ಗಳಿಕೆ

 ಗಳಿಕೆ

ಲೇಖನ - ಮಂಜುಳಾ ಡಿ, ಬೆಂಗಳೂರು 



ಒಳಿತೊಂದೇ ಶಾಶ್ವತವು ಉಳಿದುದೆಲ್ಲವಳಿಯುವುದು

ಅಳುವ ನೀನೊರೆಸಿದುದು ನಗುವ ನೀ ನಗಿಸಿದುದು

ಒಲಿದು ನೀಂ ನೀಡಿದುದು ನಲಿವ ನೀನೆಸಗಿದುದು

ನೆಲೆಸುವುವು ಬೊಮ್ಮನಲಿ-ಮರುಳ ಮುನಿಯ||

ಇದೊಂದು ಸತ್ಯ ಕಥೆ. ಕಛೇರಿಗೆ ಇನ್ನೂ ಹೆಜ್ಜೆ ಇಡಲಿಲ್ಲ ನನ್ನ ಸಿಬ್ಬಂದಿಯೊಬ್ಬ ಮಂಕು ಹಿಡಿದವನಂತೆ ಕುಳಿತಿದ್ದ. ಕರೆದು ತುರ್ತಾಗಿ ಮಾಡಬೇಕಾಗಿದ್ದ ಕೆಲಸದ ಬಗ್ಗೆ ವಿಚಾರಿಸಿದರೆ, ತನ್ನ ಮನೆಯಲ್ಲಿ ಹತ್ತಿರದ ಸಂಬಂಧಿಯೊಬ್ಬರ ಸಾವಾಗಿದೆ. ಆದರೆ ಆತ ಬದುಕು ಪೂರ್ತಿ ತಮಗೆ ಕೆಡಕು ಬಯಸುತ್ತಲೇ ಬಂದದ್ದರಿಂದ ಮನೆಯಲ್ಲಿ ಯಾರೂ ಹೊಗಲು ತಯಾರಿಲ್ಲ, ಅನಿವಾರ್ಯವಾಗಿ ತಾನು ಹೋಗಬೇಕಾಗಬಹುದೇನೋ, ಎಂಬ ಬಾದೆಯನ್ನು ತಿಳಿಸಿದ. ಆತನಿಂದ ಕಡತ ತರಿಸಿ ನಿನ್ನಿಷ್ಟ, ಸಮಯ ತೆಗೆದುಕೋ ಎಂದೆ. ಈ ಹುದ್ದೆಗೆ ಬಂದಾಗಿನಿಂದ ಅಣ್ಣ-ತಮ್ಮ ದಾಯಾದಿಗಳೇ ಎಂಬುದು ಅನ್ವರ್ಥವಾಗುವಂತಹ, ಇವರು ಮನುಷ್ಯರಾ ಎನಿಸುವಂತಹ ಸಾಕಷ್ಟು ಕಣ್ಮುಂದೆ ಹಾಸಿದ ಘಟನೆಗಳನ್ನು ನೋಡಿದ್ದರಿಂದ ಇದೇನು ಹೊಸತು ಎನಿಸಲಿಲ್ಲ.

ಮನೆಯಿಂದ ಬಂದ ಕರೆ. ತುರ್ತಾಗಿ ಕಛೇರಿ ಬಿಟ್ಟು ಹೊರಡಬೇಕಾಯಿತು. ಇನ್ನೇನು ಸಂಜೆ ನಾಲಕ್ಕರ ಸಮಯ. ಬೆಳಿಗ್ಗೆ ಸಮಯ ಕೊಟ್ಟ ಸಿಬ್ಬಂದಿಗೇ ಡ್ರಾಪ್‌ ಮಾಡಲು ಹೇಳಿದೆ. ಮುಂದಿನ ಹಳ್ಳಿಯ ಹತ್ತಿರ ಸಾಗುತ್ತಿದ್ದಂತೆ ಹಠಾತ್‌ ದೊಡ್ಡ ಜನಸಂದಣಿ! ಇಲ್ಲಿ ಯಾರೋ ಅಧಿಕಾರಿ ಬಂದಿರಬೇಕು ಇತ್ಯಾದಿಗಳ ಎಣಿಸುತ್ತಾ ಮುಂದೆ ಸಾಗುತ್ತಲೇ ತಲೆ ಕೆಡುವಂತೆ ಸರ್ಕಾರಿ ಹಸಿರು ಬೋರ್ಡ್‌ ಹೊತ್ತ ವಾಹನಗಳ ಸಾಲು!!

ಇಲ್ಲಿ ಯಾವುದೂ ಕಾರ್ಯಕ್ರಮ ನಿಗಧಿಯಾಗಿರಲಿಲ್ಲವಲ್ಲ, ಏನೋ ದೊಡ್ಡ ಘಟನೆ ಘಟಿಸಿರಬೇಕು ಎಂದು ಅಂದಾಜಿಸುತ್ತಾ ಅನತಿ ದೂರದಲ್ಲೇ ಬೈಕು ನಿಲ್ಲಸಿ ನೋಡಿಕೊಂಡು ಬರುವಂತೆ ಸಿಬ್ಬಂದಿ ಕಳುಹಿಸಿದೆ. ಏದುಸಿರು ಬಿಡುತ್ತಾ ಬಿಡುತ್ತಾ ಹಿಂದಿರುಗಿದ ನನ್ನ ಸಿಬ್ಬಂದಿ, “ಒಂದು ಸಾವಾಗಿದೆ” ಅಂತ ಕಂಬನಿಗಣ್ಣಿನಿಂದ ನುಡಿದು ಮುಂದೇ ಶೂನ್ಯ ಕವಿದವನಂತೆ, ಏನು-ಎತ್ತ ಕೇಳುವ ಮುನ್ನವೇ ಹಾಯುತ್ತಿದ್ದ ಆಟೋ ಒಂದಕ್ಕೆ ತಡೆಹಾಕಿ “ನೀವು ಹೊರಡಿ” ಅಂತ ಅವಸರಿಸಿದ.

ಅರ್ಥಕ್ಕೆ ನಿಲುಕದ ಸ್ಥಿತಿ. ನನಗೋ ಮನೆಯಿಂದ ಬರುತ್ತಿದ್ದ ಕರೆಗಳ ಹಾವಳಿಯಲ್ಲಿ ಈ ವಿಷಯದ ಬಗ್ಗೆ ಯೋಚಿಸಲಿಲ್ಲವಾದರೂ, ಹಿರಿಯ ಜನಪ್ರತಿ ನಿಧಿ ಅಥವಾ ಹಿರಿಯ ಸಿನೆಮಾ ತಾರೆಯ ಸಾವಿಗೆ ಸೇರಬಹುದಾದಷ್ಟು ಜನಸಂದಣಿಯಾಗುವಂತಹ ಯಾವ ವ್ಯಕ್ತಿಯೂ ತನಗೆ ತಿಳಿದಂತೆ ಆ ಊರಿನಲ್ಲಿ ಇಲ್ಲ ಮತ್ಯಾರ ಸಾವಿರಬಹುದು!!! ಈ ಪ್ರಶ್ನೆ ಮಾತ್ರ ಆಗಾಗ ಬಾಧಿಸುತ್ತಲೇ ಇತ್ತು. ರಾತ್ರಿ ಹತ್ತರ ನಂತರ ಎಲ್ಲಾ ಒತ್ತಡಗಳ ದಾಟಿ ನಂತರ ನನ್ನ ಸಿಬ್ಬಂದಿಗೆ ಕರೆ ಮಾಡಿದೆ. ಸುಮಾರು ಅರ್ಧ ಗಂಟೆಯ ಮಾತಾಯಿತು. ಆದರೆ ಆ ಅರ್ಧ ಗಂಟೆಯ ಮಾತು ಜೀವಮಾನ ನೆನಪಿಡುವ ಪಾಠವಾಗುತ್ತದೆ ಎಂದು ಮಾತ್ರ ಊಹಿಸಿರಲಿಲ್ಲ!!

ಜನ ಸಮೂಹಕ್ಕೆ ಮರೆವು ಅತೀವ ಎನ್ನುವುದೆಷ್ಟು ಸತ್ಯವೋ ಪ್ರತಿಫಲ ಬಯಸದೇ ಮಾಡಿದ ಸಹಾಯಗಳು ಜನಮಾನಸದಲ್ಲಿ ಶಾಶ್ವತವಾಗಿ ಅಚ್ಚಾಗುವುದು ಅಷ್ಟೇ ಸತ್ಯ. ಅಂದು ಸಾವಿಗೀಡಾದವರು ಯಾರೋ ರಾಜಕೀಯ ವ್ಯಕ್ತಿ ಅಥವಾ ಸಿನೆಮಾ ತಾರೆಯಾಗಿರಲಿಲ್ಲ! ಆತ ಯಾವುದೇ ಪ್ರತಿಫಲ ಬಯಸದೇ ಸಮಯಕ್ಕೆ ತೋರಿದ ಕರುಣೆಯು ಅಷ್ಟು ಜನಸಮೂಹವನ್ನು ಎಳೆದು ತಂದಿತ್ತು.

ಅಂದು ಸಂಜೆ ತೀರಿ ಹೋದವನು ಹೆಣಕ್ಕೆ ಚಟ್ಟ ಕಟ್ಟುವವನಾಗಿದ್ದ!!

ಸುತ್ತಮುತ್ತಲ ಯಾವುದೇ ಊರಿನಲ್ಲಿ ಸಾವಾದರೂ ಅವರು ಕರೆಯದೇ ಇದ್ದರೂ ಆತನೇ ಖುದ್ದಾಗಿ ಹೋಗಿ ಚಟ್ಟದ ಸಮಸ್ತ ಏರ್ಪಾಡು ಮಾಡುತ್ತಿದ್ದ. ಯಾವುದೇ ಸಾಮಗ್ರಿಗಾಗಿ ಏನನ್ನೂ ಕೇಳುತ್ತಿರಲಿಲ್ಲ. ಅವರ ಪದ್ದತಿಯೊಂದನ್ನು ಕೇಳಿ ಅವರವರಿಗನುಗುಣವಾಗಿ ಸರಿಮಾಡಿ ಬರುತ್ತಿದ್ದ. ಅವರಾಗೇ ಕೊಟ್ಟರೇ ಹೊರತು ತಾನಾಗಿ ಏನನ್ನೂ ಎಂದಿಗೂ ಕೇಳುತ್ತಿರಲಿಲ್ಲ. ಹಾಗೂ ಕೊಟ್ಟ ಹಣವನ್ನು ಯಾರಿಗಾದರೂ ಅನುಕೂಲ ಮಾಡಲೆಂದೇ ಬಳಸುತ್ತಿದ್ದ ಹೊರತು ಜೀವನ ನಿರ್ವಹಣೆಗಲ್ಲ. ಸುತ್ತಮುತ್ತಲ ಎಲ್ಲಾ ಊರುಗಳವರಿಗೆ ಈತನ ಉಪಸ್ಥಿತಿಯಿಂದ ಮುಖ್ಯವಾದ ಕಾರ್ಯವೊಂದು ಸರಳವಾಗಿ ನಿರ್ವಹಣೆಯಾಗುತ್ತಿದ್ದರಿಂದ ಈತನನ್ನು ಬಹಳ ಗೌರವದಿಂದ ಕಾಣುತ್ತಿದ್ದರೂ ಎಂದೂ ಸೊಕ್ಕು ಮಾಡದ ಸರಳ ಜೀವಿ.

ನನ್ನ ಸಿಬ್ಬಂದಿ ಕಣ್ಣು ತುಂಬಿಕೊಂಡದ್ದಕ್ಕೆ ಕಾರಣ ಕೇಳಿ, ಮತ್ತಷ್ಟು ಅಚ್ಚರಿಯಾಯಿತು. ತೀರಾ ಚಿಕ್ಕ ವಯಸ್ಸಿನಲ್ಲಿ ಆತನ ತಂದೆಯ ಸಾವಿನ ವೇಳೆ ಚಿಕ್ಕದೊಂದು ಅಪೇಕ್ಷೆಯನ್ನೂ ಮಾಡದೇ, ಆತ ಮಾಡಿದ ಸಹಾಯ ನೆನೆದು ಮತ್ತೆ ಮಾತಾಡುವಾಗ ಕಣ್ಣೀರಾದ. ಆ ಕಣ್ಣ ಹನಿ ʼಹೇಗೆ ನಿನ್ನ ಋಣ ತೀರಿಸಬಲ್ಲೇʼ ಎಂಬಂತಿದ್ದುದು ಸ್ಪಷ್ಟವಾಗಿ ನಿಲುಕುತ್ತಿತ್ತು. ವಿವರಿಸುತ್ತಾ ಹೋದ ʼನಮ್ಮ ಆ ಸ್ಥಿತಿಯಲ್ಲಿ ನಮಗೆ ಯಾರು ಒದಗುವುದು ಸಾಧ್ಯವಿತ್ತು? ಕುಲ-ನೆಲ-ಜಲ ಯಾವುದೂ ನೋಡದೇ ಆತ ಮಾಡಿದ್ದು ನಮ್ಮ ಯಾರೂ ನೆಂಟರೂ ಮಾಡಲಿಲ್ಲ,ಮಾಡಲಾರರು..ʼ ಎಂದು ಮನಸ್ಸು ತುಂಬಿಕೊಂಡ. ಮತ್ತು ಇಂತಹ ಪರಿಸ್ಥಿತಿಗಳಲ್ಲಿ ಸಾವಿರಗಳ ಲೆಕ್ಕದಲ್ಲಿ ಕುಟುಂಬಗಳಿಗೆ ಒದಗಿರುವ ಕಥೆಗಳ ಬಗ್ಗೆ ತೆರೆದಿಡುತ್ತಾ ಹೋದ.

ರಾತ್ರ 11.30 ರ ಸಮಯ. ಚಹಾ ಕಪ್‌ ಹಿಡಿದು ಬಾಲ್ಕನಿಯ ಚೇರಿನಲ್ಲಿ ಕುಳಿತೆ. ಎತ್ತರದಿಂದ ಪ್ರಖರ ದೀಪ ತಿಳಿ ಹಳದಿ ಬೆಳಕನ್ನು ಹಾಸಿತ್ತು. ಕತ್ತಲು-ಬೆಳಕುಗಳ ವಿಲಕ್ಷಣ ಮಿಶ್ರಣದಲ್ಲಿ ಮಿಂದೇಳುವ ರಸ್ತೆ. ಪ್ರತಿನಿತ್ಯ ನಾನು ನೋಡುವ ಘಟನೆಗಳು-ಮನುಷ್ಯರ ವರ್ತನೆಯಾಚೆಗಿನ ಘಟನೆಯಿದು. ಕ್ಷೋಭೆಗೊಂಡ ಜನಸಂದಣಿಯನ್ನು ಹಠಾತ್ತಾನೆ ಸ್ತಬ್ದಗೊಳಿಸಬಲ್ಲ ಒಂದು ದೂರದ ಆಲಾಪದಂತೆ ಆ ಘಟನೆ ಭಾಸವಾಯಿತು. ಮನುಷ್ಯ ಮನುಷ್ಯರನ್ನೇ ತಮ್ಮ ಸ್ವಾರ್ಥಗಳಿಗಾಗಿ ಹೊಡೆದು ಉರುಳಿಸುವ, ಸ್ನೇಹಿತರ ರೂಪದಲ್ಲಿರುವವರು ಬೆನ್ನಿಗೇ ಚೂರಿ ಇರಿಯುವ, ಚಿಕ್ಕ-ಚಿಕ್ಕ ಮಾತಿಗೆ ಬಂಧಗಳನ್ನು ಕಳಚಿಕೊಳ್ಳುವ, ರಕ್ತ ಸಂಬಂಧಗಳು ಕೇವಲ ಆಲ್ಬಂಗೆ ಸೀಮಿತವಾಗುವ, ಒಂದೆರಡು ಅಡಿಗಳಿಗೆ ಬಡಿದಾಟಗಳಾಗಿ ರಕ್ತಪಾತವಾಗುವ ಕಾಲಘಟ್ಟದಲ್ಲಿ, ಹೀಗೆ ಮನುಷ್ಯತ್ವ-ಮಾನವೀಯತೆ ಇಂತಹ ಶಬ್ದಗಳೇ ಅಪರೂಪವೆನಿಸುವ ಸಮಾಜದಲ್ಲಿ ಇಂತಹ ವ್ಯಕ್ತಿತ್ವಗಳು ದೈವ ಸ್ವರೂಪ ಎನಿಸದೇ ಇರಲಾರದು. ಆತ ನಿಜಕ್ಕೂ ನೋಟುಗಳನ್ನು ಹಳದಿ ಲೋಹವನ್ನು ಸಂಗ್ರಹಿಸಲಿಲ್ಲವೇನೋ. ಆದರೆ ಅಂದು ಬಂದ ಎಲ್ಲರೂ ಕೃತಜ್ಞಾಪೂರ್ವಕವಾಗಿ ಆತನಿಗಾಗಿ ಬಂದಿದ್ದವರು. ಆತ ಮಾಡಿದ್ದನ್ನು ಸ್ಮರಿಸಿ ಬಂದವರು ಎಂಬುಂದು ಮಾತ್ರ ಸ್ಪಷ್ಟವಿತ್ತು.

ಪ್ರತಿಫಲ ಬಯಸದೇ ತೋರಿದ ಕರುಣೆಯ

ಮೊದಲು ಮನುಜನೆಂಬ ಸಾರ್ಥಕತೆಯು ನೆಮ್ಮದೀ ತರುವುದು…

ಆಟೋವೊಂದರಲ್ಲಿ ಮೆಲುದನಿಯಲ್ಲಿ ಸಾಗುತ್ತಿದ್ದ ಹಾಡು ಆಗಸದಲ್ಲಿ ಮೋಡಗಳೊಂದಿಗೆ ತೇಲುತ್ತಿದ್ದ ಚಂದ್ರನಷ್ಟೇ ಕಂಪು ತಂದಿತು.


Comments

  1. This comment has been removed by the author.

    ReplyDelete
  2. ಲೇಖನ ನೈಜ ಸಂಗತಿಯ ಸೊಗಸಾದ ವರ್ಣನೆ ಚೆನ್ನಾಗಿದೆ

    ReplyDelete

Post a Comment