ಅಂಥ ಲಕ್ಷ್ಮಣ ಇಂಥ ತಪ್ಪನ್ನು ಮಾಡಿದನೇ"?

 ಅಂಥ ಲಕ್ಷ್ಮಣ ಇಂಥ ತಪ್ಪನ್ನು ಮಾಡಿದನೇ"?

ಲೇಖನ --ಜೆ.ಎಸ್.ಗಾಂಜೇಕರ. ಗಾಂಧಿ ನಗರ, ಕುಮಟಾ, (ಉ. ಕನ್ನಡ )ಕರ್ನಾಟಕ



ಒಮ್ಮೆ ನಾನು ಬಸ್'ನಲ್ಲಿ ಪ್ರಯಾಣಿಸುತ್ತಿರುವಾಗ ಜರುಗಿದ ಘಟನೆ. ಸಹಪ್ರಯಾಣಿಕ ಕೇಳಿದ "ಕಾಲ ಕೆಟ್ಟುಹೋಗಿದೆ. ಶ್ರೀರಾಮನ ಬಗ್ಗೆ ಅವಹೇಳನ ಹೇಳಿಕೆ ಕೊಟ್ಟು, ತೇಜೋವಧೆ ಮಾಡುವುದು ಸರಿಯೇ?" ಆಗ ನಾನು ಹೇಳಿದೆ, "ಶ್ರೀರಾಮನ ಆದರ್ಶತನವನ್ನು, ಆತನ ದೈವೀಗುಣವನ್ನು, ಮೆಚ್ಚಿ ಇಂದಿಗೂ ಪೂಜಿಸುತ್ತ ಬಂದಿದ್ದೇವೆ. ಹೀಗಾಗಿ ಈಗ ಕೆಲವರ ಹೇಳಿಕೆಯಿಂದ ಆ ಮಹಾಪುರುಷನ ಚಾರಿತ್ರ್ಯಹೀನ ಆಗಲಾರದು" ಎಂದು. ನಮ್ಮಿಬ್ಬರ ಸಂವಾದವನ್ನು ಕೇಳುತ್ತಿದ್ದ ಇನ್ನೊಬ್ಬ ಪ್ರಯಾಣಿಕ ಕೇಳಿದ "ದೇವತಾ ಪುರುಷನೆನಿಸಿಕೊಂಡ ಲಕ್ಷ್ಮಣನು 'ಪರಸ್ತ್ರೀ'ಯಾದ ಸೂರ್ಪನಕಿಯ ಮೂಗು ಮೊಲೆ ಕೊಯ್ದ ಎನ್ನುವುದುಸರಿಯೇ? ಈ ಹೇಯ ಕೃತಿ ಮಾಡಿದವನು ಹೇಗೆ  ತಾನೆ ಪೂಜನೀಯ? ಆಗ ನಾನು ಸವಿಸ್ತಾರವಾಗಿ ವಿವರಿಸಿ, ಈ ರೀತಿಯಾಗಿ ಹೇಳಿದೆ,

ಕಾಡಿನಲ್ಲಿಯ ಆಶ್ರಮದಲ್ಲಿದ್ದ ಶ್ರೀರಾಮನ ಸುಂದರ ರೂಪವನ್ನು ನೋಡಿ, ರಾಕ್ಷಸಿ ಶೂರ್ಪನಕಿ ಮೋಹಿತಳಾಗುತ್ತಾಳೆ. ರಾಕ್ಷಸೀ ರೂಪದಲ್ಲಿ ಹೋದರೆ ರಾಮನು ನಿರಾಕರಿಸಬಹುದೆಂದು ತಿಳಿದು, ಮಾಯಾವಿಯಾದ ಶೂರ್ಪನಕಿ ಸುಂದರ ರೂಪ ತಾಳಿ ರಾಮನಲ್ಲಿಗೆ ಹೋಗಿ, ತನ್ನನ್ನು ಮದುವೆಯಾಗೆಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆಗ ರಾಮನು ತಾನು ಈಗಾಗಲೇ ಮದುವೆಯಾಗಿದ್ದೇನೆ ಎಂದು ಹೇಳುತ್ತಾನೆ. ಅವಳು ನಿರಾಸೆಗೊಂಡು ತಿರುಗಿ ಹೋಗುವಾಗ ರಾಮನಷ್ಟೇ ಸುಂದರನಾದ ಲಕ್ಷ್ಮಣನನ್ನು ಆ ದಟ್ಟವಾದ ಕಾಡಿನಲ್ಲಿ ನೋಡುತ್ತಾಳೆ. ಆತನನ್ನು ಒಲಿಸಿಕೊಳ್ಳಲು ತನ್ನ ಮಾಯಾ ಶಕ್ತಿಯಿಂದ ವಿಶ್ವಸುಂದರಿಯಾಗಿ ಲಕ್ಷ್ಮಣನ ಬಳಿ ಹೋಗಿ ತನ್ನನ್ನು ವರಿಸಿಕೊಳ್ಳುವಂತೆ ಬಾರಿ ಬಾರಿ ಹೇಳುತ್ತಾಳೆ. ಆಗ ಲಕ್ಷ್ಮಣನು ಸುತಾರಂ ಒಪ್ಪುವುದಿಲ್ಲ. ಲಕ್ಷ್ಮಣನ ನಯನಮನೋಹರ ರೂಪ ಕಂಡು ಕಾಮಾಂಧತೆ ಹೆಚ್ಚಾಗಿ, ಆತನನ್ನು ಅಪ್ಪಿಕೊಳ್ಳಲು ಹೋಗುತ್ತಾಳೆ. ಅವಳ ಅಪ್ಪುಗೆಯನ್ನು ತಪ್ಪಿಸಿಕೊಳ್ಳಲು ಆ ಅರಣ್ಯದಲ್ಲಿ ಒಂದು ಮರದಿಂದ ಇನ್ನೊಂದು ಮರದ ಬಳಿಗೆ ಹೋಗಿ ಅವಿತುಕೊಳ್ಳುತ್ತಾ, ಅವಳ ಅಪ್ಪುಗೆಯನ್ನು ತಪ್ಪಿಸಿಕೊಳ್ಳುತ್ತಾ ಹೋಗುತ್ತಾನೆ. ಆ ಶೂರ್ಪನಕಿ, ಲಕ್ಷ್ಮಣ ಆ ಮರದ ಕೆಳಗೆ ಅವಿತುಕೊಂಡಿದ್ದಾನೆಂದು ಆ ಮರವನ್ನು ಅಪ್ಪುತ್ತಾಳೆ. ಅಲ್ಲಿ ಲಕ್ಷ್ಮಣ ಕಾಣದಿದ್ದಾಗ ಇನ್ನೊಂದು ಮರವನ್ನು ಅಪ್ಪುತ್ತಾಳೆ, ಲಕ್ಷ್ಮಣನು ಇದ್ದಾನೆಂದು. ಆತನನ್ನು ಅಪ್ಪಿಕೊಳ್ಳಲೇ ಬೇಕೆಂಬ ಉತ್ಕಟ ಇಚ್ಛೆಯಿಂದ ಒಂದು ಮರಕ್ಕೆ ರಭಸದಿಂದ ಅಪ್ಪಿಕೊಳ್ಳುತ್ತಾಳೆ, ಈ ಮರದ ಕೆಳಗೆ ಲಕ್ಷ್ಮಣ ಇದ್ದೇ ಇದ್ದಾನೆಂದು. ಕಾಮಾಂಧತೆಯಿಂದ ಅಪ್ಪಿಕೊಂಡ ಆ ಮರವು ದೊಡ್ಡ ದೊಡ್ಡ ಚೂಪಾದ ಮುಳ್ಳಿನಿಂದ ಕೂಡಿದ ಮರವಾಗಿತ್ತು. ಆ ಮುಳ್ಳುಗಳು ಅವಳ ಮೂಗಿಗೂ ಸ್ತನಕ್ಕೂ ತಾಗಿ, ರಕ್ತ ಸುರಿಯತೊಡಗಿತು. ಆ ನೋವು ತಡೆಯಲಾರದೇ ಆಕೆ ಸೀದಾ ಲಂಕೆಗೆ ಹೋಗಿ ತನ್ನ ಸಹೋದರ ರಾವಣನಲ್ಲಿಗೆ ಹೋಗಿ ಲಕ್ಷ್ಮಣನು ತನ್ನ ಮೂಗು ಮೊಲೆ ಕೊಯ್ದನೆಂದು ಸುಳ್ಳು ಹೇಳಿದಳು. ಇದು ನಿಜವಾದ ಘಟನೆ. ಈ ರೀತಿಯಗಿ ವಿವರಿಸಿ ಹೇಳಿದೆ.

ಹೌದು! ಇದು ನಿಜವಾಗಿಯೂ ಜರುಗಿದ ಘಟನೆಯೆಂದು ಆತನೂ ಒಪ್ಪಿಕೊಂಡ. ದೇವತಾ ಪುರುಷರು ಧರ್ಮವನ್ನರಿತು ಬಾಳಿದವರು. ಹೀಗಾಗಿ ನಾನು ವಿವರಿಸಿದ ಸಂಗತಿ ಸರಿಯೆಂದು ತಿಳಿಯುತ್ತೇನೆ.


ತಮ್ಮ ಅನಿಸಿಕೆ ತಿಳಿಸಿ.


Comments