ಬಾಲ್ಯ - ಒಂದು ಸವಿ ಅನುಭವ
ಲೇಖನ - ಸರಸ್ವತಿ, ಸಿಡ್ನಿ
ಬಾಲ್ಯ ! ಈ ಶಬ್ಧವೇ ಒಂದು ಅನುಭೂತಿ. ಪ್ರತಿಯೊಬ್ಬ ಮಾನವನ ಜೀವನದಲ್ಲಿಯೂ ಈ ಬಾಲ್ಯವೆಂಬುದು ಮರೆಯಲಾಗದ ಒಂದು ಸುಂದರ ಅನುಭವ. ನನ್ನ ಬಾಲ್ಯವೂ ಹಾಗೆಯೆ. ನನ್ನೂರು ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ನಗರಿ ನಾಗಮಂಗಲ - ಮೈಸೂರಿಗೆ ಹತ್ತಿರವಿರುವ ಒಂದು ಊರು. ಅತ್ತ ಕುಗ್ರಾಮವೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಹೊಯ್ಸಳರು ಕಟ್ಟಿದ ಊರು.
ಆರು ಕಂಭದ ಮನೆ, ಆರು ಕೊಠಡಿಗಳು, ವಿಶಾಲವಾದ ಅಡಿಗೆಮನೆ, ಸ್ನಾನದ ಮನೆ, ಮೈಲಿಗೆ ಅಡಿಗೆಮನೆ/ಸ್ನಾನದ ಮನೆ, ಮರದ ಮೆಟ್ಟಿಲುಗಳಿದ್ದ ಮಾಳಿಗೆ, ಸುತ್ತಲು ಕಿಟಕಿಗಳಿದ್ದು ಗಾಳಿ-ಬೆಳಕು ಯಥೇಚ್ಛವಾಗಿ ಬರುತ್ತಿದ್ದಂತಹ ದೊಡ್ಡ ಮನೆ. ನಾನು ಹುಟ್ಟಿ ಐದಾರು ವರ್ಷದ ನಂತರ ಮನೆಗೆ ಗಾರೆ ಹಾಕಿಸಿದ್ದು. ಅದುವರೆಗೂ ಸಗಣಿ ನೆಲ. ಅಪ್ಪ-ಅಮ್ಮ, ಅಜ್ಜಿ ಮುತ್ತಜ್ಜಿ, ಸೋದರತ್ತೆ, ನಾವು ಏಳು ಜನ ಮಕ್ಕಳು ಇದ್ದಂತಹ ದೊಡ್ಡ ಸಂಸಾರ. ಮನೆಯ ಪಕ್ಕ 'ಹಂಪೆ ಅರಸನ ಕೊಳ' ಎಂದು ಕರೆಸಿಕೊಳ್ಳುತ್ತಿದ್ದ ಕಲ್ಯಾಣಿ. ಮನೆಯ ಹಿಂದೆ 'ಹಿರೆಕೆರೆ' ಎಂಬ ಕೆರೆ, ಅಶ್ವಥ್ಥ, ಬೇವು, ನಾಗರ ಕಲ್ಲುಗಳಿದ್ದ ಅಶ್ವಥ್ಥ ಕಟ್ಟೆ, ನವಗ್ರಹ ಗುಡಿ. ಇದಲ್ಲದೆ ನಮ್ಮ ಪೂರ್ವಜರೇ ಕಟ್ಟಿದ್ದ ಈಶ್ವರನ ಗುಡಿ. ಅದರ ಉಸ್ತುವಾರಿ ಪೂರ್ತಿ ನಮ್ಮದೆ. ನಿತ್ಯ ಪೂಜೆಯಲ್ಲದೆ, ಕಾರ್ತೀಕ ಮಾಸ, ಶಿವರಾತ್ರಿ ಹಬ್ಬದ ಪೂಜೆಗಳು ವೈಭವವಾಗಿ ನಡೆಸುತ್ತಿದ್ದರು. ಮನೆಗೆ ಹೊಂದಿಕೊಂಡಂತೆ ದೊಡ್ಡ ಹಿತ್ತಲು, ಭಾವಿ, ತೆಂಗು-ಅಡಿಕೆ ಮರಗಳು, ಹೂವಿನ ಗಿಡಗಳು ಇತ್ಯಾದಿ. ಮನೆಯ ಪಕ್ಕದಲ್ಲೇ ಕೊಟ್ಟಿಗೆ. ಅದರ ತುಂಬಾ ದನ-ಕರುಗಳು. ಹೊಲ-ಗದ್ದೆಗಳಿದ್ದರಿಂದ ಎತ್ತಿನಗಾಡಿ, ಆಳು-ಕಾಳುಗಳು. ಒಟ್ಟಿನಲ್ಲಿ ಮೇಲು ಮಧ್ಯಮ ವರ್ಗದ ಕುಟುಂಬ.
ಅಪ್ಪನದು ಜಮೀನ್ದಾರಿಕೆ - ಊರಿನಲ್ಲಿ ತೋಟ, ಹೊಲ, ಗದ್ದೆ. ಅಲ್ಲದೆ ಮೈಸೂರು ಅರಸರಿಂದ ಬಂದಿದ್ದ ಎರಡು-ಮೂರು ಸುತ್ತಮುತ್ತಲಿನ ಹಳ್ಳಿಗಳಲ್ಲೂ ಜಮೀನಿತ್ತು. ಅಮ್ಮ ಮುಗ್ದೆ, ನಿಸ್ವಾರ್ಥಿ, ತನಗಾಗಿ ಏನನ್ನೂ ಬಯಸದವಳು - ಒಡವೆ-ವಸ್ತ್ರಗಳು, ಯಾತ್ರೆ-ತೀರ್ಥಗಳು ಯಾವುದಕ್ಕೂ ಆಸೆ ಪಟ್ಟವಳಲ್ಲ. ಮಕ್ಕಳು-ಸಂಸಾರ, ದನ-ಕರು, ಅತಿಥಿ-ಅಭ್ಯಾಗತರು, ಅತ್ತಿಗೆ-ನಾದಿನಿಯರ ಸೇವೆಯಲ್ಲೇ ಜೀವನ. ಇನ್ನೊಬ್ಬರ ಸೇವೆ ಮಾಡುವುದರಲ್ಲಿ ಅತ್ಯುತ್ಸಾಹ ಮತ್ತು ಶಕ್ತಿ, ಸಣ್ಣ ಪುಟ್ಟ ವ್ರತಗಳನ್ನು ಸದ್ದಿಲ್ಲದೆ ಮಾಡಿಕೊಂಡು ಇರುತ್ತಿದ್ದವಳು.
ಊರಿಗೆ ಅನುಕೂಲಸ್ಥ ಮನೆಯಾದ್ದರಿಂದ ಅತಿಥ್ಥಿ-ಅಭ್ಯಾಗತರಿಗೆ ಸದಾ ತೆರೆದ ಬಾಗಿಲು. ಆಗಾಗ್ಗೆ ಬಂದು ಹೋಗುವ ನೆಂಟರಿಷ್ಟರು. ಬಡ ಮಕ್ಕಳಿಗೆ ವಾರಾನ್ನ, ಕೆಲವರು ಮನೆಯಲ್ಲೇ ಇದ್ದುಕೊಂಡು ಓದುತ್ತಿದ್ದರು. ಹೀಗೆ ಬೆಳಗ್ಗೆ ಮನೆ ಬಾಗಿಲು ತೆರೆದರೆ, ರಾತ್ರಿಯೇ ಹಾಕುತ್ತಿದ್ದುದು. ಬೀದಿ ಬಾಗಿಲಿನಿಂದ ಹಿತ್ತಲ ಬಾಗಿಲವರೆಗೂ ಬಂದವರು ಬಂದ ಹಾಗೆ, ಹೋದವರು ಹೋದ ಹಾಗೆ. ವರ್ಷವೆಲ್ಲಾ ಏನಾದರೊಂದು ಹಬ್ಬ, ಅಲ್ಲದೆ ಅಜ್ಜಿ ಮಾಡುತ್ತಿದ್ದ ವ್ರತ-ಕತೆಗಳು, ಹಾಗಾಗಿ ಮನೆಯವರಿಗೆಲ್ಲಾ ಕೈತುಂಬಾ ಕೆಲಸ. ನಾನು ಹುಟ್ಟುವ ವೇಳೆಗೆ ನಮ್ಮೂರಿಗೆ ಆಗತಾನೆ ಆಸ್ಪತ್ರೆ, ಕರೆಂಟು, ಹೈಸ್ಕೂಲು ಬಂದಿತ್ತು. ಟಿ.ವಿ. ಫೋನುಗಳಿಲ್ಲದ ಕಾಲ, ಯಾರದಾದರೂ ಕಾಗದ ಬಂದರೆ ಏನೋ ಸಂಭ್ರಮ. ದಿನ ಪತ್ರಿಕೆ ನಮ್ಮ ಮನೆಗೆ ತರುಸುತ್ತಿರಲಿಲ್ಲ. 'ಪ್ರಜಾಮತ', 'ಜನಪ್ರಗತಿ' ಮುಂತಾದ ವಾರ ಪತ್ರಿಕೆಗಳನ್ನು ಅವರಿವರ ಮನೆಯಿಂದ ತಂದು ಓದುತ್ತಿದ್ದೆ. ಕಥೆ, ಕಾದಂಬರಿ, ಮಾಸಿಕ, ಸಾಪ್ತಾಹಿಕ - ಒಟ್ಟಿನಲ್ಲಿ ಓದುವುದೆಂದರೆ ನನಗೆ ತುಂಬಾ ಹುಚ್ಚು. 'ಪುಸ್ತಕದ ಹುಳು' ಎಂದು ಎಲ್ಲರ ಕರೆಯುತ್ತಿದ್ದರು. ಹಾಗೆಯೇ ಆಟವೆಂದರೂ ಆಸೆ. ಎಲ್ಲಾ ಆಟಗಳನ್ನು ಆಡುತ್ತಿದ್ದೆ. ಖೊಖೊ - ನನ್ನ ಮೆಚ್ಚಿನ ಆಟ. ಆಟಕ್ಕಾಗಿ ಸಂಗೀತದ ಕ್ಲಾಸ್ ತಪ್ಪಿಸಿಕೊಂಡು ಅಪ್ಪನ ಕೈಲೆ ವದೆ ತಿಂದದ್ದುಂಟು. ಭಾವಾ ತಂದಿಟ್ಟ ಪುಟ್ಟ ರೇಡಿಯೋ ಒಂದಿತ್ತು. ಅದರಲ್ಲಿ ಮಕ್ಕಳ ಕಾರ್ಯಕ್ರಮ, ಸಿನಿಮಾ ಹಾಡು ಕೇಳುವುದು. ರೇಡಿಯೋಗೆ ಕಿವಿ ಹಚ್ಚಿ ಕುಳಿತು ಎಲ್ಲಾ ಕಾರ್ಯಕ್ರಮಗಳನ್ನೂ ಆಸಕ್ತಿಯಿಂದ ಕೇಳುತ್ತಿದ್ದೆ. ರೇಡಿಯೋ ಒಳಗೆ ಹೋಗಿ ಹೇಗೆ ಹಾಡುತ್ತಾರೆ ಎಂಬ ಮುಗ್ಧ, ಪೆದ್ದು ಕುತೂಹಲ.
ಶ್ರಾವಣ-ಭಾದ್ರಪದ ಬಂತೆಂದರೆ ತಿಂಗಳೆಲ್ಲಾ ಹಬ್ಬ. ನಾಲ್ಕು ದಿನಕ್ಕೊಮ್ಮೆ ಅಡಿಗೆ ಮನೆಯಿಂದ ಘಮ, ಘಮ ವಾಸನೆ. ಅಪ್ಪನ ದೇವರ ಪೂಜೆ, ನೈವೇದ್ಯ, ಮಂಗಳಾರತಿ ಎಂದು ಮುಗಿಯುವುದೋ ಎಂದು ಕಾಯುತ್ತಿದ್ದೆವು. ಗೌರಿ-ಗಣೇಶ ಹಬ್ಬದಲ್ಲಿ, ಕೆರೆಯ ಇನ್ನೊಂದು ದಡದಲ್ಲಿ ಮರಳು ತೆಗೆದು, ಪ್ರಾಣ ಪ್ರತಿಷ್ಟೆ ಮಾಡಿ, ಅಲ್ಲೇ ಇದ್ದ ಅರಳೀ ಮರದ ಕೆಳಗೆ ಗೌರಿ ಸ್ಥಾಪಿಸಿ, ಊರ ಪುರೋಹಿತರು ಊರಿನ್ ಎಲ್ಲಾ (ಬ್ರಾಹ್ಮಣ) ಹೆಂಗಸರು ಮಕ್ಕಳಿಗೆ ಪೂಜೆ ಮಾಡಿಸುತ್ತಿದ್ದರು. ಆಗೆಲ್ಲಾ ಗೌರಿ-ಗಣೇಶ ಹಬ್ಬವೆಂದರೆ, ಐದರಿಂದ ಏಳು ದಿನಗಳ ಕಾಲ ಆಚರಿಸುತ್ತಿದ್ದ ಹಬ್ಬ. ಅಮ್ಮನಿಗಂತು ಒಂದು ತಿಂಗಳಿಂದ ಕೆಲಸ - ಎಲ್ಲಾ ಮಕ್ಕಳಿಗೂ ಗೆಜ್ಜೆ ವಸ್ತ್ರ, ಗಣೇಶನ ಎಳೆ ತೆಗೆಯುವುದು, ವರ್ತಿ ಕಾಗದ ತಂದು ಡಿಸೈನಾಗಿ ಕತ್ತರಿಸಿ ವಸ್ತ್ರಕ್ಕೆ ಅಂಟಿಸುವುದು, ಮರದ ಬಾಗಿನ ಸಿದ್ಧಗೊಳಿಸುವುದು. ಇದೆಲ್ಲಕ್ಕೂ ನಮ್ಮದು ಸಣ್ಣ ಸಹಾಯ. ಅಮ್ಮ ಅಜ್ಜಿಯರಿಗೆ ಹಬ್ಬದ ಮೂರು ದಿನ ಮುಂಚಿನಿಂದಲೇ ಒಬ್ಬಟ್ಟಿನ ಹೂರಣ, ಕಡುಬಿನ ತಯ್ಯಾರಿ, ಗೊಜ್ಜು ಕುದಿಸುವುದು ಮುಂತಾದ ಕೆಲಸ. ಹಬ್ಬದ ದಿನ ಸೋನೆ ಮಳೆಯಲ್ಲೂ ಬೇಗ ಎದ್ದು, ಶಿಸ್ತಾಗಿ ಅಲಂಕರಿಸಿಕೊಂಡು ಹೊಸ ಗಾಜಿನ ಬಳೆ ತೊಟ್ಟು ಪೂಜೆಗೆ ಹೊರಡುವುದು. ಅಮ್ಮನಿಗಂತೂ ಅದೇನು ಶ್ರದ್ಧೆ, ಅದೇನು ಭಕ್ತಿ, ಸಂಭ್ರಮ. ಗಂಟು ಹಾಕಿ, ಹೂವು ಮುಡಿದು, ಹಣೆಗೆ ಕುಂಕುಂಮವಿಟ್ಟು, ಅದರ ಕೆಳಗೆ ಚಂದ್ರ ಇಟ್ಟು, ಕೈ ತುಂಬಾ ಬಳೆ ತೊಟ್ಟು, ಪೂಜೆಯ ಪರಿಕರ ಹಿಡಿದು ಹೊರಡುತ್ತಿದ್ದರು. ಸಾಕ್ಷಾತ್ ಗೌರಿಯನ್ನೇ ನೋಡಿದಂತಾಗುತ್ತಿತ್ತು. ಗಣೇಶನ ಹಬ್ಬವನ್ನು ಮೂರು ದಿನಕ್ಕೆ ಕಡಿಮೆ ಯಾರೂ ಮಾಡುತ್ತಿರಲಿಲ್ಲ. ಬೀದಿಯಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ್ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ. ಊರಿನಲ್ಲಿ ದೊಡ್ಡ ಗಣೇಶನನ್ನು ಇಟ್ಟು ತಿಂಗಳೆಲ್ಲಾ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು. ವಿಸರ್ಜೆನೆಯ ದಿನ ಸಂಜೆಯಿಂದ ರಾತ್ರಿಯವರೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವ, ಕೀಲು ಕುದುರೆ, ನವಿಲು ಕುಣಿತ, ಡೋಲು, ಓಲಗ. ರಾತ್ರಿಯ ಜನದಟ್ಟಣೆಯಲ್ಲಿ ನಾವು ಮಕ್ಕಳು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಒಂದು ಘಂಟೆಯವರೆಗೂ ಇದರಲ್ಲಿ ಸಂಭ್ರಮಿಸಿ ಮರಳುತ್ತಿದ್ದೆವು. ಬೆಳಗ್ಗೆ ಕೆರೆಯಲ್ಲಿ ತೆಪ್ಪೋತ್ಸವ ನಡೆಸಿ ಗಣೇಶನ ವಿಸರ್ಜನೆ.
ಆಶ್ವಯುಜ ಮಾಸದ ನವರಾತ್ರಿ ಮತ್ತೊಂದು ಸಡಗರದ ಹಬ್ಬ. ಪಾಡ್ಯದಿಂದಲೇ ಬೊಂಬೆ ಕೂರಿಸುವ ಸಡಗರ. ಅಟ್ಟದ ಮೇಲಿಂದ ತೆಗೆದ ಬೊಂಬೆಗಳನ್ನು ಐದು ಅಡಿ ಎತ್ತರದ ತನಕ ಹಂತ ಹಂತವಾಗಿ ಕೂರಿಸುವುದು. ಎಲ್ಲಕ್ಕೂ ಮೇಲೆ ಪಟ್ಟದ ಬೊಂಬೆ. ನಂತರ ಸಾಲು ಸಾಲು ವಿವಿಧ ಬೊಂಬೆಗಳು. ಹಿತ್ತಾಳೆ ಸೆಟ್, ಬಳಪದ ಕಲ್ಲಿನ ಸೆಟ್, ಚನ್ನಪಟ್ಟಣದ ಬಣ್ಣದ ಬೊಂಬೆಗಳು, ಕಪ್ಪೆ ಚಿಪ್ಪಿನ ಬೊಂಬೆಗಳು, ಅಮೃತ ಶಿಲೆಯ ಬೊಂಬೆಗಳು. ಇದೆಲ್ಲದರ ಮಧ್ಯದಲ್ಲಿ ಕಳಸದ ಕನ್ನಡಿ ಇಟ್ಟು ಪಾಡ್ಯದಿಂದ ಪೂಜೆ ಮಾಡುತ್ತಿದ್ದೆವು. ಹತ್ತು ದಿನವೂ ಹಬ್ಬದ ಅಡಿಗೆ, ಪೂಜೆ, ನೈವೇದ್ಯ. ಅಜ್ಜಿ, ಅಮ್ಮ, ಸೋದರತ್ತೆಗೆ ಬಿಡುವಿಲ್ಲದಂತೆ ಕೆಲಸ. ದಿನಕ್ಕೊಂದು ಭಕ್ಷ್ಯ. ಸಾಯಂಕಾಲಕ್ಕೆ ಮಕ್ಕಳಿಗೆ ಬೊಂಬೆ ಬಾಗಿನಕ್ಕೆ ದಿನವೂ ಒಂದೊಂದು ತಿಂಡಿ. ಸಾಯಂಕಾಲವಾದರೆ ನಮಗೆ ಎಲ್ಲರ ಮನೆಗೂ ಹೋಗುವ ಸಂಭ್ರಮ. ತಿಂಡಿ ಹಾಕಿಸಿಕೊಳ್ಳಲು ಎಲ್ಲರ ಕೈಲೂ ಒಂದೊಂದು ಡಬ್ಬಿ. ಬೊಂಬೆ ಆರತಿಗೆ ಹೋದಾಗ 'ಹಾಡು ಹೇಳಿದರೆ ಮಾತ್ರ ಬಾಗಿನ' ಎನ್ನುತ್ತಿದ್ದವರು ಕೆಲವರು. ಹಾಗಾಗಿ ಮುಂಚಿನಿಂದ ಹಾಡು ಕಲಿತು ಹೋಗುತ್ತಿದ್ದೆವು. ಬಗೆಬಗೆಯ ತಿಂಡಿ ತುಂಬಿಸಿಕೊಂಡು ಬಂದು, ಬೊಂಬೆ ಮಂಟಪದ ಕೆಳಗೆ ನಮ್ಮ ನಮ್ಮದೇ ಪ್ರತ್ಯೇಕ ಜಾಗದಲ್ಲಿ ಇಟ್ಟುಕೊಳ್ಳುವುದು. ಸರಸ್ವತಿ ಪೂಜೆ, ದುರ್ಗಾಷ್ಟಮಿ, ಮಹಾನವಮಿಯ ದಿನ ಅಪ್ಪನಿಂದ ಬೊಂಬೆಯ ಹತ್ತಿರವೇ ಪೂಜೆ-ನೈವೇದ್ಯ.
ಇಷ್ಟು ಊರಿನದಾದರೆ, ನಮ್ಮೂರು ಮೈಸೂರಿಗೆ ಹತ್ತಿರವಾದ್ದ ರಿಂದ ಮೈಸೂರಿನ ದಸರ ಇನ್ನೊಂದು ಸವಿನೆನಪು. ಪ್ರತೀ ವರ್ಷ ಮೈಸೂರಿಗೆ ನೆಂಟರ ಮನೆಗೆ ದಸರ ನೋಡಲು ಹೋಗುತ್ತಿದ್ದೆವು. ಅಮ್ಮ ಸಣ್ಣ ಮಗುವಿನೊಂದಿಗೆ ಮನೆಯಲ್ಲೇ. ಜೊತೆಗೆ ದನಕರು. ಅಜ್ಜಿ, ಇವಳು ಜವಾಬ್ದಾರಿ ಇದ್ದುದ್ದರಿಂದ, ನಾವು ಅಪ್ಪನ ಜೊತೆ ಸೋದರತ್ತೆ ಮನೆ, ಅಕ್ಕನ ಮನೆಗೆ ಹೋಗಿ ಜಂಬೂ ಸವಾರಿ, ಮೈಸೂರ್ ಜೂ, ಅರಮನೆ, ಕನ್ನಂಬಾಡಿ ಕಟ್ಟೆ, ಚಾಮುಂಡಿ ಬೆಟ್ಟ ಎಲ್ಲವನ್ನೂ ನೋಡುತ್ತಿದ್ದೆವು. ಊರಿನವರು, ಸುತ್ತ ಹಳ್ಳಿಯವರು ಎಲ್ಲಾ ಹೊರಡುತ್ತಿದ್ದುದರಿಂದ ಬಸ್ಸು ತುಂಬಿ ತುಳುಕುತ್ತಿತ್ತು. ಆದ್ದರಿಂದ ಸರ್ಕಾರದವರು, ಖಾಸಗಿ ಬಸ್ ಮಾಲಿಕರು ದಿನಕ್ಕೆ ಮೂರರಿಂದ ನಾಲ್ಕು ಹಚ್ಚುವರಿ ಬಸ್ಸುಗಳನ್ನು ಓಡಿಸುತ್ತಿದ್ದರು. ಒಂದರಿಂದ ಒಂದೂವರೆ ರೂಪಾಯಿ ಇರುತ್ತಿದ್ದಂತ ಬಸ್ ದರ ಎರಡು ರೂಪಾಯಿ ದಾಟುತ್ತಿತ್ತು. ಊರಲ್ಲಿ ಇದೆಲ್ಲದರ ಬಗ್ಗೆ ಚರ್ಚೆಯು ನಡೆಯುತ್ತಿತ್ತು. ನಮ್ಮ ಭಾವ (ದೊಡ್ಡ ಅಕ್ಕನ ಗಂಡ) ಸರ್ಕಾರದ ಉನ್ನತ ಅಧಿಕಾರದಲ್ಲಿದ್ದ ಕಾರಣ, ದಸರ ಮೆರವಣಿಗೆಯನ್ನು (ಬನ್ನಿ ಮಂಟಪದಿಂದ ಬರುವ ಮೆರವಣಿಗೆಯನ್ನು) ನೋಡಲು ವಿಶೇಷ ಪಾಸ್ ಗಳು ಸಿಗುತ್ತಿದ್ದವು. ಸಯ್ಯಾಜಿರಾವ್ ರಸ್ತೆಯಲ್ಲಿರುವ ಅಂಚೆ ಕಛೇರಿಯಲ್ಲಿ ಒಮ್ಮೆ ಮಹಡಿಯ ಮೇಲೆ ಒಮ್ಮೆ ರಸ್ತೆಯ ಪಕ್ಕದಲ್ಲಿ ನಿಂತು ಹತ್ತಿರದಿಂದ ನೋಡುತ್ತಿದ್ದೆವು. ವಿಪರೀತ ಜನ ಸಂದಣಿ, ನೂಕು ನುಗ್ಗಾಟ ಇರುತ್ತಿತ್ತು. ದಸರಾ ಮೆರವಣಿಗಯನ್ನು ನೋಡಲು ಬಂದ ಕೆಲ ಹಳ್ಳಿಯ ಮುಗ್ದರು ಅವರ ಮಕ್ಕಳಿಗೆ 'ಕೈ ಮುಗಿ ಸ್ವಾಮಿಯೋರಿಗೆ' ಎಂದು ಅಂಬಾರಿಯಲ್ಲಿ ಸರ್ವಾಲಂಕೃತರಾಗಿ ಗಾಂಭೀರ್ಯದಿಂದ ಕುಳಿತ ಜಯಚಾಮರಾಜ ಒಡೆಯರ್ ಎರಡು ಕಡೆಯಿಂದ ಪ್ರಜೆಗಳು ಕೈಮುಗಿಯುತ್ತಿದ್ದರು. ಅವರ ಹಿಂದೆ ಅವರ ಸೋದರ ಮಾವ, ಹಿಂದೆ ಕಾರಿನಲ್ಲಿ ರಾಣಿ ತ್ರಿಪುರ ಸುಂದರಿ ಅಮ್ಮಣ್ಣಿ ಅವರು, ಮೆರವಣಿಗೆಯ ಹಿಂದೆ ಮುಂದೆ ಆನೆ, ಕುದುರೆ, ಪದಾತಿ, ಬ್ಯಾಂಡ್ ಸೆಟ್, ಸೇವಾದಳದವರು, ಸಮವಸ್ತ್ರದ ಶಾಲಾ ಮಕ್ಕಳು - ಈ ಎಲ್ಲವನ್ನು ನೋಡಲು ಸಂಭ್ರಮ. ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಸಾಧಾರಣವಾಗಿ ವಿಜಯ ದಶಮಿಗೆ ಮಳೆ ಬರುವುದು ವಾಡಿಕೆ. ಆದರೂ ದಸರಾಗೆ ಜನರೂ ಬಂದೇ ಬರುತ್ತಿದ್ದರು. ಇದೆಲ್ಲಾ ಈಗಿನ ಪೀಳಿಗೆಯವರಿಗೆ ಸಿಗದ ಅದೃಷ್ಟ.
ಒಮ್ಮೆ ಶ್ರೀರಂಗಪಟ್ಟಣದ ಹತ್ತಿರದ ಒಂದು ಊರು - ಪಾಲಳ್ಳಿಗೆ ಸೋದರತ್ತೆ ಮನೆಗೆ ಹೋಗಿದ್ದೆವು. ಒಂದು ದಿನದ ಪ್ರವಾಸಕ್ಕೆ ಕನ್ನಂಬಾಡಿಗೆ ಹೋಗಿದ್ದೆವು. ಮನೆಯಿಂದ ಹುಳಿಯನ್ನ-ಮೊಸರನ್ನ ಮಾಡಿ ತಂದಿದ್ದರು ಅತ್ತೆ. ಅದನ್ನ ತಿಂದು ಕನ್ನಂಬಾಡಿಯ ಕೊಳದಲ್ಲಿ ದೋಣಿ ವಿಹಾರ. ಅದರಲ್ಲಿ ಎದುರು ಬದಿರು ಕೈ-ಕೈ ಹಿಡಿದು ಕುಳಿತಾಗ ಭಯ ಮಿಶ್ರಿತ ಸಂತೋಷ. ಅದೇ ದೋಣಿಯಲ್ಲಿ ಕುಳಿತಿದ್ದ ಪಾಶ್ಚಿಮಾತ್ಯ ಜೋಡಿಯನ್ನು ನೋಡಿ ಮುಸಿ ಮುಸಿ ನಕ್ಕಿದ್ದು ಉಂಟು. ಅವರ ವೇಷ-ಭೂಷಣ ನಮಗೆ ವಿಚಿತ್ರ ವೆನಿಸುತ್ತಿತ್ತು. ಅವರಲ್ಲಿ ಗಂಡು ಯಾರೋ, ಹೆಣ್ಣು ಯಾರೋ ಎಂದು ಪಿಸುಗುಟ್ಟಿ ಮಾತಾಡಿಕೊಂಡಿದ್ದೆವು. ಸೋದರತ್ತೆ ಜಾಲಿ ಹೆಂಗಸು. ಅವರು ದೋಣಿಯಲ್ಲಿ ಕೊರೆದ ಚಂದದ ಲೇಡಿಸ್ ಕೊಡೆ ಹಿಡಿದು ಕೊಳದ ಸುತ್ತ ಮೆಟ್ಟಿಲ ಮೇಲೆ ಕ್ಯಾಟ್ ವಾಕ್ ಮಾಡಿ ನಗಿಸುತ್ತಿದ್ದರು. ವಾಪಸ್ ಬರುವಾಗ ಮಳೆಯೋ ಮಳೆ, ಸಣ್ಣಗೆ ಗಾಳಿ. ನಾವು ಎತ್ತಿನ ಗಾಡೆಯಲ್ಲಿ ಬಂದಿದ್ದರಿಂದ ಮಳೆ ನಿಲ್ಲುವ ತನಕ ಒಂದು ಮರದ ಕೆಳಗೆ ಗಾಡಿಯನ್ನು ನಿಲ್ಲಿಸಿದ್ದರು. ನಾವು ಮಕ್ಕಳೆಲ್ಲಾ ಗಾಡಿಯ ಕೆಳಗೆ ಕೂತಿದ್ದೆವು. ಗಾಳಿ ಜೋರಾದ ಮಳೆಯ ಹೊಡೆತಕ್ಕೆ, ತಂಗಿ 'ಕಾಳಾ!.. ಗಾಡಿ ಬಿಡೋ' ಎಂದು ಗಾಡಿಯನ್ನು ಓಡಿಸುತ್ತಿದ್ದ ಕಾಳನನ್ನು ಕೂಗುತ್ತಾ ಅಳುತ್ತಿದ್ದಳು. ಈಗಲು ನೆನೆಸಿಕೊಂಡರೆ ನಗುಬರುತ್ತದೆ.
ಇನ್ನೊಂದು ವರ್ಷ ನಾವು ಮಕ್ಕಳಷ್ಟೇ ಪಾಲಳ್ಳಿ ಸೋದರತ್ತೆ ಮನೆಗೆ ಹೋಗಿದ್ದೆವು. ಆಗ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದರು. ಆದಿನ ದೇವಿಯ ರಥೋತ್ಸವ. ರಥ ಎಳೆಯಲು ಮಹಾರಾಜರು ಬರುತ್ತಿದ್ದರು. ನಾವು ಸೋದರತ್ತೆ ಹಿಂದಿನ ದಿನ ಮಧ್ಯ ರಾತ್ರಿ ಎತ್ತಿನ ಗಾಡಿಯಲ್ಲಿ ಬೆಟ್ಟಕ್ಕೆ ಹೊರೆಟೆವು. ಹರಟೆ ಹೊಡೆಯುತ್ತಾ, ಹಾಡು ಹೇಳುತ್ತಾ, ನಕ್ಷತ್ರಗಳನ್ನ ಎಣಿಸುತ್ತಾ ರಾತ್ರಿಯೆಲ್ಲಾ ಪ್ರಯಾಣ ಮಾಡಿ, ಮರುದಿನ ಬೆಳಗಿನ ಜಾವ ತಲುಪಿದೆವು. ಅಲ್ಲಿನ ಕೆರೆಯಲ್ಲಿ ಕೈ-ಕಾಲು ಮುಖ ತೊಳೆದುಕೊಂಡು ದೇವಿಯ ದರ್ಶನ ಮಾಡಿ ಬಂದು ಅಲ್ಲೇ ದೇವಸ್ಥಾನದ ಬಳಿ ಕುಳಿತೆವು. ಅತ್ತೆ ನಮಗೆಲ್ಲಾ ಹೊಸ ಗಾಜಿನ ಬಳೆ ತೊಡಿಸಿದರು. ಇಷ್ಟಾಗುವ ಹೊತ್ತಿಗೆ ನಮಗೆಲ್ಲಾ ನಿದ್ರೆ ಶುರುವಾಯಿತು. ಕೈಯಿಂದ ರೆಪ್ಪೆ ಬಿಡಿಸಿದರು ಕಣ್ಣು ಬಿಡಲಾಗದಷ್ಟು ನಿದ್ದೆ. ಅತ್ತೆ ಎಳೆದೆಳೆದು ಎಬ್ಬಿಸುತ್ತಿದ್ದರು 'ಏಳ್ರೆ, ಇನ್ನೇನು ಮಹಾರಾಜರು ಬರ್ತಾರೆ' ಎಂದು. ಒಮ್ಮೆ ಕಣ್ಣು ಬಿಡುವುದು, ಒಮ್ಮೆ ಮುಚ್ಚುವುದು. ಕೊನೆಗೂ ಮಹಾರಾಜರು ಬಂದು ರಥ ಎಳೆಯುವುದನ್ನು ಕಣ್ತುಂಬ ನೋಡಿ ಮಧ್ಯಾನ್ಹದ ಹೊತ್ತಿಗೆ ಊರಿಗೆ ವಾಪಸಾದೆವು.
ಪಾಲ ಹಳ್ಳಿಯಲ್ಲಿ ಕಾವೇರಿಯ ದೊಡ್ಡ ಕಾಲುವೆಯೊಂದು ಹರುಯುತ್ತದೆ. ಅಲ್ಲಿ ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಅತ್ತೆಯ ಜೊತೆ ಹೋಗಲು ಸಂಭ್ರಮ. ನಮ್ಮೂರಲ್ಲಿ ಕೊಳ, ಕೆರೆ-ಕೋಡಿ, ಹಾಗೆ ನೀರಿನ ಒಡನಾಟ ಇದುದ್ದರಿಂದ ಕಾಲುವೆಗೆ ಹೋಗಲು ಭಯವಿರಲಿಲ್ಲ. ಒಮ್ಮೆ ಬಟ್ಟೆ ಒಗೆಯುವಾಗ ಅತ್ತೆ ಮಗಳ (ಸ್ವಲ್ಪ ದೊಡ್ಡವಳು) ಕೂದಲಿಗ ಕಟ್ಟುವ ಸ್ಯಾಟಿನ್ ಟೇಪನ್ನು ಹರಿಯುವ ನೀರಿನಲ್ಲಿ ಬಿಟ್ಟು ಹೇಗೆ ಹೋಗುವುದೆಂದು ನೋಡಬೇಕೆಂಬ ಹಂಬಲಕ್ಕೆ ಬಿಟ್ಟೆ. ಅದು ಕೊಚ್ಚಿಕೊಂಡು ಹೋದಾಗ ಅತ್ತೆ ಕೈಲಿ ಬೈಸಿಕೊಂಡಿದ್ದೆ. ಆ ಕಾಲದಲ್ಲಿ ಸ್ಯಾಟಿನ್ ಟೇಪ್ ಎಂದರೆ ಬೆಲೆ ಬಾಳುವ ವಸ್ತು. ಮತ್ತೊಮ್ಮೆ ತೊಳೆದ ಪಾತ್ರೆಯ ಬುಟ್ಟಿಯನ್ನು ತಲೆಯ ಮೇಲಿಟ್ಟು ತರುವಾಗ, ಕಲ್ಲಿಗೆ ಎಡವಿ ಬಿದ್ದು ಒಂದೆರಡು ಪಾತ್ರೆಗಳು ತಗ್ಗಾಗಿ ಹೋಗಿದ್ದವು. ಅದಕ್ಕೂ ಬೈಸಿಕೊಂಡಿದ್ದೆ. ಅವರ ಜೊತೆ ಆ ಊರಿನ ಬನ್ನಿ ಮಂಟಪಕ್ಕೆ ಹೋಗಿ ದೇವರುಗಳ ಉತ್ಸವ ನೋಡಿ ಬರುವುದು - ಹೀಗೆ ದಸರ ನೆನಪು ಹಲವಾರು.
ಕಾರ್ತೀಕ ಮಾಸದ ದೀಪಾವಳಿ ಅಧರ್ಮದ ವಿರುದ್ಧ ಧರ್ಮದ ಜಯವನ್ನು ಆಚರಿಸುವ ದೀಪಗಳ ಹಬ್ಬ. ನೀರು ತುಂಬೋ ಹಬ್ಬ, ನರಕ ಚತುರ್ದಶಿ, ಬಲಿ ಪಾಡ್ಯಮಿ, ಉತ್ವಾನ ದ್ವಾದಶಿ - ಹೀಗೆ ತಿಂಗಳೆಲ್ಲಾ ಹಬ್ಬಗಳೆ. ನರಕ ಚತುರ್ದಶಿಯಂದು ಅಮ್ಮ ಬೆಳಗಿನ ಜಾವದಲ್ಲಿ ಎಬ್ಬಿಸಿ ಎಣ್ಣೆ ಒತ್ತಿ ನೀರು ಹಾಕುತ್ತಿದ್ದರು. ಈಗ ಏಳ್ತಿನಿ, ಆಗ ಏಳ್ತಿನಿ ಅಂತ ಅಮ್ಮನನ್ನು ಸತಾಯಿಸುತ್ತಿದ್ದೆವು. ಹಿಂದಿನ ದಿನದ ನೀರು ತುಂಬಿದ ದೊಡ್ಡ ಹಂಡೆಯಲ್ಲಿ ಕಾದ ಬಿಸಿ ನೀರನ್ನು ಎಷ್ಟು ಹಾಕಿಕೊಂಡರೂ ತೃಪ್ತಿಯಿಲ್ಲ. ಪಾಡ್ಯ ಬಲೀಂದ್ರನ ಪೂಜೆ. ಅಪ್ಪ ತಂದು ಕೊಟ್ಟ ಎರಡೆರಡು ಮತಾಪು ಪೆಟ್ಟಿಗೆ, ನಾಲ್ಕು ಸುರ್-ಸುರ್ ಬತ್ತಿ ಒಬ್ಬೊಬ್ಬರಿಗೆ. ಅದನ್ನ ಚಿನ್ನದಂತೆ ಜೋಪಾನವಾಗಿ ಎತ್ತಿಟ್ಟು, ಅಪ್ಪ ಬಲೀಂದ್ರನ ಪೂಜೆ ಮಾಡಿದ ನಂತರ ಬೀದಿಯಲ್ಲಿ ಹಚ್ಚಿ ಸಂಭ್ರಮಿಸುತ್ತಿದ್ದೆವು. ಹಿಂದಿನ ದಿನ ಅಜ್ಜಿ ಸಗಣಿಯಲ್ಲಿ ಬಲೀಂದ್ರನ ಕೋಟೆ ಕಟ್ಟಿ, ಸಣ್ಣ-ಸಣ್ಣ ಪಿಳ್ಳಾರಿಗಳನ್ನು ಮಾಡಿಕೊಡುತ್ತಿದ್ದರು. ಅದನ್ನು ಮನೆಯ ಎಲ್ಲಾ ಹೊಸಿಲುಗಳಿಗೂ ಎರಡಂತೆ ಇಟ್ಟು, ಅದರ ಮೇಲೆ ಹುಚ್ಚೆಳ್ಳಿನ ಹೂವನ್ನು ಇಡುವುದು ಮಕ್ಕಳ ಕೆಲಸ.
ನಂತರ ಮಾಘ ಮಾಸ. ಅಜ್ಜಿ - ಅತ್ತೆಯರೊಡನೆ ಕೆರೆಯಲ್ಲಿ ಒಂದು ತಿಂಗಳು ಮಾಘ ಸ್ನಾನ ಮಾಡುವ ಕಾರ್ಯಕ್ರಮ. ಬೆಳಗಿನ ಜಾವ ಎದ್ದು ಬಟ್ಟೆ, ಟವಲ್ ತೆಗೆದುಕೊಂಡು ಹೊರಡುವುದು. ಆ ಹೊತ್ತಿನಲ್ಲಿ ನೀರು ಬೆಚ್ಚಗೆ ನಿಶ್ಚಲ್ವಾಗಿ ಇರುತ್ತಿತ್ತು. ಎರಡು-ಮೂರು ಮೆಟ್ಟಿಲಿಳಿದು, ತೃಪ್ತಿಯಾಗುವವರೆಗೂ ಸ್ನಾನ ಮಾಡಿ ಬಂದು ಅಶ್ವಥ್ಥ ಕಟ್ಟೆ, ನವಗ್ರಹ, ಈಶ್ವರನ ಗುಡಿ ಎಲ್ಲಕ್ಕೂ ಪ್ರದಕ್ಷಿಣೆ ಹಾಕಿ ಬರುವುದು. ಮಾಘ ಮಾಸದಲ್ಲಿ ಭಾನುವಾರಕ್ಕೆ ಪ್ರಾಶಸ್ತ್ಯ. ಆ ದಿನ ಸ್ನಾನ ಮಾಡುವವರೆಗೂ ಮಾತನಾಡ ಬಾರದೆಂದು (ಮೌನ ವ್ರತ) ಶಾಸ್ತ್ರ. ಹಾಗಾಗಿ ರಾತ್ರಿಯೇ ದಿಂಬಿನ ಬಳಿ ಬಟ್ಟೆ ಇಟ್ಟುಕೊಂಡು ಬೆಳಗ್ಗೆ ಒಬ್ಬರನ್ನೊಬ್ಬರು ಸನ್ನೆ ಮಾಡಿ ಎಬ್ಬಿಸಿ ಹೊರಡುತ್ತಿದ್ದೆವು. ವಾಪಸ್ ಬರುವ ಹೊತ್ತಿಗೆ ಅಮ್ಮ ಬಿಸಿ-ಬಿಸಿ ಕಫಿ, ಹಾಲು ಕೊಡುತ್ತಿದ್ದರು. ಇನ್ನು ಮಾಘ ಮಾಸದ ಕೊನೆಯಲ್ಲಿ ಶಿವರಾತ್ರಿಯಂದು ಜಾಗರಣೆ. ಅಂದು ಬೆಳಗ್ಗೆಯಿಂದ ಸಂಜೆವರೆಗೂ ನಮ್ಮದೇ ಈಶ್ವರನ ಗುಡಿಯಲ್ಲಿ ರುದ್ರಾಭಿಷೇಕ, ಪೂಜೆ ಮತ್ತು ಮೂರ್ನಾಲ್ಕು ಬಗೆಯ ಫಲಹಾರ. ನಂತರ ರಾತ್ರಿಯೆಲ್ಲಾ ಜಾಗರಣೆಗೆ ಹಾಡು ಹೇಳುವುದು, ಚೌಕಾಬಾರ, ಅಳಗುಳಿ ಮಣೆ, ಪಗಡೆ ಆಡುತ್ತಿದ್ದೆವು. ಅಜ್ಜಿ ಹೇಳುತ್ತಿದ್ದ ಶಿವ ಪುರಾಣದ ಕಥೆ ಕೇಳುತ್ತಾ ಜಾಗರಣೆ ಮುಗಿಸುವುದು. ನಂತರ ಅಲ್ಲೇ ಎದುರಿನ ಕೊಳದಲ್ಲಿ ಸ್ನಾನ ಮಾಡಿ ದೇವರುಗಳನ್ನು ಸುತ್ತಿ ಬರುತ್ತಿದ್ದೆವು.
ಚಾಲುಕ್ಯರ ಹಾಗು ಹೊಯ್ಸಳರ ಕಾಲದ ಎರಡು ದೊಡ್ಡ ಗುಡಿಗಳಿವೆ - ಯೋಗಾ ನರಸಿಂಹ ಮತ್ತು ಸೌಮ್ಯಕೇಶವ ದೇವಸ್ಥಾನ. ಸುಂದರ ಕೆತ್ತನೆ ಇರುವ ಏಳಂತಸ್ತಿನ ಗೋಪುರ, ದೊಡ್ಡ ಗರುಡಗಂಬ - ಇದು ಊರಿನ ಪ್ರಮುಖ ಆಕರ್ಷಣೆ. ವರ್ಷಕ್ಕೊಮ್ಮೆ (ಫಾಲ್ಗುಣ ಹಾಗು ವೈಶಾಖ ಮಾಸಗಳಲ್ಲಿ) ಎರಡು ದೇವರಿಗೆ ರಥೋತ್ಸವ. ಅಂದು ಮನೆಯಲ್ಲಿ ಹಬ್ಬದ ಅಡಿಗೆ. ತೀರ್ಥಸ್ನಾನದ ದಿನ ದೇವಸ್ಥಾನದ ಪಕ್ಕದ ಕೊಳದಲ್ಲಿ ದೇವರೊಂದಿಗೆ ನಾವು ಮುಳುಗುವುದು. ಯಾರಿಗೂ ಹೇಳದೆ ಗೋಪುರದ ಎರಡು ಮೂರು ಹಂತ ಹತ್ತುವುದು. ಅಲ್ಲಿದ್ದ ಕೆಲ ಹುಡುಗರಿಗೆ ಮೇಲೆ 'ಜಡೆ ಮುನಿ' ಇದ್ದಾನೆ ಅವನು ಹಿಡಿದುಕೊಳ್ಳುತ್ತಾನೆ ಎಂದು ಹದರಿಸುವುದು ಮತ್ತು ಓಡುವುದು. ಮಾರನೆಯ ದಿನ ಮತ್ತೆ ಹತ್ತುವುದು. ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ಶುರುವಾದಾಗ ಮೂರು ತಿಂಗಳ ಮಟ್ಟಿಗೆ ಟೆಂಟ್ ಸಿನೆಮಾ ಬರುತ್ತಿತ್ತು. ಆಗ ನಮಗೆ ಸುಗ್ಗಿಯೋ ಸುಗ್ಗಿ. ಮೂರು ಆಣಿಗೆ ಒಂದು ಟಿಕೆಟ್. ಮಕ್ಕಳಿಗೆ ಉಚಿತ. ಸೋದರತ್ತೆ ಜೊತೆ ನಾವು ಮಕ್ಕಳೂ ತೂರಿಕೊಳ್ಳುವುದು, ಅಪರೂಪಕ್ಕೊಮ್ಮೆ ಅಪ್ಪ ಅವರ ಸ್ನೇಹಿತರ ಜೊತೆ ಹೋದಾಗ ಅವರ ಜೊತೆಯೂ ಸಿನಿಮಾ ನೋಡಾಟ. ಅಕ್ಕ ಪಕ್ಕದ ಮನೆಯವರು, ಚಿಕ್ಕಮ್ಮ ಎಲ್ಲರೂ ಸೇರಿ ಮತ್ತೊಮ್ಮೆ. ಆಗೆಲ್ಲಾ ತಮಿಳು, ತೆಲುಗಿನ ಡಬ್ಬಿಂಗ್ ಸಿನಿಮಾಗಳೇ ಜಾಸ್ತಿ. ಮಧ್ಯೆ ಮಧ್ಯೆ ಅಚ್ಚ ಕನ್ನಡ ಸಿನಿಮಾಗಳು. ಅವುಗಳ ಹಾಡುಗಳೆಲ್ಲಾ ಬಾಯಿ ಪಾಠ. ಮನೆಯ ಹಿತ್ತಲಿನ ಹುಲ್ಲಿನ ಮೆದೆ ಏರಿ ಕುಳಿತು ಆ ಸಿನಿಮಾಗಳ ಕೆಲವು ಹಾಡು, ದೃಶ್ಯಗಳ ರಿಹರ್ಸಲ್. ಊರಿನಲ್ಲಿ ಒಂದು ಪ್ರೌಢಶಾಲೆ, ಒಂದು ಮಧ್ಯಮ ಶಾಲೆ ಮತ್ತು ಒಂದು ಪ್ರಾಥಮಿಕ ಶಾಲೆ. ಅಲ್ಲಿನ ಮತ್ತು ಊರಿನ ಸಾಂಸೃತಿಕ ಕಾರ್ಯಕ್ರಮಗಳೆಲ್ಲಾ ನಮ್ಮದೇ ಹಾಡು, ನಮ್ಮದೇ ಡ್ಯಾನ್ಸ್. ಬೇರೆಯವರ ಡ್ಯಾನ್ಸ್ ಗೆ ಗೆಳತಿಯೊಂದಿಗೆ ನಾನೂ ಹಿನ್ನೆಲೆ ಗಾಯಕಿ. ಆಗ ಶಾಲೆಯಲ್ಲಿ ಬುದ್ಧಿವಂತರು ಯಾರೋ, ಅವರಿಗೆ ಎಲ್ಲದರ ಅವಕಾಶ. ಹಾಗಾಗಿ ನಾನು ಡ್ಯಾನ್ಸ್ ಮಾಡೆದ್ದೆ ಮಾಡಿದ್ದು.
ಮೇಲೆ ತಿಳಿಸಿದಂತೆ, ನಮ್ಮ ಆರು ಕಂಭದ ಮನೆಯಲ್ಲಿ ನಾಲ್ಕು ಕಂಭದ ಮಧ್ಯೆ ಒಂದು ಮರದ ತೊಟ್ಟಿಲು. ಹುಟ್ಟಿದ ಮಕ್ಕಳಿಗೂ ಅದರಲ್ಲೇ ತೊಟ್ಟಿಲು ಶಾಸ್ತ್ರ ಮಾಡುವುದು, ಶಾಲೆಯ ರಜಾ ದಿನಗಳಲ್ಲಿ, ಬೀದಿ ಮಕ್ಕಳೆಲ್ಲಾ ಸೇರಿ ಅದರ ಎರಡೂ ಪಟ್ಟಿಯ ಮೇಲೆ ಕುಳಿತು ತೂಗಿ ಕೊಳ್ಳುವುದು. ಯಾರು ಜೋರಾಗಿ ಮೀಟಿ ಎತ್ತರಕ್ಕೆ ಹೋಗುತ್ತಾರೆಂದು ಪೈಪೋಟಿ. ಮನೆಯ ಒಂದು ಕೊನೆಯಲ್ಲಿ ರಾಗಿ, ಭತ್ತ ತುಂಬಿದ ದೊಡ್ಡ ದೊಡ್ಡ ಪೆಟ್ಟೆಗಳು. ಹುಣ್ಣಿಮೆಯ ದಿನದಂದು ಕೊಳದ ಕಲ್ಲಿನ ಮೇಲೆ ಕುಳಿತು ಈರುಳ್ಳಿ-ಆಲೂಗಡ್ಡೆ ಹುಳಿ ಅಥವಾ ಹುಳಿಯನ್ನ-ಮೊಸರನ್ನದ ಬೆಳದಿಂಗಳೂಟ. ಅಪ್ಪನ ಊಟವಾದ ನಂತರ, ಕೆಲವು ಸಲ ಬೀದಿಯ ಹೆಂಗಸರೊಂದಿಗೆ ಬೆಳದಿಂಗಳೂಟ. ಅಮ್ಮನ ಕೈ ತುತ್ತು. ಇಲ್ಲ ಕೊಳದ ಜಪದ ಕಲ್ಲನ್ನು ತೊಳೆದು ಅದರ ಮೇಲೆ ಹಾಕಿಕೊಂಡು ಊಟ. ನೀರಿನಲ್ಲಿ ಚಂದ್ರನನ್ನು ನೋಡುತ್ತಾ, ಮೀನಿಗೆ ಅನ್ನ ಹಾಕುತ್ತಾ ಖುಷಿಯಿಂದ ಊಟ ಮಾಡುತ್ತಿದ್ದೆವು. ಸಾಧಾರಣವಾಗಿ ಮಳೆಗಾಲ ಬಿಟ್ಟರೆ ಯಾವಾಗಲೂ ನಡೆಯುತ್ತಿತ್ತು. ಕೆರೆಯಲ್ಲಿ ಕೊಳದಲ್ಲಿ ಜಾರಿ ಬಿದ್ದೆವೆಂಬ ಯಾವ ಭಯವೂ ದೊಡ್ಡವರಿಗೂ ಇರುತ್ತಿರಲಿಲ್ಲ, ನಮಗೂ ಇರುತ್ತಿರಲಿಲ್ಲ.
ಪೇರಿಸಿಟ್ಟ ಹಾಸಿಗೆ ಸುರುಳಿಗಳ ಮೇಲೆ ಪುಟ್ಟ ತಮ್ಮನನ್ನು ಕೂರಿಸಿ 'ಕರುನಾಡ ವೈರಮುಡಿ ಕಂಠೀರವ, ಚಿರಕಾಲ ನಿನಗಿರಲಿ ಈ ವೈಭವ' ಹಾಡು ಹೇಳುತ್ತಾ ನಾವು ಕುಣಿದರೆ, ಅಜ್ಜಿಯ ಕಣ್ಣಲ್ಲಿ ಆನಂದ ಭಾಷ್ಪ. ಅಪ್ಪ ಸಿಡುಕು, ಕೋಪ ಎಂದು ಕಂಡು ಬಂದರೂ, ಒಳಗೆ ಮೃದು. ಒಂದು ದಿನ್ ರಾತ್ರಿ ಊಟ ಬಿಟ್ಟರೂ, ಕೈ ಹಿಡಿದೆಳೆದು ತಂದು ಊಟಕ್ಕೆ ಕೂರಿಸುತ್ತಿದ್ದರು. ರಾತ್ರಿ ಊಟ ಬಿಡಬಾರದೆಂದು.
ಇಂಥ ಒಂದು ಮುಗ್ಧ ಪ್ರಪಂಚ ಕಳೆದು ಹೋಯಿತೆ
ಎನಿಸುತ್ತದೆ. ಎಲ್ಲರೂ ಸೇರಿದಾಗ ಅದನ್ನು ಮೆಲುಕು ಹಾಕುತ್ತಿರುತ್ತೇವೆ. ಕಾಲಚಕ್ರ ಒಮ್ಮೆ ಹಿಂದಕ್ಕೆ
ತಿರುಗೆ ಪುನಃ ಆ ಕಾಲ ಬರಬಾರದೇ ಎನಿಸುತ್ತದೆ. ಹೆಣ್ಣು ಮಕ್ಕಳಿಗೆ ಹನ್ನೆರಡರಿಂದ ಹದಿಮೂರು ವರ್ಷದವರೆಗೆ
ಬಾಲ್ಯಕಾಲ. ನಮ್ಮ ಹಿರಿಯರಿಗಂತೂ ಎಂಟರಿಂದ ಹತ್ತು ವರ್ಷದೊಳಗೆ ಮದುವೆ. ಹಾಗಾಗಿ ಅವರಿಗೆ ಪಾಪ ಬಾಲ್ಯವೆಂಬುದೇ
ಇರಲಿಲ್ಲ. ಈಗಿನ ಮಕ್ಕಳಿಗೆ ಇಂಥ ಅನುಭವವೇ ಇಲ್ಲ. ಹಳ್ಳಿಯ ಸೊಗಡೇ ಗೊತ್ತಿಲ್ಲ. ಇಂಥ ಒಂದು ಸುಂದರ
ಮುಗ್ಧ ಕಾಲ ಅವರಿಗಿಲ್ಲವೇ ಎಂದು ಅನಿಸುತ್ತದೆ.
ನಮ್ಮ ವಯಸ್ಸಿನ ನಿಮಗೂ ಈಗ ನಿಮ್ಮ ಬಾಲ್ಯ
ನೆನಪು ಬಂದಿರ ಬೇಕಲ್ಲವೆ!!....
Comments
Post a Comment