ಛಾಯಾಚಿತ್ರ
ಲೇಖನ - ಸಿಡ್ನಿ ಸುಧೀರ್
ಬೆಳಗಿನ ಉಪಹಾರ ಮುಗಿಸಿ ಮನೆಯ ವಿಶಾಲವಾದ
ಹಾಲ್ ನಲ್ಲಿ ಸೋಫಾದ ಮೇಲೆ ಕುಳಿತು ಒಂದೂವರೆ ತಾಸಿನಿಂದ
ಜಪಾನಿನ ಬರಹಗಾರ ಸುಜುಕಿಯ (Suzuki) ಪುಸ್ತಕ 'ದಿ ಜೆನ್ (The Zen)' ನನ್ನು ಎಡಗೈಲೆ ಹಿಡಿದು ಓದುತ್ತಿದ್ದ
ಗಗನ್. ಎಡಗೈಗೆ ಸಾಕಾದರೆ, ಬಲಗೈಗೆ ಬದಲಾಯಿಸಿ ಕುಳಿತಿದ್ದ ಭಂಗಿಯನ್ನು ಬದಲಾಯಿಸಿ, ಜಪಾನಿನ ತತ್ವಜ್ಞಾನವನ್ನು
ಸುಜುಕಿಯ ಬರಹದಲ್ಲಿ ಓದುತ್ತಿದ್ದ. ಅಂದು ವಾರಾಂತ್ಯದ ರಜೆಯಿದಿದ್ದರಿಂದ ಘಮಘಮಿಸುವ ಎಂ.ಟಿ.ಆರ್ ಪುಡಿಯಿಂದ
ಬಿಸಿಬೇಳೆ ಭಾತ್ ತಯಾರಿಸಿ, ಬೆಳಗಿನ ಉಪಹಾರ ಮುಗಿಸಿದ್ದ. ತಿಂದು ಸುಮಾರು ಹೊತ್ತಾದರೂ, ತಿಳಿಯಾಗಿ
ಬಿಸಿಬೇಳೆ ಭಾತ್ ವಾಸನೆ ಮನೆಯಲ್ಲಾ ಹರಡಿತ್ತು. ಅಡಿಗೆ ಮನೆಯಿಂದ ಅತ್ತ ಕಬ್ಬಿಣದ ಗ್ರಿಲ್ ಇದ್ದ ಅಂಗಳದಲ್ಲಿ
ವಾಷಿಂಗ್ ಮೆಷಿನ್ ಬಟ್ಟೆಗಳನ್ನ ರುಬ್ಬಿ ಕೊಳೆ ತೆಗೆಯುತ್ತಿತ್ತು. ಅದು ಅವನ ಸಹಚರಿ ಬೆಂಗ್ ಲಿಂ ನ
ವಾರದ ಬಟ್ಟೆಗಳು.
ಎರಡು ಸಾವಿರದ ಮೂರರಲ್ಲಿ ಬೋರ್ನಿಯೊ
ದ್ವೀಪದ ಕುಚಿಂಗ್ ನಗರದಲ್ಲಿ ಕೆಲಸಕ್ಕಾಗಿ ವಲಸೆ ಬಂದು,
ಬೆಂಗ್ ಲಿಂ ಪರಿಚಯಗೊಂಡು ನಾಲ್ಕು ಕೊಠಡಿಯ ಮನೆಯನ್ನು ಈ ಇಬ್ಬರು ಬಾಡಿಗೆಗೆ ತೆಗೆದುಕೊಂಡು
ವಾಸವಾಗಿದ್ದರು. ಗಗನ್ ಬೆಂಗಳೂರಿನ ಹುಡುಗ. ತನ್ನ ಸಹೋದ್ಯೋಗಿಗಳು ಮತ್ತು ಸ್ನೇಹಿತರಂತೆ ಮಾಹಿತಿ
ತಂತ್ರಜ್ಞಾನದಲ್ಲಿ ತನಗೂ ವಿದೇಶಕ್ಕೆ ಹೋಗುವ ಅವಕಾಶ
ದೊರಕಿದ್ದು ಬೋರ್ನಿಯೊ ದ್ವೀಪದ ಪೂರ್ವ ಮಲೇಷ್ಯಾದ ಸಾರಾವಾಕ್ ರಾಜ್ಯದ ರಾಜಧಾನಿ ಕುಚಿಂಗ್ ನಗರದಲ್ಲಿ.
ಗಗನ್ ಗೆ ಇದು ಮೊದಲ ವಿದೇಶೀ ವಾಸ. ಇನ್ನು ಬೆಂಗ್ ಲಿಂ ಸಿಂಗಾಪೂರಿನ ಚೀನಿ ಹುಡುಗ. ಕೆಲಸಕ್ಕಾಗಿ
ಅವನು ಮಲೇಷ್ಯಗೆ ಬಂದವನು. ಅವನಿಗೆ ವಿದೇಶ ಹೊಸದೇನಲ್ಲ. ಹುಟ್ಟಿದ್ದು ಪಿನಾಂಗ್ ಮಲೇಷ್ಯ, ಓದು ಲಂಡನ್
ಮತ್ತು ಕೆಲಸಕ್ಕೆ ಸಿಂಗಾಪುರಕ್ಕೆ ಹೋಗಿದ್ದನು. ಇಬ್ಬರೂ ಒಂದೇ ಕಂಪೆನಿಯಲ್ಲಿ ಬೇರೆ ವಿಭಾಗದಲ್ಲಿ ಕೆಲಸ
ಮಾಡುತ್ತಿದ್ದರು. ಇಬ್ಬರೂ ಕೆಲಸಕ್ಕಾಗಿ ಕುಚಿಂಗ್ ಗೆ ಬಂದಿದ್ದರಿಂದ, ಮನೆ ಹುಡುಕುವಲ್ಲಿ ಪರಿಚಯವಾಗಿ,
ಈ ಮನೆಯನ್ನು ಇಷ್ಟ ಪಟ್ಟು ಬಾಡಿಗೆಗೆ ತೆಗೆದುಕೊಂಡಿದ್ದರು. ಸಿಂಗಾಪುರ್ ನಲ್ಲಿದ್ದ ತನ್ನ ಗರ್ಲ್
ಫ್ರೆಂಡ್ ನೋಡಲು ಪ್ರತೀ ವಾರ ಸಿಂಗಾಪುರಕ್ಕೆ ಹೋಗುತ್ತಿದ್ದನು ಬೆಂಗ್ ಲಿಂ. ಈ ವಾರ ಹೋಗದೆ ಇದ್ದುದ್ದರಿಂದ
ಇಬ್ಬರೂ ಮನೆಯಲ್ಲಿಯೇ ಇದ್ದರು. ಬೆಂಗ್ ಲಿಂ ಮನೆಯಲ್ಲಿ ಅಡಿಗೆ ಮಾಡಿಕೊಳ್ಳುತ್ತಿರಲಿಲ್ಲ. ಮೂರು ಹೊತ್ತು
ಹೊರಗಡೆಯೇ ಊಟ-ತಿಂಡಿ. ಆದ್ದರಿಂದ ಗಗನ್ ಅಡಿಗೆ ಮನೆಯ ಮಾಲಿಕ.
ವಾರಕ್ಕೊಮ್ಮೆ ಅಪ್ಪ-ಅಮ್ಮನ ಜೊತೆ ಕಾಲಿಂಗ್
ಕಾರ್ಡ್ ನಿಂದ ಮಾತನಾಡುವುದು, ಮತ್ತೆ ಎರಡು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸ್ನೇಹಿತರೊಡನೆ ಮಾತನಾಡುವುದು. ಆಗ ಮೊಬೈಲ್ ಫೋನ್ ಬಳಕೆ
ಬಹಳ ಕಡಿಮೆ. ಆಗ ಮೊಬೈಲ್ ಫೋನ್ ಶುರುವಾಗುತ್ತಿದ್ದ ಕಾಲ. ಕೆಲವರು ಮಾತ್ರ ಇಟ್ಟುಕೊಳ್ಳುತ್ತಿದ್ದರು.
ಹೊರ ದೇಶಕ್ಕೆ ಅಥವಾ ಹೊರ ರಾಜ್ಯಕ್ಕೆ ಕರೆ ಮಾಡಬೇಕು ಎಂದರೆ ಎಸ್.ಟಿ.ಡಿ/ಐ.ಎಸ್.ಡಿ ಬೂತ್ ಗಳಿಂದಲೆ.
ಮನೆಯಲ್ಲಿನ ದೂರವಾಣಿಯಿಂದ ಹೊರ ದೇಶಕ್ಕೆ ಕರೆ ಮಾಡಿದರೆ ಫೋನ್ ಬಿಲ್ ಜಾಸ್ತಿ ಎಂದು ಕಾಲಿಂಗ್ ಕಾರ್ಡ್
ಬಳಸಿ ಹೊರ ದೇಶಕ್ಕೆ ಕರೆ ಮಾಡುತ್ತಿದ್ದುದ್ದು. ಮನೆಯಲ್ಲಿನ ದೂರವಾಣಿ ಹೆಚ್ಚಾಗಿ ಸ್ಥಳೀಯ ಕರೆಗಳಿಗೆ
ಬಳಸಲಾಗುತಿತ್ತು. ಬೆಂಗ್ ಲಿಂ ಹತ್ತಿರ 'ಪ್ರೋಟಾನ್ ಸಾಗಾ (Proton Saga)' ಎಂಬ ಮಲೇಷ್ಯಾದ ಒಂದು
ಹಳೇ ಕಾರಿತ್ತು. ಅದರಲ್ಲಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಸಿಂಗಾಪುರಕ್ಕೆ ಹೋಗದೆ ಇದ್ದರೆ, ಕಾರ್ ಸ್ವಚ್ಛಗೊಳಿಸುವುದು
ಅಥವಾ ಸಿಟಿ ಸೆಂಟರ್ ಅಥವಾ ಸಿನೆಮಾ ನೋಡಲು ಅಥವಾ ಅಂಗಡಿ ಮುಂಗಟ್ಟಿಗೆ ಅಥವಾ ಸಾರಾವಾಕ ನದಿ ತೀರಕ್ಕೆ
(waterfront) ಹೋಗುತ್ತಿದ್ದರು. ಇಂದು ಯಾವ ಯೋಜನೆಯು ಇಲ್ಲದಿದ್ದರಿಂದ, ಗಗನ್ ಪುಸ್ತಕದಲ್ಲಿ ತಲ್ಲೀನನಾಗಿದ್ದ.
ಬೆಂಗ್ ಲಿಂ ತನ್ನ ಕೋಣೆಯಿಂದ ಹೊರಗೆ
ಬಂದು, ಬಟ್ಟೆಯ ಸ್ಥಿತಿಯನ್ನು ಒಮ್ಮೆ ಗಮನಿಸಿ, ಗಗನ್ ಹತ್ತಿರ ಬಂದು ಮತ್ತೊಂದು ಕುರ್ಚಿಯಲ್ಲಿ ಕುಳಿತು,
'What are you Reading? (ಏನು ಓದುತ್ತಿದ್ದೀಯ?)'
ಎಂದು ಕೇಳಿದ.
ಅದಕ್ಕೆ ಗಗನ್ ಒಂದು ಕ್ಷಣ ನಿಧಾನವಾಗಿ
ಉಸಿರೆಳೆದು, ಸೋಫಾಗೆ ಒರೆಗಿ, ಕೈನಿಂದು ಪುಸ್ತಕದ ಮುಖಪುಟವನ್ನು ಬೆಂಗ್ ಲಿಂ ಹತ್ತಿರ ತಿರುಗಿಸಿ
'The Zen - by Suzuki. Very
interesting book. (ದಿ ಜೆನ್ - ಬೈ ಸುಜುಕಿ, ನನಗೆ ಕುತೂಹಲ ತಂದ ಪುಸ್ತಕ)' ಎಂದ.
ಅದಕ್ಕೆ ಬೆಂಗ್ ಲಿಂ ಮರು ಪ್ರಶ್ನಿಸಿದ
'What is interesting about
the book? (ಅಂಥ ಆಸಕ್ತಿಯ ವಿಷಯ ಏನಿದೆ ?)'
ಅದಕ್ಕೆ ಗಗನ್ ವಿವರಿಸತೊಡಗಿದ.
'Suzuki is a
Japnese writer. He tries to find how Philosophy - Zen started. The root he says is the Indian Philosophy and
started from Buddhism. After Kalinga War, Emperor Ashoka sent a lot of people
to far east Asia (including Japan and China) to spread Buddhist Philosophy. But
this Philosophy couldnt sustain in Japan or China due to the practical nature
of lifestyle there. So it got modified to that region and got the name Zen. But
the foundation is indian
(ಸುಜುಕಿ ಒಬ್ಬ ಜಪಾನಿನ ಬರಹಗಾರ. ಅವರು
ಅಲ್ಲಿನ ತತ್ವಜ್ಞಾನ - ಜೆನ್ ಹೇಗೆ ಶುರುವಾಯಿತು ಎಂದು ವಿಶ್ಲೇಷಣೆ ಮಾಡುತ್ತಾನೆ. ಜೆನ್ ನ ಮೂಲ ಭಾರತೀಯ
ತತ್ವಜ್ಞಾನ ಮತ್ತು ಅದು ಶುರುವಾಗಿದ್ದು ಬುದ್ಧನ ಕಾಲದಲ್ಲಿ. ಕಳಿಂಗ ಯುದ್ಧದ ನಂತರ ಅಶೋಕ ಬುದ್ಧ ಭಿಕ್ಷುಗಳನ್ನು
ಪೂರ್ವಕ್ಕೆ ಕಳುಹಿಸಿ ಬುದ್ಧನ ತತ್ವವನ್ನು ಪ್ರಚಾರಗೊಳಿಸಿದನು. ಆದರೆ ಪೂರ್ವದಲ್ಲಿ ಈ ತತ್ವಜ್ಞಾನ ಅಲ್ಲಿನ ಪರಿಸರಕ್ಕೆ ತಕ್ಕಂತೆ ಬದಲಾಗಿ ಜೆನ್
ಎಂದು ಮಾರ್ಪಾಟಾಯಿತು. ಆದರೆ ತಳಹದಿ ಭಾರತೀಯ ತತ್ವಜ್ಞಾನ)'
ಗಗನ್ ಮಾತನ್ನು ಮುರಿದು ಬೆಂಗ್ ಲಿಂ
ಹೇಳಿದ,
'Philosophy is not
my cup of Tea.. Do you have any plans
for noon?
(ತತ್ವಜ್ಞಾನ ನನ್ನ ವಿಷಯವಲ್ಲ. ಮಧ್ಯಾಹ್ನ
ಏನು ಮಾಡುತ್ತಿದ್ದೀಯ?)'
ಅದಕ್ಕೆ ಗಗನ್
'No Really (ಏನು ಇಲ್ಲ)' ಎಂದು ಉತ್ತರಿಸಿದ.
ಅದಕ್ಕೆ ಬೆಂಗ್ ಲಿಂ
'Other day my
friends were telling they visited light house in Sematan which is an hour and
half from here. Shall we go there?
(ನನ್ನ ಸ್ನೇಹಿತರು ಹೇಳುತ್ತಿದ್ದರು
- ಸೆಮತಾನ್ ಹತ್ತಿರ ಒಂದು ಲೈಟ್ ಹೌಸ್ ಇದೆ. ಅದು ಚೆನ್ನಾಗಿದೆ. ಇಲ್ಲಿಂದ ಒಂದೂವರೆ ಘಂಟೆ. ಅಲ್ಲಿಗೆ
ಹೋಗೋಣವೆ?)'
ಗಗನ್ ತಕ್ಷಣವೆ ಸರಿ ಎಂದು ಒಪ್ಪಿದ.
ಬೆಂಗ್ ಲಿಂ ತನ್ನ ಬಟ್ಟೆಯ ಕೆಲಸ ಮುಗಿಸಿ, ಅಚ್ಚುಕಟ್ಟಾಗಿ ಬಟ್ಟೆಗಳನ್ನ ಮಡಸಿ ತಯಾರಾದ. ಗಗನ್ ಪುಸ್ತಕವನ್ನು
ಮುಚ್ಚಿಟ್ಟು. ಇಬ್ಬರಿಗೂ ಊಟದ ವ್ಯವಸ್ಥೆ ಮಾಡಿದ. ಅಂಗಡಿಯಿಂದ ತಂದಿದ್ದ ಚಪಾತಿಯನ್ನು ಬಿಸಿ ಮಾಡಿ,
ಅದಕ್ಕೆ ದಾಲ್ ಮಾಡಿ ಇಬ್ಬರು ತಿಂದರು. ಕುಚಿಂಗ್ ಭೂ ಮಧ್ಯ ರೇಖೆಯಲ್ಲಿ ಬರುತ್ತಿದ್ದರಿಂದ ಮತ್ತು ಸದಾ
ಹಸಿರು ಕಾನನ ಇದ್ದುದ್ದರಿಂದ ವಾತಾವರಣದಲ್ಲಿ ಆರ್ದ್ರತೆ ಬಹಳ. ಒಂದು ಶರ್ಟ್, ಶಾರ್ಟ್ ಹಾಕಿ ಕೊಡೆ
ಹಿಡಿದು ಕಾರಿನತ್ತ ನಡೆದರು. ಗಗನ್ ತನ್ನ ಹತ್ತಿರವಿದ್ದ ಫಿಲಂ ರೋಲ್ ಕ್ಯಾಮರವನ್ನು ತೆಗೆದುಕೊಂಡ.
ಅದನ್ನು ಅವರ ಭಾವ ಕೊಡಿಸಿದ್ದರು ಮತ್ತು ಯಾವ ಹೊಸಾ ಜಾಗಕ್ಕೆ ಹೋದರೂ ಅದನ್ನು ತೆಗೆದುಕೊಂಡು ಹೋಗಿ
ಚಿತ್ರಗಳನ್ನು ಸೆರೆಹಿಡಿದು, ಪ್ರಿಂಟ್ ಹಾಕಿಸುವುದು ಮತ್ತು ಹೊಸಾ ಫಿಲ್ಮ್ ರೋಲ್ ಹಾಕಿ ಮತ್ತೊಂದೆಡೆಗೆ ತಯಾರಾಗಿರುವುದು. ಡಿಜಿಟೆಲ್
ಕ್ಯಾಮರಾಗಳು ಬರುತ್ತಿದ್ದ ಕಾಲ, ಆದರೆ ಗಗನ್ ಅದನ್ನ ತೆಗೆದುಕೊಂಡಿರಲಿಲ್ಲ. ಕಾರ್ ಹತ್ತುವಾಗ ನೋಡಿಕೊಂಡ,
ಕ್ಯಾಮರಾಗೆ ಹೊಸ ಫಿಲ್ಂ ರೋಲ್ ಹಾಕಿಸಬೇಕೆಂದು. ಬೆಂಗ್ ಲಿಂ ಮಧ್ಯ ಯಾವುದಾದರೊಂದು ಊರಿನಲ್ಲಿ ಹಾಕಿಸೋಣ
ಎಂದು ಇಬ್ಬರು ಹೊರಟರು.
ಕುಚಿಂಗ್ ಊರನ್ನು ಬಿಟ್ಟು ಸೆಮತಾನ್
ಕಡೆಗೆ ಸಾಗಿದ್ದರು. ಬೆಟ್ಟ-ಗುಡ್ಡಗಳು, ನದಿ-ಝರಿಗಳನ್ನು ದಾಟುತ್ತಾ ವಿಶಾಲವಾದ ರಸ್ತೆಯಲ್ಲಿ ಮಧ್ಯಾಹ್ನದ
ಬಿಸಿಲಿನಲ್ಲಿ , ತೆರೆದ ಕಿಟಕಿಯಿಂದ ನೈಸರ್ಗಿಕ ಗಾಳಿಯಲ್ಲಿ ಕಾರು ಮುಂದೆ ಸಾಗಿತ್ತು. ಕೆಲವೆಡೆ ನಮ್ಮ
ಪಶ್ಚಿಮ ಘಟ್ಟದಂತೆ ತಿರುವುಗಳು, ವಾರಾಂತ್ಯವಾದರೂ ಹೆಚ್ಚಾಗಿ ವಾಹನಗಳೇನೂ ಇರದ ರಸ್ತೆ. ಸುಮಾರು ಒಂದು
ಘಂಟೆ ಚಲಿಸಿರಬಹುದು, ಲುಂಡು ಎಂಬ ಸಣ್ಣ ಪಟ್ಟಣದ ಫಲಕ ನೋಡಿ ಹೆದ್ದಾರಿಯಿಂದ ಕಾರನ್ನು ತಿರುಗಿಸಿದ.
ಅಂಗಡಿ ಮುಂಗಟ್ಟಿನತ್ತ ಬಂದು ಮರದ ನೆರಳಿನಲ್ಲಿ ಕಾರನ್ನು ನಿಲ್ಲಿಸಿ, ಬಲಗೈ ಸ್ಟಿಯರಿಂಗ್ ಮೇಲೆ, ಸ್ವಲ್ಪ ಬಾಗಿ ಎಡಗೈನಿಂದ ಫೂಜಿ ಫಿಲ್ಮ್ ಶಾಪ್ ತೋರಿಸಿ ಬೆಂಗ್ ಲಿಂ, ಗಗನ್ ಹೇಳಿದ,
'There is Fuji Film
Shop. Go and get the Film roll for your camera. I will be in the car only.
(ಅಲ್ಲಿ ಫೂಜಿ ಫಿಲ್ಮ್ ರೋಲ್ ಅಂಗಡಿ ಇದೆ. ನಿನ್ನ ಕ್ಯಾಮರಾಗೆ ಹೋಗಿ ಫಿಲ್ಮ್ ರೋಲ್ ತೆಗೆದುಕೊಂಡು ಬಾ. ನಾನು ಕಾರ್ ನಲ್ಲಿಯೇ ಇರುತ್ತೇನೆ)'.
ನಗರದಲ್ಲಿ ಆಂಗ್ಲ ಭಾಷೆ ಮಾತನಾಡುತ್ತಾರೆ.
ಆದರೆ ಇದು ಹಳ್ಳಿ. ಜೊತೆಗೆ ಗಗನ್ ನ ಭಾರತದಲ್ಲಿನ ಇಂಗ್ಲೀಷ ಉಚ್ಚಾರಣೆ ಮತ್ತು ಇಲ್ಲಿನ ಉಚ್ಚಾರಣೆಗೆ
ಅಜಗಜಾಂತರ. ಅವರು ಇವನನ್ನ ಅರ್ಥ ಮಾಡಿಕೊಳ್ಳುವುದು ಕಷ್ಟ, ಇವನು ಕೂಡ. ಹಾಗಿರುವಾಗ ಈ ಹಳ್ಳಿಯಲ್ಲಿ
ತಾನೆ ಹೋಗಿ ಮಾತನಾಡಿ ಫಿಲ್ಮ್ ರೋಲ್ ತರುವುದು ಹೇಗೆ ಎಂಬ ಚಿಂತೆ ಶುರುವಾಯಿತು. ಬೆಂಗ್ ಲಿಂ ಅಲ್ಲಿಯವನೆ,
ಅವನು ಚೀನಿ ಭಾಷೆಯಲ್ಲಿ ಮಾತನಾಡುತ್ತಿದ್ದ. ಸದಾ ಗಗನ್ ಗೆ ಸಹಾಯ ಮಾಡುತ್ತಿದ್ದ. ಈಗ ಒಮ್ಮೆ ಪ್ರಯತ್ನಿಸಿ
ನೋಡುವ ಎಂದು ಗಗನ್ ಕಾರಿನ ಬಾಗಿಲು ತೆರೆದು ಅಂಗಡಿಯತ್ತ ನಡೆದ.
ಮಧ್ಯಾಹ್ನದ ಬಿಸಿಲು ಮತ್ತು ಬೆವರು.
ಸರ ಸರ ಹೆಜ್ಜೆ ಹಾಕಿ ಅಂಗಡಿಯ ನೆರಳಿನ ಜಾಗಕ್ಕೆ ಬಂದು ಅತ್ತ ಇತ್ತ ತಲೆಯಾಡಿಸಿ ಫೂಜಿ ಫಿಲ್ಮ್ ರೋಲ್
ಅಂಗಡಿಯನ್ನು ನೋಡಿ ಅದರತ್ತ ನಡೆದ. ಸುಮಾರು ಅಂಗಡಿಗಳು ಮುಚ್ಚಿದ್ದವು. ಕೆಲವು ಅಂಗಡಿಗಳಿಂದ ಹವಾನಿಯಂತ್ರಿತ
ತಣ್ಣನೆಯ ಗಾಳಿ ಬರುತ್ತಿತ್ತು. ಎಲ್ಲಿಂದಲೋ ಹಸೀ ಕೋಳಿಯ ಮಾಂಸದ ವಾಸನೆಯು ಬರುತ್ತಿತ್ತು. ಇದರ ಅಭ್ಯಾಸ
ನಗರದಲ್ಲೂ ಅಗಿದ್ದರಿಂದ, ಮುಂದೆ ಸಾಗಿದ. ಕೆಲ ಚೀನಿಯರನ್ನ ಕೆಲ ಅಂಗಡಿಗಳಲ್ಲಿ ಓರೆಗಣ್ಣಿನಿಂದ ನೋಡುತ್ತಾ
ಫೂಜಿ ಫಿಲ್ಮ್ ಶಾಪ್ ಹತ್ತಿರ ಬಂದ. ಗಾಜಿನ ಬಾಗಿಲು,
ಮೇಲೆಲ್ಲಾ ಕ್ಯಾಮರಾ, ಫಿಲ್ಮ್, ಪ್ರಿಂಟ್ ನ ಜಾಹಿರಾತು ಇದ್ದವು. ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ
ಪಕ್ಕದ ಅಂಗಡಿಯತ್ತ ನಡೆದ. ಅದು ತೆರೆದಿರಲಿಲ್ಲ. ಅದರ ಪಕ್ಕದಲ್ಲಿ ಇನ್ನೊಂದು ಅಂಗಡಿ ತೆರೆದಿತ್ತು
ಮತ್ತು ಬಾಗಿಲಲ್ಲಿ ಒಂದು ಧಡೂತಿ ಚೀನಿ ಹೆಂಗಸು ಒಂದು ಕುರ್ಚಿಯ ಮೇಲೆ ಕೂತು ಇವನನ್ನೇ ನೋಡುತಿತ್ತು.
ಗಗನ್ ಅವಳ ಹತ್ತಿರ ಹೋಗಿ, ತೋರ್ಬೆರಳಿನಿಂದ ಅಂಗಡಿಯತ್ತಾ ತೋರಿಸಿ
' No one there ? (ಅಲ್ಲಿ ಯಾರೂ ಇಲ್ಲವಾ?)'
ಎಂದು ಕೇಳಿದ.
ವ್ಯಂಗ್ಯ ಚಿತ್ರದಲ್ಲಿ ಬರುವಂತ ದುಂಡು
ಮುಖ, ದುಂಡು ದೇಹ, ಎಳೆದು ಬಿಟ್ಟಂತಹ ಚೀನಿ ಕಣ್ಣು, ತೀಡಿದ ಹುಬ್ಬು, ನೀಳವಾದ ಕೂದಲಿಗೆ ಕಟ್ಟಿದ್ದ
ರಬ್ಬರ್ ಬ್ಯಾಂಡ್, ಸುಮಾರು ಮೂವತ್ತೆಂಟರಿಂದ ನಲವತ್ತು ವಯಸ್ಸಿರಬಹುದು. ಇವಳು ಎದ್ದು ನಿಂತು ಜೋರಾದ
ಅಬ್ಬರದ ಧ್ವನಿಯಲ್ಲಿ ಎರಡು ಕೈ ಆಡಿಸುತ್ತಾ ಏನೋ ಹೇಳತೊಡಗಿದಳು.
ನಿಶ್ಯಬ್ಧವಾದ ಜಾಗದಲ್ಲಿ ಇದಕ್ಕಿದ್ದಂತೆ ತಮಟೆ ಬಾರಿಸುವಂತೆ ಆಗುವ ಸನ್ನಿವೇಶ. ಗಗನ್ ಗೆ ಅರ್ಥ ಆಗದು
ಇವಳು ಬಿಡಳು. ಫುಜೆ ಫಿಲ್ಮ್ ಶಾಪ್ ನಿಂದ, ಫುಜಿ ಫಿಲ್ಮ್
ರೋಲ್ ಬೇಕು ಎಂದು ಕೇಳಬೇಕು, ಆದರೆ ಅವರ ಭಾಷೆ ಬಾರದು. ಕ್ಯಾಮರ ತೋರಿಸಿ ಹೇಳೋಣವೆಂದರೆ ಕ್ಯಾಮರ ಕಾರಿನಲ್ಲಿದೆ.
ಎರಡನೆಯ ಬಾರಿ ಅಂಗಡಿಯತ್ತ ಕೈ ತೋರಿಸಿ ಯಾರು ಇಲ್ಲವಾ ಅಂತ ಇಂಗ್ಲೀಷ್ ನಲ್ಲಿ ಕೇಳಿದ. ಅವಳ ಕೂಗು
ಇನ್ನಷ್ಟು ಜೋರಾಯಿತು. ಏನು ತೋಚದೆ ಅವಳತ್ತಾ ಬೊಂಬೆ ಹಬ್ಬದಲ್ಲಿ ಇಡುವ ಬೊಂಬೆಯ ತಲೆಗೆ ಹೊಡೆದರೆ ತಲೆಯಾಡಿಸುವಂತೆ,
ತಾನು ಮೇಲೆ ಕೆಳಗೆ ತಲೆಯಾಡಿಸುತ್ತಾ ನೋಡುತ್ತಿದ್ದ. ಭಾಷೆ ಬಾರದ ಊರಲ್ಲಿ ಹಳ್ಳಿಯಲ್ಲಿ ಒಂದು ಸಣ್ಣ
ಫಿಲ್ಮ್ ರೋಲ್ ಕೊಳ್ಳಲು ಇಷ್ಟು ಕಷ್ಟವೇ ಎನ್ನಿಸಿತು.
ಕಡೆಯದಾಗಿ ಎರಡೂ ಕೈ ನಿಂದ ಕ್ಯಾಮರ ಕ್ಲಿಕ್ಕಿಸುವ
ಸಂಕೇತ ಮಾಡಿ ಮತ್ತು ಬಲಗೈ ತೋರ್ಬೆರಳನ್ನು ತೆಗೆದು ವಿಷ್ಣುವಿನ ಸುರ್ದಶನ ಚಕ್ರದಂತೆ ಸುತ್ತಿಸಿ ಫಿಲ್ಮ್
ರೋಲ್ ಎಂದ. ಆಕೆಯ ಮಾತು ಇನ್ನೂ ಜೋರಾಗಿ ನಮ್ಮ ಹಳ್ಳಿಗಳಲ್ಲಿ ಜಗಳ ಕಾಯುವ ಸ್ವರ ಮುಟ್ಟಿತು. ಹೆದರಿ ಓಡಿ ಹೋದರೆ, ಯಾರಾದರು ಹಿಡಿದು ನಾಲ್ಕು ಹೊಡೆದಾರು
ಅಂತ ಏನು ತೋಚದೆ ಹಾಗೆ ನಿಂತ. ಅಷ್ಟರಲ್ಲಿ ಒಬ್ಬ ಚೀನಿ ಯುವಕ ಎದುರಿನಿಂದ ಫೂಜಿ ಫಿಲ್ಮ್ ಶಾಪ್ ಗೆ
ಹೋಗಿದ್ದು ನೋಡಿ, ಇವಳಿಂದ ಬಿಡಿಸಿಕೊಂಡು ಅಲ್ಲಿಗೆ ಹೋದ. ಅವನು ಅಂಗಡಿಯ ಮಾಲಿಕ ಮತ್ತು ಅಚ್ಚು ಕಟ್ಟಾಗಿ
ಇಂಗ್ಲೀಷ್ ಮಾತನಾಡುವುದನ್ನ ನೋಡಿ 'ಬದುಕಿದೆಯ ಬಡ ಜೀವ' ಎಂಬಂತಾಯಿತು. ತಕ್ಷಣ ಫಿಲ್ಮ್ ರೋಲ್ ಕೊಂಡು
ಕಾರಿನತ್ತ ನಡೆದ. ಬೆಂಗ್ ಲಿಂ ಗೆ ಎಲ್ಲಾ ತಿಳಿಸಿ ದಾರಿಯುದ್ದಕ್ಕೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಾ
ಕಡೆಗೂ ಸೆಮತಾನ್ ತಲುಪಿ, ಲೈಟ್ ಹೌಸ್ ನೋಡಿ ಹಿಂತಿರುಗಿದರು.
ಬರುವಾಗ ಗಗನ್ ಗೆ ಈ ಪ್ರಸಂಗದಿಂದ ನೂರೆಂಟು
ಯೋಚನೆಗಳು ಬಂದವು. ಕುಚಿಂಗ್ ನಲ್ಲಿ ತಾನು ಬಂದಾಗ ಕಂಡದ್ದು ಸಂಸ್ಕೃತದ ಬಳಕೆ - ಭೂಮಿಪುತ್ರ, ಪುತ್ರಿ,
ವನಿತ, ಲಕ್ಷ್ಮಣ ಎಂದೆಲ್ಲಾ. ಅಶೋಕನ ಕಾಲದಲ್ಲಿ ಕಳಿಂಗ
ಯುದ್ಧ ನಂತರ ಪೂರ್ವ ಏಷ್ಯಕ್ಕೆ ಬುದ್ಧ ಭಿಕ್ಷುಗಳನ್ನ ಕಳುಹಿಸಿ ಬುದ್ಧನ ತತ್ವಜ್ಞಾನ ಹರಡಿಸಿದ್ದನು.
ಸಾಧಾರಣವಾದ ವಿಷಯಗಳ್ಳನ್ನ ತಿಳಿಸುವುದೆ ಇಷ್ಟು ಕಷ್ಟವಿರುವಾಗ, ತತ್ವಜ್ಞಾನ ಭೋಧಿಸುವುದು ಬ್ರಹ್ಮವಿದ್ಯೆ
ಸರಿ. ಭಾರತದಿಂದ ಚೈನ, ಜಪಾನವರೆಗೂ ಪ್ರಚಾರ ಮಾಡುವುದು ಸಣ್ಣ ವಿಚಾರವಲ್ಲ. ಅಂದಿನವರು ಎಷ್ಟು ಬುದ್ಧಿವಂತರು,
ಸಹನಾಶೀಲರು ನಮ್ಮ ಪೂರ್ವಜರು ಎಂದು ಹೆಮ್ಮೆಯಾಯಿತು. ಭಾರತದಿಂದ ಕಾಡಿನಲ್ಲಿ ನಡೆದು ಬಂದು ಅಥವಾ ದೋಣಿಯಲ್ಲಿ
ಬಂದು ಮಲೇಷ್ಯ, ಥೈಲ್ಯಾಂಡ್, ಇಂಡೋನೇಷ್ಯ, ಚೀನ, ಜಪಾನ್ ದೇಶಗಳಲ್ಲಿ , ಕಾಡಿನ ಜನರಿಗೆ, ಊರಿನ
ಜನರಿಗೆ ತಮ್ಮ ಧರ್ಮದ ಸ್ವರೂಪ ತಿಳಿಸಿ, ಅದನ್ನು ಅನುಸರಿಸಲು ತಿಳಿ ಹೇಳುವುದು ಸುಲಭವಲ್ಲ. ಹಳ್ಳಿಗಳ್ಳಲ್ಲಿ
ಈಗಲೂ ಬಯಲು ನಾಟಕದಲ್ಲಿ ಹೇಳುವಂತೆ 'ಛಪ್ಪನೈವತ್ತಾರು ರಾಷ್ಟ್ರಗಳನ್ನಾಳಿದ ದೊರೆ' - ಐವತ್ತಾರು ರಾಷ್ಟ್ಱಗಳು,
ಅಫಘಾನಿಸ್ಥಾನದಿಂದ (ಗಾಂಧಾರ) ಕಾಂಬೋಡಿಯ (ಕಾಂಪೂಚಿಯ) ವರೆಗಿದ್ದ ಅಖಂಡ ಭಾರತವನ್ನು ರಾಜ್ಯಭಾರ
ಮಾಡಿ, ಧರ್ಮವನ್ನುಳಿಸಿದ ಅಂದಿನ ಭಾರತೀಯರು ಅಸಾಧಾರಣರು.
ವೇದ-ಉಪನಿಷತ್ತಿನಲ್ಲಿ ಹೇಳುವಂತೆ
'ಮನುಷ್ಯನ ಜನ್ಮ ಸಂಪೂರ್ಣವಾಗಲು ಅಥವಾ
ಸಾರ್ಥಕವಾಗಲು, ಜ್ಞಾನ ಮತ್ತು ಕ್ರಿಯೆ, ಈ ಎರಡೂ ಅತ್ಯಗತ್ಯ.
ಕಣ್ಣುಗಳು ಜ್ಞಾನವಿದ್ದಂತೆ, ಕಾಲುಗಳನ್ನು
ಕ್ರಿಯೆಗೆ ಹೋಲಿಸುತ್ತಾರೆ.
ಜ್ಞಾನವಿದ್ದು ಕ್ರಿಯೆಯಿಲ್ಲದ್ದಿದ್ದರೆ,
ಕಾಲಿಲ್ಲದ ಕುಂಟನ ಹತ್ತಿರ ಬಂಧಿತವಾದ ಬುದ್ಧಿ. ನಾಲ್ಕು ಗೋಡೆಗಳ ಮಧ್ಯೆಯಿರುವ ಜ್ಞಾನ ಯಾರಿಗೂ ಉಪಯೋಗವಿಲ್ಲ.
ಜ್ಞಾನ ಹರಡಬೇಕು.
ಜ್ಞಾನವಿಲ್ಲದೆ ಕ್ರಿಯೆಯಿದ್ದರೆ, ಹುಮ್ಮಸ್ಸಿನ್ನಿಂದ
ಓಡಾಡುವ ಕುರುಡನಂತೆ. ಅಪಘಾತಗಳೇ ಹಚ್ಚು. ಎತ್ತ ನಡೆದರೆ ಸರಿ ಎಂಬುದರ ಅರಿವಿಲ್ಲದ ವ್ಯರ್ಥ ಬದುಕಿನಂತೆ.'
ನಮ್ಮ ಹಿಂದಿ ಭಾರತೀಯರು ಸಂಪೂರ್ಣ ಮನುಷ್ಯರಂತಿದ್ದರು.
ಆದ್ದರಿಂದ ಸಂಸ್ಕೃತದ ಛಾಪು, ನಡವಳಿಕೆ ಈಗಲೂ ಪೂರ್ವ ಏಷ್ಯದಲ್ಲಿ ಕಾಣಬಹುದು ಎಂದು ಯೋಚಿಸುತ್ತಿದ್ದಂತೆ
ಇಬ್ಬರೂ ಸಂಜೆ ಮನೆಯನ್ನು ತಲುಪಿದರು. ತತ್ವಜ್ಞಾನದ ಯೋಚನೆಯಿಂದ ಪ್ರಾಕ್ಟಿಕಲ್ ಪ್ರಪಂಚಕ್ಕೆ ಬಂದಿಳಿದನು…
Comments
Post a Comment