ಕಡಲೇಕಾಯಿ/ಶೇಂಗಾ

ಕಡಲೇಕಾಯಿ/ಶೇಂಗಾ   

ಆರೋಗ್ಯ ಲೇಖನ - ಶ್ರೀಮತಿ ರಾಜಿ ಜಯದೇವ್ 

Accredited Practicing Dietitian


ಕಡಲೇಕಾಯಿ ಗಿಡದ ವೈಜ್ಞಾನಿಕ ಹೆಸರು ಆರೇಕಿಸ್ ಹೈಪೋಜಿಯ, ಲೆಗ್ಗ್ಯೂಮಿನೊಸಿ ಕುಟುಂಬಕ್ಕೆ ಸೇರಿದ್ದು. ಕಡಲೇಕಾಯಿಯ ಇತರ ಹೆಸರುಗಳು – ಶೇಂಗಾ, ನೆಲಗಡಲೆ, ಅರ್ತ್-ನಟ್, ಗ್ರೌಂಡ್-ನಟ್, ಪೀನಟ್ ಮತ್ತು ಮಂಕಿನಟ್. ಇದು ವಾರ್ಷಿಕ ಬೆಳೆ, ತವರು ಮಧ್ಯ ಅಮೇರಿಕಾ, ಕಾಲಾಂತರದಲ್ಲಿ ಪ್ರಪಂಚದ ಇತರ ಭಾಗಗಳಿಗೆ ಹರಡಿದೆಯೆಂದು ನಂಬಿಕೆ.  ಈ ಕೊಬ್ಬಿನ ಬೀಜವನ್ನು ವಾಣಿಜ್ಯ ಬೆಳೆಯಾಗಿ ಚೈನಾ, ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಆಫ್ರಿಕಾದ ಹಲವಾರು ದೇಶಗಳಲ್ಲಿ ಬೆಳೆಯುತ್ತಾರೆ.

ಪೋಷಕಾಂಶಗಳು

ಕಡಲೇಕಾಯಿಯಲ್ಲಿ ಸಸ್ಯಾಹಾರಿಗಳಿಗೆ ಬಲು ಅವಶ್ಯಕವಾದ ಪ್ರೋಟೀನ್ (25%), ಫೈಬರ್ (8%) ಮತ್ತು ಇತರ ಅನೇಕ ಪೋಷಕಾಂಶಗಳಿವೆ. ಅಲ್ಲದೆ ದೇಹರಕ್ಷಕ ಉತ್ಕರ್ಷಣ ನಿರೋಧಕಗಳಾದ (ಆ್ಯಂಟಿ-ಆಕ್ಸಿಡೆಂಟ್ಸ್ ಗಳು) ಮತ್ತು ಉರಿಯೂತ ವಿರೋಧಿಗಳಾದ (ಆ್ಯಂಟಿ-ಇಂಫ್ಲಮಟೋರಿ) ರಾಸಾಯನಿಕಗಳು ಕೂಡ ಗಣನೀಯ ಪ್ರಮಾಣದಲ್ಲಿವೆ. ಹೃದಯರೋಗ ತಡೆಹಿಡಿಯಲು ಅವಶ್ಯಕವಾದ ನಿಯಾಸಿನ್ ಮತ್ತು ಫೋಲೇಟ್ ಎಂಬ ಬಿ-ವಿಟಮಿನ್ ಗಳು ಅತಿ ಹೆಚ್ಚು ಪ್ರಮಾಣದಲ್ಲಿವೆ. ಒಟ್ಟು ಕೊಬ್ಬಿನ ಅಂಶ (ಫ್ಯಾಟ್) 50% ಇದ್ದರೂ, ಆರೋಗ್ಯಪೂರಕವಾದ ಮಾನೋ-ಅನ್ಸ್ಯಾಚುರೇಟೆಡ್ ಕೊಬ್ಬು 25% ಮತ್ತು ಪಾಲಿ-ಅನ್ಸ್ಯಾಚುರೇಟೆಡ್ ಕೊಬ್ಬು 16% ಇದೆ. ಅನಾರೋಗ್ಯಕರವಾದ ಸಾಂದ್ರೀಕೃತ ಕೊಬ್ಬು ಅತಿ ಕಡಿಮೆ ಪ್ರಮಾಣದಲ್ಲಿದೆ (6%). ಕೊಲೆಸ್ಟಿರಾಲ್ ಇಲ್ಲ (ಸಸ್ಯಜನ್ಯ ಆಹಾರ ಪದಾರ್ಥಗಳಲ್ಲಿ ಕೊಲೆಸ್ಟಿರಾಲ್ ಇರುವುದಿಲ್ಲ).

ಕಡಲೇಕಾಯಿಯನ್ನು ಸಿಪ್ಪೆ ಸಮೇತ ಉಪಯೋಗಿಸಬೇಕು. ಇಲ್ಲದಿದ್ದರೆ ಮೇಲೆ ಹೇಳಿದ ಹಲವಾರು ಪೋಷಕಾಂಶಗಳು ದೊರಕುವುದಿಲ್ಲ.

ಆರೋಗ್ಯದಾಯಕ ಮತ್ತು ಆರೋಗ್ಯಪೂರಕ ಗುಣಗಳು 

ಕಡಲೇಕಾಯಿ ಉಪಯೋಗಿಸುವುದರಿಂದ: 

ಹೃದಯರೋಗ, ಹೃದಯಾಘಾತ, ಪಾರ್ಶ್ವವಾಯು (ಲಕ್ವ) ಮುಂತಾದ ರೋಗಗಳನ್ನು ತಡೆಹಿಡಿಯಬಹುದು.

ರಕ್ತದಲ್ಲಿನ ಒಳ್ಳೆಯ (HDL) ಕೊಲೆಸ್ಟಿರಾಲನ್ನು ಹೆಚ್ಚಿಸಬಹುದು, ಕೆಟ್ಟ (LDL)  ಕೊಲೆಸ್ಟಿರಾಲನ್ನು ತಗ್ಗಿಸಬಹುದು.

ವಿಟಮಿನ್-ಇ (ಆ್ಯಂಟಿಆಕ್ಸಿಡೆಂಟ್) ಜೀವಕೋಶಗಳನ್ನು ರಕ್ಷಿಸಿ, ಕೆಲವು ಬಗೆಯ ಕ್ಯಾನ್ಸರ್ ಗಳನ್ನು ತಡೆಹಿಡಿಯುತ್ತದೆ.

ರೆಸ್ವೆರಾಟ್ರೋಲ್ ಎಂಬ ಉರಿಯೂತ ವಿರೋಧಿ (ಆ್ಯಂಟಿ-ಇಂಫ್ಲಮಟೋರಿ) ರಾಸಾಯನಿಕ, ಕ್ಯಾನ್ಸರ್ ಗಳಿಂದ, ಹೃದಯರೋಗಗಳಿಂದ ರಕ್ಷಣೆ ನೀಡುತ್ತದೆ. ಒಂದು ಗ್ಲಾಸ್ ಕೆಂಪು ಬಣ್ಣದ ವೈನ್ (red vine) ಸೇವಿಸಿ ಎಂದು ಹೃದಯ ರೋಗಿಗಳಿಗೆ ವೈದ್ಯರು ಹೇಳುವುದನ್ನು ನೀವು ಕೇಳಿದ್ದೀರಲ್ಲವೇ? ಕಾರಣ, ರೆಡ್ ವೈನ್ ನಲ್ಲಿ ರೆಸ್ವೆರಾಟ್ರೋಲ್ ಇರುತ್ತದೆ. ಕಾಲು ಲೋಟ (70 ಮಿಲಿಲೀಟರ್) ಬೇಯಿಸಿದ ಕಡಲೆಕಾಯಿಯಲ್ಲಿ, ಒಂದು ಗ್ಲಾಸ್ ರೆಡ್ ವೈನ್ ನಲ್ಲಿ ಇರುವಷ್ಟೇ ರೆಸ್ವೆರಾಟ್ರೋಲ್ ಇರುತ್ತದೆ. ಸಿಪ್ಪೆ ಸಹಿತ ಸೇವಿಸಿದರೆ ಮಾತ್ರ ರೆಸ್ವೆರಾಟ್ರೋಲ್ ದೊರಕುತ್ತದೆ. 

ಕೊಳ್ಳುವುದು ಮತ್ತು ಶೇಖರಿಸಿಡುವುದು ಹೇಗೆ?

ಕಡಲೇಕಾಯಿಯನ್ನು ಕೊಳ್ಳುವಾಗ ಅದರಲ್ಲಿ ತೇವಾಂಶ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ಗಾಳಿ, ಬೆಳಕು ಮತ್ತು ಶಾಖ ತಗಲಿದರೆ ಕಡ್ಲೆಕಾಯಿಯು ಗುಣಮಟ್ಟ ಕ್ಷೀಣಿಸುತ್ತದೆ. ರುಚಿ ಕೆಡುತ್ತದೆ. ಆದ್ದರಿಂದ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಳ ಮುಚ್ಚಿ, ತಂಪಾದ, ಬೆಳಕಿಲ್ಲದ, ಒಣಜಾಗದಲ್ಲಿ ಸಂಗ್ರಹಿಸಿಡಿ.

ಕಡಲೇಕಾಯಿ ಎಣ್ಣೆ

ಕಡಲೇಕಾಯಿ ಎಣ್ಣೆಯನ್ನು ದಕ್ಷಿಣ ಮತ್ತು ದಕ್ಷಿಣ ಪೂರ್ವ ಏಷ್ಯಾದ ಹಲವಾರು ದೇಶಗಳಲ್ಲಿ ಅಡಿಗೆಗೆ ಬಳಸುತ್ತಾರೆ. ಆಹಾರ ಪದಾರ್ಥಗಳನ್ನು ಕರಿಯಲು ಇದು ಅತ್ಯಂತ ಸೂಕ್ತವಾದ ಎಣ್ಣೆ. ಕಾರಣ: ಇದನ್ನು ಹೆಚ್ಚು ಉಷ್ಣಮಾನಕ್ಕೆ ಕಾಯಿಸಿದರೂ ಹೊಗೆಯಾಡುವುದಿಲ್ಲ (ಸ್ಮೋಕ್ ಪಾಯಿಂಟ್ 225°C), ಪದಾರ್ಥಗಳು ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ. ಒಮ್ಮೆ ಕರಿಯಲು ಉಪಯೋಗಿಸಿದ ಎಣ್ಣೆಯನ್ನು ಮತ್ತೊಂದು ಸಲ ಮಾತ್ರ ಉಪಯೋಗಿಸಬಹುದು. ಆದರೆ ಒಂದು ಚೊಕ್ಕಟವಾದ ಬಟ್ಟೆಯಲ್ಲಿ ಶೋಧಿಸಿ, ಶೀಸೆಯಲ್ಲಿ ಹಾಕಿ, ಬಿಗಿಯಾಗಿ ಮುಚ್ಚಳ ಮುಚ್ಚಿ ತಂಪಾದ ಸ್ಥಳದಲ್ಲಿ ಅಥವಾ ರೆಫ್ರಿಜರೇಟರಿನಲ್ಲಿ ಇಟ್ಟಿರಬೇಕು.  

ಕಡಲೇಕಾಯಿ ಎಣ್ಣೆ ಆರೋಗ್ಯಪೂರಕ, ಭಾರತೀಯ ಅಡಿಗೆಗೆ ಚೆನ್ನಾಗಿ ಹೊಂದುತ್ತದೆ ಎನ್ನುವುದು ನಿಜ. ಹಾಗೆಂದು ಹೆಚ್ಚು ಬಳಸಬೇಡಿ. ದಿನಕ್ಕೆ ಒಬ್ಬರಿಗೆ 4 ರಿಂದ  8 ಟೀ ಚಮಚೆ ಎಣ್ಣೆ ಸಾಕು. ನೆನಪಿಡಿ: ಒಂದು ಟೀ ಚಮಚೆ ಎಣ್ಣೆಯಲ್ಲಿ 45 ಕ್ಯಾಲೋರಿಗಳಿವೆ. ಎಣ್ಣೆಯನ್ನು ಒಗ್ಗರಣೆಗೆ ಮಾತ್ರ ಬಳಸಿ. ಕರಿದ ತಿನಿಸುಗಳನ್ನು ವಿಶೇಷ ಸಮಾರಂಭಗಳಲ್ಲಿ ಮಾತ್ರ ಸೇವಿಸಿ.

ಯಾವ ಬಗೆಯ ಎಣ್ಣೆ?                  



ಮುಖ್ಯವಾಗಿ ಎರಡು ಬಗೆಯ ಕಡಲೇಕಾಯಿ ಎಣ್ಣೆಗಳಿವೆ.

1. ಸಂಸ್ಕರಿಸದ (ಅನ್ ರಿಫೈನ್ಡ್) ಎಣ್ಣೆ. ಕೋಲ್ಡ್ ಪ್ರೆಸ್ಸ್ಡ್ ಪೀನಟ್ ಆಯಿಲ್ ಎಂಬ ಲೇಬಲ್ ಇರುತ್ತದೆ.  ಎಣ್ಣೆ ತೆಗೆಯುವಾಗ ರಾಸಾಯನಿಕಗಳನ್ನೂ, ಶಾಖವನ್ನೂ ಉಪಯೋಗಿಸುವುದಿಲ್ಲ. ತಿಳಿ ಹಳದಿ ಬಣ್ಣ, ಸಿಹಿ ಎನಿಸುವಂತ ರುಚಿ ಮತ್ತು ಸುವಾಸನೆ ಹೊಂದಿರುತ್ತದೆ

2. ಸಂಸ್ಕರಿಸಿದ (ರಿಫೈನ್ಡ್ ಎಣ್ಣೆ) ಎಣ್ಣೆ ರಾಸಾಯನಿಕಗಳನ್ನೂ, ಶಾಖವನ್ನೂ ಉಪಯೋಗಿಸಿ ತೆಗೆದ ಎಣ್ಣೆ. ಬಣ್ಣವನ್ನೂ, ವಾಸನೆಯನ್ನೂ, ಅಲರ್ಜಿಯನ್ನುಂಟು ಮಾಡುವ ಅಂಶಗಳನ್ನು ಕಳೆದುಕೊಂಡಿರುತ್ತದೆ. ಸಾಮಾನ್ಯವಾಗಿ ಎಲ್ಲ ಸೂಪರ್ ಮಾರ್ಕೆಟ್ಟಿನಲ್ಲಿ ದೊರಕುತ್ತದೆ. ಇದರಲ್ಲಿ ಎರಡು ವಿಧ.

ಪ್ಯೂರ್ ಅಥವಾ 100% ಪೀನಟ್ ಆಯಿಲ್ (pure or 100% peanut oil) – ಶೀಸೆಯ ಮೇಲೆ 100% ಅಥವಾ ಇನ್ ಗ್ರೀಡಿಯೆಂಟ್ಸ್ ಎಂಬಲ್ಲಿ ಕಡಲೇಕಾಯಿ ಎಣ್ಣೆ ಎಂದು ಮಾತ್ರ ಬರೆದಿದೆ ಎಂದು ಖಚಿತಪಡಿಸಿಕೊಳ್ಳಿ.

ಪೀನಟ್ ಆಯಿಲ್ (peanut oil or blended peanut oil) – ಅಗ್ಗಬೆಲೆಯಲ್ಲಿ ದೊರಕುವ ಸೋಯಾ ಅಥವಾ ಕೆನೋಲ ಎಣ್ಣೆಯನ್ನು ಬೆರಕೆ ಮಾಡಿರುತ್ತಾರೆ.

ಸಂಸ್ಕರಿಸದ (ಅನ್ ರಿಫೈನ್ಡ್) ಎಣ್ಣೆಯನ್ನೇ ಖರೀದಿಸಿ.

ಶೇಖರಿಸಿಡುವುದು ಹೇಗೆ?

ಎಣ್ಣೆ ತಯಾರಿಸಿದ ಒಂದೆರಡು ವರ್ಷಗಳೊಳಗೆ ಉಪಯೋಗಿಸುವುದು ಉತ್ತಮ. ಶೀಸೆಯ ಮೇಲೆ ಎಣ್ಣೆ ತಯಾರಿಸಿದ ತಾರೀಕನ್ನು ನಮೂದಿಸಿರುತ್ತಾರೆ. ಗಾಳಿ, ಬೆಳಕು ಮತ್ತು ಶಾಖ ತಗಲಿದರೆ ಎಣ್ಣೆಯ ಗುಣಮಟ್ಟ ಕ್ಷೀಣಿಸುತ್ತದೆ. ರುಚಿ ಕೆಡುತ್ತದೆ. ಆದ್ದರಿಂದ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಳ ಮುಚ್ಚಿ, ತಂಪಾದ, ಬೆಳಕಿಲ್ಲದ ಸ್ಥಳದಲ್ಲಿಡಿ.

ಅಪಾಯ ಮತ್ತು ಮುನ್ನೆಚ್ಚರಿಕೆ

ನೀವು ಕಡಲೇಕಾಯಿ ಅಲರ್ಜಿಯ ಬಗ್ಗೆ ಕೇಳಿರಬಹುದು. ಈ ಸಮಸ್ಯೆ ನಿಮಗಿದ್ದಲ್ಲಿ ಸಂಸ್ಕರಿಸಿದ (refined) ಕಡಲೇಕಾಯಿ ಎಣ್ಣೆಯನ್ನೇ ಉಪಯೋಗಿಸಿ.

ಅಫ್ಲಟಾಕ್ಸಿನ್ (aflatoxin) ಎಂಬುದು ನಾಯಿಕೊಡೆ ಅಥವಾ ಅಣಬೆಗಳಲ್ಲಿ ಉತ್ಪನ್ನವಾಗುವ ವಿಷ. ಈ ವಿಷ ಕ್ಯಾನ್ಸರ್ ಉಂಟುಮಾಡಬಹುದು. ವಾಣಿಜ್ಯ ಬೆಳೆಗಳಾದ ಕಡಲೇಕಾಯಿ, ಜೋಳ ಇತ್ಯಾದಿ ಮತ್ತು ಅಡಿಗೆಗೆ ಬಳಸುವ ಎಣ್ಣೆಗಳು (ಉದಾ: ಆಲಿವ್, ಕಡಲೇಕಾಯಿ ಮತ್ತು ಎಳ್ಳು) ಮುಂತಾದುವುಗಳಿಗೆ ಅಫ್ಲಟಾಕ್ಸಿನ್ ಸೋಂಕು ಉಂಟಾಗಬಹುದು. ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಕಡಲೇಕಾಯಿಗಳನ್ನು ಪರೀಕ್ಷಿಸಿ, ಅಫ್ಲಟಾಕ್ಸಿನ್ ಸೋಂಕು ಇದ್ದವುಗಳನ್ನು ನಾಶಮಾಡಲಾಗುತ್ತದೆ. ಭಾರತದಲ್ಲಿ ಈ ಪರೀಕ್ಷೆ ನಡೆಯುತ್ತದೋ, ಇಲ್ಲವೋ ಎಂದು ತಿಳಿದಿಲ್ಲ. ಆದ್ದರಿಂದ ಪ್ರತಿಷ್ಠಿತ ಸಂಸ್ಥೆಗಳು (ಕಂಪನಿಗಳು) ತಯಾರಿಸಿದ ಎಣ್ಣೆಯನ್ನು ಖರೀದಿಸುವುದು ಉತ್ತಮ.

ಕಡಲೇಕಾಯಿ ಭಾರತೀಯರಿಗೆ ಬಲು ಪ್ರಿಯ. ಅಲ್ಲದೆ ಕೊಲೆಸ್ಟಿರಾಲನ್ನು ನಿಯಂತ್ರಣದಲ್ಲಿಡಲು, ಹೃದಯರೋಗಗಳನ್ನು ತಡೆಹಿಡಿಯಲು ಪ್ರತಿದಿನ 25 – 30 ಗ್ರಾಂ ಸಿಪ್ಪೆ ಸಮೇತ ಕಡ್ಲೇಕಾಯಿ ಸೇವಿಸಿ.

ಕಡಲೇಕಾಯಿಯ ಪಾಕವಿಧಾನಗಳು 

ಕಡಲೇಕಾಯಿ  ಚಟ್ನಿಪುಡಿ

ಬೇಕಾಗುವ ಸಾಮಗ್ರಿಗಳು

250 ಗ್ರಾಂ ಕಡಲೇಕಾಯಿ

1 ಟೀ ಚಮಚ ಎಣ್ಣೆ

1 - 2 ಟೀ ಚಮಚ ಅಚ್ಚ ಕಾರದ ಪುಡಿ

2 - 4 ಜಜ್ಜಿದ ಬೆಳ್ಳುಳ್ಳಿ ಹಳಕು  

2 - 4 ಟೀ ಚಮಚ ಅಮಚೂರ್ ಪುಡಿ ಅಥವಾ ಗೋಲಿ ಗಾತ್ರ ಹುಣಿಸೇಹಣ್ಣು 

1/4 ಟೀ ಚಮಚ ಉಪ್ಪು

ಕಡಲೇಕಾಯಿ ಬೀಜವನ್ನು ಒಂದು ಟೀ ಚಮಚ ಎಣ್ಣೆಯಲ್ಲಿ ಗರಿ ಗರಿಯಾಗುವಂತೆ ಹುರಿಯಿರಿ. ಸಿಪ್ಪೆ ತೆಗೆಯಬೇಡಿ. ಮೇಲೆ ಹೇಳಿದ ಎಲ್ಲ ಸಾಮಗ್ರಿಗಳೊಂದಿಗೆ ಸೇರಿಸಿ ಪುಡಿ ಮಾಡಿ, ಒಂದು ಡಬ್ಬಿಯಲ್ಲಿ ಹಾಕಿ ಬಿಗಿಯಾಗಿ ಮುಚ್ಚಳ ಮುಚ್ಚಿಡಿ. ರೆಫ್ರಿಜರೇಟರ್ ನಲ್ಲಿಟ್ಟರೆ 6 ತಿಂಗಳುಗಳ ಕಾಲ ಚೆನ್ನಾಗಿರುತ್ತದೆ. 

ಈ ಚಟ್ನಿಪುಡಿಯನ್ನು ಮೊಸರಿನಲ್ಲಿ ಕಲಸಿ; ರೊಟ್ಟಿ ಮತ್ತು ಚಪಾತಿಯೊಂದಿಗೆ ಸೇವಿಸಬಹುದು.

ಈ ಚಟ್ನಿಪುಡಿ ಹಾಕಿ ಮಾಡಿದ ಚಪಾತಿ ಬಲು ರುಚಿ. 

—---

ಕಡಲೇಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು

1 ಲೋಟ (250 ಮಿಲಿಗ್ರಾಂ) ಕಡಲೇಕಾಯಿ

2 ಟೀ ಚಮಚ ಎಣ್ಣೆ

8-10 ಒಣಮೆಣಸಿನಕಾಯಿ

2 - 4 ಜಜ್ಜಿದ ಬೆಳ್ಳುಳ್ಳಿ ಹಳಕು

1/4 ಲೋಟ ತುರಿದ ತೆಂಗಿನಕಾಯಿ (60 ಮಿಲಿಗ್ರಾಂ)

 ಸಣ್ಣ ನಿಂಬೆ ಗಾತ್ರ ಹುಣಿಸೇಹಣ್ಣು

1/4 ಟೀ ಚಮಚ ಉಪ್ಪು

1/2 ಲೋಟ ನೀರು 

ಕಡಲೇಕಾಯಿ ಬೀಜವನ್ನು ಎಣ್ಣೆಯಲ್ಲಿ ಗರಿ ಗರಿಯಾಗುವಂತೆ ಹುರಿಯಿರಿ. ಅದಕ್ಕೆ ಒಣಮೆಣಸಿನಕಾಯಿಯನ್ನು ಹಾಕಿ ಕಂದು ಬಣ್ಣಕ್ಕೆ ಹುರಿಯಿರಿ. ತಣ್ಣಗಾದ ಮೇಲೆ ಮಿಕ್ಸರ್ ಗೆ ಹಾಕಿ  ಪುಡಿಮಾಡಿ. ಬೆಳ್ಳುಳ್ಳಿ, ತೆಂಗಿನಕಾಯಿ, ಹುಣಿಸೇಹಣ್ಣು, ಉಪ್ಪು ಹಾಕಿ ಪುಡಿ ಮಾಡಿ. ಕೊನೆಯಲ್ಲಿ ನೀರು ಸೇರಿಸಿ ನುಣ್ಣಗೆ ಅರೆಯಿರಿ. ಬೇಕಾದರೆ ಸಾಸಿವೆ, ಕರಿಬೇವು ಒಗ್ಗರಣೆ ಹಾಕಬಹುದು. ಇಡ್ಲಿ, ದೋಸೆಯೊಂದಿಗೆ ಸೇವಿಸಿ.

ಕಡಲೇಕಾಯಿ ಉಸಲಿ

1 ಲೋಟ ಬೇಯಿಸಿದ ಕಡಲೇಕಾಯಿಗೆ ನಿಮಗೆ ಬೇಕಿದಷ್ಟು ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಮಾಡಿದ ಉಸಲಿ ಸಂಜೆಯ ತಿಂಡಿಗೆ ಬಲು ಆರೋಗ್ಯಕರ. ಟೊಮೇಟೊ, ಕ್ಯಾರಟ್ ಬೆರೆಸಬಹುದು. ಬಿಸ್ಕಿಟ್, ಚಿಪ್ಸ್, ಚಕ್ಕುಲಿ, ಕೋಡುಬಳೆ ಬದಲು ಸೇವಿಸಿ.

ಮಸಾಲೆ ಕಡಲೇಕಾಯಿ

1 ಲೋಟ ಕಡಲೆಕಾಯಿಯನ್ನು ಚೆನ್ನಾಗಿ ಹುರಿದು ಒಂದು ಅಗಲವಾದ ಪಾತ್ರೆಗೆ ಹಾಕಿ.

ಒಂದು ಬಟ್ಟಲಿನಲ್ಲಿ ಅಚ್ಚ ಕಾರದ ಪುಡಿ, ಉಪ್ಪು, ಇಂಗು, ಅರಶಿಣ, ಮಾವಿನಕಾಯಿ ಪುಡಿ (ಅಮಚೂರ್) ಅಥವಾ ನಿಂಬೆರಸ ಹಾಕಿ, ಒಂದೆರಡು ಚಮಚ ನೀರು ಹಾಕಿ ಗಟ್ಟಿಯಾದ ಮಸಾಲೆ ಮಿಶ್ರಣವನ್ನು ತಯಾರಿಸಿ. ಹುರಿದಿರುವ ಕಡಲೆಕಾಯಿಗೆ ಈ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕಲಸಿ. ಒಂದು ಬಾಂಡಲೆಯಲ್ಲಿ ಒಂದೆರಡು ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕಡಲೇಕಾಯಿ ಮಸಾಲೆ ಮಿಶ್ರಣ ಹಾಕಿ ಮಧ್ಯಮ ಉರಿಯಲ್ಲಿ ಒಂದೆರಡು ನಿಮಿಷ ಹುರಿಯಿರಿ.      

 ಕಡಲೇಕಾಯಿ, ಶುಂಠಿ ಉಂಡೆ

1 ಲೋಟ ಕಡಲೆಕಾಯಿಯನ್ನು ಚೆನ್ನಾಗಿ ಹುರಿದು ಒಂದು ಪಾತ್ರೆಗೆ ಹಾಕಿ. ಅದಕ್ಕೆ 1 ಮೇಜಿನ ಚಮಚ ಹೆಚ್ಚಿದ ಶುಂಠಿ, 2 ಮೇಜಿನ ಚಮಚ ಎಳ್ಳು, 1 ಲೋಟ ಒಣ ದ್ರಾಕ್ಷಿ, 1/4 ಟೀ ಚಮಚ ಏಲಕ್ಕಿ ಪುಡಿ, 1/4 ಟೀ ಚಮಚ ಉಪ್ಪು ಹಾಕಿ, ಮಿಕ್ಸರ್ ನಲ್ಲಿ 1 ಕಡಲೇಕಾಯಿ ನಾಲ್ಕು ಹೋಳಾಗುವಂತೆ ಪುಡಿ ಮಾಡಿ. 2 ಮೇಜಿನ ಚಮಚ ಜೇನುತುಪ್ಪ ಹಾಕಿ, ಎಲ್ಲವೂ ಹೊಂದಿಕೊಳ್ಳುವಂತೆ ತರಿ ತರಿಯಾಗಿ ಅರೆಯಿರಿ. ಕೈಗೆ ಸ್ವಲ್ಪ ನೀರು ಸವರಿಕೊಂಡು ಉಂಡೆ ಕಟ್ಟಬಹುದು ಅಥವಾ ಒಂದು ತಟ್ಟೆಗೆ ಹಾಕಿ, ಚೌಕಾಕಾರವಾಗಿ ಕತ್ತರಿಸಬಹುದು.  

ಕೊನೆಮಾತು: ಸಂಸ್ಕರಿಸದ (ಅನ್ ರಿಫೈನ್ಡ್)  ಎಣ್ಣೆಯನ್ನೇ ಉಪಯೋಗಿಸಿ. ಕರಿದ ತಿನಿಸುಗಳನ್ನು ವಿಶೇಷ ಸಮಾರಂಭಗಳಲ್ಲಿ ಮಾತ್ರ ಬಳಸಿ. ಪ್ರತಿದಿನ 25 – 30 ಗ್ರಾಂ ಸಿಪ್ಪೆ ಸಮೇತ ಕಡ್ಲೇಕಾಯಿ ಸೇವಿಸಿ.

“ನೀವು ನಿಮ್ಮ ದೇಹವನ್ನು ಚೆನ್ನಾಗಿ ಪೋಷಿಸದಿದ್ದರೆ ನೀವೆಲ್ಲಿ ಇರಬಲ್ಲಿರಿ”?                                  

Comments

  1. ತುಂಬಾ ಉಪಯುಕ್ತ ಮಾಹಿತಿ. ತಿಳಿಸಿಕೊಟ್ಟ ಶ್ರೀಮತಿ ರಾಜೇಶ್ವರಿ ಅವರಿಗೆ ಧನ್ಯವಾದಗಳು

    ReplyDelete
  2. ನಾವು ದಿನನಿತ್ಯ ಬಳಸುವ, ನಮ್ಮ ನೆಚ್ಚಿನ ಕಡಲೇ ಬೀಜದಲ್ಲಿ ಎಷ್ಟೊಂದು ಆರೋಗ್ಯಕರ ಗುಣಗಳಿವೆ ಎಂದು ಆಶ್ಚರ್ಯ ಮತ್ತು ಸಂತೋಷವಾಗುತ್ತದೆ. ತಿಳಿಸಿಕೊಟ್ಟ ಶ್ರೀಮತಿ ರಾಜೇಶ್ವರಿಯವರಿಗೆ ಧನ್ಯವಾದ.

    ReplyDelete

Post a Comment