ಮಡದಿ ಮಿಡಿದ ನಾಕು ತಂತಿ
- ಲೇಖನ - ಶ್ರೀಯುತ ಅಣಕು ರಾಮನಾಥ್
“ಹೊಸ ವರ್ಷದ ಮೊದಲ ತಿಂಗಳ
ಕೊನೆಯ ದಿನದಂದು ಈ ವರ್ಷದ
ಉಡುಗೊರೆಯಾಗಿ ನಿನಗೇನು ಕೊಡಲಿ?” ಎಂದು
ಮಡದಿಯನ್ನು ಬೆಳ್ಳಂಬೆಳಗೇ ಕೇಳಿದೆ.
“ಬಂಗಾರ
ನೀರ ಕಡಲಾಚೆಗೀಚೆಗಿದೆ ನೀಲ ತೀರ ತೀರ
ಮಿಂಚು
ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ”
ಎಂದಳು ಮಡದಿ. ಅಹುದೆ? ಅವಳಿಗೆ
ಬೇಕಾದ್ದು ಬೇಂದ್ರೆಯವರ ಕವಿತೆಗಳ ಗುಚ್ಛವೆ? ಇಷ್ಟೆಗೆ
ಇಷ್ಟೇ ಇಷ್ಟವಾದರೂ ಬಾಳೇನೂ ಕಷ್ಟವಲ್ಲ.
“ತ್ವರೆಯಿಂ
ತರುವೆನಾ ಕವನ ಸಂಕಲನವ” ಎಂದು
ಘೋಷಿಸಿದೆ.
“ಕಡಲಿನ ಆಚೆಗೂ ಈಚೆಗೂ ಒಳ್ಳೊಳ್ಳೆಯ
ಬಂಗಾರದ ಒಡವೆಗಳು ನೀರವವಾದ ಸೂಕ್/ಅಂಗಡಿಗಳಲ್ಲಿ
ನೀಲಿಯ ಹಿನ್ನೆಲೆಯಲ್ಲಿ ಪವಡಿಸಿವೆ. ಆ ಆಭರಣಗಳು
ಮಿಂಚಿನ ಬಳಗವೋ ಎಂಬಂತೆ ಫಳಗುಟ್ಟುತ್ತಿರುವುದು
ತೆರೆತೆರೆಗಳಾಗಿ ಅಲೆದು ಕಣ್ಣಿಗೆ ಹಬ್ಬವಾಗಿವೆ.
ನಮ್ಮ ಪುಟ್ಟ ಎಂದರೆ ಸಂದೂಕದ
ಪೂರಾ ಅದು ತುಂಬಿಕೊಳ್ಳಲಿ ಎಂಬುದೇ
ನನ್ನ ಆಸೆ” ಎಂದಳು.
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’ ಎಂದು
ಬರೆದ ಕವಿಯ ಕವನವೊಂದರಲ್ಲಿ ಬಂಗಾರದ
ಬೇಡಿಕೆಯೂ ಸುಪ್ತವಾಗಿ ಅಡಗಿದೆಯೆಂದು ನನಗಂತೂ
ತಿಳಿದಿರಲಿಲ್ಲ. ಬೈ ದ
ವೇ ‘ನೀರ’ ಎಂದರೆ
‘ನೀರೆ’ ಎಂಬುದರ ಪುರುಷಾವತಾರವಂತೆ. ಇರಬಹುದೆ?
“ಕುರುಡು ಕಾಂಚಾಣ ಕುಣಿಯುತ್ತಲಿತ್ತ; ಕಾಲಿಗೆ
ಬಿದ್ದವರ ಒದಿಯುತ್ತಲಿತ್ತ ಎನ್ನುವುದನ್ನು ನೀನು ಅರಿಯೆಯಾ? ಬಿಡು
ಸ್ವರ್ಣವ್ಯಾಮೋಹ. ಸುತ್ತಲಿನ ಪರಿಸರವನ್ನು ನೋಡು.
ಗಮ ಗಮಾ ಗಮಾಡಿಸ್ತಾವ
ಮಲ್ಲಿಗಿ” ಎಂದೆ.
“ಸರಿ. ಯಾವುದಾದರೂ ಊರಿಗೆ ಹೋಗೋಣ”
ಎಂದಳು.
“ಒಪ್ಪಿದೆ.
ಮಕ್ಕಳನ್ನೂ, ನಿನ್ನ ಸೋದರಸೋದರಿಯರನ್ನೂ ಜೊತೆಗೆ
ಕರೆದುಕೊಂಡು ಒಳ್ಳೆ ಟ್ರಿಪ್ ಮಾಡಿ
ಬರೋಣ” ಎಂದೆ. ನನಗೆ ಎಂದೂ
ಜನಸಮುದ್ರದಲ್ಲಿ ದ್ವೀಪವಾಗಿರುವ ಹುಚ್ಚು.
“ಯಾರಿಗೂ
ಹೇಳೋಣು ಬ್ಯಾಡ
ಹಾರಗುದುರಿ
ಬೆನ್ನ ಏರಿ
ಸ್ವಾರರಾಗಿ
ಕೂತು ಹಾಂಗ
ದೂರ ದೂರ ಹೋಗೋಣಾಂತ’
ಎಂದಳಾಕೆ.
“ಕೂಡಿ ಬಾಳಿದರೆ ಸ್ವರ್ಗಸುಖ ಎಂದು
ಹಿರಿಯರು ಹೇಳಿದ್ದಾರೆ. ಎಲ್ಲರೊಡನೆ ಕೂಡಿಯೇ ಹೋಗೋಣ.
ಚೆನ್ನಾಗಿರುತ್ತದೆ” ಎಂದೆ.
ಒಂದು ಜೀವ ನೊಂದುಕೊಂಡು
ಹಗಲಿರುಳು
ಮಿಡುಕಾಡುತಿತ್ತ
ಮಿಡುಕುತಿತ್ತ
ತೊಡಕತಿತ್ತ
ಏನೋ ಒಂದ ಹುಡುಕತಿತ್ತ
ಅನ್ನೋದು ನಿಮಗೆ ಅರ್ಥವಾಗುವುದು ಯಾವಾಗ?
ಕುಡಿನೋಟಕ್ಕೂ, ನಲ್ವಾತಿಗೂ ಏಕಾಂತ ಸಿಗದ
ಕೂಡುಕುಟುಂಬದಲ್ಲಿ ಮನದ ಮಾಮರದ ಕೋಣಿಗೆ
ಕೋಕಿಲೊಂದು
ಕೂಡತಿತ್ತ
ಕೂಡತಿತ್ತ
ಹಾಡಬಿಟ್ಟು
ಬರೇ ನಿನ್ನ ನೋಡತಿತ್ತ
ಎಂದು ನುಡಿಯಲಾದರೂ ಸಾಧ್ಯವಿದೆಯೆ? ನಡೆಯಿರಿ, ಕೊಂಚ ಸಮಯ
ನಮಗಾಗಿ ಕಳೆದು ಬರೋಣ” ಎಂದಳಾಕೆ.
ನನಗೆ ಗೆಳೆಯ ಸತ್ಯೇಶ್ ಬೆಳ್ಳೂರರ
ಪ್ರವಾಸಾನುಭವವೊಂದರ ನೆನಪಾಯಿತು. ಅದಾವುದೋ ದೇಶದ ಅದಾವುದೋ
ಪಟ್ಟಣದಲ್ಲಿ ‘ಗಂಟೆಯ ಲೆಕ್ಕದಲ್ಲಿ ರೂಮುಗಳು
ಬಾಡಿಗೆಗೆ ದೊರೆಯುತ್ತವೆ’ ಎಂಬ ಫಲಕಗಳು ರಾರಾಜಿಸಿ,
‘ಓಹೋ! ಇದು ಬೇಟದಾಟದ ತಾಣಗಳು’
ಎಂದು ಸತ್ಯೇಶ್ ತೀರ್ಮಾನಿಸಿದರು. ಋಷ್ಯಶೃಂಗನ
ತುಣುಕಾದ ಅವರು ಇದರ ಮೂಲವನ್ನು
ತಡಕಿದಾಗ ತಿಳಿದದ್ದು ಅಲ್ಲಿನ ಗೂಡುಗೃಹಗಳಲ್ಲಿ
ಕೂಡುಕುಟುಂಬಗಳಿದ್ದು ಸತಿಪತಿಯರು
ಕಂಡಿತು
ಕಣ್ಣು ಸವಿದಿತು ನಾಲಗೆ
ಪಡೆದೀತೀ
ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು
ಕಿವಿಯು ಮೂಸಿತು ಮೂಗು
ತನ್ಮಯವೀ
ಗೇಹಾ
ಎಂದು ಸಂಭ್ರಮಿಸಲು ಈ ಗೇಹಗಳಿಗೆ
ಬರುವರಂತೆ. ಏಕಾಂತದಲ್ಲಿ ‘ಏ ಕಾಂತ’
ಎನ್ನಲೂ ಆ ದೇಹದಲ್ಲಿ
ಕುರುಡು ಕಾಂಚಾಣ ಝಣಝಣಿಸಬೇಕು!
“ಬೇಂದ್ರೆಯವರ
ಸಾಲುಗಳನ್ನೇ ಉದ್ಧರಿಸುತ್ತಿರುವೆಯಲ್ಲ, ‘ನಾಕು ತಂತಿ’ಯ
ಬಗ್ಗೆ ನಿನ್ನ ನಿಲುವೇನು?” ಎಂದೆ.
“ನಮ್ಮ ಮನೆಯ ಬಟ್ಟೆಗಳನ್ನು ಹರವಲು
ಆರಾದರೂ ತಂತಿಗಳು ಬೇಕು. ನಾಲ್ಕು
ಸಾಲದು” ಎಂದಳು.
“ಬೇಂದ್ರೆಯವರ
ನಾಕು ತಂತಿ...” ರಾಗವೆಳೆದೆ.
“ಕವಿಯ ಮನದಾಲಯದಿಂದ ಹೊಮ್ಮಿದ ಪದಗಳಿಗೆ ನೂರಾರು
ಬಣ್ಣಗಳು. ತೆಲುಗನು ‘ನಾಕು ತಂತಿ’
ಎಂದು ಅಂದು ನುಡಿದರೆ ಅದಕ್ಕೆ
‘ನಾಕು ತಂತಿ ಈ – ನನಗೆ
ಟೆಲಿಗ್ರಾಂ ಕೊಡು’ ಎಂಬ ಅರ್ಥ
ಮೂಡುತ್ತಿತ್ತು. ಅಕ ಎಂದರೆ
ದುಃಖ. ನ+ಅಕ
ಎಂದರೆ ನಾಕ ಅರ್ಥಾತ್ ದುಃಖವಿಲ್ಲದ
ಜಾಗ...”
“ನಾಕ ಎಂದರೆ ಸ್ವರ್ಗ ಅಲ್ಲವೆ?”
ಮೂಗು ತೂರಿಸಿದೆ.
“ಎಲ್ಲಿ ದುಃಖವಿಲ್ಲವೋ ಅದೇ ಸ್ವರ್ಗವೆಂದರಿಯೈ.”
“ಅಸ್ತು ಎಂದೆ. ನಾಕು ತಂತಿಯಲ್ಲಿ
ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS
ಸಾಲಿನ ಅರ್ಥವನ್ನು ತಿಳಿಸಿ ಪುಣ್ಯ
ಕಟ್ಟಿಕೋ. ಕುವೆಂಪುರವರ ‘ನಾನೇ ವೀಣೆ ನೀನೇ
ತಂತಿ’ಯ ಧಾಟಿಯಲ್ಲಿ
ಇಲ್ಲಿ ನೀನೇ ವೀಣೆ, ಕವನವೇ
ತಂತಿ, ನಿನ್ನಭಿಮತವೇ ವಿನಿಕೆ” ಎಂದೆ.
“ತೆಲುಗರನ್ನೂ,
ಆಂಗ್ಲರನ್ನೂ ಮೊರೆಹೊಕ್ಕರೆ ಅರ್ಥ ಸ್ಪಷ್ಟ. ಆವು
ಎಂದರೆ ಗೋವು” ಎಂದಳವಳು.
“ಓಹೋ! ಹಾಗಾದರೆ ಆ ಎಂದರೆ
ಗೋ ಎಂದು ಅರ್ಥವೇನು?”
ಕಾಮನ್ ಫ್ಯಾಕ್ಟರ್ ಅದ ‘ವು’
ತೆಗೆದು ಪದಸಮೀಕರಿಸಿದೆ.
“ಏಕಾಗಬಾರದು?
ಹಿಂದಿಯಲ್ಲಿ ಆಜಾ ಎಂದರೆ ಬಾ;
ಆ ಎಂದರೂ ಬಾ.
ಹಾಗಾಗಿ ಜಾ ಎಂದರೂ
ಹೋಗು ಎನ್ನುವ ಭಾವದ ಅರ್ಧಾಂಶವಿದೆಯಲ್ಲ.
ನಮ್ಮ ಸಂಸ್ಕೃತಿಯಲ್ಲೂ ‘ನಾನು ಬರ್ತೀನಿ’ ಎಂದರೆ
ಹೊರಡುವೆ ಎಂಬ ಅರ್ಥವಿದೆಯಲ್ಲ. ನೀನು
ಕೇಳಿದ ಆ ಎನ್ನುವದನ್ನು
ಹಿಂದಿಯಲ್ಲಿ ‘ಬಾ’ ಎಂದೂ, ಆಂಗ್ಲದಲ್ಲಿ
‘go’ ಎಂದೂ ಸ್ವೀಕರಿಸಿ, ‘ಆಜಾ’ಗೆ ಸಮೀಕರಿಸಿದರೆ
ಆ=ಗೋ ಎಂದಾಯಿತು.
ಅಲ್ಲದೆ ಸಂಸ್ಕೃತದ ಮೊರೆ ಹೋದರೆ
ಆ ಎಂದರೂ ಉದಾತ್ತ,
ಅನುದಾತ್ತ ಮತ್ತು ಸ್ವಂತವೆಂಬ ಮೂರು
ಭೇದಗಳನ್ನು ಹೊಂದಿದೆ. ಗೋಮಾತೆಯೂ ಈ
ಮೂರೂ ಪ್ರಕಾರಗಳಲ್ಲಿ ಬಳಸಲ್ಪಡುವಳು. ದೇರ್‍ಫೋರ್ ಆ=ಗೋ.
Now let us go ahead” ಎಂದಳು.
ಅವಳ ತರ್ಕದ ಮುಂದೆ
ನನ್ನದು ಸೊಲ್ಲಿಲ್ಲದ ಸೋಲು.
“ಆವು ಈವಿಗೆ ಎಂದರೆ ನಮ್ಮ
ಸಂಸ್ಕೃತಿಯ ಹಸುವಿಗೂ, ಆಡಮ್-ಈವ್
ನಂಬುಗೆಯ ಈವ್‍ಗೂ ಹೋಲಿಕೆಗಳಿವೆ. ಆವಿನಿಂದ
ನಾವು ಎಂದು ಭಾರತವು ನಂಬುವಂತೆ
ಈವಿನಿಂದ ನಾವು ಎಂದು ಪಾಶ್ಚಾತ್ಯರು
ನಂಬುವರು. ಆವು ಈವುಗಳು ಜಗನ್ಮಾತೆಯರು”
ಎಂದಳವಳು.
“ಆವು ಈವಿನ ಎಂದರೆ ಹಸುವು
ಪ್ರಸವಿಸಿದ ಕರುವೆಂದು ತಿಳಿದವರೊಬ್ಬರು ಹೇಳಿದ್ದಾರಲ್ಲ?”
“ಆ ಎಂದರೆ ಸ್ಮರಣೆ; ಈ
ಎಂದರೆ ಸರಸ್ವತಿ. ಈವಿನ ಆವು
ಎಂದರೆ ಸರಸ್ವತಿಯ ಸ್ಮರಣೆಯೆಂದು ತಿಳಿ.
ಬೇಂದ್ರೆಯವರು ‘ಕಷ್ಟದ ಬಂಡಿ’ ಎಂದು
ಬರೆದಾಗ ಎಷ್ಟೋ ಜನರು ಅದನ್ನು
ಕಷ್ಟವೆಂಬ ವಾಹನ ಎಂದು ಅರ್ಥೈಸಿದ್ದರು.
ಆದರೆ ವರಕವಿಗಳು ಬಂಡಿ ಎಂದುದು
ಬಂಡೆ ಎಂಬ ಅರ್ಥದಲ್ಲೆಂದು ಕೆಲವರೇ
ಬಲ್ಲರು” ವಾದ ಮಂಡಿಸಿದಳು ಮಡದಿ.
“ನಾವು ನೀವಿಗೆ?”
“ಇದನ್ನು ಬೇಂದ್ರೆಯವರು ಮಾಸ್ಟರ್ ಹಿರಣ್ಣಯ್ಯನವರಿಗೆ ಬಿಡಿಸಿ
ಹೇಳಿದ್ದರು. “ನೀವು ಎಲ್ಲ ಅನಿಷ್ಠಗಳಿಗೂ
ಕಾರಣರು” ಎಂದರೆ ಜನ ದಂಗೆಯೇಳುತ್ತಾರೆ.
ಆದ್ದರಿಂದ ನಿನ್ನನ್ನೂ ಅವರೊಡನೆ ಸೇರಿಸಿಕೊಂಡು
“ನಾವು ಎಲ್ಲಕ್ಕೂ ಕಾರಣರು” ಎಂದು
ನೋಡು” ಎಂದು ಸಲಹೆ ನೀಡಿದ್ದರು.
ನೀವಿಗೆ ಬದಲು ನಾವು ಎಂದರೆ
ಪ್ರಪಂಚ ನಮ್ಮೊಡನಿರುತ್ತದೆ” ಎಂದಳವಳು.
“ಇನ್ನೊಂದು
ಕೋನವನ್ನು ನೀಡಬಲ್ಲೆಯಾ?”
“ನಾವು ಎಂದರೆ ನಾವೆ; ಹಡಗು. ನೀವಿ
ಎಂದರೆ ಸಂಸ್ಕೃತದಲ್ಲಿ ಬಂಡವಾಳ ಎಂದರ್ಥ. ಬಂಡವಾಳ
ಎಂದರೆ ಮೂಲ. ಹಡಗಿನ ಮೂಲವೆಂದರೆ
buoyancy (ತೇಲುವಿಕೆ). ನಮ್ಮ ಜೀವನವೆಂಬ ಹಡಗು
ತೇಲಬೇಕು, ಮುಳುಗಬಾರದು ಎನ್ನುವುದೇ ನೀವಿಗಿರಲಿ ನಾವು
ಎಂಬುದರ ಅರ್ಥ” ಎಂದಳು.
“ನೀನು ಕಡಲಾಚೆಗೀಚೆಯಿಂದ ತರಲು ಹೇಳಿದ ಬಂಗಾರಕ್ಕೆ
ಬಂಡವಾಳ ಇಲ್ಲದಿರುವಾಗ ಏನು ಮಾಡಬೇಕು?” ಎಂದೆ.
“ಆತ
ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ
ತೋಳಬಂದಿ
ಕೆನ್ನೆ
ತುಂಬಾ ಮುತ್ತು
ಎಂಬುದರಲ್ಲೇ
ಸಂತೋಷ ಕಾಣಬೇಕು. ಆ ವಿಷಯವನ್ನು
ಅತ್ತ ಬಿಡು. ಬೇಂದ್ರೆಯವರೇ ಅವರ
‘ಬಾಹತ್ತರ’ ಸಂಕಲನದಲ್ಲಿ ಹತ್ತಂದರ ಹತ್ತು, ಏಳಂದರ
ಏಳು ಎಂದಿದ್ದಾರೆ. ಈಗ
ಬೆಳಗ್ಗೆ ಏಳಾಗುತ್ತಿದೆ. ಏಳಂದರ ಏಳಬೇಕು. ಉಪ್ಪರಿಗೆಯ
ಕುಂಡಗಳಲ್ಲಿ ಗಮ ಗಮಾ
ಗಮಾಡಿಸ್ತಾವ ಮಲ್ಲಿಗಿ. ಹತ್ತಂದರೆ ಹತ್ತಬೇಕು,
ಹೋಗಿ ಹೂಗಳನ್ನು ತರಬೇಕು. ನೀವು
ಹೋದರೆ ‘ಪಾತರಗಿತ್ತಿ ಪಕ್ಕ... ನೋಡಿದೇನ ಅಕ್ಕಾ’
ಎನ್ನುತ್ತಾ ಅಕ್ಕಪಕ್ಕದವರತ್ತ ಕಣ್ಣು ಹಾಯಿಸುತ್ತಾ ನಿಂತುಬಿಡುವಿರಿ.
ನಾನು ‘ಇನ್ನೂ ಯಾಕ ಬರಲಿಲ್ಲಾಂವಾ
ಮ್ಯಾಗ ಹೋದಾವ’ ಎಂದು ಜಪಿಸುವ
ಬದಲು ನಾನೇ ಹೋಗುತ್ತೇನೆ” ಎನ್ನುತ್ತಾ
ಮಹಡಿಯೇರಿದಳು. ಅವಳು ಇನ್ನೂ ಬಿಸಿಲುಮಚ್ಚನ್ನು
ತಲುಪಿದ್ದಳೋ ಇಲ್ಲವೋ, ಅಷ್ಟರಲ್ಲಿಯೇ ಮಗಳು
ಉದಯರಾಗದಲ್ಲಿ ‘ಇಳಿದು ಬಾ ತಾಯಿ
ಇಳಿದು ಬಾ’ ಎಂದು ಸೊಲ್ಲೆತ್ತಿದಳು.
ನಾನು ಮುಂಬಾಗಿಲನ್ನು ಇನಿತೇ ವಾರೆಯಾಗಿಸಿ ‘ಮೂಡಲ
ಮನೆಯ ಮುತ್ತಿನ ನೀರಿನ ಎರಕ’ದ ಹೊಯ್ಯುವಿಕೆಯನ್ನು
ಆನಂದಿಸತೊಡಗಿದೆ.
Nice one
ReplyDelete