ಜಿಜ್ಞಾಸೆ - ಮಂಥನ

 ಜಿಜ್ಞಾಸೆ  - ಮಂಥನ

ಲೇಖನ  - ಸರಸ್ವತಿ, ಸಿಡ್ನಿ



ಬ್ರಹ್ಮಾಂಡ !.. ಎಂದರೆ ಏನು? ಇದನ್ನು ಸೃಷ್ಟಿಸಿದವರು ಯಾರು? ಏಕೆ ಸೃಷ್ಟಿಸಿದರು? ಅದರಾಚೆಗೆ ಏನಿದೆ? ಆಧುನಿಕ ವಿಜ್ಞಾನದ ಪ್ರಕಾರ ಸಾವಿರಾರು ನಕ್ಷತ್ರಪುಂಜ ಅಥವಾ ಗೆಲಾಕ್ಸಿಗಳಿರುವ, ಧೂಮಕೇತುಗಳು, ಕೋಟ್ಯಾಂತರ ಸೌರವ್ಯೂಹ, ಗೃಹಗಳಿರುವ ತಾನಾಗೇ ಸೃಷ್ಟಿಯಾದ ಒಂದು ವಿಶ್ವವೇ? ಬಿಗ್ ಬ್ಯಾಂಗ್ ನಿಂದ ಶುರುವಾಗಿ, ಬ್ಲ್ಯಾಕ್ ಹೋಲ್ ಗೆ ಮುಗಿಯುವ ಪ್ರಕೃತಿಯ ಕಾರ್ಯಾಚರಣೆಯೇ? ಅಥವಾ

ವೇದ ಪುರಾಣದ ಪ್ರಕಾರ ಬ್ರಹ್ಮನ ಸೃಷ್ಟಿಯೇ? ಒಂದು ಅಣುವಿನಿಂದ ಶುರುವಾದ ಬೃಹತ್ ಬ್ರಹ್ಮಾಂಡವೇ? ಇದಕ್ಕೆ ಆದಿ, ಅಂತ್ಯ ಎಲ್ಲಿದೆ? ಪ್ರಶ್ನೆ ಹಾಕಿಕೊಂಡು ಹೋದರೆ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ತಲೆಯಲ್ಲಿ ಕೀಟವಾಗಿ ಕೊರೆಯುವ ಇದಕ್ಕೆ ಉತ್ತರ ಹೇಳ ಬಲ್ಲವರಾರು? ದೇವರು ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂದು ಆಸ್ತಿಕರು ಹೇಳುತ್ತಾರೆ. ಈ ದೇವರು ಎಂದರೆ ಯಾರು? ನಮ್ಮ ಸನಾತನ ಧರ್ಮದ ಪ್ರಕಾರ ಶಂಖ, ಚಕ್ರ, ಗಧಾಧಾರಿಯಾದ, ಪೀತಾಂಬರ ಕಿರೀಟ ಧಾರಿ! ಇನ್ನೊಂದು ರೂಪದಲ್ಲಿ ಭಸ್ಮ, ರುದ್ರಾಕ್ಷಿ, ತ್ರಿಶೂಲಧಾರಿ! ಇನ್ನೊಂದು ರೂಪ ನಾಲ್ಕು ತಲೆಯುಳ್ಳವನ? ಹಾಗೇ ಎಂದಾದರೆ ಅವನೇಕೆ ಇದನ್ನು ಸೃಷ್ಟಿಸಿದ? ಮನುಷ್ಯ ಬುದ್ಧಿ ಜೀವಿಯಾದ ಮೇಲೆ, ದೇವರಿಗೆ ತನ್ನಂತೆ ಒಂದು ರೂಪ ಕೊಟ್ಟ. ಕೈ, ಕಾಲು, ತಲೆ, ಕಣ್ಣು, ಮೂಗು, ಮುಂತಾಗಿ. ಅದೇ ಇನ್ನೊಂದು ವರ್ಗದವರು ದೇವರಿಗೆ ಆಕಾರವಿಲ್ಲ. ನಾವು ಮೂರ್ತಿ ಪೂಜೆ ಮಾಡುವುದಿಲ್ಲ ಎಂದರು. ಇನ್ನೊಬ್ಬರು ಅತಿ ಮಾನವನನ್ನು ಸೃಷ್ಟಿಸಿದರು. ಅವನನ್ನು ದೇವರೆಂದರು. ಅವನ್ ಭೊದನೆಯನ್ನು ಒಪ್ಪದ ಇನ್ನೊಂದು ವರ್ಗ ಅವನನ್ನು ಶಿಲುಬೆಗೇರಿಸಿ ಮೊಳೆ ಹೊಡೆದು ಸಾಯಿಸಿದರು.


ಈಗ ನಮ್ಮ ಪುರಾಣದ ಕಡೆಗೆ ಬರೋಣ. ಬ್ರಹ್ಮ, ವಿಷ್ಣು, ಮಹೇಶ್ವರ - ಇವರು ಸೃಷ್ಟಿ, ಸ್ಥಿತಿ, ಲಯ ಕಾರಕರೆನ್ನುತ್ತಾರೆ. ಇದರಲ್ಲಿ ಈಶ್ವರನಿಗೆ ಲಿಂಗರೂಪಿಯಾಗು ಎಂದು ಶಾಪ, ಬ್ರಹ್ಮನಿಗೆ ಪೂಜೆಯೇ ಬೇಡವೆಂದು ಶಾಪ, ವಿಷ್ಣುವಿಗೆ ಹತ್ತು ಅವತಾರವೆತ್ತುವ ಕಷ್ಟ. ಅದರಲ್ಲಿ ರಾಮ, ಕೃಷ್ಣ, ಬುದ್ಧ ಅವತಾರಗಳಲ್ಲಿ ಸಾಮಾನ್ಯ ಮನುಷ್ಯರಂತೆ ಹುಟ್ಟು, ಸಾವು, ಸಂಸಾರ, ಸುಖ, ದು:ಖ ಮುಂತಾದ ತಾಪತ್ರಯಗಳು. ಇನ್ನು ಹಿಂದಕ್ಕೆ ಹೋದರೆ ಕಶ್ಯಪ ಬ್ರಹ್ಮನಿಂದ ಜೇವರಾಶಿ ಸೃಷ್ಟಿಯಾಯಿತೆನ್ನುತ್ತಾರೆ. ಅವರಿಗೋ ಲೆಕ್ಕವಿಲ್ಲದಷ್ಟು ಹೆಂಡತಿಯರು. ಅದರಲ್ಲಿ ಮುಖ್ಯವಾದವರು ಹದಿನಾಲ್ಕು ಜನ. ಅವರಲ್ಲಿ ಜೀವರಾಶಿಗೆ ಕಾರಣರಾದವರು ವಿನುತೆ, ಕದ್ರು, ದಿತಿ, ಅದಿತಿ. ವಿನುತೆಗೆ ಗರುಡ ಮತ್ತು ಅರುಣ ಎಂಬ ಮಕ್ಕಳು. ಕದ್ರುವಿಗೆ ಸರ್ಪರೂಪದ ಮಕ್ಕಳು. ಇವರುಗಳಲ್ಲಿ ದಾಯಾದಿ ಮತ್ಸರ. ಕದ್ರು, ವಿನುತೆ ಯರಿಗೆ ಸವತಿ ಮತ್ಸರ. ಇನ್ನು ದಿತಿಯ  ಮಕ್ಕಳು ದೈತ್ಯರು ಅಂದರೆ ರಾಕ್ಷಸರು. ಅದಿತಿಗೆ ದೇವತೆಗಳು ಮಕ್ಕಳು. ಇವರಲ್ಲೂ ಒಬ್ಬರಿಗೊಬ್ಬರು ಶತ್ರುಗಳು.

ನಾವು ದೇವರ ಪ್ರತಿರೂಪವೆಂದು ಭಾವಿಸಿರುವ ಋಷಿ ಮುನಿಗಳು - ಅಪಾರ ಜ್ಞಾನ ಸಂಪತ್ತಿರುವ, ಸದಾ ತಪಸ್ಸು ಮಾಡಿ, ಬೇಕಾದಷ್ಟು ಸಾಧನೆ ಮಾಡಿ ಅರಿಷಡ್ವರ್ಗಗಳನ್ನು ಜಯಿಸಿದವರು. ಇವರು ನಮಗೆ ಮಾದರಿಯೇ? ಎಲ್ಲಾ ಪ್ರಾಣಿಗಳಲ್ಲಿ ಸರ್ಪ ಜಾತಿಗೇಕೆ ಅಷ್ಟು ಮಹತ್ವ? ಪ್ರತಿ ದೇವರು ಈ ವಿಷಕಾರಿಯಾದ ಸರ್ಪವನ್ನೇಕೆ ಧರಿಸಿದರು? ಸದಾ ದೇವ ದಾನವರಿಗೇಕೆ ಜಗಳ? ದಾನವರ ಮನದಲ್ಲೇಕೆ ಅಂಥ ಕ್ರೂರತ್ವ?  ನಾಲ್ಕು ಯುಗಗಳಂತೆ - ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ, ಕಲಿ ಯುಗ. ಒಂದೊಂದು ಯುಗಕ್ಕೂ ಇಂತಿಷ್ಟು ವರ್ಷವೆಂದು ಲೆಕ್ಕ. ಇದನ್ನು ನಿಯಮ ಮಾಡಿದವರಾರು? ಪ್ರತಿ ಯುಗದಲ್ಲೂ ಅವರು-ಇವರಿಗೆ ಶಾಪ ಕೊಟ್ಟರು ಯಾಕೆ? ಇದಕ್ಕೆಲ್ಲಾ ಉತ್ತರ ಎಲ್ಲಿದೆ?


ಇಂಗ್ಲೆಂಡಿನ ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ ಗೆ ಇಪ್ಪತ್ತೆರಡನೆ ವಯಸ್ಸಿನಲ್ಲೇ ಒಂದು ರೀತಿಯ ಮಾಂಸ ಖಂಡ ಮತ್ತು ನರದ ಖಾಯಿಲೆ ಬಂತು. ಔಷಧಿ ತೆಗೆದು ಕೊಂಡರೂ ದಿನ ದಿನಕ್ಕೆ ಜಾಸ್ತಿಯಾಗಿ, ಇಪ್ಪತ್ತೇಳು-ಇಪ್ಪತ್ತೆಂಟು ವಯಸ್ಸಿಗೆ ಪೂರ್ತಿ ಪರಾವಲಂಬಿಯಾದ. ಅಷ್ಟರಲ್ಲಾಗಲೇ ಅವನಿಗೆ ಮದುವೆಯಾಗಿ ಮೂರು ಮಕ್ಕಳಿದ್ದರು. ಶರೀರವೆಲ್ಲಾ ಶಕ್ತಿ ಕಳೆದು ಕೊಂಡರೂ ಅವನ ಮೆದುಳಿಗೆ ಮಾತ್ರ ಏನು ಹಾನಿಯಾಗಿರಲಿಲ್ಲ. ಹಾಗಾಗಿ ಗಾಲಿ ಕುರ್ಚಿಯಲ್ಲಿ ಕುಳಿತೇ ವಿಶ್ವ ಕುರಿತು ಅಧ್ಯಯನ ಮಾಡಿದ. ಭೌತ ಶಾಸ್ತ್ರ, ಖಗೋಳ ಶಾಸ್ತ್ರದಲ್ಲಿ ಅಪಾರ ಜ್ಞಾನ ಸಂಪಾದಿಸಿ ವಿಶ್ವ ಮನ್ನಣೆ ಗಳಿಸಿದ. ಕಡೆ ಕಡೆಗೆ ಅವರಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಅವನಿಗಾಗಿ ವಿಷೇಶ ಗಣಕ ಯಂತ್ರ ತಯಾರಿಸಿ ಕೊಟ್ಟರು. ಅದರಿಂದ ತುಂಬಾ ಸಂಶೋಧನೆ ನಡೆಸಿ, ಭೌತ-ಖಗೋಳ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ. ಕೊನೆ ಕೊನೆಗೆ ಮದುಳು ಬಿಟ್ಟರೆ ಅವನ ಶರೀರದಲ್ಲಿ ಇನ್ನಾವ ಅಂಗಗಳು ಕೆಲಸ ಮಾಡುತ್ತಿರಲಿಲ್ಲ. ಹಾಗೇ ಅವನು ಎಪ್ಪತಾರು ವರ್ಷ ಬದುಕಿದ್ದು, ಇತ್ತೀಚೆಗೆ ತೀರಿಕೊಂಡ. ನಾನು ಇವನ ವಿಷಯ ಏಕಿಷ್ಟು ಹೇಳುತ್ತಿದ್ದೇನೆಂದರೆ, ಅವನು ಒಂದು ದಿನವೂ ದೇವರು ನನಗೆ ಯಾಕಿಷ್ಟು ಕಷ್ಟ ಕೊಟ್ಟ ಎನ್ನಲಿಲ್ಲ. ಕೊನೆಯವರೆಗೂ ದೇವರು ಎಂಬುದು ಯಾವುದೂ ಇಲ್ಲ. ಎಲ್ಲಾ ಪ್ರಕೃತಿ, ಎಲ್ಲಾ ತನ್ನಿಂದ ತಾನೆ ನಡೆಯುತ್ತದೆ ಎಂದು ಬಲವಾಗಿ ಪ್ರತಿ ಪಾದಿಸಿದ. ಹಾಗೆಯೇ ನಂಬಿ ಪ್ರಾಣ ಬಿಟ್ಟ. 

ಇನ್ನು ನಮ್ಮವರೇ ಆದ ಶತಾಯುಷಿ ಎ.ಎನ್. ಮೂರ್ತಿರಾಯರು - ಒಳ್ಳೆಯ ಸಾಹಿತಿಗಳು, ವೃದ್ಧಾಪ್ಯದಲ್ಲಿ ಬೆಳೆದ ಮಗನನ್ನು ಕಳೆದು ಕೊಂಡರು. ಆದರೂ ಅವರೂ ಸಹ ದೇವರು ನನಗೆ ಯಾಕೆ ಇಂಥ ಕಷ್ಟ ಕೊಟ್ಟ? ಇಂಥ ದು:ಖ ಕೊಟ್ಟ? ಎನ್ನಲಿಲ್ಲ. ಪೂರ್ವ ಜನ್ಮದ ಕರ್ಮ ಎನ್ನಲಿಲ್ಲ. ಅವರ 'ದೇವರು' ಎಂಬ ಪುಸ್ತಕದಲ್ಲಿ ದೇವರೆಂಬ ತತ್ವವನ್ನು ಒಪ್ಪಿಕೊಂಡಿಲ್ಲ. ನಾಸ್ತಿಕ ವಾದವನ್ನು ತುಂಬಾ ಸಮರ್ಥವಾಗಿ ಹೇಳಿದ್ದಾರೆ. 'ಕಲ್ಲು, ಗುಂಡುಗಳನ್ನು ಮಾರಿ ಮಸಣಿ ಎಂದು ಪೂಜಿಸುತ್ತಾರೆ' ಎನ್ನುತ್ತಾರೆ. 

ಪ್ರಾಣಿ ವರ್ಗವನ್ನು ಸೃಷ್ಟಿಸಿ ಅದಕ್ಕೆ ನಾನಾ ವಿಧದ ಕಷ್ಟಕೋಟಲೆಗಳನ್ನು ಕೊಟ್ಟು 'ಇದು ನಿನ್ನ ಪೂರ್ವಾರ್ಜಿತ ಕರ್ಮ ಫಲ ಅನುಭವಿಸು' ಎಂದು ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ನಾವು ಹುಟ್ಟಿದಕ್ಕೆ ತಾನೇ ಪಾಪ ಕರ್ಮಗಳನ್ನು ಮಾಡುವುದು. ಹುಟ್ಟದೇ ಇದ್ದರೆ?

ಶಿವ ಸ್ಮಶಾನದಲ್ಲೆ ಇರುತ್ತಾನಂತೆ. ಮೈಗೆ ಬೂದಿ ಬಳಿದುಕೊಂಡಿರುತ್ತಾನೆ. ಅವನಿಗೇಕೆ ಪೀತಾಂಬರವಿಲ್ಲ? ಅಲಂಕಾರವಿಲ್ಲ? ಚರ್ಮಾಬರ ಏಕೆ?

ಭಗವಂತನ ಅವತಾರಗಳಲ್ಲಿ ನರಸಿಂಹ, ಪರಶುರಾಮ, ರಾಮ, ಕೃಷ್ಣ, ಬುದ್ಧ. ಇವು ಈಗಿನ ಭಾರತದಲ್ಲಾಯಿತೆಂದು ಸ್ಥಳ ಗುರುತಿಸುತ್ತಾರೆ. ಹಾಗಾದರೆ ಬಾಕಿ ಅವತಾರಗಳು ಎಲ್ಲಾಯಿತು? ನಾವು ಈಗ ತೀರಾ ನಿಕೃಷ್ಟವಾಗಿ ಕಾಣುವ ಹಂದಿಯ ಅವತಾರ ಏಕೆ ಎತ್ತಿದ ದೇವರು? ಅವತಾರವೆಂದು ನಾವೇಕೆ ವರಾಹವನ್ನು ಗೌರವಿಸುವುದಿಲ್ಲ?

ಮನುಷ್ಯ ಸತ್ತಮೇಲೆ ಆತ್ಮ ಬೇರೆಯಾಗುತ್ತದೆ. ಅಂದರೆ ಅದು ಹಳೇ ವಸ್ತ್ರವನ್ನು ಬಿಸುಟು ಹೊಸ ವಸ್ತ್ರವನ್ನು ಧರಿಸುವಂತೆ. ಮತ್ತೊಂದು ಶರೀರಕ್ಕೆ ಹೋಗಿ ಸೇರಿಕೊಳ್ಳುತ್ತದೆ ಎನ್ನುತ್ತಾರೆ. ಆತ್ಮಕ್ಕೆ ರೂಪವಿಲ್ಲ. ಹುಟ್ಟು, ಸಾವುಗಳಿಲ್ಲ, ಕಷ್ಟ ಹಿಂಸೆಗಳಿಲ್ಲ. ಅದು ನಿರಾಕಾರ. ಹಾಗಿದ್ದರೆ ಅದಕ್ಕೆ ಸ್ವರ್ಗ ನರಕಗಳಲ್ಲಿ ಕಷ್ಟ-ಸುಖಗಳ ಅನುಭವ ಹೇಗಾಗುತ್ತದೆ. ಪಂಚ ಭೂತಗಳಿಂದಾದ ಶರೀರವನ್ನು ಸತ್ತ ಮೇಲೆ, ಸುಟ್ಟು ಇಲ್ಲವೆ ಮಣ್ಣು ಮಾಡಿದ ಮೇಲೆ ಏನು ಉಳಿದಿರುತ್ತದೆ? ಯಾವುದಕ್ಕೆ ಸಂಚಿತ, ಪ್ರಾರಬ್ಧ ಕರ್ಮದ ಫಲ, ಶಿಕ್ಷ? ವಸಿಷ್ಟರು ಒಳ್ಳೆಯ ಕುಲದಲ್ಲಿ ಹುಟ್ಟಿದವರಲ್ಲ. ಅವರ ಪತ್ನಿ ಅರುಂಧತಿ ದಲಿತ ಹೆಣ್ಣಂತೆ. ಇಬ್ಬರೂ ಇಚ್ಛಿಸಿ ಮದುವೆಯಾದುದು. ದೇವೇಂದ್ರನ ಆಸ್ಥಾನದಲ್ಲಿದ್ದ ರಂಭೆ, ಮೇನಕ, ಊರ್ವಶಿ, ತಿಲೋತ್ತಮೆ, ಇವರೆಲ್ಲಾ ಇಂದ್ರನ ಭೋಗದ ಹೆಣ್ಣುಗಳು. ಅವರಿಗೆ ಮದುವೆ ಸಂಸಾರವಿಲ್ಲ. ಶಕುಂತಲೆ, ಅಹಲ್ಯೆ, ರೇಣುಕೆ ಇವರೆಲ್ಲ ಮಹಾ ಜ್ಞಾನಿಗಳಾದ ಋಷಿಗಳ ಶಾಪದಿಂದ ತುಳಿತಕೊಳಗಾದವರು. 'ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ' ಎಂಬ ಉಪನಿಷತ್ ವಾಕ್ಯಕ್ಕೆ ಏನರ್ಥ ಉಳಿಯಿತು - ಹಣ್ಣನ್ನು ಇಂಥ ಸ್ಥಾನದಲ್ಲಿ ಇಟ್ಟಾಗ? ಇನ್ನು ಚಿರಂಜೀವಿಗಳ ವಿಷಯಕ್ಕೆ ಬರೋಣ. ಯಾವ ಆಧಾರದ ಮೇಲೆ ಅವರಿಗೆ ಚಿರಂಜೀವತ್ವ ಯಾರು ಕೊಟ್ಟರು? ಅಶ್ವಥ್ಥಾಮನಂಥ ಕ್ಷುದ್ರ ಜೀವಿಗೆ, ಕೃಪಾಚಾರ್ಯರಂಥ ತಾರತಮ್ಯ, ಜ್ಞಾನವಿಲ್ಲದ ಮನುಷ್ಯನಿಗೆ, ವಿಭೀಷಣ ಏನು ಸಾಧನೆ ಮಾಡಿದನೆಂದು ಅವರಿಗೆ ಚಿರಂಜೀವತ್ವ? ವಿಶ್ವಾಮಿತ್ರ, ವಸಿಷ್ಟ, ಜಾಂಬವಂತ ಇವರುಗಳು ಇದಕ್ಕೆ ಅರ್ಹರಲ್ಲವೆ? ಎಷ್ಟೇ ಸಾಧನೆ ಮಾಡಿದರೂ ಅರಿಷಡ್ವರ್ಗಗಳನ್ನು ಜಯಿಸದ ಋಷಿ ಮುನಿಗಳು. ಮೀನು ತಿನ್ನುವ ಮೀನುಗಾರನ ಮಗಳಾದ ಸತ್ಯವತಿಗೆ ದೇವರ ಹನ್ನೊಂದನೇ ಅವತಾರವೆಂದು ಭಾವಿಸುವ, ಅಪಾರ ಜ್ಞಾನಿಗಳಾದ ವೇದವ್ಯಾಸರು ಮಗನಂತೆ. ಅಂತಹ ಜ್ಞಾನಿಗಳು ತಮ್ಮ ಮಗನಾದ ಶುಕ ಮುನಿಯ ವಿಯೋಗವನ್ನು ಸಹಿಸಲಾರದೆ ಹುಚ್ಚರಂತಾದರು. ಇವೆಲ್ಲವನ್ನೂ ನಾಸ್ತಿಕವಾದವೆಂದು ಭಾವಿಸ ಬಾರದು. ಮನದಲ್ಲೇಳುವ ಇಂಥ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವವರಾರು?  ಹಲವಾರು ವಿದ್ವಾಂಸರು ಹಲವು ಬಗೆಯ ಉತ್ತರ ಕೊಡುತ್ತಾರೆ. ಪುರಾಣಗಳಲ್ಲಿರುವ ಎಲ್ಲವೂ ನಿಜವಲ್ಲ. ಕೆಲವು ಸುಳ್ಳಿನ ಕಂತೆ. ಮೌಢ್ಯರನ್ನು ನಂಬಿಸುವ ಕುತಂತ್ರ ಎನ್ನುತ್ತಾರೆ. 

ನಮ್ಮಂಥ ಸಾಮಾನ್ಯರು ವಿಶ್ವ ಹೇಗಾದರೂ ಇರಲಿ, ಏನಾದರೂ ಆಗಲಿ ನಮಗೇಕೆ? ಹುಟ್ಟಿದ್ದೇವೆ (ನಾವು ಕೇಳಿಕೊಳ್ಳದೆ) ಸಾವು ಬಂದಾಗ ಸಾಯೋಣ. ಬೇರೆ ಗೊಡವೆ ನಮಗೇಕೆ? ಎಂದು ಸುಮ್ಮನಿದ್ದು ಬಿಡೋದೆ ಲೇಸೆನಿಸುತ್ತದೆ. ನೀವೇನೆನ್ನುತ್ತೀರಾ??


Comments