ಅಜ್ಜಿ ಹೇಳಿದ ಕಥೆ
-ಜೆ. ಎಸ್. ಗಾಂಜೇಕರ, ಕುಮಟಾ, ಉ. ಕನ್ನಡ. ಕರ್ನಾಟಕ
ಆಜ್ಜಿ ಮೊಮ್ಮಕ್ಕಳಿಗೆ ಕಥೆ ಹೇಳುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಮೊಮ್ಮಕ್ಕಳಿಗೆ ಅಜ್ಜಿಯಿಂದ ಕಥೆ ಕೇಳುವುದೆಂದರೆ ಎಲ್ಲಿಲ್ಲದ ಉಲ್ಲಾಸ. ಅಜ್ಜಿಗೂ ಕೂಡ ಮೊಮ್ಮಕ್ಕಳಿಗೆ ಕಥೆ ಹೇಳುವುದೆಂದರೆ ಸಂತೋಷ . ಅಜ್ಜಿ ತನ್ನ ವೃದ್ಯಾಪ್ಯವನ್ನು ಮೊಮ್ಮಕ್ಕಳಿಗೆ ಕಥೆಯನ್ನು ಹೇಳುವುದರಲ್ಲಿಯೋ ಅವರೊಂದಿಗೆ ಹಾಡಿ - ಕುಣಿಯುದರಲ್ಲಿಯೋ ಸಮಯವನ್ನು ಕಳೆದು ಸಂತಸ ಪಡುತ್ತಾಳೆ. ಅಜ್ಜಿಯಿಂದ ಕಥೆಯನ್ನು ಕೇಳುವ ಸೌಭಾಗ್ಯ ನನಗೂ ದೊರೆತಿತ್ತು.
ನನ್ನ ಲಕ್ಷ್ಮಿ ಅಜ್ಜಿ (ತಂದೆಯವರ ತಾಯಿ ) ಅನಕ್ಷರಸ್ಥೆಯಾದರೂ ತುಂಬಾ ಬುದ್ಧಿವಂತರು. .ಶಿಸ್ತಿಗೆ ಹೆಸರಾದವರು. ಅವರು ತಮ್ಮ ಹಿರಿಯ ಮಗನ ಹತ್ತಿರ ಮೂಲ ಮನೆಯಲ್ಲಿ ವಾಸವಾಗಿದ್ದರು. ನನ್ನ ತಂದೆಯವರು ಸರಕಾರೀ ನೌಕರ ರಾದುದರಿಂದ ಆಗಾಗ ಬೇರೆ ಊರಿಗೆ ವರ್ಗವಾಗುತ್ತಿತ್ತು. ನಾನು ಬೇಸಿಗೆಯ ರಜೆಯಲ್ಲಿ ಮೂಲ ಮನೆಗೆ ಹೋದಾಗ ಅಜ್ಜಿಯೊಂದಿಗೆ ಕಾಲ ಕಳೆಯುತ್ತಿದ್ದೆ. ಆಗ ಅವರು ಕಥೆಯನ್ನು ಹೇಳುತ್ತಿದ್ದರು. ನನಗಂತೂ ಬೇಸಿಗೆ ರಜೆ ಯಾವಾಗ ಸಿಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದೆ. ಪ್ರತಿಸಲವೂ ಹೋದಾಗ ಹೊಸಹೊಸ ಕಥೆಯನ್ನು ಹೇಳುತ್ತಿದ್ದರು. ನಾನಂತೂ ಉತ್ಸುಕತೆಯಿಂದ ಕೇಳುತ್ತಿದ್ದೆ. ಅವರು ರಾಮಾಯಣ, ಮಹಾಭಾರತದಲ್ಲಿ ಬರುವ ಉಪಕಥೆ ,ಪೌರಾಣಿಕ ಕಥೆ, ಸ್ವಾಮಿ ವಿವೇಕಾನಂದರ, ಮಹಾತ್ಮಾಗಾಂಧೀಜಿಯವರ , ಸುಭಾಸ ಚಂದ್ರರ ಹೀಗೆ ಅನೇಕ ಪುಣ್ಯಪುರುಷರ ಚರಿತ್ರೆ ಯನ್ನು ಹೇಳುತ್ತಿದ್ದರು. ರಸವತ್ತಾಗಿ ಹೇಳುವ ಕಲೆ ಅವರಿಗೆ ಕರಗತವಾಗಿತ್ತು. ಅವರಿಗೆ ನಾನು ಕಥೆ ಕೇಳುವಾಗ 'ವೂ 'ಗುಟ್ಟಲೇಬೇಕು. ಹೀಗಾಗಿ ಅಜ್ಜಿ ಕಥೆ ಹೇಳುವಾಗ ಆಗಾಗ ''ವೂ '' ಗುಟ್ಟುತ್ತಿದ್ದೆ. ಇಲ್ಲವಾದರೆ ಅಜ್ಜಿ ಕಥೆಯನ್ನು ಮುಂದುವರಿಸುತ್ತಿರಲಿಲ್ಲ. ಕಥೆಯ ಕೊನೆಯಲ್ಲಿ ಅವರು ಕಥೆಯ ನೀತಿಯನ್ನು , ಮನಮುಟ್ಟುವಂತೆ ಹೇಳುತ್ತಿದ್ದರು.
ಈಗ ನಾನು ಬರೆಯುತ್ತಿರುವ ಕಥೆಯು ವಿಶಿಷ್ಠವಾದುದು ಹಾಗು ನನಗೆ ತುಂಬಾ ಇಷ್ಟ ವಾದದು. ಈ ಕಥೆಯನ್ನು ಅಜ್ಜಿ ನಾನು ೮ ನೇ ತರಗತಿಯಲ್ಲಿದ್ದಾಗ ಓದುತ್ತಿದ್ದಾಗ ಹೇಳಿದ ಕಥೆ. ಈಗ ಕಥೆ ಹೇಳಿದ ಅಜ್ಜಿ ಇಲ್ಲ . ಆದರೆ ಅವರು ಹೇಳಿದ ಕಥೆ ಇನ್ನೂ ನನ್ನ ಅಂತರಂಗದಲ್ಲಿದೆ. ಅಜ್ಜಿ ಹೇಳಿದ ಕಥೆಯನ್ನು ತಮ್ಮಲ್ಲಿ ಹಂಚಿಕೊಳ್ಳಲು ಬಯಸುವೆ.
ನನ್ನನ್ನು ಕಂದಾ, ಎಂದು ಸಂಭೋಧಿಸುತ್ತಾ ಕಥೆಯನ್ನು ಆರಂಭಿಸಿದರು .
ಒಮ್ಮೆ ಒಂದು ಹಳ್ಳಿಯಲ್ಲಿ ನಾಟಕ ಕಂಪನಿ ಬಂತು. ಪ್ರತಿದಿನ ನಾಟಕ ಆರಂಭವಾಗುವುದು ರಾತ್ರಿ ೯ ಘ೦ಟೆಗೆ . ಅಲ್ಲಿಯ ಜನತೆಗೆ ನಾಟಕ ಒಂದೇ ಮನೋರಂಜನೆಯಾಗಿತ್ತು. ಹೀಗಾಗಿ ರಾತ್ರಿಯಾದೊಡನೆ ಊಟ ಮಾಡಿ ನಾಟಕ್ ನೋಡಲು ಬರುತ್ತಿದ್ದರು. ನಾಟಕ ಕಂಪನಿಯ ಮಾಲಿಕನಿಗೆ ತುಂಬಾ ಆದಾಯ ಬರುತ್ತಿತ್ತು. ಪೌರಾಣಿಕ, ಸಾಮಾಜಿಕ ನಾಟಕವಾಡಿ ಖ್ಯಾತಿ ಪಡೆಯಿತು. ಒಮ್ಮೆ "ಭೀಮನ ವಿಜಯ" ಮಹಾಭಾರತದ ಒಂದು ಪ್ರಸಂಗದ ನಾಟಕವಾಡಿದರು. ಅದು ಬಹಳಷ್ಟು ಜನರಿಗೆ ಇಷ್ಟವಾಯಿತು. ಎಲ್ಲಾ ಪಾತ್ರಧಾರಿಗಳು ಭಾವಪೂರ್ಣವಾಗಿ ನಟಿಸಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.
ಒಂದು ದಿನ ಮುಂಜಾನೆ ಭೀಮನ ಪಾತ್ರಧಾರಿಗೆ ವಿಪರೀತ ವಾಂತಿ- ಭೇಧಿ ಸುರು ಆಗಿ ತಾನು ಊರಿಗೆ ಹೋಗುವುದಾಗಿ ಮಾಲೀಕರಿಗೆ ಹೇಳಿ ಹೋಗಿಯೇಬಿಟ್ಟ. ಆ ದಿನ ಭೀಮನ ಪಾತ್ರ ಮಾಡಲು ಯಾರೂ ಇಲ್ಲದ ಕಾರಣ ನಾಟಕದ ಮಾಲಿಕನಿಗೆ ದೊಡ್ಡ ಚಿ೦ತೆಯಾಯಿತು. ಭೀಮನ ಪಾತ್ರ ಮಾಡಲು ಉಳಿದ ಪಾತ್ರಧಾರಿಗಳು ಸಿದ್ಧರಿರಲಿಲ್ಲ. ಹೀಗಾಗಿ ಭೀಮನ ಪಾತ್ರ ಮಾಡುವ ನಟ ಬೇಕಾಗಿತ್ತು.
ಆಗ ಮಾಲೀಕ ಊರಿನ ಮುಖ್ಯಸ್ಥರನ್ನು ಕರೆದು ತನ್ನ ಸಮಸ್ಯೆಯನ್ನು ಹೇಳಿ ಭೀಮನ ಪಾತ್ರ ಮಾಡುವವರು ಈ ಹಳ್ಳಿಯಲ್ಲಿ ಯಾರಾದರೂ ಇದ್ದಾರಾ? ಎಂದು ಕೇಳಿದ. ಆಗ ಮುಖ್ಯಸ್ಥ ಹೇಳಿದ " ತಿಮ್ಮ ಎಂಬ ಯುವಕನಿಗೆ ನಾಟಕದಲ್ಲಿ ಪಾತ್ರಮಾಡುವ ಅಭಿರುಚಿಯಿದೆ" ಎಂದು ಹೇಳಿದ. ಮುಖ್ಯಸ್ಥ ತಿಮ್ಮನನ್ನು ಕರಿಸಿ "ತಿಮ್ಮಾ, ನೀನು "ಭೀಮನ ವಿಜಯ" ನಾಟಕದಲ್ಲಿ ಭೀಮನ ಪಾತ್ರ ಮಾಡಲು ರೆಡಿ ಇದ್ದಿಯಾ ? ಎಂದು ಕೇಳಿದಾಗ ತಿಮ್ಮಾ ಕೂಡಲೇ ಒಪ್ಪಿಕೊಂಡನು. ತಿಮ್ಮಾ ಕಾಣಲು ಭೀಮನತರಹ ಎತ್ತರ ದಪ್ಪನಾಗಿದ್ದ. ಅವನಿಗೆ ದಪ್ಪ ಮೀಸೆಯೂ ಇತ್ತು. ಈತನನ್ನು ಕಂಡು ನಾಟಕದ ಮಾಲಿಕನಿಗೆ ಖುಷಿಯಾಯಿತು. ಮಧ್ಯಾನ್ಹ್ ಹೊತ್ತಿಗೆ ತನ್ನ ನಾಟಕದಲ್ಲಿ ಭೀಮನ ಪಾತ್ರವನ್ನು ಈ ಊರಿನವರೇ ಆದ ತಿಮ್ಮ ಮಾಡುವುದಾಗಿ ಮಾಲೀಕ ಡಂಗುರ ಸಾರಿಸಿದ. ಆತನ ಪಾತ್ರ ನೋಡುಗಲೋಸುಗ ಊರಿನ, ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ನಾಟಕ ನೋಡಲು ಬಂದರು. ನಾಟಕದಲ್ಲಿ ತಿಮ್ಮನನ್ನು ನೋಡಿ ಸಾಕ್ಷಾತ್ ಭೀಮನೇ ಬಂದಿದ್ದಾನೆಂದು ಖುಷಿ ಪಟ್ಟು ಕೇಕೆ ಹಾಕಿದರು. ಭೀಮನೂ ಸಹ ನಾಟಕದಲ್ಲಿ ಗಾಂಭೀರ್ಯದಿಂದ ಕೈಯಲ್ಲಿ ಗಧೆ ಹಿಡಿದು ನಡೆದಾಡುವಾಗ, ಮಾತಾಡುವಾಗ ಸ್ವತಃ ದ್ವಾಪರ ಯುಗದ ಭೀಮನೆಯೇನೆಂದು ಅಲ್ಲಿಯ ಪ್ರೇಕ್ಷಕರು ಕೊಂಡಾಡಿದರು . ಹೀಗೆ ನಾಟಕ ನೋಡುವ ಜನರು ಹೆಚ್ಚಾದರು . ತಿಮ್ಮನಿಗೆ ಸಂತೋಷವಾಯಿತು. ಏಕೆಂದರೆ ತನ್ನ ಪಾತ್ರ ನೋಡಲು ಬಹಳಷ್ಟು ಜನ ಸೇರುತ್ತಾರೆಂದು.
ಅಜ್ಜಿ ಕಥೆ ಹೇಳುವುದನ್ನು ನಿಲ್ಲಿಸಿದರು. ಆಗ ನಾನು "ಅಜ್ಜಿ, ಮುಂದೇನಾಯಿತು? "ಎಂದು ಕೇಳಿದೆ. ಆಗ ಅಜ್ಜಿ ಹೇಳಿದಳು, ತಿಮ್ಮಾ ಹಗಲಿನಲ್ಲಿ ರಸ್ತೆಯಲ್ಲಿ ಹೋಗುವಾಗ ಗಧೆಯನ್ನು ಹಿಡಿದು ಓಡಾಡುತ್ತಿದ್ದ. ಆಗ ನಾನು " ಏಕಜ್ಜಿ ತಿಮ್ಮಾ ಓಡಾಡುವಾಗ ಗಧೆಯನ್ನು ಹಿಡಿದು ಏಕೆ ಓಡಾಡುತ್ತಿದ್ದ? ಎಂದು ನಾನು ಕೇಳಿದೆ. ಆಗ ಅಜ್ಜಿ "ಕಂದಾ, ಆ ತಿಮ್ಮಾ ತಿಳಿದ ತಾನೇ ಸಾಕ್ಷಾತ್ ಭೀಮನೆಂದು. ಹೀಗಾಗಿ ಆತ ಊರಲ್ಲಿ ತಿರುಗಾಡುವಾಗ ಕೈಯಲ್ಲಿ ಗಧೆಯನ್ನು ಹಿಡಿದು ಓಡಾಡುತ್ತಿದ್ದ. ಅಜ್ಜಿ ಕೇಳಿದಳು "ಅಂಥವರನ್ನು ಏನೆಂದು ಕರೆಯುತ್ತಾರೆ "ಎಂದು. ಆಗ ನಾನೆಂದೆ " ಅಂಥವರು ಹುಚ್ಚರೇ ಸರಿ. ". ನೀನು ಹೇಳುವುದು ಸರಿಯಿದೆ. " ಎಂದು ಹೇಳುತ್ತಾ ಅಜ್ಜಿ, "ತಿಮ್ಮನು ನಾಟಕದಲ್ಲಿ ಭೀಮನ ಪಾತ್ರ ಅಷ್ಟೇ. ನಾಟಕ ಮುಗಿದ ನಂತರ ಆತ ತಿಮ್ಮ. ಆದರೆ ತಾನೇ ಭೀಮನೆಂದು ತಿಮ್ಮನ ಮನಸ್ಸಿನಲ್ಲಿ ಬೇರೂರಿತ್ತು. ಆತ ತಿಳಿದ ಸದಾಕಾಲ ಭೀಮನೆಂದು. ಇದು ಸರಿಯಲ್ಲ. ಈ ಜಗದಲ್ಲಿ ನಾವು ಕೇವಲ ಪಾತ್ರಧಾರಿಗಳು. ನಮ್ಮ ನಮ್ಮ ಪಾತ್ರವನ್ನು ಸರಿಯಾಗಿ ಮಾಡಿದರೆ ಜೀವನವು ಚಂದ. ನಾವು ಯಾವುದೇ ಒಂದು ಪಾತ್ರಕ್ಕೆ ಅಂಟಿಕೊಂಡಿರಬಾರದು . ಉದಾ .ಆಫಿಸಿನಲ್ಲಿ ಅಧಿಕಾರಿಯಾಗಿದ್ದರೆ, ಆತ ಮನೆಗೆ ಬಂದನಂತರ ಆತ ತಂದೆ- ತಾಯಿಗೆ ಮಗ,ಹೀಗಾಗಿ ಆತ ಮಗನ ಪಾತ್ರ ಮಾಡುವುದು , ಹೆಂಡತಿಗೆ ಆತ ಗಂಡ ,ಹೀಗಾಗಿ ಆತ ಗಂಡನ ಪಾತ್ರ ಮಾಡುವುದು , ಮಗನಿಗೆ ತಂದೆ, ,ಹೀಗಾಗಿ ಆತ ತಂದೆಯ ಪಾತ್ರ, ಮಾಡುವುದು ಸರಿ. ಹೀಗೆ ಆಯಾಯ ಪಾತ್ರವನ್ನು ಚನ್ನಾಗಿ ನಿಭಾಯಿಸಿದರೆ ಬಾಳು ಬಂಗಾರವಾಗುವುದು. ಅದರ ಬದಲು ತಾನು ಅಧಿಕಾರಿಯೆ೦ದು ಮನೆಯಲ್ಲಿ ಅಧಿಕಾರ ಚಲಾಯಿಸುವುದು ಸರಿಯಲ್ಲ. ಅಧಿಕಾರ ಒಂದು ಪಾತ್ರ ಅಷ್ಟೇ! ಆಫಿಸಿನಲ್ಲಿ ಅಧಿಕಾರಿ ಪಾತ್ರ ನಿಭಾಯಿಸಬೇಕು.ಆದುದರಿಂದ, ಕಂದಾ , ನಾವು ಈ ಜಗದಲಿ ಸಮಯಾನುಸಾರವಾಗಿ ವಿಭಿನ್ನ ಪಾತ್ರ ಮಾಡಬೇಕಷ್ಟೆ! ಈಗ ನೀನು ವಿದ್ಯಾರ್ಥಿಯ ಪಾತ್ರವನ್ನು ಚನ್ನಾಗಿ ನಿರ್ವಹಿಸು ಎಂದು ಹಿತವಚನ ನೀಡಿ ಅಜ್ಜಿ ಕಥೆಯನ್ನು ಮುಗಿಸಿದಳು.
ಈ ಕಥೆಯ ತಾತ್ಪರ್ಯ : ಯಾವದೇ ಒಂದು ಪಾತ್ರಕ್ಕೆ ಅಂಟಿಕೊಳ್ಳದೆ ದೊರೆತ ಪಾತ್ರವನ್ನು ಚನ್ನಾಗಿ ಮಾಡುವುದೇ ಲೇಸು.
Comments
Post a Comment