ನುಡಿದರೆ ಬ್ರಿಟಿಷರು ಹೌಹಾರುವಂತಿರಬೇಕು

 ನುಡಿದರೆ ಬ್ರಿಟಿಷರು ಹೌಹಾರುವಂತಿರಬೇಕು

ಹಾಸ್ಯ ಲೇಖನ - ಅಣಕು ರಾಮನಾಥ್ 



ನಮಗೆ ನಮ್ಮದೇ ಭಾಷೆಯನ್ನು ಸೃಷ್ಟಿಸಿಕೊಳ್ಳುವ ತಾಕತ್ತಿದೆ.

ಮೊನ್ನೆ ನಮ್ಮ ಬಡಾವಣೆಯಲ್ಲಿ ಹೊಸದೊಂದು ಸರ್ವೀಸನ್ನು ಆರಂಭಿಸಿರುವುದರ ಬಗ್ಗೆ ಕರಪತ್ರವೊಂದು ಗೇಟಿನಡಿ ನುಸುಳಿತು. ಅದರಲ್ಲಿ ‘ವಿಡೋ ಕ್ಲೀನಿಂಗ್’ ಎಂಬ ಐಟಮ್ಮೂ ಇತ್ತು.

ವಿಡೋ ಎಂದರೆ ವಿಧವೆ. ಅವಳನ್ನು ಕ್ಲೀನ್ ಮಾಡುವುದು ಎಂದರೇನು? ವಿಧವೆಯ ಮರುವಿವಾಹಕ್ಕೆ ಪ್ರೋತ್ಸಾಹಿಸಿ ಸಮಾಜದಲ್ಲಿ ವಿಧವೆಯೇ ಇರದಂತೆ ಮಾಡುವ ಮೂಲಕ ‘ವಿಡೋಹುಡ್ ಎರಾಡಿಕೇಷನ್’ ಕೈಗೊಳ್ಳುವುದೇ ‘ವಿಡೋ ಕ್ಲೀನಿಂಗ್’ ಎಂಬುದರ ಅರ್ಥವಿರಬಹುದೆ? ವಯಸ್ಸಾದ ವಿಧವೆಯರಿಗೆ ಈ ಭಾಗ್ಯವನ್ನು ಹೇಗೆ ಕರುಣಿಸುವರು ಎಂದು ಯೋಚಿಸುತ್ತಿದ್ದೆ. ಟ್ಯೂಬ್‍ಲೈಟ್ ತಲೆಗೆ ಅದು ವಿಂಡೋ ಕ್ಲೀನಿಂಗಿನ ಸ್ಪೆಲಿಂಗ್ ದೋಷವೆಂದು ತಡವಾಗಿ ತಿಳಿಯಿತು.


ಇದರ ವ್ಯತಿರೇಕವೂ ಇದ್ದಿತಂತೆ. ವಧುವರಾನ್ವೇಷಣಾ ಕೇಂದ್ರದವರ ಜಾಹಿರಾತಿನಲ್ಲಿ ‘ವಿಂಡೋ ಮ್ಯಾರೇಜ್’ ಎಂದಿತ್ತಂತೆ. ‘ಪಡೋಸನ್’ ಚಿತ್ರದಲ್ಲಿ ಕಿಟಕಿಯಿಂದಲೇ ಪ್ರೀತಿ ಮೂಡಿ, ಕಿಟಕಿಯಿಂದಲೇ ವೃದ್ಧಿಯಾಗಿ ‘ಮ್ಯಾರೇಜ್ ವಿಂಡೋ’ ಓಪನ್ ಆದಂತೆಯೇ ಇದೂ ಇದ್ದೀತೆಂದು ಕಲ್ಪನೆ ಮಾಡಿಕೊಂಡ ‘ಹೋನೇವಾಲೇ ವಧು ವರರು’ ಆ ಚಿತ್ರದ ‘ಮೇರೆ ಸಾಮನೆವಾಲೇ ಕಿಟಕಿ ಮೇ’ ಹಾಡನ್ನು ಉರು ಹೊಡೆಯಲು ಆರಂಭಿಸಿದ್ದರಂತೆ.

ಕನ್ನಡದಲ್ಲಿ ‘ಧನದಾಹಿ’ ಎಂದು ಬರೆಯುವ ಬದಲು ‘ದನದಾಹಿ’ ಎಂದು ಬರೆದು ಪ್ಯೂರ್ ವೆಜಿಟೇರಿಯನ್ ಆಸಾಮಿಯನ್ನೂ ಗೋಮಾಂಶಭಕ್ಷಕನನ್ನಾಗಿಸುವ ಪರಿಯಲ್ಲಿಯೇ ಆಂಗ್ಲದಲ್ಲಿ ಅನೇಕ ಟೈಪಿಂಗ್ ಮಿಸ್ಟೇಕುಗಳನ್ನು ಮಾಡುವುದರಲ್ಲಿ ಪರಿಣತರಾಗಿರುವವರು ನಮ್ಮಲ್ಲಿ ಹೇರಳವಾಗಿ ದೊರೆಯುತ್ತಾರೆ. ಗಾಂಧಿಬಜಾರಿನ ಹೊಟೇಲೊಂದರ ಮೆನುವಿನಲ್ಲಿ ‘ಫ್ರೆಂಡ್ ರೈಸ್’ ಎಂಬ ಐಟಂ ಒಂದನ್ನು ಕಂಡಿದ್ದೆ. ‘ಇದೊಂದರ ಹೊರತಾಗಿ ಮಿಕ್ಕೆಲ್ಲ ಅನ್ನದ ಐಟಂಗಳೂ ‘ಎನೆಮಿ ರೈಸ್’ ಆಗಿರಬಹುದು. ಹೊಟ್ಟೆಯನ್ನು ಸೇರುತ್ತಲೇ ಎಕ್ಸಿಟ್ ಕಡೆಗೆ ಧಾವಿಸುವಂತಹವು ಇರಬಹುದು ಎಂದೆಲ್ಲ ಅದರ ಬಗ್ಗೆ ವ್ಯಾಖ್ಯಾನಿಸುವವರು ಇದ್ದರು. ‘ಫ್ರೈಡ್ ರೈಸ್‍’ನ ಮಧ್ಯದಲ್ಲಿ ಎನ್ ಸೇರಿಕೊಂಡು ‘ಎನ್ ನಂಬರ್ ಆಫ್ ಮೀನಿಂಗ್ಸ್’ಗೆ ಎಡೆ ಮಾಡಿಕೊಟ್ಟಿತ್ತು.


ಯುಪಿಎಸ್‍ಸಿ ಪರೀಕ್ಷೆಗೆಂದು ಕುಳಿತ ವ್ಯಕ್ತಿಯೊಬ್ಬನು ಹಸುವಿನ ಬಗ್ಗೆ ಬರೆದ ಪ್ರಬಂಧವು ಇಂದಿಗೂ ಸುವಿಖ್ಯಾತವಾಗಿದೆ. ‘The Cow. He is a animal. He gives milk. When with child...’ ಎಂದು ಮುಂದುವರಿಯುವ ಲೇಖನದಲ್ಲಿ ಹಸುವನ್ನು ‘he’ ಎಂದು ಸಂಬೋಧಿಸಿ ಅವನು ಹಸುವಿನ ಬಗ್ಗೆ ಹೇಳುತ್ತಿದ್ದಾನೋ, ಎತ್ತಿನ ಬಗ್ಗೆ ಹೇಳುತ್ತಿದ್ದಾನೋ ಎಂಬ ಗೊಂದಲ ಮೂಡಿಸಿದ್ದಾನೆ. ಮುಂದುವರಿದಂತೆ ‘he has four legs. Two in front and Two afterwards’ ಎಂದಿದ್ದಾನೆ. ‘rear’ ಎನ್ನುವ ಪದವೇ ತಿಳಿಯದ ಈ ಭೂಪನು ಯುಪಿಎಸ್‍ಸಿಯಲ್ಲಿ ತೇರ್ಗಡೆಯಾಗಿ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದನೆಂದು ‘ಇಲ್ಲಸ್ಟ್ರೇಟೆಡ್ ವೀಕ್ಲಿ’ಯಲ್ಲಿ ಉಲ್ಲೇಖವಾಗಿತ್ತು.

ನಮ್ಮ ಕಚೇರಿಗಳಲ್ಲಿನ ಇಂಗ್ಲಿಷ್‍ಗೆ ತನ್ನದೇ ವ್ಯಾಕರಣ, ಉಚ್ಚಾರ, ಅರ್ಥಗಳಿರುತ್ತವೆ. ಕಾಗದಗಳನ್ನು ಪಿನ್ ಮಾಡುವ stapler ಒಬ್ಬರಿಗೆ ಸ್ಟೇಪ್ಲರ್ ಆದರೆ ಮತ್ತೊಬ್ಬರಿಗೆ ಸ್ಟ್ಯಾಪ್ಲರ್ ಆಗುತ್ತದೆ. Notice ಕೆಲವರ ಬಾಯಲ್ಲಿ ನೋಟೀಸ್, ಕೆಲವರ ನೊಟೀಸ್, ಕೆಲವರಿಗೆ ನೊಟಿಸ್ ಆಗುತ್ತದೆ. ಮೊದಲನೆಯವರ ಉಚ್ಚಾರದಲ್ಲಿ ‘ಚುಡಾಯಿಸುವುದನ್ನು ನಿಷೇಧಿಸಲಾಗಿದೆ’ ಎಂಬ ಅರ್ಥವೂ ಮೂಡುವುದೆಂದು ನಮ್ಮ ಸೀನುವಿನ ಅಭಿಪ್ರಾಯ(No Tease!). ಅಂದೊಮ್ಮೆ ನಮ್ಮ ಕಚೇರಿಯ ಕಾಗದವೊಂದು ತುರ್ತಾಗಿ ಟೈಪ್ ಆಗಬೇಕಾದ ಕಾರಣ ಬಾಸ್ ‘ಸ್ವಲ್ಪ ಬೇಗ ಮಾಡಿಕೊಡ್ರಿ’ ಎಂದರು. ಟೈಪಿಸ್ಟ್ ‘I am fasting sir’ ಎಂದ. ಬಾಸ್ ಸರಿಯೆನ್ನುತ್ತಾ ಒಳಸಾಗಿದ. ಟೈಪಿಸ್ಟ್ ಉಪವಾಸ ಇದ್ದರೆ ಟೈಪಿಂಗ್ ಬೇಗ ಆದೀತೇನು? ನೋಯರ್ರೇ ಟೆಲ್ಬೇಕು!

ಉತ್ತರಭಾರತದವರು ಇಂಗ್ಲಿಷ್ ಕೊಲೆ ಮಾಡುವಷ್ಟು ಸೊಗಸಾಗಿ ಬೇರಾರೂ ಮಾಡರೇನೋ. ಮಧ್ಯಪ್ರದೇಶದ ವ್ಯಕ್ತಿಯೊಬ್ಬನು ಹೊಟೆಲೊಂದರ ಬಾಗಿಲಲ್ಲಿ ನಿಂತು ‘ರೇಪ್ ದ ಸ್ನೇಕ್ಸ್’ ಎಂದು ಕೂಗಿದ. ‘ನಿಜ. ಖಾಂಡವವನ ದಹನದಲ್ಲಿ ಅನೇಕ ಹಾವುಗಳು ಸತ್ತವು. ಶ್ರೀಹರ್ಷ ವಿರಚಿತ ನಾಗಾನಂದ ಕೃತಿಯಲ್ಲಿ ಸರ್ಪಗಳ ಸಂತತಿಯನ್ನೇ ಇಲ್ಲವಾಗಿಸುವ ಹುನ್ನಾರ ಕಂಡುಬರುತ್ತದೆ. ಆದರೆ ‘ಹಾವಿನ ಮೇಲೆ ಅತ್ಯಾಚಾರ?’ ಎಂದು ಮೂಗಿನ ಮೇಲೆ ಬೆರಳಿಡದಿರಿ. ಅದು ‘wrap the snacks’ ಎಂಬುದರ ಹಿಂಗ್ಲಿಷೀಕರಣ.

ಮೈಸೂರು, ಮಂಗಳೂರು ಮೊದಲಾದ ಸ್ಥಳಗಳಲ್ಲಿನ ಆಂಗ್ಲಪದಗಳ ಉಚ್ಚಾರವು ಭಿನ್ನವಾಗಿರುತ್ತದೆ. ಬೆಳಗಿನ ತಿಂಡಿಯನ್ನು ಮೈಸೂರಿನ ಗೆಳೆಯ ಕೃಷ್ಣನು ‘ಬ್ರೇಕ್ ಫಾಸ್ಟ್’ ಎಂದು ಸುದೀರ್ಘವಾಗಿ ಉಲಿದರೆ ಮಂಗಳೂರಿನ ಕಿಣಿಯು ‘ಬ್ರೆಕ್ ಫಸ್ಟ್’ ಎನ್ನುತ್ತಾನೆ. ಕೃಷ್ಣನು ‘ತ್ರೀ ಕೋರ್ಸ್ ಬ್ರೇಕ್‍ಫಾಸ್ಟ್’ (ಇಡ್ಲಿ, ವಡೆ, ದೋಸೆ) ತಿನ್ನುವುದರಿಂದ ಅದು ಎಳೆದೆಳೆದ ಉಚ್ಚಾರವೂ, ಕಿಣಿಯು ಬನ್ಸ್ ಅಥವಾ ಪತ್ರೊಡೆಯ ಸಿಂಗಲ್ ಕೋರ್ಸ್ ಮಾತ್ರ ತಿನ್ನುವುದರಿಂದ ಹ್ರಸ್ವ ಉಚ್ಚಾರವೂ ಇದ್ದೀತೆ? ‘ತ್ರೀ ಕೋರ್ಸ್’ ಸಹ ಇವರಿಬ್ಬರ ಬಾಯಲ್ಲಿ ‘ತ್ರೀ ಕೋರ್ಸ್’ ಮತ್ತು ‘ತ್ರಿ ಕೊರ್ಸ್’ ಆಗುತ್ತದೆ. ಮೈಸೂರಿಗನ ‘ವ್ಯಾಲ್ಯುಯೇಷನ್’ ಕಿಣಿಯ ಬಾಯಲ್ಲಿ ‘ವೆಲ್ಯುಯೆಷನ್’ ಆಗುತ್ತದೆ, ‘police’ ಪದವಂತೂ ‘ಪೊಲಿಸ್’, ‘ಪೋಲಿಸ್’, ‘ಪೊಲೀಸ್’ ಎಂದು ಉಚ್ಚರಿಸಲ್ಪಡುತ್ತದೆ. ನಿಜ ಉಚ್ಚಾರ ‘ಪುಲೀಸ್’ ಅಂತೆ! ಬೆಳಗಿನ ಊಟವಾದ ಲಂಚ್ ಎಲ್ಲರ ಬಾಯಿಗೂ ಒಂದೇ ರೀತಿಯಲ್ಲಿ ರುಚಿಸಿದರೂ (ಉಚ್ಚಾರಗೊಂಡರೂ), ರಾತ್ರಿಯೂಟವು ಒಬ್ಬರಿಗೆ ಸಪರ್, ಒಬ್ಬರಿಗೆ ಸುಪರ್, ಮತ್ತೊಬ್ಬರಿಗೆ ಸಪ್ಪರ್ ಆಗಿ ಬದಲಾಗುತ್ತದೆ. ಇದೇ ಪದವು ಆಂಧ್ರದ ರಂಗರಾಜನ್ ಬಾಯಲ್ಲಿ ಸಪ್ಪಾರ್ ಆಗುತ್ತದೆ.




ನಾನು ಓದುತ್ತಿದ್ದ ಪಾಲಿಟೆಕ್ನಿಕ್ಕಿನ ಕಾರ್ಪೆಂಟರಿ ವಿಭಾಗದಲ್ಲಿ ಒಬ್ಬ ಆಂಗ್ಲವ್ಯಾಮೋಹಿ ಇದ್ದರು. ಅದು ಮರದ ಹೊಟ್ಟನ್ನು ಉರುವಲಾಗಿ ಬಳಸುವುದು ಬಳಕೆಯಲ್ಲಿದ್ದ ಕಾಲ. ಕಾರ್ಪೆಂಟರಿಯ ತರಗತಿಯಲ್ಲಿ ಮರವನ್ನು ಕೊಯ್ದ ನಂತರ ಪ್ರಯೋಜನವಿಲ್ಲದ ಮರದ ತುಣುಕುಗಳನ್ನು ಮತ್ತು ಮರದ ಹೊಟ್ಟನ್ನು ತಂದುಕೊಡಲು ಪಕ್ಕದ ಮನೆಯವರು ಕೋರಿದ್ದರು. ನಾನು ಆ ಆಂಗ್ಲವ್ಯಾಮೋಹಿಯನ್ನು ಸಮೀಪಿಸಿ ‘I want saw dust’ ಎಂದೆ. ಆತ ‘ಸಾ ಡಸ್ಟ್? ಎಸ್. ಈ ಸೀಡ್ ಡಸ್ಟ್’ ಎಂದರು. ‘ಸೀಡ್’ ಎಂದರೆ ನೋಡಿದೆ ಎಂದರ್ಥ. ‘ನಾಟ್ ಸೀಡ್ ಡಸ್ಟ್... ಫೈರ್ ಹ್ಯಾಪನ್ ಡಸ್ಟ್’ (ನೋಡುವ ಧೂಳಲ್ಲ; ಬೆಂಕಿ ಹೊತ್ತಿಸುವ ಮರದ ಧೂಳು) ಎಂದೆ. ‘ಓ! ದಟ್ ಡಸ್ಟಾ...’ ಎನ್ನುತ್ತಾ ಒಲೆಯುರಿಗೆ ಒದಗುವ ಹೊಟ್ಟನ್ನು ಕೊಟ್ಟಿದ್ದರು ಮಹಾಶಯರು.

ನಮ್ಮ ಟಿವಿ ಸೀರಿಯಲ್‍ಗಳೂ ಆಂಗ್ಲವಧೆಯಲ್ಲಿ ಎಂದೂ ಮುಂದೇ. ‘ನಾನು ಟೆನ್ಷನ್ ಆಗಿಬಿಟ್ಟೆ’ ಎಂದರೆ ‘ನಾನು ಗಾಬರಿಗೊಂಡೆ’ ಎಂದು ಅರ್ಥವಂತೆ. ಅದಕ್ಕೆ ‘ಟೆನ್ಸ್ ಆದೆ’ ಎನ್ನಬೇಕೆಂದು ಹೇಳಿದರೆ ‘ಪ್ರೆಸೆಂಟ್ ಟೆನ್ಸೋ, ಪಾಸ್ಟ್ ಟೆನ್ಸೋ?’ ಎಂದು ಕೇಳಿಯಾರು. ಕಾರನ್ನು ಓಡಿಸುವವರು ಕೈಯಲ್ಲಿ ಹಿಡಿಯುವುದು ‘ಸ್ಟೇರಿಂಗ್ ವೀಲ್’ ಎನ್ನುವುದೇ ಸೀರಿಯಲಿಂಗ್ಲಿಷ್! ಆ ಚಕ್ರವು ಚಾಲಕನತ್ತ ಸ್ಟೇರ್ ಮಾಡುತ್ತಿರುತ್ತದೇನು? ಅಥವಾ ಚಾಲಕನೇ ಅದನ್ನು ದುರುಗುಟ್ಟಿ ನೋಡುತ್ತಿರುತ್ತಾನೋ? ಅಸಲಿಗೆ ಅದು ‘ಸ್ಟೀರಿಂಗ್ ವೀಲ್’ ಎನ್ನುವುದು ಎಷ್ಟೋ ಮೇಷ್ಟ್ರುಗಳಿಗೂ ತಿಳಿದಿಲ್ಲ.


Thank you, Congratulations ಪದಗಳನ್ನು ಕಂಫ್ಯೂಸ್ ಮಾಡಿಕೊಳ್ಳುವವರೂ ನಮ್ಮಲ್ಲಿದ್ದಾರೆ. ‘ಪ್ರೋಗ್ರಾಂ ಚೆನ್ನಾಗಾಯ್ತು ಸರ್, ಕಂಗ್ರಾಜುಲೇಷನ್ಸ್ ಫಾರ್ ಇನ್ವೈಟಿಂಗ್ ಮಿ’ ಎಂದವರು ಇರುವಂತೆಯೇ, ‘ನಾನು ಪಾಸ್ ಆದೆ’ ಎಂದಾಗ ‘ಥ್ಯಾಂಕ್ಯೂ ವೆರಿ ಮಚ್’ ಎಂದವರೂ ಇದ್ದಾರೆ. ಆಸ್ಪತ್ರೆಯಲ್ಲಿರುವ ಈಗಲೋ ಆಗಲೋ ಎಂಬಂತಿದ್ದ ರೋಗಿಯನ್ನು ನೋಡಲು ಹೋದವರೊಬ್ಬರು  ‘ವಿಷ್ ಯೂ ಎ ಹ್ಯಾಪಿ ಜರ್ನಿ’ ಎಂದು ಮರಣಶಯ್ಯೆಯಲ್ಲಿರುವವರನ್ನೂ ಅವಾಕ್ಕಾಗಿಸಿದ್ದರು. ನಾವಿರಲಿ, ಇಂಗ್ಲಿಷ್ ತಿಳಿದವರೂ ಕೆಲವೊಮ್ಮೆ ಯಾವ ಪದವನ್ನು ಬಳಸಬೇಕೆಂದು ತಿಳಿಯದೆ ತಡಬಡಾಯಿಸುವರು. ಮದುವೆಯಾಗಿ ಅನೇಕ ವರ್ಷಗಳಾದರೂ ಮಕ್ಕಳಾಗದ ಕಾರಣ ವೈದ್ಯರನ್ನು ನೋಡಲು ಹೋದ ಪತಿಯೊಬ್ಬನು ‘ನನ್ನ ಹೆಂಡತಿ ಗರ್ಭ ಧರಿಸಲು ಆಗುತ್ತಲೇ ಇಲ್ಲ’ ಎಂದು ಹೇಳಲು ಮೊದಲಿಗೆ ‘My wife is totally inconceivable’ ಎಂದ. ಹಾಗೆಂದರೆ ‘ಊಹೆಗೂ ನಿಲುಕದವಳು’ ಎಂಬ ಅರ್ಥ ಬರುವುದೆಂದು ಹೊಳೆದು, ‘What I mean to say is, she is impregnable’ ಎಂದ. ಹಾಗೆಂದರೆ ‘ದುರ್ಗಮ’ ಎಂಬ ಅರ್ಥ ಬರುತ್ತದೆಂದು ಹೊಳೆದು, ‘I mean to say that she is absolutely unbearable’ ಎಂದ. ಹೀಗೆಂದರೆ ‘ಅವಳನ್ನು ಸಹಿಸಲು ಸಾಧ್ಯವಿಲ್ಲ’ ಎಂದಾಯಿತಲ್ಲ! Conceive, bear, become pregnant ಎಂಬ ಪದಗಳಿಗೆ ಒಂದೇ ಅರ್ಥವಿದ್ದರೂ ಅವನ್ನು ಬಳಸುವುದರಲ್ಲಿ ಪತಿಯು ಸೂಪರ್ರಾಗಿ ಎಡವಿದ್ದ.

‘One day you will be ashamed of speaking in English’ ಎಂದಿದ್ದಾರೆ ಮಾನ್ಯ ಸಚಿವರಾದ ಅಮಿತ್ ಷಾ. ಇಷ್ಟೆಲ್ಲ ತಪ್ಪುಗಳನ್ನು ತಲೆತಲಾಂತರದಿಂದಲೂ ಮಾತನಾಡಿಕೊಂಡು ಬಂದೇ ಲಜ್ಜೆಗೊಳ್ಳದಿರುವವರು ಇನ್ನುಮುಂದೆ ಖಂಡಿತ ಅವನತಮುಖಿಗಳು ಆಗುವುದಿಲ್ಲ. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದರು ಬಸವಣ್ಣ. ನಮ್ಮ ಇಂಗ್ಲಿಷ್ ‘ನುಡಿದರೆ ಬ್ರಿಟಿಷರು ಹೌಹಾರುವಂತಿರಬೇಕು’. ನಮ್ಮ ಉಚ್ಚಾರ ನಮ್ಮ ಹೆಮ್ಮೆ.

 

Comments