ಮಿತ್ರ ಮತ್ತು ನಾನು
ಲೇಖನ - ಬೇಲೂರು ರಾಮಮೂರ್ತಿ
ಅಷ್ಟು ಹಿರಿಯರನ್ನು ನಾನು ಮಿತ್ರ ಎಂದು ಸಂಬೋಧಿಸಬಹುದೇ ಎನ್ನುವ ಅನುಮಾನ ನನ್ನನ್ನು ಕಾಡುತ್ತದೆ. ಅನುಮಾನ ಪರಿಹಾರವಾಗೋದು ಹೇಗೆ ಎಂದರೆ ಅವರು ಎಲ್ಲರನ್ನೂ ಮಿತ್ರರಂತೆಯೇ ಕಾಣುವುದರಿಂದ. ಹೀಗಾಗಿ ಅವರು ಹೊಸಬರ, ಹಳಬರ ಮತ್ತು ಎಲ್ಲರ ಮಿತ್ರ. ನನ್ನ ಅವರ ಇಷ್ಟು ವರ್ಷಗಳ ಅಂದರೆ ೩೦ ವರ್ಷಗಳಿಗೂ ಮಿಕ್ಕಿದ ಅನುಭವದಿಂದ ನನಗೆ ಅರಿವಾಗಿರೋದು ಏನೆಂದರೆ ಅವರು ಹೊಸಬರನ್ನೂ ಹಳಬರಂತೆಯೇ ಮಾತಾಡಿಸುವದರಿಂದ. ಹೊಸಬರ ಕೃತಿಗಳನ್ನೂ ಮೆಚ್ಚಿ ಒಂದು ನಾಲ್ಕು ಒಳ್ಳೆಯ ಮಾತಾಡುವಾಗ, ಮತ್ತು ಕಿರಿಯ ಲೇಖಕರನ್ನು ಮಾತಾಡಿಸುವಾಗ ಇವನು ಯಾವೋನಯ್ಯ ಎನ್ನುವ ಭಾವ ಇರದೇ ಇವನು ನಮ್ಮವನಯ್ಯ ಎನ್ನುವ ನಗುಮೊಗದ ಭಾವ ಇರುತ್ತದೆ.
ಇನ್ನು ಮುಂದಿನ ಸಾಲುಗಳಲ್ಲಿ ಅವರನ್ನು ನಾನು ಅವರನ್ನು ತುಂಬುಗೌರವದಿAದ ಪ್ರೊ. ಮಿತ್ರ ಎಂದೇ ಸಂಬೋಧಿಸುತ್ತೇನೆ. ಅದು ೧೯೯೬ ಬೆಂಗಳೂರಿನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹಾಸ್ಯಾಂಧೋಲನ ಎನ್ನುಬಹುದಾದ ಹಾಸ್ಯೋತ್ಸವ ಪ್ರಾರಂಭವಾದ ವರ್ಷ. ನಾ. ಕಸ್ತೂರಿಯವರ ಹಾಸ್ಯೋತ್ಸವದ ದಿನ. ಪ್ರೊ. ಮಿತ್ರ ಅವರದೇ ಉಸ್ತುವಾರಿ. ನಾನು ಅವತ್ತೇ ಪ್ರಥಮವಾಗಿ ಪ್ರೊ. ಮಿತ್ರ ಅವರನ್ನು ನೋಡಿದ್ದು. ಇನ್ನೂ ಮಾತಾಡಿಸಿರಲಿಲ್ಲ. ಏಕೆಂದರೆ ಅವರು ವೇದಿಕೆಯಲ್ಲಿದ್ದರು. ನಾನು ಅವತ್ತು ಡಾ. ಪ್ರಭುಶಂಕರ ಅವರ ಮಾತುಗಳನ್ನು ಕೇಳಿ ಎಷ್ಟು ಆನಂದಿಸಿದ್ದೆನೋ ಅಷ್ಟೇ ಆನಂದ ಪ್ರೊ. ಮಿತ್ರ ಅವರ ಮಾತುಗಳನ್ನು ಕೇಳಿಯೂ ಆಗಿತ್ತು. ಅಲ್ಲಿಂದ ಮುಂದೆ ಹಾಸ್ಯೋತ್ಸವಕ್ಕೆ ಪ್ರೊ. ಮಿತ್ರ ಅವರು ಅನಿವಾರ್ಯ ಆಗಿದ್ದರು. ಅವರಿಲ್ಲದ ಹಾಸ್ಯೋತ್ಸವನ್ನು ಕಲ್ಪನೆ ಮಾಡಿಕೊಳ್ಳೋದೂ ಅಸಾಧ್ಯವಾಗಿತ್ತು. ಅದರಂತೆಯೇ ನಿರಂತರವಾಗಿ ಹಾಸ್ಯೋತ್ಸವಕ್ಕೆ ಪ್ರೊ. ಮಿತ್ರ ಅವರ ಬೆಂಬಲ, ಸಹಕಾರ, ಸಲಹೆ ಎಲ್ಲವೂ ಇದ್ದಿದ್ದು ಹಾಸ್ಯಾಸಕ್ತರ ಪುಣ್ಯ ಎನ್ನಬಹುದು.
ಆಗಿನ್ನೂ ನನ್ನ ಎರಡನೆಯದೋ ಮೂರನೆಯದೋ ಕಾದಂಬರಿ ಬಿಡುಗಡೆ ಆಗಿತ್ತು. ಆಗಿನ ನನ್ನ ಉಮೇದು ಹೇಗಿತ್ತೆಂದರೆ ಪ್ರಕಾಶಕರು ಕೊಡುತ್ತಿದ್ದ ೨೫ ಪ್ರತಿಗಳನ್ನು ಒಂದಿಷ್ಟು ಜನರಿಗೆ ಉಡುಗೊರೆಯಾಗಿ ಕೊಡುವುದು. ಹಾಗೆ ಆ ವರ್ಷ ಪ್ರಕಟವಾಗಿದ್ದ ನನ್ನ ಅಯಸ್ಕಾಂತ ಕಾದಂಬರಿಯನ್ನು ತೆಗೆದುಕೊಂಡು ಹೋಗಿ ಪರಿಚಿತರೆಲ್ಲರಿಗೂ ಕೊಟ್ಟಿದ್ದೆ. ಸಿ. ಆರ್. ಸಿಂಹ ಅವರಿಗೆ ಒಂದು ಪ್ರತಿ ಕೊಟ್ಟಿದ್ದೆ. ಪ್ರೊ. ಮಿತ್ರ ಅವರ ಭೇಟಿಯಾಗಿದ್ದು ಯಾವಾಗ ಎಂದರೆ ಹಾಸ್ಯೋತ್ಸವದ ಎಲ್ಲ ಕೆಲಸಗಳೂ ಮುಗಿದು ಇನ್ನೇನು ಅವರು ಹೊರಡೋದರಲ್ಲಿದ್ದಾಗ. ಸರ್ ನಾನು ಬೇಲೂರು ರಾಮಮೂರ್ತಿ, ನನ್ನದೊಂದು ಪುಸ್ತಕ ನಿಮಗೆ ಕೊಡಬೇಕು ಎಂದೆ. ಕೊಡಪ್ಪ ಅಂದರು. ಅವರ ಹೆಸರು ಬರೆಯಬೇಕಲ್ಲ. ಸರ್. ಒಂದು ನಿಮಿಷ ಅಂದೆ. ಸರಿ ಕೊಡು ಅಂದು ಹಾಗೇ ನಿಂತು ಪಕ್ಕದಲ್ಲಿದ್ದ ಸಿಂಹ ಅವರಿಗೆ ಇವರು ನನಗೊಂದು ಪುಸ್ತಕ ಕೊಡುತ್ತಾರಂತೆ ಅಂದಾಗ ಸಿಂಹ ಹೌದು ನನಗಾಗಲೇ ಕೊಟ್ಟಿದ್ದಾರೆ ಅಂದರು. ನಾನು ಪ್ರೊ. ಮಿತ್ರ ಅವರ ಹೆಸರು ಬರೆದು ಅವರಿಗೆ ಕೊಟ್ಟಾಗ ಒಂದೆರಡು ಪುಟ ಕಣ್ಣಾಡಿಸಿ ನನ್ನ ಕಡೆ ನೋಡಿ ಮುಗುಳ್ಕಕ್ಕು ಬೆನ್ನು ತಟ್ಟಿದರು. ಅಷ್ಟು ಸಾಕಲ್ಲ ಸ್ಪೂರ್ತಿ, ಬೆಂಬಲ ನನ್ನ ಮುಂದಿನ ಸಾಹಿತ್ಯ ಯಾತ್ರೆಗೆ.
ಅಲ್ಲಿಂದ ಮುಂದೆ ಅವರ ಭೇಟಿ ಆಗಾಗ ನಡೆಯುತ್ತಲೇ ಇತ್ತು. ನಾವು ಏನೇ ಹಾಸ್ಯದ ಕಾರ್ಯಕ್ರಮ ಏರ್ಪಡಿಸಿಕೊಂಡರೂ ಅದಕ್ಕೆ ಅವರ ಮಾರ್ಗದರ್ಶನ ಬೇಕಾಗಿತ್ತು ಮತ್ತು ಅವರ ಮನೆಗೆ ಹೋಗುತ್ತಿದ್ದೆವು. ಅವರು ಮಹಾಲಕ್ಷಿö್ಮ ಲೇಔಟ್ನಲ್ಲಿದ್ದಾಗ ಹೆಚ್ಚು ಹೋದದ್ದು ನೆನಪಿಲ್ಲ. ಅದರೆ ಯಲಹಂಕದ ಪುಟ್ಟೇನಹಳ್ಳಿಗೆ ಹೋದ ಮೇಲಂತೂ ಸುಮಾರು ಬಾರಿ ಹೋಗಿದ್ದೇವೆ. ಅಲ್ಲಿಂದ ಮುಂದೆ ನನ್ನ ಲೇಖನಗಳು, ಹಾಸ್ಯಬರಹಗಳು, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಆ ದಿನಗಳಲ್ಲಿ ನಾನೇನಾದರೂ ಅವರಿಗೆ ಫೋನ್ ಮಾಡಿದ್ದರೆ ನಿನ್ನ ಲೇಖನ ನೋಡಿದೆನಪ್ಪಾ ಚನ್ನಾಗಿದೆ ಎನ್ನುತ್ತಿದ್ದರು.
ಅವರು ಕೊರವಂಜಿಯ ಜನಕ ರಾಶಿಯವರನ್ನು ಚನ್ನಾಗಿ ಬಲ್ಲರು. ಆಗಿನಿಂದಲೂ ಅವರು ಕೊರವಂಜಿಯ ಅಭಿಮಾನಿ. ಕೊರವಂಜಿ ಆದ ಮೇಲೆ ಅಪರಂಜಿ ಶುರುಮಾಡಿದ್ದು ಅವರಿಗೆ ಸಂತೋಷ ಕೊಟ್ಟಿತ್ತು. ಅಪರಂಜಿಗೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು. ಅಪರಂಜಿ ವಾರ್ಷಿಕ ಸಮಾರಂಭಗಳಲ್ಲಿ ಭಾಗವಹಿಸಿ ಅಪರಂಜಿಗೆ ಮೆರುಗು ತಂದುಕೊಟ್ಟಿದ್ದರು. ಅಷ್ಟೇ ಅಲ್ಲ ಅವರು ಬಿಡುವು ಮಾಡಿಕೊಂಡು ಅಪರಂಜಿಯನ್ನು ಓದುತ್ತಿದ್ದರು ಮತ್ತು ಅದರಲ್ಲಿನ ಲೇಖನಗಳ ಬಗೆಗೆ ಅವರ ಅಭಿಪ್ರಾಯಗಳನ್ನು ತಿಳಿಸಿ ಮುಂದೆ ಇದನ್ನು ಹೇಗೆ ಇನ್ನೂ ಉತ್ತಮಗೊಳಿಸಬಹುದು ಎಂದು ಅನೇಕ ಸಲಹೆಗಳನ್ನು ಕೊಡುತ್ತಿದ್ದರು.
ನಾನು ಮುದ್ದಣನ ಬಗೆಗೆ ಪುಸ್ತಕ ಬರೆಯಲು ಪ್ರಾರಂಭ ಮಾಡಿದಾಗ ಅವರಿಗೆ ಆಗಾಗ ಅದರ ಪ್ರಗತಿಯನ್ನು ತಿಳಿಸುತ್ತಿದ್ದೆ. ಅವರಿಗೆ ಏನು ಸಂತೋಷ ಎಂದರೆ ಈ ಹುಡುಗರು ಹಾಸ್ಯ ಎಂದು ಬರೀ ಹಾಸ್ಯಕ್ಕೇ ಜೋತುಬೀಳದೇ ವಿವಿಧ ಪ್ರಾಕಾರಗಳಲ್ಲಿ ಆಸಕ್ತಿ ಹೊಂದಿದ್ದಾರಲ್ಲಾ ಅಂತ. ಸರಿ, ಪುಸ್ತಕ ಸಿದ್ದವಾಯಿತು. ಅದರ ಲೋಕಾರ್ಪಣೆ ಆಗಬೇಕು, ಅದರ ಬಗೆಗೆ ಮಾತಾಡಬೇಕು, ಅದಕ್ಕೆ ಯಾರನ್ನು ಕರೆಯುವುದು ಎಂದಾಗ ನನಗೆ ನೆನಪಾದದ್ದೇ ಪ್ರೊ. ಮಿತ್ರ. ಅವರಿಗೆ ಕರೆ ಮಾಡಿದೆ. ನಾನು ಮುದ್ದಣನ ಬಗೆಗೆ ಹೆಚ್ಚು ಕೆಲಸ ಮಾಡಿಲ್ಲ. ಆದರೆ ನೀನು ಪ್ರೊ. ಜಿ.ವೆಂಕಟಸುಬ್ಬಯ್ಯ ಅವರನ್ನು ಕರಿ. ಅವರು ಮುದ್ದಣನ ಬಗೆಗೆ ಒಂದು ರೀತಿ ಅಥಾರಿಟಿ ಎಂದರು. ಸರಿ ನಾನು ಜಿ.ವಿ.ಅವರ ಮನೆಗೆ ಹೋದೆ. ಅವರಿಗೆ ಎಲ್ಲ ವಿಚಾರ ತಿಳಿಸಿದೆ. ಅಷ್ಟೊತ್ತಿಗೆ ನಾವೆಲ್ಲಾ ಪ್ರೊ. ಮಿತ್ರ ಮಿತ್ರಮಂಡಲಿ ಸದಸ್ಯರು ಎನ್ನುವುದು ಅವರಿಗೆ ತಿಳಿದಿತ್ತು ನಾವೆಲ್ಲಾ ಅಂದರೆ ಹಾಸ್ಯೋತ್ಸವದ ಹುಡುಗರೆಲ್ಲಾ ಪ್ರೊ. ಮಿತ್ರ ಅವರ ಶಿಷ್ಯರು ಎನ್ನುವುದು. ಜಿ.ವಿ. ಅವರು ಪ್ರೊ. ಮಿತ್ರ ರ್ತಾರಲ್ಲ ಸಾಕು ಅಂದುಬಿಟ್ಟರು. ಅಯ್ಯೋ ಇದೇನಪ್ಪಾ ಮಾಡೋದು ಅಂತ ಸರ್ ನೀವು ಬಂದರೆ ಅವರೂ ಬರುತ್ತಾರೆ, ಇಬ್ಬರೂ ನನಗೆ ಆಶೀರ್ವಾದ ಮಾಡಿ ಅಂದೆ. ಮತ್ತು ಜಿ.ವಿ.ಅವರ ಮನೆಯಿಂದಲೇ ಪ್ರೊ. ಮಿತ್ರ ಅವರಿಗೆ ಫೋನ್ ಮಾಡಿ ನೀವು ಜಿ.ವಿ. ಅವರೊಂದಿಗೆ ಮಾತಾಡಿ ಸರ್ ಅಂತ ಬೇಡಿಕೊಂಡೆ. ಪ್ರೊ. ಮಿತ್ರ ಮಾತಾಡಿದರು. ಅದೇನು ಮಾತಾಡಿದರು ಎಂದು ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರೂ ಹಿರಿಯರು ಬಂದು ಪುಸ್ತಕ ಬಿಡುಗಡೆ ಮಾಡಿ ಆಶೀರ್ವಾದ ಮಾಡಿದರು.
ಆ ಸಂದರ್ಭದ ಇನ್ನೊಂದು ಘಟನೆ ಚನ್ನಾಗಿ ನೆನಪಿದೆ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನ ತಾಯಿ ಬಂದಿದ್ದಳು. ಬಹುಶ: ಅದೊಂದೇ ಕಾರ್ಯಕ್ರಮಕ್ಕೆ ಅವಳು ಬಂದಿದ್ದು. ಅವಳಿಗೆ ಆಗ ಕಾಲು ನೋವಿನ ದಿನಗಳು. ಹೆಚ್ಚು ನಡೆಯಲು, ಒಂದೇ ಕಡೆ ಕೂರಲು ಆಗುತ್ತಿರಲಿಲ್ಲ. ಪ್ರೊ. ಮಿತ್ರ ಅವರ ಕೈಯಿಂದ ನನ್ನ ತಾಯಿಗೆ ಒಂದು ಪುಸ್ತಕ ಕೊಡಿಸಬೇಕು ಅಂತ ನನ್ನ ಆಸೆ. ನನ್ನ ತಾಯಿಯನ್ನು ಸ್ಟೇಜ್ ಬಳಿಗೆ ಕರೆದುಕೊಂಡು ಹೋಗುವಾಗ ಪ್ರೊ. ಮಿತ್ರ ಅವರು ನನ್ನ ತಾಯಿಗೆ ನೀವು ಅಲ್ಲೇ ಇರಿ ನಾನೇ ಬರುತ್ತೇನೆ ಎಂದು ನನ್ನ ತಾಯಿ ಇದ್ದಲ್ಲಿಗೆ ಬಂದು ನನ್ನ ತಾಯಿಗೆ ಪುಸ್ತಕ ಕೊಟ್ಟು ನಮಸ್ಕರಿಸಿ ಈಗ ನಿಮ್ಮ ಮಗ ರಾಮಮೂರ್ತಿ ನಮ್ಮ ಹುಡುಗ, ಇಷ್ಟು ವರ್ಷ ನೀವು ನೋಡಿಕೊಂಡಿದ್ದಿರಿ, ಇನ್ನು ಮುಂದೆ ನಾವು ಅವನನ್ನು ನೋಡ್ಕೋತೀವಿ ಅಂದು ನಕ್ಕಿದ್ದರು. ನನ್ನ ತಾಯಿಯೂ ಮನದುಂಬಿ ನಕ್ಕಿದ್ದಳು. ಅಂದಿನ ಸಮಾರಂಭದಲ್ಲಿದ್ದ ಇನ್ನೊಬ್ಬರು ಹಿರಿಯರು ನಿಟ್ಟೂರು ಶ್ರೀನಿವಾಸರಾಯರು. ಅವರನ್ನು ಕೇಳಿಕೊಂಡಿದ್ದಕ್ಕೇ ಸಂತೋಷದಿAದ ಬಂದಿದ್ದರು. ಎಷ್ಟಾದರೂ ಎಲ್ಲರಿಗಿಂತ ಹಿರಿಯರಲ್ವಾ ಅಂತ ನಾನು ನಿಟ್ಟೂರು ಶ್ರೀನಿವಾಸರಾಯರಿಂದ ಆಶೀರ್ವಚನ ಎಂದು ಪ್ರಿಂಟ್ ಮಾಡಿಸಿದ್ದೆ. ಅದನ್ನು ವೇದಿಕೆಯಲ್ಲಿ ಅವರು ಮುದ್ದಣ ಪುಸ್ತಕ ಬರೆದಿರುವ ರಾಮಮೂರ್ತಿ ಬಲು ಬುದ್ಧಿವಂತರು. ನಾನು ಸಮಾರಂಭದಲ್ಲಿ ಎಲ್ಲಿ ಹೆಚ್ಚು ಮಾತಾಡುತ್ತೀನೋ ಅಂತ ಆಶೀರ್ವಚನ ಅಂತ ಪ್ರಿಂಟ್ ಮಾಡಿಸಿದ್ದಾರೆ. ಹೇಗೂ ಆಶೀರ್ವಚನ ನೀಡೋರು ಹೆಚ್ಚೇನು ಮಾತಾಡಲ್ಲ ಅಲ್ವಾ ಅಂದು ನಕ್ಕು ತಮ್ಮ ಮಾತುಗಳಲ್ಲಿ ನನ್ನನ್ನ ಸಾಕಷ್ಟು ಪ್ರಶಂಸೆ ಮಾಡಿದ್ದರು.
ಹೀಗೆ ನನಗೆ ಪ್ರೊ. ಮಿತ್ರ ಅವರ ಅನುಬಂಧ ಮುಂದುವರಿಯುತ್ತಲೇ ಇತ್ತು. ನಾನೊಂದು ಸಾರಿ ಅವರನ್ನು ಸರ್ ನೀವು ಎಷ್ಟೊಂದು ವಿಚಾರಗಳನ್ನು ನೆನಪಿಟ್ಟುಕೊಂಡಿದ್ದೀರ. ನಿಮ್ಮದು ಮೆಮೊರಿ ನಮ್ಮದು ಮೋರಿ ಇದು ಹೇಗೆ ಸಾರ್. ನಾವು ಏನು ಪ್ರಯತ್ನ ಮಾಡಬೇಕು ಅಂತ ಕೇಳಿದೆ. ಅದಕ್ಕೆ ಅವರು ನಾನು ಮೇಷ್ಟುç ನೀನು ಮೇಷ್ಟçಲ್ಲ. ಮೇಷ್ಟುಗಳಿಗೆ ಬೇಡ ಅಂದರೂ ಮೆಮೊರಿ ಇರುತ್ತೆ. ಏಕೆಂದರೆ ಮರುದಿನ ಏನು ಪಾಠ ಮಾಡಬೇಕೋ ಅದನ್ನು ಮನೆಯಲ್ಲಿ ಒಂದೆರಡು ಸಾರಿಯಾದರೂ ಓದಿಕೊಂಡು ಹೋಗಬೇಕು. ಹೀಗೆ ಓದುತ್ತಾ ಓದುತ್ತಾ ಒಂದು ಸಾರಿ ಓದಿದರೆ ತಲೆಯಲ್ಲಿ ಕೂರುವಂತಹ ಏಕಸಂಧಿಗ್ರಾಹಿಗಳಾಗುತ್ತೇವೆ. ನಿನಗೂ ಹೀಗೆ ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದರೆ ನೀನೊಂದು ಪ್ರಯತ್ನ ಮಾಡಬಹುದು. ಏನೆಂದರೆ ನಿಮ್ಮ ಮನೆಯಲ್ಲಿ ಒಂದು ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಗೋಡೆ ನೋಡಿಕೊಂಡು ಮಾತಾಡೋದು ಅಭ್ಯಾಸ ಮಾಡಿಕೋ. ನಿನ್ನ ಮುಂದೆ ಹತ್ತಾರು ಜನ ಕೂತಿದ್ದಾರೆ ಅಂತ ಭಾವಿಸಿಕೋ. ನಿನಗೆ ಏನು ಅನಿಸುತ್ತೊ ಏನು ತಿಳಿದಿದೆಯೋ ಅದನ್ನು ಮಾತಾಡು. ಮೊದಮೊದಲು ತೊದಲುತ್ತೆ, ಕಾಲು ನಡುಗುತ್ತೆ. ಮುಂದೆ ಏನು ಮಾತಾಡಬೇಕು ಅನ್ನೋ ಗೊಂದಲ ಷುರುವಾಗುತ್ತೆ. ಆದರೆ ಕ್ರಮೇಣ ಇವೆಲ್ಲಾ ಮಾಯವಾಗುತ್ತೆ ಅಂದಿದ್ದರು. ನಾನು ಕೆಲವು ದಿನ ಹಾಗೇ ಮಾಡಿದ್ದೆ. ಹೀಗೆ ಅಭ್ಯಾಸ ಮಾಡಿದ ಎಷ್ಟೊ ವರ್ಷಗಳ ನಂತರ ಸಭೆಯಲ್ಲಿ ನಿರರ್ಗಳವಾಗಿ ಮಾತಾಡೋದು ಅಭ್ಯಾಸವಾಯಿತು.
ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ ಹಾಸ್ಯೋತ್ಸವ ನಡೆಯುವಂತೆಯೇ ಚೌಡಯ್ಯ ಸ್ಮಾರಕ ಭವನದಲ್ಲಿ ಶಿವರಾತ್ರಿಗೆ ನಗೆಜಾಗರಣೆ ಕಾರ್ಯಕ್ರಮ ನಡೆಯುತ್ತಿತ್ತು. ಒಂದು ವರ್ಷ ನಡೆಯಿತು. ಕಾರ್ಯಕ್ರಮ ನಡೆಸಿದ್ದು ಸರಿಹೋಯಿತೋ ಇಲ್ಲವೋ. ಅದಕ್ಕೆ ಅಂದಿನ ಅಧ್ಯಕ್ಷರಾಗಿದ್ದ ಕೆ.ಕೆ.ಮೂರ್ತಿಯವರು ಇನ್ಯಾರಾದರೂ ಸರಿಯಾದವರು ನಡೆಸುತ್ತಾರೆಯೇ ಎಂದು ಗಮನಿಸುತ್ತಿದ್ದರು. ಅವರಿಗೆ ಪ್ರೊ.ಅ.ರಾ. ಮಿತ್ರ ಅವರ ನೆನಪಿತ್ತು, ಪರಿಚಯ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕೆ.ಕೆ. ಮೂರ್ತಿಅವರಿಗೂ ಪ್ರೊ. ಅ.ರಾ.ಮಿತ್ರ ಅವರಿಗೂ ಒಂದು ಕೊಂಡಿ ಬೇಕಿತ್ತು. ಕೆ.ಕೆ. ಮೂರ್ತಿ ಅವರಿಗೆ ನನ್ನ ಹೆಸರು ಯಾರು ಹೇಳಿದ್ದರೋ ಗೊತ್ತಿಲ್ಲ. ನನ್ನನ್ನು ಕರೆಸಿದರು. ನೀವು ಮುಂದಾಳತ್ವ ತಗೊಂಡು ನಗೆಜಾಗರಣೆ ಮಾಡಿ. ಪ್ರೊ. ಅ.ರಾ. ಮಿತ್ರ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬನ್ನಿ ಅಂದರು. ನಾನು ಪ್ರೊ. ಮಿತ್ರ ಅವರ ಬಳಿ ಮಾತಾಡಿದಾಗ ಕೆ.ಕೆ.ಮೂರ್ತಿ ಅವರ ಮನೆಗೆ ಬರೋಕೆ ಒಪ್ಪಿಕೊಂಡರು. ಒಂದು ದಿನ ಮೂರ್ತಿ ಅವರೇ ಪ್ರೊ. ಮಿತ್ರ ಅವರ ಮನೆಗೆ ಕಾರು ಕಳಿಸಿ ಮನೆಗೆ ಬರಮಾಡಿಕೊಂಡರು. ನಾನು ಮೊದಲೇ ಹೋಗಿದ್ದೆ. ಅವರ ಮನೆಯಲ್ಲಿ ಉಪಾಹಾರ ಕೂಟ ನಡೆಯಿತು. ನಂತರ ಮೂರ್ತಿಯವರ ಮನೆಯ ಮಹಡಿಯ ದೊಡ್ಡ ಹಜಾರದಲ್ಲಿ ಮಾತುಕತೆಯಾಯಿತು. ಅಂದಿನಿAದ ಮೊದಲ್ಗೊಂಡು ಎರಡು ಅಥವಾ ಮೂರು ವರ್ಷ ಸತತವಾಗಿ ಪ್ರೊ ಮಿತ್ರ ಅವರ ಉಸ್ತುವಾರಿಯಲ್ಲಿ ಚೌಡಯ್ಯದಲ್ಲಿ ನಗೆ ಜಾಗರಣೆ ನಡೆಯಿತು. ಕೆ.ಕೆ ಮೂರ್ತಿ ಅವರು ಪ್ರೊ. ಮಿತ್ರ ಅವರನ್ನು ನೀವು ಬೇಕಾದರೆ ರಾತ್ರಿ ಹನ್ನೆರಡು ಗಂಟೆಯವರೆಗೆ ಇರಿ ಮುಂದಿನದನ್ನು ಬೇಲೂರು ರಾಮಮೂರ್ತಿ ನೊಡಿಕೊಳ್ತಾರೆ ಅಂದರೆ ಇಲ್ಲ ನಾನೂ ರ್ತೀನಿ ಅಂತ ಬೆಳಗಿನ ಝಾವದವರೆವಿಗೂ ಇರುತ್ತಿದ್ದರು. ಇದೊಂದು ಅನುಭವ ಆದರೆ ನಗೆಜಾಗರಣೆ ಆದ ಮೇಲೆ ಒಂದು ದಿನ ಔತಣ ಕೂಟ ನಡೆಯುತ್ತಿತ್ತು. ಅದಕ್ಕೂ ಪ್ರೊ. ಮಿತ್ರ ಅವರು ಬರುತ್ತಿದ್ದರು. ಒಂದು ದಿನ ಕೆ.ಕೆ.ಮೂರ್ತಿ ಅವರು ಪ್ರೊ. ಮಿತ್ರ ಅವರ ಕೈ ಹಿಡಿದು ನಮ್ಮ ಸಭಾಂಗಣಕ್ಕೆ ನಗೆ ಜಾಗರಣೆ ಒಂದು ದೊಡ್ಡ ಗೌರವ ತಂದುಕೊಟ್ಟಿದೆ. ದಯವಿಟ್ಟು ನಾನು ಇರುವವರೆಗೂ ನೀವೇ ನಗೆ ಜಾಗರಣೆ ನಡೆಸಿಕೊಡಬೇಕು ಎಂದು ಕೇಳಿಕೊಂಡಿದ್ದರು.
ಇನ್ನೊಮ್ಮೆ ಹಾಸ್ಯೋತ್ಸವದಲ್ಲಿ ಇಬ್ಬರು ಘಟಾನುಘಟಿಗಳು ಅಕ್ಕಪಕ್ಕದಲ್ಲಿ ಕೂತಿದ್ದರು. ಒಬ್ಬರು ಪ್ರೊ. ಮಿತ್ರ, ಇನ್ನೊಬ್ಬರು ಶತಾವಧಾನಿ ಗಣೇಶ್ ಅವರು. ಇಬ್ಬರ ಮಾತುಗಳನ್ನು ಕೇಳುವುದೇ ಕರ್ಣಾನಂದ. ಮೊದಲಿಗೆ ಗಣೇಶ್ ಅವರು ಮಾತಾಡಿದಾಗ ಪ್ರೊ. ಮಿತ್ರ ಅವರು ಬಹಳ ದೊಡ್ಡ ವಿದ್ವಾಂಸರು. ನನ್ನ ಗುರುಗಳು. ಅಂಥವರು ನೀನು ಹಾಸ್ಯೋತ್ಸವಕ್ಕೆ ಬಾ ಅಂದಾಗ ನನಗೆ ಇಲ್ಲ ಅಂತ ಹೇಳಲಾಗಲಿಲ್ಲ ಅಂತೆಲ್ಲ ಹೇಳಿದರು. ಸರಿ ಇಬ್ಬರ ನಡುವೆ ಯಾರು ಮೊದಲು ಮಾತಾಡಬೇಕು ಎನ್ನುವ ವಿಚಾರ ಬಂದಾಗ ಅವರಲ್ಲೇ ಮಾತುಕತೆಯಾಯಿತು. ಗಣೇಶ್ ಅವರು ಪ್ರೊ. ಮಿತ್ರ ಅವರಿಗೆ ಮೊದಲು ನೀವು ಮಾತಾಡಿಬಿಡಿ ಸರ್. ನಂತರ ನಾನು ಮಾತಾಡ್ತೀನಿ ಅಂದರು. ಪ್ರೊ. ಮಿತ್ರ ಅವರು ಇದು ನಮ್ಮ ಮನೆಯ ಸಮಾರಂಭ, ನೀನು ಇಲ್ಲಿ ಅತಿಥಿ ನೀನು ಮೊದಲು ಮಾತಾಡು ಅಂದರು. ಅದಕ್ಕೆ ಗಣೇಶ್ ಅವರು ಅದೂ ಸರಿಯೇ ನಿಮಗಿಂತ ಮೊದಲು ನಾನು ಮಾತಾಡುವುದೇ ಸರಿ. ಕನ್ನಡದಲ್ಲಿ ಒಂದು ಗಾದೆ ಮಾತಿದೆ. ಕತ್ತೆ ಮೇದಲ್ಲಿ ಮತ್ತೆ ಮೇವಿಲ್ಲ ಅಂತ. ನೀವು ಮಾತಾಡಿದ ಮೇಲೆ ನನಗೇನು ಉಳಿದಿರುತ್ತೆ ಅಂದರು. ಜನ ಎಲ್ಲ ಜೋರಾಗಿ ನಕ್ಕರು. ಮಿತ್ರ ಅವರೂ ನಗುತ್ತಾ ಈಗ ಸ್ವಲ್ಪ ಹೊತ್ತಿನ ಮುಂಚೆ ಮಿತ್ರ ಅವರು ನನ್ನ ಗುರುಗಳು ಅಂದ. ಈಗ ಗುರುಗಳನ್ನು ಯಾರಿಗೆ ಹೋಲಿಸುತ್ತಿದ್ದಾನೆ ನೊಡಿದ್ರಾ ಅಂತ ಸಭಿಕರಿಗೆ ಕೇಳಿದಾಗ ಸಭಿಕರಿಗೆ ನಗು ತಡೆಯಲೇ ಆಗಲಿಲ್ಲ. ಹೀಗೆ ಪ್ರೊ. ಮಿತ್ರ ಅವರು ಎಲ್ಲೆಲ್ಲಿ ಇರುತ್ತಿದ್ದರೋ ಅಲ್ಲೆಲ್ಲಾ ನಗುವಿನ ವಾಹಿನಿಯೇ ಹರಿಯುತ್ತಿತ್ತು.
ನನಗೆ ನನ್ನ ಯಾವುದಾದರೂ ಪುಸ್ತಕಕ್ಕೆ ಮಿತ್ರ ಅವರಿಂದ ಮುನ್ನುಡಿ ಬರೆಸಬೇಕು ಎನ್ನುವ ಅಭಿಲಾಷೆ ಇತ್ತು. ಅದು ಕೈಗೂಡಿದ್ದು ಹಲವು ವರ್ಷಗಳಾದ ಮೇಲೆ. ನಾನು ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಕೆಲವು ಸರಳ ಚೌಪದಿಗಳನ್ನು ಬರೆದಿದ್ದೆ. ಅದಕ್ಕೆ ಹಾಸ್ಯ ರಂಗೋಲಿ ಅಂತ ಹೆಸರಿಟ್ಟಿದ್ದೆ. ಅದರ ಹಸ್ತಪ್ರತಿಯನ್ನು ಅವರಿಗೆ ಕಳಿಸಿ ಸರ್ ನೀವು ಇದಕ್ಕೆ ಮುನ್ನುಡಿ ಬರೆದುಕೊಟ್ಟು ಆಶೀರ್ವದಿಸಬೇಕು ಎಂದಿದ್ದೆ. ಚೆಂದದ ಮುನ್ನುಡಿ ಬರೆದುಕೊಟ್ಟಿದ್ದರು. ಅವರ ಮುನ್ನುಡಿಯಲ್ಲಿ ನಾನು ವಿಶೇಷವಾಗಿ ಕಂಡಿದ್ದು ಏನೆಂದರೆ ಚನ್ನಾಗಿರುವುದನ್ನು ಚನ್ನಾಗಿದೆ ಅಂತ ಹೇಳೋದರ ಜೊತೆಗೆ ಚನ್ನಾಗಿಲ್ಲದಿರುವುದನ್ನು ಕೂಡಾ ಅಷ್ಟೇ ಸೊಗಸಾಗಿ ಚನ್ನಾಗಿಲ್ಲ ಎಂದು ಬರೆದಿದ್ದರು. ಅಂದರೆ ಅದನ್ನು ಓದುವವರಿಗೆ ಮುಂದೆ ತಿದ್ದಿಕೊಳ್ಳಲು ಸಾಕಷ್ಟು ಅವಕಾಶ ಇರುತ್ತಿತ್ತು. ಒಂದು ಉದಾಹರಣೆ ನೋಡಿ. ಪ್ರೊ. ಮಿತ್ರ ಹೀಗೆ ಬರೆಯುತ್ತಾರೆ. ಬೇಲೂರು ರಾಮಮೂರ್ತಿಯವರು ಹಾಸ್ಯ ಎಂದರೇನು, ಅದರ ಪಾಕ ಎಂಥದು, ಅದರ ಅಗತ್ಯವೇನು, ಈ ಹಾಸ್ಯ ಪ್ರಜ್ಞೆ ಬೆಳೆಸಿಕೊಂಡರೆ ಏನಾಗುತ್ತದೆ. ಬೆಳೆಸಿಕೊಳ್ಳದಿದ್ದರೆ ಏನು ಅನಾಹುತವಾಗುತ್ತದೆ, ಬದುಕಿನಲ್ಲಿ ಹಾಸ್ಯದ ಸ್ಥಾನಮಾನಗಳೇನು, ಈ ಹಾಸ್ಯ ಮನೋಧರ್ಮದ ಹಿಂದಿರುವ ಜೀವನ ಪೋಷಕ ದ್ರವ್ಯಗಳಾವವು, ಹಾಸ್ಯ ಧಾತು ಬದುಕಿನ ಶರೀರಕ್ಕೆ ಹೇಗೆ ಬೆರೆಯಬೇಕು ಇಂಥಾ ನೂರಾರು ಆಯಾಮಗಳಿಂದ ಆರೋಗ್ಯಕರ ಸಂವಾದ ನಡೆಸಿದ್ದಾರೆ. ಅಂದರೆ ಇದೊಂದು ರೀತಿ ಬೆನ್ನು ತಟ್ಟುವಿಕೆ. ಇನ್ನು ಇರಬಹುದಾದ ತಪ್ಪುಗಳ ಬಗೆಗೆ ಹೇಗೆ ಬರೆದಿದ್ದಾರೆ ಎಂದರೆ ಈ ಕವಿತೆಗಳ ಕೊರತೆಗಳನ್ನು ಪಟ್ಟಿಮಾಡುವುದೂ ಕಷ್ಟವೇನಲ್ಲ. ಪದ್ಯ ರಚನೆಗೆ ಬೇಕಾದ ಧ್ಯಾನಪರತೆ, ಸಂಗ್ರಹಕೌಶಲ, ಲಯಜ್ಞಾನ, ವಕ್ರಪ್ರಾಸವೈಖರಿ, ಶಬ್ದಲಾಸ್ಯಗಳ ‘ಅಗತ್ಯ’ವನ್ನು ಕುರಿತು ನಾನಿಲ್ಲ ಚರ್ಚಿಸುವ ‘ಅಗತ್ಯ’ವಿಲ್ಲ. ಕೈ ಕುದುರಿದರೆ ಆ ‘ಅಗತ್ಯ’ಗಳೆಲ್ಲ ಬಂದು ಸೇರಿಕೊಳ್ಳುತ್ತವೆ ಎಂಬ ನಂಬಿಕೆ ನನಗಿದೆ. ಎಷ್ಟು ಚನ್ನಾಗಿದೆ ಅಲ್ವಾ. ನನ್ನ ರಚನೆಯಲ್ಲಿ ಇರುವ ಕೊರತೆಗಳನ್ನು ಎಷ್ಟು ಸೂಕ್ಷö್ಮ ಎಳೆಗಳಿಂದ ಬಿಡಿಸಿ ಇಟ್ಟಿದ್ದಾರೆ. ಪ್ರೊ. ಮಿತ್ರ ಅವರ ಇಂಥಾ ಬರವಣಿಗೆಗಳಿಂದ ಮತ್ತು ಇಂಥಾ ಮಾತುಗಾರಿಕೆಗಳಿಂದಲೇ ಇಂದಿಗೂ ಅವರು ಎಲ್ಲರಿಗೂ ‘ಮಿತ್ರ’ ರಾಗಿರುವುದು.
ನನ್ನಲ್ಲಿ ಹಾಸ್ಯಪ್ರಜ್ಞೆ ಜಾಗೃತವಾಗುವುದಕ್ಕೆ ಬಹುಪಾಲು ಪ್ರೊ. ಮಿತ್ರ ಅವರೇ ಕಾರಣ. ನಾನು ಅವರು ಹಾರಿಸುವ ನಗೆಚಟಾಕಿಗಳನ್ನು, ಆಯಾ ಸಂದರ್ಭಕ್ಕೆ ತಕ್ಕ ಹಾಗೆ ನಗುವಿನ ಮಾತುಗಳನ್ನು ಹೊಸೆಯುವುದನ್ನು ಗಮನಿಸುತ್ತಿದ್ದೆ. ಒಂದು ಸಾರಿ ನಾವು ಒಂದಿಬ್ಬರು ಅವರ ಮನೆಗೆ ಹೋಗಿದ್ದೇವೆ. ಮಾತುಕತೆಯಾಯಿತು. ಸತ್ಕಾರವೂ ಆಯಿತು. ಸರ್ ನಾವಿನ್ನು ಹೊರಡುತ್ತೇವೆ ಎಂದೆವು. ಅವರೂ ಎದ್ದು ನಿಂತು ಬಿಡುವಾದಾಗ ಬರ್ತಿರಿ ಎಂದರು. ನಾವು ಹೊರಟಾಗ ನಮ್ಮ ಹಿಂದೆಯೇ ಬಂದರು. ನಾನು ಸರ್ ನೀವ್ಯಾಕೆ ರ್ತೀರಿ. ನಾವು ಹೊರಡ್ತೀವಿ ಅಂದೆ. ಪರವಾಗಿಲ್ಲ ಅಂದು ಅವರ ಮನೆಯ ಗೇಟ್ ತನಕ ಬಂದರು. ನಾನು ಸರ್ ನೀವು ಹಿರಿಯರು ನಮ್ಮಂಥಾ ಕಿರಿಯರನ್ನು ಕಳಿಸಿಕೊಡಲು ಗೇಟ್ ತನಕ ಬಂದ್ರಲ್ಲಾ ಅಂದೆ. ಅದಕ್ಕೆ ಅವರು ಅದು ಹಾಗಲ್ಲಪ್ಪ. ನೀವುಗಳೆಲ್ಲಾ ಕಡೆಗೂ ನಿಜವಾಗಿ ಹೊರಟ್ರಲ್ಲ ಅಂತ ನನಗೆ ನಂಬಿಕೆ ಬರಬೇಕಲ್ಲ ಅಂತ ಗೇಟ್ ತನಕ ಬಂದೆ ಅಂದಾಗ ಎಲ್ಲರೂ, ಪ್ರೊ ಮಿತ್ರ ಸಮೇತ ನಕ್ಕಿದ್ದೂ ನಕ್ಕಿದ್ದೇ. ಇಂಥಾ ಅವರ ಸಹಜವಾದ ಮಾತುಗಾರಿಕೆಯಿಂದ ನಾನು ಪ್ರಭಾವಿತನಾಗಿದ್ದೇನೆ.
ಅವರನ್ನು ಹಾಸ್ಯ ಸಾಹಿತಿ ಎನ್ನುವಂತಿಲ್ಲ. ಪ್ರೊಫೆಸರು ಎನ್ನುವಂತಿಲ್ಲ, ಒಳ್ಳೆ ಭಾಷಣಕಾರರು ಎನ್ನುವಂತಿಲ್ಲ. ಈ ಎಲ್ಲವನ್ನು ಪಾಕಕ್ಕೆ ಹಾಕಿ ತೆಗೆದ ಅಮೂಲ್ಯ ವಸ್ತು. ಇದಕ್ಕೆ ಉದಾಹರಣೆ ಕೊಡಬೇಕು ಎಂದರೆ ಅವರು ಅಧ್ಯಾತ್ಮದ ಬಗೆಗೂ ಅಧ್ಯಯನ ನಡೆಸುತ್ತಿದ್ದರು. ಅವರಿಗೆ ಕನ್ನಡ ಹೇಗೆ ಕರತಲಾಮಲಕ ಆಗಿತ್ತೊ ಹಾಗೆ ತೆಲುಗೂ ಸಹ. ಅವರು ತೆಲುಗು ಪತ್ರಿಕೆಗಳನ್ನು ಪುಸ್ತಕಗಳನ್ನೂ ಓದುತ್ತಿದ್ದರು. ಕುಮಾರವ್ಯಾಸ ಭಾರತವನ್ನು ಪುಂಖಾನುಪುAಖವಾಗಿ ಕೋಟ್ ಮಾಡಬಲ್ಲರು. ಹಳೆಗನ್ನಡ ಅವರ ಬಾಯಲ್ಲಿ ಸುಲಲಿತವಾಗಿ ಪ್ರವಹಿಸುತ್ತೆ. ಅದಕ್ಕೆ ಅವರು ತಮ್ಮದೇ ಆದ ರೀತಿಯಲ್ಲಿ ಹಾಸ್ಯ ಬೆರೆಸುವುದು ಇನ್ನೊಂದು ರೀತಿ. ಮಹಾಭಾರತದ ಪಾತ್ರ ಪ್ರಪಂಚ, ಕುಮಾರವ್ಯಾಸ ಭಾರತ ಕಥಾಮಿತ್ರ ಮುಂತಾದುವು ಅತ್ಯುತ್ತಮ ಗ್ರಂಥಗಳು ಎನಿಸಿಕೊಂಡಿವೆ. ಕುಮಾರವ್ಯಾಸ ಭಾರತ ಕಥಾಮಿತ್ರ ಗ್ರಂಥದ ಬಿಡುಗಡೆ ರಾಜಭವನದಲ್ಲಿ ನಡೆಯಿತು. ಧರ್ಮಸ್ಥಳದ ಹೆಗಡೆ ಅವರು ಬಂದಿದ್ದರು. ಪ್ರೊ. ಮಿತ್ರ ಅವರು ನನಗೆ ಆಹ್ವಾನಪತ್ರಿಕೆಯನ್ನು ಕಳಿಸುವುದರ ಜೊತೆಗೆ ದೂರವಾಣಿ ಕರೆ ಮಾಡಿ ನೀನು ಬಾಪ್ಪ ಅಂದಿದ್ದರು. ನಾನು ಹೋಗಿದ್ದೆ. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಯಿತು. ನಂತರ ನಾನು ಒಂದು ಪುಸ್ತಕ ಕೊಂಡೆ. ಅದಕ್ಕೆ ಅವರು ಹಸ್ತಾಕ್ಷರ ಹಾಕಿ ಕೊಡುವಾಗ ನನ್ನ ಹೆಸರು ನನ್ನ ಪತ್ನಿ ಹೆಸರು ನನ್ನ ಮಗನ ಹೆಸರು ಹೀಗೆ ಎಲ್ಲರ ಹೆಸರೂ ಬರೆದು ಶುಭಾಶಯ ಕೋರಿ ಕೊಟ್ಟಿದ್ದರು. ಇದೊಂದು ಅಮೂಲ್ಯಕ್ಷಣ.
ಒಂದು ಸಾರಿ ನಾವೆಲ್ಲಾ ಗೆಳೆಯರು ಪ್ರೊ. ಮಿತ್ರ ಅವರು ಈಗ ನಮಗೆ ಹತ್ರ. ಅವರತ್ರ ಇರುವ ಅಮೂಲ್ಯ ಜ್ಞಾನವನ್ನು ನಾವೂ ಪಡೆದುಕೊಳ್ಳಬೇಕಾದರೆ ಯಾವಾಗಲೋ ಒಂದೊAದು ಕಾರ್ಯಕ್ರಮ ಆದರೆ ಸಾಲದು. ಪದೇ ಪದೇ ಅವರ ಮಾತುಗಳನ್ನು ಕೇಳಬೇಕು ಎನಿಸಿದಾಗ ಮತ್ತು ಹೀಗೆ ಅನಿಸಿದ್ದನ್ನು ಅವರ ಮುಂದೆ ಹೇಳಿದ್ದಾಗ ನೀವೆಲ್ಲಾ ಒಂದು ಕಡೆ ಸರ್ಕೊಳಿ. ನಾನು ಬಂದು ಹಳೆಗನ್ನಡ, ಕುಮಾರವ್ಯಾಸ ಮುಂತಾದ ವಿಷಯಗಳ ಬಗೆಗೆ ಮಾತಾಡ್ತೀನಿ ಎಂದು ಹೇಳಿದ್ದರು. ಆಗ ನಮಗೆ ಸಂಪನ್ಮೂಲದ್ದೇ ಕೊರತೆ. ಆಗ ನಮ್ಮ ಅತ್ಯಾಪ್ತರಾಗಿದ್ದ ಷಡಕ್ಷರಿ ಅವರನ್ನು ಕೇಳಿಕೊಂಡಾಗ ಷಡಕ್ಷರಿ ಅವರು ತಮ್ಮ ಹೋಟೆಲಿನಲ್ಲಿಯೇ ಒಂದು ದಿನದ ಕಾರ್ಯಾಗಾರವನ್ನು ಏರ್ಪಾಡು ಮಾಡಿದ್ದರು.
ಪ್ರೊ. ಮಿತ್ರ ಅವರು ಯಾರನ್ನೂ ತಮಾಷೆ ಮಾಡುವುದು ಬಿಟ್ಟಿಲ್ಲ. ಆದರೆ ಅವರು ತಮಾಷೆ ಮಾಡುವುದನ್ನು ಯಾರೂ ತಪ್ಪಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಒಂದು ಸಾರಿ ನಮ್ಮ ಹಾಸ್ಯೋತ್ಸವದಲ್ಲಿ ಷಡಕ್ಷರಿ ಅವರು ಮತ್ತು ಪ್ರೊ. ಮಿತ್ರ ಅವರು ಪಕ್ಕಪಕ್ಕದಲ್ಲಿ ಕೂತಿದ್ದರು. ಅದು ಬಹುಶ: ಪ್ರೊ. ಮಿತ್ರ ಅವರಿಗೆ ಷಡಕ್ಷರಿ ಅವರ ಪ್ರಥಮ ಪರಿಚಯ ಇರಬಹುದು. ಪಕ್ಕದಲ್ಲಿದ್ದ ಷಡಕ್ಷರಿ ಅವರನ್ನು ನೋಡುತ್ತಾ ನೋಡಿ ನಮ್ಮಲ್ಲಿ ಎದೆ ಬಗೆದರೂ ನಾಕಕ್ಷರ ಇಲ್ಲ ಎನ್ನುವ ಮಾತಿದೆ ಆದರೆ ಇಲ್ಲಿದ್ದಾರೆ ನೋಡಿ ಆರು ಅಕ್ಷರ ಇರೋರು, ಷಡಕ್ಷರಿ ಅಂದರು. ಜನ ಚನ್ನಾಗಿ ನಕ್ಕರು.
ಇನ್ನೊಮ್ಮೆ ಪರ್ವತವಾಣಿ ಅವರ ನೆನಪಿನ ಹಾಸ್ಯೋತ್ಸವ. ಪರ್ವತವಾಣಿ ಅವರದು ಒಂದು ರೀತಿ ಗಡಸು ಮುಖ. ನೋಡಿದವರು ಈಯಪ್ಪನ್ನ ಹೇಗಪ್ಪಾ ಮಾತಾಡಿಸೋದು ಎನ್ನುವ ಹಾಗೆ ಭಯ ಆಗುವಂಥಾ ಮುಖ. ಆ ವರ್ಷ ಪರ್ವತವಾಣಿ ನೆನಪಿನ ಹಾಸ್ಯೋತ್ಸವಕ್ಕೆ ಪರ್ವತವಾಣಿ ಅವರ ಮಗ ಪ್ರಸಾದ್ ಕೂಡಾ ಬಂದಿದ್ದು ಮುಂದಿನ ಸಾಲಿನಲ್ಲಿ ಕೂತಿದ್ದರು. ಪ್ರಸಾದ್ ಮುಖ್ ಥೇಟ್ ಪರ್ವತವಾಣಿ ಅವರ ಮುಖವೇ. ಒಂದಿಷ್ಟೂ ವ್ಯತ್ಯಾಸವಿಲ್ಲ. ಪ್ರೊ. ಮಿತ್ರ ಅವರು ಹಾಸ್ಯೋತ್ಸವದಲ್ಲಿ ಮಾತಾಡುತ್ತಾ ಮೊದಲಿಗೆ ಕೆಲವು ಮಾತುಗಳನ್ನು ಪರ್ವತವಾಣಿ ಅವರ ಬಗೆಗೆ ಹೇಳಿ ನೀವೆಲ್ಲಾ ಪರ್ವತವಾಣಿ ಅವರನ್ನು ನೊಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ಅವರ ಮಗ ಬಂದಿದ್ದಾರೆ. ಮಗನನ್ನು ನೋಡಿದರೆ ಅಪ್ಪನನ್ನು ನೋಡಿದಂತೆಯೇ. ಪ್ರಸಾದು ಸ್ವಲ್ವ ಎದ್ದು ನಿಂತ್ಕೋಪ್ಪ ಅಂದು ಪ್ರಸಾದ್ ಎದ್ದು ನಿಂತು ಸಭಿಕರಿಗೆ ಕೈ ಮುಗಿಯುತ್ತಿರುವಾಗ ನೋಡಿ ಪರ್ವತವಾಣಿ ಹೀಗೇ ಇದ್ದಿದ್ದು. ಅದೇ ದುರಹಂಕಾರದ ಮುಖ ಎಂದಾಗ ಸೇರಿದ್ದ ಎರಡು ಸಾವಿರಕ್ಕೂ ಹೆಚ್ಚು ಜನ ಏಕಕಂಠದಿAದ ನಕ್ಕಿದ್ದು ಇನ್ನೂ ಚನ್ನಾಗಿ ನೆನಪಿದೆ.
ಪ್ರತಿಯೊಂದು ಹಾಸ್ಯೋತ್ಸವಕ್ಕೂ ಪ್ರೊ. ಮಿತ್ರ ಅವರ ಛಾಪು ಇಲ್ಲದೇ ಅದು ಯಶಸ್ವಿಯಾಗುತ್ತಿರಲಿಲ್ಲ. ಅವರ ಒಂದು ವಿಶೇಷತೆ ಎಂದರೆ ತಮ್ಮನ್ನು ತಾವು ಹಾಸ್ಯೋತ್ಸವಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು. ಆಗೆಲ್ಲಾ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ನಾವು ಕಾರ್ಯಕರ್ತರು ಹಿಂದಿನ ದಿನ ( ಅದಕ್ಕೆ ತಮಾಷೆಯಾಗಿ ನಾವು ಹಾಸ್ಯೋತ್ಸವದ ವರಪೂಜೆ ಎನ್ನುತ್ತಿದ್ದೆವು ) ಎಚ್. ಎನ್. ಕಲಾಕ್ಷೇತ್ರದಲ್ಲಿ ಸೇರುತ್ತಿದ್ದೆವು. ನಾವು ಪ್ರೊ. ಮಿತ್ರರಿಗೆ ತೊಂದರೆ ಕೊಡಬಾರದು ಎಂದು ಹಿಂದಿನ ದಿನದ ವಿಚಾರ ಅವರಿಗೆ ಹೇಳಿರಲಿಲ್ಲ. ಆದರೆ ಅವರೇ ಅಷ್ಟು ದೂರದಿಂದ ಬರೋರು. ನಮ್ಮ ಜೊತೆ ಒಂದಿಷ್ಟು ಹೊತ್ತು ಇದ್ದು ನೋಡ್ರಪ್ಪಾ ಕಾರ್ಯಕ್ರಮ ಸರಿಯದ ಸಮಯಕ್ಕೆ ಷುರು ಮಾಡಬೇಕು. ಯಾರಿಗೂ ಕಾಯೋದು ಬೇಡ ಎಂದಿದ್ದರು. ಮತ್ತೆ ಮರುದಿನ ಹಾಸ್ಯೋತ್ಸವ ಪ್ರಾರಂಭ ಹತ್ತು ಗಂಟೆಗೆ ಎಂದರೆ ಅವರು ಅರ್ಧಗಂಟೆ ಮುಂಚೆ ಹಾಜರಿರುತ್ತಿದ್ದರು. ಮಿತ್ರ ರ್ತಾರೆ ಎಂದರೆ ಸಾಕು ನೂರಾರು ಜನ ಮೊದಲೇ ಬಂದು ಅವರೊಂದಿಗೆ ಮಾತಿನಲ್ಲಿ ಮುಳುಗುತ್ತಿದ್ದರು. ಪ್ರೊ. ಮಿತ್ರ ಅವರ ಪಾಲ್ಗೊಳ್ಳುವಿಕೆಯಿಂದ ಹಾಸ್ಯೋತ್ಸವಕ್ಕೆ ಅಂತಾರಾಷ್ಟಿçÃಯ ಛಾಪು ಮೂಡಿತು ಎಂದರೆ ತಪ್ಪಲ್ಲ. ಅವರ ಸಂಪರ್ಕದ ಇಂಗ್ಲೆAಡಿನಿAದ, ಅಮೆರಿಕಾದಿಂದ ಹಾಸ್ಯಸಕ್ತರು ತಮ್ಮ ರಜಾದಿನಗಳನ್ನು ಹಾಸ್ಯೋತ್ಸವದ ದಿನಗಳಿಗೆ ಹೊಂದಾಣಿಕೆ ಮಾಡಿಕೊಂಡು ಬರುತ್ತಿದ್ದರು. ಇದೆಲ್ಲಾ ಯಾಕೆ ಹೇಳಿದೆ ಎಂದರೆ ಪ್ರೊ.ಮಿತ್ರ ಅವರು ಯಾವುದಾದರೂ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು ಎಂದರೆ ಅದರಲ್ಲಿ ಸಂಪೂರ್ಣ ಯಶಸ್ಸು ಕಾಣುವಂತೆ ನೋಡಿಕೊಳ್ಳುತ್ತಿದ್ದರು.
ಆಗ ನಾನು ಅಂಕಿತ ಪುಸ್ತಕದವರಿಗಾಗಿ ಬೆಸ್ಟ್ ಆಫ್ ಎಚ್. ಕೆ. ರಂಗನಾಥ್, ಬೆಸ್ಟ್ ಆಫ್ ಬಿ.ಜಿ.ಎಲ್. ಸ್ವಾಮಿ ಮುಂತಾದ ಗ್ರಂಥಗಳನ್ನು ಸಂಪಾದಿಸಿಕೊಟ್ಟಿದ್ದೆ. ನಂತರ ಅವರು ನೀವು ಪ್ರೊ. ಅ.ರಾ.ಮಿತ್ರ ಮತ್ತು ಡಾ. ಪ್ರಭುಶಂಕರ ಅವರ ಬೆಸ್ಟ್ ಲೇಖನಗಳನ್ನು ಆಯ್ದು ಸಂಗ್ರಹ ಮಾಡಿಕೊಡಿ ಎಂದರು. ನಾನು ಡಾ. ಪ್ರಭುಶಂಕರ ಅವರಿಗೆ ದೂರವಾಣಿ ಮಾಡಿ ಕೇಳಿದಾಗ ಅದಕ್ಕೇನಂತೆ ಮಾಡಿ ಅಂದರು. ನೀವು ಪ್ರೊ. ಮಿತ್ರ ಅವರ ಬಳಿ ಮಾತಾಡಿ, ಇಬ್ಬರದೂ ಒಟ್ಟಿಗೇ ಮಾಡೋಣ ಅಂದೆ. ನಂತರ ಸರ್. ನಿಮ್ಮ ಗ್ರಂಥಗಳು ನನ್ನಲ್ಲಿ ಒಂದೋ ಎರಡೋ ಇದೆ. ಎಲ್ಲವೂ ಬೇಕಲ್ಲ ಅಂದೆ. ಅದಕ್ಕೆ ಡಾ. ಪ್ರಭುಶಂಕರ ಅವರು ಅದಕ್ಕೇನಂತೆ ನಾನು ಮುಂದಿನ ವಾರ ಬೆಂಗಳೂರಿಗೆ ರ್ತಿದೀನಿ. ನೀವು ಬಸವನಗುಡಿಗೆ ಬನ್ನಿ ಎಲ್ಲಾ ಪುಸ್ತಕಗಳನ್ನೂ ಕೊಡ್ತೀನಿ ಅಂದರು. ಅಂತೆಯೇ ಅವರ ಎಲ್ಲಾ ಪುಸ್ತಕಗಳೂ ನನಗೆ ತಲುಪಿದವು. ಅವರೂ ಪ್ರೊ. ಮಿತ್ರ ಅವರ ಜೊತೆ ಮಾತಾಡಿ ಬೇಲೂರು ಸಂಗ್ರಹ ಮಾಡ್ತಿನಿ ಅಂತಿದಾನೆ ಮಾಡ್ಲಿ ಬಿಡು ಅಂದಿದ್ದರAತೆ. ಆದರೆ ಪ್ರೊ. ಮಿತ್ರಿರಿಗೆ ಅದೇಕೋ ಇಂಥಾ ಸಂಗ್ರಹದಲ್ಲಿ ಆಸಕ್ತಿ ಇದ್ದಂತಿರಲಿಲ್ಲ. ಮೊದಲಿಗೆ ಬೇಡ ಅಂದರು. ನಂತರ ನೀನು ಏನು ಬೇಕಾದರೂ ಮಾಡ್ಕೊ ಅಂದರು. ಅಂತೂ ಒಂದೆರಡು ಮೂರು ತಿಂಗಳ ನಿರಂತರ ಪರಿಶ್ರಮದಿಂದ ಆಯ್ತು ಮಾಡು ಅಂದು ಅನುಮತಿ ಕೊಟ್ಟರು. ನಾನು ಸಂಗ್ರಹ ಮಾಡಿದ್ದ ಅವರ ಲೇಖನಗಳನ್ನು ಅವರಿಗೆ ತೋರಿಸಲು ಹೋದಾಗ ನೀನು ಇದರ ಸಂಪಾದಕ, ನಿನಗೆ ಯಾವುದು ಬೇಕೋ ಅದನ್ನು ಆಯ್ದುಕೋ, ನನ್ನನ್ನು ಕೇಳಬೇಡ ಅಂದರು. ಅಂತೆಯೇ ಬೆಸ್ಟ್ ಆಫ್ ಪ್ರಭುಶಂಕರ, ಮತ್ತು ಬೆಸ್ಟ್ ಆಫ್ ಅ.ರಾ.ಮಿತ್ರ ಗ್ರಂಥ ಸಿದ್ದವಾಗಿ ಅದು ಅದ್ದೂರಿಯಾಗಿ ಬಿಡುಗಡೆಯೂ ಅಯಿತು. ಆ ಎರಡೂ ಗ್ರಂಥಗಳು ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.
ಬರುಬರುತ್ತಾ ನನ್ನ ಅವರ ಅನುಬಂಧ ಹೇಗೆ ಆಯಿತು ಎಂದರೆ ನಾನು ಪ್ರೊ. ಮಿತ್ರ ಅವರನ್ನು ಅಂದಿನ ದಿನಗಳಲ್ಲಿ ನೋಡಿದಾಗ ಮತ್ತು ಈಗ ನೋಡುತ್ತಿರುವಾಗಲೂ ಸಹ ನಾನು ಸುಮ್ಮನೇ ಒಬ್ಬ ಹಿರಿಯ ಲೇಖಕರನ್ನು ನೋಡುತ್ತಿಲ್ಲ, ಬದಲಾಗಿ ನನ್ನ ಕುಟುಂಬದ ಒಬ್ಬ ಹಿರಿಯ ಸದಸ್ಯರನ್ನು ನೋಡುತ್ತಿದ್ದೇನೆ, ಅಷ್ಟೇ ಏಕೆ ನನ್ನ ಪಿತೃಸಮಾನರನ್ನು ನೊಡುತ್ತಿದ್ದೇನೆ ಎನ್ನುವ ಆತ್ಮವಿಶ್ವಾಸ ಬರೋದು. ಹೃದಯ ತುಂಬಿ ಸಂತೋಷ ಉಕ್ಕುತ್ತದೆ. ಎಷ್ಟೋ ದಿನಗಳಿಗೊಮ್ಮೆ ಅವರಿಗೆ ದೂರವಾಣಿ ಕರೆ ಮಾಡಿದರೂ ಸಾಕು ಅಷ್ಟೇ ಪ್ರೀತಿ, ವಿಶ್ವಾಸಗಳಿಂದ ಮಾತಾಡಿಸುತ್ತಾರೆ. ಅವರೊಂದು ನಡೆದಾಡುವ ವಿಶ್ವಕೋಶ ಎಂದರೂ ಸರಿಯೇ. ಅವರಿಂದ ಕಲಿಯುವುದು ನಿರಂತರವಾಗಿ ಇರುತ್ತದೆ. ಅಂಥಾ ಒಬ್ಬ ವಿದ್ವಾಂಸರನ್ನು, ಹೃದಯವಂತರನ್ನು, ಲೇಖಕರನ್ನು, ಮಾತುಗಾರರನ್ನು ಕಂಡಿದ್ದು ನಮ್ಮ ಪೂರ್ವಜನ್ಮದ ಸುಕೃತ ಎಂದು ಭಾವಿಸುತ್ತೇನೆ. ಬರೆಯುತ್ತಾ ಹೋದರೆ ಪ್ರೊ. ಮಿತ್ರ ಅವರ ನೆನಪುಗಳು ಕಾಡುತ್ತಲೇ ಇರುತ್ತವೆ. ಆದರೆ ಇಷ್ಟೇ ಸಾಕು ಎಂದು ನನ್ನ ಲೇಖನಿಗೆ ಇಲ್ಲಿಗೇ ವಿಶ್ರಾಂತಿ ನೀಡುತ್ತಾ, ಪ್ರೊ. ಮಿತ್ರ ಅವರ ಆಶೀರ್ವಾದ, ಹಾರೈಕೆ, ಶುಭನುಡಿಗಳು ನಮ್ಮ ಬಾಳಿಗೆ ಸದಾ ಆಸರೆಯಾಗಿರಲಿ ಎಂದು ಬಯಸುತ್ತೇನೆ.
ಸರಳ, ಸಹೃದಯ ಸಂಪನ್ನರಾದ ಪ್ರೊಫೆಸರ್ ಮಿತ್ರ ಅವರನ್ನು ಪರಿಚಯಿಸಿದ್ದಕ್ಕಾಗಿ ಶ್ರೀ ಬೇಲೂರು ರಾಮಮೂರ್ತಿ ಅವರಿಗೆ ಅನಂತ ಧನ್ಯವಾದಗಳು
ReplyDelete