ಸ್ಪಾಟೆಡ್‌ ವೇಲ್ಸ್

 ಸ್ಪಾಟೆಡ್‌ ವೇಲ್ಸ್

ಹಾಸ್ಯ ಲೇಖನ - ಅಣಕು ರಾಮನಾಥ್



“ಹುಷಾರ್!‌ ದೋಣಿ ಹೊಯ್ದಾಡಬಹುದು” ಎಂದು ಎಚ್ಚರಿಕೆನುಡಿ ಮೊಳಗಿತು. 

ದೋಣಿ ಹೊರಟಿತು. ಕನಕಾಪುರ ನಾರಾಯಣರ ಪಕ್ಕ ಕುಳಿತುಕೊಳ್ಳುತ್ತಾ “ಹ್ಹ!” ಎಂದೆ. ವೇಲ್‌ ವಾಚಿಂಗ್‌ ಎಂಬ ಅಮೋಘ ದೃಶ್ಯವೀಕ್ಷಣೆ ನಮ್ಮ ಗುರಿಯಾಗಿತ್ತು.

“ವೇವ್ಸ್‌ ಇದ್ದರೆ ಸ್ವಲ್ಪ ಕಷ್ಟವೇ” ಎಂದರಾತ. 

“ನನಗೆ ಸಮುದ್ರದ ವೇವ್‌ಲೆಂತ್‌ ಮ್ಯಾಚ್‌ ಆಗತ್ತೆ” ಎಂದು ಉಡಾಫಿಸಿದೆ. 

ದೋಣಿ ಚಲಿಸಿತು. ಹತ್ತು ನಿಮಿಷವಾಯಿತು, ಹದಿನೈದೂ ಆಯಿತು. ಅಲೆಗಳ ಹೊಡೆತಕ್ಕೆ ದೋಣಿ ಅತ್ತಿತ್ತ ಚಲಿಸಿದಾಗ ನಮ್ಮ ರಾಜಕೀಯದಲ್ಲಿ ಲೆಫ್ಟಿಸ್ಟುಗಳು ರೈಟಿಸ್ಟುಗಳಾಗುವಂತೆಯೂ, ರೈಟಿಸ್ಟುಗಳು ಲೆಫ್ಟಿಗೆ ಟ್ವಿಸ್ಟ್‌ ಆಗುವಂತೆಯೂ ನಿಂತ ಜನ ಪಕ್ಷಾಂತರಿಸಿದರು. ಕುಳಿತಿದ್ದವರು ಮಂತ್ರಿಗಿರಿ ಸಿಕ್ಕವರಂತೆ ನೆಮ್ಮದಿಯಿಂದಿದ್ದರು. ನಾನಂತೂ ನೆಮ್ಮದಿಯೇ ಮೂರ್ತಿವೆತ್ತಂತಿದ್ದೆ. 

ದೋಣಿ ಮುಂದುವರಿಯಿತು. ಕುಳಿತ ಜಾಗದಿಂದೆದ್ದು ದೋಣಿಯ ಎಡಬದಿಗೆ ಬಂದು ನಿಂತು ಸಮುದ್ರದತ್ತ ನೋಡಿದೆ. ಆಹಾ! ನಿಸಾರ್‌ ಅಹಮದರೇನಾದರೂ ಅದನ್ನು ಕಂಡಿದ್ದರೆ 

ಶಾಖದಿ ಬುಡ ಕಾಯುವಲ್ಲಿ ಪಾಕದವನು ಇರದೆ ಅಲ್ಲಿ

ಉಕ್ಕುಕ್ಕುತ ಕ್ಷೀರ ತಾನು ಪಾತ್ರೆಯಂಚ ಮೀರುವಲ್ಲಿ

ನಿತ್ಯ ಹರಿದ್ಬರುವ ಬೋಟು ಶಿಪ್ಪು ತೆಪ್ಪಗಳಿಗೆ ಇಲ್ಲಿ

ಸ್ನಾನೋತ್ಸವ ನಿತ್ಯ ಸ್ನಾನೋತ್ಸವ 

ಎನ್ನುತ್ತಿದ್ದರೇನೋ. ರತ್ನನ ಪದಗಳನ್ನು ರಚಿಸಿದ ರಾಜರತ್ನಂ ಅಂತೂ 

ಬುರ್‌ ಬುರ್‌ ನೊರೆ ಬಸ್ಯೊವಂತ ಒಳ್ಳೆ ಉಳಿ ಎಂಡ

ಉಕ್ವಂಗೇನೇ ಉಕ್ತೈತ್‌ ನೋಡು ಉಣ್ಮೇಲೀ ಸಮುಂದ್ರ

ಎಂದು ಬರೆಯುತ್ತಿದ್ದರೆನಿಸುತ್ತದೆ. ಸಮುದ್ರದ ಮೇಲೆ ಅವರಿಗೆ ಪ್ರೀತಿಯೇನಾದರೂ ಉಕ್ಕಿದ್ದಿದ್ದರೆ 

ಮೂಗ ಆದಂಗ್‌ ಆಗ್ತೀನ್‌ ನಾನು ಇಂಗ್‌ ಸಮುದ್ರ ಉಕ್ದ್ರೆ

ಆಡ್ಬೇಕಂದ್ರೆ ಮಾತೇ ಬರ್ದೂ ಈ ಸೊಗ್ಸನ್ನ ಕಂಡ್ರೆ 

ಎಂದೂ ಉಲಿಯುತ್ತಿದ್ದರೇನೋ. ದುಶ್ಶಾಸನನು ದ್ರೌಪದಿಯ ಸೀರೆಯನ್ನು ಸೆಳೆದಾಗ ಆ ಸೀರೆಯು ನೆರಿಗೆನೆರಿಗೆಯಾಗಿ ಒಂದೆಡೆ ಬೀಳುತ್ತಿದ್ದಂತೆ ಕಾಣುತ್ತಿತ್ತು ಆ ನೀರಿನೋಟ. 

WWF ಗೊತ್ತಲ್ಲವೆ ನಿಮಗೆ? ಠೊಣಪನೊಬ್ಬನು ಹಂಚಿಕಡ್ಡಿಯೊಬ್ಬನನ್ನು ಎತ್ತಿ ಎಸೆಯುವುದು ಅದರಲ್ಲಿನ ಮೂಮಾಲು ದೃಶ್ಯ. ಆ ಆಟಕ್ಕೆ ಪ್ರೇರಣೆ ಈ ಸಮುದ್ರವೇ ಇರಬೇಕು. ಬೋಟಿನ ಬುಡಕ್ಕೆ ಕೈಹಾಕಿ ಅದನ್ನು ಎತ್ತಿಕುಕ್ಕಲು ನಿರ್ಧರಿಸಿದಂತಿತ್ತು ಅದರ ಓಟ. ನಮ್ಮ ಬೋಟು ಹಿಂದಿ ಚಿತ್ರದ ಪೆಟ್ಟು ಬಿದ್ದರೂ ಇನಿತೂ ದಣಿಯದೆ ಸೇರಿಗೆ ಸವ್ವಾಸೇರಾಯಿತು. “ನಿನ್ನ ಸೊಕ್ಕು ಮುರಿಯುವೆ” ಎಂದು ಸಮುದ್ರವೂ, “ಅಂತಿಂಥ ಬೋಟು ನಾನಲ್ಲ, ನನ್ನಂಥ ಬೋಟು ಇನ್ನಿಲ್ಲ” ಎಂದು ದೋಣಿಯೂ ಮೀಸೆ ಹುರಿ ಮಾಡಿದವು ಎನ್ನುವುದರಲ್ಲಿದ್ದೆ, ಆದರೆ ದೋಣಿ, ಹಡಗು ಮೊದಲಾದವು ಸ್ತ್ರೀಲಿಂಗವಂತೆ. ಬದುಕೆಂಬ ಟ್ರಬಲ್ಡ್‌ ವಾಟರ್ಸ್‌ನಲ್ಲಿ ಪತಿಸುತರನ್ನು ದಡ ಮುಟ್ಟಿಸುವುದು ಹೆಣ್ಣೇ ಆದ್ದರಿಂದ ದೋಣಿಯು ಹೆಣ್ಣು ಎನ್ನುವರೇನೋ.

ಅವೆರಡರ ಮಾತು ಅಂತಿರಲಿ. ಮಂದಿಯ ಗತಿ? “ಟ್ರಂಪಿಗೆ ಧಿಕ್ಕಾರ” ಎಂದು ಬೆಳಗ್ಗೆ ನುಡಿದ ಪಕ್ಷವೇ ರಾತ್ರಿ ಟ್ರಂಪಿನೊಡನೆ ಊಟಕ್ಕೆ ಕುಳಿತರೆ ಮಂದಿಯ ಹಿಂಬಾಲಕರದು ಯಾವ ದಿಕ್ಕು? ಯಾರು ದಿಕ್ಕು? ದೋಣಿ-ಶರಧಿಗಳೆಂಬ ಎರಡು ಬ್ರೆಡ್‌ ಪೀಸುಗಳ ನಡುವೆ ಮಂದಿ ಸ್ಯಾಂಡ್‌ವಿಚ್ಚು!

ಸಮುದ್ರದ ಉಬ್ಬರವಿಳಿತ ಯಮನ ಮುಖದಲ್ಲೂ ಸಾವಿನ ಭಯ ಮೂಡಿಸುವಂತಿತ್ತು. ಬೋಟಿನ ಚುಕ್ಕಾಣಿಯ ಬಳಿ ಇದ್ದ ಸುಣ್ಣದ ಬಿಳಿಯ ಚೀನೀಯನ ಮುಖ ಮತ್ತಷ್ಟು ಬಿಳಿಚಿಕೊಂಡು ವೆಲ್ಡಿಂಗ್‌ ಲೈಟಿನ ಬಣ್ಣ ತಳೆಯಿತು. ಅವನಿಂದ ಹತ್ತು ಅಡಿ ದೂರದಲ್ಲಿದ್ದ ವೆಸ್ಟ್‌ ಇಂಡಿಯನ್ನನ ಮುಖ ಇಂಡಿಯನ್‌ ಮುಖವಾಯಿತು. ಸುಮಾರು ಜನರ ಕಣ್ಣುಗಳಲ್ಲಿ ಬೆಕ್ಕನ್ನು ಕಂಡ ಇಲಿಯ, ಹುಲಿಯನ್ನು ಕಂಡ ಮೊಲದ, ಹೆದ್ದಾರಿಯಲ್ಲಿ ಕ್ಲೀನರ್‌ ನಡೆಸುತ್ತಿರುವ ಲಾರಿಯನ್ನು ಕಂಡ ಶ್ವಾನದ ಕಣ್ಣುಗಳಲ್ಲಿ ಕಾಣುವ ಭಯ ಗೋಚರಿಸಿತು. ಭಯದಿಂದ ಅಗಲಗೊಂಡ ಕಾರಣ ಜಪಾನೀ ಇತಿಹಾಸದಲ್ಲೇ ಕಂಡುಬರದ ಕಮಲನೇತ್ರವು ಬೋಟಿನ ಬಲಬದಿಯಲ್ಲಿ ಕುಳಿತಿದ್ದ ಟಿಂಗ್‌ ಪಾಂಗನ ಕಣ್ಣಲ್ಲಿ ರಾರಾಜಿಸಿತು. ನನ್ನ ಕಣ್ಣುಗಳಲ್ಲಿ? 

ನನಗೆಂತಹ ಭಯ? ಬೆಂಗಳೂರಿನ ರಸ್ತೆಗಳಲ್ಲಿ ಎತ್ತಿ ಕುಕ್ಕುವ ಆಟೋಗಳಲ್ಲಿ ಪಾಟ್‌ಹೋಲ್‌ನಿಂದ ಪಾಟ್‌ಹೋಲಿಗೆ ಜಂಪಿಸಿ ಗಟ್ಟಿಯಾದ ಬೆನ್ನುಹುರಿ ನನ್ನದು. ಶಿರಾಡಿಘಾಟ್‌, ಚಾರ್ಮಾಡಿ ಘಾಟುಗಳಲ್ಲಿ ಸಾಗುವ ಬಸ್ಸುಗಳಲ್ಲಿ ರುಬ್ಬುವ ಯಂತ್ರದೊಳಗಿನ ಉದ್ದಿನ ಬೇಳೆಯಂತೆ ಗಿರಗಿರನೆ ತಿರುಗಿ ಗಟ್ಟಿಗೊಂಡ ಹೊಟ್ಟೆ ನನ್ನದು. ಕ್ಷಣಕ್ಷಣವೂ ಬ್ರೇಕಿಂಗ್‌ ನ್ಯೂಸ್‌ ಎನ್ನುತ್ತಾ ಪ್ರಪಂಚದ ರೌದ್ರವನ್ನೆಲ್ಲ ಉಂಡೆ ಕಟ್ಟಿಕೊಂಡು ಬಂದು ನಮ್ಮ ಕಿವಿಗೆ ತುರುಕುವ ರಾಕ್ಷಸ ಗಂಟಲಿನ, ಹೃದಯದ ಜಾಗದಲ್ಲಿ ಟಿಆರ್‌ಪಿ ಬೋರ್ಡ್‌ ಇರುವ ವಾಹಿನಿಗಳ ರುದ್ರಭೀಕರತೆಗೆ ಒಗ್ಗಿಕೊಂಡ ಜೀವ ನನ್ನದು. ಷೇರುಪೇಟೆಯಲ್ಲಿ ಹಣ ಹೂಡಿದವರಿಗೆ ಸಮುದ್ರದ ಉಬ್ಬರವಿಳಿತ ಅದಾವ ಲೆಕ್ಕ! ಹೀಗಾಗಿ ಈ ಬೋಟ್‌-ಓಷನ್‌ ಕಮೋಷನ್‌ ಡಿಡ್‌ ನಾಟ್‌ ಅಫೆಕ್ಟ್‌ ಮೈ ಎಮೋಷನ್! 

ನಾರಾಯಣರತ್ತ ತಿರುಗಿದೆ. ಎಂದೋ ಬಂದು ಇಲ್ಲಿನ ಜನರ, ಸಮುದ್ರದ ಆಟಗಳನ್ನು ಹತ್ತಿರದಿಂದ ಕಂಡವರಿಗೆ ಇದೇನು ಮಹಾ ಆಟ ಎನ್ನಿಸಿರಬೇಕು, ಪಾರ್ಲಿಮೆಂಟ್‌ನಲ್ಲಿ ಪವಡಿಸುವ ಮಂತ್ರಿಯ ಸಮಚಿತ್ತ ಅವರ ನಿದ್ರಾವೃತ ಮೊಗದಲ್ಲಿ ಕಾಣುತ್ತಿತ್ತು. “ವೇಲ್‌ ವ್ಯೂ ನೋಡಲ್ವಾ ಸಾರ್?”‌ ಎಂದೆ. 

“ಎನ್ನಿ ವೇಲ್‌ ಚೂಸಿನ್ನಾರೋ ವೀಳ್ಳು!” ಎಂದಿತೊಂದು ಧ್ವನಿ. ಅತ್ತ ತಿರುಗಿದರೆ ನಾರಾಯಣರು ಜೈ ಕನ್ನಡ ಎನ್ನುವುದಕ್ಕಿಂತ ಮುಂಚಿನಿಂದ “ಜಯತು ತೆಲುಗು” ಎನ್ನುತ್ತಾ ಆಸ್ಟ್ರೇಲಿಯಾದಲ್ಲಿ ಆಂಧ್ರ ಬಾವುಟ ಹಾರಿಸಿದ ರೆಡ್ಡಿಗಾರು. ಅವರು ಹೇಳಿದ್ದು ಸಾವಿರ ಎಂಬರ್ಥದ ವೇಲೋ, ಜಲಚರ ವೇಲೋ ಎಂದು ಕೇಳಲು ಅತ್ತ ತಿರುಗಿದೆ. 

ಅರ್ಜೆಂಟಿನಾದ ಲಿಯೋನೆಲ್‌ ಮೆಸಿ ಒದೆದ ರಭಸಕ್ಕೆ ಚೆಂಡು ಚಿಮ್ಮುವಂತೆ ದೋಣಿಯನ್ನು ಚಿಮ್ಮಿಸಲು ಸಮುದ್ರವು ಯತ್ನಿಸಿತು. ದೋಣಿಯು ರಷ್ಯಾದ ಗೋಲ್‌ ಕೀಪರ್‌ ಲೆವ್‌ ಇವಾನೋವಿಕ್‌ ಯಾಶಿನ್ನನು ಎದುರಾಳಿಗಳು ಚಿಮ್ಮಿಸಿದ ಚೆಂಡನ್ನು ತಡೆಯುವ ರೀತಿಯಲ್ಲಿಯೇ ಸಮುದ್ರದ ಒದೆತವನ್ನು ತಡೆದುಕೊಂಡಿತು. ತಡೆದುಕೊಂಡ ರಭಸಕ್ಕೆ ಒಮ್ಮೆ ಪೆಂಡುಲಂನಂತೆ ಹೊಯ್ದಾಡಿತು. ಹಲವಾರು ಜನರು ಅಂದು ಮಧ್ಯಾಹ್ನ ಸೇವಿಸಿದ್ದ ಆಹಾರವು ವಿರೋಧಪಕ್ಷದವರು ಬಜೆಟ್‌ ಅಧಿವೇಶನದ ಸಮಯದಲ್ಲಿ ಸಭಾತ್ಯಾಗ ಮಾಡುವಷ್ಟು ಬಿರುಸಿನಿಂದ ಬಾಯಿಯತ್ತ ನುಗ್ಗಿದವು. ಶ್ರೀಮನ್ನಾರಾಯಣರು ನಿದ್ರೆಗೆ ಡೈವೋರ್ಸ್‌ ನೀಡಿದರು.

ಇಷ್ಟು ಹೊತ್ತಿಗೆ ಬೋಟ್‌ ಸಿಡ್ನಿಯ ದಡದಿಂದ ಹತ್ತು ಮೈಲಿಗಳಿಗೂ ದೂರ ಕ್ರಮಿಸಿತ್ತು. ಸುತ್ತಲೂ ಕಣ್ಣಾಡಿಸಿದೆ. ಎಲ್ಲಿಯೂ ಭೂಮಿಯ ಸುಳಿವೂ ಕಾಣಲಿಲ್ಲ. “ವೇಲ್‌ಗಳು ಎಂಬತ್ತು ಟನ್‌ ತೂಕ ಇರುತ್ತವೆ” ಎಂದು ಬೋಟಿನ ಲೌಡ್‌ ಸ್ಪೀಕರ್‌ ಬ್ಲೇರುತ್ತಿತ್ತು. ಇಂತಹ ಪ್ರವಾಸಗಳಲ್ಲಿ ಅಂತಹ ಘೋಷಣೆಗಳು “Blare necessities”‌ ಅಂತೆ. “ನಾವು ನೋಡಹೊರಟ ವೇಲ್‌ಗಳಲ್ಲಿ ಒಂದಕ್ಕಾದರೂ ವೇಯ್ಟ್‌ ಲಿಫ್ಟಿಂಗ್‌ ಶೋಕಿ ಇದ್ದರೆ? ಡಂಬಲ್ಗಳನ್ನು ಎತ್ತಿ ಒಗೆಯುವಂತೆ ಬೋಟನ್ನು ಡಿಟೋ ಮಾಡಿದರೆ?” ಎಂಬ ಆಲೋಚನೆಯು ಹೊಳೆದು, ಕೂಡಲೆ ರಾಜರತ್ನಂ ನೆನಪಾದರು. ಅವರ ರತ್ನನ ಬಳಿ ಇದಕ್ಕೆ ಪರಿಹಾರವಿತ್ತು.

“ಅದೇನ್ವಿಷ್ಣೂನೋ ಏನೋ! ಹಾಲಿನ್ಸಮುದ್ರದಲ್ಲಿ ಮಲಗಕ್ಕೆ ಅವನೇನು ಹಸುಗೂಸೆ? ನಾನೇನಾದ್ರೂ ವಿಷ್ಣು ಆಗಿದ್ದಿದ್ರೆ ಕ್ಷೀರಸಾಗರವಷ್ಟೇ ಅಲ್ಲದೆ ಮಿಕ್ಕ ಆರು ಸಮುದ್ರಗಳನ್ನೂ ಹೆಂಡದ ಸಮುದ್ರವಾಗಿಸಿ, ಆದಿಶೇಷನ ಏಳು ಹೆಡೆಗಳನ್ನೂ ಬಾಡಿಗೆಗೆ ತೊಗೊಂಡು ಅಷ್ಟೂ ಹೆಂಡವನ್ನ ಹೀರಿಬಿಡ್ತಿದ್ದೆ”  ಎನ್ನುವನಂತೆ ರತ್ನ. ಹಾಗೇನಾದರೂ ಇಲ್ಲಿನ ನೀರನ್ನು ಹೆಂಡವಾಗಿಸಿಯೋ ಅಥವಾ ಹಾಗೆಯೋ ಹೀರಿಬಿಟ್ಟರೆ ನಾವು ಬಚಾವ್‌ ಎಂಬ ಆಲೋಚನೆಯೂ ಮೂಡಿತು. ಮರುಕ್ಷಣವೇ “ವಾಟ್‌ ಎಬೌಟ್‌ ವೇಲ್‌ ವ್ಯೂಯಿಂಗ್?”‌ ಎಂಬ ಪ್ರಶ್ನೆ ಮೂಡಿ ರತ್ನ, ಹೆಡೆ, ಹೆಂಡಗಳನ್ನು ಮನದಿಂದ ದೂರ ತಳ್ಳಿದೆ. 

ಬೋಟ್‌ ಇನ್ನೂ ಮುಂದೆ ಸಾಗಿತು. ಈ ಹೊತ್ತಿಗೆ ಅಲೆಗಳಿಗೆ ಓಡಾಡಿ, ಓಡಾಡಿ ಸುತಾಗಿತ್ತೇನೋ, ತಮ್ಮ ನಡಿಗೆಯ ರಭಸವನ್ನು ತಗ್ಗಿಸಿದ್ದವು. ಅದೇ ಸಮಯಕ್ಕೆ ಬೋಟಿನ ಧ್ವನಿರಕ್ಕಸನು “ಸ್ಪಾಟೆಡ್‌ ವೇಲ್ಸ್‌”‌ ಎಂದು ಗುಡುಗಿದ. 

ನಾನು ವೇಲ್‌ಗಳಲ್ಲಿ ಹಲವು ವಿಧ ಇವೆ ಎಂದು ಕೇಳಿದ್ದೇನೆ. ಅವುಗಳ ಧರ್ಮ ಎಂತಹದ್ದೋ ಏನೋ. ಆ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳುವ ವೇಲ್‌ಗಳನ್ನು ರೈಟ್‌ ವೇಲ್‌ ಎನ್ನುತ್ತಾರೆ, ಲೆಫ್ಟ್‌ ವೇಲ್‌ ಎಂಬುದಿಲ್ಲ. ಅದು ಇದ್ದಿದ್ದರೆ ಕೆಲವು ಲೆಫ್ಟ್‌ ವಿಂಗಿಗಳಂತೆ ಆಚಾರವನ್ನು ಬಿಟ್ಟಿರುತ್ತಿದ್ದವು ಎಂದೊಬ್ಬ ರೈಟ್ವಿಂಗಿ ನುಡಿದ. ಸಮುದ್ರದಲ್ಲಿ ಟೇಕಾಫ್‌ ಆಗಿ ಸೇಫ್‌ ಲ್ಯಾಂಡ್‌ ಆಗುವಂತಹವು ಪೈಲಟ್‌ ವೇಲ್‌ಗಳೆಂದು ಮತ್ತೊಬ್ಬ ನುಡಿದ. ಶಾಲೆಯ ಚೀಲವನ್ನು ಹೊತ್ತೂ ಹೊತ್ತೂ ಬೆನ್ನು ಬಾಗಿದ ಶಾಲಾ ಮಕ್ಕಳಂತೆ ಬಾಗಿದ ಬೆನ್ನುಳ್ಳ ವೇಲ್‌ಗಳು ಹಂಪ್‌ ಬ್ಯಾಕ್‌ ವೇಲ್‌ಗಳಂತೆ. ಆದರೆ ಇದಾವುದು “ಸ್ಪಾಟೆಡ್‌ ವೇಲ್ಸ್?”‌ ಅವುಗಳ ಮೈಮೇಲೆ ಜಿಂಕೆಗಳಿಗಿರುವಂತಹ ಚುಕ್ಕೆಗಳಿರುತ್ತವೆಯೆ? ಅಥವಾ ಚಿರತೆಯ ಚುಕ್ಕೆಗಳೋ? ಇವೆಲ್ಲವನ್ನೂ ತಿಳಿಯುವ ಸಲುವಾಗಿ ಬೋಟಿನ ಮುಂದಿನ ಭಾಗಕ್ಕೆ ಬಂದೆ. 

ಅದೇ ಸಮಯಕ್ಕೆ ರಾಮನ ಭಂಟ ಆಂಜನೇಯನ ಅಪ್ಪನಿಗೆ ತನ್ನ ಶಕ್ತಿ ಪ್ರದರ್ಶನದ ವಾಂಛೆ ಉಂಟಾಯಿತು. ಸ್ನೋಯೀ ಮೌಂಟೆನ್ಸ್‌ ಕಡೆಯಿಂದ ಸಾಲ ಪಡೆದ ಥಂಡಿಯನ್ನು ತನ್ನ ತುಕಡಿಗೆ ಸೇರಿಸಿಕೊಂಡು ರೊಯ್ಯನೆ ನುಗ್ಗಿಬಂದ. ಅವನ ಎದುರು ನಿಂತ ನನ್ನ ಕಾಲುಗಳು ಬೋಟಿನ ಫ್ಲೋರಿನಿಂದ ಮೇಲೇರಿದವು. ಕೂಡಲೆ ಸೈಡ್‌ ರೈಲಿಂಗನ್ನು ಬಿಗಿಯಾಗಿ ಹಿಡಿದೆ. ಮಾರುತಿಜನಕ ಮತ್ತಷ್ಟು ವಿಜೃಂಭಿಸಿದ. ನಾನು ಬೋಟಿನ ಫ್ಲೋರಿಂಗಿಗೆ ಸಮಾನಾಂತರ ರೇಖೆಯಲ್ಲಿ ಹಾರಾಡತೊಡಗಿದೆ. ಬೇಂದ್ರೆಯವರೇನಾದರೂ ನನ್ನನ್ನು ಆಗ ಕಂಡಿದ್ದರೆ 

ಮನುಜ ಹಾರುತಿಹ ನೋಡಿದಿರಾ 

ವಿಸ್ತರ ಸಾಗರದಲೆಗಳ ಮೇಲೆ

ತತ್ತರಿಸುತ್ತಲಿ ಗಾಳಿಯ ಹೊಡೆತಕೆ

ಹಸ್ತದಿ ಕಟಕಟೆ ಹಿಡಿಯುತ ಉಳಿಯುತ

ಭೀತಿಯ ಮೂತಿಯನೆಲ್ಲೆಡೆ ತೋರುತ

ಮನುಜ ಹಾರುತಿಹ ನೋಡಿದಿರಾ

ಎನ್ನುತ್ತಿದ್ದರೇನೋ. ಇವನ್ನೆಲ್ಲ ನೋಡುತ್ತಿದ್ದ “ಭೂಮಿ ತೂಕದ ವ್ಯಕ್ತಿ”ಯೊಬ್ಬನು ನನಗೂ, ಮರುತಮೊರೆತಕ್ಕೂ ಮಧ್ಯೆ ನಿಂತ. ಅವನ ಸೊಂಟಕ್ಕೆ ಹರ್ಪಿಸ್‌ ಮಾದರಿಯಲ್ಲಿ ಸುತ್ತಿಕೊಂಡ ನಾನು ಕೈಹಿಡಿತ ತಪ್ಪಿ ಧೊಪ್ಪನೆ ಕೆಳಗುರುಳಿದೆ. ಸುತ್ತಲೂ ಹಲವಾರು ಚುಕ್ಕೆ ಉರುಫ್‌ ಸ್ಪಾಟ್‌ಗಳು ಕಾಣುತ್ತಿವೆ. 

ಸ್ಪಾಟೆಡ್‌ ವೇಲ್ಸ್‌ ಎಂದರೆ ಇದೇಯೇನು?

Comments