ಕೇಟರಿಂಗಿನ ರಿಂಗಿನೊಳಗೆ...
ಹಾಸ್ಯ ಲೇಖನ - ಅಣಕು ರಾಮನಾಥ್
‘ವಿಮೆನ್ಸ್ ಡೇ ದಿವಸ ಒಂದು ಠರಾವು ಹೊರಡಿಸಿದ್ದೇವೆ. ಅದರ ಪ್ರಕಾರ ಮುಂದಿನ ವಾರ ಹತ್ತು ದಿನಗಳ ಟ್ರಿಪ್ ಹೊರಡುತ್ತಿದ್ದೇವೆ’ ಎಂದಳು ಮಡದಿ.
‘ನನಗೆ ಬಿಡುವಿಲ್ಲ’ ಎಂದೆ.
‘ಕೇಳಿದವರ್ಯಾರು? ಇದು ಆಲ್ ವುಮೆನ್ ಟ್ರಿಪ್’ ಎಂದಳು.
‘ನನ್ನ ಊಟ ತಿಂಡಿಯೂ ಟ್ರಿಪ್ (ಮುಗ್ಗರಿಸುವುದು) ಆಗುವುದಲ್ಲಾ...’ ಎಂದೆ.
ಪುರುಷಪ್ರಧಾನ, ದಬ್ಬಾಳಿಕೆ, ಗುಲಾಮ ಹೆಣ್ಣು, ಹರಾಮ ಗಂಡು, ಸೀತೆಯ ಕಣ್ಣೀರು, ಸಹಗಮನ, ವಿತಂತು ವ್ಯಥೆ ಎಲ್ಲ ಪದಗಳೂ ಜಪಾನಿನ ಸುನಾಮಿಯೋಪಾದಿಯಲ್ಲಿ ಕಿವಿಯ ತಮಟೆಯನ್ನು ಅಪ್ಪಳಿಸಿದವು.
ಕೇಳೆನೇ ಸತಿ ತಾಳೆನೇ
ತಾಳ್ಮೆ ಮೇಳೈಸಿದರೂ ಸಮ್ಮತಿಸದ ಗಾನ
ಕೇಳೆನೇ ಸತಿ ತಾಳೆನೇ
ಎಂದು ರಾಗವೆಳೆಯುತ್ತಾ ‘ಈ ಪರಿಸ್ಥಿತಿಗೆ ನೀನೇ ಕಾರಣ. ನಿನ್ನ ಸ್ನೇಹಿತೆಯರಾದ ದಪ್ರೋಟಿ ಡಾಲಿ, ಪೇಸ್ಟುಪ್ಪಿಟ್ ಪದ್ಮಿನಿ, ರಿನಾಸಿರಸ್ ಸ್ಕಿನ್ ಪರೋಟಾ ಪರಿಮಳ, ರೋಟಿಕರಿ ಬದಲು ಕರಿರೋಟಿ ಮಾಡುವ ರಾಗಿಣಿ ಇವರೆಲ್ಲರ ತರಹ ನಿನ್ನ ಕುಕಿಂಗೂ ಇದ್ದಿದ್ದರೆ ನನ್ನ ನಾಲಿಗೆಯೂ ಅದಕ್ಕೇ ಒಗ್ಗಿಹೋಗಿ ನೀನಿಲ್ಲದ ದಿನಗಳಲ್ಲಿ ಅಂಗಳದಲ್ಲಿರುವ ಕೆಮ್ಮಣ್ಣನ್ನೇ ಬಾಯಿಗೆರೆಚಿಕೊಳ್ಳುತ್ತಾ ‘ಇದೇ ರೆಡ್ಡು ರೈಸು; ವೆಲ್ ಬಾಯಿಲ್ಡು ರೈಸು; ಮಡ್ ಟೇಸ್ಟು, ರಾಕ್ ಹಾರ್ಡು ರೈಸು’ ಎಂದು ಹೊಸ ಹಾಡನ್ನು ಗುನುಗುತ್ತಾ ಸಂತೋಷದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಆದರೆ ನೀನು ಅರಮನೆಯ ಕುಕ್ಕುಗಳೂ ನಾಚುವಂಹ ಟೇಸ್ಟಿ ಫುಡ್ಡು ಕೊಟ್ಟು ನಾಲಿಗೆಗೆ ಒಂದು ಸಂಸ್ಕಾರವನ್ನು ಕೊಟ್ಟಿರುವಾಗ ಪಾಪಿ ಪೇಟ್ ಕಾ ಸವಾಲ್ ಹೈ. ಈಗ... ಹತ್ತು ದಿನಗಳು... ನಾನೂ ಬಂದುಬಿಡುತ್ತೇನೆ’ ಎಂದೆ.
‘ಹೊಟೇಲಿಗೆ ಹೋಗಿ.’
‘ಹನುಮಂತನ ಅಪ್ಪನ ತೊಂದರೆ ಇದೆಯಲ್ಲ! ಸೋಡಾವೃತ ತಿನಿಸಿನಿಂದಾಗುವ ವಾಯುಭಾರಕ್ಕೆ ಕೈಕಾಲು ಕುಸಿತ ಆಗುವುದಲ್ಲ!’ ರೋದನೆ ಮುಂದುವರಿಸಿದೆ.
‘ಸ್ವಿಗ್ಗಿ...?’
‘ಇಂದ್ರಭವನದಲ್ಲಿ ದೋಸೆ ಚೆನ್ನಾಗಿರತ್ತೆ, ಚಟ್ನಿ ಬೆಳ್ಳುಳ್ಳಿಮಯ. ಚಂದ್ರಭವನದಲ್ಲಿ ಚಟ್ನಿ ಸೂಪರ್, ದೋಸೆ ಟಾರ್ಪಾಲ್ ಶೀಟ್ ಇದ್ದಹಾಗಿರತ್ತೆ. ಕ್ಷೀರಸಾಗರದ ಉಪ್ಪಿಟ್ಟು ಹರಿಗೇ ಪ್ರೀತಿ. ಕ್ಷಾಮಸಾಗರದ ಪಲಾವ್ ತಿಂದರೆ ಲಕ್ಷ್ಮಿ ಜ್ಯೂಸ್ ಸೆಂಟರಿನದೇ ನೆನಪಾಗತ್ತೆ.’
‘ಯಾಕೆ?’
‘ಅಲ್ಲಿ ರಶ್ಶೋ ರಶ್ಶು. ಒಂದೇ ಸಮಯದಲ್ಲಿ ಮೂರ್ಮೂರು ಮಿಕ್ಸಿಗಳು ರಸೋತ್ಪಾದನೆಯಲ್ಲಿ ನಿರತವಾಗಿರತ್ವೆ. ಕ್ಷಾಮಸಾಗರದ ಪಲಾವ್ ತಿಂದ ಹತ್ತು ನಿಮಿಷದಲ್ಲೇ ನನ್ನ ಹೊಟ್ಟೆಯಲ್ಲಿ ಕನಿಷ್ಠ ಮೂರು ಮಿಕ್ಸಿಗಳು ತಿರುಗುತ್ತಿರುವಂತಹ ಶಬ್ದ ಆರಂಭವಾಗುತ್ತದೆ. ಅಷ್ಟೇ ಬಿರುಸಾಗಿ ತಿರುಗುತ್ತಿರುವ ಅನುಭವವೂ ಆಗತ್ತೆ. ಯಾವ ಚಟ್ನಿ ಯಾವ ಇಡ್ಲಿಗೊ ಯಾವ ಸಾಗು ಯಾವ ಪೂರಿಗೊ ಒಂದು ತಿಳಿಯದಾಗಿದೆ; ಗೊಂದಲಗಳು ಬೆಳೆದಿವೆ...’ ರಾಗವೆಳೆದೆ.
‘ನಿಮ್ಯೋಗ್ಯತೆ ಗೊತ್ತಿಲ್ವಾ ನನಗೆ! ಅರೇಂಜ್ ಮಾಡಿದೀನಿ. ಕೇಟರಿಂಗ್ ವ್ಯವಸ್ಥೆ ಆಗಿದೆ.’
‘ಯಾರು?’
‘ದೇವ್ರೇ ಗತಿ ಕೇಟರರ್ಸ್!’
‘ಹೆಸರು ಕೇಳಿಯೇ ಭಯವಾಗತ್ತಲ್ಲಾ! ಬೇಡವೇ. ನೀನು ಹೇಳಿದಂತೆ ಕೇಳಿಕೊಂಡಿರುತ್ತೇನೆ. ಲಗೇಜ್ ಎತ್ತುತ್ತೇನೆ; ಪುರಾತನ ಕಾಲದ ಲಜ್ಜಾನ್ವಿತ ಲಲನೆಯು ಹೆಬ್ಬೆರಳಿಂದ ನೆಲವನ್ನು ಕೆರೆದಷ್ಟೇ ಸಂತೋಷದಿಂದ ಶಾಪಿಂಗ್ ಸಮಯದಲ್ಲಿ ಕ್ರೆಡಿಟ್ ಕಾರ್ಡನ್ನು ಕೆರೆಕೆರೆದು ನಿನ್ನ ಅಭಿಲಾಷೆಗಳೆಲ್ಲವೂ ಬ್ಯಾಗ್ ಸೇರುವಂತೆ ಮಾಡುತ್ತೇನೆ. ಗೊರಕೆ ಹೊಡೆಯುವುದಿಲ್ಲ...’
‘ಸರಿ. ನಮ್ಮ ಟೀಮಲ್ಲಿ ಸುಷ್ಮಾಳೂ ಇದ್ದಾಳೆ’ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿಬಿಟ್ಟಳು ಮಡದಿ.
ಸುಷ್ಮಾ ಹುಟ್ಟುವಾಗಲೇ ಅವಳ ಕಂಠದಲ್ಲಿ ಲೌಡ್ ಸ್ಪೀಕರನ್ನು ಅಳವಡಿಸಿಕೊಂಡು ಹುಟ್ಟಿದವಳು. ಅವಳು ಪಿಸುಗುಟ್ಟಿದರೆ ಮೂಲೆಯ ಅಂಗಡಿಗೆ ಕೇಳಿಸುತ್ತದೆ. ಪರ್ಮನೆಂಟ್ ಕಾಲ್ಕೆರೆತ ಇರುವ ಇವಳು ಬ್ರಿಟನ್ನಿಗಿಂತಲೂ ಹೆಚ್ಚು ಕದನಗಳನ್ನು ಕಾದಿರುವವಳು. ಇತರರ ಮೇಲೆ ಮುಲಾಜಿಲ್ಲದೆ ತೆರಿಗೆ ಹೊರಿಸುವುದರಲ್ಲಿ ಟ್ರಂಪಿಗೂ ಪಾಠ ಹೇಳಿಕೊಡಬಲ್ಲವಳು. ಅವಳು ಎಣ್ಣೆ; ನಾನು ಸೀಗೇಕಾಯಿ.
‘My sympathies lie with you. ಪ್ರವಾಸವಿಚ್ಛೇದನಕ್ಕೆ ನನ್ನ ಸಮ್ಮತಿಯಿದೆ’
ಮಡದಿ ಹೊರಟಳು. ಮರುದಿನ ಬೆಳಗ್ಗೆ ಮೂರು ವರ್ಷದ ಮಗುವಿನಷ್ಟು ಎತ್ತರದ ಕ್ಯಾರಿಯರೊಂದನ್ನು ಹೊತ್ತ ಭೋಜನಧಾರಿ ಪ್ರತ್ಯಕ್ಷನಾಗಿ ‘ಚಪಾತಿ, ಅನ್ನ, ಹುರುಳಿಕಾಯಿ ಪಲ್ಯ, ತರಕಾರಿ ಹುಳಿ’ ಎಂದು ಅನೌನ್ಸಿಸಿ, ಕ್ಯಾರಿಯರನ್ನು ಕುಕ್ಕಿದ.
‘ಎಲ್ಲವೂ ಬೆಳಗ್ಗೆಯೇ ಕೊಟ್ಟುಬಿಡುವಿರೆ? ರಾತ್ರಿಗೆ?’
‘ಬಿಸಿ ಮಾಡ್ಕೊಳಿ!’
ರೌಡಿ ರಂಗಣ್ಣನ ತುಂಡಿನಂತಿರುವ ಅವನೊಡನೆ ವಾದ ಮಾಡಿದರೆ ಅವನೇ ಕೊಟ್ಟ ಚಪಾತಿಯನ್ನು ಅಗಿಯಲು ದವಡೆಹಲ್ಲು ಉಳಿದೀತೋ ಇಲ್ಲವೋ ಎಂಬ ಆಲೋಚನೆ ಮೂಡಿ ಸಮ್ಮತಿಪೂರ್ವಕ ಗೋಣುಚಲನೆ ಮಾಡಿದೆ. ರಾತ್ರಿಯ ಹೊತ್ತಿಗೆ BC (Before Christ) ಕಾಲದ್ದೇನೋ ಅನ್ನುವಷ್ಟು ತಣ್ಣಗಾಗಿರುವುದನ್ನು ಬಿಸಿ ಮಾಡಿಕೊಳ್ಳಲೇಬೇಕಲ್ಲ!
ರಂಗಣ್ಣ ಹೊರಬಿದ್ದ. ಕ್ಯಾರಿಯರ್ ತೆಗೆದು ಚಪಾತಿಗಳನ್ನು ನನ್ನ ತಟ್ಟೆಗೆ ಹಾಕಿಕೊಳ್ಳುವಾಗ ಠಣ್ ಎಂಬ ಸದ್ದು ಮೂಡಿತು. ‘very sound taste’ ಎಂದು ಕೇಟರರನ ವೆಬ್‍ಸೈಟಲ್ಲಿ ಬರೆದಿದ್ದು ನಿಜವೆನಿಸಿತು.
ತಟ್ಟೆಯಲ್ಲಿದ್ದ ಚಪಾತಿಗಳನ್ನು ಬೇರ್ಪಡಿಸಿ ಒಂದೊಂದಾಗಿ ತಿನ್ನಲು ನಿರ್ಧರಿಸಿ ಚಪಾತಿಯೊಂದನ್ನು ಮೇಲೆತ್ತಿದೆ. ‘ಎಂದೆಂದಿಗೂ ನಾ ನಿನ್ನನೂ ಬಿಡಲಾರೆನೂ ಊಊಊ’ ಎನ್ನುವ ರೀತಿಯಲ್ಲಿ ಮತ್ತೊಂದು ಚಪಾತಿಯೂ ಮೇಲೆದ್ದಿತು. ಗುಡ್ ಓಲ್ಡ್ ಫಿಲ್ಮ್‍ಗಳಲ್ಲಿನ ಪ್ರೇಮಿಗಳನ್ನು ಬೇರ್ಪಡಿಸಲೇಬೇಕೆಂಬ ತೀರ್ಮಾನದ ವಿಲನ್ ಕಮ್ ಫಾದರ್‍ನಂತೆ ಚಪಾತಿಗಳನ್ನು ಬೇರ್ಪಡಿಸಿದೆ. ಬೇರ್ಪಡುವಾಗ ಚಪಾತಿಗಳು ಬೇರ್ಪಡುವುದನ್ನು ಶಂಕರಾಭರಣ ಚಿತ್ರದ ಹಾಡೊಂದರ ಸಾಲಾದ ‘ನಾರದ ನೀರದ ಮಹತಿ ನಿನಾದ’ವೇ ಸರಿಯಾಗಿ ವರ್ಣಿಸಲು ಸಾಧ್ಯ. ಚಪಾತಿಗಳು ನಾರಿನಿಂದ ಕೂಡಿದಂತೆ ಎಳೆಎಳೆಯಾಗಿ ಬೇರ್ಪಡುತ್ತಿದ್ದವು. ಬೇರ್ಪಡುತ್ತಿದ್ದ ಜಾಗದಲ್ಲಿ ಸರಿಯಾಗಿ ಬೇಯದ ಕಾರಣ, ಉತ್ತರಕರ್ನಾಟಕದವರು ‘ನೀರಿದೆ’ ಎನ್ನಲು ಹೇಳುವ ‘ನೀರದ’ವೂ, ‘ಬೇರ್ಪಟ್ಟು ತಟ್ಟೆಗೆ ಬಿದ್ದಾಗ ಠಣ್ಣೆಂಬ ಮಹತ್ತರ ಸದ್ದೂ ಉಂಟಾಗಿ ಆ ಹಾಡಿನ ‘ಮಹತಿ ನಿನಾದ’ ಪದಪುಂಜಕ್ಕೆ ನ್ಯಾಯ ಒದಗಿಸಿದವು. ಮಡದಿಯ ಕು-ಕುಕ್ಕುಗಳ ಸಾಲಿನವರಾರೂ ಒಂದೆಡೆ ಬೇಯದ, ಒಂದೆಡೆ ಸೀದಿರುವ ಚಪಾತಿಯನ್ನು ಮಾಡಿರಲಿಲ್ಲ. ‘ಕರಿಬಿಳಿ ಸಮಸಮ’ ಎಂಬ ಆಫ್ರಿಕದ anti apartheid movementಗೆ ಈ ಚಪಾತಿಯನ್ನು ಲಾಂಛನವಾಗಿ ಬಳಸಬಹುದಾಗಿತ್ತು!
ಕಪ್ಪಟಕರಿಯ ಭಾಗಗಳನ್ನು ಕಿತ್ತೆಸೆದು, super ಹಿಟ್ ಭಾಗವನ್ನು ಬಳಿದು ತೆಗೆದು, ಉಳಿಕೆ ಚಪಾತಿಯನ್ನು ಮುರಿದು ಹುರುಳಿಕಾಯಿ ಪಲ್ಯದೊಡನೆ ಬಾಯಿಗಿರಿಸಿಕೊಂಡೆ. ‘ನಾರು ತಿನ್ನಬೇಕು. ಫೈಬರ್ ಕಂಟೆಂಟ್ ನಮ್ಮ ದೇಹಕ್ಕೆ ಬೇಕು’ ಎನ್ನುವ ವೈದ್ಯರು ಈ ಪಲ್ಯದ ಫೋಟೋ ತೆಗೆದು ಇಟ್ಟುಕೊಳ್ಳಬೇಕಿತ್ತು ಎಂದು ನನ್ನ ಬಾಯೊಳಗಿನ ಹಲ್ಲುಗಳ ನಡುವಿನ ಪ್ರತಿ ಸಂದಿಯೂ ಕೂಗಿ ಹೇಳಿತು. ಹುರುಳಿಯ ಹೋಳುಗಳು ಕಿಶೋರ್‍ಕುಮಾರನ ‘ತುಮ್ ಬಿನ್ ಜಾವೂ ಕಹಾ’ ಹಾಡಿಗೆ ಹೊಂದುವಂತೆ ಒಂದಕ್ಕೊಂದು ತೆಕ್ಕೆ ಹಾಕಿಕೊಂಡವು. ಅಂತಹ ತೆಕ್ಕೆಸೇನೆಯನ್ನು ಒಳಬಿಡಲಾರೆನೆಂದು ಎಪಿಗ್ಲಾಟಿಸ್ ಪ್ರತಿಭಟಿಸಿತು, ಲ್ಯಾರಿಂಕ್ಸ್ ಗುರುಗುಟ್ಟಿತು. ಹೀಗೆ ತಿರಸ್ಕರಿಸಲ್ಪಟ್ಟ ನಾರು-ಚಪಾತಿಯುಂಡೆಯು ವಿಧಾನಸೌಧದಲ್ಲಿ ಸಭಾತ್ಯಾಗ ಮಾಡುವ ಭಿನ್ನಮತೀಯನ ರೀತಿಯಲ್ಲಿ ತುಟಿಗಳತ್ತ ನುಗ್ಗಿತು. ಕೋವಿಡ್ ಸಮಯದಲ್ಲಿ ಕ್ವಾರಂಟೈನ್ ಆದವರ ಮನೆಯ ಬಾಗಲಿನಷ್ಟು ಭದ್ರವಾಗಿ ತುಟಿಗಳು ಮುಚ್ಚಿಕೊಂಡಿದ್ದರಿಂದ ಮತ್ತೆ ಎಪಿಗ್ಲಾಟಿಸ್ಸಿನತ್ತ ನುಗ್ಗಿದವು. ರೆಸಾರ್ಟ್ ರಾಜಕೀಯದಲ್ಲಿ ಭಿನ್ನಮತೀಯರನ್ನು ಮನಸ್ಸಿಲ್ಲದ ಮನಸ್ಸಿನಿಂದ ಒಳಸೇರಿಸಿಕೊಳ್ಳುವಂತೆ ಅನ್ನನಾಳವು ಖಾದ್ಯತುತ್ತನ್ನು ಒಳಸೇರಿಸಿಕೊಂಡು ಉದರದತ್ತ ತಳ್ಳಿತು.
‘ಖೀರಿಳಿಯದ ಗಂಟಲೊಳ್ ಬೀರ್ ಇಳಿಯುವುದು ಮದ್ಯಜ್ಞ’ ಎಂಬ ಮಾತು ನೆನಪಾಗಿ, ಮೊದಲು ಬಾಯಿಗೆ ಅಷ್ಟು ನೀರು ಸುರಿದುಕೊಂಡು, ಇಷ್ಟಿಷ್ಟೇ ನಾರು-ಚಪಾತಿಗಳ ತುಣುಕುಗಳನ್ನು ಆ ನೀರಿನ ಮೇಲೆ ದೋಣಿಯ ರೀತಿಯಲ್ಲಿ ಬಿಟ್ಟು ಕುಕ್ಷಿದಡವನ್ನು ಸೇರಿಸತೊಡಗಿದೆ. ಹಾಗೂ ಹೀಗೂ ಬೆಳಗಿನ ಉಪಾಹಾರವನ್ನು (ಲವಣಶ್ರೀಮಂತಿಕೆ ಇದ್ದುದರಿಂದ ಅದು ಉಪ್ಪಾಹಾರವೂ ಹೌದು) ಮುಗಿಸಿದೆ.
ಮಧ್ಯಾಹ್ನದ ಭೋಜನಕ್ಕೆಂದು ಅನ್ನ, ತರಕಾರಿ ಹುಳಿಯ ಬಟ್ಟಲುಗಳನ್ನು ತೆರೆದೆ. ರಾಮೋತ್ಸವದ ಸಮಯದಲ್ಲಿ ಶ್ರೀರಾಮನ ತ್ರಿಕೋಣಾಕಾರದ ಬಂಟಿಂಗ್‍ಗಳನ್ನು ಅಂಟಿಸಲು ಬಳಸುತ್ತಿದ್ದ ಗೋಂದಿನಂತಿದ್ದ ಅನ್ನ, ತರಕಾರಿಗೆ ತಿಲಾಂಜಲಿ ಇತ್ತು ದೂರವಾದಂತೆ ಕಾಣುವ ಕೆಂಪನೆಯ ದ್ರವಗಳು ಕಂಡುಬಂದವು. ‘Do not judge a book by its cover’ ಎಂಬ ಜಾಣ್ನುಡಿಯು ನೆನಪಾಗಿ, ಹೋಳುಗಳನ್ನು ಒಂದೊಂದಾಗಿ ಹೆಕ್ಕಿ, ಅವುಗಳ ಸುತ್ತಲೂ ಅನ್ನವನ್ನು ವರ್ತುಲಾಕಾರವಾಗಿ ಮೆತ್ತಿ ತುತ್ತುಗಳಾಗಿ ಪರಿವರ್ತಿಸಿ ಯಥಾಪೂರ್ವಾಹ್ನ ಅನ್ನನಾಳ-ಅಧರಗಳ ಪೈಪೋಟಿ ನಡೆಸಿ ಮಧ್ಯಪ್ರದೇಶಕ್ಕೆ ತಲುಪಿಸಿದೆ. ಗಂಟಲು ಹಿಡಿದಂತೆ ಆದಾಗಲೆಲ್ಲ ಎಂಜಿನ್ ಲ್ಯೂಬ್ರಿಕೆಂಟಿನಂತೆ ನೀರನ್ನು ಸುರಿದುಕೊಂಡೆ.
ಚಪಾತಿ, ಪಲ್ಯ, ತರಕಾರಿಯ ಹುಳಿ, ಅನ್ನಗಳೇ ಈ ಮಟ್ಟಿಗೆ ತೊಂದರೆ ಕೊಟ್ಟಿರುವಾಗ ಈ ಕೇಟರಿಂಗವನು ನಾಳೆ ರೊಟ್ಟಿಯೊಡನೆ ಸೊಪ್ಪಿನ ಪಲ್ಯವನ್ನು ತಿಂಡಿಗೂ, ಬಿಸಿಬೇಳೆ ಬಾತ್ ಮತ್ತು ಆಂಬೊಡೆಯನ್ನು ಊಟಕ್ಕೂ ಕೊಡುವೆನೆಂದು ಹೆದರಿಸಿದ್ದಾನೆ.
‘ಸುಷ್ಮಾ ಇದ್ದರೂ ಪರವಾಯಿಲ್ಲ. ಕಿವಿಗೆ ಇಯರ್‍ಫೋನ್ ಸಿಕ್ಕಿಸಿಕೊಂಡಿರುತ್ತೇನೆ. ನೀನು ಅಗಲಗಣ್ಣು ಬಿಟ್ಟಾಗಷ್ಟೇ ತೆಗೆದು ನಿನ್ನ ಮಾತನ್ನು ಕೇಳಿಸಿಕೊಳ್ಳುತ್ತೇನೆ, ಅದರಂತೆ ನಡೆಯುತ್ತೇನೆ. ಕರೆದುಕೋ ನನ್ನನ್ನು’ ಎಂದು ವಾಟ್ಸಪ್ಪಿಸಿದ್ದೇನೆ.
ಹಣೆಯಲ್ಲಿ ‘ಭೋಜನಪ್ರಯಾಸ’ ಎಂದಿದೆಯೋ ‘ಮುಜುಗರಪ್ರವಾಸ’ ಎಂದಿದೆಯೋ ನಾಳೆ ತೀರ್ಮಾನವಾಗಲಿದೆ.
Comments
Post a Comment