ಆಘಾತ​

 ಆಘಾತ​

ಲೇಖನ  - ಸಿಡ್ನಿ ಸುಧೀರ್



'ವೇದಾಂತಿ ಹೇಳಿದನು, ಹೊನ್ನೆಲ್ಲಾ ಮಣ್ಣು ಮಣ್ಣು...' - ಜಿ.ಎಸ್.ಶಿವರುದ್ರಪ್ಪನವರ ರಚನೆಯನ್ನ, ಪಿ.ಬಿ.ಶ್ರೀನಿವಾಸ್ ಅವರ ಸುಮಧುರ ಧ್ವನಿಯಲ್ಲಿ (ಮಾನಸ ಸರೋವರ ಚಿತ್ರದಲ್ಲಿ) ಕೇಳುತ್ತಾ ಕಾರಲ್ಲಿ ಚಲಿಸುತ್ತಿರುವಾಗ​, ಎಡಗಡೆಯಿಂದ ಕಾರಿನ ಹಿಂಭಾಗಕ್ಕೆ ಹೊಡೆದು 'ಧಡ್' ಎಂಬ ಶಬ್ದ. ಮರು ಕ್ಷಣವೆ ಗಗನ್ ಓಡಿಸುತ್ತಿದ್ದ ಟೊಯೊಟ ಕಾರು ಆಯತಪ್ಪಿ ಎಡಕ್ಕೆ ತಿರುಗಿತು, ಮತ್ತೆ ಗಗನ್ ಬಲಕ್ಕೆ ತಿರುಗಿಸಿ, ಮತ್ತೆ ಎಡಕ್ಕೆ ತಿರುಗಿಸಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ​. ಹಾವಿನಂತೆ ಒಂದು ತಿರುವು ತಿರುಗಿ ಎಡಭಾಗದಲ್ಲಿ ನಿಂತಿತು. ಮತ್ತೊಮ್ಮೆ 'ಧಡ್' ಎಂದು ಶಬ್ದ ಕಿವಿಗೆ ಬಿದ್ದಿತು. ಒಳಗೆ ಕುಳಿತ್ತಿದ್ದ ಗಗನ್ ಎಡಗಡೆಯಿಂದ ಬಲಗಡೆಗೆ ಓಲಾಡಿ, ಸ್ಟೀರಿಂಗ್ ಭದ್ರವಾಗಿ ಹಿಡಿದು, ಬ್ರೇಕ್ ಹಾಕಿ ತನ್ನ ಕಾರನ್ನ ನಿಲ್ಲಿಸಿದ್ದ​​. ಹೃದಯ ಬಡಿತ ಹಚ್ಚಾಗಿತ್ತು, ತಕ್ಷಣ ತನಗೆ ದೊಡ್ಡದಾಗಿ ಏನು ಆಗಿಲ್ಲ ಎಂದು ಪರೀಕ್ಷಿಸಿಕೊಂಡು ನಿಟ್ಟುಸಿರೆಳೆದ​​. ಕಾರನ್ನ ನಿಲ್ಲಿಸಿ, ಎಡ ಭಾಗಕ್ಕೆ ತಿರುಗಿ ನೋಡಿದ​. ಹಿಂದಿನ ಬಾಗಿಲು ಕಚ್ಚಾಗಿ ಒಳಗೆ ಬಂದಿತ್ತು. ಕಾರಿಂದ ಕೆಳಗಿಳಿದು ಬಂದು ರಸ್ತೆಯ ಬದಿಯಲ್ಲಿ ಹುಲ್ಲಿನ ಮೇಲೆ ಒಂದು ಕ್ಷಣ ಕುಳಿತ​​.

 

'ನಿನ್ನೆಯಿಂದ ಟೈಮ್ ಸರಿ ಇಲ್ಲ. ಮನೆಯಲ್ಲಿ ಇವಳ ಜೊತೆ ಜಗಳ, ನಾನು ಏನು ಮಾತನಾಡಬಾರದು ಅಂತ ಸುಮ್ಮನಿದ್ದರೆ ನನ್ನದೆ ತಪ್ಪು ಎಂಬಂತೆ ಎಲ್ಲರು ನೋಡುತ್ತಿದ್ದರು. ಈಗ ಗೆಳೆಯನ ಮನೆಗೆ ಹೋಗೋಣ ಎಂದರೆ ಈ ಆಕ್ಸಿಡೆಂಟ್, ಇನ್ನು ಏನೇನು ಇದೆಯೋ' ಅಂತ ಯೋಚನೆಗಳು ಹರಿಯುತ್ತಿದ್ದವು. ಅಪಘಾತಗಳು ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲಿ ಸಂಭವಿಸುತ್ತದೆ. ನಮ್ಮ ನಡೆ ಸರಿಯಾಗಿದ್ದರು, ಬೇರೊಬ್ಬರ ಕಡೆಯಿಂದ ಕ್ಷಣದಲ್ಲಿ ಸಂಭವಿಸಬಹುದು. ಆದರೆ ಮಾಸ್ಟರ್ ಉರುಗ್ವೆ ಹೇಳೋದು, ' There Are No Accidents (ಅಪಘಾತಗಳೆನ್ನುವುದು ಯಾವುದು ಇಲ್ಲ​)'. ಎಲ್ಲವೂ ವಿಧಿ ಲಿಖಿತವೆ ಸರಿ​. ತಪ್ಪಿಲ್ಲದವರ ಕಡೆಯಿಂದ ಇದು ಇನ್ನೊಂದು ತರ್ಕವೂ ಸರಿಯೆ.

ಗಗನ್ ಐವತ್ತರ ದಶಕ ಕಳೆದು ಮೂರು ವರ್ಷಗಳಾಗಿತ್ತು. ಸಿಡ್ನಿಯಲ್ಲಿ ನೆಲೆಸಿ ಬಹಳ ಸಂವತ್ಸರಗಳು ಉರುಳಿದ್ದವು. ಎರಡು ಹೆಣ್ಣು ಮಕ್ಕಳು, ದೊಡ್ಡವಳಿಗೆ ಇಪ್ಪತ್ತು ವರ್ಷ​, ಚಿಕ್ಕವಳಿಗೆ ಹದಿನೇಳರ ಹರೆಯ​. ಇಬ್ಬರು ವಿದ್ಯಾಭ್ಯಾಸದಲ್ಲಿ ಯಾವಾಗಲು ಮುಂದು. ಗಂಡ-ಹೆಂಡತಿ ಇಬ್ಬರು ದುಡಿದು ಜೀವನ ಸಾಗಿಸುತ್ತಿದ್ದರು.

ಅಂದು ಶನಿವಾರ ಮಧ್ಯಾಹ್ನ​. ತನ್ನ ಸ್ನೇಹಿತ ಪ್ರತಾಪ್‘ನ ಮೀಟ್ ಮಾಡಲು ಹೋಗುತ್ತಿರುವಾಗ, ಗ್ರಂಥಾಲಯದಿಂದ ಒಂದು ಕಾರು ಭರ್ರನೆ ಹೊರಬಂದು, ರಸ್ತಯಲ್ಲಿ ಸಾಗುತ್ತಿದ್ದ ಗಗನ್ ಕಾರ್ ನ ಹಿಂದಿನ ಬಾಗಿಲಿಗೆ ಹೊಡೆದಿತ್ತು. ಎಡ ಭಾಗದ ಹಿಂದಿನ ಚಕ್ರ​, ಹಿಂದಿನ ಬಾಗಿಲು, ಹಿಂದಿನ ಬಂಪರ್ ಎಲ್ಲಕ್ಕೂ ಏಟು ಬಿದ್ದು ತಗ್ಗನುಗ್ಗೇಕಾಯಗಿತ್ತು. ಹುಲ್ಲಿನ ಮೇಲೆ ಕುಳಿತಿದ್ದ ಗಗನ್ ತಿರುಗಿ ನೋಡಿದ​. ಇನ್ನು ಒಂದು ಕಾರ್ ಗೆ ಹೋಡೆದು, ಏರ್ ಬ್ಯಾಗ್ ಆಚೆ ಬಂದಿತ್ತು. ಒಟ್ಟು ಮೂರು ಕಾರು ಅಪಘಾತದಲ್ಲಿ ತೊಡಗಿದ್ದವು. ಪುಣ್ಯಕ್ಕೆ ಇವನ ಕಾರಿಗೆ ಏಟು ಬಿದ್ದಿತ್ತೆ ಹೊರತು ಗಗನ್ ಗೆ ದೈಹಿಕವಾಗಿ ಕಾಣುವಂತಹ ತೊಂದರೆಯೇನಾಗಿರಲಿಲ್ಲ. ಅಲ್ಲಿದ್ದ ನಾಲ್ಕೈದು ಜನ ಇವನ ಹತ್ತಿರ ಬಂದು

'All OK Mate? Do you need water? (ಎಲ್ಲಾ ಸರಿ ಇದೆಯ​, ನೀರೇನಾದರು ಬೇಕಾ?)' ಎಂದು ಕೇಳಿದರು.

ಅದಕ್ಕೆ ಗಗನ್ ಸಮಾಧಾನದಿಂದ ಉಸಿರು ಬಿಡುತ್ತಾ ನೀರಿನ ಬಾಟಲಿಯನ್ನು ತೆಗೆದುಕೊಂಡು,

'I am OK. Thanks (ನಾನು ಪರವಾಗಿಲ್ಲ. ಧನ್ಯವಾದ)' ಎಂದ​.

ಇದೆಲ್ಲಾ ಅಗುತ್ತಾ ಐದು ನಿಮಿಷದಲ್ಲಿ ಕಾರಿನ ವಿಮೆಯ ವಿವರಗಳು, ಡಿ.ಎಲ್ ನ ವಿವರಗಳನ್ನ ಪರಸ್ಪರ ವಿನಿಮಯ ಮಾಡತೊಡಗಿದರು. ಅಪಘಾತಕ್ಕೆ ಕಾರಣವಾಗಿದ್ದು, ಒಂದು ಸ್ಥಳೀಯ ಹದಿಹರಯದ ಚಾಲನೆಯನ್ನು ಕೆಲಿಯುತ್ತಿದ್ದ ಕೆಂಪು 'ಪಿ' ಬೋರ್ಡ್ ನ ಆಸಿ ಯುವತಿ. ಬ್ರೇಕ್ ಬದಲಿಗೆ ಆಕ್ಸಿಲರೇಟ್ ಮಾಡಿ ಗಗನ್ ಕಾರಿಗೆ ಡಿಕ್ಕಿ ಹೊಡೆದು, ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರ್ ಇವಳ ಕಾರಿಗೆ ಹೊಡೆದು ಏರ್ ಬ್ಯಾಗ್ ಆಚೆ ಬಂದಿತ್ತು. ವೇಗಮಿತಿಯಿದಿದ್ದರಿಂದ​, ಹೆಚ್ಚಾಗಿ ಪೆಟ್ಟಾಗದೆ ಎಲ್ಲರೂ ಪಾರಾಗಿದ್ದರು. ಮೂರು ಕಾರಿಗೆ ಅಪಘಾತವಾಗಿದ್ದರಿಂದ ಅಲ್ಲಿದ್ದವರೊಬ್ಬರು '೦೦೦' ಗೆ ಕಾಲ್ ಮಾಡಿ, ತುರ್ತು ಚಿಕಿತ್ಸಾ ವಾಹನವು ಐದು ನಿಮಿಷದಲ್ಲಿ ಬಂದು ತಲುಪಿತ್ತು.

ತುರ್ತು ಚಿಕಿತ್ಸಾ ವಾಹನ, ಗಗನ್ ಕಾರ್ ಮುಂದೆ ನಿಲ್ಲಿಸಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನ ಹಿಡಿದು ಇಬ್ಬರು ಇಳಿದರು. ಒಬ್ಬಳು ಇವನ ಹತ್ತಿರ ಬರತೊಡಗಿದಳು, ಇನ್ನೊಬ್ಬರು ಇನ್ನೊರ್ವರ ಹತ್ತಿರ ಹೋದರು. ಎಲ್ಲಾ ಪರೀಕ್ಷೆ ಮಾಡಿದರು, ಮಧ್ಯೆ ಮಧ್ಯೆ ವಾಕಿ-ಟಾಕಿ ಮಾತುಗಳು. ಗಗನ್ ಗೆ ಸ್ವಲ್ಪ ಎಡಗೈ, ಎಡ ಭುಜ​, ಎಡ ಭಾಗದ ಬೆನ್ನು ನೋವಿದೆ ಎಂದ​. ತಕ್ಷಣ ಆಂಬ್ಯುಲೆನ್ಸ್ ಗೆ ಕರೆದುಕೊಂದು ಹೋಗಿ ಬೇರೆ ಪರೀಕ್ಷೆ ಮಾಡಿ, ಇಕೆಜಿ ಕೂಡ ಮಾಡಿದರು. ಬೇರೆ ಕಾರ್ ಹತ್ತಿರ ಇದ್ದವನನ್ನು ಕರೆದು ಇಕೆಜಿ ತೋರಿಸು, ಮತ್ತೊಮ್ಮೆ ಮಾಡಿದರು. ಗಗನ್ ಗೆ ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ​. ಅವರಲ್ಲಿ ಒಬ್ಬಳು

' Sir, you are having Heart Attack now. We will take you to Westmead Hospital (ನಿಮಗೆ ಜೋರಾಗಿ ಹೃದಯಾಘಾತವಾಗುತ್ತಿದೆ. ನಿಮ್ಮನ್ನು ವೆಸ್ಟ್ ಮೀಡ್ ಆಸ್ಪತ್ರೆಗೆ ಕರೆದೊಯ್ಯುತ್ತೇವೆ)' ಎಂದಳು.

 

ಒಂದು ಕ್ಷಣ ಗಗನ್ ಗೆ ಏನು ಹೇಳಬೇಕು ತಿಳಿಯದಾದ​. ಅಪಘಾತದ ಮೇಲೆ ಆಘಾತ!!.. ನಸು ನಗು ಮುಖ ಬಾಡಿತು. ಇದನ್ನೆಲ್ಲಾ ನೋಡಿ, ಅವಳೇ ಕೇಳಿದಳು,

'You want to call your family and talk to them now?  (ನಿಮ್ಮ ಮನೆಯವರಿಗೆ ತಿಳಿಸುತ್ತೀರಾ?)' ಎಂದಳು.

'Yes  (ಹೌದು)' ಎಂದು, ಹೆಂಡತಿಗೆ, ಮಕ್ಕಳಿಗೆ ಕರೆ ಮಾಡಿದ​. ಯಾರಿಂದಲೂ ಉತ್ತರವಿಲ್ಲ​. ಹೆಂಡತಿ ವಾರದ ಸಾಮಾನು ತರಲು ಹೋಗುತ್ತಿರಬೇಕು ಇಲ್ಲಾ ಜಗಳದಿಂದ ಮಾತನಾಡಲು ಇಷ್ಟ ಪಡುತ್ತಿಲ್ಲವಾ?. ದೊಡ್ಡ ಮಗಳು ಈಜು, ಚಿಕ್ಕವಳು ಟೆನಿಸ್ ಗೆ ಹೋಗಿರಬೇಕು. ಮತ್ತೊಮ್ಮೆ ಕರೆ ಮಾಡಿದ​. ಯಾರ ಸಂಪರ್ಕವೂ ಆಗಲಿಲ್ಲ​. ಇವತ್ತು ದಿನವೆ ಸರಿ ಇಲ್ಲ, ತೊಂದರೆಗಳ ಮೇಲೆ ತೊಂದರೆ ಅನಿಸಿತು. ಕಷ್ಟ ಶುರುವಾಗೋದು ಹಾಗೆ. ಒಂದು ಕಷ್ಟಕ್ಕೆ ನಿಲ್ಲಲ್ಲ. ಎಲ್ಲಾ ಕಡೆಯಿಂದ ತೊಂದರೆ, ಕಷ್ಟ ಬರುತ್ತದೆ.

 

ತಕ್ಷಣ ನೆನಪಿಗೆ ಬಂದಿದ್ದು ಪ್ರಾಣ ಸ್ನೇಹಿತ ಆನಂದ್. ಅವನಿಗೆ ಕರೆ ಮಾಡಿದ​. ಆನಂದ್ ಎಲ್ಲಿದ್ದರೂ ಹೇಗಿದ್ದರೂ ಗಗನ್ ಕರೆಯನ್ನು ಸ್ವೀಕರಿಸುತ್ತಿದ್ದವನು. ಆನಂದ್ ಕರೆ ಸ್ವೀಕರಿಸಿದ ತಕ್ಷಣ​, ಎಲ್ಲವನ್ನು ವಿವರಿಸಿದ - ಅಪಘಾತ​, ಎದೆ ನೋವು, ಹೃದಯಾಘಾತ​, ಮಡದಿ-ಮಕ್ಕಳಿಗೆ ಕರೆ.

'ಐದು ಖಾಲಿ ಹಾಳೆಯನ್ನು ತೆಗೆದುಕೊಂಡು ವೆಸ್ಟ್ ಮೀಡ್ ಆಸ್ಪತ್ರೆಗೆ ಬಾ' ಎಂದು ಹೇಳಿದ​.

ಆನಂದ್ ಗಾಬರಿಗೊಳ್ಳದೆ ಗಾಬರಿ ಮಾಡದೆ 'ಓಕೆ' ಅಂತ ಹೇಳಿದ​. ನೂರಾರು ಜನ ನಮ್ಮವರಂತಿದ್ದರು, ಸ್ನೇಹಿತರಿದ್ದರು, ಬೇಕಾಗುವಾಗ ಆಗುವುದು ಒಬ್ಬರೋ ಅಥವಾ ಇಬ್ಬರು. ಈಗಿನ ಸಾಮಾಜಿಕ ಜಾಲ ತಾಣದಲ್ಲಿ ಸಾವಿರಾರು ಜನ ನಮ್ಮವರು, ಆದರೆ ನಮಗಾಗುವರು ಕೆಲವರು ಮಾತ್ರ​.

ಆನಂದ್ ಮತ್ತು ಗಗನ್ ಗೆ ತಿಳಿದಿತ್ತು ಈ ದೇಶಗಳಲ್ಲಿ ಜೀವಂತ ಟ್ರಸ್ಟ್  (Living Trust) ಅಥವಾ ಉಯಿಲು (Will) ಇಲ್ಲದಿದ್ದರೆ ಬಹಳ ಕಷ್ಟ ಎಂದು. ಇಬ್ಬರೂ ಇದರ ಬಗ್ಗೆ ಬಹಳ ಚರ್ಚೆಯು ಮಾಡಿದ್ದುಂಟು. ಇದಿಲ್ಲದಿದ್ದರೆ, ಒಂದು ಹಾಳೆಯಲ್ಲಿ ಆಸ್ತಿ ಬಗ್ಗೆ ಬರೆದು ಸಹಿ ಇರಬೇಕು ಎಂದು. ಹೊರ ದೇಶಗಳಿಗೆ ಬಂದು ಆಸ್ತಿ ಮಾಡಿ, ನಮ್ಮ ದೇಶದ ಆಸ್ತಿ, ಎಲ್ಲವನ್ನು ಮುಂದಿನ ಪೀಳಿಗೆಗೆ ಒಂದು ದಾರಿ ಮಾಡಬೇಕು. ತನಗೇನಾದರು ಆದರೆ ಖಾಲಿ ಹಾಳೆ ಮೇಲೆ ಸಹಿ ಇದ್ದರು ಸಾಕು, ಅರ್ಧ ಕಷ್ಟ ಕಮ್ಮಿಯಾಗಬಹುದು ಎಂದು ಹೇಳಿದ್ದ​.

 

ತುರ್ತು ಚಿಕಿತ್ಸಾ ವಾಹನದ ಬಾಗಿಲು ಮುಚ್ಚಿ ಮುಂದೆ ಸಾಗಲಾರಂಭಿಸಿತು. ಗಗನ್ ಮನದಲ್ಲಿ ನೂರೆಂಟು ಯೋಚನೆ.

'ನನಗೆ ಯಾಕೆ ಹೀಗಾಯಿತು? ನಾನು ಹೋದರೆ, ಇಬ್ಬರು ಮಕ್ಕಳ ಮತ್ತು ಹೆಂಡತಿಯ ಗತಿ?' ಎರಡು ದಿನದಿಂದ ಜಗಳ, ಕೋಪ​, ಮನಸ್ತಾಪ ಎಲ್ಲವೂ ಆಗಿತ್ತು. ಈ ಬಾರಿ ತಾನು ಮಾತನಾಡಬಾರದೆಂದು ಸುಮನಿದ್ದ​. ಮಾತಿಗೆ ಮಾತು ಬೆಳೆಸಿದರೆ ಜಗಳ ಜಾಸ್ತಿ ಎಂದು. ಎಲ್ಲೋ ಓದಿದ್ದುಂಟು

'ಮೌನಂ ಕಲಹಂ ನಾಸ್ತಿ' ಎಂದು.

ಈ ಬಾರಿ ಸುಮ್ಮನಿದ್ದು ನೋಡೋಣ ಅಂತ​. ಆದರೆ ಮಾತುಗಳನ್ನ ಕೇಳಿ ಮನಸ್ಸು ಕೆಟ್ಟಿತ್ತು, ತಲೆಯಲ್ಲಿ ಅದೇ ಇತ್ತು. ಸಣ್ಣಗೆ ನೆತ್ತಿ ನೋವು, ಬೆಳಗ್ಗೆ ಮೂಗಲ್ಲಿ ಕೊಂಚ ರಕ್ತ - ಅದು ರಕ್ತದೊತ್ತಡದಿಂದ​, ಮತ್ತ ಸಣ್ಣಗೆ ಎದೆ ನೋವು. ಪ್ರತೀ ಬಾರಿ ಜಗಳದಲ್ಲಿ ತಾನು ಮಾತಾಡಿ ಮನೋಭಾರಾ ಕಡಿಮೆ ಮಾಡಿಕೊಳ್ಳುತ್ತಿದ್ದ​. ಈ ಬಾರಿ ಸುಮ್ಮನಿದ್ದು, ಒಳಗಿನಿಂದಲೇ ಜ್ವಾಲಾಮುಖಿಯಂತೆ ಸ್ಪೋಟಿಸಿತ್ತು. ಎಷ್ಟೇ ಆರೋಗ್ಯವಾಗಿದ್ದರು, ಈ ಬಗೆಯ ಘಟನೆಗಳು ಜೀವಕಾರಕ​​.

ಸಾದು ಸಂತರು ಈ ಬಗೆಯ ವಾಕ್ಯಗಳನ್ನ ಹೇಳಿ, ಜೀವ ತಿಂತಾರೆ.

'ಮೌನಂ ಕಲಹಂ ನಾಸ್ತಿ, ಮೌನಂ ಆರೋಗ್ಯಂ ನಾಸ್ತಿ' ಎಂದಾಗಬೇಕಿತ್ತು - ಇದು ಸಂಸಾರಸ್ತರಿಗೆ.

ಗೌತಮ ಬುದ್ಧ ಹೇಳುವುದು 'ಆಸೆಯೆ ದುಖಕ್ಕೆ ಮೂಲ​'. ಆಸೆ ಇಲ್ಲದ ಮನುಷ್ಯ​, ಮನುಷ್ಯನೆ? ಅತಿಯಾಸೆ, ದುರಾಸೆಯೆ ದುಖಕ್ಕೆ ಮೂಲ ಎಂದಾಗಬೇಕಿತ್ತು ಅಲ್ಲವೆ.

 

ಈ ಯೋಚನೆಗಳ ಮಧ್ಯದಲ್ಲಿ ಆಂಬ್ಯುಲೆನ್ಸ್ ವೆಸ್ಟ್ ಮೀಡ್ ಆಸ್ಪತ್ರೆ ತಲುಪಿತು. ತುರ್ತು ಚಿಕಿತ್ಸೆ ಬಳಿ ಆನಂದ್ ಮತ್ತು ಗಗನ್ ಹೆಂಡತಿ ರಶ್ಮಿಯನ್ನು ನೋಡಿ ಗಗನ್ ನಿಟ್ಟುಸಿರುಬಿಟ್ಟ ಮಕ್ಕಳು ಇರಲಿಲ್ಲ​​. ರಶ್ಮಿಯ ಮುಖದಲ್ಲಿ ಆಕಾಶವೇ ತಲೆ ಮೇಲೆ ಬಿದ್ದಂತ ಭಾವ ಮತ್ತು ಕಣ್ಣಲ್ಲಿ ನೀರು ತುಂಬಿದ್ದನ್ನು ಗಮನಿಸಿದ​. ಖಾಲಿ ಹಾಳೆ ಮೇಲೆ ಸಹಿ ಹಾಕಿ, ಮಕ್ಕಳು ಬಂದ ಮೇಲೆ 'ವಾಪಸ್ ಬರ್ತಿನಿ' ಎಂದು ಆನಂದ್ ಮತ್ತು ರಶ್ಮಿಗೆ, ಮಕ್ಕಳಿಗೆ ಹೇಳಿ ಆಪರೇಶನ್ ಥಿಯೇಟರ್ ಗೆ ನಡೆದ​.

 

ಎರಡು ಘಂಟೆಯ ನಂತರ ಡಾಕ್ಟರ್ ಆಚೆ ಬಂದು 'ಆಪರೇಶನ್ ಸಕ್ಸಸ್' ಎಂದಾಗ ಎಲ್ಲರಿಗೂ ಜೀವಾ ಬಂದಂತಾಯಿತು.

Comments