ನಾಗಣ್ಣನ serpentine ಸಲ್ಲಾಪ

 ನಾಗಣ್ಣನ serpentine ಸಲ್ಲಾಪ

ಹಾಸ್ಯ ಲೇಖನ - ಅಣಕು ರಾಮನಾಥ್



‘ಏನೋ ನಾಗಣ್ಣ ಬಹಳ ಅಪರೂಪ ಆಗಿಬಿಟ್ಟೆ? ಹಾವ್ ಡೂ ಯೂ ಡೂ?’ ಎಂದೆ. ಸರ್ಪಗಳನ್ನು ಗ್ರೀಟಿಸುವಾಗ ‘ಹಾವ್ ಡೂ ಯೂ...’ ಎನ್ನುವುದೇ ಸೂಕ್ತವಂತೆ.

‘ಅಪರೂಪವಲ್ಲ, ವಿವಿಧ ರೂಪ ಅನ್ನು.’ ಗೂಗ್ಲಿ ಎಸೆದ ನಾಗಣ್ಣ. 

‘ಯಾವ ರೂಪಗಳೋ? ಎಲ್ಲಿರ್ತೀಯೋ?’ 

‘ನಾನು ಮತ್ತು ನಮ್ಮವರು ಇಲ್ಲದ ಜಾಗವೇ ಇಲ್ಲ.’

ನಾಗರ ಪಂಚಮಿಯಂದು ಹುತ್ತದಿಂದ ಹೊರಕ್ಕೆ ಹೆಡೆ ಹಾಕಿದ ನಾಗಣ್ಣನೊಡನೆ ಸಂವಾದ ನಡೆಸುತ್ತಿದ್ದೆ. 

‘ಎಲ್ಲೆಲ್ಲಿದ್ದಾರೋ? ಒಂದೆರಡು ಜಾಗಗಳನ್ನು ಹೇಳು ನೋಡೋಣ.’ ಕುತೂಹಲಿಯಾದೆ. 

‘ನಿಮ್ಮಲ್ಲಿ ಜಲಮಂಡಳಿ, ಖಾದಿ ಮಂಡಳಿ, ರೇಷ್ಮೆ ಮಂಡಳಿ ಮೊದಲಾದ ಮಂಡಳಿಗಳು ಇವೆ ಅಲ್ಲವೆ?’

‘ಹೌದು.’

‘ಅವುಗಳನ್ನು ಹಾಳುಗೆಡವಲೆಂದೋ, ಅವುಗಳಿಂದ ಲಾಭ ಪಡೆಯಲೆಂದೋ ಕೆಲವು ನಿರ್ದೇಶಕರು, ಮಂಡಳಿಯ ಸದಸ್ಯರು ಇರುತ್ತಾರೆ. ಅವರೆಲ್ಲ ನಮ್ಮ ಜಾತಿಯವರೇ; ನಿನಗೂ ಗೊತ್ತು ಅವರ ಹೆಸರು.’

‘ಯಾವುದೋ ಅದು?’

‘ಕೊಳಕು ಮಂಡಲ! ಮಂಡಳಿಗಳನ್ನು ಕೊಳಕಾಗಿಸುವುದೇ ಅವರ ಜೀವನದ ಗುರಿ.’ ಗಹಗಹಿಸಿದ ನಾಗಣ್ಣ.

‘ಟೆಲಿ ಮಾರ್ಕೆಟಿಂಗು, ಸೇವಿಂಗ್ಸು, ‘ಯುವರ್ ಆಧಾರ್ ಈಸ್ ನಾಟ್ ಲಿಂಕ್ಡು’ ಅಂತೆಲ್ಲ ಕಾಲ್ ಮಾಡಿ ನಿಮ್ಮ ಅಕೌಂಟಲ್ಲಿರುವ ಹಣವನ್ನೆಲ್ಲ ಗುಳುಂ ಮಾಡುವ ವಿಷ ಸರ್ಪಗಳು ಇವೆಯಲ್ಲ, ಅವು ಯಾವುವು ಗೊತ್ತಾ?’ ಮಾತು ಮುಂದುವರೆಸಿದ ನಾಗಣ್ಣ.

‘ಊಹೂಂ.’

‘ಗುಡ್ ಓಲ್ಡ್ ಕೃಷ್ಣನ ಕಾಲದ ಕಾಳಿಂಗನ ಡಿಸ್ಟೆಂಟ್ ಕಸಿನ್‍ಗಳು ಇವು. ಇವನ್ನು calling ಸರ್ಪಗಳು ಎನ್ನುತ್ತಾರೆ. ಒಂದೇ ವ್ಯತ್ಯಾಸ. ಕಾಳಿಂಗ, poor fellow, ಏಳೇ ಹುಡ್ಡುಗಳನ್ನ ಹೊಂದಿದ್ದ. ಈ hoodlumಗಳು ಮಲ್ಟಿಪಲ್ ಹೂಡ್ಸ್ ಹೊಂದಿರತ್ವೆ. ಇವೆಲ್ಲವೂ ಡಾಕ್ಟರೇಟ್ ಇನ್ ಕ್ರಿಮಿನಲ್‍ಹುಡ್ ಮಾಡಿರುತ್ತವೆ’ ವಿವರಿಸಿದ ನಾಗಣ್ಣ. 

‘ಅನಕೊಂಡ ಎಲ್ಲಿದೆ?’

‘ತೆಲಂಗಾಣ ಮತ್ತು ಆಂಧ್ರಪ್ರದೇಶದ ವೆಲಗಾಪುಡಿ ಮತ್ತು ಹೈದರಾಬಾದ್ ಅಸೆಂಬ್ಲಿಗಳಲ್ಲಿ ಮಂತ್ರಿಗಳು ಸೆಷನ್‍ ಸೇರುತ್ತಾರೆ. ವಿರೋಧಪಕ್ಷದವರು ಆಡಳಿತ ಪಕ್ಷದವರನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾರೆ. ಆದರೂ ಇವರು ಅವಕ್ಕೆ ಕವಡೆಯಷ್ಟೂ ಬೆಲೆ ಕೊಡದೆ ‘ಏಮೈನಾ ಅನಕೊಂಡ’ (ಏನ್ಬೇಕಾದ್ರೂ ಅನ್ಕೊಳಿ) ಅಂತಾರೆ. ಅವರೆಲ್ಲ ಅನಕೊಂಡ ಜಾತಿಯ ಸರ್ಪಗಳೇ’ ಹೆಡೆ ಕುಣಿಸಿದ ನಾಗಣ್ಣ. 

‘ಬಳೆ ಒಡಕ?’

‘ಚಂದ್ರಹಸ್ತೆಯರು!’

‘ಚಂದ್ರಮುಖಿ ಗೊತ್ತು. ಇದಾರು ಚಂದ್ರಹಸ್ತೆ?’

‘ಆಗಾಗ್ಗೆ ಸಣ್ಣ, ಆಗಾಗ್ಗೆ ಪೂರ್ಣ ಆಗುವ ಚಂದ್ರನಂತೆಯೇ ಡಯಟ್ ಮಾಡಿದಾಗ ಸಣ್ಣ, ಡಯಟ್ ಮರೆತಾಗ ದಪ್ಪ ಆಗುವ ಕೈಗಳನ್ನು ಹೊಂದಿರುವ ಲಲನೆಯರು. ಕೃಶಕಾಯವಿದ್ದಾಗ 2-2 ಸಾಕಾಗಿ, ಖುಷಿಕಾಯರಾದಾಗ 2-6 ಅಳತೆಯೂ ಸಾಲದ ಇವರಿಗೆ variable diameter ಇರುವ ಬಳೆಯೇ ಬೇಕು. ಆದ್ದರಿಂದ split bangles ಅನ್ನೇ ಪ್ರಿಫರಿಸುತ್ತಾರೆ. ಇವರೆಲ್ಲಾ ಬಳೆ ಒಡಕಗಳೇ.’

‘ಛೆ! ಅಂತಹ ವಿಷಸರ್ಪಕ್ಕೆ ಕೇವಲ ಫ್ಯಾಷನ್ ಪ್ರಿಯರಾದ ಇವರನ್ನು ಹೋಲಿಸುವುದು ತಪ್ಪು!’ ನಾಗಣ್ಣನ ಮೇಲೆ ಹರಿಹಾಯ್ದೆ. 

‘ಹಂಸಗಮನೆ ಎಂದರೆ ಕೊಕ್ಕು ಇರುವಳು ಎಂದೇನು? ಗಜಗಮನೆ ಎಂದರು ಸೊಂಡಿಲು ಇರುವಳು ಎಂದರ್ಥವೆ? ನೀನು ಎಂದೂ ಕವಿ ಆಗಲು ಸಾಧ್ಯವಿಲ್ಲ. ನಾನು ವಿಷಯದ ಬಗ್ಗೆ ಹೇಳುತ್ತಿದ್ದರೆ ನಿನ್ನ ತಲೆ ವಿಷದ ಬಗ್ಗೆಯೇ ಓಡುತ್ತಿದೆ. ತುಂಡರಿಸಿದ ಬಳೆ ಮತ್ತು ಬಳೆ ಒಡಕ ಎಂಬ ಪದಗಳತ್ತ ಮಾತ್ರ ನಿನ್ನ ಗಮನವಿರಲಿ. ನಿನ್ನನ್ನು ಹುತ್ತದಲ್ಲಿಟ್ಟು ನಾನು ಮನೆಯಲ್ಲಿರಬೇಕಿತ್ತು!’ Hiss master’s voice ಮೊಳಗಿತು. Hiss ಎಂದು ಬುಸುಗುಟ್ಟುವುದರಲ್ಲಿ ಮಾಸ್ಟರಿಯನ್ನು ಹೊಂದಿದ ನಾಗಣ್ಣನ ಕಂಠಕ್ಕೆ ‘ದಿಲ್ಲಿ ಸಾಂಪ್ ಸಂಘ್’ ಸನ್ಮಾನಿಸಿ ಇತ್ತ ಬಿರುದು ಅದು.   

‘ಹಸಿರು ಹಾವು ಮನುಷ್ಯರ ರೂಪದಲ್ಲಿದೆಯೇನು?’ ಎಂದೆ. 

‘ಗದ್ದೆಗಳನ್ನು ಅಪಾರ್ಟ್ ಮೆಂಟಿಸುವ ಮಂದಿ, ಕಾಡುಗಳನ್ನು ಧ್ವಂಸ ಮಾಡುವ ಅಧಿಕಾರಿಗಳು ಹಸಿರಿಗೇ ವಿಷವಾಗುವುದರಿಂದ ಅವರೆಲ್ಲ ಹಸಿರು ಹಾವುಗಳೇ. ಅಂತೆಯೇ sand minining ನಲ್ಲಿ ನಿರತರಾದವರು ಮರಳು ಹಾವುಗಳು ಉರುಫ್ sand Boaಗಳು.’ 

‘ಇವುಗಳ ವಿಷಯದಲ್ಲಿ ನಿನ್ನ ಮಾತು ವಿಷಪ್ರಧಾನವಾಗಿತ್ತು, ವಿಷಯಪ್ರಧಾನವಾಗಿರಲಿಲ್ಲ.’ ಕೊಂಕು ನುಡಿದೆ. 

‘ನೀನು ಬಳೆ ಒಡಕದ ವಿಷಯದಲ್ಲಿ ಮಾತನಾಡುವಾಗ ಉಲ್ಲೇಖಿಸಿದ್ದು ಭೌತಿಕವಾಗಿ ಇರುವಂತಹ ವಿಷ. ನಾನು ಹೇಳುತ್ತಿರುವುದು ಮಾನಸಿಕವಾದ, ಭಾವರಹಿತವಾದ, ಸಮಾಜಘಾತುಕವಾದ, ಪರಿಸರವಧೆ ಮಾಡುವಂತಹ ವಿಷ. Environmental or societal poison is more lethal than physical poison.” ನಾಗಣ್ಣನ ಬುಸುಗುಟ್ಟುವಿಕೆಯ ಮುಂದೆ ಗುಡ್ ಓಲ್ಡ್ ಟ್ರೈನಿನ ಸ್ಟೀಮ್ ಇಂಜಿನ್ ಹೊರಚೆಲ್ಲುತ್ತಿದ್ದ ಬಿಸಿಯುಸಿರು ನಾನು ನೆಗಡಿಯಾದಾಗ inhale ಮಾಡುವ ಸ್ಟೀಮ್ನ ಮಟ್ಟದ್ದು ಎನಿಸುವಂತಿತ್ತು. 

‘ನೀರು ಹಾವುಗಳು?’ ನಾಗಣ್ಣನ ಬುಸುಗುಡುವಿಕೆಯನ್ನು ನಿಲ್ಲಿಸಲು ಅವನನ್ನು ಮತ್ತೆ ಮಾತಿಗೆಳೆಯಲೇ ಬೇಕಿತ್ತು. 

‘ಸರ್ಪರೂಪಿ ನೀರು ಹಾವುಗಳು ನಿರುಪದ್ರವಿಗಳು. ನರರೂಪಿಗಳು ಉಪದ್ರವಿಗಳು.’

‘ನರರೂಪಿ ನೀರು ಹಾವೇ?’

‘ಹುಂ. ಯಾರು ನೀರಿಗೆ ಹರಿವಿಗೆ ಅಡ್ಡಿ ಮಾಡುವರೋ ಅವರನ್ನು ಅಡ್ಡಿಯಾದವರು ನೀರು ಹಾವು ಎನ್ನುತ್ತಾರೆ. ಉದಾಹರಣೆಗೆ ಪಾಕಿಸ್ತಾನದ ದೃಷ್ಟಿಯಲ್ಲಿ ಭಾರತ ನೀರು ಹಾವು; ಸಿಂಧೂ ನೀರನ್ನು ನಿಲ್ಲಿಸುತ್ತೇವೆ ಎಂದುದಕ್ಕಾಗಿ. ತಮಿಳುನಾಡಿನ ದೃಷ್ಟಿಯಲ್ಲಿ ಕರ್ನಾಟಕ ನೀರು ಹಾವು.’

‘ಅವರಿವರ ದೃಷ್ಟಿ ಬಿಡು. ನಿನ್ನ ದೃಷ್ಟಿಯಲ್ಲಿ ನೀರು ಹಾವು ಯಾರು ಹೇಳು’ ಎಂದೆ. 

‘ಗಣೇಶನ ಹಬ್ಬದ ಸಮಯದಲ್ಲಿ ಎಣ್ಣೆ, ಬಣ್ಣಗಳನ್ನೆಲ್ಲ ನೀರಿಗೆ ಬಿಡುವವರಿಂದ ಹಿಡಿದು ಕಾರ್ಖಾನೆಗಳ ತ್ಯಾಜ್ಯಗಳನ್ನು ನೀರಿಗೆ ಸುರಿಯುವವರ ವರೆಗೆ ಯಾರ್ಯಾರು ಜಲಮಾಲಿನ್ಯಕ್ಕೆ ಕಾರಣರಾದರೋ ಅವರೆಲ್ಲರೂ ನೀರಿನ ಗುಣಮಟ್ಟಕ್ಕೆ ವಿಷ ಹಿಂಡುವ ನೀರು ಹಾವುಗಳು’ ಎಂದ ನಾಗಣ್ಣ. 

‘ನಿನ್ನ ದೃಷ್ಟಿಕೋನದಲ್ಲಿ ಹಾವುಗಳೆಂದರೆ ವಿಷ ಇರುವಂತಹವು ಮಾತ್ರ. ಅಲ್ಲವೆ?’ 

ಕೆಲವೇ ವಿಷಸರ್ಪಗಳಿದ್ದು, ಅನೇಕ ವಿಷರಹಿತ ಸರ್ಪಗಳಿರುವಾಗ ನಾಗಣ್ಣನ ಧೋರಣೆ ನನಗೆ ಸರಿಕಾಣಲಿಲ್ಲ. 

‘ಅದು ನನ್ನ ಅಭಿಪ್ರಾಯವಲ್ಲ, ನಿಮ್ಮ ನಂಬಿಕೆ. 

‘ಹಾವೊಂದು ಬಳಿ ಬಂದು; ತಾಕಿತು ಈ ಹೊಲವ; 

ಏನೆಂದು ಕೇಳಲು; ಹೇಳಿತು ಜೇನಂಥ ಬುಸುನುಡಿಯ!

ಬಿಲಗಳ ಇಲಿಗಳ ತಿನ್ನುವೆ ನಾನು

ಹೊಲಗಳ ಹೆಗ್ಗಣ ಕಬಳಿಸುತಿಹೆನು

ಹಲ್ಲಿಯ... ಲಲಲಾಲ; ಕೀಟವ... ಲಲಲಾಲ;

ಹಲ್ಲಿಯ ಕೀಟವ ಭಕ್ಷಿಸುವೆ ನಾನು; ಭಕ್ಷಿಸುವೆ ನಾನು... 

ಎಂದು ಹಾವು ನಿಮ್ಮ ಬಳಿ ಬಂದು ಹಾಡಬಹುದೆಂದು ನೀವು ಕನಸಿನಲ್ಲಿಯೂ ಎಣೆಸುವುದಿಲ್ಲ. ‘ಹೊಡಿ ಮಗ ಹೊಡಿ ಮಗ ಹೊಡಿ ಮಗ ಬಿಡಬೇಡ ಹಾವ್ನಾ...’ ಎನ್ನುವುದೇ ನಿಮ್ಮ ಧೋರಣೆ’ ಕುಪಿತನಾಗಿದ್ದ ನಾಗಣ್ಣ. 

‘ನೀ ಏನೇ ಹೇಳು ನಾಗಣ್ಣ, ಹಾವುಗಳು ಕೊಳಕು ಅನ್ನೋದು ಕೆಲವರ ಅಭಿಪ್ರಾಯ’ ಎಂದೆ. 

‘ನಾಲ್ಗೆ ಝರಾ ಕಂಟ್ರೋಲ್ ಮೆ ರಖೋ ಜೀ. ನೀವು ಮನುಷ್ಯರು ಕೇವಲ ಡ್ರೆಸ್ ಚೇಂಜ್ ಮಾಡ್ತೀರ. ನಾವು ಸ್ಕಿನ್ ಚೇಂಚ್ ಮಾಡ್ತೀವಿ. ‘ಹಾವು ಹಳೆಯದಾದರೇನು; ಚರ್ಮ ನವನವೀನ; ಹಳೆಯ ಪೊರೆಯ ಕಳಚುವುದಕೆ ಸರ್ಪಕಿದೆ ವಿಧಾನ’ ಎಂದು ಯಾರಾದರೂ ನಮ್ಮ ಬಗ್ಗೆ ಹಾಡು ಬರೆದಿದ್ದೀರಾ?’ ಬುಸುಗುಡುವಿಕೆ ಹೆಚ್ಚಾಯಿತು. 

‘ವಿರೋಧಪಕ್ಷದ ನಾಯಕನಂತೆ ತಪ್ಪುಗಳನ್ನು ಹುಡುಹುಡುಕಿ ಅಥವಾ ಕಲ್ಪಿಸಿಕೊಂಡು ಮಾತನಾಡಬೇಡ ನಾಗಣ್ಣ. ತೊಗೊ, ಈ ಬಟ್ಟಲಿನ ಹಾಲು ಕುಡಿ’ ಎಂದು ಅನುನಯಿಸಿದೆ. 

‘sorry dear fellow; snakes are vegans’ ಎಂದ ನಾಗಣ್ಣ, ‘ನಾವು ಟೀಟೋಟಲರ್ಸೂ ಹೌದು. a sip of water here and there is all the liquid is all the mead that the snakes need’ ಎಂಬ ಪೊಯೆಮ್ ಕೇಳಿಲ್ಲವೇನು?’ ನಾಗಣ್ಣ ಹಾಲಿನಿಂದ ಹಿಂದೆ ಸರಿದ. 

‘ಹಾಲು ವಿಷವೇನೋ?’ ಎಂದೆ. 

‘ಎರಡು ಹಾಲುಗಳಂತೂ ನಿಜಕ್ಕೂ ವಿಷಭರಿತ’ ಎನ್ನುತ್ತಲೇ ಗಹಗಹಿಸಿದ ಸರ್ಪರಾಯ. 

‘ಯಾವುವೋ?’

‘ಅಸೆಂಬ್ಲಿ ಹಾಲು, ಪಾರ್ಲಿಮೆಂಟ್ ಹಾಲು! ನಿಮ್ಮದೊಂದು ಮಿಸ್ಟೇಕ್ ಇದೆ.’ ಮತ್ತೆ ಕುತೂಹಲ ಹುಟ್ಟಿಸಿದನವ. 

‘ಏನು?’

‘ಎಂಪಿ, ಎಮ್ಮೆಲೆಗಳೆಂಬ ಹಾವುಗಳಿರುವ ಜಾಗವನ್ನು ಅಸೆಂಬ್ಲಿ ಹುತ್ತ ಮತ್ತು ಪಾರ್ಲಿಮೆಂಟ್ ಹುತ್ತ ಎಂದು ಬದಲಾಯಿಸಬೇಕಾಗಿತ್ತು’ ಎಂದು ಮತ್ತೊಮ್ಮೆ ಗಹಗಹಿಸಿತು. 

‘ರಾಜಕಾರಣವನ್ನು ಅತ್ತ ಬಿಡು ನಾಗಣ್ಣ. ಕೋಬ್ರಾಗಳ ಬಗ್ಗೆ ಏನಾದರೂ ಹೇಳು.’

‘ಓಹ್! ಸರ್ಪಗಳ ವಿಷಯ ಹಾಗಿರಲಿ. ನಿಮ್ಮ ಕೋಬ್ರಾಗಳಲ್ಲೇ ಅನೇಕ ವಿಧದವರು ಇದ್ದಾರೆ.’

‘ಅಂದರೆ?’

‘co-brothers! ಅವರನ್ನೇ ನೀವುಗಳು ಕೋಬ್ರಾಗಳು ಎನ್ನುವರಿಲ್ಲ. ಮನೆಹಾಳುತನ ಇರುವ ಕೋಬ್ರದರ್ ಅನ್ನು ಕ್ಯಾಸ್ಪಿಯನ್ ಕೋಬ್ರಾ ಅನ್ನಬಹುದು. ನಿರುಪದ್ರವಿ ಷಡ್ಡಕನನ್ನು ನಾಯಾ ಆಕ್ಸಿಯಾನಾ ಎಂದು ಕರೆಯಬಹುದು’ ಎಂದ ನಾಗಣ್ಣ ಉದ್ಯಾನದ ಗೇಟಿನತ್ತ ಕಣ್ಣು ಹಾಯಿಸಿ ‘ಓಹ್! ಬಂದರಪ್ಪ! ನನಗೆ lactic allergy ಇದೆ ಅಂತ ಹೇಳಿದರೂ ಹಾಲು ಸುರಿಯೋಕ್ಕೆ ಬರ್ತಿದಾರೆ. ಅವರ ಬಟ್ಟಲಿಗೆ ನನ್ನ ಹೆಡೆ ಸಿಕ್ಕರೆ ಮೂರು ದಿನ stomach ache ಕಟ್ಟಿಟ್ಟ ಬುತ್ತಿ. ಬರ್ತೀನಿ ಕಣೋ. See you soon’ ಎನ್ನುತ್ತಾ ತಳಮಟ್ಟದಲ್ಲಿ ಅವಿನ್ಯೂ ರಸ್ತೆಯ ಸುತ್ತಮುತ್ತಲಿನ ಗಲ್ಲಿಭರಿತ ಲೇಔಟ್ನಂತೆ ಇರುವ ಹುತ್ತದೊಳಕ್ಕೆ ಇಳಿದು ಮಾಯವಾದ. 


Comments