ಉಂಡವನಿಗೆ ಊಟಕ್ಕಿಕ್ಕು .....

ಉಂಡವನಿಗೆ ಊಟಕ್ಕಿಕ್ಕು -ಗುಂಡಕಲ್ಲಿಗೆ ನಾಮ ಇಕ್ಕು

 ಲೇಖಕರು : ಎಂ ಆರ್ ವೆಂಕಟರಾಮಯ್ಯ 



 ಇದೊಂದು ಕನ್ನಡದ ಹಳೆಯ ಗಾದೆಯಾಗಿದೆ. ‘ಗಾದೆ’ ಎನ್ನುವುದು ಹಣದ ಆಸೆಗೋ ಕೀರ್ತಿಗೋ ಯಾರೂ ಬರೆದು ಪ್ರಕಟಿಸಿದ್ದಲ್ಲ. ಇದಕ್ಕೆ ಯಾರೂ ಲೇಖಕರಾಗಲಿ, ಕಾಪಿ ರೈಟಾಗಲಿ ಇಲ್ಲ. ಬದಲಿಗೆ ಅಂದಿನ ಜನರ ಜೀವನಾನುಭವದಿಂದ ಹೊರಬಂದ ಮಾತುಗಳಿವು. ಸಾಮಾನ್ಯರ ನಿತ್ಯ ಜೀವನದಲ್ಲಿ ಕಂಡು ಬರಬಹುದಾದ ನಿತ್ಯ ಸತ್ಯಗಳಿವು ಎಂದರೆ ಮಾತು ಉತ್ಪೇಕ್ಷೆಯಾಗಲಾರದು ಎನಿಸುತ್ತದೆ. 

 ಪ್ರಸಕ್ತ ಶೀರ್ಷಿಕೆಯಲ್ಲಿನ ಗಾದೆಯೂ ಇಂತಹುದೇ. ಊಟ ಯಾರಿಗೆ ಅಗತ್ಯ ಎಂದರೆ ಹೊಟ್ಟೆ ಹಸಿದವನಿಗೆ. ಕಾಯೋ ಕಸರೋ ಸೊಪ್ಪೋ ಸೊದೆಯೋ ಯಾವುದೋ ಒಂದು ಹೊಟ್ಟೆಗೆ ಬಿದ್ದರೆ ಸಾಕಪ್ಪಾ, ಅಷ್ಟೊಂದು ಹಸಿವಾಗುತ್ತಿದೆ ಎಂಬ ಮಾತು ನಮ್ಮಲ್ಲಿ ಅನೇಕರು ಕೇಳಿಯೇ ಇರುತ್ತಾರೆ. ಈ ಹಂತದಲ್ಲಿ ಅವನು ದೊರೆತ ಆಹಾರದ ರುಚಿ ಪಾಕ ಎಣಿಸುವುದಿಲ್ಲ. (ಇದು ಸಾಮಾನ್ಯರ ವಿಷಯ. ಆದರೆ ಕೆಲವರು ತಮಗೆ ರುಚಿಸಿದರೆ ಮಾತ್ರ ತಿನ್ನುವ, ರುಚಿಸದಿದ್ದರೆ ಹಸಿವನ್ನಾದರೂ ಸಹಿಸಿಕೊಂಡಿರ ಬಲ್ಲರು ಇವರ ಸಾಮಾನ್ಯರ ನೀತಿಗೆ ಒಂದು ಅಪವಾದ ಅರ್ಥಾತ್ ಎಕ್‌ಸೆಪ್ಶನ್ ಎನ್ನಬಹುದೇನೋ.) ಹೊಟ್ಟೆ ಹಸಿವು ಎಂಬುದು ಅಷ್ಟು ಭಯಂಕರವಾದದ್ದು. ಹಸಿವಿರುವಾಗ ಅವನು ಅದನ್ನು ಪರಿಹರಿಸಿ ಕೊಳ್ಳಲು ಯಾವ ಕಾರ್ಯವನ್ನಾದರೂ ಮಾಡಲು ಸಿದ್ದನಿರುತ್ತಾನೆ. ಈ ಹಂತದಲ್ಲಿ ಅವನಿಗೆ ಯಾವ, ಯಾರ ಮಾತೂ ರುಚಿಸುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ‘ಹಸಿದವನಿಗೆ ಧರ್ಮ ಬೋಧೆ ಹಿಡಿಸದು’ ಎಂಬ ಮಾತು ಹುಟ್ಟಿಕೊಂಡಿದೆ. ಈ ಎಲ್ಲಾ ಮಾತುಗಳ ಸಾರಾಂಶ-ಹಸಿದವನಿಗೆ ಊಟ ನೀಡಬೇಕೇ ಹೊರತು ಹೊಟ್ಟೆ ತುಂಬಿದವನಿಗೆ ಊಟ ನೀಡಿದರೆ ಪ್ರಯೋಜನವೇನು ? ಅದು ಅವನಿಗೆ ರುಚಿಸದೆ, ತಾತ್ಸಾರ ನಿರ್ಲಕ್ಷ್ಯ  ಉದಾಸೀನತೆ ತೋರಬಹುದು ಈ ಸಂದರ್ಭದಿಂದ ಅವಮಾನಿತನಾಗುವವನು ಆಹಾರ ನೀಡಿದವನು ಮತ್ತು ಅವನು ನೀಡಿದ ಆಹಾರ. ಈ ಎರಡೂ ಕಾರಣಗಳಿಂದ ಆಹಾರ ಕೊಟ್ಟೂ ಅವಮಾನಿತನಾಗಬೇಕೇ !

ಆಹಾರದ ಮಹತ್ವ ಎಂತಹುದು ? ಅದನ್ನು ಸೇವಿಸುವವನ ಮನೋಭಾವನೆ ಹೇಗಿರಬೇಕು ? ಎಂಬ ಬಗ್ಗೆ ಗಮನಿಸೋಣ. ಅನ್ನವನ್ನು “ಅನ್ನ ಬ್ರಹ್ಮ, ಅನ್ನ ದೇವರು” ಎನ್ನಲಾಗಿದೆ. ಇದೇ ಸಂದರ್ಭದಲ್ಲಿ, ‘ಅನ್ನ ದೇವರಿಗಿಂತಾ ಇನ್ನು ದೇವರಿಲ್ಲ’ ಎಂಬ ರೂಢಿಗತ ಗಾದೆ ಸಹಾ ಸ್ಮರಣಾರ್ಹ. ನಾವು ಸೇವಿಸುವ ಅನ್ನದ ಪ್ರತಿ ಕಣದಲ್ಲೂ ಬ್ರಹ್ಮ ತತ್ವ ಅಡಗಿದೆ. ಈ ಶರೀರದಲ್ಲಿ ಉಂಟಾಗುವ ದೇಹ ಬಲ, ಮನೋ ಬಲ, ಆತ್ಮ ಬಲ ಪೋಷಣೆಗೆ ಅನ್ನ ಪಾನಾದಿಗಳು ಕಾರಣ. ಬ್ರಹ್ಮವನ್ನು ಉಪದೇಶಿಸು ಎಂದು ಭೃಗುವು ತನ್ನ ತಂದೆ ವರುಣನನ್ನು ಪ್ರಾರ್ಥಿಸಿದಾಗ, ಅನ್ನವು ಪ್ರಾಣ, ಅದೇ ಕಣ್ಣು, ಕಿವಿ, ಮಾತು, ಮನಸ್ಸು ಎಂಬುದಾಗಿ ಅನ್ನದ ಮಹತ್ವವನ್ನು ಭೃಗುವು ತೈತ್ತಿರೀಯ ಉಪನಿಷತ್ತಿನಲ್ಲಿನ ಅಂಶವನ್ನು ತಿಳಿಸುತ್ತಾ, ‘ಅನ್ನವೇ ಬ್ರಹ್ಮ. ವಿಶ್ವದಲ್ಲಿರುವ ಎಲ್ಲಾ ಜೀವಿಗಳೂ ಅನ್ನದಿಂದಲೇ ಹುಟ್ಟುತ್ತವೆ. ಅನ್ನದಿಂದಲೇ ಬದುಕುತ್ತವೆ. ಆದ ಕಾರಣ, ಅನ್ನವೇ ಬ್ರಹ್ಮ. ಅದನ್ನುನಿಂದಿಸ ಬಾರದು ಎಂದಿದ್ದಾನೆ. ಈ ಅಂಶಗಳ ಕಾರಣ, ಅನ್ನವೆಂಬ ಪದಾರ್ಥ ಬಹು ಪವಿತ್ರ ವಾದದ್ದು. ಇಂತಹಾ ಪವಿತ್ರ ಪದಾರ್ಥವನ್ನು ಸೇವಿಸುವವನಿಗೂ ಶುದ್ಧ ಭಾವನೆ ಇರಬೇಕು ಎಂಬ ಅಂಶವನ್ನು ತಿಳಿಸಲು ಅನ್ನದ ಮಹತ್ವ ತಿಳಿಸಬೇಕಾಯಿತು. 

 ಪವಿತ್ರ ಅನ್ನವನ್ನು ಹಸಿದವನಿಗೆ ನೀಡುವ ಬದಲು ಹೊಟ್ಟೆ ತುಂಬಿದವನಿಗೆ ನೀಡಿದರೆ ಅವನ ಭಾವನೆ ಹೇಗಿರಬಹುದು ! “ನನಗೇನೂ ಹಸಿವಿರಲಿಲ್ಲ, ಹೊಟ್ಟೆ ತುಂಬಿತ್ತು, ಕೊಟ್ಟಿದ್ದನ್ನು ತೆಗೆದುಕೊಳ್ಳದಿದ್ದರೆ ಕೊಟ್ಟವರು ನನ್ನ ತಪ್ಪು ತಿಳಿದುಕೊಳ್ಳಬಹುದು ಎಂಬ ಮುಲಾಜಿಗೆ ಸೇವಿಸಿದೆ” ಅನ್ನುವವನು ಈತ. ಅಂದರೆ ಇವನ ಮುಂದಿದ್ದ ಅನ್ನ ಪದಾರ್ಥ ಇವನಿಗೆ ಯಕ್ಕಶ್ಚಿತ್ ಹುಲ್ಲು, ಕಡ್ಡಿಯೋ ಎಂಬಷ್ಟು ತಾತ್ಸಾರ, ನಿರ್ಲಕ್ಷ್ಯ . ಇಂತಹವರಿಗೆ ಅನ್ನ ನೀಡಿದರೆ ಏನು ಪ್ರಯೋಜನ ? ಅದಕ್ಕಾಗಿಯೇ, ಹಸಿದವನಿಗೆ ಊಟ ಎನ್ನುವುದು. 

 ಇನ್ನು ಶೀರ್ಷಿಕೆಯಲ್ಲಿನ ಎರಡನೆಯ ಅರ್ಧ ಭಾಗದ ಗಾದೆ “ಗುಂಡುಕಲ್ಲಿಗೆ ನಾಮ ಇಕ್ಕು” ಎಂಬ ಬಗ್ಗೆ ಚರ್ಚಿಸೋಣ. ಪದವೇ ತಿಳಿಸುವಂತೆ ಅದು ಕಲ್ಲು. ಕರಿಯ ಕಲ್ಲು. ಅದಕ್ಕೆ ನಾಮದ ಅಗತ್ಯ ಉಂಟೇ ! ಬಿಳಿಯದೋ ಕೆಂಪೋ ಯಾವ ಬಣ್ಣದ ನಾಮ ವಿಟ್ಟರೂ ಅದಕ್ಕೇನೂ ಭಾಧೆಯಿರುವುದಿಲ್ಲ. ನಾಮವಿಟ್ಟರೂ, ಇಡದಿದ್ದರೂ ಅದಕ್ಕೆ ಚಿಂತೆಯಿಲ್ಲಯಿರುವುದಿಲ್ಲ. ಹೀಗೇನೇ ಉಂಡವನಿಗೆ ಊಟಕ್ಕಿಡುವುದರಿಂದ ಆಗುವ ಪ್ರಯೋಜನ ಸ್ಪಷ್ಟಪಡಿಸಲು ಈ ‘ಗುಂಡಕಲ್ಲಿಗೆ ನಾಮ ಇಡು’ವ ಗಾದೆ ಬಳಸಲಾಗಿದೆ.

 ಪ್ರಸಕ್ತ ಗಾದೆ ಹಳೆಯದಾದರೂ ಇಂತಹುದೇ ಕೆಲಸ ಇಂದೂ ನಡೆಯುತ್ತಿದೆ ಎಂದರೆ ನಿಮಗೆ ಅಚ್ಚರಿಯೇ ! ಇದಕ್ಕೊಂದು ಉದಾಹರಣೆ, ಬಿರುದು, ಪ್ರಶಸಿಗಳನ್ನು ಪ್ರದಾನ ಮಾಡುತ್ತಿರುವ ವಿಚಾರ. ಸಂತರು, ಕವಿಗಳು, ಸಾಹಿತಿಗಳು, ಭಾಷೆ, ನಾಡು, ನುಡಿ ಮೊದಲಾದ ಹೆಸರುಗಳಲ್ಲಿ ಪ್ರಶಸ್ತಿಗಳನ್ನು ವಿತರಿಸುತ್ತಿರುವ, ಇದರ ಅಂಗವಾಗಿ ವಿಜೇತರಿಗೆ ಶಾಲು, ಫಲ ಪುಷ್ಪ, 5000 ದಿಂದ 1 ಲಕ್ಷದ ವರೆಗೆ Àನಗದು ಹಣ ಇತ್ಯಾದಿ ನೀಡಿ ಸಾರ್ವಜನಿಕವಾಗಿ ಅವರನ್ನು ಗೌರವಿಸುವ ಪ್ರಕ್ರಿಯೆ ಬಹಳ ಕಾಲದಿಂದ ಜಾರಿಯಲ್ಲಿದೆ ಇಂದು ಸಾರ್ವಜನಿಕರಿಗೂ ತಿಳಿದಿರುವ ವಿಷಯವೇ ಆಗಿದೆ. 

 ಪ್ರಶಸ್ತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಳಸುತ್ತಿರುವ ವಿಧಾನ ರೀತಿ ಯಾವುದು ? ಎಂದು ಈ ಕ್ಷೇತ್ರಕ್ಕೆ ಬಹು ಸಮೀಪ ಓಡಾಡಿಕೊಂಡಿರುವವರನ್ನು ಗುಟ್ಟಾಗಿ ವಿಚಾರಿಸಿದಾಗ ತಿಳಿದುಬಂದ ಸತ್ಯ ಎಂದರೆ ಸರ್, ಇದಕ್ಕಾಗಿ ನಿಯಮಾವಳಿ ರೀತಿ ರಿವಾಜು ಎಲ್ಲಾ ಮಾüಡಿಟ್ಟುಕೊಂಡಿದ್ದಾರೆ ಆದರೆ ಎಷ್ಟೋ ಸಾರಿ ವೆಸ್ಟೆಡ್ ಇಂಟೆರೆಸ್ಟ್ ಇದ್ದಾಗ ಇವನ್ನು ಗಾಳಿಗೆ ತೂರಿ ತಮ್ಮ ಸ್ವೇಚ್ಚಾನುಸಾರ ಕ್ರಮ ಅನುಸರಿಸ್ತಾರೆ ಕೆಲವು ಸಾರಿ ಸಾರ್ವಹಜನಿಕರಿಂದ ಅರ್ಜಿ ಆಹವಾಇಸಿದರೆ ಮತ್ತೆ ಸಾರಿ ಶಾಸಕರ ಪಕ್ಷದ ಹಿರಿಯರ ಶಿಫಾರಸಿನ ಮೇಲೆ ಮುಗಿಯುತ್ತೆ. ಎಂದರವರು. 

 ಆದರೆಡ ಬಹಳ ಸಾರಿಯ ವಿಜೇತರ ಹೆಸರುಗಳ ಪಟ್ಟಿಗಳನ್ನು ನೋಡಿದಾಗ : ಬಹಳಷ್ಟು ಜನರ ಹೆಸರು, ಮಾಡಿರುವ ಸಾಧನೆ ನಾವು ಎಂದೂ ಕೇಳೇಯಿಲ್ಲವೇ ? ಎಂಬ ಅನಿಸಿಕೆ (2) ಇವರಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಈ ಹಿಂದೆಯೇ ಹಲವಾರು ಸಾರಿ ಬೇರೆ ಬೇರೆ ಸಂತರು, ಕವಿಗಳು, ಸಾಹಿತಿಗಳು, ಭಾಷೆ, ನಾಡು, ನುಡಿ ಮೊದಲಾದವರ ಸ್ಮರಣಾರ್ಥವಾಗಿಯೋ, ಅವರ ತತ್ವ ಸಿದ್ಧಾಂತ ಪಾಲಿಸಿದವರು ಎಂದೋ, ಕಾರಣ ಯಾವುದೋ ಒಂದಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದವರೇ ಆಗಿದ್ದು, ಪ್ರಶಸ್ತಿ ಪಡೆದವರೇ ಮೇಲಿಂದ ಮೇಲೆ ಪಡೆಯುತ್ತಿದ್ದರೆ, ಒಂದೂ ಪ್ರಸಸ್ತಿ ಪಡೆಯದ ಹೊಸಬರಿಗೆ ಅವಕಾಶ ಬೇಡವಾ ! ಹೊಸಬರಿಗೆ, ಯುವ ಸಾಧಕರಿಗೆ ಪ್ರಶಸ್ತಿ ನೀಡಿ, ಭೇಷ್ ಎಂದು ಬೆನ್ನು ತಟ್ಟಿದರೆ ಅವರಲ್ಲಿ ಮತ್ತಷ್ಟು ಹೊಸ ಹುರುಪು ಉತ್ಸಾಹ ಚೈತನ್ಯ ಮೂಡಿ ಸಾಧನಾ ಮಾರ್ಗದಲ್ಲಿ ಮುಂದುವರಿಯಲು ಸಾಧ್ಯ ಎಂದೆಲ್ಲಾ ಅನಿಸುವುದಿಲ್ಲವೇ ? 

 ಮಂತ್ರಿ ಮಂಡಲ ರಚಿಸುವಾಗ ಹೊಸಬರಿಗೆ, ಯುವಕರಿಗೆ ಅವಕಾಶ ನೀಡದೆ, ಈ ಹಿಂದೆ 5-6 ಸಾರಿ ಮಂತ್ರಿಗಳಾದವರನ್ನೇ, ನಡೆಯಲು ಶಕ್ತಿ ಆಸಕ್ತಿಯೇ ಇಲ್ಲದಿದ್ದರೂ ಎಡ ಬಲ ಭಾಗಗಳವರ ಭುಜಗಳ ಆಸರೆ ಪಡೆದು ಏದುಸಿರು ಬಿಡುತ್ತಾ ನಡೆಯುವ ಹಿರಿಯರನ್ನೇ ಮತ್ತೆ ಮಂತ್ರಿ ಮಾಡಿದರೆ,ಆಡಳಿತದಲ್ಲಿ ಇವರೇನು ದಿಢೀರ್ ಸುಧಾರಣೆ ತರಬಲ್ಲರು ? ಹೊಸ ಹೊಸ ಕಾರ್ಯಕ್ರಮ ರೂಪಿಸಲು, ಅದನ್ನು ಜಾರಿಗೆ ತರಲು ಇವರಲ್ಲಿ ಹುರುಪು ಉತ್ಸಾಹ ಉಳಿದಿರುತ್ತದೆಯೇ ?

 ಯಾವುದಾದರೂ ಒಂದು ಕಾರಣಕ್ಕೆ, ಯಾರ ಹೆಸರಿನಲ್ಲಾಗಲಿ ಪ್ರಶಸ್ತಿ ಮೇಲೆ ಪ್ರಶಸ್ತಿ ಕೊಡುತ್ತಿದ್ದರೆ ಸ್ವೀಕರಿಸಿದವನಿಗೆ ಅಯ್ಯೋ, ಇದು ಮನೆಯಲ್ಲಿರುವ 10 ರ ಜೊತೆಗೆ 11 ನೆಯದು” ಎಂಬ ನಿರ್ಲಕ್ಷö್ಯ ಭಾವನೆ ಉಂಟುಮಾಡಬಹುದೇ ಹೊರತಾಗಿ ಹೊಸ ಸಂತಸ ಆನಂದ ಮೂಡಿಸಬಲ್ಲದೆ ? ಸಾರ್ವಜನಿಕರ ಎದುರಿನಲ್ಲಿ ಪ್ರಶಸ್ತಿ ಪಡೆದ ‘ನೋಡಿದೆಯಾ ! ನನ್ನ ಸ್ಥಾನಮಾನ, ಅಂತಸ್ತು, ಗೌರವ ಎಷ್ಟು ಉನ್ನತವಾದದ್ದು ! ಎಂದು ಸಾರ್ವಜನಿಕವಾಗಿ ಬೀಗಬಹುದಾದೇ ಹೊರತಾಗಿ ಇವರಲ್ಲಿ ಮತ್ಯಾವ ಹೊಸ ಸಂತಸ ಸಮಾಧಾನ ತೃಪ್ತಿ ಇರಲು ಸಾಧ್ಯ !

 ಇದು ಹೇಗಾಗಬಹುದು ಎಂದರೆ, ಸಾಕಷ್ಟು ಸಿಹಿ ಉಂಡವನ ಕೈಗೆ ಮತ್ತಷ್ಟು ಸಿಹಿ ಇಟ್ಟರೆ ಅವನೆಷ್ಟು ಖುಷಿ ಪಡಬಹುದು ! ಬ್ಯಾಂಕಿನ ಖಾತೆಯಲ್ಲಿ ಲಕ್ಷ ಕೋಟಿ ಹಣ ಕೊಳೆಸುತ್ತಿರುವವನಿಗೆ ಇದು ತಮಗೆ ಪ್ರಶಸ್ತಿ ಏಂದು ಓಂದಿಉ ಶಾಲು ಹೊದಿಸಿ 20, 50 ಸಾವಿರ ಕೊಟ್ಟರೆ ಅವನಿಗೆಷ್ಟು ಖುಷಿಯಾಗಬಲ್ಲದು ! ಉಪಯೋಗವಾಗಬಹುದು ? “ ಈಗಾಗಲೇ ಖರ್ಚುಮಾಡದೆ ಕೊಳೆಯುತ್ತಿರುವ ಹಣದ ಜೊತೆ ಇದೂ ಕೊಳೆಯಲಿ ಎನ್ನಬಹುದೇ ಹೊರತು ಸಂತಸ ಸಿಗುವುದೇ !

 ಇವರ ಜೊತೆಗೆ, ಹೇಳಿಕೊಳ್ಳುವಷ್ಟು ಗಣನೀಯ ಸಾಧನೆ ಮಾಡಿರದಿದ್ದರೂ ಹಲವರು ತಮಗಿರುವ ಯಾವುದಾದರೊಂದು ಬಲ ಪ್ರಯೋಗಿಸಿ ತಾವೂ ಮಹಾನ್ ಸಾಧಕರು ಎಂಬ ಸೋಗಿನಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡವರೂ ಇರುವುದು ವಿಷಾದನೀಯ ಸಂಗತಿ.

 ಮೇಲೆ ಉಲ್ಲಖಿಸಿರುವ ವರ್ಗದವರನ್ನು ಹೊರತು ಪಡಿಸಿದರೆ ಕಾಣುವ ಮೂರನೆಯ ವರ್ಗ ಅಂದರೆ, ತಮ್ಮದೇ ಆದ ರಂಗ, ಕ್ಷೇತ್ರದಲ್ಲಿ ಯಾರ ಮುಲಾಜಿಗೂ ಒಳಗಾಗದೆ, ಹಲವಾರು ವರ್ಷಗಳಿಂದ ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಸತ್ಫಲವನ್ನು ಉಣ್ಣುತ್ತಿರುವ ಸಾಧಕರು, ತಮ್ಮ ಸಾಧನೆಗಾಗಿ ನನಗೆ ಪ್ರಶಸ್ತಿ ಕೊಡಿಸಿ ಎಂದು ಯಾರನ್ನೂ ಪೀಡಿಸದ ಸ್ವಾಭಿಮಾನಿ ಸಾಧಕರು ಅದೆಷ್ಟೋ ಮಂದಿ ಇದ್ದಾರೆ. ಇವರಿಗೆ ಜಾತಿ ಬಲ, ಧನ ಬಲ, ಅಧಿಕಾರದಲ್ಲಿರುವವರ, ರಾಜಕಾರಣಿಗಳ ಬೆಂಬಲ ಇಲ್ಲದ ಕಾರಣ, ಇವರು ಹಸಿದಿದ್ದರೂ ಊಟ ಸಿಕ್ಕಿಲ್ಲ. ಜೀವನದ ಕೊನೆಯ ಅಂಚಿನಲ್ಲಿ ಇರುವ ಇಂತಹವರಿಗೆ ಮೊದಲ ಪ್ರಶಸ್ತಿ ಸನ್ಮಾನ ಗೌರವ ದೊರೆತಾಗ, ಕೊನೆಗೂ ನನ್ನ ಸಾಧನೆ ಕೆಲಸ ಗುರ್ತಿಸಬೇಕಾದವರು ಇಂದಾದರೂ ಗುರ್ತಿಸಿದರಲ್ಲಾ ! ಎಂಬ ಅದೆಷ್ಟು ಸಂತಸ, ಸಮಾಧಾನ ಇವರ ಮುಖದಲ್ಲಿ ಕಾಣಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದಲ್ಲವೇ ! 

 ಮೇಲಿನ ಪ್ಯಾರಾಗಳಲ್ಲಿ ವಿವರಿಸಿರುವ ನಾನಾ ರೀತಿಯ ಉದಾಹರಣೆಗಳ ಕಾರಣ, ಉಂಡವನಿಗೇ ಮೇಲಿಂದ ಮೇಲೆ ಊಟಕ್ಕಿಡುತ್ತಾ ಗುಂಡುಕಲ್ಲಿಗೆ ನಾಮ ಇಡುತ್ತಿದ್ದರೆ ಉಂಡವನಿಗೆ, ನಾಮ ಇಡಿಸಿಕೊಳ್ಳುತ್ತಿರುವ ಗುಂಡುಕಲ್ಲಿಗೆ ಅದೆಷ್ಟು ಸಂತಸ ಆನಂದವಾಗಬಹುದು ! ಊಹಿಸಲಸಾಧ್ಯವೇ ! ? ಯೋಚಿಸಬೇಕಾದವರು ಈ ದಿಸೆಯಲ್ಲಿ ಸಕಾಲದಲ್ಲಿ ಯೋಚಿಸಿ ಕಾರ್ಯ ಪ್ರವೃತ್ತರಾದರೆ ಪ್ರಶಸ್ತಿಗೂ ಅದನ್ನು ಪಡೆದವರಿಗೂ ಗೌರವ ಸಾರ್ಥಕತೆ ಸಲ್ಲಲು ಸಾಧ್ಯ 

Comments

  1. ಪ್ರಶಸ್ತಿಗೆ ವಿಷಯದಲ್ಲಿ ನಿಮ್ಮ ಮಾತು ನಿಜ. ಒಬ್ಬರಿಗೆ ಅವರ ಪ್ರತಿಭೆ, ಪರಿಶ್ರಮಗಳಿಗೆ ಪ್ರಶಸ್ತಿ ಸಿಕ್ಕರೆ,ಹತ್ತಾರು ಸಂಸ್ಥೆಗಳು ನುಗ್ಗಿ ಬಂದು ಪ್ರಶಸ್ತಿ ಕೊಡುತ್ತಾರೆ! ಪ್ರಶಸ್ತಿಗೆ ಯೋಗ್ಯ ಜನರನ್ನು ಹುಡುಕುವುದೂ ಇವರಿಗೆ ಒಂದು ಪರಿಶ್ರಮ.

    ReplyDelete

Post a Comment