ಆಲೂ ಬುಲಾ ರಹೀ ಹೈ, ‘ಟೇಸ್ಟಿ’ ಬತಾ ರಹೀ ಹೈ

 ಆಲೂ ಬುಲಾ ರಹೀ ಹೈ, ‘ಟೇಸ್ಟಿ’ ಬತಾ ರಹೀ ಹೈ

ಹಾಸ್ಯ ಲೇಖನ - ಅಣಕು ರಾಮನಾಥ್ 



‘ನಾಚ್ ಬಸಂತೀ’ ಎಂದ ಗಬ್ಬರ್.

‘ಬಸಂತೀ, ತುಮ್ ಇನ್ ಕುತ್ತೋಂಕೇ ಸಾಮನೆ ಮತ್ ನಾಚೋ’ ಎಂದ ವೀರು.

ಅದು ಬಂಡೆ, ಗಾಜುಗಳ ನೆಲವಿದ್ದ ರಾಮ್‍ಘಡ್.

ಇದು ‘ರಾಮ ರಾಮ’ ಎಂದು ತಲೆತಲೆ ಚಚ್ಚಿಕೊಳ್ಳಲು ಪ್ರೇರೇಪಿಸುವ ಹೊಟೇಲಿನ ಒಳಾಂಗಣ. ಹನುಮದ್ಸಹಿತ ರಾಮಲಕ್ಷ್ಮಣಸೀತಾಮಾತೆಯರು ಈ ಹೊಟೇಲಿನಲ್ಲಿ ಗಟ್ಟಿ ಚಟ್ನಿ, ಪಲ್ಯ ದೋಸೆ ತಿಂದು ಕೈತೊಳೆದುಕೊಂಡಾಗ ಗೋಡೆಯ ಬಳಿ ಆದ ಕರೆ ಇದು ಎಂದು ಈಗಲೂ  ಬಣ್ಣಗೇಡಿ ಗೋಡೆಯತ್ತ ಕೈಮಾಡಿ ತೋರಿಸುವುದುಂಟು.

ಈ ಪುರಾತನ ಹೊಟೇಲಿನ ಚಪ್ಪಡಿನೆಲದ ಮೇಲೆ ಕೆಲವೇ ಘಂಟೆಗಳಲ್ಲಿ ಜನರು ಚಪ್ಪರಿಸುವ ಪಲ್ಯವನ್ನು ಮಾಡುವ ತಯಾರಿಗೆಂದು ನರ್ತನ ನಡೆದಿತ್ತು.

ಅಂತಹ ಸಮಯದಲ್ಲಿ ಗಬ್ಬರ್‍ ಸಿಂಗನ ಪೂರ್ವಜನಂತಿದ್ದ ಹೊಟೇಲ್ ಮಾಲಿಕನು ಯುದ್ಧಕಾಲದಲ್ಲಿ ಬ್ಲ್ಯಾಕೌಟ್ ಆದಾಗ ಇರುವಷ್ಟು ಕತ್ತಲನ್ನು ಬೆಳಗಿನಲ್ಲೇ ಹೊಂದಿದಂತಹ  ಅಡುಗೆಸಾಲಿಗೆ ಒಕ್ಕರಿಸಿ, ಏರುದನಿಯಲ್ಲಿ,

‘ನಾಚ್ ಬಸಣ್ಣ’ ಎಂದ.

‘ಬಸಣ್ಣ, ಇನ್ ಕಂದೋಂಪರ್ ಮತ್ ನಾಚೋ’ ಎಂದು ಹೇಳುವವರು ಇಲ್ಲಿ ಯಾರೂ ಇರಲಿಲ್ಲ. ‘ಕಂದ’ ಎಂದರೆ ಭಕ್ತ ಕುಂಬಾರನ ‘ಶಿಶುಮರ್ದನ್ ಪಾಟರೀಸ್ ಲಿಮಿಟೆಡ್’ ನೆನಪಾಯಿತೇನು? ಇದು ಅದಲ್ಲ. ಹಿಂದಿಯಲ್ಲಿ ಕಂದ ಎಂದರೆ ಗೆಡ್ಡೆ. ಇಲ್ಲಿ ಬಸಣ್ಣನು ನಾಚಬೇಕಾಗಿದ್ದದ್ದು ಆಲೂಗಡ್ಡೆಗಳಿಂದ ತುಂಬಿದ ಗೋಣಿಚೀಲಗಳ ಮೇಲೆ. ಹೀಗೆ ತುಳಿತಕ್ಕೊಳಗಾಗಿ smash ಆದ (ಮೊದಲು ಇದನ್ನು mash ಎನ್ನುತ್ತಿದ್ದರು. ಈಗಿನ ಸವಿರುಚಿ ಬ್ರಿಗೇಡಿನವರು ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುವ ಮೊದಮೊದಲಲ್ಲಿ ಪಡೆಯುವಷ್ಟೇ ಖುಷಿಯಿಂದ ಇಂಗ್ಲಿಷ್ ಭಾಷೆಯ ಮೇಲೆ ದಾಳಿ ಮಾಡಿ mash ಅನ್ನು smash ಮಾಡಿದ್ದಾರೆ)  ಆಲೂಗಡ್ಡೆಯನ್ನು ಕೆಲವೇ ಘಂಟೆಗಳಲ್ಲಿ ಕಾಣುವ ‘inbuilt ಕಂಬನಿ’ ಈರುಳ್ಳಿಯು ಪೊಟ್ಯಾಟೋವಿನ ಮೇಲೆ ಕರುಣೆದೋರಿ ಇದರ ಕೈಹಿಡಿದು. ಹೊಟೇಲಿನ ಗಿರಾಕಿಗಳ ಬಾಯಿಗೆ ತುತ್ತಾಗುವ ಮೂಲಕ ತಮ್ಮೀರ್ವರ ಯುಗಳಗೀತೆಯನ್ನೂ ಕೊನೆಗೊಳಿಸಿಕೊಳ್ಳುತ್ತದೆ.  ಎಲ್ಲಕ್ಕೂ ಹೊಂದಿಕೊಂಡು ಹೋಗುವ, ಸ್ವಯಂ ಸಪ್ಪೆಯ ಗುಣದ ಆಲೂಗೆಡ್ಡೆಯು ಗಂಡಿನ ಪ್ರತೀಕವಾಗಿಯೂ, ಪದರ ಪದರಗಳಲ್ಲಿಯೂ ಶ್ರೀಸಾಮಾನ್ಯನ ಕಣ್ಣೀರಿಳಿಸಬಲ್ಲ ಈರುಳ್ಳಿಯು ಹೆಣ್ಣಿನ ಪ್ರತೀಕವಾಗಿಯೂ ಟಿವಿ ಇಲ್ಲದ ಕಾಲದಲ್ಲಿಯೂ ಗೋಳ್ಸೀರಿಯಲ್ಲಿನ ಮೊದಲ ಯಶಸ್ವಿ ಜೋಡಿಯಾದವೆಂದು ದಿನವೂ ಭಗವದ್ಗೀತೆಯ ಮೇಲೆ ಕೈಯಿಟ್ಟು ಸುಳ್ಳುಪ್ರಮಾಣ ಮಾಡುವ ಖಾಯಂ ಸಾಕ್ಷಿ ಕರಿಯಪ್ಪನವರು ನುಡಿದಿದ್ದಾರೆ. ಅವರು ಅದನ್ನು ಲಯರ್ಸ್ ಅಸೋಸಿಯೇಷನ್ನಿನ ಒಂದು ಪುಸ್ತಕದಲ್ಲಿ ಓದಿದ್ದರಂತೆ. ಆಲೂ-ನೀರುಳ್ಳಿಗಳಲ್ಲಿ ಆಲು ಹೆಣ್ಣು, ನೀರುಳ್ಳಿ ಹೆಣ್ಣು ಎನ್ನುವುದು ತೆಲುಗರ ವಾದ. ಆ ಭಾಷೆಯಲ್ಲಿ ಗಂಡ-ಹೆಂಡತಿ ಎನ್ನಲು ಆಲು-ಮೊಗಡು ಎಂಬ ಬಳಕೆ ಇರುವುದೇ ಇದಕ್ಕೆ ಹಿನ್ನೆಲೆ.

‘ಹಳಗನ್ನಡದಲ್ಲಿ ಅಮ್ಮ ಎಂದರೆ ಅಪ್ಪ. ಹಾಗಾಗಿ ನಿಮ್ಮ ಆಲು ನಮ್ಮಲ್ಲಿ ಗಂಡು’ ಎನ್ನುವುದು ಹಳಬರ ವಾದ. “ಪ್ರತಿ ಮನೆಯಲ್ಲೂ ಆಕಾರದಲ್ಲಿ ಗಂಡು ಗಂಡ; ವಿಕಾರದಲ್ಲಿ... ಕ್ಷಮಿಸಿ... ವಿಚಾರದಲ್ಲಿ ಗಂಡು ಹೆಂಡತಿ ಎನ್ನುವುದು ಜಗತ್ಸತ್ಯ. ಹೀಗಿರುವಾಗ ವಾದವೇಕೆ?” ಎಂದರೊಬ್ಬ ಹಿರಿಯರು. ಸ್ವಾನುಭವಕ್ಕೆ ಬೆಲೆ ಕೊಡುವುದು ನಮ್ಮ ಸಂಪ್ರದಾಯ.

ಗಂಡ-ಹೆಂಡಿರ ಜಗಳವಾಗಲಿ, ಗಂಡ-ಹೆಂಡಿರ ವಿಷಯದ ಬಗ್ಗೆ ನಡೆಯುವ ಚರ್ಚೆಯಾಗಲಿ ತಕ್ಷಣ ಇತ್ಯರ್ಥವಾಗುವುದಲ್ಲ. ಆದ್ದರಿಂದ ಅದನ್ನತ್ತ ಬಿಟ್ಟು ಬಸಣ್ಣನ ಪಾದತಲದಲ್ಲಿ ಅಜ್ಜಿಬಜ್ಜಿಯಾದ ಆಲೂಗಡ್ಡೆಯ ವಿಷಯವನ್ನು ಕೈಗೆತ್ತಿಕೊಳ್ಳೋಣ.

ದಾಸರ ಪದಗಳಲ್ಲಿ  ಕಂಡುಬರುವ “ಮಣ್ಣಿಂದ ಕಾಯ ಮಣ್ಣಿಂದ’ ಎನ್ನುವುದು ಆಲೂಗಡ್ಡೆಯನ್ನು ಕುರಿತಾದುದೇ ಎಂದು ‘ಗ್ಲೋಬಲ್ ಫಿಂಗರ್ ಚಿಪ್ಸ್ ಅಸೋಸಿಯೇಷನ್’ ಬಲವಾಗಿ ನಂಬಿದೆ. ಮಣ್ಣಲ್ಲಿ ‘ಕಣ್ಣಿರುವ ಆಲೂಗಡ್ಡೆ’ಯನ್ನು ಹೂತು, ನೀರು-ಗೊಬ್ಬರಗಳನ್ನು ಒದಗಿಸಿದರೆ ಮಣ್ಣಿನಲ್ಲೇ ಅನೇಕ ಗೆಡ್ಡೆಗಳು ಹಾಜರಾಗುತ್ತವೆ. ಆಲೂಗಡ್ಡೆಯು ನಮ್ಮ ಪೂರ್ವಜರಂತೆಯೇ ಕುಟುಂಬಯೋಜನೆಯನ್ನು ಧಿಕ್ಕರಿಸುವ ಮೆಂಟಾಲಿಟಿಯನ್ನು ಹೊಂದಿದ್ದು, ಒಂದು ಗೆಡ್ಡೆಯು ಹತ್ತು ಗೆಡ್ಡೆಗಳವರೆಗೆ ಜನ್ಮ ನೀಡುತ್ತದೆ.

ಅಮೆರಿಕದ ಪೆರುವಿನಲ್ಲಿ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಕಾಣಿಸಿಕೊಂಡು ಈಗಿನ ಪೆರಿಪೆರಿಯವರೆಗೆ ತನ್ನ ಖ್ಯಾತಿಯನ್ನು ವಿಸ್ತರಿಸಿರುವ ಆಲೂಗೆಡ್ಡೆಯನ್ನು ನೋಡುವುದೇ ಒಂದು ಸಂತಸದ ವಿಷಯ. ಪೆರುವಿನ ‘ಇಂಕಾ’ ಬುಡಕಟ್ಟಿನವರು ಬೆಳೆಸಲಾರಂಭಿಸಿದ ಈ ತಕರಾರಿಲ್ಲದ ತರಕಾರಿಯು ಹೈದರಾಬಾದಿಗಳು ಹೇಳುವಂತೆ, ಎಷ್ಟೇ ತಿಂದರೂ ‘ಇಂಕಾ ಕಾವಾಲಿ’ (ಇನ್ನೂ ಬೇಕು) ಎನ್ನಿಸುವಂತಹ ಭೂಗರ್ಭಜಾತ.

“ದೇವಕಿ ಮನುಷ್ಯಳು; ಕಂಸ ರಾಕ್ಷಸ; ಕೃಷ್ಣ ದೇವರು. ಒಂದೇ ಫ್ಯಾಮಿಲಿಯಲ್ಲಿ ಮೂರು ವರೈಟಿ ಹೇಗೆ ಸರ್?” ಎಂದು ಪ್ರೊಫೆಸರ್ ಮಿತ್ರರನ್ನೊನ್ನೆ ಕೇಳಿದ್ದೆ.

“ಗುಣದ ಆಧಾರದ ಮೇಲೆ ನರಸುರಾಸುರ ತೀರ್ಮಾನವಪ್ಪ” ಎಂದಿದ್ದರವರು. ಆಲೂಗೆಡ್ಡೆಯ ವಿಷಯದಲ್ಲಿಯೂ ಇದು ಅನ್ವಯವೇ. ಪೊಟ್ಯಾಟೋ ಎಂದು ಕರೆಸಿಕೊಳ್ಳುವ ಇದಕ್ಕೂ ‘ಸ್ವೀಟ್ ಪೊಟ್ಯಾಟೋ’ಗೂ ಏನೇನೂ ಸಂಬಂಧವಿಲ್ಲ. ಆದರೆ ಮನುಕುಲಕ್ಕೆ ಶಾಪವಾಗಿಯೇ ಪರಿಣಮಿಸುವ ಟೊಬ್ಯಾಕೋ (ತಂಬಾಕು) ಮತ್ತು ಪೊಟ್ಯಾಟೋ ಒಂದೇ ಕುಟುಂಬಕ್ಕೆ ಸೇರಿದ್ದು ಎಂದು ಹೇಳಿದರೆ “ಓಹ್! ಇದೊಂದು ಹಿಂದಿ ಚಿತ್ರಕಥೆಯಂತಿದೆ. ಒಂದೇ ಕುಟುಂಬದಲ್ಲಿ ಜನಿಸಿದ ಅಣ್ಣತಮ್ಮಂದಿರ ಪೈಕಿ ಅಣ್ಣ ವಿಲನ್, ತಮ್ಮ ಕೇಡಿ ಆಗುವಂತೆಯೇ ಒಂದೇ ಮೂಲದ ತಂಬಾಕು ವಿಲನ್ ಆಯಿತು, ಆಲೂಗೆಡ್ಡೆ ಹೀರೋ ಆಯಿತು” ಎಂದನೊಬ್ಬ ಚಿತ್ರಪೈತ್ಯನ್.

ಮಣ್ಣಿಂದ ಹೊರಬಂದ ತಕ್ಷಣ, ರಾಜಕುವರನನ್ನು ಪಟ್ಟಾಭಿಷೇಕಕ್ಕೆ ಅಣಿಗೊಳಿಸುವ ರೀತಿಯಲ್ಲಿ ಮೈದಡವಿ, ಕೊಳೆ ಕೊಡವಿ, ಶುಭ್ರಸ್ನಾತವನ್ನಾಗಿಸಿ ಚೀಲಸಿಂಹಾಸನಕ್ಕೆ ಏರಿಸುವವರೆಗೆ ಆಲೂಗಡ್ಡೆಯದು ರಾಜಯೋಗ. ನಂತರ ಫ್ಯಾಷನ್ ಪೆರೇಡಿನಲ್ಲಿ ಕ್ಯಾಟ್‍ವಾಕಿಸುವ ಸುಂದರಿಯರಂತೆ ಮಾಲ್‍ಗಳಲ್ಲಿ ಮಾಲಾಗಿ, ವೆಜಿಟೆಬಲ್ ಶಾಪ್‍ಗಳಲ್ಲಿ ಟೇಬಲ್ ಏರಿ, ರಸ್ತೆಬದಿಯಲ್ಲಿ ಗೆಡ್ಡೆಯ ಗುಡ್ಡೆಯಾಗಿ ಎಲ್ಲರ ಕಣ್ಮನೆ ಸೆಳೆಯುವ ಸೆಲೆಬ್ರಿಟಿಯ ಯೋಗ. ನಂತರ ಬೆಂಡೆಬೆರಳಿನ ಕೋಮಲೆಯರ ಕರತಲದಲ್ಲಿ ಉರುಳಾಡುವ ಯೋಗ. ಹಿಂದಿನ ಕಾಲದಲ್ಲಿ ಆಲೂಗೆಡ್ಡೆಗಳು ಉಗ್ರಾಣದಲ್ಲಿ ಉರುಳಾಡುತ್ತಾ “ಎನಿತು ಜನ್ಮಗಳೆನಿತು ಪುಣ್ಯವು ಇನಿತು ತಣ್ಪಿನ ಸ್ಥಳವನೊದಗಿಸಿತೊ; ಎನಿತು ಖಾರವ, ಎನಿತು ಹುಳಿಗಳ ಸ್ನೇಹಮೊದಗುವುದೊ” ಎಂದು ಚರ್ಚಿಸುತ್ತಿದ್ದವು. ಈಗ ಅಂತಹ ಓಪನ್ ಡಿಸ್ಕಷನ್ಸ್‍ಗೆ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ. ಆದರೂ ಆಲೂಗೆಡ್ಡೆಗಳಿಗೆ ಹೆಮ್ಮೆ ಪಡುವುದಕ್ಕೆ, ‘holier than thou’ ಎಂದೂ ಮೂಗೇರಿಸುವುದಕ್ಕೆ ಕಾರಣಗಳಿವೆ. ಉಳಿದೆಲ್ಲ ತರಕಾರಿಗಳನ್ನು ಫ್ರಿಡ್ಜ್ ಎಂಬ ಅಂತಃಪುರಕ್ಕೆ ಕೂಡಲೆ ರವಾನೆ ಮಾಡಿ, ಅವುಗಳೆಲ್ಲ ‘ಚಳಿ ಚಳಿ ತಾಳೆನು ಈ ಚಳಿಯ; ಹೊರಗಡೆ ಹವೆಯಲಿ ನೀ ಬಿಡೆಯ? ನಡುಗುವ ಮೈಯ ನೋಡಿದೆಯ? ರಸ, ರುಚಿ ಕಡಿಮೆ ಗೊಳಿಸುವೆಯ? ಚಳಿ ಚಳಿ...” ಎಂದು ಶೀತಗೀತೆ ನುಡಿಯುವಾಗ ಆಲೂಗೆಡ್ಡೆಯು ‘warmಉ Sunಉ ದೇಖೋ; warmerಉ windಉ ದೇಖೋ; ಜೀನೇ ಕಾ ತರೀಕಾ ಹೈ ಏ ಕ್ಯಾರೆಟ್ ಬೀಟುರೂಟ್; ಜಾಲಿ ಹೋ” ಎಂದು ಮಹಮದ್ ರಫಿಯ ‘ಬಾರ್ ಬಾರ್ ದೇಖೋ...’ ಗೀತೆಯ ಶೈಲಿಯಲ್ಲಿ ಗುನುಗುನಿಸುತ್ತಿರುತ್ತದೆ.

‘ನೂಲಿನಂತೆ ಸೀರೆ; ತಾಯಿಯಂತೆ ಮಗಳು’ ಎಂಬ ಗಾದೆಗೆ ‘ಹೂವಿನಂತೆ ಗೆಡ್ಡೆ’ ಎಂಬ ಸೇರ್ಪಡೆಯನ್ನು ಕೊಡಲು ಆಲೂಗೆಡ್ಡೆಯ ಗಿಡವು ಪ್ರೇರೇಪಿಸುತ್ತದೆ. ಐದು ಬಣ್ಣದ ಹೂಗಳನ್ನು ಬಿಡುವ ಗಿಡಗಳಿದ್ದು, ಗೆಡ್ಡೆಗಳು ಹೂವಿನ ಬಣ್ಣವನ್ನೇ ಹೊಂದಿರುತ್ತವೆ. ಕೆಂಪುಹೂವಿನ ಗಿಡದ  ಅಡಿಯಲ್ಲಿ ಕೆಂಆಲೂಗೆಡ್ಡೆಗಳು! ಹೊಟ್ಟೆಯಲ್ಲಿರುವ ಮಗುವನ್ನು ಸ್ಕ್ಯಾನ್ ಮೂಲಕ ತೋರಿಸುವ ರೀತಿಯಲ್ಲಿಯೇ ಇವೂ ಸಹ. ಆಲೂ ಹೂಗಳು ಭೂಗರ್ಭದಲ್ಲಿರುವ ಗೆಡ್ಡೆಗಳ ಗುಣದ ಸ್ಕ್ಯಾನರ್‍ಗಳು, ಅವುಗಳ ಬಣ್ಣವೇ ಸ್ಕ್ಯಾನಿಂಗ್ ರಿಪೋರ್ಟ್!

ಆಲೂಗೆಡ್ಡೆಗೆ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸವಿದೆ. ಇದನ್ನು ತಿಂದರೆ ವಾಯು ಆಗುವುದೆಂದು ಕೆಲವರು ಹೇಳುತ್ತಾರೆ. “ಎಂದರೆ ಇದರಲ್ಲಿ ವಾಯು ಇದೆ ಎಂದಾಯಿತು. “There is always an element of father in the offspring” ಎಂಬ ಮಾತಿನ ಪ್ರಕಾರ ಆಲೂಗೆಡ್ಡೆಯು ವಾಯುವಿನ ಮಗನೆಂದಾಯಿತು. ಸುರಕುಲದಲ್ಲಿ ಹನುಮನೂ, ನರಕುಲದಲ್ಲಿ ಭೀಮನೂ ಸಸ್ಯಕುಲದಲ್ಲಿ ಆಲೂಗೆಡ್ಡೆಯು ವಾಯುಸುತ!” ಎಂದು ತರಲೆ ಟೀಕಾಚಾರ್ಯರು ‘ಲಿಂಕ್ ಬಿಟ್ವೀನ್ ವೆಜಿಟೆಬಲ್ಸ್ & ಪುರಾಣ’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರಂತೆ. ಅದರ ಸತ್ಯಾಸತ್ಯತೆಗಳೇನೇ ಇರಲಿ, ಆಲೂಗೆಡ್ಡೆಯು ನರಲೋಕದ ‘Future pointer’ ಆದುದು ನನಗೆ ಬಹಳ ಸಂತಸ ತಂದಿದೆ. ಮಿಕ್ಕೆಲ್ಲ ತರಕಾರಿಗಳಿಂದ ತಯಾರಿಸಿದ ಖಾದ್ಯಗಳೆಲ್ಲ ಯಾವ್ಯಾವುದೋ ಹೆಸರುಗಳಿಂದ ಖ್ಯಾತವಾಗಿವೆ. ಆದರೆ ‘ಚಿಪ್ಸ್’ ಎಂಬ ಖ್ಯಾತಿಗೆ ಭಾಜನವಾದುದು ಆಲೂಗೆಡ್ಡೆಯೇ. ಟೆಕ್ಸಾಸಿನ ಹೊಟೇಲಿನ ಗಿರಾಕಿಯೊಬ್ಬನು ಹೊಟೇಲ್ ತಯಾರಿಸುತ್ತಿದ್ದ ‘ಪೊಟ್ಯಾಟೋ ವೆಡ್ಜಸ್’ ಅನ್ನು ‘ದಪ್ಪ; ತೀರ ದಪ್ಪ; ದಪ್ಪಾತಿದಪ್ಪ’ ಎಂದು ಮೂದಲಿಸಿದ ಕಾರಣ ರೊಚ್ಚಿಗೆದ್ದ ಬಾಣಸಿಗನು ಕೈಗೆ ಸಿಕ್ಕ ಆಲೂಗೆಡ್ಡೆಯನ್ನು  see through ಮಟ್ಟದ ಹಾಳೆಗಳಾಗಿ ಕತ್ತರಿಸಿ ಮಸಾಲೆ ಸೇರಿಸಿ ಬಡಿಸಿದ ಪ್ಲೇಟೇ ವಿಶ್ವದ ಮೊದಲ ಚಿಪ್ಸ್. ಆಗಿನಿಂದ ಈಗಿನವರೆಗೆ ನರರಿಂದ ಹಿಡಿದು ಕಂಪ್ಯೂಟರ್‍ಗಳವರೆಗೆ ವಿವಿಧ ರೀತಿಯ ಚಿಪ್ಸ್ ಸೇವನೆ ನಿರಂತರವಾಗಿ ನಡೆದಿದೆ.

ವಿಶ್ವದಲ್ಲಿ ಈಗ ಅನೇಕ ಕೊಲಾಬೊರೇಷನ್‍ಗಳು ನಡೆಯುತ್ತಿವೆ. ಬ್ಯಾಂಕುಗಳು ವಿಲೀನವಾಗುತ್ತಿವೆ. ಕಂಪನಿಗಳು ಪರಸ್ಪರ ಕಂಪೆನಿಗಾಗಿ ಹಾತೊರೆದು ಒಂದಾಗುತ್ತಿವೆ. ಇಂತಿರುವಾಗ ದಿನವೂ ಹಲವಾರು ಪ್ಲೇಟುಗಳಲ್ಲಿ ಜೊತೆಗೂಡುವ ಸಂಗಾತಿಯೊಡನೆ ಪೊಟ್ಯಾಟೋವೂ ಜೊತೆಗೂಡದಿರುವುದೇ? ಟೊಮ್ಯಾಟೋ ಜೊತೆ ಸೇರಿರುವ ಪೊಟ್ಯಾಟೋ ಈಗ ‘ಟೊಮ್‍ಟ್ಯಾಟೋ’ ಗಿಡದಲ್ಲಿ ಲಭ್ಯ!

“ಆಲೂಗೆಡ್ಡೆಯ ಸೊಗದ ಸ್ವಾದವ ಎಲ್ಲಿ ನೋಡಿದಿರಿ! ಟೇಸ್ಟನು ಎಲ್ಲಿ ನೋಡಿದಿರಿ. ಎಲ್ಲಿ ನೋಡಿದರಲ್ಲಿ ತಾ ವಿಧ ವಿಧದಿ ಟೇಸ್ಟು ಬಡ್ಸ್ ಅರಳಿಸುವ..’ ಎಂದು ‘ಪಿಳ್ಳಂಗೋವಿಯ ಚೆಲ್ವ ಕೃಷ್ಣನ’ ಧಾಟಿಯಲ್ಲಿ ‘ಆಲೂದಾಸರು’ ಹಾಡು ಕಟ್ಟುತ್ತಿರುವರಂತೆ. ಮೇ ತಿಂಗಳಿನ ‘ವಿಶ್ವ ಆಲೂಗೆಡ್ಡೆ ದಿನ’ದಂದು ‘ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ’ ಎಂತಾಗಿರುವ ಪೊಟ್ಯಾಟೋದ ಬೆನ್ನಿಗೆ ನಿಮ್ಮದೂ ಒಂದು ಪ್ಯಾಟ್ ಇರಲಿ.

Comments

  1. ಸಾರ್ ಈಗಲೂ ಆ ಪುರಾತನ ಹೋಟೆಲ್ ಇದೆಯಾ ? ಚಪ್ಪಡಿಯ ಮೇಲೆ ಪಲ್ಯ !!! ನೆನೆದ್ರೆ
    ನೆನೆದರೇ ಮೈ ಜುಮ್

    ReplyDelete

Post a Comment