ಅಮರವಾದದ್ದೊಂದು ಯಾತ್ರೆ...

 ಅಮರವಾದದ್ದೊಂದು ಯಾತ್ರೆ...

ಲೇಖನ - ಮಂಜುಳಾ ಡಿ, ಬೆಂಗಳೂರು 



ಪ್ರಯಾಗದ ಕುಂಭಮೇಳ ನನ್ನನ್ನು ಸೆಳೆದ ರೀತಿಗೆ ಬಹಳಷ್ಟು ತಪಿಸಿದೆ ಹೋಗಲೇಬೇಕೆಂದು. ನಮ್ಮ ಹುಡುಗಿಯರೂ ಹಿಂದು-ಮುಂದು ನೋಡುವುದೇ ಆಗಿ, ಬರೆದುಕೊಂಡ ಕಾರಣಗಳೋ-ಸೋಲೋ ಟ್ರಿಪ್ ಸಾಧ್ಯವಾಗದ ಮಹಾಕುಂಭವೋ ಒಟ್ಟಾರೆ ಹೋಗದೇ ಬರೀ ಓದಿ-ನೋಡಿ ತಿಳಿಯುವುದರಲ್ಲೇ ಮುಗಿಯಿತು. ಇದರಿಂದಲೇ ನಮ್ಮ ಹುಡುಗಿರೊಂದಿಗೆ ಆದ ಮನಸ್ಥಾಪ, ಬಹುದಿನಗಳ ಚಿಕ್ಕ  ಇಚ್ಛೆಯ ಅಮರನಾಥ ಯಾತ್ರೆಗೆ ಹೊರಡುವ ಸಂಧಾನದೊಂದಿಗೆ ಮುಕ್ತಾಯಗೊಂಡಿತು. ಅದೆಷ್ಟು ಕಾತರ-ತೀವ್ರತೆ ಇತ್ತೆಂದರೆ ಹೆಚ್ಚು ಯೋಚಿಸದರೆ ಇನ್ನೇನಾಗುತ್ತದೋ ಎಂದು ಕನಸಲೂ ತುಸು ಯೋಚಿಸುವಂತೆನಿಸಿತು. ಇದರೊಂದಿಗೆ  ಆಪರೇಷನ್ ಸಿಂಧೂರ್, ಫ್ಲೈಟ್ ಅವಘಡ, ಹೆಲಿಕಾಪ್ಟರ್ ದುರಂತ ಹೀಗೆ ಸಾಲುಸಾಲಾಗಿ ಜರುಗಿದ ಘಟನೆಗಳು ಅಮರನಾಥ ನೋಡುವ ಸಾಧ್ಯತೆಯೇ ದುಸ್ತರವೆನಿಸಿತು.

ಕಲ್ಲಿನಂತಹ ಮಂಜುಗಡ್ಡೆಯ ಅಮರನಾಥನ ಮನ ಅದ್ತಾವ ಗಳಿಗೆ ಕರಗಿತೋ, ಎಲ್ಲಾ ಜಂಜಡಗಳ ಮಧ್ಯೆ ಯಾತ್ರೆ ಮೊದಲಾಯಿತು. ಶ್ರೀನಗರ....ಇತ್ಯಾದಿ ಸ್ಥಳಗಳನ್ನು ನೋಡಿ ನಾಲ್ಕನೇ ದಿನ ಅಮರನಾಥ ತಲುಪಿದೆವು‌. ಈ ಲೇಖನ ಮುಖ್ಯವಾಗಿ ಇದೊಂದು ಯಾತ್ರೆಯ ಬಗ್ಗೆ ಮಾತ್ರವೇ. ಏಕೆಂದರೆ ಇದೊಂದು ನನ್ನ ತಪಿಸಿದ ಚಿಕ್ಕ ಆಸೆ.

ದಿನಾಂಕ:8-07-2025 ರ ರಾತ್ರಿ 8 ಕ್ಕೆ ಸಭೆ ಆಯೋಜಿಸಿ, ಮರುದಿ‌ನ ಬೆಳಿಗ್ಗೆ 6 ಕ್ಕೆ ಶ್ರೀನಗರದಿಂದ ಯಾತ್ರೆಗೆ ಹೊರಡುವ ಮತ್ತು ಬಾಲ್ ತಾಲ್ basement ನಲ್ಲಿ ರಿಜಿಸ್ಟ್ರೇಷನ್ ಗಾಗಿ ತಲುಪುವ ಬಗ್ಗೆ ಮತ್ತು ನಾವು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದರು ಟೂರ್ ಅರ್ಗನೈಜ಼ರ್. ಬೆಳಿಗ್ಗೆ 6.30 ಕ್ಕೆ ಶ್ರೀನಗರದಿಂದ ಹೊರಟಾಗ ಆರಂಭವಾದ ಜಿಡಿ ಮಳೆ ಹಾರೈಸಿದಂತೆ ಅನಿಸಿತು.

ಶ್ರೀನಗರ-ಬಾಲ್ ತಾಲ್ ಹಾದಿ ಮೂರುವರೆ ತಾಸು. ಈ ಹಾದಿಯುದ್ದಕ್ಕೂ ಜಿಡಿ ಮಳೆಯಲ್ಲಿ ನೆನೆದ ಕಡು ಹಸುರಿನ‌ ಬೆಟ್ಟಗಳು,ಅವಕ್ಕೆ ಹೊದಿಸಿದ ಮೋಡಗಳ ಚಾದರಗಳು ಭಾನು-ಭುವಿ ಬೆಸೆದ ಪರಿ ಆಗಾಗ ಎಲ್ಲರ  ಮೊಬೈಲ್ ನಲ್ಲಿ ವಿಡಿಯೋಗಳ ತುಣುಕುಗಳಾಗುತ್ತಲೇ ಇದ್ದವು. ಇದರೊಂದಿಗೆ ಹಾದಿಯುದ್ದಕ್ಕೂ ನಮ್ಮೊಂದಿಗೆ ಸಾಗುವ ಸಿಂಧೂ ನದಿಯ ಹಾಡಿನ ಕಲರವ ಮೂಡಿಸುವ ಚೈತನ್ಯದಿಂದಾಗಿ ಈ ಹಾದಿಯ ಪಯಣ ಬಹು ಗಾಢವಾಗಿ ನೆನಪಾಗಿ ಉಳಿಯಲಿದೆ.

ಬಾಲ್ ತಾಲ್ ಗೆ ಐದಾರು ಕಿ.ಮೀ ದೂರದ ಬೇಸ್ ಮೆಂಟ್ ನಲ್ಲಿ ರಿಜಿಸ್ಟ್ರೇಷನ್ ಗೆ ವ್ಯವಸ್ಥೆ ಮಾಡಲಾಗಿದೆ. ಮೆಡಿಕಲ್ ಸರ್ಟಿಫಿಕೇಟ್-ಆಧಾರ್ ಕಾರ್ಡ್ ಇತ್ಯಾದಿ ದಾಖಲೆ ಪರಿಶೀಲಿಸಿ ನೊಂದಾಯಿತ ಯಾತ್ರಾ ಕಾರ್ಡ್ ನೀಡುತ್ತಾರೆ. ಈ ಕಾರ್ಡ್ ಯಾತ್ರೆ ಪೂರ್ಣಗೊಳ್ಳುವವರೆಗೂ ಪ್ರತಿ ಹಂತದಲ್ಲೂ ಅತ್ಯವಶ್ಯಕ. ನಂತರ ಉಳಿದುಕೊಳ್ಳಲು ಇಲ್ಲಿ ಟೆಂಟ್ ಗಳ ವ್ಯವಸ್ಥೆ ಮಾಡಲಾಗಿದೆ. ನಮ್ಮ ಪ್ಯಾಕೇಜ್ ನವರು ಗಗನ್ ಕ್ಯಾಂಪ್ ಎಂಬ ಟೆಂಟ್ ಗಳನ್ನು ಬುಕ್ ಮಾಡಿದ್ದರು. ಆ ಟೆಂಟ್ ವ್ಯವಸ್ಥೆ ನೋಡಿದ ಕೂಡಲೇ ಕೆಲವು ವರ್ಷಗಳಿಗೊಮ್ಮೆ ನಮ್ಮೂರಿನಿಂದ ಮಾಡುವ ಮೈಲಾರ ಲಿಂಗೇಶ್ವರ ಜಾತ್ತೆ ನೆನಪಾಯಿತು.



ಲಂಗರು...

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕ ಮೊದಲ ವರ್ಷ ಅರವಂಟಿಗೆ  ಎಂಬ ಶಬ್ದ ಕೇಳಿದ್ದು , ನೋಡಿದ್ದು, ಅದೂ ರಂಗನಾಥ ಸ್ವಾಮಿಯ ಜಾತ್ರೆಯಲ್ಲಿ. ಈ ಅರವಂಟಿಗೆಗಳು ಎನ್ನುವ ಕಾನ್ಸೆಪ್ಟ್ ಎಷ್ಟು ಗಾಢವಾಗಿ ನನ್ನನ್ನು ಸೆಳೆದಿತ್ತು ಎಂದರೆ, ಜಾತ್ರೆಗೆ ಬರುವವರಿಗೆ ಕುಲ-ನೆಲ ನೋಡದೇ ಊಟ ಆಪ್ತತೆಯಿಂದ ಬಡಿಸಲಾಗುತ್ತದೆ. ಹಲವು ತಲೆಮಾರುಗಳಿಂದ ಕೆಲವು‌ ವಂಶಗಳಲ್ಲಿ ನಡೆದು ಬಂದ ಪದ್ದತಿಯನ್ನು ಇಂದಿಗೂ ನಡೆಸಿಕೊಂಡು ಬಂದಿರುತ್ತಾರೆ. ಎಷ್ಟು ಚಂದ! ಎದುರಿಗಿರುವವರು ಯಾರು ಎಂದು ನೋಡದೇ ಅವರ ಹಸಿವು ನೀಗಿಸುವ ಸತ್ಕಾರ್ಯ!! ಇದೇ ರೀತಿ ಬಾಲ್ ತಾಲ್ ನಲ್ಲಿ "ಲಂಗರು" ಗಳಿರುತ್ತವೆ. ಲಂಗರು ಎನ್ನುವ ಶಬ್ದ ಸಿಕ್ಕರಲ್ಲಿ ಗುರುದ್ವಾರಕ್ಕೆ  ಭೇಟಿ ಮಾಡುವವರಿಗೆ ಉಚಿತವಾಗಿ ಆಹಾರ ಒದಗಿಸುವುದು ಎನ್ನುವ ಅರ್ಥವಿದೆ. ಅಚ್ಚರಿಯ ಸಂಗತಿ ಎಂದರೆ, ಜಮ್ಮುವಿನಿಂದ ಬಾಲ್ ತಾಲ್ ತಲುಪುವವರೆಗಿನ ಹಾದಿಯಲ್ಲಿ ಅಲ್ಲಲ್ಲಿ ಇಂತಹ ಲಂಗರುಗಳಿರುವುದು ಯತ್ರಾರ್ಥಿಗಳಿಗೆ ನಿಜಕ್ಕೂ ಅನುಕೂಲಕರವಾಗಿದ್ದು, ಉತ್ತಮ ಮತ್ತು ವೈವಿಧ್ಯಮಯ ಭೋಜನ‌ ಒದಗಿಸುತ್ತವೆ.

ಹೆಲಿಕಾಪ್ಟರ್ ದುರಂತದಿಂದಾಗಿ ಈ ಬಾರಿ ಹೆಲಿಕಾಪ್ಟರ್ ಕ್ಯಾನ್ಸಲ್ ಆಗಿತ್ತು. ಡೋಲಿಯಲ್ಲಿ ಮನುಷ್ಯರು ನಮ್ಮನ್ನು ಹೊತ್ತೊಯ್ಯುವುದು ಮನಸಿಗೆ ಒಪ್ಪಿಗೆಯಾಗಲಿಲ್ಲ. ಕುಧುರೆ ಪ್ರಯಾಣ ಆಯ್ಕೆ ಅನಿವಾರ್ಯವಾಯಿತು. 11 ಕಿ.ಮೀ ಕುದುರೆ ಪ್ರಯಾಣ ನಂತರ 3 ಕಿಮೀ ಡೋಲಿ ಪ್ರಯಾಣ. ಈ ಪ್ರಯಾಣದ ಅತ್ಯಾಕರ್ಷಕ ಭಾಗವೆಂದರೆ ಸಿಂಧು ನಮ್ಮ ಪ್ರಯಾಣದ್ದುದ್ದಕ್ಕೂ ಸಾಗಿ ಬರುವುದು. ನದಿಯ ಕಲರವ ಮೂಡಿಸುವ ಚೈತನ್ಯ-ಕಡುಹಸಿರಿ‌‌ಗಿರಿಗಳ ಸಾಲುಗಳು -ಹತ್ತಾರು ಹೆಜ್ಜೆಗಳಿಗೊಬ್ಬರಂತೆ ನಮ್ಮ ರಕ್ಷಣೆಗೆ ಪಣತೊಟ್ಟು ನಿಂತ ಸೈನಿಕರು ಕಡಿದಾದ ಹಾದಿಯ ಪಯಣವನ್ನು ಸ್ಮರಣೀಯವಾಗಿಸುತ್ತವೆ. ಇದೆಲ್ಲಾ ದಾಟಿ ಅಮರನಾಥನ ಸನ್ನಿಧಿಯಲ್ಲಿ ನಿಂತಾಗ ಮೂಡಿದ ಭಾವಕ್ಕೆ ಶಬ್ದಗಳಿಲ್ಲ.

ಅಮರನಾಥನ ಸನ್ನಿಧಿ ಚಿನಾಬ್ ನದಿಯ ಉಪನದಿ ಅಮರಾವತಿ  ನದಿ ತಟದಲ್ಲಿದೆ. ಇದು ಮುಂದೆ ಸಾಗಿ ಪಂಚತರಣಿಯಲ್ಲಿ ಪಂಚತರಣಿ ನದಿಯೊಂದಿಗೆ ಲೀನವಾಗುತ್ತದೆ, ಇದನ್ನು ಸಂಗಮ ಎಂದು ಕರೆಯುತ್ತಾರೆ. ಸಾಗುವ ಹಾದಿಯಲ್ಲಿ ನೋಡಲು ಸಾಧ್ಯವಾಯಿತು. ಪಂಚತರಣಿ ಹೆಸರೇ ಸೂಚಿಸುವಂತೆ ಐದು ಹಿಮನದಿಗಳ ಸಂಗಮವಾಗಿದೆ. ಸಿಂಧ್, ಲಿಡ್ಡಾರ್, ವೈಷ್ಣವಿ, ಸೇಷನಾಗ ಮತ್ತು ಪಹಲ್ಗಾಮ್ ಹಿಮನದಿಗಳ ಸಂಗಮ ಎಂದು ಹೇಳಲಾಗುತ್ತದೆ. ಆದರೆ ಹೆಚ್ಚನ ಉಲ್ಲೇಖಗಳು, ಇದು ಪಂಚತರಣಿ ಮತ್ತು ಅಮರಾವತಿ ನದಿಗಳ ಸಂಗಮ ಮುಂದಿನ ಹರಿವು ಅಮರಗಂಗಾ ಆಗುತ್ತದೆ ಎಂದು ತಿಳಿಸುತ್ತವೆ‌.



ಡೋಲಿಯ ಹುಡುಗರು ನೆನಪಿಡುವಷ್ಟು ಒಳ್ಳೆಯವರಾಗಿದ್ದರು.  ಅಮರನಾಥನ ದರ್ಶನಕ್ಕೆ ನೂರಕ್ಕೂ ಕಡಿಮೆ ಮೆಟ್ಟಿಲುಗಳಿವೆ, ಆದರೆ ಏರು ಎತ್ತರ-ಆಕ್ಸಿಜನ್ ವ್ಯತ್ಯಾಸ ಏರುವುದು ದುಸ್ಸಾಹಸವಾಗುತ್ತದೆ. ಪ್ರತಿ ಡೋಲಿಗೊಬ್ಬರಂತೆ ಹುಡುಗರು ನಮ್ಮ ಜೊತೆ ಸಾಗಿ ದರ್ಶನ ಮಾಡಿಸಲು ಬಂದರು.

ದೊಡ್ಡ ನಂದಿಯನ್ನು ಬಳಸಿ ಬಲಿಷ್ಠ ಹಿಮ‌ಮಹದೇವನ ಮುಂದೆ ನಿಂತಾಗ ಕಡಿದಾದ ದಾರಿಯ ಸುಸ್ತು ಅದೆಲ್ಲಿ ಬಿಟ್ಟುಬಂದಿರುತ್ತೇವೋ ಅರಿವಾಗುವುದಿಲ್ಲ. ಭರತಭೂಮಿಯ ಅತ್ಯಂತ ಶಕ್ತಿಪೀಠದ ದರ್ಶನ ಸಾಧ್ತವಾದದ್ದು ನನ್ನ ಚಿಕ್ಕ ಕನಸೊಂದು ಹೀಗೆ ಕಣ್ಮುಂದೆ ಅರಳುದ್ದು ಇನ್ನೂ ಕನಸಲ್ಲಿ ನಡೆದಂತಿದೆ. ಇದು ದೈವ ಕೃಪೆ ಎಂದೇ ಭಾವಿಸಿದ್ದೇನೆ.

ದಾವಣಗೆರೆಯ SGM travels ಮುಖಾಂತರ ಯಾತ್ರೆಗೆ ಬುಕ್ ಮಾಡಿದ್ದು. ಟ್ರಾವೆಲ್ಸ್ ನ ಲೋಕೇಶಣ್ಣ ಪ್ಯಾಕೇಜಿಂಗ್ ಟೂರ್ ಮಾಡಿಸುವುದರಲ್ಲಿ ಪಳಗಿದ್ದಾರೆ. ಎಲ್ಲವೂ ಚಿಕ್ಕವಾಗಿ ವ್ಯವಸ್ಥಿತವಾಗಿ ಸಾಧ್ತವಾಗಿದ್ದು ದೈವ ಕರುಣೆ ಎನಿಸಿತು.



Comments