ಮಹಾಭಾಗರಾದ ಅಷ್ಟವಸುಗಳು
ಲೇಖನ - ಬೇಲೂರು
ರಾಮಮೂರ್ತಿ
ಇಕ್ಷ್ವಾಕು ವಂಶದ ರಾಜ ಮಹಾಭಿಷ. ದೇವತೆಗಳ ಬ್ರಹ್ಮೋಪಾಸನೆಯಲ್ಲಿ ಭಾಗವಹಿಸಿದ್ದ. ಗಂಗಾದೇವಿ ಅಲ್ಲಿಗೆ ಬಂದಾಗ ಬೀಸಿದ ಬಿರುಗಾಳಿಗೆ ಅವಳು ವಿವಸ್ತಳಾದಳು. ಎಲ್ಲ ದೇವತೆಗಳು ತಲೆ ತಗ್ಗಿಸಿ ಕೂತಿದ್ದರೂ ಮಹಾಭಿಷ ಮಾತ್ರ ವಿವಸ್ತçಳಾದ ಗಂಗೆಯನ್ನು ರೆಪ್ಪೆಯಾಡಿಸದೇ ನೋಡಿದ. ಆಗ ಬ್ರಹ್ಮ ಬಹಳ ಕೋಪದಿಂದ ಸಕಲಕಾಮನೆಗಳನ್ನೂ ಪರಿತ್ಯಜಿಸಿದ ಪುಣ್ಯಲೋಕ ಇದು. ಗಂಗೆಯನ್ನು ನೋಡಿ ಕಾಮನೆಯನ್ನು ಕೆರಳಿಸಿಕೊಂಡ ನೀನು ಇಲ್ಲಿರಲು ಯೋಗ್ಯನಲ್ಲ. ನೀನು ಮರ್ತ್ಯಲೋಕದಲ್ಲಿ ಜನಿಸಿ ನಿನ್ನ ಕಾಮನೆಗಳನ್ನು ಪೂರೈಸಿಕೊಂಡು ಹಿಂದಿರುಗು. ಗಂಗೆಗೆ ನೀನು ಮಾಡಿದ ಈ ಅಪರಾಧಕ್ಕಾಗಿ ಭೂಲೋಕದಲ್ಲಿ ಅವಳು ನಿನಗೆ ಬೇಡದ ಕೆಲಸಗಳನ್ನು ಮಾಡುತ್ತಿದ್ದರೂ ಕಾಮಾಭಿಭೂತನಾದ ನೀನು ಅವುಗಳನ್ನು ಸಹಿಸಿಕೊಳ್ಳಲೇಬೇಕು. ಅವಳ ಕಾರ್ಯಕ್ಕೆ ಅಡ್ಡಿಪಡಿಸಿದಾಗ ನಿನಗೆ ಮುಕ್ತಿ ಎಂದ. ಬ್ರಹ್ಮನ ಶಾಪವನ್ನು ಕೇಳಿಸಿಕೊಂಡ ಗಂಗೆಯೂ ಮಹಾಭಿಷನನ್ನೇ ಧ್ಯಾನಿಸುತ್ತಾ ಭೂಲೋಕಕ್ಕೆ ಹೊರಟಳು. ತನ್ನನ್ನು ಹಿಂಬಾಲಿಸುತ್ತಿದ್ದ ಸ್ವರ್ಗವಾಸಿಗಳಾದ ವಸುಗಳನ್ನು ನೋಡಿ "ಏನಾದರೂ ಸಮಸ್ಯೆಯಾ?" ಎಂದು ಕೇಳಿದಳು. ಅದಕ್ಕೆ ವಸುಗಳಲ್ಲೊಬ್ಬನಾದ ಪೃಥು "ನಾವು ಕಾಡಿನಲ್ಲಿ ವಿಹಾರ ಮಾಡುತ್ತಿದ್ದೆವು. ಆಗ ಅಲ್ಲಿ ಸಂಧ್ಯೋಪಾಸನೆಯನ್ನು ಮಾಡುತ್ತಿದ್ದ ವಸಿಷ್ಠರ ಹೋಮಧೇನುವನ್ನು ಕದ್ದೆವು. ಅದಕ್ಕಾಗಿ ಮಹರ್ಷಿಗಳು ನಮಗೆ ಯೋನಿಜರಾಗಿ ಎಂದು ಶಾಪ ಕೊಟ್ಟರು. ಹೀಗಾಗಿ ನಾವು ಭೂಮಿಯಲ್ಲಿ ಮನುಜರಾಗಿ ಜನ್ಮ ತಾಳಲೇಬೇಕಾಗಿದೆ. ಆದರೆ ಭೂಮಿಯಲ್ಲಿ ನಮಗೆ ಯಾವ ಮಾನವ ಸ್ತ್ರೀಯರ ಗರ್ಭವನ್ನು ಪ್ರವೇಶಿಸಲೂ ಇಷ್ಟವಿಲ್ಲ. ಅದಕ್ಕೆ ನೀನೇ ಮನುಷ್ಯಳಾಗಿ ಭೂಮಿಯಲ್ಲಿ ಅವತರಿಸಿ ನಮ್ಮ ತಾಯಿಯಾಗು" ಎಂದು ಬೇಡಿದರು.
ಸ್ವಲ್ಪ ಯೋಚಿಸಿದ ಗಂಗೆ "ಆಗಬಹುದು, ಆದರೆ ನನಗೆ ಗರ್ಭದಾನ ಮಾಡುವ ಒಬ್ಬ ಮಹಾಪುರುಷನ ಅಗತ್ಯವಿದೆ. ಭೂಲೋಕದಲ್ಲಿ ನಿಮ್ಮ ತಂದೆಯೆನಿಸಿಕೊಳ್ಳಲು ಅರ್ಹತೆಯುಳ್ಳ ವ್ಯಕ್ತಿ ಯಾರಿದ್ದಾರೆ" ಎಂದು ಕೇಳಿದಳು. ಅದಕ್ಕೆ ಮತ್ತೊಬ್ಬ ವಸು "ನಾವು ಇದನ್ನು ಆಗಲೇ ಯೋಚಿಸಿದ್ದೇವೆ. ಪ್ರತೀಪ ಮಹಾರಾಜನಿಗೆ ಶಾಂತನುವೆಂಬ ಲೋಕವಿಖ್ಯಾತನಾದ ಮಗ ಹುಟ್ಟುವನು. ಭೂಲೋಕದಲ್ಲಿ ಅವನೇ ನಮ್ಮ ತಂದೆಯಾಗಲು ಅರ್ಹ" ಎಂದ.
ಗಂಗೆಗೆ ಬ್ರಹ್ಮಲೋಕದಲ್ಲಿ "ನಾನು ವಿವಸ್ತಳಾಗಿದ್ದುದನ್ನು ನೋಡಿದ ಮಹಾಭಿಷನೇ ಶಾಂತನುವಾಗಿ ಹುಟ್ಟುವನೆಂದು ತಿಳಿಯಿತು. ಹೀಗಾಗಿ ಗಂಗೆ ವಸುಗಳ ಮಾತಿಗೆ
ಸಮ್ಮಸಿಸಿದಳು. ನಂತರ ಮತ್ತೊಬ್ಬ ವಸು
ಗಂಗಾದೇವಿಯೇ ನೀನು ನಮ್ಮ ಮತ್ತೊಂದು
ಪ್ರಾರ್ಥನೆಯನ್ನೂ ನಡೆಸಿಕೊಡಬೇಕು. ನಾವು ವಸಿಷ್ಠರ ಶಾಪದ
ಫಲವನ್ನು ಅನಿವಾರ್ಯವಾಗಿ ಅನುಭವಿಸಬೇಕಾಗಿದೆ. ಆದರೆ ನಾವು ಅವರ
ಶಾಪದನ್ವಯ ಭೂಲೋಕದಲ್ಲಿ ಹುಟ್ಟಲು ಒಪ್ಪಿದ್ದೇವೆಯೇ ಹೊರತು ಭೂಮಿಯಲ್ಲಿಯೇ ದೀರ್ಘಕಾಲ ಉಳಿಯುವ ಇಚ್ಛೆಯಿಲ್ಲ. ಅದಕ್ಕೆ ನಾವು ಒಬ್ಬೊಬ್ಬರಾಗಿ ನಿನ್ನಲ್ಲಿ
ಹುಟ್ಟುತ್ತಿರುವಂತೆಯೇ ನೀನು ನಮ್ಮನ್ನು ನೀರಿನಲ್ಲಿ
ಬಿಟ್ಟುಬಿಡಬೇಕು. ಇದರಿಂದಾಗಿ ನಾವು ಯೋನಿಜರಾದಂತೆಯೂ ಆಗುತ್ತದೆ
ಮತ್ತು ವಸಿಷ್ಠರ ಶಾಪವನ್ನು ಅನುಭವಿಸಿದಂತೆಯೂ ಆಗುತ್ತದೆ ಎಂದರು. ನಂತರ ಗಂಗೆ ನೀವು
ಹೇಳಿದಂತೆಯೇ ಮಾಡುತ್ತೇವೆ, ಆದರೆ ಸತ್ಪುತ್ರರಾಗಬೇಕೆನ್ನುವ ಕಾಮನೆಯಿಂದಲೇ ಸ್ತ್ರೀಪುರುಷರ ಸಮಾಗಮವಾಗುವುದರಿಂದ ಮತ್ತು ಶಾಂತನುವಿನೊAದಿಗಿನ ನನ್ನ ಸಮಾಗಮ ವ್ಯರ್ಥವಾಗದಂತೆ
ನನ್ನ ಮತ್ತು ಶಾಂತನುವಿನ ಸಮಾಗಮದ ಫಲವಾಗಿ ನಿಮ್ಮಲ್ಲಿ ಒಬ್ಬನಾದರೂ ಉಳಿಯಲೇಬೇಕು ಎಂದಳು. ಇನ್ನೊಬ್ಬ ವಸು, ಆಗಲಿ ಗಂಗಾಮಾತೆ,
ನಮ್ಮ ಎಂಟೂ ಜನರ ಶಕ್ತಿಯ
ಒಂದಂಶವನ್ನು. ನಿಮ್ಮಲ್ಲಿ ಯಾರು ಉಳಿಯುತ್ತೀರ ಎನ್ನುವುದನ್ನು
ನೀವೇ ನಿರ್ಧರಿಸಿ ಎಂದಳು. ಆಗ ಮತ್ತೊಬ್ಬ ವಸು
ನಾವು ಏಳು ವಸುಗಳು ನಮ್ಮ
ಶಕ್ತಿಯನ್ನು ಒಟ್ಟಾಗಿ ಕೂಡಿಸಿ ಶಾಂತನುವಿನ ಒಬ್ಬ ಮಗ ನಿನ್ನಲ್ಲಿ
ಹುಟ್ಟುವಂತೆ ಮಾಡುತ್ತೇವೆ. ಅಷ್ಟೇ ಅಲ್ಲ ಅವನು ಚಿರಕಾಲ
ಭೂಮಿಯಲ್ಲಿ ಉಳಿದು, ಶಾಂತನುವಿಗೆ ಬಹಳ ಇಷ್ಟವಾಗುವುದರ ಜೊತೆಗೆ
ಅವನ ಆಜ್ಞಾರಾಧಕನೂ ಆಗಿರುತ್ತಾನೆ. ಭೂಲೋಕದಲ್ಲಿರುವಾಗ ಅವನು ವೀರ್ಯವಂತನಾದರೂ ಅಪುತ್ರವಂತನಾಗಿಯೇ
ಇದ್ದು ಅವಸಾನವನ್ನು ಹೊಂದುತ್ತಾನೆ. ಇದಕ್ಕೆ ನಿನ್ನ ಸಮ್ಮತಿಯಿದೆ ಎಂದುಕೊಂಡಿದ್ದೇವೆ ಎಂದು ಹೇಳಿದರು.
ಇತ್ತ
ಕುರುವಂಶದ ರಾಜನಾದ ಪ್ರತೀಪ ಜಪಮಾಡುತ್ತಾ ಕೂತಿದ್ದಾಗ ಭೂಮಿಗೆ ಇಳಿದುಬಂದ ಗಂಗೆ ನೇರವಾಗಿ ಅವನ
ಬಲತೊಡೆಯ ಮೇಲೆ ಕೂತು ನೀನು
ನನ್ನನ್ನು ಮದುವೆಯಾಗು ಎಂದು ಕೇಳಿದಳು. ಅದಕ್ಕೆ
ಪ್ರತೀಪ ನಾವು ಕ್ಷತ್ರಿಯರನ್ನು ಬಿಟ್ಟು
ಬೇರೆಯವರನ್ನು ಮದುವೆಯಾಗುವಂತಿಲ್ಲ. ಜೊತೆಗೆ ಹೆಣ್ಣುಮಕ್ಕಳು ಮತ್ತು ಸೊಸೆಯರು ಮಾತ್ರ ಗಂಡಸಿನ ಬಲ ತೊಡೆಯ ಮೇಲೆ
ಕುಳಿತುಕೊಳ್ಳಲು ಅರ್ಹರಾಗಿರುತ್ತಾರೆ. ಬಲತೊಡೆಯು ಅವರಿಗಾಗಿ ಮೀಸಲಾಗಿರುತ್ತದೆ. ಎಡಭಾಗದ ತೊಡೆ ಕಾಮಿನಿಯರಿಗೆ ಮತ್ತು
ಪತ್ನಿಗೆ ಮೀಸಲು. ನೀನು ನನ್ನ ಬಲತೊಡೆಯ
ಮೇಲೆ ಕುಳಿತುಕೊಂಡಿದ್ದರಿAದ ನಾನು ನಿನ್ನ
ವರಿಸಲು ಆಗುವುದಿಲ್ಲ. ಆದರೆ ನೀನು ನನ್ನ
ಸೊಸೆಯಾಗಬಹುದು ಎಂದ. ಆಗ ಗಂಗೆ
ಆಗಲಿ ಮಹಾರಾಜ, ನಾನು ನಿನ್ನ ಸೊಸೆಯಾಗಲು
ಅಡ್ಡಿಯಿಲ್ಲ. ಆದರೆ ನಮ್ಮ ದಾಂಪತ್ಯದ
ಸಮಯದಲ್ಲಿ ನಾನು ನಿನ್ನ ಮಗನ
ಜೊತೆಯಿರುವಷ್ಟೂ ಕಾಲ ನಾನು ಅನುಸರಿಸುವ
ನಿಯಮಗಳನ್ನು ಇಷ್ಟವಿರಲಿ ಇಲ್ಲದಿರಲೀ ಅವನೂ ಅವುಗಳನ್ನು ಒಪ್ಪಿಕೊಂಡಿರಲೇಬೇಕೇ
ಹೊರತು ವಿವೇಚಿಸಲು ವಿಮರ್ಶಿಸಲು ಹೋಗಬಾರದು. ನನ್ನ ಸಂಬಂಧದಿಂದಾಗಿ ನಿನ್ನ ಮಗ
ಪ್ರಿಯನಾದ, ಪುಣ್ಯಾತ್ಮನಾದ ಪುತ್ರನನ್ನು ಹೊಂದಿ ನಂತರ ಸ್ವರ್ಗ ಸೇರುವನು
ಎಂದಳು. ಅಲ್ಲಿಯವರೆವಿಗೂ ಪ್ರತೀಪನಿಗೆ ಮಕ್ಕಳೇ ಆಗಿರಲಿಲ್ಲ. ಅದು ಅವನಿಗೆ ನೆನಪೂ
ಇರಲಿಲ್ಲ. ನಂತರ ಪ್ರತೀಪ ಮಾಡಿದ
ತಪಸ್ಸಿನಿಂದಾಗಿ ಪುತ್ರ ಭಾಗ್ಯ ದೊರೆಯಿತು. ಬ್ರಹ್ಮನ ಶಾಪದಿಂದಾಗಿ ಮಹಾಭಿಷನೇ ಪ್ರತೀಪನ ಪುತ್ರನಾಗಿ ಜನಿಸಿದ. ವಂಶವು ಶಾಂತವಾಗುವುದರಲ್ಲಿದ್ದಾಗ ಹುಟ್ಟಿದ್ದರಿಂದ ಮತ್ತು ತಂದೆ ತಪಸ್ಸಿನಲ್ಲಿ ನಿರತನಾಗಿದ್ದು
ಶಾಂತವಾಗಿರುವಾಗ ಹುಟ್ಟಿದ್ದರಿಂದ ಅವನಿಗೆ ಶಾಂತನು ಎಂದು ಹೆಸರಿಟ್ಟರು. ದೊಡ್ಡವನಾದ
ಶಾಂತನುಗೆ ಪಟ್ಟಾಭಿಷೇಕ ಮಾಡಿದ ಪ್ರತೀಪ ಮಗನನ್ನು ಕರೆದು ಮಗು ಶಾಂತನು, ಹಲವಾರು
ವರ್ಷಗಳ ಹಿಂದೆ ಶ್ರೇಷ್ಠಳಾದ ಸ್ತ್ರೀಯೊಬ್ಬಳು ನಿನ್ನ ಶ್ರೇಯಸ್ಸಿಗಾಗಿ ನನ್ನಲ್ಲಿಗೆ ಬಂದಿದ್ದಳು. ದೇವಕನ್ಯೆಯಾದ ಅವಳು ನಿನ್ನನ್ನು ಸಂಧಿಸಿ
ಪ್ರಾರ್ಥಿಸಿದರೆ ನೀನು ಅವಳನ್ನು ವರಿಸು.
ಅವಳು ಯಾರು, ಅವಳ ಕುಲಗೋತ್ರಗಳೇನು ಎನ್ನುವುದನ್ನು
ಕೇಳಬೇಡ. ನಿನಗಿಷ್ಟವಾದ ಕೆಲಸಗಳನ್ನೇ ಆಗಲಿ ಇಷ್ಟವಿರದ ಕೆಲಸಗಳನ್ನೇ
ಮಾಡಲಿ ನೀನು ಅವಳನ್ನು ಪ್ರೆಶ್ನಿಸಬೇಡ
ಎಂದು ಹೇಳಿ ಪ್ರತೀಪ ವಾನಪ್ರಸ್ಥಕ್ಕೆ
ಹೋದ.
ವೀರಶೂರನಾಗಿದ್ದ
ಶಾಂತನು ಒಮ್ಮೆ ಗಂಗಾತೀರದಲ್ಲಿ ವಿಹರಿಸುತ್ತಿದ್ದಾಗ ಅವನ ಕಣ್ಣಿಗೆ ಹುಣ್ಣಿಮೆಯ
ಬೆಳಕಂತಿದ್ದ ಕಂಡ ಗಂಗೆಗೆ ಶಾಂತನು
ತನ್ನ ಪ್ರೇಮವನ್ನು ನಿವೇದಿಸಿಕೊಂಡಾಗ ಗಂಗೆ ಕೆಲವು ಷರತ್ತುಗಳನ್ನು
ಹೇಳಿದಳು. ಗಂಗೆಯ ಪ್ರೇಮದಲ್ಲಿ ಮೂಕನಾಗಿದ್ದ ಶಾಂತನು ಗಂಗೆ ಹೇಳಿದ್ದಕ್ಕೆಲ್ಲ ಒಪ್ಪಿಗೆ
ಕೊಟ್ಟು ಅವಳನ್ನು ಮದುವೆಯಾದ. ಮಧುರವಾಗಿದ್ದ ಅವರ ಸುದೀರ್ಘ ದಾಂಪತ್ಯದ
ಫಲವಾಗಿ ಎಂಟು ಮಕ್ಕಳು ಹುಟ್ಟಿದರು.
ಆದರೆ ಒಂದೊAದು ಮಗು
ಹುಟ್ಟಿದಾಗಲೂ ಗಂಗೆ ತ್ವಾಂ ಪ್ರೀಣಾಮ್ಯಹಂ
(ನಾನು ನಿನ್ನನ್ನು ಸುಪ್ರೀತನನ್ನಾಗಿ ಮಾಡುತ್ತಿದ್ದೇನೆ) ಎಂದು ಮಗುವನ್ನು ಪ್ರವಾಹದಲ್ಲಿ
ಹಾಕುತ್ತಿದ್ದಳು. ಏಳು ಮಕ್ಕಳನ್ನೂ ಗಂಗೆ
ನೀರಿಗೆ ಹಾಕುವಾಗಲೂ ಶಾಂತನು ಸಂಕಟವಾಗುತ್ತಿದ್ದರೂ ಅವರ ನಡುವೆ ಆದ
ಒಪ್ಪಂದದಿAದಾಗಿ ಗಂಗೆಯನ್ನು ತಡೆಯಲಾಗಲಿಲ್ಲ.
ಆದರೆ ಎಂಟನೇ ಮಗುವನ್ನೂ ಗಂಗೆ ನೀರಿಗೆ ಹಾಕುವುದರಲ್ಲಿದ್ದಾಗ
ಶಾಂತನು ತಡೆಯಲಾರದೇ ಮಗುವನ್ನೇಕೆ ಕೊಲ್ಲುತ್ತಿದ್ದೀಯ ನಿಲ್ಲಿಸು ಎಂದು ಅವಳನ್ನು ತಡೆದ.
ಕೂಡಲೇ ಅವರ ನಡುವಿನ ಒಪ್ಪಂದ
ಮುರಿಯಿತು. ನಾನು ಗಂಗೆ, ಜಹ್ನು
ಮಹರ್ಷಿಯ ಮಗಳು ಜಾಹ್ನವಿ. ದೇವಕಾರ್ಯದ
ಸಿದ್ಧಿಗಾಗಿ ಇಷ್ಟು ದಿನ ನಾನು ನಿನ್ನಲ್ಲಿದ್ದೆ.
ನಾನು ನೀರಿಗೆ ಹಾಕಿದ ಏಳು ಮಕ್ಕಳೂ ಮತ್ತು
ಈ ಎಂಟನೆಯ ಮಗುವೂ ಶಾಪಗ್ರಸ್ಥರಾಗಿದ್ದ ಮಹಾಭಾಗರಾದ ಅಷ್ಟವಸುಗಳು. ಅಂತಹ ಮಹಾಭಾಗರಿಗೆ ತಂದೆಯಾಗುವ
ಅರ್ಹತೆ ನಿನ್ನ ಬಿಟ್ಟರೆ ಭೂಲೋಕದಲ್ಲಿ ಮತ್ತೊಬ್ಬರಿಗಿಲ್ಲ. ಅವರ ತಾಯಿಯಾಗುವ ಅರ್ಹತೆ
ನನ್ನ ಹೊರತು ಇನ್ಯಾರಿಗೂ ಇಲ್ಲ್ಲ. ಇಲ್ಲಿಗೆ ನನ್ನ ಕರ್ತವ್ಯ ಮುಗಿದಿದೆ.
ನಾನು ಹೋಗಿಬರುತ್ತೇನೆ. ಆ ಏಳು ಜನ
ವಸುಗಳ ತೇಜಸ್ಸನ್ನೂ ಒಳಗೊಂಡಿರುವ ಈ ಎಂಟನೆಯ ಮಗುವನ್ನು
ರಕ್ಷಿಸು. ನಮ್ಮಿಬ್ಬರ ಸಮಾಗಮ ವ್ಯರ್ಥವಾಗಬಾರದೆಂದು ದೀರ್ಘಾಯುಷ್ಯನಾದ ಪುತ್ರನೊಬ್ಬ ಜನಿಸಲಿ ಎಂದು ವಸುಗಳಲ್ಲಿ ಕೇಳಿಕೊಂಡಿದ್ದೆ.
ಹೀಗಾಗಿ ಈ ಮಗುವನ್ನು ರಕ್ಷಿಸು.
ಇವನು ದೀರ್ಘಕಾಲ ಪೃಥ್ವಿಯಲ್ಲಿ ಜೀವಿಸಿರುವನು ಎಂದು ಗಂಗೆ ಅದೃಶ್ಯಳಾದಳು.
ಆ ಎಂಟನೆಯ ವಸು ರೂಪದ ಮಗುವೇ
ದೇವವ್ರತನೆಂದೂ ಮುಂದೆ ಭೀಷ್ಮನೆಂದೂ ಹೆಸರಾಗಿ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾಯಿತು.
ಕೃಪೆ
- ಬೋಧಿವೃಕ್ಷ ( ಆಧಾರ : ಮಹಾಭಾರತ ಆದಿಪರ್ವ )

Comments
Post a Comment