ಕನ್ನಡ ಭಾಷೆ

 ಕನ್ನಡ ಭಾಷೆ

 - ಸರಸ್ವತಿ, ಸಿಡ್ನಿ



 

ಕನ್ನಡ ಎನೆ ಕುಣಿದಾಡುವುದೆನ್ನೆದೆ

  ಕನ್ನಡ ಎನೆ ಕಿವಿನಿಮುರುವುದು  | ’ ಎಂದು ಕುವೆಂಪುರವರು ಎಷ್ಟು ಸೊಗಸಾಗಿ ಹೇಳಿದ್ದಾರೆ, ಅಲ್ಲವೆ!.

ಏಕೆಂದರೆ 'ಕನ್ನಡ​' ಅಂಥ ಒಂದು ಸುಂದರವಾದ ಭಾಷೆ. ಕಲಿಯಲು ಸುಲಭ​, ಕಲಿಸಲು ಸುಲಭವಾದ ಭಾಷೆ. ಈ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದಿಯೆಂದು ವಿಧ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಭಾರತ ದೇಶದ​ ಎಲ್ಲಾ ಭಾಷೆಗಳಿಗೂ ಸಂಸ್ಕೃತ​ ತಾಯಿ ಎಂದು ಕೆಲವರ ಅಭಿಪ್ರಾಯ​. ಪಂಚ ದ್ರಾವಿಡ ಭಾಷೆಗಳಲ್ಲಿ ಇದೂ ಒಂದೆಂದು ಮತ್ತೆ ಕೆಲವರ ವಾದ. ಇದನ್ನು ವಿದ್ವಾಂಸರೇ ಸ್ಪಷ್ಟೀಕರಿಸಬೆಕು. ಕನ್ನಡ ಭಾಷೆಯಲ್ಲಿ ಸಂಸ್ಕೃತ​ದ ಅನೇಕ ಶಬ್ಧಗಳು ಸೇರಿ ಕನ್ನಡವನ್ನು ಇನ್ನೂ ಸುಂದರವಾಗಿದಸಿದೆ. ಕ್ರಿ.ಶ ೮೫೦ ರಲ್ಲಿ "ಕವಿರಾಜಮಾರ್ಗ​" ಎಂಬ ಕೃತಿ ರಚನೆಯಾಯಿತು.. ಇದು ಕನ್ನಡದ ಅತ್ಯಂತ ಹಳೆಯ ಗ್ರಂಥ. ಕನ್ನಡ ವರ್ಣಮಾಲೆಯಲ್ಲಿ ೪೯ ಅಕ್ಷರಗಳಿವೆ. ಕನ್ನಡ ಭಾಷೆಯ ವೈಶಿಷ್ಟ್ಯವೆಂದರೆ, ಅದನ್ನು ನಾವು ಬರೆದಂತೆ ಉಚ್ಛರಿಸಬಹುದು. ಉಚ್ಛರಿಸಿದಂತೆ ಬರೆಯಬಹುದು. ವಿನೋಬಾ ಭಾವೆಯವರು ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ಕರೆದಿದ್ದಾರೆ.

ಕರ್ನಾಟಕದಲ್ಲಿ ಕನ್ನಡವನ್ನು ನಾನಾ ಪ್ರಕಾರದ ಶೈಲಿಯಲ್ಲಿ ಮಾತನಾಡುತ್ತಾರೆ.

ಮೈಸೂರು ಕನ್ನಡ​ - ಇದು ಅಚ್ಚ ಕನ್ನಡ, ಬೆಂಗಳೂರು ಕನ್ನಡ - ಇದನ್ನು ಕಂಗ್ಲೀಷ್ (ಕನ್ನಡ ಮತ್ತು ಇಂಗ್ಲೀಶ್ ಬೆರೆತ ಭಾಷೆ) ಎನ್ನಬಹುದು. ಏಕೆಂದರೆ ಇದರಲ್ಲಿ ಅರ್ಧ ಭಾಗ ಇಂಗ್ಲೀಷೇ ಇರುತ್ತದೆ. ಇದನ್ನು ಕನ್ನಡಿಗರ ನಿರಭಿಮಾನವೋ, ಇಂಗ್ಲೀಷ್ ಮೋಹವೋ ಎನೆನ್ನಬೇಕೋ ಗೊತ್ತಿಲ್ಲ. ಮಂಗಳೂರು ಕನ್ನಡ - ಇದನ್ನು ಗ್ರಾಂಥಿಕ ಕನ್ನಡ ಎನ್ನಬಹುದು. ಹೇಗೆ ಬರೆದದೆಯೋ ಹಾಗೇ ಮಾತನಾಡುವುದು. ಉದಾ: ‘ನೀವ್ ಯಾಕ್ ಬರ್ಲಿಲ್ಲ’ ಎನ್ನುವುದನ್ನು ‘ನೀವು ಯಾಕೆ ಬರುವುದಿಲ್ಲ’ ‘ನಿಮ್ಗೆ ಯಾರ್ ಏನ್ ಮಾಡಿದ್ರು’ ಎನ್ನುವುದನ್ನು ‘ನಿಮಗೆ ಯಾರು ಏನು ಮಾಡಿದರು ಮಾರಾಯರೆ’ ಎನ್ನುತ್ತಾರೆ. ಆದರೆ ಆಡುಮಾತಿನ ಸೊಗಸೇ ಬೇರೆ​​. ಆ ಶೈಲಿಯನ್ನು ನಾವು ಹಾಸ್ಯ ಭರಿತ ನಗುವಿನಿಂದ ಸ್ವಿಕರಿಸುತ್ತೇವೆ. ಇನ್ನು ಧಾರವಾಡ ಕನ್ನಡ, ಗುಲ್ಬರ್ಗ ಕನ್ನಡ, ಬೆಳಗಾವಿ ಕನ್ನಡ ಎಂಬ ವಿಧಗಳೂ ಇವೆ. ಇನ್ನೊಂದು ಪ್ರಕಾರವು - ಮಂಡ್ಯದ ಕನ್ನಡ. ಇದು ಅಚ್ಚ ಹಳ್ಳಿ ಭಾಷೆ. ನಮ್ಮಲ್ಲಿ ಐವತ್ತು ಮೈಲಿ ದೂರಕ್ಕೊಂದು ಸಂಸ್ಕೃತಿ, ಆಹಾರ​, ವಿಚಾರ​, ಉಡುಪು ನಂಬಿಕೆಗಳಿರುವಂತೆ ಈ ಭಾಷೆಯೂ !!..

ಕನ್ನಡ ಭಾಷೆಗೆ ಅನೇಕ ಹಂತಗಳಿವೆ. ಪೂರ್ವ ಹಳೆಗನ್ನಡ​, ಹಳೆಗನ್ನಡ, ಮಧ್ಯ ಕನ್ನಡ​, ನವ್ಯ ಕನ್ನಡ​, ನವೋದಯ ಕನ್ನಡ ಎಂದು. ಪ್ರತಿಯೊಂದು ಹಂತಗ​‍ಳ್ಳಲ್ಲಿಯೂ ಕನ್ನಡ ಭಾಷೆ ಸುಧಾರಣೆಗೊಂಡಿದೆ. ಕನ್ನಡ ಭಾಷೆಗೆ ಜೈನ ಕವಿಗಳ ಕೊಡುಗೆ ಅಪಾರವಾದದ್ದು. ಆದಿಕವಿ ಪಂಪನಿಂದ ಹಿಡಿದು ರನ್ನ​, ಜನ್ನ​, ಪೊನ್ನ ಮುಂತಾದವರು ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯಗಳನ್ನು ರಚಿಸಿ, ಕನ್ನಡವನ್ನು ಶ್ರೀಮಂತ ಗೊಳಿಸಿದ್ದಾರೆ. ಆದಿ ಕವಿ ಪಂಪನ 'ಆದಿ ಪುರಾಣ​, ಪಂಪಭಾರತ​', ಕುಮಾರ ವ್ಯಾಸನ ‘ಭಾರತ’, ರನ್ನನ 'ಗದಾಯುದ್ಧ​',  ಕುವೆಂಪು ರವರ ‘ಶ್ರೀ ರಾಮಾಯಣ ದರ್ಶನಂ’, ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ​’ ಇವುಗಳಿಗೆ ಸಾಟಿ ಉಂಟೆ? ಮಂಕುತಿಮ್ಮನ ಕಗ್ಗವನ್ನು "ಕನ್ನಡದ ಭಗವದ್ಗೀತೆ" ಎನ್ನುವರು. ಮುಂದೆ ಕರಾವಳಿಯ ಗೋವಿಂದ ಪೆೈಗಳು ಗೌರೀಶ ಕಾಯ್ಕಿಣಿರವರ ಕೊಡುಗೆಯೇನೂ ಕಡಿಮೆಯಿಲ್ಲ. ಟಿ.ಪಿ ಕೆೈಲಾಸಂ, ನಾ. ಕಸ್ತೂರಿ ಇದೇ ಸಾಲಿಗೆ ಬರುತ್ತಾರೆ. ಕೆೈಲಾಸಂ ರವರ ಆಡುಮಾತಿನ ನಾಟಕಗಳು ಎಷ್ಟು ಚನ್ನಾಗಿರುತ್ತದೆ. ಇವರು ಲಂಡನ್ನಿಗೆ ಹೋಗಿದ್ದಾಗ ಅಲ್ಲಿನ ಒಂದು ಸಾಹಿತ್ಯ ಗೋಷ್ಟಿಯಲ್ಲಿ ಇಂಗ್ಲೀಷಿನ ಪದ್ಯವೊಂದಕ್ಕೆ ಅದೇ ಧಾಟಿಯಲ್ಲಿ ಕನ್ನಡ ಪದ್ಯವೊಂದನ್ನು ಅಲ್ಲೆ ರಚಿಸಿ ಹಾಡಿ ಎಲ್ಲರನ್ನು ದಂಗು ಬಡಿಸಿದ್ದರು.

ಇನ್ನೂ ಮುಂದಕ್ಕೆ ಹೋದರೆ, ಕುವೆಂಪು, ದ​. ರಾ. ಬೇಂದ್ರೆ, ಮಾಸ್ತಿ, ವಿ. ಕೃ. ಗೊಕಾಕ್, ಗೋಪಾಲ ಕೃಷ್ನ ಅಡಿಗ​, ಪು. ತಿ. ನ​., ವಿ. ಸೀ., ಬಿ. ಎಂ. ಶ್ರೀಕಂಠಯ್ಯ.- ತೀರ ಇತ್ತೀಚಿನ ಪ್ರೆಮ ಕವಿ ಕೆ. ಎಸ್. ನರಸಿಂಹ ಸ್ವಾಮಿ, ಎಚ್. ಎಸ್. ವೆಂಕಟೇಷಮೂರ್ತಿ, ಲಕ್ಷ್ಮಿ ನಾರಾಯಣ ಭಟ್ಟ, ಕಂಬಾರ​, ಕೀಟಲೆ ಕವಿ ಬಿ. ಆರ್. ಲಕ್ಷ್ಮಣ ರಾವ್, ಇವರೆಲ್ಲ ಕನ್ನಡ ಭಾಷೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಕನ್ನಡ ಭಾಷೆಗೆ ಶಾಸ್ತ್ರೀಯ  ಸ್ಥಾನ-ಮಾನ ಸಿಕ್ಕಿದೆ. ಇಲ್ಲಿಯವರೆಗೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ನಿಮ್ಮಗೆಲ್ಲ ಗೊತ್ತಿರುವ ವಿಷಯವೆ. ಕನ್ನಡದ ಜಾನಪದ ಶೆೈಲಿಯ ಸಾಹಿತ್ಯ ಎಂತಹ ಸೊಗಸು. ಸರ್ವಜ್ಞನ ತ್ರಿಪದಿ, ಕುಮಾರ ವ್ಯಾಸನ ಷಟ್ಪದಿ, ಸೋಮೇಶ್ವರ ಶತಕ​, ಇವೆಲ್ಲ ಕೇಳಲೆನಿತು ಆಹ್ಲಾದಕರ​ !!.. ರಾಜರತ್ನಂ ಅವರು "ನರಕಕ್ಕ್ ಕಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ವೊಲಿಸಿ ಆಕಿದ್ರೂನು ಮೂಗ್ನಲ್ ಕನ್ನಡ ಪದವಾಡ್ತೀನಿ" ಎಂದು ತಮ್ಮ ಕಾವ್ಯ ನಾಯಕ ರತ್ನನ ಕೆೈಲಿ ಹೇಳಿಸಿ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರ. ಕನ್ನಡಂ ಕತ್ತೂರಿಯಲ್ತೆ ಎಂದು ಮತ್ತೊಬ್ಬ ಕನ್ನಡ ಪ್ರೇಮಿಯ ವ್ಯಾಖ್ಯಾನ​.

ಆ. ನ​. ಕೃಷ್ಣರಾಯರು, ತ​. ರಾ. ಸುಬ್ಬರಾಯರು, ಬೀ. ಚಿ, ಇವರೆಲ್ಲರೂ ಕನ್ನಡ ಭಾಷೆಯ ಸಂಪತ್ತನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇದರಲ್ಲಿ ಮಹಿಳೆಯರ ಪಾತ್ರವೇನೂ ಕಡಿಮೆಯಿಲ್ಲ. ತ್ರಿವೇಣಿ, ವಾಣಿ, ಎಂ. ಕೆ. ಇಂದಿರ​, ಸಾಯಿಸುತೆ, ಹೆಳುತ್ತಾ ಹೋದರೆ ಪಟ್ಟಿ ಉದ್ದವಾಗುತ್ತದೆ. ನಿಸಾರ್ ಅಹ್ಮದ್, ಎಸ್. ಕೆ. ಕರೀಮ್ ಖಾನ್, ಶಿಶುನಾಳ ಷರೀಫ​, ಇವರ ಮಾತೃ ಭಾಷೆ ಬೇರೆಯಾದರು ಅವರು ಕನ್ನಡಕ್ಕೆ ಸಲ್ಲಿಸಿರುವ ಸೇವೆ ಅನನ್ಯ. ಕನ್ನಡ ಚಲನಚಿತ್ರಗಳು ರಾಷ್ಟ್ರೀಯ​, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಹಿರೇಮಗಳೂರು ಕಣ್ಣನ್ ಅವರ ವಾಕ್ಚಾತುರ್ಯಕ್ಕೆ ಮರುಳಾಗದವರೆ ಇಲ್ಲ​. ಡಾ. ನಾ. ಸೋಮೇಶ್ವರ ಅವರ ಕನ್ನಡ ಸೇವೆಗೆ ಒಂದು ದೊಡ್ಡ ನಮಸ್ಕಾರ.

ಹೇಳುತ್ತಾ ಹೋದರೆ ಕನ್ನಡ ಭಾಷಾ ಹಿರಿಮೆ ಇವತ್ತಿಗೆ ಮುಗಿಯುವುದಿಲ್ಲ. ಇಂಥ ಶ್ರೀಮಂತ, ಸುಂದರ, ಸರಳ​, ಸುಲಲಿತ ಕನ್ನಡ ಭಾಷೆ ಈಗ ಸೊರಗುತ್ತಿದೆ. ಇದ್ದಕ್ಕೆ ಈಗಿನ ಪೀಳಿಗೆಯವರ ನಿರಭಿಮಾನವೇ ಕಾರಣ. ಬೆಂಗಳೂರಿನಲ್ಲಂತೂ ಕನ್ನಡ ಮೂರನೆ ಭಾಷೆಯಾಗಿ ಹೋಗಿದೆ. ತಂದೆ-ತಾಯಿಯರು ಮಕ್ಕಳಿಗೆ ಕನ್ನಡವನ್ನೇ ಕಲಿಸುವುದಿಲ್ಲ. ಕೆಲವು ಅಚ್ಚ ಕನ್ನಡಿಗರ ಮನೆಯಲ್ಲು ಮಕ್ಕಳಿಗೆ ಕನ್ನಡ ಮಾತಾಡಲು ಬರುವುದಿಲ್ಲ. ಹೀಗೆ ಮುಂದುವರಿದರೆ ಒಂದು ದಿನ ಕನ್ನಡ ಮರೆಯಾಗಿ ಹೋಗುತ್ತದೆ. ಆದ್ದರಿಂದ ಕನ್ನಡಿಗರೆ ಏಳಿ ಎದ್ದೇಳಿ ಕನ್ನಡವನ್ನು ಉಳಿಸಿ.

 

ಸಿರಿಗನ್ನಡಂ ಗೆಲ್ಗೆ

ಸಿರಿಗನ್ನಡಂ ಬಾಳ್ಗೆ

Comments