ಆಹಾರವೇ ಔಷಧಿ - ನಿಂಬೆಹಣ್ಣು
ಆರೋಗ್ಯ ಲೇಖನ - ಶ್ರೀಮತಿ ರಾಜಿ ಜಯದೇವ್
Accredited Practicing Dietitian
ಹಲವಾರು ಮಾರಕ ರೋಗಗಳಿಗೆ ಉತ್ತಮ ಜೀವನಶೈಲಿಯೇ ಅತಿ ಪ್ರಭಾವಶಾಲಿಯಾದ ಔಷಧಿ ಎಂದು ನಮಗೆಲ್ಲ ತಿಳಿದಿದೆ. ಇದರಲ್ಲಿ ಅತಿ ಮುಖ್ಯವಾದದ್ದು ಆರೋಗ್ಯಕರವಾದ ಆಹಾರ ಸೇವನೆ. ಉತ್ತಮ ಆಹಾರ ಸೇವನೆಯಿಂದ ಹಲವಾರು ರೋಗಗಳನ್ನು ನಿಯಂತ್ರಣದಲ್ಲಿಡಬಹುದೆಂದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ನಿಂಬೆಹಣ್ಣನ್ನು ಔಷಧಿಯಾಗಿ ಬಳಸುವ ಬಗೆಯನ್ನು ತಿಳಿಯೋಣ.
ನಮಗೆ ತಿಳಿದಂತೆ ನಿಂಬೆಹಣ್ಣು ಹೆಚ್ಚು ವಿಟಮಿನ್ ಸಿ ಯನ್ನು
ಹೊಂದಿದೆ. ನೂರಾರು ವರ್ಷಗಳ ಹಿಂದೆ ನಾವಿಕರಿಗೆ ದುಃಸ್ವಪ್ನವಾಗಿದ್ದ ಸ್ಕರ್ವಿ ರೋಗ ನಿವಾರಣೆಗೆ ನಿಂಬೆಹಣ್ಣು,
ಕಿತ್ತಳೆಹಣ್ಣುಗಳನ್ನು ಬಳಸಿರುವುದು ಒಂದು ಚರಿತ್ರೆಯನ್ನೇ ಸೃಷ್ಟಿಸಿದೆ. ವಿಟಮಿನ್-ಸಿ, ಒಂದು ಅತ್ಯಂತ
ಪ್ರಬಲವಾದ ಉತ್ಕರ್ಷಣ ನಿರೋಧಕ (ಆ್ಯಂಟಿಆಕ್ಸಿಡೆಂಟ್). ಹಲವಾರು ಮಾರಕ ರೋಗಗಳನ್ನು ತಡೆಗಟ್ಟಲು ಉತ್ಕರ್ಷಣ ನಿರೋಧಕಗಳ (ಆ್ಯಂಟಿಆಕ್ಸಿಡೆಂಟ್ಸ್) ಸೇವನೆ ಅತ್ಯಗತ್ಯ.
ಎಲ್ಲ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ನೆಲ್ಲಿಕಾಯಿಯಲ್ಲಿ ಅತ್ಯಂತ ಹೆಚ್ಚು ವಿಟಮಿನ್-ಸಿ ಇದೆ. ಕಿತ್ತಳೆ,
ಮೂಸಂಬಿ, ಸೀಬೆಕಾಯಿ, ಸೊಪ್ಪು, ಟೊಮೇಟೊ ಮುಂತಾದ ಅನೇಕ ಹಣ್ಣು ಮತ್ತು ತರಕಾರಿಗಳಲ್ಲಿ ಕೂಡ ವಿಟಮಿನ್-ಸಿ
ಸಾಕಷ್ಟು ಪ್ರಮಾಣದಲ್ಲಿದೆ.
ವಿಟಮಿನ್-ಸಿ ಅಥವಾ ಆಸ್ಕಾರ್ಬಿಕ್ ಆಸಿಡ್ ನೀರಿನಲ್ಲಿ ಕರಗುತ್ತದೆ.
ಶಾಖ ಮತ್ತು ಬೆಳಕು ತಾಗಿದೊಡನೆ ನಾಶವಾಗುತ್ತದೆ. ಆದ್ದರಿಂದ ಬಿಸಿನೀರಿಗೆ ನಿಂಬೆರಸ ಹಾಕಬೇಡಿ. ಆಹಾರ
ತಯಾರಿಸಿದ ಮೇಲೆ ಅಥವಾ ಆಹಾರ ಉದಾ: ಉಪ್ಪಿಟ್ಟು, ಉಸುಳಿ ಸೇವಿಸುವಾಗ ಬೆರಸಿ. ನಮ್ಮ ದೇಹ ವಿಟಮಿನ್-ಸಿ ಯನ್ನು ತಯಾರಿಸಲಾಗದು ಮತ್ತು ಶೇಖರಿಸಿಡಲಾಗದು.
ಆದ್ದರಿಂದ ಪ್ರತಿದಿನ ಸೇವಿಸಬೇಕು. ಹದಿಹರೆಯದವರಿಗೆ ಮತ್ತು ವಯಸ್ಕರಿಗೆ ಒಂದು ದಿನಕ್ಕೆ 65 ರಿಂದ
90 ಮಿಲಿಗ್ರಾಂ ವಿಟಮಿನ್-ಸಿ ಬೇಕು. ನಮ್ಮ ದೇಹದ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಅದು ಮೂತ್ರದಲ್ಲಿ
ಹೊರಹಾಕಲ್ಪಡುತ್ತದೆ. ಆದ್ದರಿಂದ ವಿಟಮಿನ್-ಸಿ ಮಾತ್ರೆಗಳನ್ನು ಸೇವಿಸುವುದರಿಂದ ಏನೂ ಪ್ರಯೋಜನವಾಗಲಾರದು.
ಬಹು ಹೆಚ್ಚು, ಅಂದರೆ 2000 ಮಿಲಿಗ್ರಾಂ ವಿಟಮಿನ್ ಸಿ ಸೇವನೆ ಜಠರ ಮತ್ತು ಕರುಳಿನ ಅಸ್ವಸ್ಥತೆಗೆ ಕಾರಣವಾಗಬಹುದು.
ಪ್ರತಿದಿನ
ನಿಂಬೆರಸ ಕುಡಿಯುವದರಿಂದ ನಮಗೆ ದೊರೆಯುವ ಪ್ರಯೋಜನ ಹಲವಾರು.
● ವಿಟಮಿನ್ ಸಿ ಆಹಾರದಲ್ಲಿರುವ ಪೋಷಕಾಂಶಗಳ ಪ್ರಭಾವವನ್ನು ಹೆಚ್ಚಿಸುತ್ತದೆ.
● ನಿಂಬೆಹಣ್ಣಿನಲ್ಲಿ ನಮ್ಮ ದೇಹಕ್ಕೆ ಅತಿ ಮುಖ್ಯವಾದ ಕ್ಯಾಲ್ಸಿಯಂ,
ಪೊಟ್ಯಾಸಿಯಂ ಮತ್ತು ಫೋಲೇಟ್ ಕೂಡ ಇವೆ.
● ನಾವು ಸೇವಿಸುವ ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು
ವಿಟಮಿನ್ ಸಿ ಸಹಕರಿಸುತ್ತದೆ. ಇದು ಸಸ್ಯಾಹಾರಿಗಳಿಗೆ ಬಹು ಮುಖ್ಯ. ಏಕೆಂದರೆ ಮಾಂಸಾಹಾರಕ್ಕೆ ಹೋಲಿಸಿದರೆ
ಸಸ್ಯಾಹಾರದಲ್ಲಿರುವ ಕಬ್ಬಿಣದ ಅಂಶವನ್ನು ನಮ್ಮ ದೇಹ ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ.
● ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ (immune system) ಸಬಲವಾಗಿರುವಂತೆ
ನೋಡಿಕೊಳ್ಳುತ್ತದೆ.
● ಹಲ್ಲು ಮತ್ತು ಮೂಳೆಗಳನ್ನು ಸುಸ್ಥಿತಿಯಲ್ಲಿಡಲು, ಗಾಯಗಳನ್ನು
ಗುಣಪಡಿಸಲು ಸಹಕಾರಿಯಾಗುತ್ತದೆ.
● ನಮ್ಮ ಆಹಾರದ ಗ್ಲೈಸಿಮಿಕ್ ಇಂಡೆಕ್ಸ್ ಅನ್ನು ಕಡಿಮೆಗೊಳಿಸುತ್ತದೆ;
ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚು ಏರದಂತೆ ತಡೆಹಿಡಿಯುತ್ತದೆ ಎನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ
ಪುರಾವೆಗಳಿವೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಡಯಾಬಿಟಿಸ್ ರೋಗಿಗಳಿಗೆ
ಇದೊಂದು ಸುಲಭ ವಿಧಾನ.
ಒಂದು ಲೀಟರ್ ನೀರಿಗೆ 8 ಮೇಜಿನ ಚಮಚೆ ನಿಂಬೆ ರಸ ಸೇರಿಸಿ, ದಿನವಿಡೀ
ಕುಡಿಯಿರಿ. ಊಟ, ತಿಂಡಿಯೊಡನೆ ಸೇವಿಸಿದರೆ ಉತ್ತಮ. 8 ಮೇಜಿನ ಚಮಚೆ ನಿಂಬೆ ರಸ ನಮ್ಮ ದೇಹಕ್ಕೆ ಒಂದು
ದಿನಕ್ಕೆ ಬೇಕಾಗುವಷ್ಟು ವಿಟಮಿನ್ ಸಿ ಒದಗಿಸುತ್ತದೆ.
ಅನೇಕ ಪೋಷಕಾಂಶಗಳ ಆಗರ ನಿಂಬೆಹಣ್ಣು. ಉಪಯೋಗಿಸುವುದು ಸುಲಭ,
ಪ್ರಯೋಜನ ಅಧಿಕ.
ಆಹಾರವೇ ನಿಮಗೆ ಔಷಧಿಯಾಗಲಿ.
Comments
Post a Comment