ನೆಚ್ಚಿನ ಮಡದಿಗೆ ಯೋಧನ ಪತ್ರ

ನೆಚ್ಚಿನ ಮಡದಿಗೆ ಯೋಧನ ಪತ್ರ 

ಲೇಖನ  - ಜೆ. ಎಸ್. ಗಾಂಜೇಕರ  ಕುಮಟಾ 


ಅಂದು ಮುಂಜಾನೆ ೧೧ ಘಂಟೆಯ ಸಮಯ. "ಪೋಸ್ಟ್" ಎಂದು ಅಂಚೆಯವನು ಕರೆದಾಗ ಲಗುಬಗೆಯಿಂದ ಸುಮಾ ಅಡುಗೆ ಮನೆಯಿಂದ ಓಡಿ ಬಂದು ಲಕೊಟೆಯನ್ನು ಪಡೆದಳು. ಅವಳಿಗೆ ಗೊತ್ತಿತ್ತು ತನ್ನ ಗಂಡನದು ಎಂದು. ಗ್ಯಾಸ್ ಮೇಲೆ ಕುದಿಯಲು ಇಟ್ಟ ಹಾಲನ್ನು ಉಕ್ಕುವ ಮೊದಲೇ ಆರಿಸಿ ತನ್ನ ಗಂಡನ ಪತ್ರ ಓದುವ ಆತುರ. ಅಷ್ಟೋತ್ತಿಗೆ ಹೊರಗೆ ಹೋಗಿದ್ದ ಮಾವನವರು " ಸುಮಾ, ಶಶಿ ಕಾಗದ ಬಂದಿದೆಯಾ? ಎಂದು ಮಹೇಶ ಕೇಳಿದಾಗ "ಹೌದು, ಅಪ್ಪಾಜಿ" ಎಂದು ಹೇಳಿ ಬಂದ ಲಕೊಟೆಯನ್ನು ತಂದು ಕೊಟ್ಟಳು. ಆಗ ಮಹೇಶ ಲಕೊಟೆಯ ಮೇಲಿದ್ದ ಎಡ್ರೆಸ್ ನೋಡಿ "ಮಗಳೇ, ಇದು ನಿನ್ನ ಹೆಸರಿಗೆ ಬಂದಿದೆ" ಎಂದು ಪರತ ಸೊಸೆಗೆ ಕೊಡಲು ಬಂದಾಗ, ಸುಮಾ "ಪರವಾಗಿಲ್ಲ ಅಪ್ಪಾಜಿ ಲಕೊಟೆ ಒಡೆದು ಓದಿ" ಎಂದು ಹೇಳಿದಳು. ಆಗ ಮಾವನವರು "ನಿನ್ನ ಹೆಸರಿಗೆ ಬಂದ ಕಾಗದ ನಾ ಓದುವುದು ಸರಿಯಲ್ಲ." ಎಂದು ಹೇಳಿ ತಿರುಗಿ ಸೊಸೆಯ ಕೈಗೆ ಕೊಟ್ಟರು. ಸುಮಾ ಲಕೊಟೆಯನ್ನು ತೆರೆದಾಗ ಅದರಲ್ಲಿ ಎರಡು ಪತ್ರವಿತ್ತು. ಒಂದು ತನ್ನ ಹೆಸರಿಗೆ ಬರೆದ ಪತ್ರ ಇನ್ನೊಂದು ಮಾನನವರಿಗೆ ಬರೆದ ಪತ್ರ. "ಅಪ್ಪಾಜಿ, ಈ ಲಕೊಟೆಯಲ್ಲಿ ನಿಮಗೆ ಬರೆದ ಪತ್ರವಿದೆ. ಇದನ್ನು ತೆಗೆದು ಕೊಳ್ಳಿ” ಎಂದು ಹೇಳಿ ಮಾವನವರಿಗೆ ಬರೆದ ಪತ್ರ ಕೊಟ್ಟಳು. ಸುಮಾ ತನಗೆ ಬರೆದ ಪತ್ರವನ್ನು ತನ್ನ ಕೋಣೆಗೆ ಹೋಗಿ ಓದಲಾರಂಭಿಸಿದಳು....


ದಿನಾಂಕ: 15-5-2017


ನನ್ನೊಲುಮೆಯ ಧರ್ಮಪತ್ನಿ ಸೌ. ಸುಮಾ,

ಸುಮಂಗಲ ಆಶೀರ್ವಾದಗಳು.

ಸುಮಾ, ಬಹಳ ದಿನಗಳ ತರುವಾಯ ಈ ಪತ್ರ ಬರೆದುದಕ್ಕೆ ಬೇಸರವಿಲ್ಲ ತಾನೇ? ಕೆಲವು ದಿನಗಳ ಹಿಂದೆ ನಮ್ಮ ಶಿಬಿರ ಏರ್ಪಡಿಸಲಾಗಿತ್ತು. ಅಲ್ಲಿ ನಾನಾ ತರಹದ ತರಬೇತಿ ನೀಡಲಾಯಿತು. ವೈರಿಗಳನ್ನು ಹೇಗೆ ಯಶಸ್ವಿಯಾಗಿ ಎದುರಿಸಿ ನಮ್ಮ ಬಟಾಲಿಯನ್ ಸುರಕ್ಷಿತವಾಗಿ ರಕ್ಷಿಸುವ ನಾನಾ ವಿದಧ ಯೋಜನೆಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಯಿತು. ಸುಮಾ, ಈ ಶಿಬಿರ ಏರ್ಪಡಿಸಲು ಕಾರಣ ನಮ್ಮ ದೇಶದ ಗಡಿ ಭಾಗದಲ್ಲಿ ಉಗ್ರರ ನುಸುಳಿಕೆ ಹೆಚ್ಚಾಗುತ್ತಿದೆ. ಅದನ್ನು ಸಮರ್ಪಕವಾಗಿ ನಿಯಂತ್ರಿಸಲು ಹಾಗೂ ಅವರನ್ನು ಹೊಡೆದೋಡಿಸಲು ಎಲ್ಲಾ ತರಹದ ಆಯುದ್ಧಗಳನ್ನು ಉಪಯೋಗಿಸುವ ರೀತಿಯ ಬಗ್ಗೆ ಹೆಚ್ಚಿನ ಒತ್ತುಕೊಟ್ಟು ನಮ್ಮನ್ನು ಸದಾ ಸನ್ನಿಹಿತರಾಗಲು ತಿಳಿಸಿರುತ್ತಾರೆ.

ಸುಮಾ, ನಿನಗೆ ಗೊತ್ತೇ ಇದೆ, ಸೈನಿಕರ ಜೀವನ ಅನಿಶ್ಚಿತ. ಇದು ಗೊತ್ತಿದ್ದೂ ನೀನು ನನ್ನನ್ನು ವಿವಾಹವಾಗಿರುವುದು ನನ್ನ ಭಾಗ್ಯವೇ ಸರಿ. ಸುಮಾ, ನಿನಗೆ ನೆನಪಿದೆಯೇ, ನೀನು ಅನಾಥಾಶ್ರಮದಲ್ಲಿದ್ದಾಗ ಅಲ್ಲಿ ಏರ್ಪಡಿಸಿದ ಆಶು--ಭಾಷಣದಲ್ಲಿ (ವಿಷಯ: ಯಶಸ್ವೀ ಜೀವನದ ಹಿಂದೆ ಸ್ತ್ರೀಯ ಪಾತ್ರ) ನೀನು ಸೊಗಸಾಗಿ ಮಾತನಾಡಿ ಅಂದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ನನ್ನ ಕೈಯಾರೆ ಪಾರಿತೋಷಕ ಪಡೆದದ್ದು. ಅಂದೇ ನಾನು ನಿರ್ಧರಿಸಿದ್ದೆ ಮದುವೆಯಾದರೆ ನಿನ್ನನ್ನೇ ಎಂದು. ಆಶ್ರಮದ ಮೇಲ್ವಿಚಾರರಿಗೆ ಭೇಟ್ಟಿಯಾಗಿ ಅವರ ಅನುಮತಿ ಪಡೆದು ನನ್ನ ತಂದೆಯವರ ಒಪ್ಪಿಗೆ ಪಡೆದು ನಿನ್ನನ್ನು ವಿವಾಹನಾದೆ.

ಸುಮಾ, ನಿಜ ಹೇಳಬೇಕಂದರೆ ನನಗೆ ಹೆಣ್ಣು ಕೊಡಲು ಬಹಳಷ್ಟು ಶ್ರೀಮಂತ ಬಂಧುಗಳು ಮುಂದಾಗಿದ್ದರು. ವರದಕ್ಷಣೆ ಕೊಡಲೂ ಸಿದ್ಧರಿದ್ದರು. ಆದರೆ ನನ್ನ ತಂದೆಯವರು ಕೇಳಿದರು "ಶಶಿ, ನಿನಗೆ ಹಣ ಮುಖ್ಯವೋ ಅಥವಾ ಗುಣ ಮುಖ್ಯವೋ?" ಎಂದು. ಆಗ ನಾನು ಹೇಳಿದೆ "ಅಪ್ಪಾಜಿ, ನನಗೆ ಹುಡುಗಿ ಕುರುಪಿಯಾದರೂ ಪರವಾಗಿಲ್ಲಾ ಗುಣವಂತೆಯಾದರೂ ಸಾಕು" ಎಂದೆ. ಅಪ್ಪಾಜಿ ಸಂತೋಷ ಪಟ್ಟರು. ನನ್ನ ಮನಸ್ಸು ಸದಾ ಬಯಸುತ್ತಿದ್ದೇನಂದರೆ ನನಗೆ ಮಡದಿಯಾಗಿ ಬರುವವಳು ನನ್ನ ತಂದೆಯವರನ್ನು ಚನ್ನಾಗಿ ನೋಡಿಕೊಂಡರೆ ಸಾಕು, ಮತ್ತಿನ್ನೇನು ಅವಳಿಂದ ಬಯಸುವುದಿಲ್ಲ. ನನಗೆ ನನ್ನ ಅಪ್ಪಾಜಿ ಸರ್ವಸ್ವ. ನಾನು ಚಿಕ್ಕವನಿರುವಾಗಲೇ ತಾಯಿಯನ್ನು ಕಳಕೊಂಡ ನನಗೆ ತಾಯಿಯ ಮಮತೆಯನ್ನು ತೋರಿಸಿದರು. ನಾನು ಈ ಸ್ಥಿತಿಯಲ್ಲಿ ಇದ್ದೇನಂದರೆ ನನ್ನ ಪೂಜ್ಯ ತಂದೆಯವರೇ ಕಾರಣ. ಯಾವ ಕಾಲಕ್ಕೂ ಅವರ ಮನಸ್ಸನ್ನು ನೋಯಿಸಬಾರದೆಂಬುದೇ ನನ್ನ ಉತ್ಕಟ ಇಚ್ಛೆ.

ಮದುವೆಯಾಗಿ ಬರುವ ನನ್ನ ಮಡದಿ ಹೇಗೆ ವರ್ತಿಸುತ್ತಾಳೋ ಎಂಬ ದೊಡ್ಡ ಚಿಂತೆಯಾಗಿತ್ತು. ನಾನೆಷ್ಟೋ ಸಂಬಂಧಿಕರ ಬದುಕನ್ನು ಕಂಡಿದ್ದೇನೆ. ಅತ್ತೆ-ಮಾವನವರನ್ನು ತಾತ್ಸಾರದಿಂದ ಕಾಣುವ ಸೊಸೆಯಂದಿರು. ಅತ್ತೆ-ಮಾವನವರನ್ನು ಬೇರೆ ಇಟ್ಟ ಸೊಸೆಯಂದಿರೂ ಇರುತ್ತಾರೆ. ಅತ್ತೆ-ಮಾವ-ಸೊಸೆಯಂದಿರ ಕಲಹ ದಿನನಿತ್ಯ ಸಂಸಾರದಲ್ಲಿ ಕಾಣುತ್ತೇವೆ. ಇದು ನನ್ನ ಬಾಳಿನಲ್ಲಿ ಜರುಗಿದರೆ ಎಂಬ ಭಯ ಕಾಡುತಿತ್ತು. ಸುಮಾ, ನೀನು ಬಂದ ಹೊಸದರಲ್ಲಿ ಅಂಥ ಭಯವಿತ್ತು. ಯಾವಾಗ ನನ್ನ ತಂದೆಯವರು ಹೇಳಿದರು-- "ಶಶಿ, ನೀನು ಅನಾಥಾಶ್ರಮದಲ್ಲಿ ಬೆಳೆದ ಸುಮಾಳನ್ನು ಮದುವೆಯಾದದ್ದು ತುಂಬಾ ಒಳ್ಳೇಯದಾಯಿತು. ಯಾಕಂದರೆ ಆಕೆ ನನ್ನನ್ನು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಾಳೆ, ಅಷ್ಟೇ ಅಲ್ಲ ಲವಲವಿಕೆಯಿಂದ ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾಳೆ. ಸೌಮ್ಯದಿಂದ ಗೌರವಕೊಟ್ಟು ಮಾತಾಡಿಸುತ್ತಾಳೆ. ಅವಳು ನನ್ನ ಸೊಸೆ ಅಲ್ಲ ಕಣೊ, ಆಕೆ ನನ್ನ ಮಗಳು. ನಮ್ಮ ಮನೆಗೆ ಬಂದ ಮಹಾಲಕ್ಷ್ಮಿ" ಎಂದು ಹೇಳಿದಾಗ ನನಗೆ ನಿನ್ನ ಮೇಲೆ ಹೆಮ್ಮೆ ಅನಿಸಿತು. ತಂದೆಯವರೇ ನಿನ್ನ ಬಗ್ಗೆ ಹೇಳಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ. ಸುಮಾ, ವಯಸ್ಸಾದ ನನ್ನ ತಂದೆಯನ್ನು ಗೌರವಿಸಿ ಸೇವೆ ಸಲ್ಲಿಸುತ್ತಿರುವ ನೀನು ನಮಗೆಲ್ಲಾ ತಾಯಿಯ ರೂಪದಲ್ಲಿ ಬಂದ ದೇವತೆಯೆಂದೇ ನಾನು ತಿಳಿಯುತ್ತೇನೆ.

ನಾನು ಚಿಕ್ಕವನಿರುವಾಗಲೇ ತಾಯಿಯನ್ನು ಕಳೆದು ಕೊಂಡೆ. ನಾನು ನನ್ನ ತಂದೆಯವರ ಪೋಷಣೆಯಲ್ಲಿಯೇ ಬೆಳೆದೆ. ಅವರು ಬೇರೆ ಮದುವೆಯಾಗಬಹುದಿತ್ತು, ಆದರೆ ಹಾಗೆ ಮಾಡದೇ ನನ್ನ ಲಾಲನೆ-ಪೋಷಣೆ, ವಿದ್ಯಾಭ್ಯಾಸ ಎಲ್ಲವನ್ನೂ ಅವರೇ ನೋಡಿಕೊಂಡು ಮುದ್ದಾಗಿ ಬೆಳೆಸಿದರು. ದೇಶ ಸೇವೆ ನನ್ನ ಮಗ ಮಾಡಬೇಕೆಂದು ಬಯಸಿದರು. ಅವರ ಹಂಬಲದಂತೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿವಹಿಸಿ ಹೆಚ್ಚಿನ ಅಂಕಗಳನ್ನು ಪಡೆದು ಪದವಿಧರನಾದೆ. ದೇವರ ದಯೆ ಗುರು-ಹಿರಿಯರ ಕೃಪೆ ತಂದೆ-ತಾಯಿಯವರ ಆಶೀರ್ವಾದದಿಂದ ಮಿಲಿಟರಿಯಲ್ಲಿ ಸೇರಿದೆ. ನನ್ನದೊಂದು ಆಶೆಯಿತ್ತು ಏನಂದರೆ-ನಾನು ಮದುವೆಯಾಗುವ ಹುಡುಗಿ ನನ್ನ ತಂದೆಯನ್ನು ತನ್ನ ತಂದೆಯೆಂದು ಭಾವಿಸಿ ಅವರ ಸೇವೆಗೈಯುವವಳಾಗಬೇಕೆಂದು. ಭಗವಂತ ಆ ಆಸೆಯನ್ನು ಪೂರೈಸಿದ. ನಿನ್ನನ್ನು ಪಡೆದ ನಾನೇ ಭಾಗ್ಯಶಾಲಿ. ಜೀವನದಲ್ಲಿ ಹೇಗೆ ಎಲ್ಲರೂ ಕೂಡಿ ಬಾಳಬೇಕು ಎಲ್ಲರೊಡನೆ ಸ್ನೇಹ-ಸೌಹಾರ್ದತೆಯಿಂದ ಬದುಕಬೇಕು ಎಂದು ನಿನ್ನ ನಡೆ-ನುಡಿಯಿಂದ ಅರಿವಾಯಿತು. ಬಂಧು-ಬಾಂಧವರ ಜೊತೆಗೆ ನೀನು ವ್ಯವಹರಿಸುವ ರೀತಿ ಮೆಚ್ಚಿಗೆಯಾಯಿತು. ಮನೆಗೆ ಯಾರೇ ಬರಲಿ ಅವರನ್ನು ಸತ್ಕರಿಸುವ ಪರಿ ಚನ್ನಾಗಿದೆ. ಇದು ನನ್ನ ಹೊಗಳಿಕೆಯ ಮಾತಲ್ಲ. ನನ್ನ ಅಂತರಂಗದ ಮಾತು. ನನ್ನ ತಂದೆಯವರನ್ನು ನೀನು ಉಪಚರಿಸುತ್ತಿರುವ ರೀತಿ, ಮಗನಾಗಿ ನಾನು ತಂದೆಯವರ ಸೇವೆ ಮಾಡುತ್ತೇನೋ ಇಲ್ಲವೂ ಎಂದು ಅನಿಸುತ್ತಿದೆ. ಅವರಿಗೆ ಸರಿಯಾದ ಸಮಯದಲ್ಲಿ ಊಟ-ತಿಂಡಿ,ಸ್ವಛವಾದ ಬಟ್ಟೆ, ಕಾಲಕಾಲಕ್ಕೆ ಔಷಧೋಪಚಾರ ಮಾಡಿ ಅವರ ನೆಚ್ಚಿನ ಸೊಸೆಕ್ಕಿಂತ ಮಗಳಾಗಿದ್ದಿಯಾ. ನಿನ್ನಂಥ ಮಡದಿ ಪಡೆದ ನಾನು ಪುಣ್ಯವಂತ. ಸುಮಾ, ನೀನು ಈಗ ಗರ್ಭವತಿ. ಆರೋಗ್ಯದ ಬಗ್ಗೆ ಗಮನವಿರಲಿ. ನಮಗೆ ಹುಟ್ಟುವ ಮಗು ಗಂಡಾದರೆ ಭರತ, ಹೆಣ್ಣಾದರೆ ಭಾರತಿ ಎಂದು ಹೆಸರಿಡುವಾ. ದೇಶದ ರಕ್ಷಣೆಯ ಕಾರ್ಯಕ್ಕೆ (ಅಂದರೆ ಮಿಲಿಟರಿಗೆ) ಸೇರಿಸುವಾ. ಸುಮಾ, ಈ ಸುದೀರ್ಘವಾದ ಪತ್ರ ಬರೆಯಲು ಕಾರಣ-ಈಗತಾನೇ ನಮ್ಮ ಹೆಡ್-ಆಫಿಸಿನಿಂದ ಆರ್ಡರ್ ಬಂದಿದೆ ಏನಂದರೆ, ಬಟಾಲಿಯನ್ ಮುಖ್ಯಸ್ಥನಾಗಿ ನನ್ನನ್ನು ದೇಶದ ಗಡಿ ರಕ್ಷಣೆಗೆಂದು ನೇಮಿಸಿರುತ್ತಾರೆ. ನಿನಗೆ ಗೊತ್ತೇ ಇದೆಯಲ್ಲ ಆ ಕಾರ್ಯದಲ್ಲಿ ತೊಡಗುವುದು ತುಂಬಾ ರಿಸ್ಕ್ ಯೆಂದು. ದೇಶದ ರಕ್ಷಣೆಯೇ ನಮ್ಮ ಗುರಿ. ವೈರಿಗಳು ನಮ್ಮ ದೇಶದ ಒಳಗೆ ನುಸಳಿಸದಂತೆ ನೋಡುವ ಮಹತ್ತರ ಕಾರ್ಯ ನಮ್ಮದಾಗಿದೆ. ಅದಕ್ಕೆ ನಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೊರಾಡಬೇಕಾಗುತ್ತದೆ. ಆ ಸಮಯದಲ್ಲಿ ನಾನು ಹುತಾತ್ಮನಾದರೂ ನೀನು ದುಃಖಿಸಬೇಡ. ಧೈರ್ಯವಾಗಿರು. ದೇಶಕ್ಕಾಗಿ ನನ್ನ ಪತಿ ವೀರಸ್ವರ್ಗ ಪಡೆದನೆಂದು ಹೆಮ್ಮೆಯಿಂದ ಇರು. ನನ್ನ ಪೂಜ್ಯ ತಂದೆಯವರ ಕಾಳಜಿವಹಿಸು. ನಿನ್ನ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಇದು ನನ್ನ ಹಿತವಚನ.

ಇತಿ ನಿನ್ನ ಪ್ರೀತಿಯ,

ಶಶಿ.

ಈ ಪತ್ರ ಓದಿ ಸುಮಾ, ತನ್ನ ಪತಿ ತನ್ನ ಮೇಲಿಟ್ಟ ಪ್ರೀತಿ ಅಭಿಮಾನ ಕಂಡು ಹೆಮ್ಮೆ ಅನಿಸಿತು. ಅನಾಥಳಾದ ತನ್ನನ್ನು ಮೆಚ್ಚಿ ಮದುವೆಯಾದುದಕ್ಕೆ ತನ್ನ ಜೀವನ ಸಾರ್ಥಕವಾಯಿತೆಂಬ ತೃಪ್ತಿಪಟ್ಟಳು. ಮಾವನವರು ತನ್ನನ್ನು ಸೊಸೆಯೆಂದು ತಿಳಿಯದೇ ತನ್ನ ಮಗಳೆಂದು ವಾತ್ಸಲ್ಯದಿಂದ ನೋಡುತ್ತಿರುವುದು ತನ್ನ ಜನ್ಮ ಜನ್ಮಾಂತರದ ಪುಣ್ಯವೆಂದು ಬಗೆದು ಧನ್ಯತಾ ಭಾವ ಹೊಂದಿದಳು. ದೇವರೇ, ಪತಿಯನ್ನು ಸದಾ ರಕ್ಷಿಸು ಅವರ ಕಾರ್ಯದಲ್ಲಿ ಸದಾ ಜಯ ಸಿಗಲಿ ಎಂದು ಪ್ರಾರ್ಥಿಸುತ್ತಾ ದೇವರ ಮುಂದೆ ನಂದಾದೀಪ ಹಚ್ಚಿದಳು ಸುಮಾ.


---ಜೆ. ಎಸ್. ಗಾಂಜೇಕರ  ಕುಮಟಾ  (ಉ. ಕನ್ನಡ )

ಕರ್ನಾಟಕ 


Comments