ಮದುವೆ - ಒಂದು ಪ್ರಹಸನ
- ಸರಸ್ವತಿ, ಸಿಡ್ನಿ
ಅಜ್ಜಿ : ಬನ್ನಿ ಮಕ್ಕಳಾ, ಒಂದು ಕಥೆ ಹೇಳ್ತೀನಿ
ಮೊಮ್ಮಗಳು : ತಾಳಜ್ಜಿ ಮೊಬೈಲ್ ನಲ್ಲಿ ಗೇಮ್ಸ್ ಆಡ್ತಿದಿನಿ
ಅಜ್ಜಿ : ಮೊಬೈಲ್ ಜಾಸ್ತಿ ನೋಡಬಾರದು. ಕಣ್ಣಿಗೆ ಹಾನಿ. ಬಾ ಕಥೆ ಕೇಳು.
ಮೊಮ್ಮಗಳು : ಅಯ್ಯೋ ಈ ಅಜ್ಜಿದೊಂದು. ಹೂಂ ಹೋಗಲಿ ಹೇಳು. ಬ್ರೋ ನೀನು ಬಾ
ಅಜ್ಜಿ : ಒಂದೂರಿನಲ್ಲಿ ಒಬ್ಬ ರಾಜ ಇದ್ದ.
ಮೊಮ್ಮಗಳು : ಅಯ್ಯೋ ಅಜ್ಜಿ ರಾಜ ಅಲ್ಲ. ಮಂತ್ರಿ, ಮಂತ್ರಿ ಅನ್ನು ಈಗ ನಿನ್ನ ಕಾಲದಂತೆ ರಾಜರೆಲ್ಲಿದ್ದಾರೆ? ಅದೆಲ್ಲಾ ನಿನ್ನ ಅಡುಗೂಲಜ್ಜಿ ಕಥೆ.
ಅಜ್ಜಿ : ಹೂಂ ಹಾಗೇ ಆಗಲಿ. ಆದರೆ ಈಗ ನಾನು ಹೇಳುವುದನ್ನು ಕೇಳು. ರಾಜನಿಗೆ ಒಬ್ಬ್ಬ ಮಗ ಇದ್ದ. ಅಂದರೆ ರಾಜಕುಮಾರ.
ಮೊಮ್ಮಗಳು : ಅಂದ್ರೆ ರಾಜ್ ಕುಮಾರ್. ನೀವೆಲ್ಲಾ ಹೇಳ್ತಿರ್ತಿರಲ್ಲಾ ಬಂಗಾರದ ಮನುಷ್ಯ ಸಿನಿಮಾದವರು ಅಂತ ಅವರಾ?
ಅಜ್ಜಿ : ಅಲ್ಲಮ್ಮ ಇವನು ಕಥೆಯ ರಾಜನ ಮಗ. ಅವನು ದೊಡ್ಡೋನಾದ, ತುಂಬಾ ಸುಂದರವಾಗಿದ್ದ. ಅವನಿಗೆ ಮದುವೆ ಮಾಡಬೇಕೆಂದು ಅಪ್ಪ-ಅಮ್ಮ ಹುಡುಗಿ ನೋಡೋಕೆ ಶುರು ಮಾಡ್ತಾರೆ.
ಮೊಮ್ಮಗಳು : ಅಯ್ಯೋ ಅಜ್ಜಿ, ಅಪ್ಪ-ಅಮ್ಮ ಹುಡುಗಿ ನೋಡಿ ಮದುವೆ ಮಾಡ್ತಾರಾ!.. ಹುಡುಗ ತನ್ನ ಗರ್ಲ್ ಫ್ರೆಂಡ್ ಜೊತೆ ಸುತ್ತಾಡಿ, ಲಿವಿಂಗ್ ಟುಗೆದರ್ ಇದ್ದು, ಲವ್ ಮಾಡಿ ಮದುವೆ ಮಾಡಿಕೊಳ್ಳೋದು. ನಿಂಗೆ ಗೊತ್ತಿಲ್ಲವಾ? ನನ್ನ ಫ್ರೆಂಡ್ ಚಿಕ್ಕಪ್ಪನ ಮಗ ಹಾಗೆ ಮಾಡ್ಕೊಂಡಿದ್ದು.
ಅಜ್ಜಿ : ಇಲ್ಲಿ ಕೇಳು. ಆಗ ಹಾಗಿರಲಿಲ್ಲ. ಅಪ್ಪ-ಅಮ್ಮನೆ ಹುಡುಗಿ ಹುಡುಕಿ ಮದುವೆ ಮಾಡುತ್ತಿದ್ದರು. ಹೀಗಿರುವಾಗ ರಾಜಕುಮಾರ, ಅಪ್ಪ-ಅಮ್ಮ ತೋರಿಸಿದ ಯಾವ ಹುಡುಗಿಯನ್ನೂ ಒಪ್ಪಲಿಲ್ಲ. ಅದಕ್ಕೆ ರಾಜ ಅವನಿಗೆ ಒಂದು ಕುದುರೆ ಕೊಟ್ಟು ನೀನೆ ದೇಶವೆಲ್ಲಾ ಸುತ್ತಾಡಿ ನಿನಗೆ ಇಷ್ಟವಾದ ಹುಡುಗಿ ಹುಡುಕಿಕೊ ಅಂದರು.
ಮೊಮ್ಮಗಳು : ಅಜ್ಜಿ ತಾಳು ತಾಳು, ಕುದುರೆ ಯಾಕೆ ಕೊಟ್ರು? ಅವನ ಹತ್ತಿರ ಕಾರಿರಲಿಲ್ಲವಾ? ಬೈಕ್ ಇರಲಿಲ್ಲವಾ?
ಅಜ್ಜಿ : ಇಲ್ಲಮ್ಮಾ. ಆ ಕಾಲದಲ್ಲಿ ಅದೆಲ್ಲಾ ಇರಲಿಲ್ಲ.
ಮೊಮ್ಮಗಳು : ಇಂಟ್ರಸ್ಟಿಂಗ್. ಬ್ರೋ ಇಲ್ಲಿ ಅಜ್ಜಿ ಹೇಳೋದನ್ನ ಕೇಳು ಬಾ
ಮೊಮ್ಮಗ : ತಾಳೇ ಕ್ರಿಕೇಟ್ ಕೊನೆ ಓವರ್ ಗೆ ಬಂದಿದೆ. ತುಂಬಾ ಎಕ್ಸೈಟಿಂಗಾಗಿದೆ.
ಮೊಮ್ಮಗಳು : ಏ ಬಾರೋ ಇಲ್ಲಿ. ಅದಕ್ಕಿಂತ ಇದು ಇಂಟ್ರಸ್ಟಿಂಗಾಗಿದೆ. ಹೂಂ ಹೇಳಜ್ಜಿ.
ಅಜ್ಜಿ : ಅವನು ದೇಶ ಸುತ್ತುತ್ತಾ ಏಳು ಸಮುದ್ರ ದಾಟಿ ಒಂದು ದೇಶಕ್ಕೆ ಬಂದ.
ಮೊಮ್ಮಗ : ಏಳು ಸಮುದ್ರ ಅಂದ್ರೆ ಸೆವೆನ್ ಓಷನ್ ತಾನೆ? ಯಾವು ಯಾವುದು?
ಅಜ್ಜಿ : ನೀನೆ ಹೇಳು ನೋಡೋಣ.
ಮೊಮ್ಮಗ : ತಾಳು ಗೂಗಲ್ ನಲ್ಲಿ ಸರ್ಚ್ ಮಾಡ್ತಿನಿ. ಹಾಂ ಸಿಕ್ತು. ಅಟ್ಲಾಂಟಿಕ್, ಪೆಸಿಫಿಕ್..
ಅಜ್ಜಿ : ಅಯ್ಯೋ ಅದೆಲ್ಲಾ ನೀವೆ ತಿಳ್ಕೊಳ್ಳಿ. ಇಂಗ್ಲೀಷ್ ಹೆಸರುಗಳು ನನಗೆ ಗೊತ್ತಿಲ್ಲ. ರಾಜಕುಮಾರ ಕೊನೆಗೆ ಒಂದು ಹಳ್ಳಿಗೆ ಬಂದ. ಅಲ್ಲಿ ಊರಾಚೆ ಒಂದು ಭಾವಿಯಿತ್ತು.
ಮೊಮ್ಮಗಳು : ಭಾವಿ ಅಂದ್ರೆ??
ಅಜ್ಜಿ : ಅಂದ್ರೆ, ಆ ಕಾಲದಲ್ಲಿ ನೀರಿಗೋಸ್ಕರ ನೆಲ ಅಗೆಯುತ್ತಾರೆ. ಆಗ ಎಲ್ಲಿ ನೀರು ಸಿಗುತ್ತೋ, ಆ ನೀರಿಗೆ ಸುತ್ತಾ ಕಟ್ಟೆ ಕಟ್ಟಿ, ರಾಟೆ ಹಾಕುತ್ತಾರೆ.
ಮೊಮ್ಮಗಳು : ರಾಟೆ ಅಂದ್ರೆ??
ಅಜ್ಜಿ : ಒಂದು ಚಕ್ರಕ್ಕೆ ಹಗ್ಗ ಹಾಕಿ ಅದಕ್ಕೆ ಬಿಂದಿಗೆ ಕಟ್ಟಿ, ಭಾವಿಗೆ ಬಿಟ್ಟು ನೀರು ಎಳೆದು ಕೊಳ್ಳುತ್ತಿದ್ದರು.
ಮೊಮ್ಮಗ : ಅಜ್ಜಿ ಅದ್ಭುತವಾಗಿದೆ. ಇದನ್ನೆಲ್ಲಾ ಇಂಜಿನಿಯರ್ ಇಲ್ಲದೆ ಹಳ್ಳಿ ಜನಾನೇ ಮಾಡ್ತಿದ್ರಾ?
ಅಜ್ಜಿ : ಹೂನಪ್ಪ. ಆ ಕಾಲದವ್ರು ತುಂಬಾ ಬುದ್ಧಿವಂತರಾಗಿದ್ರು.
ಮೊಮ್ಮಗಳು : ಅಲ್ಲ ನೀರು ಸೇದೊದಕ್ಕೆ ಕೈ ನೋಯುತ್ತಿರಲಿಲ್ಲವಾ? ಮನೆಗಳಲ್ಲಿ ಓವರ್ ಹೆಡ್ ಟ್ಯಾಂಕ್, ನಲ್ಲಿ ಏನು ಇರಲಿಲ್ಲವಾ?
ಅಜ್ಜಿ : ಇಲ್ಲಮ್ಮ. ಮುಂದೆ ಕೇಳು. ಅಲ್ಲೊಬ್ಬಳು ನಿನಗಿಂತ ದೊಡ್ಡ ಚಂದದ ಹುಡುಗಿ, ಜಡೆ ಹಾಕಿ ಹೂ ಮುಡಿದು, ಸೀರೆಯುಟ್ಟು, ನೀರು ಸೇದುತ್ತಿದ್ದಳು.
ಮೊಮ್ಮಗಳು : ಅಜ್ಜಿ ತಾಳು ತಾಳು, ಆ ಹುಡುಗಿ ಸೀರೆ ಉಟ್ಟಿದ್ಲು ಅಂತಿಯಲ್ಲ!!.. ಸೀರೆ ಉಡೋದು ಮದುವೆಗಳಿಗೆ ಹೋದಾಗ ತಾನೆ? ಅಮ್ಮ ಹಾಗೆ ತಾನೆ ಮಾಡೋದು. ಮದುವೆಗೆ ಸೀರೆ, ಕಿಟ್ಟಿ ಪಾರ್ಟಿಗೆ ಚೂಡಿದಾರ್, ಬೇರೆ ಎಲ್ಲಾ ಟೈಮಲ್ಲೂ ನೈಟಿ ಹಾಕೋದು.
ಅಜ್ಜಿ : ಅದೆಲ್ಲಾ ಈ ಕಾಲದಲ್ಲಿ. ಆಗೆಲ್ಲಾ ನೈಟಿ-ಡೈಟಿ ಏನೂ ಇರಲಿಲ್ಲ. ಮುಂದೆ ಕೇಳು. ರಾಜಕುಮಾರನಿಗೆ ಆ ಹುಡುಗಿಯನ್ನು ನೋಡಿ ಅದೇನೋ ನೀವ್ ಹೇಳ್ತೀರಲ್ಲ 'ಲವ್' ಅಂತ, ಹಾಗೆ ಆಯ್ತು. ಅವನು ಆ ಹುಡುಗಿಗೆ ಕುಡಿಯುವುದಕ್ಕೆ ನೀರು ಕೊಡು ಅಂತ ಬೊಗಸೆಯೊಡ್ಡಿದ. ಅವಳು ನಾಚಿಕೆಯಿಂದ ಇವನನ್ನು ನೋಡೂತ್ತಾ ನೀರು ಸುರಿದಳು. ಅವನು ನೀರು ಕುಡಿದ ಮೇಲೆ ಅವಳನ್ನು ಕೇಳಿದ 'ನೀನು ನನ್ನನ್ನು ಮದುವೆಯಾಗುತ್ತೀಯಾ?' ಎಂದು. ಹುಡುಗಿ ಹೇಳಿದಳು 'ನನ್ನ ಅಪ್ಪನನ್ನು ಕೇಳಬೇಕು' ಎಂದು
(ಮಕ್ಕಳು ಮುಸಿ ಮುಸಿ ನಗುತ್ತವೆ).
ಆಮೇಲೆ ಅವಳು ಅವನನ್ನು ತನ್ನ ತಂದೆಯ ಬಳಿಗೆ ಕರೆದುಕೊಂಡು ಹೋದಳು. ರಾಜಕುಮಾರ ಕೇಳಿದ 'ನಾನು ನಿಮ್ಮ ಮಗಳನ್ನು ಮದುವೆಯಾಗುತ್ತೇನೆ' ಎಂದು. ಅದಕ್ಕೆ ಆ ಹುಡುಗಿ ಅಪ್ಪ ಹೇಳಿದ 'ನನ್ನ ಮಗಳನ್ನು ಮದುವೆಯಾಗ ಬೇಕಾದರೆ ಒಂದು ಪಂದ್ಯ ಗಲ್ಲಬೇಕು. ಎದುರುಗಡೆ ಗೋಡೆಗೆ ಒಂದು ಚಕ್ರ ಕಟ್ಟುತ್ತೇನೆ. ಅದರ ಮಧ್ಯಕ್ಕೆ ಸರಿಯಾಗಿ ಬಾಣ ಹೊಡೀಬೇಕು'
ಮೊಮ್ಮಗ : ಅಂದ್ರೆ ಒಲಂಪಿಕ್ ಗೇಮ್ಸ್ ನಲ್ಲಿ ಶೂಟಿಂಗ್ ಗೇಮ್ ಅಂತ ಇರುತ್ತಲ್ಲ ಆ ತರಾನ?
ಅಜ್ಜಿ : ಹೂಂ ಹೂಂ ಹಾಗೇ ಅನ್ಕೊ. ದೊಡ್ಡಮೈದಾನದಲ್ಲಿ ಪಟ್ಟಣದ ಜನರನ್ನೆಲ್ಲಾ ಸೇರಿಸಿದ. ಒಂದು ಕಂಭಕ್ಕೆ ಚಕ್ರ ಕಟ್ಟಿದ. ರಾಜಕುಮಾರ ಅದಕ್ಕೆ ಗುರಿಯಿಟ್ಟು ಬಾಣ ಬಿಟ್ಟು ಗೆದ್ದೇ ಬಿಟ್ಟ. ಎಲ್ಲಾ ಜೈಕಾರಾ ಹಾಕಿದರು. ಆಮೇಲೆ ಹುಡುಗಿಯ ಅಪ್ಪ ಪಟ್ಟಣವನ್ನೆಲ್ಲಾ ತಳಿರು ತೋರಣಗಳಿಂದ ಅಲಂಕರಿಸಿ, ಚಪ್ಪರ ಹಾಕಿ ಅವನ ದೊಡ್ಡ ಮನೆಯನ್ನು ಅಲಂಕರಿಸಿ ಮದುವೆ ತಯಾರಿ ಮಾಡುತ್ತಾನೆ.
ಮೊಮ್ಮಗಳು : ಯಾಕಜ್ಜಿ ಮನೆಯಲ್ಲಿ ಮದುವೆ? ಚೌಲ್ಟ್ರಿನಲ್ಲಿ ಅಲ್ಲವಾ ಮದುವೆ ಮಾಡೋದು? ಅದಕ್ಕೆ ಮುಂಚೆ ಮೆಹಂದಿ, ಸಂಗೀತ ಇವೆಲ್ಲಾ ಬೇಕಲ್ಲವಾ?
ಅಜ್ಜಿ : ಇಲ್ಲಮ್ಮ ಆ ಕಾಲದಲ್ಲಿ ಅದೆಲ್ಲಾ ಇರಲಿಲ್ಲ. ದೇವರ ಪೂಜೆ, ವರನ ಪೂಜೆ, ಧಾರೆಯೆರೆಯುವುದು, ಮುಂತಾದ ಶಾಸ್ತ್ರಗಳನ್ನು ಮಾಡಿ ಹುಡುಗಿಯನ್ನು ಗಂಡನ ಮನೆಗೆ ಕಳುಹಿಸುತ್ತಿದ್ದರು.
ಮೊಮ್ಮಗ : ಎಷ್ಟು ದಿನ ಅವರು ಜೊತೆಯಲ್ಲಿದ್ದರು? ಡೈವೋರ್ಸ್ ಆಗ ಬೇಕಲ್ಲವಾ? ಅದು ಯಾವಾಗ ಆಯಿತು?
ಅಜ್ಜಿ : ಹೋಗೋ ಹುಚ್ಚು ಮುಂಡೆಗಂಡ. ಅವರು ನೂರು ಕಾಲ ಸುಖವಾಗಿ ಇದ್ದರು.
ಮೊಮಕ್ಕಳು ಇಬ್ಬರೂ : ಅಜ್ಜಿ ನಿನ್ನ ಕಥೆ ಫೆಂಟಾಸ್ಟಿಕ್. ಒಂದು ಸಿನಿಮಾ ತೆಗೆದರೆ ಸೂಪರ್ ಹಿಟ್ ಆಗುತ್ತೆ.
ಇಲ್ಲೆಗೆ ಅಜ್ಜಿ ಕಥೆ ಮುಗಿಯುತ್ತದೆ. ಒಂದು ತಿದ್ದುಪಡಿ. ಇದು ಅಜ್ಜಿ ಕಥೆಯಲ್ಲ!!. ಮುತ್ತಜ್ಜೆಯ ಕಥೆ. ಏಕೆಂದರೆ ಈಗಿನ ಅಜ್ಜಿ ಯರೆಲ್ಲಾ ಆಂಟಿಯಾಗಿರುತ್ತಾರೆ.

Comments
Post a Comment