ಸಂವಹನ

 ಸಂವಹನ

- ಸಿಡ್ನಿ ಸುಧೀರ್



' ಟಕ್ ಟಕ್ ಟಕ್ ಟಕ್ ' ಎಂದು ರೈಲಿನ ಸ್ವಂಯಂ ಚಾಲಿತ ಬಾಗಿಲು ಮುಚ್ಚತೊಡಗಿತು. ನಯನ ರೈಲಿನಲ್ಲಿ ಜಾಗ ಮಾಡಿಕೊಂಡು ಕಂಬಿಯ ಹತ್ತಿರ ಒರೆಗಿ ನಿಂತಳು.

ನಯನ, ಶಂಕರ್ ಮತ್ತು ಶಾಲಿನಿಯವರ ಏಕೈಕ ಪುತ್ರಿ. ಮೂರು ವರ್ಷದ ಹಿಂದೆ ಬೆಂಗಳೂರಿನಿಂದ ಸಿಡ್ನಿಗೆ ಬಂದು ನೆಲೆಸಿದ್ದರು. ಸ್ವಲ್ಪ ದಿನ ದೇಶದಿಂದ ಹೊರಗಿದ್ದು, ಮಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂಬ ಭಾವನೆ. ಇಬ್ಬರು ಸಿಡ್ನಿಯಲ್ಲಿ ದುಡಿದು ತಕ್ಕಮಟ್ಟಿಗೆ ಸಂಪಾದಿಸಿ ಜೀವನ ನಡೆಸುತ್ತಿದ್ದವರು.

ನಯನ ಸಿಡ್ನಿಯಲ್ಲಿ ಮೂರು ವರ್ಷ ಪ್ರೌಢ ಶಾಲೆ ಮುಗಿಸಿ, 'UNSW-ಯು ಎನ್ ಎಸ್ ಡಬ್ಲ್ಯೂ' ನಲ್ಲಿ ಇಂಜಿನಿಯರಿಂಗ್ ಪದವಿ ಶುರುಮಾಡಿ ಮೂರು ತಿಂಗಳಾಗಿತ್ತು. ವಾರದಲ್ಲಿ ಮೂರು ದಿನ ಬೆಳಗ್ಗೆ ಮನೆಯಿಂದ ಹೊರಟು ಸಿಡ್ನಿ ಸೆಂಟ್ರಲ್ ಗೆ ಬಂದು, ಸಿಡ್ನಿ ಲೈಟ್ ರೈಲನ್ನ ಹಿಡಿದು ರಾಂಡ್ವಿಕ್ ಅಥವಾ ಕಿಂಗ್ಸ್‌ಫೋರ್ಡ್ ನಲ್ಲಿ ಇಳಿದು, ವಿಶ್ವವಿದ್ಯಾನಿಲಯಕ್ಕೆ ಹೋಗುತ್ತಿದ್ದಳು. ವಾರದ ಇನ್ನೆರಡು ದಿನ ಮನೆಯಿಂದಲೆ ಓದು.  

ರೈಲು ಮೆಲ್ಲನೆ ಮುಂದೆ ಸಾಗಿತ್ತು. ರೈಲಿನ ಚಾಲನೆಗೆ ಒಮ್ಮೆ ಕಂಬಿಗೆ ಒರೆಗಿ ನಿಂತಳು, ಮತ್ತೊಮ್ಮೆ ಕಂಬಿಯನ್ನು ಬಲಗೈಯಿಂದ ಹಿಡಿದು ನಿಂತ ತನ್ನ ಸ್ಥಾನವನ್ನ ಸರಿಪಡಿಸಿಕೊಂಡಳು. ತಾನು ನಿಂತಲ್ಲಿಯೆ ರೈಲಿನಲ್ಲಿದ್ದವರನ್ನು ಒಮ್ಮೆ ಅತ್ತಿಂದಿತ್ತ ನೋಡಿದಳು. ಶಾಲೆಯ ಮಕ್ಕಳು, ಕಛೇರಿಗೆ ತೆರಳುತ್ತಿದ್ದ ಯುವಕರು, ಆಸೀನರಾಗಿದ್ದ ಕೆಲ ಮುದುಕರು, ಬಹುತೇಕ ಎಲ್ಲರ ಕೈಯಲ್ಲೂ ಮೊಬೈಲ್. ಚೀನಿಯರು, ಆಸಿಯರು, ದೇಸೀಯರು - ಎಲ್ಲರನ್ನೂ ಗಮನಿಸುತ್ತಿರುವಾಗ, ಒಬ್ಬ ದೇಸಿ ಯುವಕನ ಮೇಲೆ ದೃಷ್ಟಿ ಹಾರಿತು. ಕೆದರಿದಂತ್ತಿದ್ದ ಗುಂಗುರು ಕೂದಲು, ನೀಳವಾದ ಗಲ್ಲ, ಈಗ ಬರುತ್ತಿದ್ದ ಒಂದೆರಡು ಕೂದಲಿನ ಗಡ್ಡ-ಮೀಸೆ, ಮೇಕಪ್ ಇಲ್ಲದ ಸಹಜ ಬಣ್ಣ, ಸ್ವಲ್ಪ ಮಾಸಿದಂತ್ತಿದ್ದ ನೀಲಿ ಬಣ್ಣದ ಟಿ-ಶರ್ಟ್ ಮೇಲೆ ಒಂದು ಶರ್ಟ್ ಮತ್ತು ಜೀನ್ಸ್, ನೇತು ಹಾಕಿದ್ದ ಒಂದು ಚೀಲ - ಕ್ಷಣದಲ್ಲಿ ಎಲ್ಲವನ್ನು ಗಮನಿಸಿದಳು.

ನಯನ ಹದಿ ಹರೆಯದ ವಯಸ್ಸಿನ ಸರಳ ಹುಡುಗಿ. ಕೈ ತೊಳೆದು ಮುಟ್ಟುವಂತ ಸ್ವಚ್ಛತೆ. ಮೇಕಪ್ ಅವಶ್ಯಕತೆ ಇಲ್ಲ. ಹೊಳೆವ ಮುಖಕ್ಕೆ ತುಂಬಿದ ಕೆನ್ನೆಗಳು, ಕೆಂಪು ಅಧರಗಳು, ಹೆಸರಿಗೆ ತಕ್ಕಂತ ಸುಂದರ ನಯನಗಳು, ಗಾಳಿಗೆ ಒಂದೆರಡು ಕೂದಲು ಹಣೆಯ ಮೇಲೆ ಹಾರಾಡುತ್ತಿದ್ದವು, ಚಿಕ್ಕದಾಗಿ ಕಿವಿಗೆ ಚುಚ್ಚಿದ್ದ ಓಲೆ, ಆಕಾರ-ಪ್ರಾಕಾರ ನೋಡಿದರೆ ಮನಸ್ಸಿಗೆ ಮುದ ನೀಡುವಂತ ವ್ಯಕ್ತಿತ್ವ. ಬಿಳಿಯ ಟಿ-ಶರ್ಟ್ ಮತ್ತು ಬಿಳಿಯ ಪ್ಯಾಂಟ್. ಒಂದು ಚಿಕ್ಕದಾದ ಕೈ ಚೀಲ್ ಎಡ ಭುಜಕ್ಕೆ ನೇತು ಹಾಕಿಕೊಂಡಿದ್ದಳು. ಆಗ್ಗಾಗೆ ಬಲಗೈನಿಂದ ಮುಂಗುರುಳನ್ನು ಹಿಂದಕ್ಕೆ ಸರಿಸುತ್ತಿದ್ದಳು.

'Next Stop Surry Hills (ಮುಂದಿನ ನಿಲ್ದಾಣ ಸರಿ ಹಿಲ್ಸ್)' ಎಂದು ರೈಲಿನ ಪ್ರಕಟಣೆ ಕೇಳಿದಾಗ ನಯನಳು ಕಣ್ಣು ಮಿಟುಕಿಸಿ, ಕೈ ಗಡಿಯಾರದಿಂದ ಸಮಯ ನೋಡಿದಳು. ಆದರು ಕಣ್ಣುಗಳು ಮತ್ತೆ ಆ ಯುವಕನತ್ತ ದೃಷ್ಟಿ ಹರಿಸಿತ್ತು. ಅವನು ಇವಳತ್ತ ನೋಡಿದನ್ನು ಕಂಡು, ನೋಟವನ್ನು ಬೇರತ್ತ ಹರಿಸಿದಳು. ಮತ್ತೆ ಅವನತ್ತ ನೋಡಿದಳು, ಈಗ ಅವನು ಬೇರೆ ಕಡೆ ತಿರುಗಿದ. ಹೀಗೆ ಇಬ್ಬರ ಕಣ್ಣೋಟವು ಬೆರೆತವು. 

ಪ್ರೀತಿಯ ಮೊದಲ ಹೆಜ್ಜೆ - ಆಕರ್ಷಣೆ. ಎಲ್ಲರಿಗೂ ಎಲ್ಲರಲ್ಲೂ ಪ್ರೀತಿ ಹುಟ್ಟುವುದಿಲ್ಲ. ಪಂಚೇಂದ್ರಿಯಗಳು ಒಪ್ಪಬೇಕು. ನಂತರ ಹೃದಯ ಮತ್ತು ಮೆದುಳು ಸಂವಹನಗೊಂಡು ಪ್ರೀತಿ ಹುಟ್ಟುತ್ತದೆ. ಮೊದಲು ನೋಟವನ್ನು ಮನಸ್ಸು ಒಪ್ಪಬೇಕು. ನೋಡಲು ಚೆನ್ನಾಗಿರದಿದ್ದರೆ, ಮನಸ್ಸು ಒಪ್ಪುವುದಿಲ್ಲ, ಪ್ರೀತಿಯು ಇಲ್ಲ. 

ನಂತರ ಶ್ರವಣ. ನುಡಿದರೆ ಮುತ್ತಿನಹಾರದಂತಿರಬೇಕು. ಕೇಳವ ಮಾತು ಹಿತವಾಗಿರಬೇಕು. ಸಿಡ್ನಿಯಲ್ಲಿ ರೈಲಿನಲ್ಲಿ ಓಡಾಡುವರಿಗೆ ಇದರ ಅನುಭವ ಬಹಳ. ನೋಡಲು ಸುಂದರವಾಗಿರುತ್ತಾರೆ. ಅಕಸ್ಮಾತಾಗಿ ಮೊಬೈಲ್ ನಲ್ಲಿ ಮಾತಾಡುವುದನ್ನ ಕೇಳಿದರೆ, ಜಗಳವಾಡಿದಂತಿರುತ್ತದೆ. ಉತ್ತರ ಭಾರತದ ಜನರಲ್ಲಿ ಇದನ್ನ ಬಹಳ ನೋಡಬಹುದು. ಒಳ್ಳೆಯ ಮೇಕಪ್ ಮಾಡಿ ಓಡಾಟ, ಆದರೆ ಮಾತು ಕೇಳಲಸಾಧ್ಯ.

ಮುಂದಿನದು ನಾಸಿಕ. ನೋಟ, ಶ್ರವಣ ಸರಿಯಿದ್ದು, ದುರ್ಗಂಧವಿದ್ದರೆ ಮುಖ ತಾನಗಿಯೆ ಬೇರತ್ತ ತಿರುಗುತ್ತದೆ. ಮನಸ್ಸು ಒಪ್ಪುವುದಿಲ್ಲ, ಪ್ರೀತಿಯು ಇಲ್ಲ.

ನಲ್ಕನೆಯದು ಮಾತು. ಮೇಲೆ ಮೂರು ಸರಿ ಇದ್ದು, ನಾವಾಡುವ ಮಾತು ಕೇಳದಿದ್ದರೆ, ಎಲ್ಲೋ ಗಮನವಿದ್ದರೆ, ಎಂಥ ದುರಹಂಕಾರ ಎಂದು ಮನಸ್ಸು ತೀರ್ಮಾನಿಸಿ ಅವರನ್ನ ತಿರಸ್ಕರಿಸುತ್ತದೆ.

ಕಡೆಯದಾಗಿ ಸ್ಪರ್ಶ. ಮೇಲಿರುವ ಎಲ್ಲವನ್ನೂ ಮನಸ್ಸು ಒಪ್ಪಿದ ಮೇಲೆ, ಸ್ಪರ್ಶಕ್ಕೆ ಒಪ್ಪಿಗೆ. ಸ್ಪರ್ಶದಿಂದ ಕಂಪನ. ಕಂಪನದಿಂದ ಉಂಟಾಗುವ ತರಂಗಗಳು ಹೃದಯ ಮತ್ತು ಮೆದುಳನ್ನು ಒಗ್ಗೂಡಿಸಿ ನಿರ್ಮಲ ಪ್ರೀತಿಗೆ ಕಾರಣವಾಗುತ್ತದೆ.

ವೇದ-ಉಪನಿಷತ್ ಗಳಲ್ಲಿ ಹೇಳಿರುವಂತೆ, ತಪ್ಪಿನ್ನಿಂದ ಕಲಿತು ಮುನ್ನಡೆಯುವುದು ಮನುಷ್ಯನ ಗುಣವಾಗಿರಬೇಕು. ಆದರೆ ಈ ವಿಷಯದಲ್ಲಿ - ಆಕರ್ಷಣೆ/ಪ್ರೀತಿ ಯಲ್ಲಿ ಮೇಲಿಂದ ಮೇಲೆ ತಪ್ಪು ಮಾಡುವುದರಲ್ಲಿ ಸುಖ !!.. ಬಹುಶ: ಮನುಕುಲ ಉಳಿದಿರುವುದು ಇದರಿಂದಲೆ !!..

ನಯನಳಿಗೂ ಈ ಮುಂಚೆ ಬ್ರೇಕ್-ಅಪ್, ಮನಸ್ಸಿಗೆ ನೋವಾಗಿದ್ದರು, ವಯಸ್ಸು ಮತ್ತು ಮನಸ್ಸು ಬೇಕು ಎನ್ನುವಂತೆ ಮಾಡಿತ್ತು. ಹೀಗೆ ಸಾಗಿದ್ದ ರೈಲು, ವಿಶ್ವವಿದ್ಯಾಲದ ನಿಲ್ದಾಣದಲ್ಲಿ ನಿಂತಿತು. ನಯನ ಹಿಂದಿನ ಬಾಗಿಲಿನಿಂದ ಇಳಿದು ತಿರುಗಿದಳು. ಆ ಹುಡುಗನು ಮುಂದಿನ ಬಾಗಿಲಿನಿಂದ ಇಳಿದು, ಅಲ್ಲೇ ನಿಲ್ಲುವುದನ್ನು ಗಮನಿಸಿದಳು. ಅವನು ಇಳಿದು ತನ್ನ ಮೊಬೈಲ್ ತೆಗೆದು ಬೆರಳುಗಳು ಮೇಲೆ-ಕೆಳಗೆ ಮಾಡುತ್ತಿದುದನ್ನ ಕಣ್ಣಂಚಿನಿಂದ ನೋಡಿ ಮುಂದೆ ಹೆಜ್ಜೆ ಹಾಕಿದಳು. ಅವನು ನಿಂತ ಜಾಗವನ್ನು ಸಾಗಿ ಮುಂದೆ ಹೋಗುವಾಗ ಸುಗಂಧದ ಕಂಪು ಎರಡನೆಯ ಇಂದ್ರಿಯ ಸರಿ ಎಂದಿತು. ಕ್ಷಣದಲ್ಲೇ ಮನಸ್ಸು ನಡೆ ಮುಂದೆ ಎಂದು ವಾಸ್ತವಕ್ಕೆ ಕರೆಯಿತು.

ವಿಶ್ವವಿದ್ಯಾಲಯದಲ್ಲಿ ತನ್ನ ಗೆಳತಿ ಸುಮನ್ ಳನ್ನು ಭೀಟಿ ಮಾಡಿ ಯುನಿಯ ಉಪಹಾರ ಮಂದಿರದತ್ತ ಹೆಜ್ಜೆ ಇಟ್ಟರು. ಸುಮನ್ ದಾರಿಯಲ್ಲಿ ಕಲ್ಲಿನ ಬೆಂಚ್ ಮೇಲೆ ಕುಳಿತು

'My cousin is somewhere here. We will wait for him. (ನನ್ನ ಕಸಿನ್ ಇಲ್ಲೆಯೇ ಇದ್ದಾನಂತೆ. ಅವನಿಗೆ ಕಾಯೋಣ)' ಎಂದಳು.

ದೂರದಿಂದ ಬರುತಿದ್ದ ಆ ಹುಡುಗನನ್ನ ನೋಡಿ ನಯನಳ ಉದರದಲ್ಲಿ ಪತಂಗಗಳು ಹಾರಾಡಿದಂತಾಯಿತು. 'ಇವನೇ ಸುಮನ್ ಳ ಕಸಿನ್ ಇರಬಹುದ ?' ಎಂದು. ಹತ್ತಿರ ಬರುತ್ತಿದ್ದಂತೆ ಇನ್ನೂ ಕುತೂಹಲ ಹೆಚ್ಚಾಯಿತು. 

ಸುಮನ್, ನಯನಳಿಗೆ ಆಕಾಶ್ ನ ತೋರಿಸಿ 'He is my cousin Akash. He is starting here today in AI branch (ನನ್ನ ಕಸಿನ್ ಆಕಾಶ್ ಇವನು. ಇವತ್ತಿನಿಂದ ಈ ವಿಶ್ವವಿದ್ಯಾನಿಲಯದಲ್ಲಿ ಎಐ ಬ್ರಾಂಚ್ ಗೆ ಸೇರಿದ್ದಾನೆ)' ಎಂದಳು.

ಆಕಾಶ್ ಗೆ ನಯನಳನ್ನ ತೋರಿಸಿ 'This is my friend Nayana (ಆಕಾಶ್ ಇವಳು ನನ್ನ ಗೆಳತಿ ನಯನ)' ಎಂದಳು.

ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಮೂವರು ಉಪಹಾರ ಮಂದಿರದಕ್ಕೆ ನಡೆದರು. ನೋಟ, ಶ್ರವಣ, ನಾಸಿಕ, ಮಾತನ್ನು ನಯನಾಳ ಮನಸ್ಸು ಒಪ್ಪಿದವು….



Comments