ಇಂಗ್ಲೆಂಡಿನ ಪುರಾತನ ಪಬ್-ಗಳು
ಲೇಖನ - ರಾಮಮೂರ್ತಿ ಬೆಸಿಂಗ್ ಸ್ಟೋಕ್ , UK
ಇಂಗ್ಲೆಂಡಿನ ಪಬ್-ಗಳು ಪ್ರಪoಚದಾದ್ಯಂತ ಪ್ರಸಿದ್ದ. ಪಬ್-ಗಳು ಕೇವಲ ಬಿಯರ್ ಅಥವಾ ವೈನ್ ಕುಡಿಯುವ ಸ್ಥಳಗಳಲ್ಲ, ಇವು ಸಮುದಾಯವು ಸಾಮಾಜಿಕವಾಗಿ ಭೇಟಿಯಾಗುವ ಸ್ಥಳಗಳು. ಉದಾಹರಣೆಗೆ, ಅನೇಕ ಧರ್ಮಾರ್ಥಿಕ (Charity ) ಸಂಸ್ಥೆಗಳು ಇಲ್ಲಿ ಹಣ ಸಂಗ್ರಹಿಸುವದಾಗಲಿ, Quiz Team ಆಗಲಿ ಪಬ್-ಗಳಲ್ಲಿ ಸೇರುತ್ತಾರೆ. ಈ ಪಬ್-ಗಳ ಇತಿಹಾಸವನ್ನು ನೋಡೋಣ. ಇಂಗ್ಲೆಂಡಿನಲ್ಲಿ ಪಬ್-ಗಳಿಗೆ ಸುಮಾರು ಎರಡು ಸಾವಿರ ವರ್ಷಗಳ ಆಕರ್ಷಕ ಮತ್ತು ಆಸಕ್ತಿದಾಯಕವಾದ ಇತಿಹಾಸವಿದೆ.
ಇದರ ಮೂಲ ರೋಮನ್ ಕಾಲದಿಂದ ಬಂದಿದ್ದು. ರೋಮನ್ನರು ಬಂದು ಇಂಗ್ಲೆಂಡ್ ದೇಶವನ್ನು ಆಕ್ರಮಿಸಿಕೊಂಡಾಗ ಅವರು ತಯಾರಿಸುತ್ತಿದ್ದ ವೈನ್ (wine ), ಅವರ ಜನಕ್ಕೆ ಮತ್ತು ಸೈನ್ಯದವರಿಗೆ ಮಾರಾಟಕ್ಕಿತ್ತು. ಇಂದಿನ ಪಬ್ (Public House), ಆಗ ಅವರ ಭಾಷೆಯಲ್ಲಿ ಟೆಬರ್ನೆ (Tebernae), ಇದು ಕಡೆಯಲ್ಲಿ ಟ್ಯಾವರ್ನ್ಸ್ (Taverns) ಆಯಿತು. ಇವು ಪ್ರಯಾಣಿಕರ ಅನುಕೂಲಕ್ಕೆ ಪ್ರಾರಂಭಿಸಿದ ವ್ಯಾಪಾರ ಸಂಸ್ಥೆಗಳು. ಸ್ಥಳೀಯ ಜನರಿಗೆ ವೈನ್ ಮಾಡುವ ವಿಧಾನ ಅಥವಾ ದ್ರಾಕ್ಷಿ ಬೆಳೆಯುವ ತಿಳುವಳಿಕೆ ಇರಲಿಲ್ಲ. ಇಲ್ಲಿ ಏಲ್ (Ale), ಬಾರ್ಲಿ ಇಂದ ಭಟ್ಟಿ ಇಳಿಸಿ ತಯಾರಿಸಿದ ಮಾದಕದ ಅರಿವಿತ್ತು. ಇವುಗಳನ್ನು ನಡೆಸಿಕೊಂಡು ಬಂದಿದ್ದವರು ಮಹಿಳೆಯರು, ಮನೆಯಲ್ಲಿ ಭಟ್ಟಿ ಇಳಿಸಿ ಮದ್ಯದ ಮಾರಾಟ ಮಾಡುತಿದ್ದರು. ಇವು ಹಳ್ಳಿಗಳಲ್ಲಿ ಅನೌಪಚಾರಿಕ ಮತ್ತು ಸಮುದಾಯ ಆಧಾರಿತವಾಗಿದ್ದರಿಂದ ಜನಗಳ ಹೊಂದಾಣಿಕೆ ಮತ್ತು ಪರಸ್ಪರ ಪರಿಚಯಕ್ಕೆ ಅನುಕೂಲವಾಗುತ್ತಿತ್ತು. ಕ್ರಮೇಣ ಈ ಟೆಬರ್ನೆಗಳಲ್ಲಿ ವೈನ್ ಮಾರಾಟ ಕಡಿಮೆ ಆಗಿ, ಸ್ಥಳೀಯ ಏಲ್ ಹೆಚ್ಚಾಗಿ ಮಾರಾಟವಾಗುತಿತ್ತು. ಈ ಮದ್ಯದ ಅಂಗಡಿಗಳೂ ಮಿತಿ ಇಲ್ಲದೆ ಬೆಳೆಯುತ್ತಿದ್ದವು. ಈ ಕಾರಣಗಳಿಂದ, ಹತ್ತನೇ ಶತಮಾನದಲ್ಲಿ ಆಳಿದ ಎಡ್ಗರ್ ದೊರೆ ಇವುಗಳ ಸಂಖ್ಯೆಯನ್ನು ಮಿತಿಗೊಳಿಸಿದ. ಇವನ ಕಾಲದಲ್ಲೇ ಪೆಗ್ (Peg) ಅನ್ನುವ ಪದ ಮದ್ಯದ ಅಳತೆಗೆ ಜಾರಿಗೆ ಬಂದಿದ್ದು. ಮದ್ಯದ ಮಾರಾಟಕ್ಕೆ ಸಹ ಅನುಮತಿಬೇಕಾಗಿತ್ತು. ಆದ್ದರಿಂದ ಮನೆಯಲ್ಲಿ ತಯಾರಿಸಿದ ಮದ್ಯದ ಮಾರಾಟಕ್ಕೆ ಅನುಮತಿ ಸಿಗುತ್ತಿರಲಿಲ್ಲ.
ಟ್ಯಾವರ್ನ್-ಗಳು ಹೆಚ್ಚಾಗಿ ಮುಖ್ಯರಸ್ತೆ ಮತ್ತು ಹೆದ್ದಾರಿಗಳಲ್ಲಿ ಇದ್ದು ಪ್ರಯಾಣಿಕರಿಗೆ ಪಾನೀಯ ಮತ್ತು ಆಹಾರ ಸಿಗುತ್ತಿತ್ತು. ನಂತರ ಊರಿಂದ ಊರಿಗೆ ಕುದರೆಗಾಡಿಗಳ ಸಂಚಾರ ಶುರುವಾದಾಗ, ರಾತ್ರಿ ತಂಗುವುದಕ್ಕೆ ಇನ್ (Inn), ಅಂದರೆ ತಂಗುವ ಜಾಗ ಸಹ ಪ್ರಾರಂಭವಾಯಿತು. ಇಲ್ಲಿ ಕುದರೆಗಳ ವಿಶ್ರಾಂತಿಗೆ ಮತ್ತು ಆಹಾರಕ್ಕೆ ಸಾಕಷ್ಟು ವ್ಯೆವಸ್ಥೆಗಳಿದ್ದವು.
ಲಂಡನ್-ನಿಂದ ವಿಂಚೆಸ್ಟರ್-ಗೆ (Winchester) ಹೋಗುವ ಎ೩೦ ಎನ್ನುವ ರಸ್ತೆ ಸುಮಾರು ೬೦ ಮೈಲಿ ಉದ್ದ. ಇಲ್ಲಿ ಈಗಲೂ ಈ ದಾರಿಯಲ್ಲಿ ಅನೇಕ ಪುರಾತನ ಪಬ್ ಅಥವಾ ಇನ್-ಗಳನ್ನೂ ನೋಡಬಹುದು. ಹಳೆಯ ಪಬ್-ಗಳಲ್ಲಿ ಸಲೂನ್ ಬಾರ್ (Saloon Bar) ಮತ್ತು ಪಬ್ಲಿಕ್ ಬಾರ್ (Public Bar) ಎನ್ನುವ ಫಲಕಗಳು (sign board) ಇರುತ್ತವೆ. ಇದರ ಹಿನ್ನಲೆ, ಈ ದೇಶದಲ್ಲಿದ್ದ ವರ್ಗವ್ಯತ್ಯಾಸ (Class distinction). ಕುದುರೆಗಾಡಿ ಪ್ರಯಾಣದಲ್ಲಿ ಎರಡು ತರ ಪ್ರಯಾಣಿಕರು, ಗಾಡಿ ಒಳಗೆ ಕೂರುವರು ಮತ್ತು ಗಾಡಿ ಹೊರಗೆ (ಬಹಳ ಕಡಿಮೆ ದರ ಕೊಟ್ಟು) ಕೂರುವರು. ಒಳಗಿದ್ದವರು ಶ್ರೀಮಂತರು, ಇವರಿಗೆ ಮರ್ಯಾದೆಯಿಂದ ಸಲೂನ್ ಬಾರ್-ನಲ್ಲಿ ಉಪಚಾರ. ಹೊರಗೆ ಕೂತವರಿಗೆ ಕೊಟ್ಟಿಗೆ ಹತ್ತಿರ ಜಾಗ, ಇಲ್ಲಿಇವರು ಪಬ್ಲಿಕ್ ಬಾರ್-ನಲ್ಲಿ ಕುಡಿಯುವುದು ಮತ್ತು ಊಟ ಮಾಡುವುದು.
ಸುಮಾರು ಹದಿನಾರನೇ ಶತಮಾನದಲ್ಲಿ, ಟ್ಯಾವರ್ನ್ಸ್ ಮತ್ತು ಇನ್-ಗಳು ಒಂದಾಗಿ ಪಬ್ಲಿಕ್ ಹೌಸ್ (Public House) ಅಥವಾ ಪಬ್ (Pub) ಗಳಾದವು. ೧೫೫೨ರಲ್ಲಿ ಬಂದ ಕಾಯಿದೆಯಿಂದ ಇದನ್ನು ನಡೆಸುವುದಕ್ಕೆ ಲೈಸನ್ಸ್ (License) ಬೇಕಾಗಿತ್ತು. ೧೬೦೦ ನಂತರ ಈ ದೇಶದಲ್ಲಿ ಹೊರದೇಶದಿಂದ ತರಿಸಿದ ಕಾಫಿ ಮತ್ತು ಟೀ ಕುಡಿಯುವುದು ಪ್ರಾರಂಭವಾಯಿತು. ಆದರೆ ಕೆಲವು ಪಬ್-ಗಳಲ್ಲಿ ಮಾತ್ರ ಇದು ಮಾರಾಟಕ್ಕಿತ್ತು; ಕಾರಣ, ಅತಿ ಹೆಚ್ಚಿನ ಬೆಲೆ.
ಹದಿನೆಂಟನೇ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸ್ ದೇಶದಿಂದ ಬ್ರಾಂಡಿ (Brandy) ಮತ್ತು ಹಾಲೆಂಡ್-ನಿಂದ ಜಿನ್ (Gin) ಮಾದಕಗಳು ಬಂದು ಈ ದೇಶದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾದವು. ಇದನ್ನು ಪ್ರಸಿದ್ಧ ಚಿತ್ರಗಾರ ಹೊಗಾರ್ತ್ (Hogarth) ಜಿನ್ ಲೇನ್ (Gin lane) ಅನ್ನುವುದರಲ್ಲಿ ಚಿತ್ರೀಕರಣ ಮಾಡಿದ್ದಾನೆ. ಅನೇಕ ಬಡ ಮತ್ತು ಶ್ರೀಮಂತರ ಜೀವನ ಈ ಕುಡಿತದಲ್ಲಿ ಹಾಳಾಗಿತ್ತು. ನಂತರ ಬಂದ ಜಿನ್ ಆಕ್ಟ್ (Gin Act) ಕಾಯಿದೆಯಿಂದ (೧೭೩೬ ಮತ್ತು ೧೭೫೧ ) ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿತು.
ಹೆದ್ದಾರಿಯಲ್ಲಿ ಇರುವ ಇನ್-ಗಳು ಸುಮಾರು ೧೮೪೦-೫೦ರವರೆಗೆ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈ ಸಮಯದಲ್ಲಿ ರೈಲ್ವೇ ಸಂಪರ್ಕ ಉಂಟಾದ ಮೇಲೆ ಕುದುರೆಗಾಡಿಯಲ್ಲಿ ಸಂಚರಿಸುವುದು ಕ್ರಮೇಣ ಕಡಿಮೆಯಾಗಿ ಇವುಗಳ ವ್ಯಾಪಾರ ಕುಗ್ಗಿತು.
ಪ್ರತಿಯೊಂದು ಪಬ್-ಗೆ ಒಂದು ಹೆಸರು ಇರತ್ತದೆ. ಹದಿನಾಲ್ಕನೇ ಶತಮಾದಲ್ಲಿ ಆಳಿದ ಎರಡೆನೆಯ ರಿಚರ್ಡ್ ಹೊರಡಿಸಿದ ಆಜ್ಞೆಯಲ್ಲಿ ಪ್ರತಿಯೊಂದು ಇನ್-ಗೂ ಹೆಸರು ಇಡಬೇಕಾಗಿತ್ತು ಮತ್ತು ಈ ಹೆಸರು ಕಾಣಿಸುವಂತಲೂ ಇರಬೇಕಾಗಿತ್ತು. ಬಹುಷಃ, ರೆಡ್ ಲಯನ್ (Red Lion) ಹೆಸರಿನ ಪಬ್ ತುಂಬಾ ಸಾಮಾನ್ಯ. ಆದರೆ ವಿಚಿತ್ರ ಹೆಸರಿನ ಪಬ್-ಗಳನ್ನೂ ನೋಡಬಹುದು. ಉದಾಹರಣೆಗೆ, ದ ಬಕೆಟ್ ಆಫ್ ಬ್ಲಡ್ (The Bucket of Blood) ಅಥವಾ ದ ಕ್ಯಾಮಲ್ ಆಂಡ್ ದ ಆರ್ಟಿಚೋಕ್ ( The camel and The Artichoke). ಇವು ಅರ್ಥಹೀನವಾದ ಹೆಸರುಗಳು ಅನ್ನಿಸಿದರೂ, ನೂರಾರು ವರ್ಷದಗಳಿಂದ ಈ ಹೆಸರುಗಳು ಉಳಿದಿವೆ.
ಪುರಾತನ ಪಬ್-ಗಳ ಬಗ್ಗೆ ಎರಡು ಮಾತು, ಇದರ ಬಗ್ಗೆ ಬಹಳ ಚರ್ಚೆ ನಡೆದಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ (Guinness Book of Records) ಪ್ರಕಾರ, ಇದು ಕ್ರಿ.ಶ ೯೪೭ ನ ಸ್ಟವ್-ಆನ್-ವೋಲ್ಡ್ (Stow -on -Wold)ನ ದ ಪಾರ್ಚ್ ಹೌಸ್ (The Porch House). ಎರಡನೆಯದು ಕ್ರಿ.ಶ ೧೧೮೯ರ ನಾಟಿಂಗ್-ಹ್ಯಾಮ್-ನಲ್ಲಿರುವ ಯೆ ಓಲ್ಡ್ ಟ್ರಿಪ್ ಟು ಜೆರುಸಲೆಮ್ (Ye Olde Trip To Jerusalem). ಪವಿತ್ರಸ್ಥಳವಾದ ಜೆರೂಸಲಂಗೆ ಹೋಗುವ ಪ್ರಯಾಣಿಕರು ಇಲ್ಲಿ ಕೆಲವು ರಾತ್ರಿ ತಂಗುತ್ತಿದ್ದರಂತೆ. ಇದೆ ರೀತಿ ನೂರಾರು ವರ್ಷದಿಂದ ನಡೆದುಕೊಂಡು ಬಂದ ಪಬ್-ಗಳು ಅನೇಕ.
ಲಂಡನ್-ನಲ್ಲಿ ಹಲವಾರು ಪುರಾತನ ಪಬ್-ಗಳಿವೆ. ಈಗ ಮೇ-ಫೇರ್ (Mayfair) ಲಂಡನ್ನಲ್ಲಿ ಅತಿ ಹೆಚ್ಚಿನ ದುಬಾರಿ ಪ್ರದೇಶ. ಆದರೆ ೧೪೨೩ರಲ್ಲಿ ಇಲ್ಲಿ ವಾಸವಾಗಿದ್ದವರು ಕಾರ್ಮಿಕ ವರ್ಗದವರು ಮಾತ್ರ. ಇವರು ಸೇರುತ್ತಿದ್ದು ದ ಗಿನಿ (The Guinea) ಅನ್ನುವ ಏಲ್ ಹೌಸ್-ನಲ್ಲಿ.
ಕ್ರಿ.ಶ ೧೫೮೫ರ ದ ಸ್ಪೀನಿಯಾರ್ಡ್ಸ್ ಇನ್ (The Spaniards Inn) ಕತೆ ಆಸಕ್ತಿದಾಯಕದದ್ದು. ದಂತಕಥೆಯ ಪ್ರಕಾರ, ಒಮ್ಮೆ ಇದರ ಮಾಲೀಕ
ಪ್ರಸಿದ್ಧ ದರೋಡೆಕಾರ ಡಿಕ್ ಟರ್ಪಿನ್ (Dick Turpin) ನ ತಂದೆ. ಕವಿ ಜಾನ್ ಕೀಟ್ಸ್ ಇಲ್ಲಿ ಕೆಲವು ಕವಿತೆಗಳನ್ನು ಬರೆದನಂತೆ. ಚಾರ್ಲ್ಸ್ ಡಿಕ್ಕಿನ್ಸ್ (Charles Dickens) ಬರೆದ ದ ಪಿಕ್-ವಿಕ್ ಪೇಪರ್ಸ್ (The Pickwick Papers) ನಲ್ಲಿ ಈ ಪಬ್-ನ ವಿಚಾರವಿದೆ.
೧೬೬೬ರಲ್ಲಿ ಲಂಡನ್-ನಲ್ಲಿ ಅತಿ ದೊಡ್ಡ ಬೆಂಕಿ ಅನಾಹುತವಾಯಿತು, ಪುಡ್ಡಿಂಗ್ ಲೇನ್ (Pudding Lane) ನಲ್ಲಿದ್ದ ಬೇಕರಿಯಲ್ಲಿ ಶುರುವಾಗಿದ್ದ ಬೆಂಕಿಯಿಂದ ಸಾವಿರಾರು ಮನೆಗಳು ನಾಶವಾಗಿದ್ದವು. ನಂತರ ಈ ಪ್ರದೇಶದ ಪುನನಿರ್ಮಾಣ ಪ್ರಾರಂಭ ವಾಯಿತು, ಈಗಿನ ಫ್ಲೀಟ್ ಸ್ಟ್ರೀಟ್ (Fleet Street) ನಲ್ಲಿರುವ ದ ಓಲ್ಡ್ ಬೆಲ್ (The Old Bell) ೧೬೭೦ರಲ್ಲಿ ಪ್ರಸಿದ್ಧ ಆರ್ಕಿಟೆಕ್ಟ್ ಸರ್ ಕ್ರಿಸ್ಟೋಫರ್ ರೆನ್ (Christopher Wren) ರಚಿಸಿದ್ದ ಕಟ್ಟಡ. ಇದು ನಿರ್ಮಾಣದ ಕೆಲಸಗಾರರಿಗೆ ಕಟ್ಟಿದ ಏಲ್ ಹೌಸ್. ಕೆಲವು ವರ್ಷದ ಹಿಂದೆ ಫ್ಲೀಟ್ ಸ್ಟ್ರೀಟ್-ನಲ್ಲಿ ದಿನಪತ್ರಿಕೆಗಳನ್ನು ಇಲ್ಲಿಯೇ ಮುದ್ರಿಸುತ್ತಿದ್ದರು. ಈಗ ಇದು ಹಣಕಾಸಿನ ಕೇಂದ್ರವಾಗಿದೆ.
ಮೇಲೆ ಉಲ್ಲೇಖಿಸಿದ ಸಂಗತಿಗಳಿಗೆ ಆಧಾರಗಳಿವೆ, ಆದರೆ ಕೆಲವು ಪಬ್-ನ ಕಥೆಗಳು ಬಿಯರ್ ಮಾರುವುದಕ್ಕೆ ಅನುಕೂಲವಾಗಲಿ ಎಂದು ಮಾಡಿದ ಸಂಶಯ ಬರುತ್ತದೆ. ಒಂದು ಉದಾಹರಣೆ ಕೊಡಬಲ್ಲೆ. ನನಗೆ ಹತ್ತಿರದಲ್ಲಿರುವ ಎ೩೪ ರಸ್ತೆಯಲ್ಲಿ ದ ಬ್ಲೀಡಿಂಗ್ ವೂಲ್ಫ್ (The Bleeding Wolf) ಎನ್ನುವ ಪಬ್ ಇದೆ. ಇಲ್ಲಿ ಈ ಪಬ್-ನ ಚರಿತ್ರೆ(?)ಯನ್ನು ಬರೆದಿದ್ದಾರೆ.
ಅದು ಹೀಗಿದೆ: ಬಹಳ ಹಿಂದೆ, ಕಿಂಗ್ ಜಾನ್, ಬೇಟೆಗಾಗಿ ತನ್ನ ಜೊತೆಗಾರರೊಂದಿಗೆ ಬಂದಾಗ, ದಾರಿ ತಪ್ಪಿ ಒಬ್ಬನೇ ದಟ್ಟ ಕಾಡಿಗೆ ಬಂದ, ಒಂದು ತೋಳ ಇವನ ಕುದುರೆಯ ಮೇಲೆ ಹಾರಿದಾಗ ಇವನು ಕೆಳಗೆ ಬಿದ್ದ. ಆದರೆ ಹತ್ತಿರದಲ್ಲೇ ಇದ್ದ ಒಬ್ಬ ಬೇಟೆಗಾರ ಇದನ್ನು ನೋಡಿ ತನ್ನ ಚಾಕುವನ್ನು ತೋಳದ ಕಡೆ ಎಸದಾಗ ತೋಳಕ್ಕೆ ಗಾಯವಾಗಿ ಓಡಿ ಹೋಯಿತು. ಬೇಟೆಗಾರ ಹತ್ತಿರ ಬಂದು ನೋಡಿದಾಗ ಇನ್ನಾರು ಅಲ್ಲ,ಸಾಕ್ಷಾತ್ ಕಿಂಗ್ ಜಾನ್. ಅಯ್ಯಾ, ನನ್ನ ಪ್ರಾಣ ಉಳಿಸಿದ್ದಿಯ, ನಿನಗೆ ಏನು ಬೇಕು ಕೇಳು, ಅಂದ ಕಿಂಗ್. ಇದೇ ಸಮಯ ಅಂತ ಬೇಟೆಗಾರ, ನನಗೆ ಸಾಕಷ್ಟು ಜಾಮೀನು ದಯಪಾಲಿಸಿ, ಅಂತ ಬೇಡಿದ. ಕಿಂಗ್ ಜಾನ್, ಸರಿ ಆಗಲಿ, ನಿನಗೆ ಇಲ್ಲಿಯ ಜಾಮೀನು ಇನಾಮು ಕೊಡುತ್ತೇನೆ, ಅಂದ. ಈ ಪಬ್ ಇರುವ ಜಾಗದಲ್ಲೇ ಈ ಘಟನೆ ನಡೆದದ್ದು! ಇದನ್ನು ನಂಬುತ್ತಿರೋ ಇಲ್ಲವೋ ನಿಮಗೆ ಬಿಟ್ಟಿದ್ದು. ಕಿಂಗ್ ಜಾನ್ ಇಷ್ಟು ದೂರ ಬೇಟೆಗೆ ಏಕೆ ಬಂದ ಅಂತ ಕೇಳಬೇಡಿ. ಈ ರೀತಿಯ ಕಥೆಗಳು ಅನೇಕ, ಕೆಲವು ನಿಜವಿರಬಹುದು, ಆದರೆ ಹೆಚ್ಚಾಗಿ ಕಾಲ್ಪನಿಕ.
ಇಲ್ಲಿಯ ಪಬ್-ಗಳ ಅನನ್ಯತೆ ಪ್ರಪಂಚದಲ್ಲಿ ಇನ್ನೆಲ್ಲೂ ಇಲ್ಲ. ಪುರಾತನ ಪಬ್-ಗಳು ಈಗಲೂ ಆ ವಾತಾವರಣವನ್ನು ಕಾಪಾಡಿಕೊಂಡು ಬಂದಿದೆ. ನನ್ನ ವೈಯಕ್ತಿಕ ಇಷ್ಟವಾದ ಪಬ್, ಬೆಸಿಂಗ್-ಸ್ಟೋಕ್-ನ ಹತ್ತಿರ ಇರುವ ಡಮ್ಮರ್ (Dummer) ಅನ್ನುವ ಸಣ್ಣ ಹಳ್ಳಿಯಲ್ಲಿ ಇರುವ ಕ್ವೀನ್ ಇನ್ (Queen inn),
೪೦೦ ವರ್ಷಗಳ ಹಳೆಯ ಪಬ್. ಶತಮಾನಗಳಿಂದ ಏನು ಬದಲಾಯಿಸಿಲ್ಲವೇನೋ ಅನ್ನುವ ಭಾವನೆ ಬರುತ್ತದೆ.
ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಪಬ್-ಗಳ ಭವಿಷ್ಯ ಶೋಚಿನೀಯವಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ, ಸಮೀಕ್ಷೆಯ ಪ್ರಕಾರ ಪಬ್-ಗಳ ಸಂಖ್ಯೆ ಕಾಲು ಭಾಗ ಕಡಿಮೆ ಆಗಿದೆ . ಅನೇಕ ಕಾರಣಗಳನ್ನು ಇಲ್ಲಿ ಕೊಡಬಹುದು. ಪ್ರತಿವರ್ಷ, ಬಜೆಟ್-ನಲ್ಲಿ ಮದ್ಯಗಳಮೇಲೆ ತೆರಿಗೆ ಹೆಚ್ಚಾಗುವುದು, ಸೂಪರ್ ಮಾರ್ಕೆಟ್ಟಿನಲ್ಲಿ ಸಿಗುವ ಅಗ್ಗವಾದ ಪಾನೀಯಗಳು, ಆದರೆ ಒಂದು ಮುಖ್ಯವಾದ ಕಾರಣ, ತರುಣ ಜನಾಂಗದವರು, ಅಂದರೆ ೧೮-೩೦ ವರ್ಷದವರು, ಮದ್ಯ ಕುಡಿಯುವುದನ್ನು ಕಡಿಮೆ ಮಾಡಿರುವುದು ಅಥವಾ ತ್ಯಜಿಸಿರುವ ಸಂಖ್ಯೆ ಹೆಚ್ಚಾಗಿರುವದಕ್ಕೆ ಪುರಾವೆ ಇದೆ. ಕಳೆದ ಕೋವಿಡ್ ಸಾಂಕ್ರಾಮಿಕ ನಂತರ ಜನರು ಅತ್ಯಂತ ಜಾಗರೂಕರಾಗಿದ್ದಾರೆ. ಇದು ಇಂಗ್ಲೆಂಡ್ ದೇಶದಲ್ಲಿ ಇರುವ ಪರಿಸ್ಥಿತಿ.
ಪತ್ರಿಕೆಯ ವರದಿ ಪ್ರಕಾರ, ಭಾರತದಲ್ಲಿ ಮದ್ಯಪಾನದಿಂದ ಸತ್ತವರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಗ್ರಾಮಗಳಲ್ಲಿ ಅಕ್ರಮವಾಗಿ ತಯಾರಿಸಿದ ಮದ್ಯಗಳಿಂದಲೂ ಈ ಸಾವು ಹೆಚ್ಚಾಗಿದೆ. ಸಾಲದ್ದಕ್ಕೆ ಕುಡಿದು ಓಡಿಸು (Drink Drive) ವುದರಿಂದ ಉಂಟಾಗುವ ಸಾವು ಸ್ವೀಕಾರಾರ್ಹವಲ್ಲ.




Comments
Post a Comment