ಆಹಾ ಗಾಯನ; ಓಹ್ ಗಾಯಾನಾ?

 ಆಹಾ ಗಾಯನ; ಓಹ್ ಗಾಯಾನಾ?

ಹಾಸ್ಯ ಲೇಖನ - ಅಣಕು ರಾಮನಾಥ್

ಸಾಮಜವರಗಮನ...



ಈ ಹಾಡನ್ನು ನೀವೂ ಕೇಳಿರುತ್ತೀರಿ. ಅದರ ಅರ್ಥವೂ ನಿಮಗೆ ತಿಳಿದಿದ್ದೀತು. ಆದರೆ ‘ಮಾತಿಗೊಂದು ಅರ್ಥವೇಕೆ?’ ಎಂದು ಕುವೆಂಪು ಅವರು ‘ಅನಂತದಿಂ ದಿಗಂತದಿಂ’ ಹಾಡಿನಲ್ಲಿ ಹೇಳಿರುವಂತೆ ಗಾನಕ್ಕೆ ಒಂದೇ ಅರ್ಥವೆ? ಸಾಧ್ಯವಿಲ್ಲ. ಹಾಡುಗರು ತೆಗೆದುಕೊಳ್ಳುವ pause ಮೇಲೆ ಅರ್ಥವ್ಯತ್ಯಾಸ ಆಗುತ್ತಲೇ ಇರುತ್ತದೆ. ‘ಅನಂತದಿಂ’ ಎನ್ನುವ ಪದವೊಂದನ್ನು ಹಾಡುವಲ್ಲಿಯೇ ಎರಡು ಅರ್ಥಗಳನ್ನು ಹೊಮ್ಮಿಸುವ ಶಕ್ತಿಯು ಗಾಯಕರಿಗೆ ಇರುತ್ತದೆ. (ಕೇಳುಗರ ಕಿವಿಗೆ ಗಾಯ ಮಾಡುವಲ್ಲಿ ಕರಿ ಅರ್ಥಾತ್ ಆನೆಯಷ್ಟು ಬಲವನ್ನು ಹೊಂದಿರುವ ಹಾಡುಗಾರನನ್ನು ‘ಗಾಯಕರಿ’ ಎಂದೂ, ‘ಗಾಯಕರಿಗೆ’ ಎಂದರೆ ‘ಅಂತಹ ಗಾಯಗೊಳಿಸುವ ಆನೆಗೆ’ ಎಂದು ಅರ್ಥವೆಂದೂ ತರ್ಲೆಕುಂಟೆ ಟೀಕಾಚಾರ್ಯರು ಅಪ್ಪಣೆ ಕೊಡಿಸಿದ್ದಾರೆ.) ‘ಅನಂತದಿಂ’ ಎಂದು ಉಚ್ಚರಿಸಿದಾಗ ‘ಕೊನೆಯಿಲ್ಲದೆಡೆಯಿಂದ’ ಎಂದೂ, ‘ಅನಂತ ಧಿಂ’ ಎಂದಾಗ ‘ತಲೆಯು ಧಿಂಗುಟ್ಟುವ ಸದ್ದನ್ನು ಅವಿರತವಾಗಿ ಹೊರಡಿಸುವ ಡ್ರಂ ಕುಟ್ಟುವಿಕೆ’ ಎಂದೂ ಅರ್ಥಗಳು ಮೂಡುತ್ತವೆ ಎಂಬುದೂ ತ.ಟೀ.ಆಚಾರ್ಯರ ಗಾನವ್ಯಾಖ್ಯಾನವಾಗಿದೆ. ಮೇಲ್ಕಂಡ ‘ಸಾಮಜವರಗಮನ’ವನ್ನು

ಸಾ ಮಜ ವರ ಗಮನ 

ಎಂದು ಗಾಯಕರು ಹಾಡಿದರು. 

“ಸಾರ್, ವರನು ಬರುತ್ತಿರುವ (ಗಮನ)  ರೀತಿಯು ನೋಡಲು ಮಜವಾಗಿದೆ’ ಅಂತ ಅರ್ಥ ಕಣಯ್ಯ” ಎಂದರು ಆಚಾರ್ಯರು. ಉತ್ತರಭಾರತೀಯರ ಮದುವೆಗಳಲ್ಲಿ ವರನು ಕುದುರೆಯ ಮೇಲೆ ಬರುವ ರೀತಿಯು ನಿಜಕ್ಕೂ ಮಜವಾಗಿರುತ್ತದೆ. ಸವಾರಿಗೆ ಕುದುರಿಕೊಳ್ಳದ ವರನ ಮುಖದಲ್ಲಿ ‘ಭೀತಿಬಿಳುಪು’ ಮೂಡಿದ್ದು, ಕುದುರೆಯಿಂದಿಳಿಸಿದಾಗ ಆಗುವ ನಿರಾಳತೆಯನ್ನು ಗಮನಿಸುವುದರಲ್ಲಿ, ವರನನ್ನು ಆ ಬಗ್ಗೆ ಲೇವಡಿ ಮಾಡುವಲ್ಲಿ ಮಜ ತೆಗೆದುಕೊಳ್ಳುವ ಮಂದಿಗೇನೂ ಕಡಿಮೆಯಿಲ್ಲ. ಅಲ್ಲದೆ, ‘ಘೋಢಾ ಥಾ, ಮೈದಾನ್ ಭೀ ಥಾ; ದೌಡ್‍ನಾ ಥಾ ನಾ? ಮದುವೆ ಆಗದೆ ಓಡ್ಹೋಗಕ್ಕೆ ನಿನಗಿದ್ದ ಲಾಸ್ಟ್ ಚಾನ್ಸ್ ಅದು’ ಎನ್ನುವವರೂ ಇದ್ದಾರೆ. ನಮ್ಮಲ್ಲಿ ಓಡ್ಹೋಗಿ ಮದುವೆ ಆಗುವವರು ಇದ್ದಾರೆಯೇ ವಿನಾ ಮದುವೆಯ ಸಮಯದಲ್ಲಿ ಓಡ್ಹೋಗುವವರು ವಿರಳ. 

ಸಾಮ ಎಂದರೆ ಶಾಂತಗೊಳಿಸುವಿಕೆ ಎಂದು ಅರ್ಥವಂತೆ. ಜವರ ಗಮನ ಎಂದರೆ ಯಮನ ಬರುವಿಕೆ ಎಂದರ್ಥ. ಯಮನು ಬಂದನೆಂದರೆ ಫೇಸ್ ಬುಕ್ ಭರ್ತಿ ‘ಶಾಂತಿ ದೊರಕಲಿ’ ಎಂದಿರುವುದು ‘ಶಾಂತಗೊಳಿಸುವಿಕೆ’ಯ ಅರ್ಥವನ್ನೇ ಸೂಚಿಸುವುದೆಂದೂ,  ಕೆಲವು ಹಾಡುಗಾರರು ‘ಸಾಮ ಜವರ ಗಮನ’ ಎಂದಾಗ ಯುಮನು ಬಂದುಹೋದಮೇಲೆ ‘ಸದ್ಗತಿ ದೊರಕಲಿ, ಶಾಂತಿ ಸಿಗಲಿ’ ಎಂದು ಕೋರುವುದನ್ನೇ ಈ ಸಾಲು ಸೂಚಿಸುವುದೆಂದೂ ಸಹ ತ.ಟೀ. ಆಚಾರ್ಯರು ವ್ಯಾಖ್ಯಾನಿಸಿದ್ದಾರೆ. 

‘ಸಾಮಜ ವರಗ ಮನ’ ಎಂದರೆ ಆನೆಗೆ ಅಥವಾ ಆನೆಯಂತಹವರಿಗೆ ಒರಗಿ ಕೂರುವ/ಮಲಗುವ ಮನವನ್ನು ಹೊಂದಿರುವವನು ಎಂದು ಅರ್ಥವಂತೆ. (‘ವರಗ’ ಪದವು ‘ಒರಗ’ ಆದುದೇಕೆಂದರೆ ‘ಸಂಗೀತದಲ್ಲಿ ಧನಲಕ್ಷ್ಮಿಯು ದನಲಕ್ಷ್ಮಿ ಆಗಿ ದನ ಕಾಯಲು ಹೋಗುವ ಸ್ವಾತಂತ್ರ್ಯವಿದೆ. ವ, ಒ ಗಳ ವ್ಯತ್ಯಾಸ ಇಲ್ಲಿ ಸಮ್ಮತ’ ಎಂದು ಆಕ್ಷೇಪವನ್ನು ಹೊಸಕಿಹಾಕಿದರು.) 

ದೊಡ್ಡದೇಹಿಯ ಪ್ಲಂಪುಪ್ಲಂಪಿನ 

ಲೋಡು ಪಿಲ್ಲೋದಷ್ಟು ಮೆದುವಿನ

Bodyಗಾತು ಕುಳಿತುಕೊಂಡರೆ 

ಲೌಡು ಸ್ನೋರಿನ ಸ್ಲೀಪು ದಿಟಕುಂ ಅವರಿಸುವುದು

ಎನ್ನುವುದು ಆಚಾರ್ಯರ ಅನುಭವವಾಣಿಯಂತೆ. ಇದ್ದೀತು. ಅವರ ತಾಯಿ ಮತ್ತು ಸತಿಯನ್ನು ಕಂಡಿದ್ದೇನೆ. ಇಬ್ಬರೂ ಹಸ್ತಿನಾವತಿಯ ಪ್ರಾಡಕ್ಟುಗಳೇ ಸೈ. 

ರಂ ಗ ಪೂ ರಾ ವೀ ಹಾ ರಾ 

ಎಂಬ ಹಾಡೂ ಪರಿಚಿತವೇ. ‘ರಂಗ ಪುರ ವಿಹಾರ’ ಎನ್ನುವುದು ‘ನಾಟಕದ ವೇದಿಕೆಯ ಉದ್ದಗಲಕ್ಕೂ ವಿಹಾರ ಮಾಡಿದನು’ ಎನ್ನುವ ಮಟ್ಟಕ್ಕೆ ಎಳೆಎಳೆಯಾಗಿ ಎಳೆಯಲ್ಪಡುವುದು ಸಂಗೀತದ ಕಚೇರಿಗಳಲ್ಲಿ ಕಂಡುಬರುವುದು ಸರ್ವೇಸಾಮಾನ್ಯ. ರಂಗಸ್ಥಳದ ಉದ್ದಗಲಕ್ಕೂ ಹೂವಿನ ಮಾಲೆಯನ್ನು ಹರಡಿದ್ದಾರೆ ಎನ್ನುವುದನ್ನೂ ‘ರಂಗಪೂರಾವೀ ಹಾರ’ ಎನ್ನುವುದು ಸೂಚಿಸುವುದಂತೆ. ‘ಜಯ ಕೋದಂಡ’ ದಲ್ಲಿನ ದಂಡವನ್ನು ಬೇರೆಯಾಗಿಸಿ ‘ಕೋ ದಂಡ’ ಎಂದು ಹಿಗ್ಗಿಸುವಾಗ ನನಗಂತೂ ಟ್ರಾಫಿಕ್ ಪೊಲೀಸರ ಮುಂದೆ ನಿಂತ ಓವರ್ ಲೋಡ್ ಲಾರಿಯವನು ‘ತೊಗೊಳಿ ಸಾರ್ ಫೈನು’ ಎನ್ನುತ್ತಿರುವ ದೀನಭಾವವೇ ಕಣ್ಣಮುಂದೆ ಬರುತ್ತದೆ. 

ಹಾಡಿನ ಓಘದಲ್ಲಿ ವಿಘ್ನೇಶ್ವರನ ಹಾಡಿನ ಅರ್ಥಕ್ಕೂ ವಿಘ್ನ ಉಂಟಾಗುವ ಸಂಭವಗಳಿವೆ. ‘ಬೂತಾದಿ ಸಂ ಸೇವಿತ ಚರಣಂ’ ಎನ್ನುವುದರ ಮೂಲ ರೂಪವು “ಭೂತಾದಿ ಸಂಸೇವಿತ ಚರಣಂ.’ ‘ಬೂತಾದಿ...’ಯ ಅರ್ಥವಂತೂ ‘ಪೋಲ್ ಬೂತ್‍ಗಳ ಆದಿಯಾಗಿ ಎಲ್ಲೆಡೆ ಸಿಕ್ಕ ಸಂ(sum) ಅರ್ಥಾತ್ ಹಣದಿಂದ ಸೇವಿತವಾದ ಪಾದಗಳು’ ಎಂದು ಅರ್ಥವು ಮೂಡಿ ‘ಪುಢಾರಿಯು ಕಾಲಿಟ್ಟಲೆಲ್ಲ sum ಸೇವನೆಗೆ ಇಂಬು ಇರುತ್ತದೆ’ ಎಂಬ ತಾತ್ಪರ್ಯವೂ ಮೂಡುವುದು. ಅದೇ ಹಾಡಿನಲ್ಲಿ ‘ವೀತ ರಾಗಿಣಂ’ ಎಂಬ ಪದವಿಭಜನೆಯು ‘ರಾಗಿಯನ್ನು ಬಿಟ್ಟವರು’ ಎಂದೂ ಆಗುವುದಂತೆ. ‘ಮುದ್ದೆ ಓಲ್ಡ್ ಫ್ಯಾಷನ್ಡ್; ಈಗೇನಿದ್ದರೂ ಪೀಟ್ಝಾಗೆ ಜೈ’ ಎನ್ನುವ ಒಳಾರ್ಥವು ಅದರಲ್ಲಿದ್ದೀತೆ? 

ರಾಗಕ್ಕೆ ತಕ್ಕಂತೆ ಬಿಡುವು ಕೊಟ್ಟು ಹಾಡುವುದರಿಂದ ಇಂತಹ ಪ್ರಸಂಗಗಳು ಎದುರಾದರೆ, ಉಚ್ಚಾರದೋಷದಿಂದ ಆಗುವ ಆಮೋದಪ್ರಮಾದಗಳೂ ಉಂಟು. ದೇವತೆಗಳಿಂದಲೂ ಅಗ್ರಪೂಜೆಯನ್ನು ಪಡೆಯುವ ಗಣೇಶನು ಇದ್ದಕ್ಕಿದ್ದಂತೆ ಹಾಡುಗಾರನ ಮಗನಾಗಿಬಿಡುವ ಸಂದರ್ಭವುಂಟು. ಕಾರ್ಯಕ್ರಮವೊಂದರಲ್ಲಿ ‘ಮಹಾಗಣಪತಿಂ ಮನಸಾ ಸ್ಮರಾಮಿ’ ಎಂದು ಹಾಡಲೆಂದು ತಿರುತ್ತಣಿಯ ಸ್ನೇಹಿತನೊಬ್ಬನು ಎದ್ದುನಿಂತು ‘ಮಗಾ ಕಣಪತಿ...’ ಎಂದೇ ಆರಂಭಿಸಿದ. 

“ಕಣಪತಿ’ ಏಕಯ್ಯ?”

“ಮಣ್ಣಿನ ಕಣಕಣಗಳಿಂದ ಮಾಡಿದವನಲ್ಲವೆ? ಆದ್ದರಿಂದ ಕಣಪತಿ’ ಎಂದ. ತಪ್ಪಿನಲ್ಲಿಯೂ ಸರಿಯಾದ ಅರ್ಥ! ಈ ಪ್ರಭೃತಿಯೇನಾದರೂ ‘ಕಣಕಣದೆ ಶಾರದೆ’ ಹಾಡನ್ನು ಹಾಡಿದ್ದಿದ್ದರೆ ಅನ್ನಕ್ಕೆ ಸಾರನ್ನು ಕಲಿಸಿಕೊಂಡು, ಅಗುಳು ಅಗುಳಿಗೂ ಸಾರು ಮಿಳಿತವಾಗಿರುವುದನ್ನು ಕಂಡು ‘ಕಣಕಣದೆ ಸಾರದೆ(ಸಾರು ಇದೆ)’ ಎನ್ನುವ ಅರ್ಥವನ್ನು ಮೂಡಿಸಿಬಿಡುವನು ಎನ್ನಿಸಿತು. ಬಹಳ ಹಿಂದೆಯೇ ತಮಿಳುನಾಡಿನ ಶ್ರೇಷ್ಠ ಗಾಯಕರೊಬ್ಬರು ಮಹಾರಾಜರ ಮನವಿಯನ್ನು ಪುರಸ್ಕರಿಸಲೆಂದು ‘ಚಿಂತೆಯಾತಕೋ ಮನುಜ ಭ್ರಾಂತಿಯಾತಕೋ’ ಎಂಬ ಹಾಡನ್ನು ‘ಚಿಂದಿಯಾ ತಕೋ, ಮನುಜ, ಭ್ರಾಂದಿಯಾ ತಕೋ” ಎಂದು ಹಾಡಿದ್ದರಂತೆ. ಅಂದು ಹಾಗೆ ಹಾಡಿದುದನ್ನು ಇಂದಿನ ಯುವಪೀಳಿಗೆಯು ಚಿಂದಿ ಧರಿಸಿ, ಡ್ರಿಂಕೇರಿಸುವ ಮೂಲಕ ನೆರವೇರಿಸುತ್ತಿದೆ. ಹಾಗೆ ನೆರವೇರಿಸುವ ಭರಕ್ಕೆ ಡಿವಿಜಿಯವರ ‘ಹುಲ್ಲಾಗು ಬೆಟ್ಟದಡಿ’ಯೂ ಸಿಲುಕಿದೆ. ‘ಹುಲ್ಲಾಗು’ವನ್ನು ‘Full ಆಗು’ ಎಂದು ಅರ್ಥೈಸಿಕೊಂಡು ಬೆಟ್ಟದಡಿಯ ರೆಸಾರ್ಟುಗಳಲ್ಲಿ ಫುಲ್ ಆಗುವುದರ ಮೂಲಕ ಆ ಕಗ್ಗದ ವಿಕೃತಗೊಳಿಸಿದ ಅರ್ಥವನ್ನು ಫುಲ್‍ಫಿಲ್ ಮಾಡುತ್ತಿದ್ದಾರೆ. 

ಕಗ್ಗದ ವಿಷಯ ಬಂದಾಗ ‘ಸಿರಿಮಾತ್ರಕೇನಲ್ಲ, ಪೆಣ್ಮಾತ್ರಕೇನಲ್ಲ’ ಎಂಬ ಕಗ್ಗವನ್ನೂ ಹಾಡುಗರು ಅನ್ಯಾರ್ಥ ಮೂಡುವಂತೆ ಹಾಡಬಲ್ಲರು. ಕೇವಲ ಸಿರಿಗಲ್ಲ, ಹೆಣ್ಣಿಗಲ್ಲ ಎಂಬ ಅರ್ಥವನ್ನು ‘ಸಿರಿಮಾತ್ರಕೇ ನಲ್ಲ; ಪೆಣ್ ಮಾತ್ರಕೇ ನಲ್ಲ’ ಎಂದು ಹಾಡುವುದರ ಮೂಲಕ ‘love with aim to get moeny’, ‘love with the aim to get woman’ ಎಂಬ ಅರ್ಥವನ್ನು ಹುಟ್ಟಿಸಿಬಿಡುತ್ತಾರೆ. ಎರಡನೆಯದು ‘ಗೌರಿಗೆ ಪ್ರಾಮುಖ್ಯತೆ’, ಮೊದಲನೆಯದು ‘ಡೌರಿಗೆ ಪ್ರಾಮುಖ್ಯತೆ’. 

ಹಿಂದಿ ಹಾಡುಗಳಲ್ಲಿಯೂ ಈ ಅರ್ಥವ್ಯತ್ಯಾಸಗೀತೆಗಳು ಇವೆ. ‘ಮೈ ನಾ ಭೂಲೂಂಗಾ’ ಎಂದು ಶುರುವಾದಾಗ ‘ನಾನು ಮರೆಯುವುದಿಲ್ಲ’ ಎಂಬ ಅರ್ಥವನ್ನು ಬಿಂಬಿಸುವ ಹಾಡೇ ‘ಮೈನಾ ಭೂಲೂಂಗೀ’ ಎಂದು ಹೊಮ್ಮಿದಾಗ ‘ಮೈನಾ ಎಂಬ ಪಕ್ಷಿಯನ್ನು ಮರೆಯುತ್ತೇನೆ ’ ಎಂದಾಗುವುದಲ್ಲವೆ! 

‘ಹಾಡು ಹಳೆಯದಾದರೇನು’ ಎನ್ನುವುದನ್ನು ಸರಿಯಾಗಿ ಕೇಳಿರುವಿರೆ? ‘ಹಾಡು ಹಳೆಯ ದಾದರೇನು?’ ಎಂದೇ ಕೇಳಿಸುವುದಲ್ಲವೆ? ದಾದರ್ ಎನ್ನುವುದು ಮುಂಬೈನ ಒಂದು ಪ್ರದೇಶ. ಹಾಡು ಹಳೆಯ ದಾದರ್ರೂ ಅಲ್ಲ, ಹಳೆಯ ಬಾಂದ್ರಾವೂ ಅಲ್ಲ, ಹಳೆಯ ದೋಂಬಿವಿಲೆಯೂ ಅಲ್ಲ. ಆದರೂ ಆ ಹಾಡನ್ನು ಹಾಡುವಾಗ ದಾದರ್ ಪ್ರವೇಶ ತಪ್ಪುವುದಿಲ್ಲ! 

‘ಮಹಿಷಾ ಸುರ ಮರ್ದಿನಿ’ಯೂ ನಿಮಗೆ ತಿಳಿದಿರುವುದೇ. ಮಹಿಷಾ ಎಂದರೆ ಎಮ್ಮೆ; ಸುರ ಎಂದರೆ ದೇವರು. ಚಾಮುಂಡಿಯು ಕೊಂದದ್ದು ಮಹಿಷಾಸುರನನ್ನು ಅರ್ಥಾತ್ ಕೋಣನಂತಹ ರಾಕ್ಷಸನನ್ನು. ಹಾಡಿನಲ್ಲಿ ಯತಿಯ ಸ್ಥಾನವು ವ್ಯತ್ಯಾಸವಾಗಿ ಚಾಮುಂಡಿಯು ಎಮ್ಮೆ ಮತ್ತು ದೇವತೆಗಳನ್ನು ಕೊಂದಳೆಂದಾಗುವುದಲ್ಲಾ! 

‘ಭಾಷೆ ತಲೆ ಬೋಳಿಸ್ತು! ಭಾವ ನೋಡ್ರೀ!’ ಎಂದಿದ್ದರು ಕೈಲಾಸಂ. ವಿಶ್ವ ಸಂಗೀತ ದಿನದಂದು ಕೈಲಾಸಂರ ನುಡಿಗಳಿಗೆ ಮಣಿದು ಗಾನಕ್ಕೆ ಕಿವಿಗಳನ್ನು ಅರ್ಪಿಸುವುದೇ ಸೂಕ್ತವಲ್ಲವೆ! 



Comments

Post a Comment