ಹೆಣ್ಣೆಂಬ ನರಸುರಾಸುರ ವಿಸ್ಮಯ

 ಹೆಣ್ಣೆಂಬ ನರಸುರಾಸುರ ವಿಸ್ಮಯ

ಹಾಸ್ಯ ಲೇಖನ - ಅಣಕು ರಾಮನಾಥ್

ಪರಮಪೂರ್ಣತೆಯೆ ಕೋಮಲತೆಯೊಡಗೂಡಿ

ಸೌಂದರ್ಯರೂಪದಿಂದಿಳೆಗೆ ಬರಲದೆ ಹೆಣ್ಣು

ಎಂದರು ಕುವೆಂಪು. ಬಿತ್ತರದಾಗಸದಲ್ಲಿ ಹಾರುವ ಪಕ್ಷಿಗಳಂದದಿ ದೇವನು ರುಜು ಮಾಡಿದುದನ್ನೇ ಪರವಶರಾಗಿ ನೋಡುತ್ತಿದ್ದ ಕವಿಗಳು ಸ್ತ್ರೀಯ ಸೌಂದರ್ಯವನ್ನು ಬಣ್ಣಿಸುವ ವಾಕ್ಕುಗಳಿಗೆ ವಶವಾಗುವುದು ಸಹಜವೇ. ‘ಕವಿಗಳು ಹೆಣ್ಣನ್ನೇ ಏಕೆ ಹೆಚ್ಚು ವರ್ಣಿಸುವರು?’ ಎನ್ನುವುದಕ್ಕೆ ‘ಕ-ಕನ್ಯೆಯನ್ನು; ವ-ವರ್ಣಿಸುವವನೇ ಕವಿ’ ಎಂಬ ವಿವರಣೆಯೇ ಸೂಕ್ತವಿದ್ದೀತು!

“ನಿನ್ನ ಮಾತು ಜಗದ ಅನೇಕ ವಾದಗಳಂತೆ ಅರ್ಧಸತ್ಯ” ಎಂದ ಸೀನು.

“ಅರ್ಧದಷ್ಟು ಹೆಣ್ಣುಗಳಷ್ಟೇ ವರ್ಣನೆಗೆ ಅರ್ಹರಾದ ಸುಂದರಿಯರು ಎನ್ನುವೆಯಾ?” ಎಂದೆ.

“ಅಲ್ಲ. ಕವಿಗಳು ಕನ್ಯೆಯನ್ನು ವರ್ಣಿಸುವವರು ಎನ್ನುವುದು ಅರ್ಧಸತ್ಯವೆಂದೆ. ಇನ್ನರ್ಧ ಕವಿಗುಂಪು ವಿವಾಹಿತೆಯನ್ನೂ ವರ್ಣಿಸುತ್ತದೆ. ಯಶೋಧರ ಚರಿತೆಯಲ್ಲಿ ಅಷ್ಟವಂಕನ ತೆಕ್ಕೆಯಲ್ಲಿದ್ದ ಅಮೃತಮತಿಯ ವರ್ಣನೆಯೇ ಇದಕ್ಕೆ ಸಾಕ್ಷಿ.”


“ಅದೊಂದು ಅಪವಾದ ಇದ್ದೀತು...”

“ಅಹಲ್ಯೆ-ಇಂದ್ರರು? “ಕಲ್ಲಾಗು ಹಾದಿಯಲಿ; ಮನವ ಮುರಿದಿಹೆ ನೀನು; ಸೊಲ್ಲಾಗು ವಲ್ಮೀಕಕವಿ ಕಾವ್ಯದಲ್ಲಿ; ಎಲ್ಲ ಪೆಣ್ಗಳಿಗೊಂದು ಮಾದರಿಯು ನೀನಾದೆ; ವಲ್ಲೀಶ ಪಾದದೊಳ್ ವರ ಹೊಂದಹಲ್ಯೆ” ಎಂದು ಗೌತಮರು ನುಡಿದುದೇ ಮಂಕುತಿಮ್ಮನ ಕಗ್ಗಕ್ಕೆ ಪ್ರೇರಕವೆಂದು ಸುಖ್ಯಾತ ಕವಿ ಬುರುಡಪ್ಪನವರು ತಮ್ಮ ‘ಸಟೆಕಾವ್ಯಮಂ ಜರಿ’ ಪುಸ್ತಕದಲ್ಲಿ ಬರೆದಿರುವರಂತೆ. ಪರಸ್ತ್ರೀಯ ವರ್ಣನೆ ಅಂದಿಗೇ ನಿಂತಿಲ್ಲ. ಇಂದಿನ ಹಾದಿರೋಮಿಯೋಗಳೂ “ಆಂಟಿ ಎಂಥ ಬ್ಯೂಟಿ! ನಡಿಗೆಯಂತೂ ಕ್ಯಾಟಿ; ಟಾಕು ಲುಕ್ಕು ಎಲ್ಲದ್ರಲ್ಲು ಕ್ಯೂಟಿ ತುಂಬಾ ನಾಟಿ” ಎನ್ನುವುದಲ್ಲದೆ ‘ಚೌದವೀ ಕಾ ಚಾಂದ್ ಹೋ” ಎನ್ನುತ್ತಾ ಫಾಲೋ ಮಾಡುತ್ತಾರೆ” ಎಂದ ಸೀನು.


‘ಅಮ್ಮಾ ಎಂದರೆ ಏನೋ ಹರುಷವೂ...’ ಎಂದು ಮಕ್ಕಳು ತಾಯಿಯನ್ನು ಪೊಗಳುವುದು ಸರಿಯೇ. ಆದರೆ ಅಪ್ಪ? ‘ಸುಂದರಿ ಸುಮಧುರೆ ಶಿಕ್ಷಿತೆ ಸಂಪನ್ನೆ ಎಂದರೆ ಅವಳೇ ಪರಪತ್ನಿ’ ಎನ್ನುವ ಅಪ್ಪಂದಿರೇ ಹೆಚ್ಚು. ಅಮ್ಮ ಅತ್ತೆಯಾಗಿ ಬದಲಾಗುವುದು ಕಂಬಳಿಹುಳವು ಚಿಟ್ಟೆಯಾಗಿ ಬದಲಾಗುವುದರ ಉಲ್ಟಾ ಪ್ರೋಸೆಸ್ ಎನಿಸುತ್ತದೆ. ಅಂತಹ ಸುಂದರ ವರ್ಣಗಳನ್ನು ಕಲ್ಪನೆಗೆ ದೊರಕಿಸುವ ಚಿಟ್ಟೆಯಂತಹ ಲವಲವಿಕೆಯ ಚೆಲುವೆಯಾದ ಅಮ್ಮನು ಸೋಕಿದರೆ ಉರಿ, ನೋವುಗಳನ್ನು ಉಂಟಾಗಿಸುವ ಕಂಬಳಿಹುಳದಂತಹ ಅತ್ತೆಯಾಗಿ ಮಾರ್ಪಾಡಾಗುವ ಪರಿಯೇ ಅಚ್ಚರಿ, ಗಾಬರಿಗಳನ್ನು ಮೂಡಿಸುತ್ತದೆ. “All mothers are good; how did these mothers-in-law crop up?” ಎಂದು ಆಂಗ್ಲಕವಿಯೊಬ್ಬನು ವಿಸ್ಮಯಗೊಂಡಿದ್ದಾನೆ.


ಅತ್ತೆ-ಸೊಸೆಯರ ಸಮರಸದ ಜೀವನಕ್ಕೆ ಉದಾಹರಣೆಗಳು ದೊರಕುವುದಕ್ಕಿಂತ ಸಮರದ ಜೀವನದ ನಡೆಸಿರುವ ಉದಾಹರಣೆಗಳೇ ಹೆಚ್ಚು. “ಸೀತೆಯು ರಾಮನೊಡನೆ ವನವಾಸಕ್ಕೆ ತೆರಳಿದ್ದಕ್ಕೆ ಪತಿಭಕ್ತಿಯೊಂದೇ ಕಾರಣವಲ್ಲ. ಮೂವರು ಅತ್ತೆಯರು, ಮೂವರು ಓರಗಿತ್ತಿಯರೊಡನೆ ಗಂಡನೂ ಇಲ್ಲದ ದಿನಗಳನ್ನು ಎದುರಿಸುವುದು ವನವಾಸಕ್ಕಿಂತ ಘೋರವಾದುದು ಎಂದು ಸೀತೆ ಮನಗಂಡಳು” ಎಂದು ವಾದಿಸುವವರೂ ಇದ್ದಾರೆ. ಸೊಸೆಯರ ಕಾಟಕ್ಕೆ ಅತ್ತೆ-ಮಾವರು ನಲುಗುವುದೂ ಉಂಟು.

‘ಸೊಸೆಯ ಕಾಟ ತಾಳಲಾರದೆ ಅತ್ತೆಯು ಕಾಶಿಗೆ ಹೋದರೆ ಮಾವ?’ ಎಂದೊಬ್ಬರು ಪ್ರಶ್ನಿಸಿದ್ದರು.

‘ಅತ್ತೆಯು ಇಲ್ಲದ ದಿನಗಳ ಸಂಭ್ರಮವನ್ನು ಪಟಾಕಿ ಹೊಡೆದು ಆಚರಿಸಲು ಶಿವಕಾಶಿಗೆ!’ ಎನ್ನುವುದೇ ಅದಕ್ಕೆ ಉತ್ತರ.


“ಅಮ್ಮ ಎನ್ನುವುದು ಕರುಳಿನ ಭಾಷೆ” ಎಂದ ಅನೇಕ ಕವಿಗಳಿದ್ದಾರೆ. ಆದರೆ ಚೈನ್ ಸ್ಮೋಕರ್ ಚಿನ್ನಪ್ಪನು ಇದನ್ನು ಒಪ್ಪುವುದೇ ಇಲ್ಲ. ‘ಸಿಗರೇಟ್ ಸೇದಿ ಬಾಯಿ ಒಣಗಿ ಬಹಳ ಹೊತ್ತು ಮಾತಾಡದಿರುವಾಗ ತುಟಿಗಳು ಬ್ಯಾಂಕ್ ಲಾಕರ್‍ಗಳಂತೆ ಸೀಲ್ ಆಗಿರುತ್ತವೆ. ಮಾತಿಗೆಂದು ತುಟಿ ಬಿಡಿಸಿಕೊಳ್ಳುವಾಗ ಮಕಾರವು ತಂತಾನೇ ಹೊರಡುತ್ತದೆ. ಮಗುವೂ ಬಹಳ ಸಮಯ ಹಾಲು ಕುಡಿಯದೆ ಮಲಗಿದ್ದು, ಎದ್ದಾಗ ಒಣಗುಬಾಯಿ, ಭದ್ರತುಟಿಗಳಿಂದ ಬಲವಂತವಾಗಿ ಹೊರಹಾಕುವ ಸದ್ದೇ ಮಾ ಎನ್ನುವುದು. ಅದನ್ನು ಕವಿಗಳು ಗ್ಲೋರಿಫೈಯಿಸಿದ್ದಾರೆ” ಎಂದ ಚಿನ್ನಪ್ಪನು ‘ಅರಸಿಕ; ಸಂಪ್ರದಾಯಗೇಡಿ, ಅಮ್ಮದ್ವೇಷಿ’ ಮೊದಲಾದ ಬಿರುದುಗಳಿಗೆ ಭಾಜನನಾಗಿದ್ದಾನೆ.


‘ಅಮ್ಮ’ ಪದದ ಪರ್ಯಾಯ ಪದವಾದ ತಾಯಿ ಎನ್ನುವುದಂತೂ ಕರ್ನಾಟಕ-ಆಂಧ್ರ ರಾಜ್ಯಗಳ ಗಡಿಪ್ರದೇಶದಲ್ಲಿಯೇ ಹುಟ್ಟಿರಬೇಕೆಂಬುದು ನನ್ನ ವಾದ. ಮಕ್ಕಳು ಪ್ರಾಣಿಗಳು ಮಾಡುವ ಸದ್ದುಗಳಿಂದಲೇ ಹಸುವನ್ನು ‘ಅಂಬಾ’ ಎಂದೂ, ನಾಯಿಯನ್ನು ‘ಬೌಬೌ’ ಎಂದೂ ಗುರುತಿಸುವುದು. ಅಂತೆಯೇ ಈ ಪ್ರಸಂಗ: ಆಂಧ್ರದ ಗಡಿಯ ಒಂದು ಹಳ್ಳಿ. ಮಗುವು ಮೊಗಸಾಲೆಯಲ್ಲಿ ಆಡುತ್ತಿತ್ತು. ಹೆಂಡತಿಯು ಅಡುಗೆಮನೆಯಿಂದ ಹೊರಬಂದು ‘ಮ್ಯಾಚ್‍ಬಾಕ್ಸ್ ಆಗ್ಹೋಗಿದೆ. ತಾ’ ಎಂದಳು. ಗಂಡ ಅಂಗಡಿಗೆ ಹೋಗಿ ಕಡ್ಡಿಪೆಟ್ಟಿಗೆಯನ್ನು ತಂದು ಮೊಗಸಾಲೆಯಿಂದಲೇ ‘ತಂದೆ’ ಎಂದ. ಹೀಗೆಯೇ ಹೆಂಡತಿಯು ಆಗಾಗ್ಗೆ ಹೊರಬಂದು ‘ತಾ’ ಅಥವಾ ‘ಈ’(ತೆಲುಗಿನಲ್ಲಿ ಕೊಡು ಎಂದರ್ಥ)  ಎನ್ನುವುದು, ಗಂಡನು ‘ತಂದೆ’ಎನ್ನುವುದನ್ನು ಗಮನಿಸಿದ ಮಗುವು ಅವಳನ್ನು ‘ತಾಈ’ ಎಂದೂ, ಅವನನ್ನು ‘ತಂದೆ’ ಎಂದೂ ಗುರುತಿಸಿತು ಎಂಬುದು ನನ್ನ ಅನಿಸಿಕೆ.


ಹೆಣ್ಣನ್ನು ಸಂಬೋಧಿಸುವ ವಿವಿಧ ಪದಗಳತ್ತ ಗಮನ ಹರಿಸೋಣ. ಸಂಸ್ಕೃತದಲ್ಲಿ ಹೆಣ್ಣನ್ನು ಸೂಚಿಸಲು ಹೆಚ್ಚಾಗಿ ಬಳಸುವ ಪದ ‘ಸ್ತ್ರೀ’. ಸಕಾರವು ಆರಂಭದಲ್ಲೇ ಇರುವ ಹೆಸರುಗಳು ಅನೇಕರ ನಾಲಿಗೆಗೆ ದೊಡ್ಡ ಚಾಲೆಂಜ್ ಆಗಿ ಪರಿಣಮಿಸುತ್ತವೆ. ಫೋಟೋಗ್ರಾಫರೊಬ್ಬನು ಮುಂದೆ ನಿಂತ ಚಿತ್ರಾರ್ಥಿಗಳಿಗೆ ‘ಸ್ಮೈಲ್’ ಎನ್ನುವ ಬದಲು ‘ಇಸ್ಮೈಲ್’ ಎನ್ನುತ್ತಿದ್ದನಂತೆ. ಇಸ್ಮೈಲ್ ಎಂಬ ಹೆಸರಿನವನೇ ಫೋಟೋ ತೆಗೆಸಿಕೊಳ್ಳಲು ಬಂದಾಗ ಅವನಿಗೆ ಕೊಟ್ಟ ರಸೀದಿಯಲ್ಲಿ ಸ್ಮೈಲ್ ಎಂದು ಬರೆದುಕೊಟ್ಟಿದ್ದನಂತೆ. ಅಂತಹ ವ್ಯಕ್ತಿಗಳ ಬಾಯಲ್ಲಿ ಸ್ತ್ರೀಯು ಇಸ್ತ್ರೀ ಆಗಿ ಬದಲಾಗುತ್ತಾಳೆ. “ಸ್ತ್ರೀಗೂ, ಇಸ್ತ್ರೀಗೂ ಏನು ವ್ಯತ್ಯಾಸ?” ಎಂದೇ ಒಬ್ಬರು ನನ್ನನ್ನು ಪ್ರಶ್ನಿಸಿದ್ದರು. “ಇಸ್ತ್ರೀ ಇಲ್ಲದಿದ್ದರೆ ಬಟ್ಟೆಗಳು ಮುದುಡುತ್ತವೆ. ಸ್ತ್ರೀ ಇಲ್ಲದಿದ್ದರೆ ಮನವು ಮುದುಡುತ್ತದೆ” ಎಂದಿದ್ದೆ.


ಪ್ರಪಂಚದ ಯಾವುದೇ ಭಾಗದಲ್ಲಿ ಇಬ್ಬರು ಪುರುಷರು ಸಂಧಿಸಿದಾಗ “Bah! Women!” ಎಂದುಬಿಟ್ಟರೆ ಸಾಕು, ಗಾಢ ಸ್ನೇಹಿತರಾಗಿಬಿಡುವರಂತೆ. ಹೆಣ್ಣು ಎಂದರೆ ಸುಲಿಗೆ, ತಕರಾರು, ರಗಳೆ ಎನ್ನುವುದು ಅವರ ಮಾತುಗಳ ಮೂಲಧ್ವನಿಯಾಗಿರುತ್ತದೆ. ಸ್ತ್ರೀ ಎನ್ನುವುದರಲ್ಲೇ ಸ-ಸುಲಿಗೆ; ತ-ತಕರಾರು; ರ-ರಗಳೆ ಇರುವುದೆಂದೂ ಅವರು ವಾದಿಸಬಲ್ಲರಂತೆ. ಕವಿಹೃದಯಗಳು ಸ ಎಂದರೆ ಸೊಬಗು, ಸಲಿಗೆ, ಸಲ್ಲಾಪ ಎಂದೂ, ತ ಎಂದರೆ ತನ್ಮಯತೆ, ತರುಭ್ರಮಣ(ಮರ ಸುತ್ತುವಿಕೆ ಹಾಡುವುದರ ಅವಿಭಾಜ್ಯ ಅಂಗವೆಂದು ಚಲನಚಿತ್ರಗಳು ತೋರಿಸಿವೆಯಲ್ಲ!) ತಣ್ಪು ಎಂದೂ, ರ ಎಂದರೆ ರಮಣೀಯತೆ ಎಂದೂ ವರ್ಣಿಸುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ‘ಸಮಯ ರಸಮಯವಾಗಬೇಕಾದರೆ ರಮಣಿ ರಮಣೀಯವಾಗಿರಬೇಕು’ ಅಲ್ಲವೇ!


ಹೆಣ್ಣು ಗಂಡಿನ ಮೇಲೆ ಬೀರುವ ಪರಿಣಾಮವು ಅದ್ಭುತವಾದುದು. ಒಬ್ಬನು ‘ಚೆಲುವೆಯೇ ನಿನ್ನ ನೋಡಲು; ಮಾತುಗಳು ಬರದವನು; ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು’ ಎಂದು ಹಾಡಿದರೆ ‘I was tongue-tied by her beauty’ ಎನ್ನುವ ಕವಿಯೂ ಇದ್ದಾನೆ. ಸಿಸಿಲಿಯಲ್ಲಿ ಸುಂದರಿಯನ್ನು ಕಂಡು ಮೂಕವಿಸ್ಮಿತನಾದವನನ್ನು ‘He is hit by a bombshell’ ಎನ್ನುವರಂತೆ. ಸುರಸುಂದರಿಯನ್ನು ಕಂಡಾಗ ‘ಹಾಡುವ ನೋಡಿ ಅಂದವನು’ ಎನ್ನುವುದು ಸರಿ; ಶೂರ್ಪನಖಿಯ ಒರಿಜಿನಲ್ ರೂಪದ ಅಪರಾವತಾರವಾದರೆ? ‘ಹಾಡುವನೋಡಿ ಅಂದವನು’ ಎನ್ನುವರಂತೆ. ದೂರ ಓಡಿಹೋಗಿ ನಿಂತು ಭೀಕರತೆಯನ್ನು ವರ್ಣಿಸುವ ಪರಿಸ್ಥಿತಿಯದು!


ಸ್ತ್ರೀಸೂಚಕ ಪದಗಳಲ್ಲಿ ‘ಮಹಿಳೆ’ ಎನ್ನುವುದು ನನಗಿಷ್ಟವಾದ ಪದಗಳಲ್ಲೊಂದು. ಮತ್ತೊಂದು ಪೆಣ್ ಎಂಬುದು. ‘ಮಹಿಳೆ’ ಮಹಿ ಮತ್ತು ಇಳೆ ಎರಡರ ಮಿಲನಪದ. ಎರಡೂ ಪದಗಳ ಅರ್ಥ ಭೂಮಿ ಎಂದೇ. ಭೂಮಿಯು ಸೈರಣೆಯ ಸಂಕೇತ. ಹೆಣ್ಣು ಭೂಮಿಗಿಂತ ಎರಡರಷ್ಟು ತಾಳ್ಮೆ ಇರುವವಳು. “ಅದಕ್ಕೆ ಕಾರಣವಿದೆ. ಗಂಡೆಂಬ ಪ್ರಾಣಿಯನ್ನು ರಿಂಗ್ ಮಾಸ್ಟರ್ ಆಗಿ ಪಳಗಿಸಬೇಕಾದವಳು ಹೆಣ್ಣೇ. ಪ್ರಾಣಿಯನ್ನು ಪಳಗಿಸುವುದು ಆತುರತಲ್ಲಾಗುವ ಕೆಲಸವಲ್ಲ, ಬಹಳ ತಾಳ್ಮೆ ಇರಬೇಕು” ಎನ್ನುವ ಸೀನುವಿನ ಅನುಭವಜನ್ಯ ಮಾತುಗಳಿಗೆ ನನ್ನ ಸಹಮತವಿದೆ. ‘ಪೆಣ್’ ಎನ್ನುವುದು ಪೆನ್ ಎನ್ನುವುದರ ಸಮೀಪ ಪದ. ಪೆನ್ ಕಾಲ್ಪನಿಕ ಕಥೆಗಳನ್ನು ಬರೆಯಲು ಸಹಕರಿಸುತ್ತದೆ; ಪೆಣ್ ಬದುಕೆಂಬ ಕಾದಂಬರಿಯನ್ನು ಬರೆಯಲು ಸಹವರ್ತಿ ಆಗುತ್ತಾಳೆ. ಹೆಣ್ಣಿಲ್ಲದ ಜೀವನ ಅಪೂರ್ಣ. ಇದನ್ನು ಆಂಗ್ಲರೂ ಒಪ್ಪುತ್ತಾರೆ. “Before marriage, man is incomplete. After marriage, he is finished!” ಎನ್ನುತ್ತಾರವರು.





ಹೆಣ್ಣಿಲ್ಲದೆ ಗಂಡಿಲ್ಲವೆನ್ನುವುದನ್ನು ಆಂಗ್ಲವು ಬಲು ಚೆನ್ನಾಗಿ ತೋರ್ಪಡಿಸುತ್ತದೆ. ‘Woman’ನಲ್ಲಿ ‘Man’ ಇದ್ದಾನೆ. ‘Mistress’ನಲ್ಲಿ ‘Mister’ ಇದ್ದಾನೆ. ‘She’ಯಲ್ಲಿ ‘He’ ಇದ್ದಾನೆ. ‘Her’ನಲ್ಲೂ ‘He’ ಇದ್ದಾನೆ. ‘Lady’ಯಲ್ಲಿ ‘Lad’ ಇದ್ದಾನೆ. “Lass”ನಲ್ಲಿ ಇಲ್ಲ” ಎಂದೊಬ್ಬ ನುಡಿದಾಗ ‘ass ಅರ್ಥಾತ್ ಕತ್ತೆ ಇದ್ದಾನಲ್ಲ!’ ಎಂದು ಉತ್ತರಿಸಿದವರಿದ್ದಾರೆ. ‘ಋಣಾನುಬಂಧ ರೂಪೇಣ ಪಶುಪತ್ನಿಸುತಾಲಯಂ’ ಎಂಬುದರಲ್ಲಿ ಗಂಡು ಇಲ್ಲ’ ಎಂದಾಗ ಕೂಡಲೆ ವಾಗ್ಮಿ ವೈ.ವಿ. ಗುಂಡೂರಾವ್ ‘ಪಶು ಅಂತ ಇದೆಯಲ್ಲ, ಅದು ಅವನೇ!’ ಎಂದಿದ್ದರು.


ಪ್ರಕೃತಿಯ ಸ್ವರೂಪವಾದ ಹೆಣ್ಣಿನ ದಿನದಂದು ಮಾತಿನ ರೂಪವೇ ಆದ ಮಾತೆಯರಿಗೆ spell-bound ಹಾರೈಕೆಗಳನ್ನು ಅರ್ಪಿಸೋಣವೆ?  

Comments