ವಿಳಾಸ ವಿಲಾಸ

ವಿಳಾಸ ವಿಲಾಸ
ಹಾಸ್ಯ ಲೇಖನ -  ಅಣಕು ರಾಮನಾಥ್

‘ಸಪ್ತ ಮಹಾಸಾಗರದಾಚೆ, ಕಡಿದಾದ ಬೆಟ್ಟದ ಪುಟ್ಟ ಗುಹೆಯೊಂದರಿಂದ ನೂರು ಗಾವುದ ದೂರದಲ್ಲಿ ಪಾರಿಜಾತದ ಗಿಡವೊಂದಿದೆ. ಗಿಡದ ಟೊಂಗೆಗಳ ಮಧ್ಯದಲ್ಲಿ ಆರು ಪಕ್ಷಿಗಳು ಗೂಡು ಕಟ್ಟಿಕೊಂಡಿವೆ. ಅವು ಇಟ್ಟಿರುವ ನೂರು ಮೊಟ್ಟೆಗಳಲ್ಲೊಂದರಲ್ಲಿ ನನ್ನ ಪ್ರಾಣ ಅಡಗಿದೆ’ ಎಂದ ರಾಕ್ಷಸ. ಅವನÀ ಬಂಧನದಲ್ಲಿದ್ದ ರಾಜಕುಮಾರಿ ತನ್ನನ್ನು ಅರಸಿ ಬಂದ ಸಣಕಲು ಕಡ್ಡಿ ರಾಜಕುಮಾರನಿಗೆ ಇದನ್ನು ಚಾಚೂ ತಪ್ಪದೆ ಹೇಳಿದಳು. ರಕ್ಕಸನನ್ನು ಕಾಳಗಕ್ಕೆ ಕರೆದು ಹೊಡೆತÀ ತಿನ್ನುವುದಕ್ಕಿಂತ ಮೊಟ್ಟೆ ಒಡೆಯುವುದೇ ಸುಲಭವಲ್ಲವೇ! ರಾಜಕುಮಾರ ರಾಜಕುಮಾರಿ ಹೇಳಿದ ಅಡ್ರೆಸ್ ತಲುಪಿ ಮೊಟ್ಟೆ ಒಡೆದ. ರಕ್ಕಸ ಸತ್ತ. ರಕ್ಕಸನ ಸಾವಿನ ಸಂತಸವನ್ನು ಇಬ್ಬರೂ ಎಗ್ ಆಮ್ಲೆಟ್ ತಿನ್ನುತ್ತಾ ಹಂಚಿಕೊಂಡರು.


                                                           ‘ಈ ತರಹದ ಮಕ್ಕಳ ಕಥೆಗಳು ಎನಿತೋ. ಇದರಲ್ಲೇನಚ್ಚರಿ?’ ಎಂದಿರೇನು? ಕೊಂಚ ಗಮನಿಸಿ. ಆ ಕಾಲದಲ್ಲಿ ಕ್ರಾಸ್, ಮೇಯ್ನ್, ಡೋರ್ ನಂಬರ್‍ಗಳು ಏನೂ ಇರಲಿಲ್ಲ. ‘ಶೇರ್ ಲೊಕೇಶನ್’ ಎಂದು ಪಕ್ಷಿಗೆ ಮೆಸೇಜ್ ಕಳುಹಿಸಲು ಎಸ್ಸೆಮ್ಮೆಸ್ಸೂ ಇರಲಿಲ್ಲ, ವಾಟ್ಸ್ಯಾಪೂ ಇರಲಿಲ್ಲ. ಜಿಪಿಎಸ್ ಅಂತೂ ಇರಲೇ ಇಲ್ಲ. ವಿಜ್ಞಾನ ಇಷ್ಟು ಮುಂದುವರೆದಿರುವ ಈ ದಿನಗಳಲ್ಲಿಯೂ ನಮಗೆ ತಿಳಿದಿರುವುದು ಪಂಚ ಮಹಾ ಸಾಗರಗಳೇ (ಶಾಂತಿ, ಹಿಂದೂ, ಅಟ್ಲಾಂಟಿಕ್, ಆರ್ಕ್‍ಟಿಕ್, ಅಂಟಾರ್ಟಿಕ್). ಅದು ಹೇಗೆ ಇನ್ನೆರಡು ಮಹಾಸಾಗರಗಳನ್ನು ಹುಡುಕಿ, ನಂತರ ಅವನ್ನು ದಾಟಿದನವನು? ಸಪ್ತಸಾಗರಗಳ ನಂತರದ ಅಡ್ರೆಸ್ಸೂ ಅಸ್ಪಷ್ಟವೇ. ದೊಡ್ಡ ಬೆಟ್ಟದಲ್ಲಿ ಪುಟ್ಟ ಗುಹೆಯಂತೆ. ಮೊದಲು ದೊಡ್ಡ ಬೆಟ್ಟವಾವುದೆಂದು ಆಲ್ಟೋಮೀಟರ್ ಇಲ್ಲದ ಆ ಕಾಲದಲ್ಲಿಯೂ ಕಂಡುಹಿಡಿದು, ಅದರಲ್ಲಿರುವ ಅಸಂಖ್ಯಾತ ಗುಹೆಗಳಲ್ಲಿ ಪುಟ್ಟದು ಯಾವುದೆಂದು ಕಂಡುಹಿಡಿದು, ಅಲ್ಲಿಂದ ನೂರು ಗಾವುದ (ಯಾವ ದಿಕ್ಕು ತಿಳಿಯದಾದ್ದರಿಂದ ದಶದಿಕ್ಕುಗಳಲ್ಲಿಯೂ ಅಲೆದು ಹುಡುಕಬೇಕಲ್ಲ!) ಸಾಗಿ ಪಾರಿಜಾತದ ಮರ ಕಂಡುಹಿಡಿಯಬೇಕು. ಜಿಪಿಎಸ್ ಇರುವ ಈಗಿನ ದಿನಗಳಲ್ಲಿಯೂ ಬೆಟ್ಟ, ಗವಿ, ಗಿಡಗಳ ಬಳಿ ನೆಟ್‍ವರ್ಕ್ ಸಿಗದಿರುವುದರಿಂದ ಅಡ್ರೆಸ್ ಹುಡುಕುವುದು ಕಷ್ಟವಿರುವಾಗ ಆ ರಾಜಕುಮಾರ ಆ ಮೊಟ್ಟೆಯನ್ನು ಹುಡುಕಿ ಹಿಡಿದನೆಂದರೆ ಅದ್ಭುತವೇ ಸೈ!

                                                           ‘ಈ ಅಡ್ರೆಸ್ ಎಲ್ಬರತ್ತೆ ಹೇಳಿ?’ ಮಲ್ಲೇಶ್ವರದ ಮಾಸ್ತಿ ಟ್ರಸ್ಟ್‍ನ ವಿಳಾಸ ಹಿಡಿದು ನಿಂತೆ. ’21, 10ನೆಯ ಕ್ರಾಸ್, ಎಲ್ಲಪ್ಪ ಗಾರ್ಡನ್, ಮಲ್ಲೇಶ್ವರ’ ಎಂದಿತ್ತು ವಿಳಾಸ. ಹತ್ತನೆಯ ಕ್ರಾಸ್ ಸುಲಭವಾಗಿ ದೊರಕಿತು. ಎಲ್ಲಪ್ಪ ಎಂದು ಕೇಳುವುದಕ್ಕೆ ಮುಂಚೆಯೇ ಎಲ್ಲಪ್ಪ ಗಾರ್ಡನ್ನೂ ದೊರಕಿತು. ಆದರೆ 21? ನಾನು ನಿಂತಿದ್ದದ್ದು 25ನೆಯ ನಂಬರಿನ ಕಟ್ಟಡದ ಮುಂದೆ. ಅಲ್ಲಿಂದ ಲೆಕ್ಕಾಚಾರವಾಗಿ ನಾಲ್ಕು ಕಟ್ಟಡಗಳ ನಂತರ 21 ಇರಬೇಕಿತ್ತು. 25ರ ಎಡದ ಕಟ್ಟಡದ ನಂಬರಿನತ್ತ ನೋಡಿದೆ. 26 ಎಂದಿತ್ತು. ನಂತರ 27. ನಂತರ ರಸ್ತೆ. ರಸ್ತೆಯಾಚೆಯ ಮೂಲೆಯ ಕಟ್ಟಡದ ಸಂಖ್ಯೆ 39! ರಸ್ತೆ ಇದ್ದದ್ದು 30 ಅಡಿಗಳು. ಅಷ್ಟರಲ್ಲಿ 12 ಮನೆಗಳು ಒಂದು ಕಾಲದಲ್ಲಿದ್ದು ಉರುಳಿರಲು ಸಾಧ್ಯವೆ? ಇರಲಿ. ನನಗೆ ಬೇಕಾದುದು 21 ಆದ್ದರಿಂದಲೂ ಈ ದಿಕ್ಕಿನಲ್ಲಿ ಸಂಖ್ಯೆ ಏರುತ್ತಿದ್ದುದರಿಂದಲೂ 25ರ ಬಲದ ಕಟ್ಟಡದ ಸಂಖ್ಯೆಯೇನೆಂದು ನೋಡಿದರೆ – 85! ಎಲ್‍ಕೆಜಿ ಮಗುವಿನ ಲೆಕ್ಕದ ಪ್ರಕಾರವೂ 25ರ ಹಿಂದಿನ ಸಂಖ್ಯೆ 24ಏ ಇರಬೇಕಿತ್ತು. 85 ಬಂದುದಾದರೂ ಹೇಗೆ? ಅಸಲಿಗೆ ಈ ಕಟ್ಟಡದ ಸಂಖ್ಯೆ 24ಏ ಇದ್ದು, ಯಾರೋ ನ್ಯೂಮರಾಲಜಿಸ್ಟ್ ‘ನಿನ್ನ ಕಟ್ಟಡದ ಸಂಖ್ಯೆಯನ್ನು ಬೋರ್ಡಿನಲ್ಲಾದರೂ 85 ಎಂದು ಬದಲಾಯಿಸದಿದ್ದರೆ ನಿನ್ನ ಮಗ ಬ್ಲೂವೇಲ್ ಆಟಕ್ಕೆ ಅಧೀನನಾಗುತ್ತಾನೆ. ನಿನ್ನ ವ್ಯಾಪಾರ ರೂಪಾಯಿಯ ಮೌಲ್ಯದಂತೆ ದಿನೇ ದಿನೇ ತಗ್ಗುತ್ತದೆ’ ಎಂದು ಹೆದರಿಸಿದುದರಿಂದ 85 ಆಗಿರಬಹುದೇ ಎಂದು ಆಲೋಚಿಸುತ್ತಾ ನಿಂತೆ.
                       ‘ಇಲ್ಲಿ ನಂಬರ್‍ಗಳು ಸರಿಯಿಲ್ಲ ಸಾರ್. ಪಕ್ಕದ ಕ್ರಾಸಲ್ಲಿ ಮೂರನೇ ಬಿಲ್ಡಿಂಗಲ್ಲಿದೆ ನೋಡಿ 21’ ಎಂದನೊಬ್ಬ ಸ್ಥಳವಿಳಾಸ ತಜ್ಞ. ‘10ನೆಯ ಕ್ರಾಸ್ ಮಲ್ಲೇಶ್ವರ’ದ ಅಡ್ರೆಸ್ ಹೊಂದಿದ ಕಟ್ಟಡ ಗಲ್ಲಿಯಲ್ಲಿತ್ತು!
                           ವಿಳಾಸ ಹುಡುಕುವ ತಹತಹ ಇಂದು ನಿನ್ನೆಯದಲ್ಲ. ಆಧುನಿಕ ಕಾಲದವರಾದ ನಾವೇ ಯಾವಾಗಲೂ hurry hurry ಎನ್ನುವ ಆತುರಮುಖರು ಎಂದುಕೊಂಡಿದ್ದೇವೆ. ಆದರೆ ಪುರಾಣವನ್ನು ಅವಲೋಕಿಸಿದರೆ ಅದು ತಪ್ಪೆಂದು ತಿಳಿಯುತ್ತದೆ. ಭಸ್ಮಾಸುರನು ಶಿವನಿಂದ ವರ ಪಡೆದಾದ ನಂತರ ಎಲ್ಲರ ತಲೆಯ ಮೇಲೂ ಕೈ ಇಡಲು ಆರಂಭಿಸಿ, ಹರನ ತಲೆಯಮೇಲೂ ಕೈಯಿರಿಸಲೆಂದು  ‘ಎಲ್ಲಿಹನು ಹರ?’ ಎಂದು ಹುಡುಕಾಡಲು ತೊಡಗಿದಂದು ಅಡ್ರೆಸ್ ಹುಡುಕುವ ಕಾಯಕ ಆರಂಭವಾಯಿತೆನಿಸುತ್ತದೆ. ಇವೆಲ್ಲ ದೇವಲೋಕದ ‘ಪ್ರಿ-ಸಮುದ್ರಮಥನ ಪೀರಿಯಡ್’ದಾದರೆ, ಭೂಲೋಕದಲ್ಲಿ ಅಡ್ರೆಸ್ ಹುಡುಕುವುದು ಆರಂಭವಾದದ್ದು   ಕೃತಯುಗದಲ್ಲೇ.  ಹಿರಣ್ಯಕಶಿಪುವಿಗೆ ಹರಿಯನ್ನು ನೋಡುವ hurry. ಆದ್ದರಿಂದ ಪ್ರಹ್ಲಾದನನ್ನು ಪೀಡಿಸುತ್ತಾ ‘ಎಲ್ಲಿಹನು ಹರಿ? ಆ ಕಂಬದಲ್ಲಿರುವನೆ? ಈ ಕಂಬದಲ್ಲಿರುವನೆ? ತೋರಿಸು, ಪ್ಲೀಸ್ ಹರಿ’ ಎಂದುದು ಭುವಿಯಲ್ಲಿ ಕೈಗೊಂಡ ಮೊದಲ ಅಡ್ರೆಸ್ ಹುಡುಕಾಟದ ಪ್ರಸಂಗವೆನ್ನಬಹುದು.
ಪುರಾಣದ ಪ್ರಸಂಗಗಳೆಂದಮೇಲೆ ಅವುಗಳನ್ನು ಕುರಿತು ನಾಟಕಗಳು ಇರಲೇಬೇಕಲ್ಲ. ಪ್ರಹ್ಲಾದ ಹರಿ ಎನ್ನುತ್ತಿದ್ದಾನೆ. ಹಿರಣ್ಯಕಶಿಪು ‘ಎಲ್ಲಿಹನು ಹರಿ? ಈ ಕಂಬದಲ್ಲಿರುವನೇ?’ ಎನ್ನುತ್ತಾ ಗದೆಯನ್ನೆತ್ತಿ ಕಂಬಕ್ಕೆ ಹೊಡೆಯಲು ಉಪಕ್ರಮಿಸಿದ್ದಾನೆ. ಆದರೆ ಆ ಕಂಬದಲ್ಲಿ ಇರಬೇಕಾಗಿದ್ದ ನರಸಿಂಹ ಏನೋ ಟೆಕ್ನಿಕಲ್ ಪ್ರಾಬ್ಲಂನಿಂದ ಇನ್ನೊಂದು ಕಂಬದಲ್ಲಿ ಅಡಗಿರುತ್ತಾನೆಂದು ಪ್ರಹ್ಲಾದನಿಗೆ ನಿರ್ದೇಶಕ
ಹೇಳಿದ್ದು, ಹಿರಣ್ಯಕಶಿಪುವಿಗೆ ಹೇಳಲು ಮರೆತಿದ್ದ. ರಕ್ಕಸ ಪಾತ್ರಧಾರಿ ಕಂಬಕ್ಕೆ ಬಲವಾಗಿ ಏಟು ಕೊಟ್ಟೇಬಿಟ್ಟ. ನಾಟಕದ ಇಡೀ ಸೆಟ್ ಕಂಪಿಸಿತು. ಪ್ರಹ್ಲಾದ ಕೂಡಲೆ ಆ ಕಂಬ ಮತ್ತು ಹಿರಣ್ಯಕಶಿಪುವಿನ ಮಧ್ಯೆ ಬಂದು ನಿಂತು ‘ಈ ಕಂಬದಲ್ಲಿಲ್ಲ, ಆ ಕಂಬದಲ್ಲಿರುವನು’ ಎಂದ. ‘ಏನೆಂದೆ? ನಿನ್ನ ಹರಿ ಎಲ್ಲೆಡೆಯೂ ಇರುವನೆಂದೆಯಲ್ಲವೇ! ಈಗ ಈ ಕಂಬದಲ್ಲಿಲ್ಲವೆನ್ನುವೆಯಲ್ಲ. ಏನು ಕಾರಣ?’ ಎಂದು ಘರ್ಜಿಸಿದ ಹಿರಣ್ಯಕಶಿಪು.
‘ಆ ಕಂಬ ವಾಸ್ತು ಪ್ರಕಾರ ಇಲ್ಲ. ಆದ್ದರಿಂದ ಹರಿ ವಿಳಾಸ ಬದಲಿಸಿದ್ದಾನೆ’ ಎಂದುತ್ತರವಿತ್ತ ಆಧುನಿಕ ಪ್ರಹ್ಲಾದ. ವಾಸ್ತುಶಾಸ್ತ್ರದ ಹುಚ್ಚು ಹರಡಿರದಿದ್ದ ಕೃತಯುಗದಲ್ಲಿ ನರಸಿಂಹ ಒಡೆದ ಕಂಬದಿಂದ ಹೊರಬರದಿದ್ದರೆ ಆ ಒರಿಜಿನಲ್ ಪ್ರಹ್ಲಾದ ಏನೆಂದು ಉತ್ತರಿಸುತ್ತಿದ್ದನೋ ಏನೋ!
ಕೃತದಲ್ಲಿಯೇ ಒಳ್ಳೆಯ ಅಡ್ರೆಸ್ ಹೊಂದಿದ್ದವನೊಬ್ಬ ಅದಕ್ಕಿಂತ ಕೆಟ್ಟದಾದ ಅಡ್ರೆಸ್‍ಗೆ ಹೋಗುವುದರ ಮೂಲಕ ‘ಪರ್ಮನೆಂಟ್ ಅಡ್ರೆಸ್’ ಮತ್ತು ‘ಟೆಂಪೊರರಿ ಅಡ್ರೆಸ್’ಗಳ ಪರಿಕಲ್ಪನೆಯನ್ನು ಜಗಕ್ಕೆ ನೀಡಿದ. ಝುಮ್ಮನೆ ಮನಬಂದಂತೆ ದಾನ ಮಾಡುತ್ತಿದ್ದ ರಾಜ ಬಲೀಂದ್ರ ವಾಮನನ ಕಾಲ್ತುಳಿತಕ್ಕೊಳಗಾಗಿ ಇದ್ದ ರಾಜ್ಯವನ್ನು ಬಿಟ್ಟು ಪಾತಾಳಕ್ಕೆ ಸೇರಿದ. ಆದರೆ ಪ್ರತಿ ಬಲಿಪಾಡ್ಯಮಿಯಂದು ತನ್ನ ರಾಜ್ಯಕ್ಕೆ ಬರುತ್ತಾನೆ. ಹೀಗಾಗಿ ಬಲಿಪಾಡ್ಯಮಿಯಂದು ಬಲಿಯದು ಟೆಂಪೊರರಿ ಅಡ್ರೆಸ್ ಮತ್ತು ಮಿಕ್ಕ ದಿನಗಳಲ್ಲಿ ಪಾತಾಳದ ಪರ್ಮನೆಂಟ್ ಅಡ್ರೆಸ್ ಎಂದಾಗಿ, ಪಾತಾಳ ಮತ್ತು ಭೂಮಿಯ ಸಿಟಿಝನ್‍ಶಿಪ್ ಹೊಂದುವುದರ ಮೂಲಕ ಬಲಿ ಡ್ಯುಯಲ್ ಸಿಟಿಝನ್‍ಶಿಪ್ ಹೊಂದಿದ ಮೊದಲ ವ್ಯಕ್ತಿಯೆಂಬ ಖ್ಯಾತಿಗೆ ಭಾಜನನಾದ. ಅಲ್ಲದೆ, ಪವರ್‍ಫುಲ್ ಪೀಪಲ್‍ನ ಎದುರು ಹಾಕಿಕೊಂಡರೆ ಏರಿಯಾ ಬಿಡುವಂತಹ ಪರಿಸ್ಥಿತಿ ಬರುತ್ತದೆ ಎನ್ನುವ ಅಂಶವೂ, ‘if you are too good you will be somebody else`s food’ ಎಂಬುದೂ ಅಸ್ತಿತ್ವಕ್ಕೆ ಬಂದವು.
ಕೃತಯುಗದಿಂದ ತ್ರೇತಾಯುಗಕ್ಕೆ ಬಂದರೆ ಸಾಕ್ಷಾತ್ ಶ್ರೀರಾಮನೇ ವ್ಯಕ್ತಿ/ವಿಳಾಸ ಹುಡುಕುವುದರಲ್ಲಿ ತೊಡಗುವುದು ಕಂಡುಬರುತ್ತದೆ. ಯಾವುದೋ ಅಡ್ರೆಸ್ ಹುಡುಕಿಕೊಂಡು ಹೋದಾಗ, ಸ್ಥಳೀಯ ಸಹೃದಯಿಗಳು ಸಹ ನಮ್ಮೊಡನೆ ಒಂದಷ್ಟು ದೂರ ಬಂದು ನಮ್ಮೊಡನೆಯೇ ಅಡ್ರೆಸ್ ಹುಡುಕಿಕೊಡುವಂತೆಯೇ ಅಂದೂ ರಾವಣನ ಅಡ್ರೆಸ್ ಹುಡುಕಲು ಸುಗ್ರೀವನೂ ಜೊತೆಗೆ ಬಂದ. ವಿಳಾಸ ವ್ಯಕ್ತವಾಗಿದ್ದಾಗ ಹುಡುಕುವುದು ಒಂದು ವಿಧವಾದರೆ ಅವ್ಯಕ್ತವಾಗಿರುವಾಗ ಹುಡುಕುವುದು ಇನ್ನೊಂದು ವಿಧ ಎನ್ನುವುದಕ್ಕೆ ‘ದಶಾವತಾರ’ ಚಿತ್ರದ ‘ಗೋದಾವರಿ ದೇವಿ ಮೌನವಾಂತಿಹೆ ಏಕೆ, ವೈದೇಹಿ ಏನಾದಳು’ ಎಂಬ ಗೀತೆಯೇ ಸಾಕ್ಷಿ. ನಮ್ಮ ಹಿರಿಯರೊಬ್ಬರನ್ನು ‘ಆ ಕಾಲದಲ್ಲಿ ತರುಜಲಮರುತಗಳು ಮಾತನಾಡುತ್ತಿದ್ದವೇನು?’ ಎಂದು ಕೇಳಿದೆ.
‘ಹೌದು. A picture is worth a thousand words ಅಂತ ಕೇಳಿಲ್ಲವೇನು? ‘ಎಲೈ ಬಳ್ಳಿಯೆ, ನೀನು ಸೀತೆಯನ್ನು ಕಂಡೆಯಾ ಎಂದು ರಾಮ ಪ್ರಶ್ನಿಸಿದ’ ಎಂದರೆ ಪ್ರಶ್ನಿಸಿದ ಎಂದು ಅರ್ಥವಲ್ಲ. ಬಳ್ಳಿಯನ್ನು ಸವರಿಕೊಂಡು ಸೀತೆ ಮತ್ತು ಅಪಹರಣಕಾರ ಸಾಗಿದ್ದರೆ ಸವರಿದ ಭಾಗ ಅಥವ ಲತೆಯ ಕಾಂಡಕ್ಕೆ ಸಿಲುಕಿರಬಹುದಾದ ಅಪಹರಣಕಾರನ ಅಥವ ಅಪಹೃತಳ ಬಟ್ಟೆಯ ತುಂಡು ಕಣ್ಣಿಗೆ ಬಿದ್ದು ಕೃತ್ಯಕ್ಕೆ ಸಾಕ್ಷಿಯಾಗುತ್ತಿತ್ತು ಎಂದರ್ಥ. ‘ನದಿಯೇ, ಸೀತೆಯನ್ನು ಕಂಡೆಯಾ?’ ಎಂದರೆ ನದಿಯಲ್ಲಿ ತೆಪ್ಪದ ಸುಳಿವೇನಾದರೂ ಕಂಡಿತೇ ಎಂದು ರಾಮ ನೋಡಿದ ಎಂದು ಅರ್ಥ. ಸುಳಿವೇ ವಿಳಾಸದ ಜೀವಾಳವಯ್ಯ’ ಎಂದರು. ಅನಂತ ಚತುರ್ದಶಿಯ ವ್ರತಕಥೆಯಲ್ಲಿಯೂ ‘ಎಲೈ ನದಿಯೆ, ನೀನೇನಾದರೂ ಅನಂತಪದ್ಮನಾಭನನ್ನು ಕಂಡೆಯಾ? ಎಲೈ ಬಂಡೆಯೆ, ನೀನೇನಾದರೂ ಅನಂತಪದ್ಮನಾಭನನ್ನು ಕಂಡೆಯಾ?’ ಎಂದು ಉಲ್ಲೇಖವಾಗಿರುವುದೂ ತ್ರೇತದ ವಿಳಾಸ ಪತ್ತೆ ಹಚ್ಚುವಿಕೆಯ ಮುಂದುವರಿದ ಭಾಗವೇ ಅನಿಸುತ್ತದೆ.
ದ್ವಾಪರದಲ್ಲಂತೂ ವಿಳಾಸ ಪತ್ತೆ ಹಚ್ಚುವುದಕ್ಕೆ ಪರ್ವ ಕಾಲ. ಕೃಷ್ಣ ಈಗ ಇಲ್ಲಿ, ಮುಂದಿನ ಕ್ಷಣ ಎಲ್ಲೋ ಎಂದು ಚಿಗರೆಗಿಂತಲೂ ವೇಗವಾಗಿ ಸಾಗುತ್ತಿರುವಾಗ ‘ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ? ರಂಗನ ಎಲ್ಲಿ ನೋಡಿದಿರಿ?’ ಎನ್ನುತ್ತಾ ‘ಸುಂದರಾಂಗದ ಸುಂದರಿಯರ ಹಿಂದುಮುಂದೆಲ್ಲ’ ಹುಡುಕುವುದು ಕಂಡುಬರುತ್ತದೆ. ಕೆಲವು ಪ್ರಮುಖ ವ್ಯಕ್ತಿಗಳು ಇತರರಿಂದ ಕಿರಿಕಿರಿ ತಪ್ಪಿಸಿಕೊಳ್ಳಲು ತಮ್ಮ ವಿಳಾಸವನ್ನು ಮರೆಮಾಚುತ್ತಾರೆ. ಅಂತೆಯೇ ಹುಟ್ಟುತ್ತಲೇ ಕೃಷ್ಣ ತನ್ನ ಪರ್ಮನೆಂಟ್ ಅಡ್ರೆಸ್ಸನ್ನು ಬಿಟ್ಟುಕೊಡಲು ಬಯಸದೆ ಟೆಂಪೊರರಿ ಅಡ್ರೆಸ್‍ಗೆ ಶಿಫ್ಟ್ ಆಗುವುದರಲ್ಲಿದ್ದಾಗ ಕತ್ತೆಯೊಂದು ಪರ್ಮನೆಂಟ್ ಅಡ್ರೆಸ್‍ನ ಸೂಚನೆಯನ್ನು ಕಂಸನಿಗೆ ಕೊಡುವುದರಲ್ಲಿದ್ದಿತಂತೆ. ಇದೇ ಯುಗದಲ್ಲಿನ ಕರ್ಣನಿಗಂತೂ ಡ್ರೆಸ್ಸು, ಅಡ್ರೆಸ್ಸುಗಳೆರಡರದೂ ಸಮಸ್ಯೆಯೇ. ಧರಿಸಿದ ಕವಚ ಕುಂಡಲಗಳ ಮೇಲೆ ಒಬ್ಬರ ಕಣ್ಣಾದರೆ, ಒರಿಜಿನಲ್ ಅಡ್ರೆಸ್ ಆದ ಕರ್ಣ ಕೇರ್ ಆಫ್ ಕುಂತಿ ಎನ್ನುವುದು ಅಂದಿನ ಆಧಾರ್ ಕಾರ್ಡ್‍ನಲ್ಲಿ ಬರಲೇಯಿಲ್ಲವಾದ್ದರಿಂದ ಕರ್ಣ, ಕೇರಾಫ್ ಸೂತ ಎನ್ನುವುದೇ ಪರ್ಮನೆಂಟ್ಲಿ ಟೆಂಪೊರರಿ ಅಡ್ರೆಸ್ ಆಯಿತು.
ಮಹಾಭಾರತದ ವಿರಾಟಪರ್ವವಂತೂ ಬೇನಾಮಿ ಅಡ್ರೆಸ್‍ಗಳ ತವರು. ಅಲ್ಲಿ ಧರ್ಮರಾಯ ಕಂಕಭಟ್ಟನಾದ, ಭೀಮ ವಲಲನಾದ, ಅರ್ಜುನ ಬೃಹನ್ನಳೆಯಾದ; ಐದು ಜನ ಪಾಂಡವರೂ ತಮ್ಮ ಪ್ರೊಫೆಷನ್ ಮತ್ತು ಅಡ್ರೆಸ್ ಎರಡನ್ನೂ ಬದಲಾಯಿಸಿದರು. ದುರ್ಯೋಧನನಿಗೆ ಅವರ ಅಡ್ರೆಸ್ ಪಡೆಯಲೇಬೇಕೆಂಬ ಅನಿವಾರ್ಯತೆ. ‘ಕೀಚಕ ಸತ್ತ’ ಎಂಬ ಸುದ್ದಿ ಬಂದ ತಕ್ಷಣ ವಿಳಾಸ ಸಿಕ್ಕಿಯೇಬಿಟ್ಟಿತೆಂಬ ಸಂಭ್ರಮದಲ್ಲಿ ಸೇನೆಯನ್ನು ಕರೆದುಕೊಂಡು ವಿರಾಟನ ಗೋವುಗಳನ್ನು ಕದ್ದೊಯ್ದ. ಬಿಡಿಸಿಕೊಳ್ಳಲು ಅರ್ಜುನ ಹೊರಬಂದು ವಿಳಾಸವನ್ನು ಬಿಟ್ಟುಕೊಟ್ಟ.
ಆಗಿನಿಂದಲೇ ಸಾಮಾನ್ಯರಿಗೆ ತಿಳಿಯದ ವಿಳಾಸಗಳನ್ನು ಹಾಲಿನವರ (ಗೋವು ಹಾಲಿನವಳೇ ಅಲ್ಲವೆ) ಮೂಲಕ ಪಡೆಯಬಹುದೆಂದು ತಿಳಿದುಬಂದು, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಮಾಡಿದವರ ವಿಳಾಸ ಪತ್ತೆ ಹಚ್ಚಲು ಸಹ ಹಾಲಿನವರನ್ನೇ ಕೇಳಿ ತಿಳಿದುಕೊಳ್ಳಲಾಯಿತು.

ವಿರಾಟಪರ್ವದಲ್ಲಿ ದುರ್ಯೋಧನ ಪಾಂಡವರನ್ನು ಹುಡುಕಿದರೆ, ಕುರುಕ್ಷೇತ್ರ ಯುದ್ಧದ ಹದಿನೆಂಟನೆಯ ದಿನ ಭೀಮ ದುರ್ಯೋಧನನನ್ನು ಹುಡುಕಿಕೊಂಡು ಬಂದ ರೀತಿಯನ್ನು ರನ್ನ ವರ್ಣಿಸುವುದೇ ಚಂದ.
ರಸೆಗಿಳಿದನೊ ಮೇಣ್ ನಾಲ್ಕುಂ
ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲೀ
ವಸುಮತಿಯೊಳ್ ಗಾಂಧಾರಿಯ
ಬಸಿರಂ ಮೇಣ್ ಮಗುಳೆ ಪೋಗಿ ಪೊಕ್ಕಿರ್ದನೋ
ಎನ್ನುತ್ತಾ ಎಲ್ಲೆಡೆ ಭೀಮ ಹುಡುಕುತ್ತಾ ಬಂದಾಗ ‘ಮರುದಾಂದೋಳಿತ ಜಂಬೂತರು ಶಾಖಾ ಹಸ್ತ ಕಿಸಲಯಂ ಮಿಳಿಮಿಳಿರುತ್ತಿರೆ’ ಅದು ‘ಭವತಹಿತನಿಲ್ಲಿದಂ’ ಎಂದು ಸೂಚಿಸುತ್ತಿರುವಂತೆ ತೋರಿತಂತೆ. ದ್ವಾಪರದಲ್ಲಿ ಮಿನುಗುವ ಹೂಗಳು, ಹಾರುವ ಹಕ್ಕಿಗಳೇ ದಾರಿ ತೋರುವ ಸೈನ್ ಬೋಡ್ರ್ಸ್.
ಕಲಿಗಾಲದಲ್ಲಿ ಕವಿ ಕಾಳಿದಾಸ ವಿಳಾಸ ಹುಡುಕುವುದರಲ್ಲಿ ಪರಿಣಿತ. ಯಕ್ಷನೊಬ್ಬ ತನ್ನ ನಲ್ಲೆಯನ್ನು ಹುಡುಕಿ, ಸಂದೇಶ ತಲುಪಿಸಬೇಕಾದರೆ ಮೇಘವನ್ನೇ ಬಳಸಬಹುದು, ಮೇಘಕ್ಕೆ ‘ರೂಟ್ ಮ್ಯಾಪ್’ ಹಾಕಿಕೊಟ್ಟರೆ ಅದು ಅಲ್ಲಿಗೆ ಸಂದೇಶ ತಲುಪಿಸುತ್ತದೆ ಎಂಬ ಅಮೋಘವಾದ ಸಂಶೋಧನೆ ಮಾಡಿ, ಅಂಚೆ ಕಚೇರಿ ಯೋಜನೆಗೆ ಪ್ರಪ್ರಥಮ ‘ಬ್ಲೂಪ್ರಿಂಟ್’ ಒದಗಿಸಿಕೊಟ್ಟವನೇ ಕಾಳಿದಾಸ. ಕಾಲ ಕಳೆದಂತೆ ಸ್ತ್ರೀಯರೂ ‘ವಿಳಾಸ ಹುಡುಕುವದರಲ್ಲಿ ನಮ್ಮದೂ ಪರಿಶ್ರಮವಿದೆ’ ಎಂದು ತೋರಿಸಿಕೊಡುವುದಕ್ಕೆ ದಾಖಲೆಯಾಗಿ ಅಕ್ಕಮಹಾದೇವಿಯ ‘ನೀವೇನಾದರೂ ಚೆನ್ನಮಲ್ಲಿಕಾರ್ಜುನನನ್ನು ಕಂಡಿರಾ?’ ಎಂಬ ವಚನಗಳ ಮಾಲೆಯೇ ಇದೆ. ಡಾ. ರಾಜ್‍ಕುಮಾರ್ ನಟಿಸಿದ ಚಿತ್ರ ಭಕ್ತ ಕುಂಬಾರದಲ್ಲಿ ‘ಎಲ್ಲಿ ಮರೆಯಾದೆ ವಿಠಲ, ಏಕೆ ದೂರಾದೆ’ ಎನ್ನುತ್ತಾ ವಿಠಲನ ವಿಲಾಸ, ವಿಳಾಸಗಳನ್ನು ಹುಡುಕುವ ದೃಶ್ಯವಿದೆ. ಅನಂತ್ ನಾಗ್ ಅಭಿನಯದ ‘ಬಯಲುದಾರಿ’ಯಲ್ಲೂ ಹೈಲೆವೆಲ್‍ನಿಂದ ಲೋಲೆವೆಲ್‍ನತ್ತ ಸಾಗುತ್ತಾ ವಿಳಾಸ ಹುಡುಕುವ ಗೀತೆಯಿದೆ. ಹೆಲಿಕಾಪ್ಟರ್‍ನಲ್ಲಿ ಕುಳಿತ ನಾಯಕ ‘ಎಲ್ಲಿರುವೆ ಮನವ ಕಾಡುವ ರೂಪಸಿಯೇ...’ ಎನ್ನುತ್ತಾ ಸಾಗುವ ಅವಿಸ್ಮರಣೀಯ ದೃಶ್ಯದ ಹಿನ್ನೆಲೆಯಲ್ಲೇ ವಿಳಾಸವೇ ಸಿಗದಂತೆ ಕಾಣೆಯಾಗುವವರೂ ಮನದಲ್ಲಿ ನಿಲ್ಲುತ್ತಾರೆ. ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ‘ರಾಜೀವ’ ಕಡೆಯ ದೃಶ್ಯದಲ್ಲಿ ನಡೆಯುತ್ತಲೇ ನಡೆಯುತ್ತಲೇ ನಡೆಯುತ್ತಲೇ ಅದೆಲ್ಲಿ ಹೋಗುವನೋ ತಿಳಿಯುವುದೇ ಇಲ್ಲ.
ವಿಳಾಸವೆಂದಮೇಲೆ ಅಂಚೆಯವರೂ ಇರಲೇಬೇಕಲ್ಲ. ಗಲ್ಲಿ ಸುತ್ತಿ, ಹಳ್ಳ ಇಳಿದು, ದಿಣ್ಣೆ ಏರಿ, ಕೊಡಗು ಮತ್ತಿತರ ಕ್ಷೇತ್ರಗಳಲ್ಲಿ ಪೋಸ್ಟ್ ತಲುಪಿಸುವ ಅಂಚೆಯವರದು ನಿಜಕ್ಕೂ ಸುಸ್ಮರಣೀಯ ಸೇವೆ. ಕೆಲವು ಹಳ್ಳಿಗಳಲ್ಲಂತೂ ವ್ಯಕ್ತಿಯ ಹೆಸರು, ಹಳ್ಳಿಯ ಹೆಸರು ಇದ್ದರೆ ಅಂಚೆ ತಲುಪಿಬಿಡುತ್ತದೆ. ಆದರೆ ನಗರದಲ್ಲಿ? ಪಟ್ಟಣಗಳಲ್ಲಿ?
ಜಗದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‍ಮನ್ ಆಗಿದ್ದ ಡಾನ್ ಬ್ರಾಡ್‍ಮನ್‍ಗೆ ತಲುಪಿದ ಪತ್ರವೊಂದರ ಪ್ರಸಂಗ ಸೊಗಸಾಗಿದೆ. ಆಸ್ಟ್ರೇಲಿಯಾದ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿತ್ತು. ಭಾರತದ ಕ್ರಿಕೆಟ್ ಪ್ರೇಮಿಯೊಬ್ಬರಿಗೆ ಬ್ರಾಡ್‍ಮನ್ಗೊಂದು ಪತ್ರ ಬರೆಯಬೇಕೆನಿಸಿತು. ವಿಳಾಸವೂ ಲಾಡ್ರ್ಸ್ ಮೈದಾನ ಎಂದೋ, ಎಡ್ಗ್‍ಬಾಸ್ಟನ್ ಎಂದೋ ಬರೆಯಬಹುದಾಗಿತ್ತು. ಆದರೆ ಪತ್ರ ವಿಳಂವಾಗಿ ಬ್ರಾಡ್‍ಮನ್ ಅಲ್ಲಿಂದ ಹೊರಟುಬಿಟ್ಟಿದ್ದರೆ? ಈ ಸಂದಿಗ್ಧವನ್ನು ಮೀರುವ ಸಲುವಾಗಿ ಆ ಕ್ರಿಕೆಟ್ ಪ್ರೇಮಿಯು ಲಕೋಟೆಯ ಮೇಲೆ ‘ಟುಮ ಬ್ರಾಡ್‍ಮನ್, ಪ್ಲೇಯಿಂಗ್ ಎನಿವೇರ್ ಇನ್ ಇಂಗ್ಲೆಂಡ್’ ಎಂದು ಬರೆದು ಪತ್ರವನ್ನು ಪೋಸ್ಟ್ ಮಾಡಿದರು.
ಪತ್ರ ಬ್ರಾಡ್‍ಮನ್‍ರನ್ನು ತಲುಪಿತು!
ಆದರೆ ಬರೆದುದೆಲ್ಲ ತಲುಪುವುದೆ? ಎಷ್ಟೋ ಬಾರಿ ಈಮೇಯ್ಲ್‍ಗಳೇ ಸ್ಪಾಮ್‍ನಲ್ಲಿಯೋ, ಟ್ರಾಷ್‍ನಲ್ಲಿಯೋ ಮರೆಯಾಗಿಬಿಡುವಾಗ ಆ ಮೇಯ್ಲ್‍ಗಳು ತಲುಪದಿದ್ದುದು ಅಸಹಜವೇನಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಕರಾಚಿಯಲ್ಲಿದ್ದ ಹುಡುಗನೊಬ್ಬ ಬರೆದ ಪ್ರೇಮಪತ್ರ ಪ್ರೇಮಿಯನ್ನು ತಲುಪಿದ್ದು 52 ವರ್ಷಗಳ ನಂತರ! ಆ ಹೊತ್ತಿಗೆ ಆ ಹುಡುಗಿಯ ಮೊಮ್ಮಗಳು ಮದುವೆಯ ವಯಸ್ಸನ್ನು ತಲುಪಿದ್ದಳೋ ಏನೋ!
ವಿಳಾಸಕ್ಕೆ ಪತ್ರ ತಲುಪದಿರಲು ಕೈಬರಹವೂ ಕೆಲವೊಮ್ಮೆ ಕಾರಣವಾಗುತ್ತದೆ. ಎಸ್ ಗುಂಡೂರಾವ್‍ರವರು ಬರೆದ ‘ಮೀನಾ ಕಾಗದ’ (ಅಥವ ಅವಳ ಕಾಗದ ಇರಬಹುದು)ದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಹೆಡ್ ಕ್ಲರ್ಕ್ ಆಗಿದ್ದ ಗಂಡನಿಗೆ ಬರೆದ ಪತ್ರದ ಮೇಲಿನ ವಿಳಾಸ ಹೀಗಿತ್ತು – ‘ಹೆಡ್ ಕುಕ್ಕು, ಮ್ಯಾಜಿಕ್ ಸೆಟ್ರು ಕೊಟ್ರು’! ‘ಸಾಹೇಬ್ ಅಜ್ಮೀರ್ ಗಯೇ’ ಎಂದು ಬರೆಯಯ್ಯ ಎಂದರೆ ‘ಸಾಹೇಬ್ ಆಜ್ ಮರ್ ಗಯೇ’ ಎಂದು ಬರೆದÀಂತಹ ‘ಅಕ್ಷರಬ್ರಹ್ಮರು’ ಇರುವತನಕ ವಿಳಾಸದ ವಿಲಾಸ ವಿಚಿತ್ರ ರೂಪಗಳನ್ನು ಪಡೆಯುತ್ತಲೇ ಇರುತ್ತದೆ.
ಅಂದ್ಹಾಗೇ, ವಿಷಯಾನೇ ಮರೆತೆ. ಡಿಸ್ಟ್ರಿಕ್ಟ್ ಆಫೀಸ್, ಸರ್ವೀಸ್ ರೋಡ್ ಅಂತ ವಿಳಾಸ ಇದೆ. ಊರು ನಿಮ್ಮೂರೇ. ಈ ಅಡ್ರೆಸ್ ಎಲ್ಬರತ್ತೆ ಹೇಳ್ತೀರಾ.....?

Comments

  1. ಅಬ್ಬಬ್ಬಾ, ವಿಳಾಸದ ವಿಲಾಸವನ್ನಾಡಿಬಿಟ್ಟಿದ್ದಾರೆ ರಾಮನಾಥ್ ಸರ್. ಓದುತ್ತಾ ಓದುತ್ತಾ ಹೋದಂತೆ ನಮ್ಮ ಮನೆಯ, ನಾನೆಲ್ಲಿದ್ದೇನೆ, ಯಾವ ಯುಗದಲ್ಲಿ ಇದ್ದೇನೆ ಎಂದು ತಲೆ ಕೆರೆದುಕೊಳ್ಳುವಂತಾಯ್ತು.
    ಹೌದು, ಈ ಇ-ಪತ್ರಕ್ಕೆ ನಾನು ಅಡ್ರೆಸ್ ಹಾಕಿಲ್ಲ, ಎಲ್ಲಿಗೆ ಸೇರುತ್ತೋ ಏನೋ, ರಾಮರಾಮಾ!!!

    ReplyDelete
    Replies
    1. ನನಗಂತೂ ಸೇರಿದೆ. ಮನವನ್ನೂ ತಲುಪಿದೆ. ಆದರೆ ಮನ ಎಲ್ಲಿದೆ ಎಂದಿರೆ? ಹೈ ಅಪನಾ ದಿಲ್ ತೊ ಆವಾರಾ ನ ಜಾನೇ ಕಿಸೀಪೇ ಆಯೇಗಾ............

      Delete
  2. ತಡೆಯಲಾರದ ಹಾಸ್ಯ ಉಕ್ಕಿ ಉಕ್ಕಿ ಬಂತು ಸಾರ್ ಈ ಲೇಖನ ಓದಿ. ಲೇಖನ ಎಂದಿನಂತೆ ಚಿಕ್ಕದಲ್ಲದಿದ್ರೂ ಅಷ್ಟು ಬೇಗ ಮುಗಿತಾ ಅನ್ಸತ್ತೆ, ನನಗೆ ತುಂಬಾ ಇಷ್ಟವಾದ ಪಾಯಿಂಟ್ಸ್ hurry hurry ಎನ್ನುವ ಆತುರಮುಖರು, ತರುಜಲಮರುತಗಳು ಮಾತನಾಡುತ್ತಿದ್ದವೇನು?, ಹಿರಣ್ಯಕಷಿಪು ..... ಹೇಳುತ್ತಾ ಹೋದರೆ ಜಾಗ ಸಾಲದು. ಎಲ್ಲಿಂದೆಲ್ಲಿಗೆ ಲಿಂಕ್ ಸಾರ್ , ಲೇಖನದ ಹಾಸ್ಯಗುಣಮಟ್ಟ ಹಿಂದೆಲ್ಲಾ ಲೇಖನವನ್ನೂ ಮೀರಿಸಿದೆ. ತಮ್ಮ ಅಪಾರ ಜ್ಞಾನಪ್ರದರ್ಶನವು ಈ ಲೇಖನದಲ್ಲಿ ಕಾಣ ಸಿಗುತ್ತದೆ. ಬೀ ಚಿ ಅವರನ್ನು ಬಿಟ್ಟರೆ ನಿಮ್ಮ ಲೇಖನಗಳೇ ನನಗೆ ಇಷ್ಟು ಮಜಾ ಕೊಟ್ಟಿದ್ದು.

    ReplyDelete

Post a Comment