ಡಯೋಜನೀಸ್

ಡಯೋಜನೀಸ್
ಲೇಖನ - ಡಾ ಸಿ ವಿ  ಮಧುಸೂದನ

                           ಗ್ರೀಕ್ ತತ್ತ್ವಜ್ಞಾನಿಗಳು (philosophers) ಎಂದರೆ ಎಲ್ಲರ ನೆನಪಿಗೂ ಮೊದಲು ಬರುವವರು ಸಾಕ್ರಟೀಸ್, ಪ್ಲೇಟೋ, ಅರಿಸ್ಟಾಟಲ್ ಮುಂತಾದವರು. ಆದರೆ ಅರಿಸ್ಟಾಟಲನ ಸಮಕಾಲೀನನಾಗಿದ್ದ ಡಯೋಜನೀಸನ ಹೆಸರನ್ನು ಕೇಳಿರುವವರು ವಿರಳ.
                             ಡಯೋಜನೀಸನು ಆಗಿನ ಕಾಲದಲ್ಲಿ, ಎಂದರೆ ಕ್ರಿ.ಪೂ. ೪ನೆಯ ಶತಮಾನದಲ್ಲಿ, ತುಂಬ ಜನಪ್ರಿಯನಾಗಿದ್ದನು. ಈತನ ಜೀವನ ತುಂಬ ಸರಳವಾದದ್ದು - ಇವನಿಗೆ ಆಸ್ತಿಪಾಸ್ತಿ ಎಂದರೆ ಅನಾಸಕ್ತಿ. ಮನೆಯಲ್ಲಿರುವಾಗಲೆಲ್ಲ ಒಂದು ಸ್ನಾನದ ತೊಟ್ಟಿಯಲ್ಲೇ ಇದ್ದುಬಿಡುತ್ತಿದ್ದನು. ಅಂದಿನ ಗ್ರೀಸಿನಲ್ಲಿ ನಾಯಿಗಳೂ ಸಹ ಇದೇ ರೀತಿಯಲ್ಲಿ ತೊಟ್ಟಿಯಲ್ಲಿ ಮಲಗಿ ವಿರಮಿಸುತ್ತಿದ್ದವಂತೆ. ನಾಯಿಗೆ ಗ್ರೀಕ್ ಭಾಷೆಯಲ್ಲಿ ಸಿನಿಕೋಸ್ ಎಂದೂ, ಲ್ಯಾಟಿನ್ನಿನಲ್ಲಿ ಸಿನಿಕಸ್ ಎಂದೂ ಕರೆಯುತ್ತಾರೆ (ಸಂಸ್ಕೃತದ ಶುನಕ ಎಂಬ ಪದವನ್ನು ಹೋಲಿಸಿ). ಇದರಿಂದ ಡಯೋಜನೀಸ್ ಮತ್ತು ಅವನ ಅನುಯಾಯಿಗಳಿಗೆ cynics ಎಂಬ ಹೆಸರಾಯಿತು.

                                 ಇವನು ಒಮ್ಮೆ ಹಾಡೇ ಹಗಲಿನಲ್ಲಿ ದೀವಟಿಗೆಯನ್ನು ಹೊತ್ತಿಸಿಕೊಂಡು, ಏನನ್ನೋ ಹುಡುಕುವನಂತೆ ಅಥೆನ್ಸ್ ನಗರದ ಬೀದಿಬೀದಿಗಳಲ್ಲಿ ಅಲೆಯುತ್ತಿದ್ದನು. ‘ಡಯೋಜನೀಸ್! ಏನು ಮಾಡುತ್ತಿದ್ದೀಯೆ?’ ಎಂದು ಜನರು ಕೇಳಲು ‘ಈ ನಗರದಲ್ಲಿ ಕೇವಲ ಒಬ್ಬನಾದರೂ ನಂಬಿಕಸ್ಥನಿದ್ದಾನೆಯೇ ಎಂದು ಹುಡುಕುತ್ತಿದ್ದೇನೆ’ ಎಂದು ಉತ್ತರವಿತ್ತನು. ಈಗ cynics ಎಂದರೆ ಯಾರನ್ನೂ ನಂಬದ ಸಂಶಯಾತ್ಮಕರು ಎಂಬ ಅರ್ಥವಿದೆ. ಇದಕ್ಕೆ ಈ ಕಥೆಯೇ ಕಾರಣವಿರಬಹುದು.

                             ಡಯೋಜನೀಸನು ತನ್ನ ಮುಪ್ಪಿನಲ್ಲಿ ಒಮ್ಮೆ ಸಮುದ್ರಯಾನ ಮಾಡುತ್ತಿದ್ದಾಗ ಕಡಲುಗಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಕಾರಿಂಥ್ ಎಂಬ ನಗರಕ್ಕೆ ಕೊಂಡೊಯ್ದು ಅಲ್ಲಿ ಗುಲಾಮನನ್ನಾಗಿ ಮಾರಿದರು. ಅವನನ್ನು ವಿಕ್ರಯಿಸಿದ ಶ್ರೀಮಂತನು, ಆತನು ಯಾರು ಎಂದು ಅರಿವಾದ ಕೂಡಲೇ ಅವನನ್ನು ದಾಸ್ಯದಿಂದ ಬಿಡುಗಡೆ ಮಾಡಿದನು. ಮುಂದೆ ಡಯೋಜನೀಸನು ಮಕ್ಕಳಿಗೆ ಬೋಧಿಸುತ್ತ ಆ ನಗರದಲ್ಲೇ ನೆಲಸಿದನು.   

                 ಆ ಸಮಯದಲ್ಲಿ ಪರ್ಷಿಯ ಮತ್ತು ಇಂಡಿಯಾಗಳ ಮೇಲೆ ದಂಡಯಾತ್ರೆಗೆ ಸಿದ್ಧವಾಗುತ್ತಿದ್ದ ಅಲೆಕ್ಸಾಂಡರನು ಕಾರಿಂಥ್ ಪಟ್ಟಣಕ್ಕೆ ಬಂದಿದ್ದನು. ಅಲೆಕ್ಸಾಂಡರನು ಆ ವೇಳೆಗಾಗಲೇ ತುಂಬ ಪ್ರಸಿದ್ಧನಾಗಿದ್ದನು. ಅದು ಮಾತ್ರವಲ್ಲ, ತಾನು ದೇವಾಧಿದೇವನಾದ ಜ಼್ಯೂಸನ ಮಗನೆಂದೇ ಧೃಢವಾಗಿ ನಂಬಿದ್ದನು. ಆದರೂ ಅವನಿಗೆ ಜ್ಞಾನಿಗಳು, ಮೇಧಾವಿಗಳು ಎಂದರೆ ತುಂಬ ಗೌರವವಿತ್ತು. ಅಲೆಕ್ಸಾಂಡರನನ್ನು ಸಂದರ್ಶಿಸಲು ಪುರಪ್ರಮುಖರು, ಪಂಡಿತರು, ವರ್ತಕರು ಮುಂತಾದ ಗಣ್ಯ ವ್ಯಕ್ತಿಗಳೆಲ್ಲರೂ ತಂಡತಂಡವಾಗಿ ಹೋಗುತ್ತಿದ್ದರು. ಡಯೋಜನೀಸನು ಮಾತ್ರ ಹೋಗಲಿಲ್ಲ. ತನ್ನ ಪಾಡಿಗೆ ತಾನಿದ್ದನು. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. "If the mountain won't come to Muhammad then Muhammad must go to the mountain." ಎಂದು ಅದರಂತೆ ಅಲೆಕ್ಸಾಂಡರನು ತಾನೇ ಸ್ವತಃ ಡಯೋಜನೀಸನ ಮನೆಯ ಬಾಗಿಲಿಗೆ ಬಂದು ನಿಂತನು. ಅವರಿಬ್ಬರ ನಡುವೆ ಈ ಸಂಭಾಷಣೆ ನಡೆಯಿತು.
‘ನಾನು ಅಲೆಕ್ಸಾಂಡರ್ ಎಂಬ ಮಹಾರಾಜ ‘ನಾನು ಡಯೋಜನೀಸ್ ಎಂಬ ನಾಯಿ’ ‘ನಿನಗೆ ಏನು ಬೇಕಾದರೂ ಕೇಳು, ಮಾಡಿಸಿಕೊಡುತ್ತೇನೆ’
‘ಸ್ವಾಮಿ, ತಾವು ಸೂರ್ಯನಿಗೂ ನನಗೂ ಮಧ್ಯೆ ನಿಂತು ಕತ್ತಲೆ ಮಾಡಿದ್ದೀರಿ. ಸ್ವಲ್ಪ ಪಕ್ಕಕ್ಕೆ ತೊಲಗಿದರೆ ಮಹದುಪಕಾರವಾಗುವುದು’
‘ಅಯ್ಯಾ, ನಿನಗೆ ನನ್ನನ್ನು ಕಂಡರೆ ಹೆದರಿಕೆಯೇ ಇಲ್ಲವೋ?’
 ‘ಪ್ರಭೂ, ತಾವು ಒಳ್ಳೆಯವರೋ, ಕೆಟ್ಟವರೋ?’
 ‘ನಾನು ಒಳ್ಳೆಯವನೆಂದೇ ಎಲ್ಲರೂ ಹೇಳುತ್ತಾರೆ’
 ‘ಒಳ್ಳೆಯವರನ್ನು ಕಂಡರೆ ಯಾರಾದರೂ ಹೆದರುತ್ತಾರೆಯೇ?’   
                   ಇನ್ನು ಹೆಚ್ಚು ಮಾತಾಡಿ ಪ್ರಯೋಜನವಿಲ್ಲೆಂದು ಅಲೆಕ್ಸಾಂಡರನು ಅಲ್ಲಿಂದ ಹಿಂತಿರುಗಿದನು. ಈ ಸಂವಾದವನ್ನು ಕೇಳಿಸಿಕೊಂಡಿದ್ದ ಅವನ ಸಂಗಡಿಗರು ಒಳಗೊಳಗೇ ನಗುತ್ತಿದ್ದರು. ಅಲೆಕ್ಸಾಂಡರನು ಅವರಿಗೆ ‘ದಯವಿಟ್ಟು ನಗಬೇಡಿ. ನಾನು ಈ ಜನ್ಮದಲ್ಲಿ ಅಲೆಕ್ಸಾಂಡರನಾಗಿ ಹುಟ್ಟದಿದ್ದರೆ, ಖಂಡಿತವಾಗಿಯೂ ಡಯೋಜನೀಸನಾಗಿ ಹುಟ್ಟಬಯಸುತ್ತಿದ್ದೆ’ ಎಂದು ಹೇಳಿದನು.
      ಡಯೋಜನೀಸನು ವೃದ್ಧನಾದನು. ಆಗ ಕೆಲವರು ಅವನ ಬಳಿ ಬಂದು ‘ಅಯ್ಯಾ, ನಿನಗೆ ಹೆಂಡಿರಿಲ್ಲ, ಮಕ್ಕಳಿಲ್ಲ, ಒಬ್ಬ ಸೇವಕನೂ ಇಲ್ಲ. ನೀನು ಸತ್ತರೆ ನಿನ್ನನ್ನು ಹೂಳುವವರು ಯಾರು? ಅಪರ ಕರ್ಮಗಳನ್ನು ಮಾಡುವವರು ಯಾರು?’ ಎಂದು ಮುಂತಾಗಿ ಅಧಿಕ ಪ್ರಸಂಗದ ಮಾತುಗಳನ್ನಾಡಿದರು. ಡಯೋಜನೀಸನು ನಗುತ್ತಲೇ ‘ನನ್ನ ಈ ಮನೆ ಯಾರಿಗೆ ಬೇಕಾಗಿದೆಯೋ, ಅವರೇ ಇದೆಲ್ಲವನ್ನೂ ಮಾಡುವರು, ನೀವು ವೃಥಾ ಚಿಂತಿಸಬೇಡಿ’ ಎಂದು ಹೇಳಿ ಆ ಧೂರ್ತರನ್ನು ಸಾಗಹಾಕಿದನು.

Comments

  1. ಲೇಖನ ಬಹಳ ಸೊಗಸಾಗಿದೆ ನಿಮ್ಮ ಲೇಖನ ಓದುವುದೇ ಸೊಗಸಾದ ಒಂದು ಅನುಭವ ತರುತ್ತದೆ.ಅಪಾರ ಲೊಕಜ್ಞಾನ ಇರುವ ತಮ್ಮ ಬರಹ ಶೈಲಿಗೆ ತುಂಬಾ ಮೆಚ್ಚುಗೆ, ಬೇಡಿಕೆ ಇದೆ. ಧನ್ಯವಾದಗಳು.

    ReplyDelete
  2. Very short and interesting article Dr Madhusudana. I tried to google to learn more about him after reading your article. Came across many of his quotes.
    1. He once begged alms of a statue, and, when asked why he did so, replied, "To get practice in being refused."
    2. Once he saw the officials of a temple leading away some one who had stolen a bowl belonging to the treasurers, and said, "The great thieves are leading away the little thief."

    ReplyDelete
  3. ಕಥೆ ತುಂಬಾ ಸೊಗಸಾಗಿದೆ.

    ReplyDelete

Post a Comment