ಲಕ್ಷಾಂತರ ಜನರಿಗೆ ಆಸ್ತಿ ಮಾಡಿಟ್ಟ ತಾಯಿ
ಲೇಖನ - ಶ್ರೀಮತಿ ಅನು ಶಿವರಾಂ, Sydney
ಪರಿಸರ ಮತ್ತು ಅರಣ್ಯೀಕರಣವು ಫ್ಯಾಶನ್ಬಲ್ ಪದಗಳಾಗುವ ಬಹಳ ಹಿಂದೆಯೇ, ಗ್ರಾಮೀಣ ಕರ್ನಾಟಕದ ಒಬ್ಬ ಅತಿ ಸಾಮಾನ್ಯ ಮಹಿಳೆ ಸದ್ದಿಲ್ಲದೆ ಒಂದು ಜೀವಂತ ಪರಿಸರ ಪರಂಪರೆಯನ್ನು ನಿರ್ಮಿಸಿದರು. ಆಕೆಗೆ ಯಾವುದೇ ಶಿಕ್ಷಣವಾಗಲಿ ಅಥವಾ ಸಾರ್ವಜನಿಕ ಸಹಾಯವಾಗಲಿ ಇರಲಿಲ್ಲ, ಹಣವನ್ನಂತೂ ಆಕೆ ಹೊಂದುವುದಿರಲಿ ನೋಡಿರಲೂ ಇಲ್ಲ ಆದರೂ ಆಕೆ ಅಸಂಖ್ಯಾತ ಪ್ರಯಾಣಿಕರು, ಪ್ರಾಣಿಗಳು ಮತ್ತು ಇಡೀ ಪರಿಸರ ವ್ಯವಸ್ಥೆಗಳಿಗೆ ಆಶ್ರಯ ನೀಡುವ 385 ಆಲದ ಮರಗಳನ್ನು ನೆಟ್ಟರು ಮತ್ತು ಪೋಷಿಸಿದರು
ಇದು ಸಾಲುಮರದ ತಿಮ್ಮಕ್ಕ ಎಂದೇ ಪ್ರಸಿದ್ಧರಾಗಿರುವ ಎಂಬ ಸಾಧಾರಣ ಮಹಿಳೆಯ ಅಸಾಧಾರಣ ಕಥೆ. ದೃಢ ಸಂಕಲ್ಪ ಶಿಸ್ತು ಮತ್ತು ಮುಂದಾಲೋಚನೆಯಿಂದ ಮನಸಿಟ್ಟು ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದಕ್ಕೆ ಆಕೆಯ ಜೀವನವೇ ಒಂದು ನಿದರ್ಶನ.
ತಿಮ್ಮಕ್ಕ, ತುಮಕೂರು ಜಿಲ್ಲೆಯ ಕುಗ್ರಾಮವೊಂದರಲ್ಲಿ ಬಡ ರೈತ ದಂಪತಿಗಳ ಆರು ಮಕ್ಕಳಲ್ಲಿ ಒಬ್ಬರಾಗಿ ಬೆಳೆದರು. ಬಾಲ್ಯದಲ್ಲಿ ಕೃಷಿ ಕೆಲಸ, ಕಲ್ಲು ಕುಟ್ಟುವ ಕೆಲಸ ಇತ್ಯಾದಿ ಕಠಿಣ ಪರಿಶ್ರಮದ ಬದುಕು. ಹದಿನಾರನೇ ವಯಸ್ಸಿನಲ್ಲಿ ಹತ್ತಿರದ ರಾಮನಗರ ಜಿಲ್ಲೆಯ (ಹಿಂದಿ ಚಿತ್ರ ಶೋಲೆಯನ್ನು ಈ ಪ್ರದೇಶದಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲಾಗಿದೆ) ಬಡ ರೈತ ಚಿಕ್ಕಯ್ಯನಿಗೆ ಕೊಟ್ಟು ಮದುವೆ ಮಾಡಿದರು.
ಮದುವೆಯು ಒಳ್ಳೆಯ ಒಡನಾಟವನ್ನೇನೋ ತಂದಿತು . ಆದರೆ ಅವರ ಬಡ ಜೀವನದಲ್ಲಿ ಸ್ವಲ್ಪವೂ ಬದಲಾವಣೆ ಇರಲಿಲ್ಲ. ಮದುವೆಯಾಗಿ ಹಲವಾರು ವರುಷಗಳು ಉರುಳಿದರೂ ಮಕ್ಕಳು ಆಗದ ನೋವು ಅವರನ್ನು ಕಾಡಿತು. ಅವರ ಗ್ರಾಮೀಣ ಸಮುದಾಯದಲ್ಲಿ ಮಕ್ಕಳಿಲ್ಲದ ದಂಪತಿಗಳಾಗಿರುವ ಕಳಂಕವು ಅವರ ಮನಸಿನಲ್ಲಿ ಹೆಚ್ಚಿನ ನೋವನ್ನು ತಂದಿತು.
ಆ ಶೂನ್ಯವನ್ನು ತುಂಬಲು ಮತ್ತು ತಮಗಾಗಿ ಒಂದು ಉದ್ದೇಶವನ್ನು ಕಂಡುಕೊಳ್ಳಲು, ತಿಮ್ಮಕ್ಕ ಮತ್ತು ಚಿಕ್ಕಯ್ಯ ಬಂಜರು ಮಣ್ಣಿನ ರಸ್ತೆಯಲ್ಲಿ ಆಲದ ಸಸಿಗಳನ್ನು ನೆಡಲು ಪ್ರಾರಂಭಿಸಿದರು. ಆಲದ ಮರದ ಔದಾರ್ಯ ಎಲ್ಲರೂ ಬಲ್ಲರು . ಈ ಬಡ ದಂಪತಿಗಳು ವಿಪುಲವಾಗಿ ನೆರಳು, ಆಶ್ರಯ ಮತ್ತು ಆಹಾರವನ್ನು ಒದಗಿಸಬಲ್ಲ ಉದಾರ ಆಲದ ಮರವನ್ನೇ ಆರಿಸಿಕೊಂಡು ಎಳೆ ಸಸಿಗಳನ್ನು ತಮ್ಮ ಮಕ್ಕಳೋ ಎಂಬಂತೆ ಪ್ರೀತಿಯಿಂದ ಬೆಳೆಸಿದರು.
ಒಟ್ಟಾಗಿ, ಅವರು 385 ಆಲದ ಮರಗಳನ್ನು ನೆಟ್ಟರು. ಪ್ರತಿದಿನ, ದಂಪತಿಗಳು ಸುಮಾರು ನಾಲ್ಕು ಕಿಲೋಮೀಟರ್ ಗಳಷ್ಟು ದೂರ ಬಿಂದಿಗೆಯಲ್ಲಿ ನೀರನ್ನು ಹೊತ್ತು ಗಿಡಗಳಿಗೆ ಎರೆಯುತ್ತಿದರು , ಎಳೆಯ ಸಸಿಗಳನ್ನು ಕಠಿಣ ಬೇಸಿಗೆ ಮತ್ತು ಅನಿರೀಕ್ಷಿತ ಮಳೆಯಿಂದ ರಕ್ಷಿಸಿ ಕಾಪಾಡಿದರು.
೧೯೯೧ ರಲ್ಲಿ ಚಿಕ್ಕಯ್ಯ ನಿಧನರಾದಾಗ, ತಿಮ್ಮಕ್ಕ ಅಂಜಲಿಲ್ಲ. ಬದಲಾಗಿ ಹೊಸ ಧೃಡತೆಯಿಂದ ಏಕಾಂಗಿಯಾಗಿಯಾಗಿ ಕೆಲಸ ಮಾಡುವುದನ್ನು ಮುಂದುವರಿಸಿದರು. ಮುಂದಿನ ವರ್ಷಗಳಲ್ಲಿ, ಅವರು ಜಿಲ್ಲೆಯಾದ್ಯಂತ ಸುಮಾರು 8,000 ಮರಗಳನ್ನು ನೆಟ್ಟರು. ಅವರ ದಣಿವರಿಯದ ಕೆಲಸವು ಅವರಿಗೆ "ವೃಕ್ಷ ಮಾತೆ" - ಮರಗಳ ತಾಯಿ ಎಂಬ ಪ್ರೀತಿಯ ಬಿರುದನ್ನು ತಂದುಕೊಟ್ಟಿತು.
ಪಕ್ಷಿಗಳು, ಅಳಿಲುಗಳು, ಜೇನುಗೂಡುಗಳು, ಕೋತಿಗಳು ಮತ್ತು ಅವಳ ಮರಗಳಲ್ಲಿ ಆಶ್ರಯ ಪಡೆದ ಅಸಂಖ್ಯಾತ ಸಣ್ಣ ಪ್ರಾಣಿಗಳು ತಿಮ್ಮಕ್ಕಳ ನಿಜವಾದ ಪ್ರತಿಫಲವಾದವು. ಅವಳು ಬೆಳೆಸಿದ ಮರಗಳ ನೆರಳಿನಲ್ಲಿ ಜೀವನದ ಸಂಭ್ರಮವನ್ನು ನೋಡುವುದು ಅವಳಿಗೆ ಅಪರಿಮಿತ ಸಂತೋಷವನ್ನು ನೀಡಿತು. ಪ್ರತಿಯಾಗಿ ಅವಳು ತನಗಾಗಿ ಏನನ್ನೂ ಕೇಳಲಿಲ್ಲ.
ತಿಮ್ಮಕ್ಕಳ ನಿಸ್ವಾರ್ಥ ಸೇವೆಯ ಬೆಲೆ ಜನರಿಗೆ, ಸರಕಾರಕ್ಕೆ ತಿಳಿದ ಮೇಲೆ ಪ್ರಶಸ್ತಿಗಳು ರಾಜ್ಯ ಮತ್ತು ದೇಶದಾದ್ಯಂತದಿಂದ ಹುಡುಕಿಕೊಂಡು ಬಂದವು, ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಸಹ ಆಕೆಗೆ ದೊರಕಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಈ ಅಶಿಕ್ಷಿತ ಗ್ರಾಮಸ್ಥೆ ತಿಮ್ಮಕ್ಕ ಭಾರತದ ರಾಷ್ಟ್ರಪತಿಯವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುವುದನ್ನು ರಾಷ್ಟ್ರವು ಮುದದಿಂದ ನೋಡಿತು!
ಇಂದು, ಸಾವಿರಾರು ಜನರು ಆಲದ ಮರಗಳ ತಂಪಾದ ನೆರಳಿನಲ್ಲಿ ವಿಶ್ರಮಿಸುತ್ತಾರೆ, ಲಕ್ಷಾಂತರ ಜನರು ಅವರ ಜೀವನದಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ಪ್ರಕೃತಿಯನ್ನು ಪೋಷಿಸುವ ಸರಳ, ದೃಢವಾದ ಸಂಕಲ್ಪಗಳನ್ನು ಮಾಡುತ್ತಿದ್ದಾರೆ. ಅಕ್ಷರ ಬಾರದ ತಿಮ್ಮಕ್ಕನ ಬಗ್ಗೆ ವಿಶ್ವ ವಿದ್ಯಾಲಯಗಳಲ್ಲಿ ಇಂದು ಸಂಕೀರ್ಣಗಳು ನಡೆಯುತ್ತಿವೆ!
ಶತಾಯುಷಿ ತಿಮ್ಮಕ್ಕ 14 ನವೆಂಬರ್ 2025 ರಂದು ನಿಧನರಾದರು, ಯಾವುದೇ ಕೋಟ್ಯಾಧೀಶರಿಗೂ ಸಾಧ್ಯವಾಗದ
ಸಂಪತ್ತನ್ನು ನಮ್ಮ ನಾಡಿನ ಜನರಿಗೆ ಬಿಟ್ಟು ಹೋದರು. ಹಸಿರು, ನೆರಳು, ಉಸಿರನ್ನು ಕೊಡುವ ಮರಗಳಿಗೆ ಬೆಲೆ ಕಟ್ಟಲಾದೀತೇ ? ತಿಮ್ಮಕ್ಕನಂತಹ ನಿಸ್ವಾರ್ಥಜೀವಿಗಳು ಮತ್ತೆ ಹುಟ್ಟಿ ಬಂದಾರೆಯೇ ??

Comments
Post a Comment