ಕಾಶ್ಮೀರದಲ್ಲಿ ಕನ್ನಡದ ಗೋಡೆ...
ಲೇಖನ - ಮಂಜುಳಾ ಡಿ, ಬೆಂಗಳೂರು
ಶ್ರೀನಗರದಲ್ಲಿ ಇಳಿದಾಗ ನಸುಸಂಜೆ ನಾಲ್ಕು ಮೂವತ್ತರ ಆಸುಪಾಸಿನ ಸಮಯ. ಬೆಂಗಳೂರಿನಿಂದ ಹಿಂದಿನ ಮಧ್ಯರಾತ್ರಿ ಆರಂಭವಾದ ಪ್ರಯಾಣ. ನಿದ್ದೆ ಇಲ್ಲದ- ಸತತ ಪ್ರಯಾಣ ಇದರೊಂದಿಗೆ ಶ್ರೀನಗರದಲ್ಲಿ ದಾಖಲೆಯ 37 ಡಿಗ್ರಿಯ ಸುಡುವ ತಾಪ ಎಲ್ಲಾ ಸೇರಿ ಹೈರಾಣವೆನಿಸಿತ್ತು. ಸ್ವಲ್ಪ ಹಿತವಾಗಿ ಏನಾದರೂ ತಿಂದು ತುಸು ಮೈಚೆಲ್ಲಿ ನಿದ್ರಿಸಿದರೆ ಸಾಕು ಎಂಬುದೊಂದೇ ಬಹುಶಃ ಗ್ರೂಪಿನಲ್ಲಿದ್ಷ ಎಲ್ಲರ ಆ ಕ್ಷಣದ ಆಶಯದಂತಿತ್ತು. ಕಾಯ್ದಿರಿಸಿದ ಹೋಟೇಲ್ ತಲುಪಲು ಏರ್ ಪೋರ್ಟ್ ನಿಂದ 15 ಕಿ.ಮೀ ಪಯಣದ ಹಾದಿ. ಡ್ರೈವರ್ ಮಾತಾಡುತ್ರಾ ಕಳೆದ ಹತ್ತನ್ನೆರಡು ದಿನಗಳಿಂದ ಮಳೆಯಾಗದೇ, ಇಂತಹ ಗರಿಷ್ಠ ತಾಪಮಾನ ಕಂಡಿದೆ ಶ್ರೀನಗರ ಎಂದೆಲ್ಲಾ ಹೇಳುತ್ತಾ ಸಾಗಿದ್ದ. ಇನ್ಬೂ ನಾಲ್ಕೈದು ಕಿ.ಮೀ ಸಾಗಿಲ್ಲ! ಜಿಡಿ ಆರಂಭವಾಯ್ತು.
ಡ್ರೈವರ್ "ಬೆಂಗಳೂರಿನಿಂದ ಮಳೆ ತಂದಿದ್ದೀರಾ" ಎನ್ನುತ್ತಾ ತನಗೆ ತಾನೇ ನಕ್ಕ. ಹೈರಾಣಾಗಿದ್ದ ನಮಗೆಲ್ಲಾ ಮಳೆಯ ಜಿಡಿ ತುಸು ತಂಪೆನಿಸಿದ್ದು ಬಹಳ ಕ್ಷಣ ಉಳಿಯಲಿಲ್ಲ. ಕೆಲವೇ ನಿಮಿಷಗಳಲ್ಲಿ ರಕ್ಕಸ ಮಳೆ! ಇಪ್ಪತ್ತು ನಿಮಿಷದ ಹಾದಿಯನ್ನು ಮಳೆ ಒಂದು ತಾಸಿಗೂ ಹೆಚ್ಚಾಗಿಸಿತು. ಇಳಿದ ಕೂಡಲೇ ಹೋಟೇಲಿನ ಶೆಲ್ಟರ್ ಗೆ ಓಡಿ, ಒದ್ದೆ ತಲೆ ಕೊಡವಿಕೊಳ್ಖುತ್ರಾ ಕಾರ್ ಮೇಲಿದ್ದ ಲಗೇಜು ಒದ್ದೆಯಾಗದಂತೆ ಇಳಿಸುವಂತೆ ಡ್ರೈವರ್ ಇತ್ಯಾದಿ ಹೋಟೇನ ಸಿಬ್ಬಂದಿಗೆ ಸೂಚಿಸುವ ಬಗ್ಗೆ ಜೋರು ಕೂಗಾಟ ಮತ್ತು ಮಳೆಯ ಶಬ್ದದಲ್ಲಿ ಯಾವುದು ಜೋರು ಎಂಬ ಕಾದಾಟ ಸಾಗಿತ್ತು. ಇದರ ಮಧ್ಯೆ ಹಿಂದಿನಿಂದ ಅಕ್ಜಾ ಕಾಫಿ/ಟೀ ರೆಡಿಯಿದೆ, ಮಳೆಯಲ್ಲಿ ನೆಂದು ಬಂದಿದ್ದೀರಿ. ಡ್ರೈವರ್ ಮತ್ತು ಹೋಟೆಲ್ ಸಿಬ್ಬಂದಿ ಲಗೇಜು ತರುತ್ತಾರೆ, ಡೈನಿಂಗ್ ಹಾಲ್ ಗೆ ಬನ್ನಿ" ಎಂಬ ಧ್ವನಿ ಕೇಳಿತು. ಕಾಫೀ/ಟೀ ಎಂಬ ಶಬ್ದಗಳು ಕುಡಿದಷ್ಟೇ ಚೈತನ್ಯ ಮೂಡಿಸಿದವು. ಎಲ್ಲಾ ಗೊಣಗಾಟ ನಿಲ್ಲಿಸಿ, "ಬನ್ರೇ! ಮೊದಲು ಕಾಫೀ/ಟೀ ಕುಡಿದು, ನಂತರ ನೋಡುವ ಎಂಬ ಉದ್ಘಾರದೊಂದಿಗೆ ಗೆಳತಿಯರೆಲ್ಲಾ ಡೈನಿಂಗ್ ಹಾಲ್ ಕಡೆ ಹೆಜ್ಜೆ ತಿರುಗಿಸಿದೆವು. ನಾಲ್ಕು ಹೆಜ್ಜೆ ಹಾಕಿರಬೇಕು! ಅಷ್ಟರಲ್ಲಿ ನಾನು, "ಎಲ್ಲಾ ನಿಲ್ಲಿ! ಈಗ ಆತ ಟೀ ಕುಡಿಯಲು ಕರೆದದ್ದು ಕನ್ನಡದಲ್ಲಿಯೇ ಅಲ್ವ!!ಅಂದೆ. ಇಷ್ಟರವರೆಗೆ ಬೈಯಾ , ಸರ್ ಜೀ...ಹಿಂದಿ ಇಂಗ್ಲೀಷ್ ಗಳ ನಡುವೆ ಕಿವಿಗೆ ಕಂಪಾದ ಕನ್ನಡದ ಧ್ವನಿ! ಎಲ್ಲರೂ ತುಸು ನಿಂತೆವು. ಹೌದು ಡೈನಿಂಗ್ ಹಾಲ್ ಗೆ ಬರುವ ಪ್ಯಾಸೇಜಿನಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಇತ್ತಲ್ಲವಾ! ಎಂದೆ. ಎಲ್ಲರೂ ತುಸು ಮೆದುಳಿಗೆ ಕೆಲಸ ಕೊಟ್ಟಂತೆ ಕಂಡಿತು. ಈ ಹೋಟೇಲ್ ಓನರ್ ಕನ್ನಡಿಗನಾದ್ದು, ಆತ ಇಲ್ಲಿ ಕೆಲಸದಲ್ಲಿರಬೇಕು , ಆತ ಪುನೀತ್ ಅಭಿಮಾನಿ ಇರಬೇಕು!, ಅಥವಾ ಪುನೀತ್ ಬಂದಾಗ ತೆಗೆದಿರೋ ಪೋಟೋ ಇರಬೇಕು...ಹೀಗೆ ತೋಚಿದಂತೆ ಕಾಫೀ/ಟೀ ಸವಿಯುತ್ತಾ ಘೋಷಿಸತೊಡಗಿದರು. ಪೇಯಗಳಲ್ಲಿ ಟೀ ಅತ್ಯಂತ ಮೋಹವಿರುವ ಪೇಯ ನನಗೆ. ಆದರೆ ಆ ಗಳಿಗೆ ಕಾಶ್ಮೀರದಲ್ಲಿ ಪುನೀತ್ ರಾಜ್‍ಕುಮಾರ್ ಫೋಟೋದ ಗೋಡೆ ಬಿಟ್ಟರೆ ಇನ್ನೇನೂ ತೋಚದಾಯ್ತು. ಟೀ ಬಿಟ್ಟು ಆ ಗೋಡೆಯ ಮುಂದೆ ಹೋಗಿ ನಿಂತೆ. ಅರಿವಿಲ್ಲದೇ ಆಹ್!! ಎಂದು ಮಾತು ಹೊರಡದೇ ಜೋರಾಗಿ ಕೂಗಿದೆ. ನಾನು ಕೂಗಿದ ಪರಿಗೆ ಗೆಳತಿಯರು ಕಾಫಿ/ಟೀ ಕಪ್ ಹಿಡಿದು ಹೊರಬಂದು ಏನಾಯ್ತು ಎನ್ನುತ್ತಾ ಹತ್ತಿರ ಬಂದವರು ಅವರೂ ಅವಕ್ಕಾದರು!!! ಕಾಶ್ಮೀರದ ಗೋಡೆಯ ಮೇಲೆ ಬೇಂದ್ರೆ, ಕುವೆಂಪು, ಕಾರಂತರ ಕನ್ನಡದ ಕವನಗಳ ಸಾಲುಗಳು! ಈ ಕಡೆ ಗೋಡೆಯ ಮೇಲೆ ಎಲ್ಲಾ ಕನ್ನಡ ನಟರ ಫೋಟೊಗಳು!!! ಇದನ್ನು ನೋಡಿ ಚಂದದ ಭಾವವೊಂದು ತೇಲಿತು. ನಮಗೆ ನಾವೇ ಇದು ಅಚ್ಚ ಕನ್ನಡದ ಭಾವನಾತ್ಮಕ ಜೀವವೊಂದು ಈ ಹೋಟೇಲಿನ ಮಾಲೀಕ ಇರಬಹುದೆಂದು ನಮಗೆ ನಾವೇ ನಿರ್ಣಯಿಸಿಕೊಂಡೆವು. ತಡಮಾಡದೇ ನಾನು ನೇರ ಹೋಟೇಲಿನ ಆಫಿಸ್ ಗೆ ಹೋಗಿ ಹೋಟೇಲಿನ ಮಾಲೀಕರನ್ನು ಭೇಟಿಯಾಗಬೇಕೆಂದು ಸಮಯ ಪಡೆದೆ. ಅಂದೇ ರಾತ್ರಿ 7.30 ಕ್ಕೆ ಹೋಟೇಲ್ ಮಾಲಿಕರ ಭೇಟಿ ಸಾಧ್ಯವಾಯ್ತು. ಈ ಲೇಖನ ಬದುಕು ಕೊಟ್ಟ ಕನ್ನಡದ ನೆಲದ ಬಗ್ಗೆ ಅವರಿಗಿರುವ ಗೌರವ, ಅವರ ಜೀವಿತ ಕಂಡುಂಡ ಏಳುಬೀಳಗಳ ಆಚೆ ಬದುಕು ಕಟ್ಟಿಕೊಂಡ ಪರಿ ಮೋಟಿವೇಷನಲ್ ಸ್ಟೋರಿಗಳ ಪಟ್ಟಿಯಲ್ಲಿರಬೇಕಾದ ಬದುಕಿನ ಹರಿವನ್ನು ಎಲ್ಲರಿಗೂ ತಲುಪಿಸುವ ಚಿಕ್ಕದೊಂದು ಪ್ರಯತ್ನವಾಗಿದೆ. ಅಂದಹಾಗೇ ಅವರೇ ಶಬ್ಬೀರ್!! ಇವರು ಕಾಶ್ಮೀರದಲ್ಲಿ ಕನ್ನಡದ ಕಂಪು ಹರಡುತ್ತಿರುವ ಹಾದಿ ಅರಿಯುವ ಮುನ್ನ ಇವರ ಜೀವಿತದ ಬಗ್ಗೆ ತಿಳಿಯುವ. ಶಬ್ಬೀರ್ ಹುಟ್ಟಿದ ಕೇವಲ ನಲವತ್ತು ದಿನಗಳಿಗೆ ಹತ್ತು ಸಾವಿರ ರೂಗಳಿಗೆ ಮಾರಾಟವಾಗುವ ಕೂಸಾಗುತ್ತಾರೆ. ಕೆಲವು ಅಮಯ ಗತಿಸಿದ ನಂತರ ಖರೀದಸಿದವರು ಮನೆ ಅಳಿಯನಾಗುವ ಹಾದಿ ಆಯ್ದುಕೊಳ್ಳುತ್ತಾರೆ. ಅವರಿಗೆ ಸ್ವಂತದ ಐದು ಮಕ್ಕಳು ಹುಟ್ಟುವ ಹೊತ್ತಿಗೆ ಪರಾಯ ಆಗಿಬಿಡುವ ಶಬ್ಬೀರ್! . ಎರಡು ಸೆಟ್ ತಂದೆ-ತಾಯಿ ಇದ್ದರೂ ಅನಾಥ ಭಾವ-ಯಾರೂ ಸ್ವಂತ ಆಗಿ ಉಳಿಯುವ ಹದಿವಯದ ಆ ಮನದ ಬೇಗುದಿ ಹೇಗಿರವಹುದು. ತುಸು ಬುದ್ದಿ ಬೆಳೆದ ಶಬ್ಬೀರ್ ಆ ದುರ್ಭರ ವಾತಾವರಣ ಭರಿಸಲಾರದೇ ಮನೆ ಬಿಟ್ಟು ಹೊರಬರುತ್ತಾರೆ ಸಿಕ್ಕ ಕೆಲಸಗಳನ್ನು ಮಾಡುತ್ತಾ ಸಾಗುವ ಶಬ್ಬೀರ್ ಕೆಲವು ವರ್ಷ ಮಿನಿ ಬಸ್ ನಕಂಡಕ್ಟರ್ ಕೆಲಸ ಮಾಡುತ್ತಾರೆ. ನಂತರ 2.5 ಲಕ್ಷಕ್ಕೆ ಸೆಕೆಅಂಡ್ ಹ್ಯಾಂಡ್ ಟ್ಯಾಕ್ಸಿ ಕೊಳ್ಳುವ ಶಬ್ಬೀರ್ ನ ಬದುಕು ಅಂದಿನಿಂದ ಡ್ಯಾಕ್ಸಿ ಲೈನ್ ನಲ್ಲಿ ಕೆಲಸ ಆರಂಭಿಸುತ್ತಾರೆ. ಇವರ ಬದುಕು ಮುಖ್ಯವಾಗಿ ತಿರುವು ಪಡೆಯುವುದು, ಕನ್ನಡದ ನೆಲದೊಂದಿಗೆ ನಂಟು ಬೆಸೆಯುವುದು ಆ ಗಳಿಗೆಯಿಂದಲೇ. ಮೊದಲ ಟ್ಯಾಕ್ಸಿ ಕಸ್ಟಮರ್ ಬೆಂಗಳೂರಿನ ಒಬ್ಬ ಮಹಿಳೆ ಆಗಿರುತ್ತಾರೆ. ಶಬ್ಬೀರ್ ತಮ್ಮ ಸಹಜ ನಯದ ಸ್ವಭಾವದಿಂದ ಶ್ರೀನಗರ ಸುತ್ತಾಡಿಸುತ್ತಾರೆ. ಶಬ್ಬೀರ್ ಅವರು ಜತನದಿಂದ ಶೆಹರ ತೋರಿಸದ ಪರಿಗೆ ಆ ಮಹಿಳೆ ಐನೂರು ರೂ ಟಿಪ್ಸ್ ನೀಡಿರುವುದನ್ನು ಇಂದಿಗೂ ಶಬ್ಬೀರ್ ಆಪ್ತವಾಗಿ ನೆನೆಯುತ್ತಾರೆ.
ಕೆಲವೇ ದಿನಗಳ ಅಂತರದಲ್ಲಿ ಆ ಮಹಿಳೆ ತನ್ನೆಲ್ಲಾ ಕುಟುಂದೊಂದಿಗೆ ಮತ್ತೆ ಶ್ರೀ ನಗರಕ್ಕೆ ಬರುತ್ತಾರೆ. ಶಬ್ಬೀರ್ ಅವರು ಎಲ್ಲಾ ಸ್ಥಳಗಳನ್ನು ಅತ್ಯಾಪ್ತವಾಗಿ ಮನಃಪೂರ್ವಕವಾಗಿ ತೋರಿಸಿದ ಪರಿಗೆ ಮನಸೋತ ಕುಟುಂಬ ತೆರಳುವಾಗ ಇಪ್ಪತ್ತು ಸಾವಿರ ರೂ ಟಿಪ್ಸ್ ನೀಡುತ್ತಾರೆ.
ಇದಾದ ನಂತರ ಬಾಯಿಂದ ಬಾಯಿಗೆ ಹರಡುವ ಶಬ್ಬೀರ್ ಪರಿಚಯ ಹರಡುತ್ತಾ ಹೋಗಿ ಕನ್ನಡ ಸೀರಿಯಲ್ ಒಂದರ ತಂಡ ಶ್ರೀನಗರ ಕ್ಕೆ ಬಂದಾಗ ಶಬ್ಬೀರ್ ಸಹಾಯದಿಂದ ಶೂಟಿಂಗ್ ನಡೆಯುತ್ತದೆ. ತದನಂತರ 2013 ರಲ್ಲಿ ಮೊದಲ ಬಾರಿಗೆ "ನಮ್ಮ ದುನಿಯಾ ನಮ್ಮ ಸ್ಟೈಲ್" ಚಿತ್ರತಂಡ ಶ್ರೀನಗರದಲ್ಲಿ ಶೂಟಿಂಗ್ ಸಂಪೂರ್ಣ ಶಬ್ಬೀರ್ ಸಹಕಾರದಿಂದ ಪೂರ್ಣಗೊಳ್ಳುತ್ತದೆ. ಇದಾದ ನಂತರ ಕಾಶ್ಮೀರ ಶ್ರೀನಗರದಲ್ಲಿ ಶೂಟಿಂಗ್ ಎಂದರೆ ಶಬ್ಬೀರ್ ಟ್ರಾವೆಲ್ಸ್ ನೊಂದಿಗೆ ಎಂವಂತೆ ಅನ್ವರ್ಥವಾಗುವಷ್ಟು, ಶಬ್ಬೀರ್ ಕನ್ನಡ ಚಿತ್ರರಂಗದೊಂದಿಗೆ ಬೆಸೆದು ಹೋಗಿದ್ದಾರೆ. 2007 ರಿಂದ ಆರಂಭವಾದ ಟ್ಯಾಕ್ಸಿ ಡ್ರೈವರ್ ಶಬ್ಬೀರ್ ನ ಪಯಣ ಇಂದು 18 ಟ್ಯಾಕ್ಸಿ ಓನರ್ 30 ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದ್ದು, ಹೋಟೇಲ್ ತಾಜ್ ಗ್ರೀನ್ ನ ಮಾಲಿಕನಾಗುಷ್ಟು ಬೆಳೆದಿದ್ದಾರೆ. ಈ ಲೇಖನ ಹರಿವಿಗೆ ಮುಖ್ಯ ಕಾರಣ ಶಬ್ಬೀರ್ ಅವರ ಗ್ರಾಟಿಟ್ಯೂಡ್ ಅಂದರೆ ಋಣಿಯಾಗಿರುವ ಮತ್ತು ಅತ್ಯಂತ ಪಾಸಿಟೀವ್ ಸ್ವಭಾವ. ಹೋಟೇಲ್ ತಾಜ್ ಗ್ರೀನ್ ನ ಎಲ್ಲಾ ರೂಂಗಳ ಬಾಗಿಲ ಮೇಲೆ ಕನ್ನಡ ಅಂಕಿಗಳಿವೆ. ಕುವೆಂಪು, ಬೇಂದ್ರೆ, ಕಾರಂತ ಇತ್ಯಾದಿ ಶ್ರೇಷ್ಠ ಕನ್ನಡ ಕವಿಗಳ ಸಾಲುಗಳನ್ನು ಚಂದದ ಪಟವಾಗಿ ಗೊಡೆಗೆ ಅಲಂಕರಿಸಲಾಗುದೆ. ಕನ್ನಡ ಚಿತ್ರಗಳ ಪಟಗಳೂ ಅಲಂಕರಣವಾಗಿವೆ.
ಅತೀ ಆಕರ್ಷಿಸುವ ಪಾಸಿವಿಟಿಯೇ ಧ್ತೇಯವಾದ ಕೋಟ್ ಗಳಿವೆ. ಕನ್ನಡದ ಮಹಿಳೆಯಿಂದ ಆರಂಭವಾದ ಪಯಣವನ್ನು ಕನ್ನಡ ಚಿತ್ರರಂಗದಿಂದ ಶಬ್ಬೀರ್ ಬೆಳೆದಿರುವುದನ್ನು ಪ್ರತೀ ಹೆಜ್ಜೆಯಲ್ಲೂ ಸ್ಮರಿಸುವ ಶಬ್ಬೀರ್ ಕೃತಜ್ಞತಾ ಮನೋಭಾವವೇ ಅವರನ್ನು ಬೆಳೆಸಿರಬಹುದು. ಅವರ ಸರಳ ಮೃದು ಸ್ವಭಾವದಿಂದ ಹೆಚ್ಚು ಆತ್ಮೀಯವಾಗಿಸವುದೆನ್ನಬಹುದು. ಹೋಟೆಲ್ ತಾಜ್ ಗ್ರೀನ್ ಅಂತೂ ಅತ್ಯಂತ ಕಂಫರ್ಟ್ ಆಗಿದೆ. ಹಸಿರು ಹುಲ್ಲು ಹಾಸು ಹೂಗಳ ಛಾಪು ಒಪ್ಪವಾಗಿರುವ ಕೋಣೆಗಳು ಚಂದವೆನಿಸಿತು. ಕೃತಜ್ಞತಾ ಮನೋಭಾವದಿಂದ ಕಾಶ್ಮೀರದಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಶಬ್ಬೀರ್ ಅವರ ಬದುಕಿನ ಎಲ್ಲಾ ಏಳುಭೀಳುಗಳಾಚೆ ಸಾಗಿ ಬದುಕು ಕಟ್ಟಿಕೊಂಡು ಹಲವರಿಗೆ ಬದುಕು ಒದಗಿಸಿದ ಜೀವಿತ ಕುಸಿದು ಕುಳಿತಾಗ ತುಸು ಸಮಾಧಾನಿಸುವ ಮೋಟಿವೇಷನಲ್ ಸ್ಟೋರಿಯೇ ಸರಿ.
Comments
Post a Comment