ಮಗುವು ಹೊರಳಿತು ಕೊರಳ ತೆರೆಯಿತು…

 ಮಗುವು ಹೊರಳಿತು ಕೊರಳ ತೆರೆಯಿತು…

ಹಾಸ್ಯ ಲೇಖನ - ಅಣಕು ರಾಮನಾಥ್ 



ಆಫ್ರಿಕಾದ ಅದಾವುದೋ ಮೂಲೆಯಲ್ಲಿ ಒಸಾಬಾ ಎಂಬ ಬುಡಕಟ್ಟಿದೆಯಂತೆ. ಅವರು ಬೇಟೆಗೆ ಹೋದಾಗ ಮಾಡುವ ಆರ್ಭಟಕ್ಕೆ ಹುಲಿಯೂ ದಂಗಾಗಿ ಘರ್ಜಿಸುವುದನ್ನು ಮರೆಯುತ್ತದಂತೆ.

ಒಸಾಬಾಗಳ ಘರ್ಜನೆ ಆ ತೊಟ್ಟಿಲಿನಿಂದ ಹೊರಟ ಸದ್ದಿಗೆ ಹೋಲಿಸಿದರೆ ತಾನ್‌ಸೇನನ ಸಂಗೀತ!

ಮಗುವು ಹೊರಳಿತು ಕೊರಳ ತೆರೆಯಿತು

ಕೇಳು ದಾದಿಯೆ ಎಚ್ಚರ

ಕಿವಿಗೆ ಹತ್ತಿಯ ಬಲದಿ ತುರುಕುತ

ಕೂರು ಶಿಶುವಿನಿಂ ದೂರಕೆ

ಎಂದು ತಂದೆತಾಯಿಯರು ಶಿಶುಪಾಲನ… ಕ್ಷಮಿಸಿ… ಶಿಶು ಪಾಲನಾ ಮಂದಿಗೆ ಕಿವಿಮಾತು ಹೇಳುತ್ತಿದ್ದರು. ಇಂತಹ ಶಿಶುಗಳ ಶಬ್ದಸ್ಫೋಟದ ವಿರುದ್ಧ ತಮ್ಮನ್ನು ಕಾಪಾಡಿಕೊಳ್ಳಿರೆಂದು ಸಲಹೆ ನೀಡುತ್ತಾ “ಮೇಜರ್‌ ಇನ್ಷುರೆನ್ಸ್‌ ಕಂಪನಿ”ಯು “ಚೈಲ್ಡ್‌ ಸ್ಕೇರ್‌ ಇಯರ್‌ ಇನ್ಷುರೆನಸ್‌ ಪಾಲಿಸಿ” ಎಂಬ ಹೊಸ ಯೋಜನೆಯೊಂದನ್ನು ಹಮ್ಮಿಕೊಂಡಿತ್ತು.

ಅಂದು ಯಾವುದೇ ದಾದಿ ಇಂತಹ “ಸೌಂಡ್‌ ಪಾರ್ಟಿ”ಯನ್ನು ನೋಡಿಕೊಳ್ಳಲು ಸಿಗದ ಕಾರಣ, ವಿದೇಶದ ನೆಲದಲ್ಲಿ “ಬೈ ಬುಕ್‌ ಆರ್‌ ಲಕ್”‌ ಸಂಪಾದನೆ ಮಾಡುವೆನೆಂದು ಹಠ ತೊಟ್ಟು ಬಂದು, ಸಿಕ್ಕಸಿಕ್ಕ ಕೆಲಸವನ್ನೆಲ್ಲ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿಯನ್ನು ತಲುಪಿದ್ದ ಪಾಂಡುವಿನ ಹೆಗಲಿಗೆ ಆ ಮಗುವನ್ನು ಫಾರ್‌ ಎ ಫ್ಯೂ ಅವರ್ಸ್‌ ಮ್ಯಾನೇಜ್‌ ಮಾಡುವ ಕೆಲಸ ಬಿದ್ದಿತ್ತು.

ಮಗುವಿನ ಮಮ್ಮಿ ಡ್ಯಾಡಿಗಳು ಓಲಾ, ಊಬರ್‌ಗಳ ಪಾಲಾದಾಗ ಶಿಶು ಇನ್ನೂ ತೊಟ್ಟಿಲಲ್ಲೇ ಸೊಗಸಾಗಿ ನಿದ್ರಿಸುತ್ತಿತ್ತು. ತುಟಿಯಲ್ಲಿ ಬಾಲಗೋಪಾಲನ ನಗೆ ಹರಡಿತ್ತು. ಆ ನಗೆ “ಮುಂದೈತೆ ನಿನಗೆ ಸರಿಯಾದ ಹಬ್ಬ” ಎನ್ನುವುದರ ಮುನ್ಸೂಚನೆಯಾಗಿತ್ತೆಂದು ಆಗ ಪಾಂಡುವಿಗೆ ಹೊಳೆದಿರಲಿಲ್ಲ.

ಆರೇಳು ನಿಮಿಷಗಳಲ್ಲಿ ನಗುವಿನ ಹೊರತಾಗಿ ಮಗು ಮಿಸುಕದೆ ಮಲಗಿದ್ದುದನ್ನು ಕಂಡು ಪಾಂಡುವು “ವೈ ನಾಟ್‌ ಎ ಕೆರಿಯರ್‌ ಇನ್‌ ಚೈಲ್ಡ್‌ ಕೇರ್?”‌ ಎಂದು ಆಲೋಚಿಸುತ್ತಿದ್ದ. ಆ ಸಮಯದಲ್ಲೇ ಅವನಿಗೆ ಹಿಂದಿನ ಕಾಲದ ಮತ್ತು ಇಂದಿನ ಕಾಲದ ವ್ಯತ್ಯಾಸಗಳು ಕಣ್ಮುಂದೆ ಬಂದವು.

ಅಂದು ಎಂತಹ ಕಾಲ! ಹೆತ್ತವರಿಗೆ ಹೆಗ್ಗಣವಷ್ಟೇ ಅಲ್ಲದೆ ಗೂಬೆ, ಕೋತಿ, ಗೊರಿಲ್ಲಾಗಳೂ ಮುದ್ದೇ ಆಗಿದ್ದವು. ಹುಟ್ಟಿದ ಮಗು ಯಾವ ಪ್ರಾಣಿಯನ್ನೇ ಹೋಲಲಿ, “ವರಾಹಾವತಾರ”, “ಆಂಜನೇಯಾವತಾರ”, “ಉಚ್ಚೈಶ್ರವಸ್‌ನ ಅವತಾರ”, “ಹೈ ಗ್ರೀಫ್‌ ಅವತಾರ” ಮೊದಲಾದ ರೀತಿಯಲ್ಲಿ ಸಮಾಧಾನ ಮಾಡಿಕೊಳ್ಳುತ್ತಿದ್ದುದಲ್ಲದೆ ಸಮಾಜದ ಕೈಲೂ ಅಹುದಹುದೆನ್ನಿಸುತ್ತಿದ್ದರು. ಅದು ಅಂದಿನ ಕಾಲ. ಅಂತಹ ಕೋತಿ, ಚಿಂಪಾಂಜಿಗಳ ಪೈಕಿ ಕೆಲವು ಚಲನಚಿತ್ರದಲ್ಲಿ ಹೀರೋಗಳೂ ಆದವು.

“ನೀವು ಕೋತಿಯಂತಿದ್ದೀರಿ, ನಿಮಗೇಕೆ ಸುಂದರವಾದ ಹೀರೋಯಿನ್ ಬೇಕು?” ಎಂದೊಬ್ಬ ತರಲೆ ಪತ್ರಕರ್ತ ಕೇಳಿಯೂಬಿಟ್ಟ.

“ಅದು ನಮ್ಮ ಪರಂಪರೆ. ಗಂಡು ಕೋತಿಯಂತಿರುವುದು ಹಾಗಿರಲಿ, ಕೋತಿಯೇ ಆಗಿದ್ದರೂ ಹೆಣ್ಣು ಮಾತ್ರ ಸುಂದರಿ ಆಗಿರಲೇಬೇಕು ಎನ್ನುವುದನ್ನು ಕಿಷ್ಕಿಂಧಾ ಕಾಂಡದಲ್ಲಿ ವಾನರಸೇನೆಯು ತೋರಿಸಿಕೊಟ್ಟಿದೆ. ವಾಲಿಯ, ಅಂಗದನ, ಅಷ್ಟೇ ಅಲ್ಲದೆ ಕಪಿಸೇನೆಯ ಕಾಲಾಳುಗಳ ಸತಿಯರೂ ಸುಂದರಿಯರೇ ಆಗಿದ್ದರು” ಎಂದಿದ್ದ ಆ ವಾನರಮುಖಿ.

ಈಗಿನ ಪರಿಸ್ಥಿತಿಯೇ ಬೇರೆ. ಮೊನ್ನೆ ಪಾಂಡು ಹೊಸದಾಗಿ ಬಾಡಿಗೆಗೆ ಬಂದ ಪಕ್ಕದ ಮನೆಯವರನ್ನು ಪರಿಚಯ ಮಾಡಿಕೊಳ್ಳಲು ಹೋಗಿದ್ದ.

“ವಿ ಆರ್‌ ಎ ಫ್ಯಾಮಿಲಿ ಆಫ್‌ ಫೋರ್.‌ ಮೀ, ಮೈ ಹಬ್ಬೀ…”

ಈ “ಹಬ್ಬೀ” ಎನ್ನುವುದೂ ಒಂದು ವಿಶೇಷ ಪದವೆಂದು ಪಾಂಡುವಿಗೆ ಆಗಾಗ್ಗೆ ಅನಿಸುತ್ತಿರುತ್ತದೆ. ಸೋಫಾದಷ್ಟು ಅಗಲವೂ ಹಬ್ಬಿಕೊಂಡವಳು ಸೋಫಾದ ಕಟ್ಟಿನಲ್ಲಿಯೂ ಒಂದಷ್ಟು ಜಾಗ ಉಳಿಯುವಂತೆ ಕುಳಿತ ಕಡ್ಡಿಯನ್ನು “ಹಬ್ಬೀ” ಎನ್ನುವುದು ವಿಶೇಷವೇ ಅಲ್ಲವೇ! ಹಬ್ಬುವುದು ಯಾರೋ, ಹಬ್ಬಿ ಎನಿಸಿಕೊಳ್ಳುವುದು ಯಾರೋ!

“… ಅಂಡ್‌ ಟೂ ಚಿಲ್ಡ್ರನ್”‌ ಎಂದಳು ಆ ವೈಡೇಶ್ವರಿ.

“ವಾಟ್‌ ಆರ್‌ ಯುವರ್‌ ಚಿಲ್ಡ್ರನ್‌ ಡೂಯಿಂಗ್?”‌

“ಓಹ್!‌ ದಿಸ್‌ ಅಂಡ್‌ ದಟ್.”‌

“ಎಲ್ಲಿ ಕೆಲಸ ಮಾಡ್ತಾರೆ?”

“ಹಿಯರ್‌ ಅಂಡ್‌ ದೇರ್.”‌

“ಹೊರಗೆ ಹೋಗುವ ಕೆಲಸವೇನು?”

“ಹೂಂ. ಆಫ್‌ ಅಂಡ್‌ ಆನ್. ಪರಿಚಯಿಸ್ತೀನಿ ಇರಿ. ಅವರಿಗೂ ಖುಷಿಯಾಗತ್ತೆ. ಟೋನೀ…”

ಟೋನಿ ಬಂದ(ದಿತು).

“ಓಹ್!‌ ನಾಯಿ!” ಎಂದುಸುರಿದ.

“ನಾಯಿ ಅನ್ಬೇಡಿ ಅವನನ್ನ. ಹಾಗೆ ಕರೆದರೆ ಅವನು ಡಿಪ್ರೆಸ್‌ ಆಗ್ತಾನೆ.”

“ಭೇಷ್!‌ ನಮ್ಮ ಭಾರತದ ರಾಜಕೀಯ ನಾಯಕರಿಗಿಂತ ಸೂಕ್ಷ್ಮ ಅಂತಾಯ್ತು. ಅವರನ್ನ ನಾಯಿ ಅಂತ ಕರೆದರೆ “ನಿಷ್ಠಾವಂತ ಅಂದ” ಅಂತಾರೆ, ಗೂಬೆ ಅಂದರೆ “ಕತ್ತಲಲ್ಲೂ ಕಾಣಬಲ್ಲ ದೃಷ್ಟಿ ನನ್ನದು ಅಂದ” ಅಂತಾರೆ. ಊಸರವಳ್ಳಿ ಅಂದರೆ “ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವವನು ಅಂದ” ಅಂತಾರೆ. ನಿಮ್ಮ ನಾಯಿ… ಐ ಮೀನ್‌ ಟೋನಿ… ಅವರಿಗಿಂತ ಸಭ್ಯ ಅಂತಾಯ್ತು. ಆದರೂ ಕಾಲ್‌ ಎ ಸ್ಪೇಡ್‌ ಎ ಸ್ಪೇಡೂನ್ನೋದು ತಪ್ಪೇ?”

“ಸ್ಪೇಡ್ನೇನ್ಬಾಕಾದ್ರೂ ಅಂದ್ಕೊಳಿ ಪಾಂಡು. ಟೋನೀನ ಮಾತ್ರ… ಯೂ ನೋ, ಹಿ ಈಸ್‌ ಗೆಟಿಂಗ್‌ ಎಂಗೇಜ್ಡ್‌ ನೆಕ್ಸ್ಟ್‌ ವೀಕ್.”‌

“ಮದುವೇನೇ? ನಾಯಿಗೆ?”

“ನನ್ನ ಮದುವೇನ ನನ್ನ ಪೇರೆಂಟ್ಸ್‌ ಮಾಡಿದ ಹಾಗೆಯೇ ನನ್ನ ಮಗನಿಗೂ ನಾನು ಮಾಡಬೇಕು. ದಟ್‌ ಈಸ್‌ ಅವರ್‌ ಕಲ್ಚರ್.”‌

“ಅದನ್ನು ಡಾಗಿಕಲ್ಚರ್‌ ಅಂತ ಕೂಗ್ತಾರೇನು?”

ವೈಡೇಶ್ವರಿ ಟೋನಿ ಅಬ್ಬರಿಸಬಹುದಾದುದಕ್ಕಿಂತ ಜೋರಾಗಿ ಬೊಗಳಿದಳು. ತಾಯಿನಾಯಿ… ಕ್ಷಮಿಸಿ… ನಾಯಿತಾಯಿ ಕಚ್ಚಿದರೆ ಹದಿನಾಲ್ಕೇ ಇಂಜೆಕ್ಷನ್ನೋ ಅಥವಾ ಇನ್ನೂ ಹೆಚ್ಚೋ ಎಂದು ಯೋಚಿಸುತ್ತಲೇ ಛಂಗನೆ ಕುಳಿತಲ್ಲಿಂದ ನೆಗೆದು ದೌಡಾಯಿಸಿದ್ದ ಪಾಂಡು. ಟೋನಿ ನಾಯಿಯಲ್ಲದೆ ಮಗನಂತೆ ಬೆಳೆದಿದ್ದರಿಂದ ಅಟ್ಟಿಸಿಕೊಂಡು ಬಂದಿರಲಿಲ್ಲ.

ಆ ತಾಯಿನಾಯಿ… ಕ್ಷಮಿಸಿ… ನಾಯಿತಾಯಿ ಅಂದು ಮಾಡಿದ್ದ ಸದ್ದೂ ಮೆಲೋಡಿ ಎನ್ನುವ ಮಟ್ಟಕ್ಕೆ ಇದ್ದಕ್ಕಿದ್ದಂತೆ ಘನಘೋರಗಂಭೀರ ಸ್ವನವೊಂದು ಮೊಳಗಿತು. ಪಾಂಡು ಹೌಹಾರಿದ, ಹಾರಿದ, ಹೌ ಟು ರಿಯಾಕ್ಟ್‌ ಎಂದು ತಿಳಿಯದೆ ಅಷ್ಟದಿಗ್ಭ್ರಮೆಗೊಂಡ.

ಸದ್ದು ತೊಟ್ಟಿಲಿನಿಂದ ಹೊರಡುತ್ತಿತ್ತು. ಇದನ್ನೇನಾದರೂ ನಮ್ಮ ಶ್ರೇಷ್ಠ ಕವಿಪಂಙ್ತಿಯು ನೋಡಿದಿದ್ದರೆ

ಅಳುವ ಸ್ವನವದು ನುಗ್ಗಿ ಬರುತಿದೆ ಮಗುವಿನಿಂದ ನೋಡಿ

ಬಾಳ ಹಾದಿಯ ಮಹಾ ಟ್ರಾಫಿಕ್ಕಲಿ ಇದರದೊಂದು ಮೋಡಿ

ಅರಚಿದೆ ಕಿರುಚಿದೆ ಹತ್ತು ಟ್ರಕ್ಕ ಹಾರನ್ನಂತೆ

ಮೂರು ದಾರಿ ಜನ ಹಾರಿ ಹಾದಿಯನು ಬಿಟ್ಟು ಹೋಗುವಂತೆ

ಎಂದು “ಅಳುವ ಕಡಲೊಳು” ಮಾದರಿಯಲ್ಲೇ ಇನ್ನೊಂದು ಕವನವನ್ನು ನಿಶ್ಚಿತವಾಗಿ ರಚಿಸಿರುತ್ತಿದ್ದರು. ಬೇಂದ್ರೆಯವರು ಇದನ್ನೇನಾದರೂ ಈಕ್ಷಿಸಿದ್ದರೆ

ಪುಟ್ಟನೆ ತೊಟ್ಟಿಲ ಆಳದಿ ಮಲಗಿ

ಛಟ್ಟನೆ ಕೊರಳದು ಮುಗಿಲಿಗೆ ಎರಗಿ

ಘಟ್ಟಿಪ ಮೋಡಗಳಂದದಿ ಘರ್ಜಿಸಿ

ಛಿಟ್ಟನೆ ಎರಗುವ ಸಿಡಿಲಿನ ಅಂದದಿ

ಶಿಶುವು ಅಳುತಿಹುದು ಕೇಳಿದಿರಾ

ಎಂದು ಬರೆಯುತ್ತಿದ್ದುದೂ ನಿಶ್ಚಿತ. ಬದುಕಿನ ಅಮೋಘ ಕ್ಷಣಗಳನ್ನು ಮಹಾಕವಿಗಳಲ್ಲದೆ ಯಃಕಶ್ಚಿತ್‌ ಮಾನವರು ದಾಖಲಿಸಲು ಸಾಧ್ಯವೇ ಇಲ್ಲ.

ಪಾಂಡು ತನಗೆ ತಿಳಿದ ಹಾಡುಗಳನ್ನೆಲ್ಲ ಹಾಡಲು ಶುರು ಮಾಡಿದ. ಇವನ ಹಾಡನ್ನು ಕೇಳಿದ ಶಿಶುವು ತನ್ನ ಸ್ತರಗಳನ್ನು ಏರಿಸಲು ತೊಡಗಿದಾಗಲೇ ಪಾಂಡುವಿಗೆ ತಾನು ಮೊದಲು ಕೇಳಿದ ಸದ್ದು ಮಗುವಿನ ಮಂದ್ರಸ್ಥಾಯಿಯೆಂದು ತಿಳಿದದ್ದು. ಮಗು ಮಧ್ಯಮ ಸ್ಥಾಯಿಗೆ ತಲುಪುವಷ್ಟರಲ್ಲಿ ಅಕ್ಕಪಕ್ಕದ ಮನೆಗಳ ಬಾಗಿಲುಗಳ ಸ್ವಕಂಪನದಿಂದ ತೆರೆದುಕೊಂಡವು. ಪಕ್ಕದ ಅಪಾರ್ಟ್‌ಮೆಂಟಿನ ಅಲ್ಯೂಮಿನಮ್‌ ಕಿಟಕಿಗಳ ಗಾಜುಗಳು ಥರಗುಟ್ಟಿದವು. ಮೂರನೆಯ ಮಹಡಿಯ ನಾಲ್ಕನೆ ಫ್ಲಾಟಿನ ಎರಡನೇ ರೂಮಿನಲ್ಲಿ ಮೊದಲನೇ ಪ್ರಯೋಗವನ್ನು ಮಾಡುತ್ತಿದ್ದ ವಿಜ್ಞಾನ ವಿದ್ಯಾರ್ಥಿಯು ಆ ಥರಗುಟ್ಟುವ ಗಾಜುಗಳನ್ನು ಕಾಣುತ್ತಾ “ವಾಟ್‌ ಎ ಫೈನ್‌ ಎಕ್ಸಾಂಪಲ್‌ ಫಾರ್‌ ಸಿಂಪಥೆಟಿಕ್‌ ವೈಬ್ರೇಷನ್”‌ ಎಂದು ಉದ್ಗರಿಸಿದ.

ಪಾಂಡು ತನ್ನೆಲ್ಲ ಕಲಿತ ವಿದ್ಯೆಯನ್ನು ಪ್ರಯೋಗಿಸಲಾರಂಭಿಸಿದ. ವಾನರಗಳಿರಲಿ, ಕಾಮೆಡಿ ಕಿಲಾಡಿ ಕಾರ್ಯಕ್ರಮದ ಕೆಲವರು ಸಹ ಮಾಡಲು ಮುಜುಗರ ಪಡುವ ಮಟ್ಟದ ಅಂಗಚೇಷ್ಟೆಗಳನ್ನು ಮಾಡಿದ. ಮೊಝಾರ್ಟ್‌ನ ಸಿಂಫೋನಿಗೆ ಲತಾ ಮಂಗೇಶ್ಕರಳ “ಆಜಾರೇ ಪರದೇಸಿ” ಹಾಡನ್ನು ಫ್ಯೂಷನ್‌ ಮಾಡಿ ಮಗುವಿಗೆ ಕಂಫ್ಯೂಷನ್‌ ಉಂಟಾಗಿಸಲು ಯತ್ನಿಸಿದ. ಅನುಷ್ಟುಪ್‌ ಛಂದದ ಶ್ಲೋಕಗಳಿಗೆ ಕ್ರಿಸ್ಮಸ್‌ ಕೆರಾಲ್ಸನ್ನು ಜೋಡಿಸಿ ಹಾಡಿದ. ಡ್ರಮ್ಮು ಕುಟ್ಟಿದ. ಯೋಗರಾಜ ಭಟ್ಟರಿಗೂ ಹೊಳೆಯದ ಸಾಹಿತ್ಯವನ್ನೆಲ್ಲ ಸೃಷ್ಟಿಸಿ ಮಗುವಿನ ಮೇಲೆ ಪ್ರಯೋಗಿಸಿದ.

ಮಗುವಿನ ಅಳು ಕೋಮಲ ಗಾಂಧಾರದಿಂದ ಋಷಭ ಗಾಂಧಾರಕ್ಕೇರಿ ಅಲ್ಲಿಂದ ಇನ್ನೂ ಮೇಲೆ ಸಾಗಿ “ಮಮ್ಮಲ gone ದಾರಿ”ಗೆ ತಿರುಗಿತು. ಪೇರೆಂಟ್ಸ್‌ ಬರುವುದರೊಳಗೆ ಮಗುವಿನ ಅಳುವನ್ನು ನಿಲ್ಲಿಸುವುದು ಹೇಗೆ ಎಂದು ಪಾಂಡು ಯೋಚಿಸುವುದು ಸಹಜವೇ ಆಗಿತ್ತು. ಅದಕ್ಕಿಂತಲೂ ದೊಡ್ಡ ಯೋಚನೆಯೆಂದರೆ ಹೀಗೆಯೇ ಮಗುವಿನ ಧ್ವನಿ ಏರುತ್ತಾ ಹೋದರೆ ಪೇರೆಂಟ್ಸ್‌ ಇರುವ ಜಾಗಕ್ಕೇ ಇದರ ಧ್ವನಿ ತಲುಪುವ ಅಪಾಯವಿತ್ತು. ಅದನ್ನು ತಪ್ಪಿಸಲೇಬೇಕಿತ್ತು.

ಪಾಂಡು ಮಗುವನ್ನು ಎತ್ತಿಕೊಂಡು ಸಮೀಪದ ಪಾರ್ಕಿಗೆ ನಡೆದ. ಪಾರ್ಕಿನ ಬೆಂಚಿನ ಮೇಲೊಂದು ಮಗು ಮಲಗಿತ್ತು. ಅಳುತ್ತಿರುವ ಈ ಮಗುವನ್ನು ಆ ಮಗುವಿನ ಬಳಿ ಕರೆದೊಯ್ದ. ಆ ಸಮಯಕ್ಕೆ ಸರಿಯಾಗಿ ಪಕ್ಷಿಯೊಂದು ಹಾರಿಬಂದು ಮಲಗಿದ್ದ ಮಗುವಿನ ಕಿವಿಯ ಬಳಿ ಕೊಕ್ಕು ಚಾಚಿ ಅದೇನೋ ಪಿಸುನುಡಿಯಿತು.

ಬೆಂಚುಮಗು ಎದ್ದಿತು, ಕಣ್ಣು ಬಿಟ್ಟಿತು. ಅತ್ತಿತು.

ಪಾಂಡುವಿನ ಕೈಯಲ್ಲಿದ್ದ ಮಗುವಿನ ಅಳು ಆ ಮಗುವಿನ ಅಳುವಿನ ಮುಂದೆ ಸುಬ್ಬಲಕ್ಷ್ಮಿಯ ಸಂಗೀತ. ಬೆಂಚುಮಗು ಅಳುವಿನ ಸ್ವರವನ್ನು ಏರಿಸುತ್ತಿದ್ದಂತೆ ಪಾಂಡುಶಿಶು ಪಾಂಡಿನಲ್ಲಿ ಸ್ವಿಮ್ಮಿಸುವ ಗೋಲ್ಡ್‌ ಫಿಶ್‌ನಂತೆ ಅಗಲವಾಗಿ ಕಣ್ಣು ತೆರೆದು, ಮೀನಿನಷ್ಟೇ ಮೌನವಾಯಿತು.

ಅಷ್ಟಲ್ಲದೆ ಹಿರಿಯರು ಹೇಳುತ್ತಾರೆಯೇ ಮರಕ್ಕಿಂತ ಮರ ದೊಡ್ಡದೆಂದು!

Comments