ಬುದ್ಧಿವಂತ ಗಣೇಶನ ಕಥೆ
ಲೇಖನ - ಜೆ. ಎಸ್. ಗಾಂಜೇಕರ, ಕುಮಟಾ (ಉ. ಕನ್ನಡ )
ಶಿವ ಪಾರ್ವತಿ ದಂಪತಿಯರು ಕೈಲಾಸ ಎಂಬಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಮುದ್ದಾದ ಮಕ್ಕಳು. ದೊಡ್ಡವನು ಷಣ್ಮುಖ, ಚಿಕ್ಕವನು ಗಣೇಶ. ಇಬ್ಬರೂ ಪ್ರತಿಭಾವಂತ ಮಕ್ಕಳೇ. ಆದರೆ ಷಣ್ಮುಖನಿಗೆ ಎಲ್ಲದರಲ್ಲೂ ತಾನೇ ಗೆಲ್ಲಬೇಕೆಂಬ ಛಲ. ಸ್ವಲ್ಪ ಹಠಮಾರಿ. ಚಿಕ್ಕವನಾದ ಗಣೇಶನು ಶಾಂತ ಸ್ವಭಾವದವನು. ಎಲ್ಲರನ್ನೂ ಪ್ರೀತಿಸುತ್ತಿದ್ದನು. ಹೀಗಾಗಿ ಇತರರು ಗಣೇಶನನ್ನು ತಮ್ಮ ನಾಯಕನೆಂದು ಗೌರವಿಸುತ್ತಿದ್ದರು. ಆದರೆ ಕೆಲವೇ ಕೆಲವು ಸಹಪಾಠಿಗಳು ಮಾತ್ರ ಷಣ್ಮುಖನನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಗುರುಕುಲ ಆಶ್ರಮದಲ್ಲಿ ವ್ಯಾಸಂಗ ಮಾಡಿ ಕೈಲಾಸಕ್ಕೆ ಬಂದರು. ಅಲ್ಲಿಯ ಗಣಸಮೂಹವು ಇಬ್ಬರನ್ನೂ ಪ್ರೀತಿಸುತ್ತಿದ್ದರು. ಆದರೆ ಗಣೇಶನನ್ನು ಹೆಚ್ಚು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಯಾಕಂದರೆ ಗಣೇಶನು ತಾನು ಗುರುಕುಲದಲ್ಲಿ ಕಲಿತ ಪಾಠವನ್ನು ಅವರಲ್ಲಿ ಹಂಚಿಕೊಳ್ಳುತ್ತಿದ್ದನು.
ತಂದೆ-ತಾಯಿಯವರನ್ನು, ಗುರು-ಹಿರಿಯರನ್ನು ಗೌರವಿಸಬೇಕು, ಪ್ರೀತಿಸಬೇಕು ಎಂದು ಬೋಧಿಸುತ್ತಿದ್ದನು. ಅವರೆಲ್ಲರೂ ಗಣೇಶನೇ ತಮ್ಮ ನಾಯಕನೆಂದು ಗೌರವಿಸುತ್ತಿದ್ದರು. ಇದು ಷಣ್ಮುಖನಿಗೆ ಸರಿ ಬರಲಿಲ್ಲ. ಈ ವಿಚಾರವಾಗಿ ತಂದೆ ಶಿವನಲ್ಲಿ ಹೋಗಿ "ನಾನು ಗಣೇಶನಿಗಿಂತ ದೊಡ್ಡವನಾದರೂ ಗಣಸಮೂಹ ಗಣೇಶನನ್ನು ನಾಯಕನೆಂದು ಗೌರವಿಸುತ್ತಾರಲ್ಲಾ ಇದು ಸರಿಯೇ ಅಪ್ಪಾಜಿ?" ಎಂದು ಕೇಳುತ್ತಾನೆ. ಆಗ ಜೊತೆಗಿದ್ದ ಪಾರ್ವತಿಯೂ "ಪ್ರಭು, ಇದು ನ್ಯಾಯವೇ? ಎಂದು ಕೇಳುತ್ತಾಳೆ. ಆಗ ಶಿವನು "ಕಂದಾ ಷಣ್ಮುಖಾ, ನಾವು ನಿಮ್ಮಿಬ್ಬರಲಿ ಒಂದು ಸ್ಪರ್ಧೆಯನ್ನು ಏರ್ಪಡಿಸುತ್ತೇವೆ. ಅದರಲ್ಲಿ ಯಾರು ಗೆಲುವರೋ ಅವರೇ ನಾಯಕ" ಎಂದು ಹೇಳುತ್ತಾನೆ. ಹಾಗೆಯೇ ಗಣೇಶನನ್ನೂ ಕರೆದು ಹೇಳುತ್ತಾನೆ. ಸ್ಪರ್ದೆಗೆ ಇಬ್ಬರೂ ಒಪ್ಪಿಕೊಂಡರು. ಆಗ ಶಿವನು "ಯಾರು ಈ ವಿಶ್ವವನ್ನು ಮೂರು ಸಲ ಸುತ್ತಿ ಮೊದಲು ತಲುಪುತ್ತಾರೋ ಆತನೇ ನಾಯಕ" ಎಂದು ಹೇಳಿದ. ಇದಕ್ಕೆ ಇಬ್ಬರೂ ಸಮ್ಮತಿ ಕೊಟ್ಟರು. ಈಗಲೇ ಸ್ಪರ್ಧೆ ಆರಂಭ ಎಂದ ಶಿವ.
ಷಣ್ಮುಖನು ತನ್ನ ವಾಹನ ನವಿಲನ್ನು ಏರಿ ಕೂಡಲೇ ವಿಶ್ವ ಸುತ್ತಲು ಹೊರಟ. ಆದರೆ ಗಣೇಶನು ಸುಮ್ಮನೆ ಶಿವ ಪಾರ್ವತಿಯರ ಪಾದದಡಿಯಲ್ಲಿ ಕುಳಿತ. ಷಣ್ಮುಖ ತಿಳಿದ ಡೊಳ್ಳು ಹೊಟ್ಟೆಯ ತಮ್ಮ ಗಣೇಶ, ಹೇಗೆ ತಾನೇ ತನ್ನ ವಾಹನವಾದ ಇಲಿಯನ್ನು ಏರಿ ವಿಶ್ವವನ್ನು ಸುತ್ತ ಬಲ್ಲ? ಈ ಸ್ಪರ್ಧೆಯಲ್ಲಿ ತಾನೇ ಗೆಲ್ಲುವುದು ಖಚಿತವೆಂದು. ಇತ್ತ ಗಣೇಶ ಸ್ಪರ್ಧೆಗೆ ಯಾವ ಪ್ರತಿಕ್ರಿಯೆ ತೋರಿಸದೇ ಸುಮ್ಮನೆ ಕುಳಿತುಕೊಂಡಿದ್ದು ನೋಡಿ ಅಲ್ಲಿಯ ಗಣಸಮೂಹ ಷಣ್ಮುಖನೇ ಗೆಲ್ಲುತ್ತಾನೆಂದು ತಿಳಿದರು. ದೂರದಿಂದ ಅಣ್ಣ ಷಣ್ಮುಖ ಬರುವುದನ್ನು ಗಮನಿಸಿ ಗಣೇಶನು ಓಂ ನಮಃ ಶಿವಾಯ ಎಂದು ಜಪಿಸುತ್ತ ಶಿವ ಪಾರ್ವತಿಯವರಿಗೆ 3 ಸಲ ಪ್ರದಕ್ಷಣೆ ಹಾಕಿ ಅವರ ಪಾದದಡಿಯಲ್ಲಿ ಕುಳಿತ. ಸ್ವಲ್ಪ ಸಮಯದ ಬಳಿಕ, ಷಣ್ಮುಖನು ಬಂದು "ಅಪ್ಪಾಜಿ, ನಾನು ಸ್ಪರ್ಧೆಯ ನೇಮಾನುಸಾರ ವಿಶ್ವವನ್ನು 3 ಸಲ ಸುತ್ತಿ ಮೊದಲನೇಯವನಾಗಿ ಬಂದಿದ್ದೇನೆ. ನೇಮದ ಪ್ರಕಾರ ನಾನೇ ಗಣಸಮೂಹಕ್ಕೆ ನಾಯಕ" ಎಂದು ತಂದೆಗೆ ಹೇಳಿದ. ಆಗ ಗಣೇಶ "ಅಪ್ಪಾಜಿ, ವಿಶ್ವವನ್ನು 3 ಸಲ ಸುತ್ತಿ ಅಣ್ಣನಿಗಿಂತ ನಾನು ಮೊದಲಿಗೆ ಬಂದವನಲ್ಲವೇ? ಇದನ್ನು ಕೇಳಿ ಎಲ್ಲರೂ ಚಕಿತರಾದರು. ಆಗ ಷಣ್ಮುಖ "ಅದು ಹೇಗೆ? ನೀನು ಈ ಸ್ಥಳ ಬಿಟ್ಟು ಕದಲಲೇ ಇಲ್ಲ. ನೀನು ಹೇಗೆ ಪ್ರಥಮನಾದೆ?
"ಅಣ್ಣಾ, ನಿನಗೆ ನೆನಪಿದೆಯೇ ನಾವು ಗುರುಕುಲದಲ್ಲಿ ವ್ಯಾಸಂಗ ಮಾಡುವಾಗ ಗುರುಗಳು ಹೇಳಿದ್ದು" ಆಗ ಷಣ್ಮುಖ "ಗುರುಗಳು ಏನು ಹೇಳಿದರು?" ಎಂದು ಕೇಳಿದ.
"ಅವರು ಹೇಳಿದರು, ತಂದೆ ತಾಯಿಗಿಂತ ದೊಡ್ಡವರು ಯಾರೂ ಇಲ್ಲ. ಅವರೇ ವಿಶ್ವ ಸ್ವರೂಪಿಗಳು. ಅವರೇ ವಿಶ್ವ ಸಮಾನರು. ನೀನು ಬರುವ ಮುಂಚೆ ನಾನು ಮಾತಾ-ಪಿತರಿಗೆ 3 ಸಲ ಪ್ರದಕ್ಷಣೆ ಮಾಡಿ ಕೂತಿದ್ದೇನೆ. ಅಂದಮೇಲೆ ನಾನೇ ಪ್ರಥಮನಲ್ಲವೇ ಅಣ್ಣಾ? ಎಂದು ಕೇಳಿದನು. ಆಗ ಷಣ್ಮುಖನಿಗೂ ನಿಜ ಅನಿಸಿತು.
ಶಿವ-ಪಾರ್ವತಿಯವರು ಗಣೇಶನ ಜಾಣ್ಮೆಗೆ ಮೆಚ್ಚಿದರು. "ಗಣೇಶಾ, ಈ ಸ್ಪರ್ಧೆಯಲ್ಲಿ ನಿನೇ ಗೆದ್ದೆ. ಗಣಸಮೂಹಕ್ಕೆ ನಿನೇ ನಾಯಕ. ಪ್ರಥಮ ಪೂಜೆ ನಿನಗೆ ಸಲ್ಲಲಿ" ಎಂದು ಶಿವನು ಹೇಳಿದನು. ಎಲ್ಲರಿಗೂ ಸಂತೋಷವಾಯಿತು.
ಮಕ್ಕಳೇ, ಈ ಕಥೆಯ ನೀತಿ ಪಾಠ:
ನಮಗೆಲ್ಲರಿಗೂ ಮಾತಾ-ಪಿತರು ಶ್ರೇಷ್ಠರು. ಅವರನ್ನು ಗೌರವಿಸುವುದರಿಂದ ಯಶಸ್ಸು, ಶ್ರೇಯಸ್ಸು ದೊರೆಯುವುದು ಖಂಡಿತ.
----
Comments
Post a Comment