ದಧಿ

ದಧಿ 

 ಲೇಖನ    -ಸಿಡ್ನಿ ಸುಧೀರ್



ಸಮಯ ಒಂದು ಕಾಲು!. ಎಲ್ಲರೂ ಉಪಹಾರ ಮಂದಿರದ ಮಾಣಿಯ ಓಡಾಟವನ್ನೇ ಗಮನಿಸುತ್ತಿದ್ದರು, 'ನಮ್ಮ ಮೇಜಿಗೆ ಯಾವಾಗ ಆರಂಭಿಕ ತಿನಿಸುಗಳು (Starters) ಬರುತ್ತವೆ' ಎಂದು. ಎಲ್ಲರನ್ನು ಒಮ್ಮೆ ನೋಡಿ, ನಗು ಮುಖದಿಂದ ಗಗನ್ ಹೇಳಿದ 

"ಆಸ್ಟ್ರೇಲಿಯಾದಲ್ಲಿ  ಎಲ್ಲರೂ ರಿಲ್ಯಾಕ್ಸ (relax) ಆಗಿ ಊಟ ಮಾಡ್ತಾರೆ. ಎಲ್ಲಾ ಬರತ್ತೆ ಇರಿ".

ಗಗನ್ ಮತ್ತು ಸಂಸಾರ ಸಿಡ್ನಿಯಲ್ಲಿ ನೆಲೆಸಿ ಮೂರು ವರ್ಷ ಕಳೆದಿತ್ತು. ಮಧ್ಯ ವಯಸ್ಸಿನ ಗಗನ್ ಬೆಂಗಳೂರಿನಿಂದ ಹೆಂಡತಿ, ಇಬ್ಬರು ಮಕ್ಕಳು ಮತ್ತು ತಾಯಿಯ ಜೊತೆ ಕೋವಿಡ್ ನಂತರ ಸಿಡ್ನಿಗೆ ಉತ್ತಮ ಜೀವನ ಮತ್ತು ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಬಂದವನು. ಗಂಡ-ಹೆಂಡತಿಯರಿಗೆ ತಕ್ಕ ಮಟ್ಟಿನ ಕೆಲಸ ಮತ್ತು ವಾಸಕ್ಕೆ ಐದು ಕೊಠಡಿಯ ಮನೆ.

ಇವರನ್ನು ಭೇಟಿ ಮಾಡಲು ಹಾಗೂ ಇವರ ಜೊತೆ ಕಾಲ ಕಳೆಯಲು ಭಾರತದಿಂದ ಅಕ್ಕ, ಸೋದರ ಮಾವ-ಅತ್ತೆ, ಚಿಕ್ಕಮ್ಮ ಬಂದಿದ್ದರು. ಕೆಲಸಕ್ಕೆ ಒಂದು ತಿಂಗಳು ರಜೆ ಹಾಕಿ ಎಲ್ಲರ ಜೊತೆ ಆಸ್ಟ್ರೇಲಿಯದ ಪ್ರವಾಸ. ತಾವು ಬಂದು ನೆಲೆಸಿರುವ ಜಾಗವನ್ನು, ಜೀವನವನ್ನು ತೋರಿಸುವ ಹಂಬಲ. ಹಾಗಾಗಿ ಮಧ್ಯಾಹ್ನದ ಭೋಜನಕ್ಕೆ, ಉತ್ತರ ಭಾರತದ ಉಪಹಾರ ಮಂದಿರಕ್ಕೆ ಬಂದ್ದಿದ್ದರು. ಒಂದಾದ ಮೇಲೊಂದು ತಿನಿಸುಗಳು ಬರುತ್ತಿದ್ದಂತೆ, ಕೈಗೆ ಬಾಯಿಗೆ ಜಗಳ ಶುರುವಾಗಿತ್ತು. ಮಧ್ಯದಲ್ಲಿ ಅವರತ್ತೆ

"ಇಂಡಿಯ ಊಟ ನಮ್ಮಂತೆಯೆ ಚೆನ್ನಾಗಿದೆ. ಆದರೆ ಇಲ್ಲಿಯ ಬ್ರೆಡ್ ಬಿಸ್ಕೇಟ್ ನಲ್ಲೂ ನಾನ್ ವೆಜ್ ಇರತ್ತಂತೆ, ಹೌದಾ ?" ಎಂದು ಕೇಳಿದರು.

ಅದಕ್ಕೆ ಗಗನ್ ಅಕ್ಕ "ಏನು ಇಲ್ಲಾ ಕಣೆ. ಯಾರು ಹೇಳಿದ್ರು?" ಎಂದು ಮರು ಪ್ರಶ್ನಿಸಿದಳು. 

ಗಗನ್ ಅಕ್ಕ ಮತ್ತು ಅತ್ತೆ ಸಮಾನ ವಯಸ್ಕರು. ಆದ್ದರಿಂದ ಹೋಗು ಬಾ ಎನ್ನುವ ಸಲಿಗೆ.

"ನನ್ನ ಫ್ರೆಂಡ್ ಗೀತ ಹೇಳ್ತಿದ್ರು. 'ಏನು ತಿನ್ನಬೇಕಾದರು ಕೇಳಿ ತಿನ್ನಬೇಕು' ಅಂತ, 'ಎಲ್ಲದ್ರಲ್ಲೂ ನಾನ್ ವೆಜ್ ಇರತ್ತೆಂತೆ' " ಎಂದು ಅತ್ತೆ ಉತ್ತರಿಸಿದರು.

ಎಲ್ಲರೂ ಅಪ್ಪಟ ಸಸ್ಯಹಾರಿಗಳು. ಆದ್ದರಿಂದ ವಿದೇಶದಲ್ಲಿ ಹೊರಗೆ ತಿನ್ನಬೇಕಾದರೆ ಹೇಗೋ ಏನೋ. ಮೇಲಾಗಿ ಫ್ರೆಂಡ್ ಬಿಟಿದ್ದ ಒಂದು ಹುಳು  ತಲೆಯಲ್ಲಿ ಓಡಾಡುತ್ತಿದ್ದ, ಕೇಳಿಯೆ ಬಿಡುವ ಎಂದು ಕೇಳಿದರು.

ಅದಕ್ಕೆ ಅಕ್ಕ "ಏನು ಇಲ್ಲ. ಎಲ್ಲಾ ಕಡೆ ವೆಜಿಟೇರಿಯನ್ ಸಿಗತ್ತೆ. ನಾವು ಕೇಳಬೇಕು" ಎಂದರು. ಅಕ್ಕ ಅಮೆರಿಕಾಗೆ ಹೋಗಿದ್ದ ಅನುಭವ. ಮಾವ-ಅತ್ತೆ ಕೂಡ ಪೂರ್ವ ಏಷ್ಯದ ಕೆಲವು ದೇಶಗಳಿಗೆ ಭೇಟಿ ಕೊಟ್ಟಿದ್ದರೂ, ಆಸ್ಟ್ರೇಲಿಯ ಪಾಶ್ಚಿಮಾತ್ಯ ದೇಶಗಳ ಸಾಲಿಗೆ ಸೇರುತ್ತದೆ. ಇಲ್ಲಿ ಹೇಗೋ ಏನೋ ಎಂಬ ಅನುಮಾನ.

ಗಗನ್ ಕೂಡ ಹೇಳಿದ "ಹಾಗೇನಿಲ್ಲ. ನಾವು ಪದಾರ್ಥಗಳನ್ನ ನೋಡಿ ತಗೋತಿವಿ. ಸಿಂಗಾಪುರ್ ಮಲೇಷ್ಯಗಳಲ್ಲಿ, ಬ್ರೆಡ್ ಗೆ ಅನಿಮಲ್ ಫೇಟ್ ಸೇರಿಸಿರ್ತಾರೆ. ಇಲ್ಲೂ ಹಾಗೆ. ನೋಡಿ ಕೇಳಿ ತಗೊಂಡ್ರೆ ತೊಂದ್ರೆ ಇಲ್ಲ."

ಅದಕ್ಕೆ ಅಕ್ಕ ಒಂದು ಸಂಗತಿಯನ್ನು ವಿವರಿಸಿದಳು. 'ಹೀಗೆ ಅಮೆರಿಕಾದಲ್ಲಿ ಅವಳ ಮಗಳು ಮತ್ತು ಸ್ನೇಹಿತರು ಭಾರತೀಯ ಉಪಹಾರ ಮಂದಿರಕ್ಕೆ ಹೋಗಿ ಪನ್ನೀರ್ ಮಂಚೂರಿ ಹೇಳಿದ್ದರು. ಪನ್ನೀರ್ ಮಂಚೂರಿ ಬದಲು ಚಿಕನ್ ಮಂಚೂರಿ ಕೊಟ್ಟರಂತೆ. ಒಂದು ಪೀಸ್ ತಿಂದ ಮೇಲೆ ಗೊತ್ತಾಗಿದ್ದು ಅದು ಪನ್ನೀರ್ ಮಂಚೂರಿ ಅಲ್ಲ ಎಂದು. ಉಪಹಾರ ಮಂದಿರದವರ ಜೊತೆ ಜಗಳವಾಡಿ ಕೇಸ್ ಮಾಡಿದರಂತೆ. ಆದರೂ ಒಂದು ಪೀಸ್ ಚಿಕನ್ ತಿಂದ್ರು'. ಅದಕ್ಕೆ ಯಾವ ಹೋಟೆಲ್ ಗೆ ಹೋದರು, ನಾನು ಅವರಿಗೆ ಹೇಳ್ತಿನಿ 'ವಿ ಆರ್ ಪ್ಯೂರ್ ವೆಜ್. ಡೋಂಟ್ ಮಿಕ್ಸ್ (We are pure veg, don't mix)' ಎಂದು ಅಕ್ಕ ಹೇಳಿದಳು.

ಈ ಮಧ್ಯೆ ಮಾಣಿ ಬಂದು, ಬೇರೆ ಏನು ಬೇಕು ಎಂದು ಕೇಳಲು, ಎಲ್ಲರಿಗೂ ಮುಖ್ಯವಾದ ರೋಟಿ/ನಾನ್, ಸಬ್ಜಿ ಆರ್ಡರ್ ಹೇಳಲಾರಂಭಿಸಿದರು. ಮತ್ತೆ ಅಕ್ಕ ಮಾಣಿಗೆ

"ವಿ ಆರ್ ಪ್ಯೂರ್ ವೆಜ್. ಡೋಂಟ್ ಮಿಕ್ಸ್ (We are pure veg, don’t mix)" ಎಂದು ಹೇಳಿದಾಗ ಮಾಣಿ

"ನಾನ್ ಗೆ ಮೊಟ್ತೆಯ ಹಳದಿ ಸವರುತ್ತೇವೆ" ಎಂದು ಉತ್ತರಿಸಿದ. ಎಲ್ಲರಿಗೂ ಆಶ್ಚರ್ಯ. ನಾನ್ ಮೇಲೆ ಮೊಟ್ಟೆಯ ಹಳದಿ? ತಕ್ಷಣ ನಾನ್ ಬದಲಾಯಿಸಿ, ರೋಟಿ ಆರ್ಡರ್ ಮಾಡಿದರು.

ಮನೆಗೆ ಬಂದ ಮೇಲೆ ಗಗನ್ ಮನಸ್ಸಿನಲ್ಲಿ ನೂರೆಂಟು ಯೋಚನೆಗಳು ಹರಿದವು.

ಯಾರು ಮಾಡಿದ್ದು ಈ ನಿಯಮಗಳನ್ನ? ಬ್ರಾಹ್ಮಣರು ಮಾಂಸಹಾರ ಸೇವಿಸಕೂಡದು? 

ಹಿಂದೆ ಆರ್ಯರ ಕಾಲದಲ್ಲಿ ನಾಲ್ಕು ವರ್ಣಗಳು - ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಸರಸ್ವತಿ ಆರಾಧಕರು ಬ್ರಾಹ್ಮಣರು. ವ್ಯಾಪಾರ-ವಹಿವಾಟು ಮಾಡುತ್ತಿದ್ದವರು ವ್ಯೆಶ್ಯಯರು. ವಿದ್ಯೆ , ಬುದ್ಧಿಗೆ ಸಾತ್ವಿಕ ಆಹಾರ ಸಾಕು. ಮಾಂಸಾಹಾರದ ಅಗತ್ಯವಿಲ್ಲ. 

ಇನ್ನು ದೇಶ ಕಾಯುವವರು ಕ್ಷತ್ರಿಯರು ಮತ್ತು ಶ್ರಮ ವಹಿಸಿ ಕೆಲಸ ಮಾಡುವವರು ಶೂದ್ರರು. ಇವರಿಗೆ ಬೇಕಾಗುವ ಶಕ್ತಿಗೆ ಮಾಂಸಹಾರ ತಿನ್ನುತ್ತಿದ್ದರು. ಆರ್ಯರ ಕಾಲದಲ್ಲಿ ಅವರವರ ಆಸಕ್ತಿಗ ಅನುಗುಣವಾಗಿ ಒಂದು ವರ್ಣದಿಂದ ಇನ್ನೊಂದು ವರ್ಣಕ್ಕೆ ಬದಲಾಗಬಹುದಿತ್ತು. ಇದಕ್ಕೆ ಉದಾಹರಣೆ ವಾಲ್ಮೀಕಿ. ಆ ಕಾಲದ ವೃತ್ತಿಗನುಗುಣವಾದ ಆಹಾರವು ಈ ಕಾಲಕ್ಕೆ ವರ್ಣಕ್ಕನುಗುಣವಾದ ಆಹಾರ ಎಂಬುದು ಹೇಗೆ ಮತ್ತು ಯಾವಾಗ ಶುರುವಾಯಿತು? 

ಈ ಕಾಲದಲ್ಲಿ ಬ್ರಾಹ್ಮಣನಾಗಿ ಹುಟ್ಟಿ, ವ್ಯಾಪಾರಾ ಮಾಡುವವರನ್ನು ಏನೆಂದು ಹೇಳಬೇಕು?  ಜನ್ಮದಿಂದ ವರ್ಣವೋ ಅಥವ ವೃತ್ತಿಯಿಂದ ವರ್ಣವೋ?

ಸಿಂಗಾಪುರ ಮಲೇಷ್ಯದಲ್ಲಿ ಕೆಲಸ ಮಾಡುವಾಗ, ಕೆಲವು ಚೀನೀ ಸಹೋದ್ಯೋಗಿಗಳು ಕೇಳಿದ್ದುಂಟು 

"ವೆಜಿಟೇರಿಯನ್ ಬೈ ಚಾಯ್ಸ್ ಆರ್ ಬೈ ರಿಲಿಜಿಯನ್ ? (Vegeterian by choice or by religion)" ಎಂದು.

ನಾವು ಸೇವಿಸೋ ಎಷ್ಟೋ ಔಷಧಗಳನ್ನ ಪ್ರಾಣಿ ಉತ್ಪನ್ನಗಳಿಂದ ತಯಾರಿಸಿರುತ್ತಾರೆ. ಹಾಗಿರುವಾಗ ಎಲ್ಲಿಯ ಸಸ್ಯಹಾರಿ ಎಲ್ಲಿಯ ಮಾಂಸಹಾರಿ? ಬೇಕರಿಯಲ್ಲೂ ಕೂಡ ಮೊಟ್ಟೆಯನ್ನ ಧಾರಾಳವಾಗಿ ಬ್ರೆಡ್, ಬನ್, ಬಿಸ್ಕೇಟ್ ಗಳಲ್ಲಿ ಬಳಸುತ್ತಾರೆ. ಈಗ ಬರೀ ಮಾಂಸಹಾರ, ಸಸ್ಯಹಾರ ಮಾತ್ರವಲ್ಲ ಬೇರೆ ವಿಧಗಳು ಇವೆ - ಸಸ್ಯಹಾರಿ (ವೆಜಿಟೇರಿಯನ್), ಮೊಟ್ಟೆ ತಿನ್ನುವ ಸಸ್ಯಹಾರಿ (ಎಗ್ಗಿಟೇರಿಯನ್), ಹಾಲು ಮತ್ತು ಅದರ ಪದಾರ್ಥಗಳನ್ನು ಸೇವಿಸದ ಸಸ್ಯಹಾರಿ (ವೀಗನ್), ಭೂಮಿಯೊಳಗೆ ಬೆಳೆಯುವ ತರಕಾರಿಗಳನ್ನ ಸೇವಿಸದ ಸಸ್ಯಹಾರಿ (ಜೈನ್ ಫುಡ್).


ಇದೆಲ್ಲಾ ಯೋಚನೆ ಮಾಡುತ್ತಾ ಗಗನ್ ಗೆ ಒಂದು ಗಾದೆಯು ನೆನಪಾಗಿ ಮನಸ್ಸಿನೊಳಗೆ ನಕ್ಕ,

"ಸಸ್ಯ ತಿನ್ನುವವನು ಸಸ್ಯಹಾರಿ

ಮಾಂಸ ತಿನ್ನುವವನು ಮಾಂಸಹಾರಿ

ಸಮಸ್ಯೆ ತಿನ್ನುವವನು ಸಂಸಾರಿ" 


ಪಂಚಾಮೃತದಲ್ಲಿ ಬಳಸುವ ಮಧುವಿನ ಮೂಲ, ಕ್ಷೀರದ ಮೂಲ ಹುಡುಕಿದರೆ, ಯಾವುದು ಅಪ್ಪಟ ಸಸ್ಯಹಾರ? ಆರ್ಯರ ಕಾಲದಲ್ಲಿ ಗೋವಿನ ಎಲುಬುಗಳಿಂದ ಸಕ್ಕರೆಯನ್ನು ಶುದ್ಧೀಕರಿಸಿದ ಸಕ್ಕರೆ ಎಲ್ಲಿತ್ತು? ಆದರೆ ಸಕ್ಕರೆ ಪಂಚಾಮೃತದಲ್ಲಿ ಬಳಸುವ ಒಂದು ಪದಾರ್ಥ. ಬಹುಶಃ ಬೆಲ್ಲ ಬಳಸುತ್ತಿದ್ದರೇನೋ. ಈಗ ಟೂತ್ ಪೇಸ್ಟ್ ನಲ್ಲು ಗೋವಿನ ಎಲುಬಿನ ಪುಡಿಯನ್ನು ಬಳಸುತ್ತಾರೆ.


ಈ ಯೋಚನೆಗಳ ಮಧ್ಯದಲ್ಲಿ ಮಗ ಮಾರುಕಟ್ಟೆಗೆ ಹೋಗಿ ಮೊದಲ ಬಾರಿ ಮೊಸರನ್ನು ತಂದ. ಗಗನ್ ಅದನ್ನ ನೋಡಿ

"ಇದನ್ನ ಯಾಕೆ ತಂದೆ? ನಾವು ತರುವ ಇಂಡಿಯನ್ ಮೊಸರು ತರೋದಲ್ವ?" ಎಂದು ದನ್ನೋ ಯೋರ್ಗಟ್ ಡಬ್ಬವನ್ನ ನೋಡಿ ಕೇಳಿದ.

ಅದಕ್ಕೆ ಮಗ "ಇಂಡಿಯನ್ ಶಾಪ್ ಕ್ಲೋಸ್ ಆಗಿತ್ತು. ಅದಕ್ಕೆ ಉಲ್ಲೀಸ್ ನಿಂದ ತಂದೆ" ಎಂದ.

"ಈ ಮೊಸರು ವಾಪಸ್ ಕೊಟ್ಟು ಬಾ" ಎಂದ ಗಗನ್

ಮಗ ಮರು ಪ್ರಶ್ನಿಸಿದ "ಯಾಕೆ?"

ಅದಕ್ಕೆ ಗಗನ್ "ಈ ಮೊಸರಲ್ಲಿ ಹಂದಿ ಕೊಬ್ಬು (pig fat - gelatin) ಇದೆ. ಇದು ಲೋಳಿ ಲೋಳಿಯಾಗಿ ಇರತ್ತೆ. ಇದು ಬೇಡ. ವಾಪಸ್ ಕೊಟ್ಟು ಬಾ" ಎಂದ.

ಅಕ್ಕ, ಮಾವ, ಅತ್ತೆ ಎಲ್ಲರೂ ಆಶ್ಚರ್ಯವಾಗಿ ನೋಡಿದರು. 


Comments

  1. ಋಷಿ ಮೂಲ, ನದಿ ಮೂಲ ಹುಡುಕಬಾರದು ಅಂತಾರೆ. ಹೀಗೇ ಮುಂದುವರಿದರೆ, ಮುಂದಿನ ಪೀಳಿಗೆಗೆ ವೆಜಿಟೇರಿಯನ್ ಆಹಾರದ ಮೂಲ ಹುಡುಕಾಟವನ್ನು ಅದರ ಪಟ್ಟಿಗೆ ಸೇರಿಸಬೇಕಾಗಬಹುದೇ??

    ಅತ್ತ್ಯುತ್ತಮ ನಗೆ ಬರಹ ಶ್ರೀಯುತ ಸುಧೀರ್ 👌👏👏

    ReplyDelete
  2. ಹಾಸ್ಯದ ಲೇಪನ ಇದ್ದರೂ ಸಾಕಷ್ಟು ಗಮನಾರ್ಹ ವಿಚಾರ ತುಂಬಿದೆ ತಮ್ಮ ಲೇಖನದಲ್ಲಿ

    ReplyDelete
  3. This comment has been removed by the author.

    ReplyDelete

Post a Comment