ಟ್ವಿನ್ ಫ್ಲೇಮ್...
ಲೇಖನ - ಮಂಜುಳಾ ಡಿ
ನೀರಿನಲ್ಲಿ ಪುಟಿದೇಳುವ ಅಲೆಗಳನ್ನೇ ದೃಷ್ಟಿ ಕದಲಿಸದೇ ಇಬ್ಬರೂ ನೋಡುತ್ತಲೇ ಇದ್ದೆವು. ಮಾತುಗಳು ಬಹುಶಃ ತಳ ಹತ್ತಿದ್ದವು. ಮೆಲ್ಲಗೆ ಅವಳ ಕೈಸವರಿದೆ. ಜೀವಂತವಿದ್ದಾಳಾ ಎಂದು ಪರಿಕ್ಷಿಸುತ್ತಿದ್ದೆನಾ, ನನಗೇ ಪ್ರಶ್ನೆಯಾಯ್ತ! ಅವಳ ದೃಷ್ಟಿ ಕದಲಲಿಲ್ಲ. ಮೆಲ್ಲಗೆ ಉಸುರಿದಳು...am grateful to god!!!
ಧ್ವನಿ ಕ್ಷೀಣವಾಗಿದ್ದರೂ ಸತ್ಯ ಮತ್ತು ಧೃಡತೆಯ ಸಾರದಂತಿತ್ತು. ಅವಳಿಗೆ ಅಕ್ಕನಿಗಿಂತ ಹೆಚ್ಚಾಗಿ ಗೆಳತಿಯೂ ಆಗಿದ್ದೆ. ನಮ್ಮ ಮಧ್ಯೆ ಹಂಚಿಕೊಳ್ಳಲಾರದ ವಿಷಯ ಅಂತ ಯಾವುದೂ ಇರಲೇ ಇಲ್ಲ. ಇಂತಹ ಹಲವಾರು ಸಂಧರ್ಭಗಳಲ್ಲಿ ಪರಸ್ಪರ ಅಮ್ಮ-ಗೆಳತಿ ಆಗಿದ್ದೇವೆ. ಅವಳ ಮೌನ ನನ್ನಿಂದ ಭರಿಸಲಾಗದೇ ಅವಳನ್ನೇ ನೋಡುತ್ತಾ ಹೇಳಿದೆ,
"ಅಳಬೇಕು ಅನ್ನಿಸಿದರೆ ಅತ್ತು ಬಿಡು, ಒಳಗೆ ಅವಿತ ಜ್ವಾಲೆ ಲಾವಾರಸವಾಗಿ ಹರಿದುಬಿಡಲಿ. ಇಷ್ಟೆಲ್ಲಾ ಹೋರಾಟ ಮಾಡಿದೆ, ನಿನಗೆ ದೊರೆತದ್ದು ಏನು, ಯಾವಾಗಲೂ ಇದೇ pattern, ಮೌನ, ನೋವು...! ಇದಕ್ಕಾಗಿಯಾ ನಿನ್ನ ತಪನ-ಹೋರಾಟವೆಲ್ಲಾ...! ಇನ್ನೇನೂ ಹೇಳಲು ಶಕ್ತಿಯಿಲ್ಲದೇ ಅವಳನ್ನೊಮ್ಮೆ ನದಿಯ ಅಲೆಗಳನ್ನೊಮ್ಮೆ ನೋಡುತ್ತಾ ಕುಳಿತೆ.
ಸಂಜೆಯ ಸೂರ್ಯ ತೀರದ ಮೇಲೆ ನಿಧಾನವಾಗಿ ಇಳಿಯುತ್ತಿದ್ದ. ತುಸುದೂರದ ಮರದ ಮೇಲೆ ಗಂಡು ಹಕ್ಕಿ ಬಾಯಿಯಲ್ಲಿ ಹುಲ್ಲುಕಡ್ಡಿ ಹಿಡಿದು ಬಂದಿತು. ಅರ್ಧರ್ಧ ಆದ ಗೂಡಿನಿಂದ ಮೊಟ್ಟೆಗೆ ಕಾವು ಕೊಡುತ್ತಿದ್ದ ಹೆಣ್ಣು ಹಕ್ಕಿ ಹೊರಗೆ ಬಂದು ಗಂಡು ಹಕ್ಕಿಗೆ ಗೂಡು ಹೆಣೆಯುವಲ್ಲಿ ಸಹಾಯ ಮಾಡತೊಡಗಿತು. ಕಣ್ಣೆವೆ ಕದಲಿಸದೇ ಹಕ್ಕಿಗಳನ್ಬೇ ನೋಡುತ್ತಿದ್ದವಳು ಮೆಲ್ಲಗೆ ಉಸುರಿದಳು...
ಆತನಿಂದ ನನಗೇನು ದೊರೆಯಿತು...! ಇಲ್ಲ, ಇದುವರೆಗೂ ನಾನು ಕೇಳಿದ ಒಂದೂ ದೊರೆತಿಲ್ಲ. ನಿಜವೇ! ಅದರೆ ಆತನ ಅಮೃತದಂತಹ ಪ್ರೀತಿ ಉಂಡಿದ್ದೇನೆ. ಇತರ ಲೋಹಗಳನ್ನು ಚಿನ್ನವಾಗಿಸುವ ಸ್ಪರ್ಶಮಣಿಯಂತೆ ಆತ ನನಗೆ. ಅವನನ್ನು ಸೋಕಿ ನಾ ಜೀವಂತವಾದಂತೆ. ಎಲ್ಲವನ್ನೂ ಬದುಕಿದ್ದೇನೆ ಆತನ ಪತ್ನಿಯಾಗಿ...ಆತನ ನೆನಪಿನ ಒಂದು ಅಲೆಯಿಂದ ನನ್ನ ದೇಹದಲ್ಲಾಗುವ ಬದಲಾವಣೆಗಳು , ನನ್ನ ಹೆಣ್ತನ ಅರಳಿದ್ದೇ ಆತನಿಂದ. ನನ್ನೆಲ್ಲಾ ಕೂಡಿಟ್ಟ ಭಾವನೆಗಳನ್ನು ಆತನಿಗೆ ಧಾರೆ ಎರೆದಿದ್ದೇನೆ. ಬಹುಶಃ ನಿನಗೆ ಅರ್ಥವಾಗಲಾರದು ಎನ್ನುತ್ತಾ ಮತ್ತೆ ತುಸು ಮೌನಿಯಾದಳು.
ಗಂಡು ಹಕ್ಕಿ ಮತ್ತೆ ಗೂಡಿಗಾಗಿ ಹುಲ್ಲು ತರಲು ಹಾರಿತು. ಹೆಣ್ಣು ಹಕ್ಕಿ ಮತ್ತೆ ಹೋಗಿ ಮೊಟ್ಟೆಯ ಮೇಲೆ ಜತನದಿಂದ ಕಾವಿಕ್ಕಲು ಕೂತಿತು. ಇಬ್ಬನಿ ಮಾತು ಮುಂದುವರೆಸಿದಳು. ಟ್ವಿನ್ ಫ್ಲೇಮ್ಸ್ ಬಗ್ಗೆ ನಿನಗೆ ಗೊತ್ತಾ ಎನ್ನುತ್ತಾ ನನ್ನ ಕಡೆ ನೋಡಿದಳು.
ಇದು ಹೊಸ ಪದ ನನಗೆ. ಶಬ್ದವೇ ಕುತೂಹಲಕಾರಿಯಾಗಿದೆ. ಎಂದು ಕಣ್ಣರಳಿಸಿ ಆಕೆಯ ಮಾತಿಗಾಗಿ ಎದುರುನೋಡಿದೆ.
ಅದ್ಯಾವುದೋ ಲೋಕದಲ್ಲದ್ದವಳಂತೆ ಹೇಳತೊಡಗಿದಳು. " ಜನ್ಮಗಳ ಹಾದಿಯಲ್ಲಿ ಒಂದಾಗಿದ್ದ ಆತ್ಮಗಳು, ಜೀವಾತ್ಮದ ಭಾಗವಾಗಿದ್ದವರು ನಂತರದ ಜನ್ಮಗಳಲ್ಲಿ ಬೇರೆ ಕಡೆ ಹುಟ್ಟಿದರೂ ಭೇಟಿ ಬರೆದಿಟ್ಟದ್ದು. ಒಂದು ಆತ್ಮದ ಎರಡು ಭಾಗಗಳಂತೆ. ಅವರು ಸಿಕ್ಕ ಕ್ಷಣ ತನ್ನ ಉಳಿದರ್ಧ ಸಿಕ್ಕಂತೆ-ಮನೆ ತಲುಪಿದಂತೆ-ಹೊಸದು- ಈಗಷ್ಟೇ ಭೇಟಿಯಾದವರು ಅನ್ನಿಸದ ಜನ್ಮದ ನಂಟು ಭಾಸವಾಗುತ್ತದೆ. ಟ್ವಿನ್ ಫ್ಲೇಮ್ ವಿವರಿಸುವ ಬಹಳಷ್ಟು ಪುಸ್ತಕಗಳಿವೆ. ಅಮೆರಿಕಾದಲ್ಲಿ ಜೆಫ್ ಮತ್ತು ಶೆಲಿಯಾ ಡಿವೈನ್ ರವರು ಟ್ವಿನ್ ಫ್ಲೇಮ್ ಯುನಿವರ್ಸ್ ನಡೆಸುತ್ತಿದ್ದಾರೆ.
ಇನ್ನೂ ಸರಳವಾಗಿ ಹೇಳಬೇಕೆಂದರೆ...
ಬದುಕಿನ ಹಾದಿಯಲ್ಲಿ ಅಚಾನಕವಾಗಿ ವ್ಯಕ್ತಿ ಅನ್ನುವುದಕ್ಕಿಂತ ಆತ್ಮವೊಂದರ ಭೇಟಿಯಿಂದ ಬೆಳಕಿನ ಸೆಲೆಯೊಂದರ ದರ್ಶನವಾಗುತ್ತದೆ. ಮತ್ತದು ದೈವ ಎಂದು ನಿನಗೆ ತಿಳಿಯುತ್ತದೆ. ಆ ಕ್ಷಣದಿಂದ ನಿನ್ನ ಆಲೋಚನೆಯ ರೀತಿ ಬದುಕಿನ ಸುತ್ತಲ ಚಿತ್ರಣ ಎಲ್ಲವೂ ವಿಭಿನ್ನವಾಗಿ ಕಾಣುತ್ತದೆ. ನಿನ್ನೀಡಿ ಬ್ರೈನ್ ಪ್ರೋಗ್ರಾಮಿಂಗ್ 360 ಡಿಗ್ರಿ ಬದಲಾಗಿ ಹೋಗಿರುತ್ತದೆ. ನಿನಗೆ ದೇವರ ದರ್ಶನವಾಗಿದೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ನಿನ್ನೊಳಗಿನ ಹರಿಯುವಿಕೆ ಸಂಪೂರ್ಣ ಬದಲಾಗಿರುತ್ತದೆ....ಇದೇ ನಿನ್ನ twin flame ನಿನ್ನನ್ನು ಭೇಟಿಯಾದಾಗ ಆಗುವ ಅನುಭವ.
ನಿನ್ನೆಲ್ಲಾ ಆಪ್ತ ಜಗತ್ತು ನಿನ್ನ ಸುತ್ತಲಿದ್ದರೂ ಅದೊಂದು ಜೀವವಷ್ಟೇ ನಿನ್ನನ್ನು ತಣಿಸಬಲ್ಲದ್ದು-ಅರಳಿಸಬಲ್ಲದು. that soul will be your healing and growth...
ಆದರ! ಈ ಕ್ಷಣ ಬಿಟ್ಟು ನಾನೇನೂ ನಂಬುವುದಿಲ್ಲ. ಆದರೆ ಆತನನ್ನು ಭೇಟಿಯಾದ ಕ್ಷಣದಿಂದ ಆತನನ್ನು ಬಿಟ್ಟು ನನಗೇನೂ ಬೇಕೆನಿಸುವುದಿಲ್ಲ...ನನಗಿರುವ ಎಲ್ಲದಕ್ಕೂ ಅರ್ಥ ಬರುವುದೇ ಆತನಿಂದ, ಇದು ಅಷ್ಟೇ ಸತ್ಯ!
ಮಾತು ಹೀಗೇ ಗಂಭಿರವಾಗಿ ಸಾಗಿತ್ತು ಅದ್ಬುತ ಲೋಕವೊಂದನ್ನು ನೋಡುತ್ತಿದ್ದಂತೆ ಪ್ರಶ್ನೆಗಳಲ್ಲಿ ನನ್ನೊಳಗೇ ಕಲಸಿ ಹೋದಂತೆ ಅವಳನ್ನೇ ನೋಡುತ್ತಿದ್ದೆ.
ಅನತಿ ದೂರದಲ್ಲಿದ್ದ ನಾರ್ತ್ ಇಂಡಿಯಾ ಕಪಲ್ ಅವರ ಮೊಬೈಲ್ ನಿಂದ "ನನ್ನಾಸಾ ಗುಲ್ ಕಿಲೇಗಾ ಅಂಗನಾ...ಸೂನಿ ಬೈಯಾ ಸಜೇಗಾ ಸಜನಾ..." ಹಾಡು ತೇಲಿ ಬಂದಿತು..
ಅಷ್ಟರವರೆಗೆ ಧೃಢವಾಗಿದ್ದ ಇಬ್ಬನಿ ಬಿಕ್ಕಿದಳು. ಒಳಗೆ ಅದುಮಿಟ್ಟ ಭಾವನೆಗಳು ಪ್ರವಾಹವಾಗಿ ಹರಿಯಿತು. ಬಹಳಷ್ಟು ಹೊತ್ತು ಕಣ್ಣಿರು-ಭಿಕ್ಕುಗಳ ನಂತರ ಹಗುರಾದಂತೆ ಕಂಡಳು. ನಾನು ಹೋಗಿ ನೀರಿನ ಬಾಟಲ್ ಮತ್ತು ಟೀ ತಂದೆ. ಮುಖಕ್ಕೆ ನೀರೆರಚಿಕೊಂಡು ಚಹಾ ಕುಡಿದ ನಂತರ ತುಸು fresh ಆದಳು...
ನನ್ನೆಡೆಗೆ ಕೈಚಾಚಿ ಆತ್ಮೀಯತೆಯಿಂದ ನಸುನಕ್ಕಳು. ಸೂರ್ಯ ಕತ್ತಲಿಗೆ ಶಿಫ್ಟ್ ಬಿಟ್ಟುಕೊಟ್ಟು ರೆಸ್ಟ್ ಮಾಡುವ ಧಾವಂತದಲ್ಲಿದ್ದ.
ಈ ಟ್ವಿನ್ ಫ್ಲೇಮ್-ಆತ್ಮದ ಭಾಗ ಇವುಗಳ ಕಥೆ ನನಗೆ ಗೊತ್ತಿಲ್ಲ. ಇದಕ್ಕೆಲ್ಲಾ ಸೈನ್ಸ್ ಬೇಸ್ ಇಲ್ಲ. ನಿನ್ನೀ ಧ್ಯಾನ ಪರಿತಪನೆಗೆ ಅರ್ಥವಿದೆಯಾ, ಇದು ನನ್ನದಲ್ಲ, ಎಲ್ಲರ ಪ್ರಶ್ನೆ ಎಂದು ಉತ್ತರಿಸುವಂತೆ ಅವಳತ್ತ ನೋಡಿದೆ.
ಪ್ರತೀಬಾರಿ ಆತ ಏನು ಬೇಕು ಅಂತ ಕೇಳಿದಾಗಲೆಲ್ಲಾ "ನಿನಗಿಂತ ಹೆಚ್ಚಿನದು ಏನು ಕೊಡಬಲ್ಲೇ ನಾನೇನು ಪಡೆಯಬಲ್ಲೆ...ಎಂಬುದೊಂದೇ ತೋಚುತ್ತಿತ್ತು"... ಬಹಳವಾಗಿ ಬಯಸಿದ್ದೆ ಆತನನ್ನು ನನ್ನಲ್ಲಿ ಉಳಿಸಿಕೊಳ್ಳಬೇಕು ಎಂದು, ಇದಕ್ಕಿದ್ದ ದಾರಿ ಆತನಿಂದ ಮಗು ಪಡೆಯುವುದು ಒಂದೇ ಆಗಿತ್ತು. ಬಹಳಷ್ಟು ಕೇಳಿದೆ. ಹೇಗೇಗೋ ಸಾಗಿದ ಹಾದಿ, ಅವನಿಗೆ ಅರ್ಥವಾಗಲಿಲ್ಲವೋ- ಕೊಡಲು ಮನಸ್ಸಿರಲಿಲ್ಲವೋ, ಅರ್ಥಕ್ಕೆ ನಿಲುಕುತ್ತಿಲ್ಲ.
ಎಷ್ಟೊಂದು ಚಿಕ್ಕ ಚಿಕ್ಮ ಆಸೆಗಳಿದ್ವವು. ಅವನ ಕಣ್ಣೋಟದ ಜ್ವಾಲೆಯಲ್ಲಿ ಬೆಂದು ಹೋಗಬೇಕು, ಅವನ ಕರಗಳಲ್ಲಿ ಕರಗಿ ಹೋಗಬೇಕು, ಅವನ ಮಡಿಲಲ್ಲಿ ಮಗುವಾಗಬೇಕು...ಎಲ್ಲವೂ ನಿಸ್ತೇಜವೀಗ. ನನಗಿನ್ನು ಮಗು ಆಗುವುದಿಲ...!
ಒಂದು ಮಾತ್ರ ವಿಪರೀತವಾಗಿ ಬಾದಿಸುತ್ತದೆ. ನಿಜವಾಗಿ ಆತ ನನ್ನನ್ನು ಪತ್ನಿಯಾಗಿ ಕಂಡಿದ್ದಲ್ಲಿ ನಮ್ಮಿಬ್ಬರ ಕುಡಿಯನ್ನು ನೋಡುವ ಆಸೆ ಹೆಣ್ಣಿಗಿಂತ ಹೆಚ್ಚು ಗಂಡಿಗೇ ಇರುತ್ತದೆ.
ಒಮ್ಮೆಯೂ ನಾನು ಆತನಿಗೆ ನಾನು ಆತನ ಪತ್ನಿಯಾಗಿ ಆತನಿಗೆ ಕಾಣಲಿಲ್ಲವೇನೋ...ಎನ್ನುವುದು ತೀವ್ರವಾಗಿ ಬಾದಿಸುತ್ತದೆ...ಎನ್ನುತ್ತಾ ನೀರಿನಬಾಟಲ್ ಹಿಡಿದು ಮೇಲೆದ್ದಳು.
ನಸುಗತ್ತಲಲ್ಲಿ ಅಲೆಗಳ ಬಣ್ಣದ ವಿನ್ಯಾಸ ಚಂದಗೊಂಡಿತ್ತು. ಹಕ್ಕಿ ಮತ್ತೆ ಹುಲ್ಲು ಕೊಕ್ಕಿನಲ್ಲಿ ಹಿಡಿದು ಗೂಡು ತಲುಪಿತು. ಹೆಣ್ಣು ಹಕ್ಕಿ ಅದನ್ನೇ ಎದುರು ನೋಡುತ್ತಿದ್ದಂತೆ ಹೊರಗೆ ಬಂದಿತು...

Comments
Post a Comment