರಲು ಸಾಧ್ಯವಿಲ್ಲ. ಕೆಲವು ದಿನಗಳಾದ ಮೇಲೆ ಅತ್ತೆ ಮಾವಂದಿರು ಶನಿ ಎಲ್ಲಿಂದ ಬಂದು ವಕ್ಕರಿಸಿದನಪ್ಪಾ? ಯಾವಾಗ ಹೆಂಡತಿಯನ್ನು ಕರೆದುಕೊಂಡು ತನ್ನ ಮನೆಗೆ ಹೋದಾನು?’ ಎಂದು ಪಿಸುಗುಟ್ಟಲು ಷುರು ಮಾಡುತ್ತಾರೆ. ಮೊದಲು ವರನಾಗಿದ್ದವನು ಈಗ ಅನಿಷ್ಟ ಗ್ರಹವಾಗುತ್ತಾನೆ!

ಸದಾ ವಕ್ರಃ ಸದಾ ಕ್ರೂರಃ ಸದಾ ಪೂಜಾಮಪೇಕ್ಷತೇ |
ಕನ್ಯಾರಾಶಿಸ್ತಿಥೋ ನಿತ್ಯಂ ಜಾಮಾತಾ ದಷಮಗ್ರಹಃ ||

                   ಇವನ ಬುದ್ದಿಯು ಯಾವಾಗಲೂ ಕೊಂಕು; ಇವನಿಗೆ ಬೇರೆಯವರ ಸುಖ ದುಃಖಗಳ ಪರಿವೆಯಿಲ್ಲ; ಇವನಿಗೆ ಸದಾಕಾಲವೂ ಉಪಚಾರ ಮಾಡುತ್ತಿರಬೇಕು. ಬೇರೆಯ ನವಗ್ರಹಗಳಾದರೋ ರಾಶಿಯಿಂದ ರಾಶಿಗೆ ಚಲಿಸುತ್ತಿರುತ್ತವೆ. ಅಳಿಯನೆಂಬ ಹತ್ತನೆಯ ಗ್ರಹವು ಶಾಶ್ವತವಾಗಿ ಕನ್ಯಾರಾಶಿ (ಮಾವನ ಮನೆ) ಯಲ್ಲೇ ನೆಲಸಿಬಿಟ್ಟಿದ್ದಾನೆ! ಆದರೆ ಹರಿಹರಬ್ರಹ್ಮಾದಿಗಳು ತಮ್ಮ ನೆಲೆಗಳನ್ನು ಆಯ್ಕೆ ಮಾಡಿರುವುದಕ್ಕೆ ಬೇರೆಯ ಕಾರಣವೇ ಇರಬಹುದೆಂದು ಮತ್ತೊಬ್ಬ ಸುಭಾಷಿತಕಾರನು ಸೂಚಿಸುತ್ತಾನೆ:

ಕಮಲೇ ಬ್ರಹ್ಮಾ ಶೇತೇ ಹರಃ ಶೇತೇ ಹಿಮಾಲಯೇ
ಕ್ಷೀರಾಬ್ಧೌ ಹರಿಃ ಶೇತೇ ಮನ್ಯೇ ಮತ್ಕುಣಶಂಕಯಾ ||

                     ಬ್ರಹ್ಮನು ಕಮಲದಲ್ಲಿ ನೆಲಸಿದ್ದಾನೆ; ಶಂಕರನು ಮಲಗುವುದು ಹಿಮಲಯದಲ್ಲಿ; ನಾರಾಯಣನಾದರೋ ಕ್ಷೀರಾಬ್ಧಿಶಯನ. ಇದೆಲ್ಲಕ್ಕೂ ಕಾರಣ ಒಂದೇ. ಇವರೆಲ್ಲರಿಗೂ ರಾತ್ರಿಯ ತಿಗಣೆಗಳ ಭಯ! ದೇವಾಧಿದೇವರೂ ಸುಭಾಷಿತಕಾರರ ಹಾಸ್ಯಕ್ಕೆ ಗುರಿಯಾಗಬಲ್ಲರು ಎಂದ ಮೇಲೆ ಸಮಾಜದಲ್ಲಿ ಗೌರವಾನ್ವಿತ ಜನರೂ ಇವರ ಕುಹಕ ನೋಟದಿಂದ ತಪ್ಪಿಸಿಕೊಳ್ಳಲಾರರು:

ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ |
ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿ ||

              ವೈದ್ಯರಾಜ ನಿನಗೆ ನಮಸ್ಕಾರ; ನೀನು ಯಮರಾಜ ಅಣ್ಣನೇ ಸರಿ. ಯಮನಾದರೋ ಪ್ರಾಣಗಳನ್ನು ಮಾತ್ರ ಅಪಹರಿಸುತ್ತಾನೆ. ನೀನು ಪ್ರಾಣವನ್ನೂ ತೆಗೆಯುವೆ, ಹಣವನ್ನೂ ಕಸಿಯುವೆ.  

                      ಈ ಮೇಲೆ ಪ್ರಸ್ತುತ ಮಾಡಿರುವುದು ಸುಭಾಷಿತಗಳ ಸ್ಥೂಲ ಪರಿಚಯ ಮಾತ್ರ. ಈಗ ಲಭ್ಯವಿರುವ ಸುಭಾಷಿತಗಳ ಸಂಖ್ಯೆ ನೂರಾರು. ಇವುಗಳಲ್ಲಿ ದಿನಕ್ಕೆ ಒಂದಾದರೂ ಸುಭಾಷಿತವನ್ನು ಓದಿ ಅರ್ಥಮಾಡಿಕೊಂಡರೆ ಸಮಯ ವ್ಯರ್ಥವಲ್ಲ, ಮನರಂಜನೆಯೂ ಆದೀತು.

Comments

  1. Dr Madhusudana thanks for sharing such special information from Subhashitha. It is nice to know this kind of knowledge and humor. Very nicely explained.Beautiful articles published in recent days in your magazine.

    ReplyDelete
  2. ತಮ್ಮ ಈ ಲೇಖನ ವಿಶೇಷವಾಗಿದೆ. ಲೇಖನಕ್ಕೆ ಧನ್ಯವಾದಗಳು. ಸುಭಾಷಿತಗಳಲ್ಲೂ ಈ ರೀತಿ ಹಾಸ್ಯವಿದೆ ಎಂದೂ ಅರಿವಾಯಿತು. ತಾವು ಇದೇ ರೀತಿ ಒಂದೇ ವಸ್ತು ಅಥವಾ ವಿಚಾರಗಳ ಬಗ್ಗೆ ಸುಭಾಷಿತಗಳನ್ನು ಆರಿಸಿ ತಿಳಿಸಿಕೊಟ್ಟರೆ ಇನ್ನೂ ಚೆನ್ನ. ಹಾಗೇ ಬಿಡುವಾದರೆ ದಯವಿಟ್ಟು ಕೆಲವು ಕೂಟ ಶ್ಲೋಕಗಳು ಹಾಗು ಒಗಟು ಬಿಡಿಸುವಂಥ ಸುಭಾಷಿತಗಳ ಪರಿಚಯಾ ಮಾಡಿಕೊಡಿ.

    ReplyDelete
  3. ಸುಭಾಷಿತಗಳು ಓದಿದಷ್ಟೂ ಸಂತೋಷ ಕೊಡುತ್ತವೆ. ನಿಮ್ಮಿಂದ ಮತ್ತಷ್ಟು ಹೆಚ್ಚಿನ ಬರಹಕ್ಕಾಗಿ ಕಾದಿದ್ದೇನೆ.

    ReplyDelete

Post a Comment