ಜೀವಿತದಾಚೆ ಜೀವಂತವಿರುವುದೆಂದರೆ

ಜೀವಿತದಾಚೆ ಜೀವಂತವಿರುವುದೆಂದರೆ

ಲೇಖನ - ಮಂಜುಳಾ ಡಿ 




ಆ ಗ್ರಾಮದ ಹಿರಿಯರೊಬ್ಬರು ದೂರದೃಷ್ಟಿಯಿಂದ ಆ ಗ್ರಾಮದಲ್ಲಿ ಪ್ರೌಢಶಾಲೆ ತರಲು ಸತತ ಹೋರಾಟ ಮಾಡಿ 1935 ರಲ್ಲಿ ಶಾಲೆಗಾಗಿ ಸ್ವಂತ ಜಮೀನನ್ನು ಉದಾರ ಮನೋಭಾವದಿಂದ ದೇಣಿಗೆ ನೀಡಿದರು. ಆ ಶಾಲೆಯಲ್ಲಿ ಅಂದಿಗೆ ಎಸ್ ಎಸ್ ಎಲ್ ಸಿ ಕಲಿತು ಸಹಸ್ರಾರು ಜೀವಿತಗಳು ಅರಳಿದವು. ಅದೇ ಶಾಲೆಯನ್ನು  ಮರು ನಿರ್ಮಾಣಕ್ಕಾಗಿ ನೆಲಸಮ ಮಾಡುವುದನ್ನೇ ಕಾದಂತಿದ್ದ ಆ ಹಿರಿಯರ ವಾರಸುದಾರರು ಭೂಮಿ ದಾನ‌ ಮಾಡಿದ ಬಗ್ಗೆ ಯಾವುದೇ ದಾಖಲೆ ಇಲ್ಲ,  ಇದರಿಂದಾಗಿ ಶಾಲೆಗೆಂದು ದೇಣಿಗೆ ನೀಡಿದ ಸ್ವತ್ತು ಖಾಸಗಿ ಸ್ವತ್ತು ಎಂದು ನ್ಯಾಯಾಲಯಕ್ಕೇರಿದರು. ಇಡೀ ಊರು ಮೂರು ಭಾಗವಾಗಿ ಹೊಯ್ತು. ಒಂದು ಗುಂಪು  ಅದು ಶಾಲೆಯ ಸ್ವತ್ತು ಎಂದು ನಿಂತರೆ, ಮೊಮ್ಮಕ್ಕಳಿಗೆ ಹೋರಾಡಿ, ಆ ಸ್ವತ್ತು ನಿಮ್ಮದೇ ಎಂದು ಹುರಿದುಂಬಿಸುವ ಮತ್ತೊಂದು ಗುಂಪು. ಅಲ್ಲಿಯದು ಇಲ್ಲಿ ಹೇಳಿ, ಇಲ್ಲಿಯದು ಅಲ್ಲಿ ಹೇಳಿ ಇನ್ನೂ ಗೊಂದಲ ಹೆಚ್ಚಿಸುವ ಶಕುನಿ ಪಡೆ ಮತ್ತೊಂದು ಕಡೆ. ಈ ಕಡತ ತಿರುಗಿಸಿ ಸಾಕಾಗಿ ಬಂದ ರಜೆಯಲ್ಲಿ ದೇವಸ್ಥಾನಕ್ಕೆಂದು ಹೊರಟು ಸೌದತ್ತಿ ಯಲ್ಲಮ್ಮನ ದರ್ಶನ ಮುಗಿಸಿ, ಶಿರಸಂಗಿಯ ಕಾಳಿಕಾಂಬೆಯ ದರ್ಶನಕ್ಕೆಂದು ಹೊರಟೆ. ಶಿರಸಂಗಿಯ ಕಾಳಿಕಾಂಬೆಯ ಮುಂದೆ ನಿಂತರೆ ಒಮ್ಮೆ ಅರಿವಿಲ್ಲದೆ ಮೈ ನಡುಗಿದಂತೆ ಅನಿಸುವುದು. ಸುಪ್ರಸಿದ್ಧ ಬಂಗಾಲದ ಕಾಳಿಕಾಂಬೆಯ ಮುಂದೆ ಕೂಡ ಇಂಥ ಭಾವ ಮೂಡಲಾರದು. ಸಿಂಗ ಋಷಿ ಇಲ್ಲಿ ತಪವನ್ನಾಚರಿಸಿದ್ದಾನೆ ಎಂಬ ಇತಿಹಾಸ ಅಲ್ಲಿನವರು ಹೇಳುತ್ತಾರೆ. ಪ್ರತಿಬಾರಿ ಕಾಳಿಕಾಂಬೆಯ ದರ್ಶನಕ್ಕೆ ಹೋಗುವಾಗ ದೇಗುಲಕ್ಕೆ ಹತ್ತಿರದಲ್ಲೇ ಇರುವ ಶಿರಸಂಗಿ ಕೋಟೆ ಹಾದೇ ಹೋಗಬೇಕಾಗುತ್ತದೆ. ಪ್ರತೀಬಾರಿ ಸಮಯಾಭಾವದಿಂದ ಮುಂದಿನ ಬಾರಿ ನೋಡೋಣ ಎಂದೇ ಸಾಗುತ್ತಿದ್ದೆ. ಈ ಬಾರಿ ಮೊದಲು ಕೋಟೆ ದರ್ಶಿಸುವ ಎಂದು ಇಳಿದಾಗ ನಿಜಕ್ಕೂ ಪ್ರತಿ ಕನ್ನಡಿಗ ತಿಳಿದರಬೇಕಾದ ಮತ್ತು ಕೃತಜ್ಞರಾಗಿರಬೇಕಾದ ಚೇತನವೊಂದರ ಬದುಕಿನ ಹರಿವು ತೆರೆದುಕೊಳ್ಳಲಿದೆ ಎಂದು ತಿಳಿದಿರಲಿಲ್ಲ.  3600 ಎಕರೆ ದಾನ‌ ಮಾಡಿದ ಶಿರಸಂಗಿ-ನವಲಗುಂದ  ಆಳಿದ ಸಾಮಂತ ರಾಜರಾದ ದೇಸಾಯಿ ಅರಸು ಮನೆತನ ಕೊನೆಯ ರಾಜ ಲಿಂಗರಾಜ ದೇಸಾಯಿಯವರ ಬಗ್ಗೆ  ತಿಳಿದು ಮೂಡಿದ ಅಚ್ಚರಿಯಿಂದಾಗಿ ಈ ಲೇಖನ ಹೊಮ್ಮಿದೆ.




ಶಿರಸಂಗಿ ಕೋಟೆಯನ್ನು  ಶಿರಸಂಗಿ-ನವಲಗುಂದ ದೇಸಾಯಿ ಮನೆತನದ ಜಾಯಪ್ಪ ದೇಸಾಯಿಯವರು  1734 ರಲ್ಲಿ ನಿರ್ಮಿಸಿದರು. ಜಾಯಪ್ಪಾ ದೇಸಾಯಿಯವರಿಗೆ ಉಮಾಬಾಯಿ ಮತ್ತು ಗಂಗೂಬಾಯಿ ಇಬ್ಬರು ಧರ್ಮಪತ್ನಿಯರು. ಆದರೂ ಸಂತಾನದ ಕೊರತೆ. ಸಂಸ್ಥಾನಿಕರ ಸಲಹೆಯಂತೆ ಎಲ್ಲಾ ಷರತ್ತುಗಳಿಗೆ ತೂಗುವಂತಹ ಬಾಲಕನಾದ ಲಿಂಗರಾಜ ದೇಸಾಯಿಯವರನ್ನು ಜಾಯಪ್ಪ ದೇಸಾಯಿ ಮತ್ತು ಗಂಗೂಬಾಯಿಯವರು ದತ್ತು ಪಡೆದುಕೊಂಡರು. ಲಿಂಗರಾಜ ದೇಸಾಯಿಯವರು ಜನವರಿ 10, 1861 ರಂದು ಗೂಳಪ್ಪ ಮತ್ತು ಯಲ್ಲವ್ವ ಮಡ್ಲಿ ದಂಪತಿಗೆ ಗದಗ ಜಿಲ್ಲೆಯ ಶಿಗ್ಲಿಯಲ್ಲಿ ಜನಿಸಿದರು. ಅವರ ಹುಟ್ಟಿದ ಹೆಸರು ರಾಮಪ್ಪ. ಅನಂತರ ಅವರು ಸಂಸ್ಥಾನಾಧಿಪತಿಗಳಾದರು. ಜೂನ್ 2, 1872 ರಂದು ಅವರ ಹೆಸರು ಶಿರಸಂಗಿ ಲಿಂಗರಾಜ ದೇಸಾಯಿ ಎಂದು ಬದಲಾಯಿತು. ಇವರ ವಿದ್ಯಾಭ್ಯಾಸ ಕೊಲ್ಲಾಪುರದಲ್ಲಿ ಆಯಿತು. ಕನ್ನಡ ಸಂಸ್ಕೃತ, ಇಂಗ್ಲಿಷ್, ಹಿಂದಿ ಹೀಗೆ ಹಲವು ಭಾಷೆಗಳು ಕರಗತವಾಗಿದ್ದವು.

ಬಾಲಕ ರಾಮಪ್ಪನವರನ್ನು ದತ್ತು ಪಡೆಯಲು ಜಾಯಪ್ಪ ದೇಸಾಯಿಯವರ ಪತ್ನಿ ಉಮಾಬಾಯಿಯವರಿಗೆ ಮನಸ್ಸಿರಲಿಲ್ಲ. ತನ್ನ ತವರಿನ ಕಡೆಯಿಂದ ದತ್ತು ಪಡೆಯಬೇಕೆಂಬುದು ಆಕೆಯ ಇಚ್ಛೆಯಾಗಿತ್ತು. ಈ ಕಾರಣದಿಂದ ಜಾಯಪ್ಪ ದೇಸಾಯಿ ಮತ್ತು ಗಂಗೂಬಾಯಿಯವರ ಮರಣಾನಂತರ ಸಮಸ್ತ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದಳು ಉಮಾಬಾಯಿ. ಮುಂಬೈ ಹೈಕೋರ್ಟ್ ಮತ್ತು ಬ್ರಿಟೀಷ್ ಮುಖ್ಯ ನ್ಯಾಯಾಲಯದಲ್ಲಿ ನಿರಂತರ ಹೋರಾಟದ ನಂತರ ಸಮಸ್ತ ಆಸ್ತಿ ದತ್ತು ಪುತ್ರ ಲಿಂಗರಾಜ ದೇಸಾಯಿಯವರಿಗೇ ಎಂಬುದಾಗಿ ನ್ಯಾಯ ಸಂದಿತು. ಇದಾದ ನಂತರ ಲಿಂಗರಾಜ ದೇಸಾಯಿಯವರ ವರ್ತನೆ ಅವರ ಅಗಾಧ ವ್ಯಕ್ತಿತ್ವಕ್ಕೆ ಮೆರಗು ತರುವಂತದ್ದು ಮತ್ತು ಅಚ್ಚರಿಗೊಳಿಸುವಂಥದ್ದೇ!. ಲಿಂಗರಾಜ ದೇಸಾಯಿವರ ಬದುಕಿಗೇ ಸಂಚಾಕಾರ ತರುವಂತ ಪ್ರಯತ್ನಗಳನ್ನೇ ಮಾಡುತ್ತಾ ಬಂದರೂ, ತಾಯಿಯಾಗಿ ತಮಗೆ ಸಲ್ಲಬೇಕಾದ ಭಾಗ ಎಂದು ಆಸ್ತಿಯ ಭಾಗವನ್ನು ಉಮಾಬಾಯಿಯವರಿಗೆ ಒಪ್ಪಸಿ ಬಂದರು. ಲಿಂಗರಾಜ ದೇಸಾಯಿಯವರ ಕುರಿತು ಅರಿಯುವಾಗ ಈ ಘಟನೆ ಬಹಳವಾಗಿ ಮನಃಕಲಕಿತು.

ಇದುವರೆಗೂ ಸಾಮಾನ್ಯವಾಗಿ ತೆರೆದುಕೊಂಡ ಬದುಕು, ಅಚ್ಚರಿಗೊಳಿಸುವುದೇ ಇದರಾಚೆ. ಅವರು ಸಮಾಜಕ್ಲಾಗಿ ಮಾಡಿದ ಕೆಲಸಗಳು ಇಂದಿಗೂ ಸಜೀವವಾಗಿವೆ. ಎಲ್ಲಾ ಕ್ಷೇತ್ರಗಳಲ್ಲಿ ಇವರ ಕೊಡುಗೆಗಳಿದ್ದರೂ  ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಕೊಡುಗೆಗಳು ಗಣನೀಯವಗಿವೆ. ಮತ್ತು ಅದರಿಂದ ಇಂದಿಗೂ ಲಕ್ಷಾಂತರ ರೈತರು ವಿದ್ಯಾರ್ಥಿಗಳನ್ನು ಮುನ್ನೆಡೆಸುತ್ತಿದೆ. ಕೃಷಿಯೇ ಈ ಮಣ್ಣಿನ ಜನರ ಜೀವನಾಡಿ  ಎಂಬುದನ್ನು ದೇಸಾಯಿಯವರು  ಎಷ್ಟು ಸ್ಪಷ್ಟವಾಗಿ ಮನಗಂಡಿದ್ದರು ಎಂದರೆ  ಕೃಷಿ ಸುಧಾರಿತ ಪದ್ದತಿಗಳನ್ನು ಸಾಮಾನ್ಯ ರೈತರ ಬದುಕಿನಲ್ಲಿ ಅರಿತು ಅಳವಡಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹಾವೇರಿಯ ದೇವಿ ಹೊಸೂರು ಗ್ರಾಮದಲ್ಲಿ 150 ಎಕರೆ ಜಮೀನು ಖರೀದಿಸಿ ತರಬೇತಿ ಕೇಂದ್ರಕ್ಕಾಗಿ ದೇಣಿಗೆ ನೀಡಿದರು. ನವಲಗುಂದ -ಶಿರಸಂಗಿಯಲ್ಲಿ ಹಲವಾರು ಕೆರೆಗಳನ್ನು ನಿರ್ಮಿಸಿ ಅಂತರಗಂಗೆ ಹೆಚ್ಚುವಂತೆ ಮಾಡಿದ್ದಲ್ಲದೆ, ಕೆರೆಗಳಿಂದ ರೈತರ ಜಮೀನುಗಳಿಗೆ ನೀರುಣಿಸುವಂತೆ ಮಾಡಿದ ಕೃಷಿ ತಜ್ಞರು ಇವರು. ಅವರು ಅನುಷ್ಭಾನಗೊಳಿಸಿದ  ಭೂ ಅಭಿವೃದ್ಧಿ ಯೋಜ‌ನೆಗಳು , ನೀರಾವರಿ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ, ಅಲ್ಲಿನ ರೈತರ ಬದುಕಿಗೆ ಆಧಾರವಾಗಿವೆ.

ನವಲಗುಂದದ ನೀರಿನ ಆಹಾಕಾರ ಅಡಗಿಸಿದ ನೀಲಮ್ಮನ ಕೆರೆಯನ್ನು ದೇಸಾಯಿಯವರು ಅವರ ತಂಗಿ ನೀಲಮ್ಮನಿಗೆ ದೇಣಿಗೆ ನೀಡಿದ  19 ಎಕರೆ 38 ಗುಂಟೆಯಲ್ಲಿ ನಿರ್ಮಿಸಲಾಗಿದೆ. ಈ ಕೆರೆ ಏಳೆಂಟು ದಶಕಗಳಿಂದ ನವಲಗುಂದ ಜನರ ಏಕೈಕ ಜೀವಜಲದ ಆಧಾರವಾಗಿತ್ತು. ಇಂತಹ ಅದೆಷ್ಟು ಕೆರೆ ನಿರ್ಮಿಸಿ ರೈತರ ಬದುಕಿಗೆ ದೇಸಾಯಿಯವರು ಆಧಾರ ಕಲ್ಪಿಸಿದರೋ. ಇದನ್ನು ಅರಿಯುವಾಗ ದೇಸಾಯಿಯವರ ಚೇತನದ ಘನತೆ ತುಸುವಾದರೂ ನಮ್ಮ ಅರಿವಿಗೆ ನಿಲುಕಬಹುದೇನೋ.

ಶಿಕ್ಷಣ ಕ್ಷೇತ್ರಕ್ಕಾಗಿ ಇವರು ಮಾಡಿರುವ ಕೊಡುಗೆಗಳು ಅಸಾಧಾರಣವಾಗಿವೆ. ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಅರಿತ ದೇಸಾಯಿಯವರು ಶಿಕ್ಷಣ ಪಡೆಯುವ ಮಹಿಳೆಯರಿಗಾಗಿ ಧಾರವಾಡದಲ್ಲಿ ಉಮಾಬಾಯಿ ವಸತಿ ನಿಲಯವನ್ನು ಸ್ಥಾಪಿಸಿದರು. ವಿಜಯಪುರದಲ್ಲಿ ಲಿಂಗರಾಜ ಹಾಸ್ಟೆಲ್ ಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸ್ಪೂರ್ತಿಯಾದರು‌. ಉತ್ತರ ಕರ್ನಾಟಕದ ಪ್ರತಿಷ್ಠಿತ ಕೆಎಲ್ ಇ ಸಂಸ್ತೆಗೆ ದೇಸಾಯಿಯವರು ನೀಡಿದ ದೇಣಿಗೆ 50 ಸಾವಿರ ರೂಗಳ ಸ್ಮರಣಾರ್ಥವಾಗಿ 1916 ರಲ್ಲಿ ಸ್ಥಾಪನೆಯಾದ ಮೊದಲ ಕಾಲೇಜನ್ನು ಲಿಂಗರಾಜ ಕಾಲೇಜು ಎಂದೇ ಹೆಸರಿಸಲಾಗಿದೆ. ದೇಸಾಯಿಯವರ ಶೈಕ್ಷಣಿಕ ಕ್ಷೇತ್ರದ ಅತೀ   ಮುಖ್ಯವಾದ-ಚಿರಸ್ಥಾಯಿಯಾದ ಕೊಡುಗೆ ಎಂದರೆ  ನವಲಗುಂದ ಶಿರಸಂಗಿ ಟ್ರಸ್ಟ್ ಪ್ರಾರಂಭಿಸಿದ್ದು. ಈ ಟ್ರಸ್ಟ್ ಆರಂಭವಾದದ್ದು 1906 ಆಗಸ್ಟ್ ಮಾಹೆಯಲ್ಲಿ. ಅವರ ಬದುಕಿನ ಕೊನೆಯಂಚಿನಲ್ಲಿ ತಮ್ಮ ಸಮಸ್ತ ಸಂಪತ್ತನ್ನೂ ವಿಲ್ ಮೂಲಕ ನವಲಗುಂದ ಶಿರಸಂಗಿ ಟ್ರಸ್ಟ್ ಸ್ಥಾಪಿಸಿ ದೇಣಿಗೆ ನೀಡಿದರು. ಈ ಟ್ರಸ್ಟ್ ಗೆ ಜಿಲ್ಲಾಧಿಕಾರಿಗಳೇ ಮುಖ್ಯಸ್ಥರು ಹಾಗೂ ದೇಸಾಯಿ ಸಂಸ್ಥಾನಕ್ಕೆ ಸಂಬಂಧಿಸಿದ ಕೆಲವು ಸಂಶಸ್ಥರು ಟ್ರಸ್ಟ್ ನ ಸದಸ್ಯಾರಾಗಿದ್ದಾರೆ. ಬಡ ಲಿಂಗಾಯಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಈ ಟ್ರಸ್ಟ್ ಸಹಾಯಧನ ನೀಡುತ್ತದೆ. 1930 ರಿಂದ 1984 ರ ಅವಧಿಯಲ್ಲಿ ಈ ಟ್ರಸ್ಟ್ ನಿಮದ ಸುಮಾರು 6925 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಪಡೆದ ಮೊತ್ತ 22,98,321ರೂಗಳು. ಡಿ.ಸಿ.ಪಾವಟೆ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ರತ್ನಪ್ಪಾ ಕುಂಬಾರರು ಈ ಟ್ರಸ್ಟ್ ನಿಂದ ಸಹಾಯಧನ ಪಡೆದ ಪ್ರಮುಖರು ಎಂದು ಹೆಸರಿಸಬಹುದು.

ದೇಸಾಯಿಯವರು ಈ ಟ್ರಸ್ಟ್ ಆರಂಭಿಸಲು ಉದ್ದೇಶಿಸಿದ್ದರ ಹಿಂದೆ ಅವರ ಜೀವಿತದಿಂದ ಸಮಸ್ತರೂ ಕಲಿಯಬಹುದಾದ ಮಹತ್ತರ ಪಾಠವಿದೆ. ಆರು ಜನ ಮಡದಿಯರಿದ್ದರೂ ದೇಸಾಯಿಯವರಿಗೆ ಸಂತಾನದ  ಕೊರತೆ. ಈ ನೋವು ಹೊತ್ತು ಅಥಣಿಯ ಶ್ರೀ ಮುರುಗೇಂದ್ರ ಸ್ವಾಮಿಗಳ ಮುಂದೆ ಕೂತಾಗ ಸ್ವಾಮಿಗಳು ಶಿಕ್ಷಣಕ್ಕಾಗಿ ಸಂಪತ್ತನ್ನು ಮುಡಿಪಾಗಿಟ್ಟರೆ,  ಅಲ್ಲಿ ಕಲಿಯುವ ಮಕ್ಕಳೆಲ್ಲಾ ನಿಮ್ಮ ಮಕ್ಕಳಾಗುತ್ತಾರೆ. ಆ ಮಕ್ಕಳು ನಿಮ್ಮ ಸಂಪತ್ತು ವಿನಿಯೋಗಿಸಿ ಪರಿಶ್ರಮದಿಂದ ನೀವು ಕನಸಿದ ಮಾರ್ಗದಲ್ಲಿ ನಡೆದರೆ ನಿಮ್ಮ ಕನಸು ಬೆಳಗಿಸಿ ಸಾಕಾರಗೊಳಿಸಿದಂತೆ ಎಂದು ಉಪದೇಶಿಸಿದರು. ಶಿರಸಂಗಿ ಕೋಟೆಯೊಳಗೆ ನಡೆದಾಡುವಾಗ ದೇಸಾಯಿಯವರು ಬೆಳೆದು ಆಡಳಿತ ಮಾಡಿರಬಹುದಾದ ರೀತಿ ಕಣ್ಮುಂದೆ ತೇಲಿದಂತೆನಿಸಿತು. ಕೋಟೆಯೊಳಗೆ ಕೆಲವು ಅವರ ಜೀವಿತಾವಧಿಯ ಅಪರೂಪದ ಫೋಟೊಗಳು ಮತ್ತು ಆಗಷ್ಟೇ ಪೂಜಿಸಲ್ಪಟ್ಟಿದ್ದ ದೇಸಾಯಿಯವರ ಕುಲದೈವ ಕಾಡುಸಿದ್ದೇಶ್ವರ ನ ಕೋಣೆ ಹೊರತುಪಡಿಸಿ ಉಳಿದೆಲ್ಲವೂ ಅವಶೇಷದಂತೆ ಕಾಣುತ್ತದೆ. ಹತ್ತಿರದಲ್ಲೇ ಇರುವ ಪ್ರಾಥಮಿಕ ಶಾಲೆಯ ಹತ್ತಿರ ದೇಸಾಯಿ ಕುಟುಂಬದವರ ಸಮಾಧಿಗಳಿವೆ. ಆ ಸಮಾಧಿಗಳನ್ನು ನೋಡಲು ಹೋದಾಗ ಅಲ್ಲಿ ಆಡುತ್ತಿದ್ದ ನೂರಾರು ಶಾಲಾ ಮಕ್ಕಳನ್ನು ನೋಡಿ ಲಿಂಗರಾಜ ದೇಸಾಯಿಯವರ ಆತ್ಮ ಅದೆಷ್ಟು ತೃಪ್ತಿಪಟ್ಟಿರಬಹುದೆನಿಸಿರು.

ಲಿಂಗರಾಜ ದೇಸಾಯಿಯವರ ಜೀವಿತಾವಧೀ ಕೇವಲ 45 ವರ್ಷ! ತನ್ನದೆಂದು ದೊರೆತ ಸಕಲವನ್ನು ಸಮಾಜದ ಶ್ರೇಯಕ್ಕಾಗಿ ಮುಡಿಪಾಗಿಸಿದ ಚೇತನವೊಂದರ ಬದುಕಿನ ರೀತಿಯ ಬಗ್ಗೆ ಅರಿಯಲು ಯಾವುದೇ ಲಿಖಿತ ದಾಖಲೆ ಸಿಗಲಿಲ್ಲ. ಶಿರಸಂಗಿಯಲ್ಲಿ ಅಲೆದು ಕೆಲವು ಹಿರಿಯರಿಂದ ಪಡೆದ ಮಾಹಿತಿ ಮತ್ತು ಕೆಲವು ಅತೀ ಚಿಕ್ಕ ಲೇಖನಗಳ  ಮಾಹಿತಿ ಆಧರಿಸಿ ಈ ಲೇಖನ ಹೊಮ್ಮಿದೆ. ಜೀವಿತದ ಸಾರವೇ ಪಾಠದಂತಿರುವ ಇವರ ಬಗ್ಗೆ ಸಮಗ್ರ ಕೃತಿ ಹೊಮ್ಮುವ ಅತ್ಯಗತ್ಯತೆ ಇದೆ. ಇನ್ನೂ ಮುಖ್ಯವಾಗಿ ಶೀಥಿಲಾವಸ್ಥೆಯಲ್ಲಿರುವ ಕೋಟೆಯನ್ನು ಸ್ಮಾರಕವನ್ನಾಗಿಸಿ ಮುಂದಿನ ಪೀಳಿಗೆಗೆ ಆದರ್ಶಪ್ರಾಯ ಘನ ಚೇತನವೊಂದನ್ನು ಪರಿಚಯಿಸುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಾಗಲಿ ಎಂಬ ಸದಾಶಯದಿಂದ ಈ ಲೇಖನ ಹೊಮ್ಮಿದೆ.






Comments