ನಿಮ್ಮದು ಯಾವ ಪಂಕ್ತಿ?
ಹಾಸ್ಯ ಲೇಖನ - ಅಣಕು ರಾಮನಾಥ್
ಮದುವೆಯ ಮನೆಯ ಊಟದ ಸಾಲಲಿ ಬಡಿಸೋವ ಬಂದ
ವೇಗದಿ ಬಡಿಸೋವ ಬಂದ|
ಸಾಗುತ ಭರದಿ ಎಲೆಸಾಲುಗಳಲಿ ಭಕ್ಷ್ಯವಾ ತೂರ್ದ
ಜನರಿಗೆ ಭಕ್ಷ್ಯವಾ ತೂರ್ದ||
ಎಲೆಗಳ ಮೇಲೆ ಲೋಟಗಳೊಳಗೆ ಖಾದ್ಯಗಳಾ ತಂದು
ಬಿಸುಟನು ಖಾದ್ಯಗಳಾ ತಂದು|
ಯಾರಿಗೆ ಸಾಧ್ಯ ಈ ಪರಿ ವೇಗದಿ ಖಾದ್ಯವ ತಿಂದು
ಮುಗಿಸಲು, ಖಾದ್ಯವಾ ತಿಂದು|
ಇಡಿ ಸಾಲುಗಳ ಕೊರಳೊಳಗಿಂದ ರೋದನೆಯ ಹಾಡು
ಹೊರಟಿತು ರೋದನೆಯ ಹಾಡು
ಇಂಥ ಊಟವು ಅಯ್ಯೊ ಆಯಿತು ತೊಟ್ಟಿಯ ಪಾಲು
ಎಲ್ಲವೂ ತೊಟ್ಟಿಯ ಪಾಲು|
ಎಂದು ಬರೆಯುತ್ತಿದ್ದರೋ ಏನೋ. ಮೊನ್ನೆ ಹೋದ ಸಮಾರಂಭವೊಂದರಲ್ಲಿ ಬಡಿಸುವ ಹಿಂಡು ತೋರಿದ ಚಾಕಚಕ್ಯತೆಗೆ ಬೆರಗಾಗಿ, ಅವರ ಕೌಶಲವನ್ನು ಕಂಡ ಸರ್ವಲಿಂಗಗಳೂ ಬೆಚ್ಚಿ ಅಹಹಹ ಎಂದವು.
ವೈಭವ್ ಸೂರ್ಯವಂಶಿ ಎಂಬ ರಭಸದ ದಾಂಡಿಗ(Batsman)ನ ವೇಗದಲ್ಲಿ ಬಡಿಸಲು ಆರಂಭಿಸಿದ ಬಾಣಸಿಗಪಡೆ ‘ಫ್ರಂ ಉಪ್ಪು ಟು ಮೊಸರು ಇನ್ ಫೈವ್ ಮಿನಿಟ್ಸ್’ ಎಂಬ ಪಂದ್ಯವಾಡುತ್ತಿರುವಂತಿತ್ತು. “ನಿಧಾನಕ್ಕೆ ಕೂತ್ಕೊಳಿ” ಪಡೆಯು ಇನ್ನೂ ಮೊದಲ ಸಾಲಿನ ಮಂದಿಗೆ ತಮ್ಮ ಗಿಳಿಪಾಠ ಒಪ್ಪಿಸುವಷ್ಟರಲ್ಲಿ ಎಲೆ ಎತ್ತುವ ಮಂದಿ ಆ ತುದಿಯಲ್ಲಿ ಕಾಣಿಸಿಕೊಂಡರು. ನನ್ನ ಪಕ್ಕದಲ್ಲಿ ಕುಳಿತಿದ್ದ ಸಂಗೀತಗಾರರೊಬ್ಬರು “ಊಟದ್ಮನೆ ಹಾಳಾಯ್ತು. ವೇಗ ನೋಡ್ರೀ!
ಈ ಪರಿಯ ಸ್ಪೀಡಾವ ಹೋಟೆಲಲು ನಾ ಕಾಣೆ;
ಬಹಳ ಜನರಿಹ ಚೌಲ್ಟ್ರೀಯೊಳಲ್ಲದೇ ||
ಸರಿವ ರಭಸದಿ ನೋಡೆ ಅಡ್ಡದಿಡ್ಡಿಯ ಚಲನ
ಸುರಿವ ಪರಿಯಲಿ ನೋಡೆ ಕಾರಂಜಿಯು
ಗುರಿಯೊ ಎಲೆಯೆಡೆ ನೋಡೆ ಪಾರ್ಥನಂಥವನಯ್ಯ
ಗುರಿಯ ಮುಟ್ಟಲು ಓಡೆ ಸಿಗ್ನಲ್ ಜಂಪ್ ಗುರುವು ||
ಗಗನದಲಿ ಸಂಚರಿಪ ಡ್ರೋನು ವೇಗದಿ ಚಲಿಪ
ಡ್ರೋನ್ ಬಾಂಬನೆಸೆವಂತೆ ಲಾಡು ಎಸೆವ
ಹುಳಿ ಸುರಿವುದನು ನೋಡೆ ಅಹ ಸುನಾಮಿಯೆ ಇವನು
ಮಿಗಿಲಾದ ಮಾಣಿಗಳಿಗೀ ವೇಗವುಂಟೇ ||
ಎಂದು ರಾಗರಾಗವಾಗಿ ಹಾಡತೊಡಗಿದರು. ಅವರ ಪಕ್ಕದಲ್ಲಿ ಕುಳಿತಿದ್ದವರು ವಿಮರ್ಶಕರಂತೆ. “ಸ್ವಾಮಿ, ತಾವು ಮೂರನೆಯ ಕಾಲದಲ್ಲಿ ಹಾಡಿದ್ದರೂ ಅದು ಇಲ್ಲಿನ ಪರಿಸ್ಥಿತಿಗೆ ವಿಳಂಬಕಾಲವೇ ಆಯಿತು. ಇಂತಹ ಸ್ಥಳಗಳಲ್ಲಿ ಉಪ್ಪು-ಮೊಸರುಗಳ ಮಧ್ಯಮಾವಧಿಯಲ್ಲಿ ಹಾಡು ಮುಗಿಸಬೇಕಾದರೆ ಆರನೇ ಕಾಲದಲ್ಲಿ ಹಾಡಬೇಕು” ಎನ್ನುತ್ತಾ ಉಪ್ಪಿಗೆ ಮೊಸರು ಕಲೆಸಿಕೊಂಡು ತಿಂದೆದ್ದರು.
ಬಡಿಸಲ್ಪಟ್ಟ ಐಟಂಗಳು ಎಲೆಯಲ್ಲಿ ಹರಡಿಕೊಳ್ಳುವುದನ್ನು ನೋಡುವುದೂ ಒಂದು ಸೊಗಸೇ. ಮೊದಲು ಬಡಿಸಲ್ಪಡುವ ಪಾಯಸವು ತನ್ನದೇ ಏಕಚಕ್ರಾಧಿಪತ್ಯ ಎನ್ನುವಂತೆ ಹಸುರಿನ ಎಲೆಯ ಮೇಲೆ ವರ್ಣಮಯವಾಗಿ ಶೋಭಿಸುತ್ತಾ ಅಮೀಬಾದ ಆಕಾರದಲ್ಲಿ ಹರಡಿಕೊಳ್ಳುತ್ತದೆ. ನಂತರ ಎರಚಲ್ಪಟ್ಟ ಉಪ್ಪು ಸ್ಟಾರ್ ಷೇಪಲ್ಲಿ ಹರಡಿಕೊಂಡು ತಿನ್ನುವವರ ‘ನಕ್ಷತ್ರಫಲ’ವನ್ನು ಹೇಳಲು ಉದ್ಯುಕ್ತವಾಗಿರುವಂತೆ ಕಾಣುತ್ತದೆ. ಕೋಸಂಬರಿಯ ಪುಟ್ಟ ಪುಟ್ಟ ಗುಪ್ಪೆಗಳು ‘ಇನ್ನಷ್ಟು ಬೇಕೆನ್ನ ಚಪಲಕ್ಕೆ ರಾಮಾ’ ಎಂಬ ಹಾಡನ್ನು ಪ್ರೋತ್ಸಾಹಿಸುತ್ತವೆ. ಪಲ್ಯದ ಎರಡು ಲಿಲಿಪುಟಿಯನ್ ಗುಡ್ಡಗಳು ಎಲೆಯ ಇತ್ತಣ ಭಾಗವನ್ನು ವೀಕ್ಷಿಸಲು ಕುಳಿತ ಸಾಕ್ಷಿಗುಡ್ಡೆಗಳಂತೆ ಕಾಣುತ್ತವೆ. ಕೆಲವು ಊಟಸ್ಥರು ಆ ಸಾಕ್ಷಿಗುಡ್ಡೆಗಳತ್ತ ಅಸ್ಪೃಶ್ಯತೆಯ ಧೋರಣೆ ತೋರುವುದರಿಂದ ಅವೆರಡೂ ಇಡೀ ಊಟಕ್ಕೆ ಸಾಕ್ಷಿಯಾಗುತ್ತವೆ.
ಹಿಂದೆಲ್ಲ ಇಂತಹದ್ದಾದಮೇಲೆ ಇಂತಹದ್ದೇ ಐಟಂ ಎಂದು ತಿಳಿಯುತ್ತಿತ್ತು. ಈಗಿನ ಬಡಿಸುಗಾರರ ಬಡಿಸುವಿಕೆಯ ಮುಂದಿನ ಐಟಂ ಇಂತಹದ್ದೇ ಎಂದು ಬ್ರಹ್ಮಾಂಡ ಗುರೂಜಿಗೂ ಹೇಳಲು ಕಷ್ಟವಾದೀತು. ಆ ವಿಷಯದಲ್ಲಿ ಮಠದ ಊಟವೇ ಬೆಸ್ಟು. ಬಡಿಸುವಿಕೆಯ ಪ್ರಮಾಣದ ವಿಷಯದಲ್ಲಿಯೂ ಮಠಕ್ಕೆ ಹೋಲಿಸುವ ಸಮಾರಂಭ ಮತ್ತೊಂದಿರದು. ಆಹಾ! ಕೂಟಿಗೊಂದು ಬಿಳಿಯ ಗುಡ್ಡ, ಸಾರಿಗೊಂದು ಬಿಳಿಯ ಗುಡ್ಡ, ಮಜ್ಜಿಗೆಗೆ ಮತ್ತೊಂದು ಗುಡ್ಡ. ಸರ್ಕಾರವು ತನ್ನ ಪ್ರಾಜೆಕ್ಟುಗಳಿಗೆಂದು ಪಶ್ಚಿಮ ಕರಾವಳಿಯ ಗುಡ್ಡಗಳನ್ನು ತರಿತರಿದು ಸಂತೋಷಿಸುವಂತೆಯೇ ಇಲ್ಲಿನ ಭಕ್ಷಣರಸಿಕರು ಅನ್ನದ ಗುಡ್ಡಗಳನ್ನು ನಿರ್ನಾಮ ಮಾಡುವರು. ಇಲ್ಲಿನ ಬಡಿಸಾಟವನ್ನು “ಓದನ ಗಿರಿಯೊ; ಸಾರಿನ ಹೊಳೆಯೊ; ಸುಧೆಯೊ ಮಠಗಳ ಭೋಜನವೊ; ಹಸಿದಿಹ ಜನಗಳ ಉದರವ ತುಂಬುವ ಸಿರಿಭರ ಸುರನುತ ರುಚಿಯೊ ಅಹಾಹಹ” ಎಂದು ‘ಜೇನಿನ ಹೊಳೆಯೊ ಹಾಲಿನ ಮಳೆಯೊ’ ಹಾಡಿನ ಧಾಟಿಯಲ್ಲಿ ವರ್ಣಿಸುವುದೇ ಸೂಕ್ತ.
ಕಲ್ಯಾಣಮಂಟಪಕ್ಕೆ ಮರಳೋಣ. ಇಲ್ಲಿನ ಜನಗಳ ಊಟದ ಪರಿಯೂ ಉಲ್ಲೇಖಾರ್ಹವೇ. ಕೆಲವರು “ರೀಸೈಕ್ಲಿಂಗ್” ಪದ್ಧತಿಯನ್ನು ಮೆಚ್ಚುವ ಪ್ರವೃತ್ತಿಯವರಾಗಿದ್ದು, ಎಲೆಗೆ ಬಿದ್ದುದೆಲ್ಲವನ್ನೂ ಕಬಳಿಸಿ, ಮೊಸರನ್ನದ ಕಡೆಕಡೆಯ ಪಳಿಯುಳಿಕೆಗಳನ್ನು ಹೆಬ್ಬೆಟ್ಟಿನ ತುದಿಯಿಂದ ಗೀರುಗೀರುಗಳಾಗಿ ಮೇಲೆತ್ತಿ ಭುಂಜಿಸಿ, ಎಲೆಯಲ್ಲಿ ಬಡಿಸಿದ ಕುರುಹೇ ಇಲ್ಲದಂತಾಗಿಸಿ, “ತೊಳೆದು ಮುಂದಿನ ಪಂಕ್ತಿಗೆ ಹಾಕಿ” ಎಂಬ ಸೈಲೆಂಟ್ ರಿಕ್ವೆಸ್ಟನ್ನು ಮುಂದಿರಿಸಬಲ್ಲವರು. ಇನ್ನು ಕೆಲವರಿಗೆ ಎಲೆಯ ಮೇಲಿನ ಸಾಲು ಷೋಕೇಸ್ ಇದ್ದಂತೆ. ಕೆಳಸಾಲಿನಲ್ಲಿ ಅವರ ‘ತಿನ್ನಬಲ್ ಐಟಂ’ಗಳನ್ನು ಎಳೆದುಕೊಂಡು ಮುಗಿಸಿ, ತಿನ್ನಲಾಗದ/ತಿನ್ನಬಾರದ ಐಟಂಗಳನ್ನು ಸಾಲಾಗಿ ಮೇಲ್ವರ್ಗದಲ್ಲಿ ಜೋಡಿಸಿಬಿಡುತ್ತಾರೆ. ಎಲ್ಲೋ ಕೆಲವರು ಮಾತ್ರ ಸರ್ವಧರ್ಮ ಸಮನ್ವಯದಂತೆ ಸರ್ವಖಾದ್ಯ ಸಮನ್ವಯಕ್ಕೆ ಮನಸೋತು ಅತ್ತಣ ಲವಣದಿಂ ಇತ್ತಣ ಪಾಯಸ; ಮೂಡಣ ಪಲ್ಯದಿಂ ಪಡುವಣ ಚಿತ್ರಾನ್ನದವರೆಗೆ ಎಲ್ಲವನ್ನೂ ಅನ್ನದ ಬ್ರಹ್ಮಸ್ಥಾನಕ್ಕೆ ತಂದು ಮೇಳವಿಸಿ ಹೋಲ್ಸೇಲಾಗಿ ಸೇವಿಸುತ್ತಾರೆ. ಹೀಗೆ ತಿನ್ನುವವರನ್ನು ಕಂಡಾಗಲೆಲ್ಲ ನನಗೆ ಭಿಕ್ಷುಕರ ಜೋಳಿಗೆಯೇ ನೆನಪಾಗುವುದು. ಅಲ್ಲಿಯೂ ರಿಂದಮ್ಮನ ಮನೆಯ ಪಳಿದ್ಯಕ್ಕೆ ಪದ್ಮಕ್ಕನ ಮನೆಯ ಸಾರು, ಚಿತ್ರಮ್ಮನ ಮನೆಯ ಪಲ್ಯ, ವನಜಾಕ್ಷಕ್ಕನ ಮನೆಯ ಚಿತ್ರಾನ್ನ ಎಲ್ಲವೂ ಸೇರಿರುತ್ತದಲ್ಲ!
ಊಟಕ್ಕೆ ಕೂರುವ ವಿಷಯದಲ್ಲಿ ಬಗೆಹರಿಯದ ವಿಷಯವೆಂದರೆ ಯಾವ ಪಂಕ್ತಿಯಲ್ಲಿ ಕುಳಿತುಕೊಳ್ಳುವುದು ಉತ್ತಮ ಎನ್ನುವುದು. ಅಂದೊಮ್ಮೆ ಸಕಲ ತಾಜಾ ಖಾದ್ಯಗಳುಳ್ಳ ಮೊದಲ ಪಂಕ್ತಿಯೇ ಪಂಕ್ತಿಗಳೊಳುತ್ತಮವು ಎಂದೆಣಿಸಿ ಕುಳಿತೆ. ಫಸ್ಟ್ ಫ್ಲೋರ್ ಐಟಂಗಳಾದ ಪಲ್ಯಾದಿಕೋಸಂಬರಿಗಳು (ಶ್ವೇತಾಂಬರಿ ಎಂದರೆ ಶ್ವೇತವಸ್ತ್ರವನ್ನು ಧರಿಸಿದವಳು; ಕೋಸಂಬರಿ ಎಂದರೆ ಕೋಸನ್ನೇ ಬಟ್ಟೆಯಾಗಿ ಧರಿಸಿದವಳೆ?) ಸರಿಯಿದ್ದವು. ಗ್ರೌಂಡ್ ಫ್ಲೋರಿನ ಪಾಯಸವೂ ಸರಿಯಿತ್ತು. ತೊಂದರೆ ಬಂದದ್ದು ಅನ್ನದಲ್ಲಿ. ಧ್ಯಾನಸ್ಥ ವಟುಗಳಂತೆ ಬಡಿಸಿದೆಡೆಯೇ ಅಲ್ಲಾಡದೆ ಕುಳಿತುಕೊಳ್ಳಬೇಕಾದ ಅನ್ನವು ಬ್ರಿಗೇಡ್ ರೋಡಿನ ಚಂಚಲೆಯ ಮನಸ್ಸಿನಂತೆ ಹರಿಯತೊಡಗಿ ಎಲೆಯ ಮೇಲೊಂದು ಫ್ಲೋ ಚಾರ್ಟ್ ನಿರ್ಮಿಸಿತು. “ಮುಂದೇನು? ಗಟ್ಟಿಯಾದ ಹುಳಿಗೆ ನೀರಾದ ಅನ್ನವನ್ನು ಕಲೆಸಿಕೊಳ್ಳುವುದೆ?” ಎಂಬ ಪ್ರಶ್ನೆ ಉದ್ಭವಿಸಿತು. “ಇಂತಹ ನೀರನ್ನವನ್ನು ಲೋಟದಲ್ಲಿ ಬಡಿಸದೆ ಎಲೆಯಲ್ಲಿ ಸುರಿವರಲ್ಲಾ!” ಎಂಬ ಸಾತ್ವಿಕ ಸಿಟ್ಟೂ ಮೂಡಿತು. ಮುಂದಿನ ಪಂಕ್ತಿಯವರಿಗೆ ಬಡಿಸುವಷ್ಟರಲ್ಲಿ ಲಿಕ್ವಿಡ್ ಸ್ಟೇಟಿನ ಅನ್ನವನ್ನು ಸಾಲಿಡ್ ಸ್ಟೇಟಿಗೆ ಮಾರ್ಪಡಿಸಿರುವುದು ಕಂಡುಬಂದಿತು. ಅಂದಿನಿಂದಲೇ ಮೊದಲ ಪಂಕ್ತಿಯ ಊಟವು ರುಚಿಗ್ರಾಹಿಗಳಿಗೆ ತರವಲ್ಲವೆಂದು ನಿರ್ಧರಿಸಿದೆ.
ಎರಡನೆಯ ಪಂಕ್ತಿಯ ಊಟವು ಸಾಮಾನ್ಯವಾಗಿ ಒಳಿತೆನಿಸಿದರೂ ಕಡಿಮೆ ಜನಗಳಿದ್ದ ಸಮಾರಂಭವೊಂದರಲ್ಲಿ ಎರಡನೆಯ ಪಂಕ್ತಿಗೆ ಕೂತಾಗ ಮೊದಲನೆಯ ಪಂಕ್ತಿಯಲ್ಲಿದ್ದ ಐಟಂಗಳು, ಬಿಬಿಎಂಪಿಯವರು ಹಾಕುವ ರಸ್ತೆಯು ಮಳೆಗಾಲದಲ್ಲಿ ಮಾಯವಾಗುವ ಹಾಗೆಯೇ, ಮಂಗಮಾಯವಾಗಿದ್ದವು. ಮೊದಲ ಪಂಕ್ತಿಯ ಮಂದಿ ಅವರಿಗೆ ದೊರೆತ ಸಿಹಿಯ ಬಗ್ಗೆ ಗುಣಗಾನ ಮಾಡಿದಷ್ಟೂ ನನ್ನ ಹೊಟ್ಟೆಯಲ್ಲಿ ಖಾರಮಿಶ್ರಿತ ಹುಳಿ ಹಿಂಡಿದಂತಾಗುತ್ತಿತ್ತು. ಮತ್ತೆ “ಯಾರು ಹಿತವರು ನಿನಗೆ ಈ ಪಂಕ್ತಿಗಳೊಳು?” ಎಂಬ ಪ್ರಶ್ನೆ ಮೂಡಿತು.
ಆದರೆ ಇತ್ತೀಚಿನ ಪ್ರಸಂಗವೊಂದು ಕಡೆಯ ಪಂಕ್ತಿಯೇ ಉತ್ತಮವೆಂದು ಕಂಡುಕೊಳ್ಳಲು ಪೂರಕವಾಯಿತು. ಬಹುಜನಗಳಿದ್ದ ಸಮಾರಂಭದ ಮೂರನೆಯ ಪಂಕ್ತಿಯದು. ಬೌಲಿಂಗ್ ಮಷೀನಿನಿಂದ ಒಂದೇ ಸಮನೆ ಚೆಂಡುಗಳು ಎಸೆಯಲ್ಪಡುವಂತೆ ಕ್ಷಿಪಣಿಯೋಪಾದಿಯೊಳ್ ವೇಗಿಗಳೆಸೆದ ಖಾದ್ಯಗಳನ್ನು ಬಿದ್ದಲ್ಲಿಂದ ಆರಿಸಿಕೊಂಡು ತಿನ್ನುತ್ತಿದ್ದೆ. ತುಪ್ಪದ ಸದ್ದು ಕೇಳಿಬಂದು ಅನ್ನಕ್ಕೆ ಸಾರನ್ನು ಕಲೆಸಿಕೊಳ್ಳುವಷ್ಟರಲ್ಲಿ ಭುಜದ ಬಳಿ ನೆರಳಾಡಿತು. ಹಿಂತಿರುಗಿ ನೋಡಿದರೆ ಎಂದಿನಿಂದಲೋ ಹಸಿದಿದ್ದು, ಅನ್ನವನ್ನು ಕಂಡೊಡನೆ ಲಾಲಾರಸವನ್ನು ಸುರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಕಂಡುಬಂದ.
ಅತ್ತಿತ್ತ ನೋಡಿದೆ. ಅಕ್ಕಪಕ್ಕದವರ ಭುಜದ ಮೇಲೂ ಹಸಿದ ಬೇತಾಳದ ನೆರಳು ಬಿದ್ದಿತ್ತು. ಸಾರನ್ನವನ್ನು ಮುಗಿಸಿ ಮೊದಲ ಸಿಹಿ ತಿನ್ನುವಷ್ಟರಲ್ಲಿ ಭುಜಬಲನ(ಬಲಭುಜದ ಬಳಿ ಇದ್ದನಲ್ಲ!) ಹಸಿವುಸಿರು ನನ್ನ ಹೆಕ್ಕತ್ತನ್ನು ಸುಡುತ್ತಿತ್ತು. ಎರಡನೆಯ ಸಿಹಿ ಹಾಕಿಸಿಕೊಂಡಾಗ ಹಸಿವುಸಿರು(ಹಸಿವಿನಿಂದ ಬಿಸಿಯಾದ ಉಸಿರು) ಮತ್ತಷ್ಟು ಹತ್ತಿರವಾಗಿ ಕುಳಿತುಕೊಳ್ಳಲು ಇರುಸುಮುರುಸಾಯಿತು. ಮಜ್ಜಿಗೆಗೆ ಅನ್ನ ಬರುವಷ್ಟರಲ್ಲಿ ಬಲಭುಜನು ನನ್ನ ಮುಖದ ಸಮಕ್ಕೆ ತನ್ನ ಮುಖವನ್ನು ತಂದಿದ್ದ, “ಇಂದಿಗಿಷ್ಟೇ ಲಭ್ಯ”ವೆಂದೆಣಿಸಿದ ನಾನು ಎದ್ದು “ಮಜ್ಜಿಗೆ ಅನ್ನವನ್ನು ನೀವೇ ಮುಗಿಸಿ ಮುಂದಿನ ಪಂಕ್ತಿಗೆ ಹಾಗೆಯೇ ಮುಂದುವರಿಯಿರಿ” ಎನ್ನುತ್ತಾ ಹೊರಬಿದ್ದೆ.
ಕಡೆಯ ಪಂಕ್ತಿಯಲ್ಲಿ ಐಟಂ ಕಡಿಮೆಯಿದ್ದೀತು. ಆದರೆ ವಿಕ್ರಮನ ಭುಜವನ್ನೇರಿದಂತಹ ಆಹಾರಾತುರ ಬೇತಾಳಗಳು ಇರುವುದಿಲ್ಲ. ಕಾಗೆಗಳಾದರೂ ಎಲೆಯು ಹೊರಬಂದು ಬೀಳುವವರೆಗೆ ಕಾಯುತ್ತವೆ. ಇವರು ಕಾಗೆಗಳಿಗಿಂತಲೂ ಫಾರ್ವರ್ಡ್!
ಇನ್ನುಮುಂದೆ ನಾನೆಲ್ಲಿ ಹೋದರೂ ಲಾಸ್ಟ್ ಪಂಕ್ತಿಯವನೇ. ನೀವು?

ಕರ್ನಾಟಕದ ಕರಾವಳಿ ಭಾಗದಲ್ಲಿ ೨೦ ವರ್ಷ ಹಿಂದೆ ನನ್ನ ಸ್ನೇಹಿತನ ಮಾಡುವೆ ಸಮಾರಂಭದಲ್ಲಿ ಈ ಥರದ situation ಆಗಿತ್ತು. ಆಗ ಕೊನೆ ಪಂಕ್ತಿ ಉತ್ತಮ ಎಂದು ನಿರ್ಧರಿಸಿದ್ದೆ. ಆದರೆ ಇತ್ತೀಚಿಗೆ ಬೆಂಗಳೂರಿನಲ್ಲೂ ಹಿಂದೆ ನಿಲ್ಲುವ ಕ್ರಮ ಬರತೊಡಗಿದ್ದು buffet ಸಿಸ್ಟಮ್ ಒಳ್ಳೆದೇನೋ ಅನ್ನಿಸುತ್ತೆ.
ReplyDeleteನೀವು ಕೆಲವು popular ಕೃತಿಗಳನ್ನು ಇಲ್ಲಿ ಸಂದರ್ಭಕ್ಕೆ ಮಾರ್ಪಡಿಸಿದ್ದು ಸೂಪರ್, ಹಾಡುಗಾರರು ರಾಗದಲ್ಲಿ ಹಾಡಬಹುದು !!