ರಂಗಜ್ಜಿಯ ಕ್ರಿಕೆಟ್ ವ್ಯಾಖ್ಯಾನ

 ರಂಗಜ್ಜಿಯ ಕ್ರಿಕೆಟ್ ವ್ಯಾಖ್ಯಾನ

ಹಾಸ್ಯ ಲೇಖನ - ಅಣಕು ರಾಮನಾಥ್



ರಂಗಜ್ಜಿ ಕುಳಿತಿದ್ದಳು. ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. 

“ನಿಂಗೇನರ್ಥ ಆಗತ್ತೆ ರಂಗಜ್ಜಿ!” ಎಂದೆ. 

“ನೀನ್ಕೇಳ್ಕೊಂಡ್ಬಾ, ನಾನ್ಹೇಳ್ಕೊಂಡ್ಬರ್ತೀನಿ” ಎಂದಳು ಅಜ್ಜಿ. 

ಆ ಸಮಯಕ್ಕೆ ಸರಿಯಾಗಿ ಬ್ಯಾಟ್ಸ್‍ಮನ್ ಚೆಂಡನ್ನು ಡ್ರೈವ್ ಮಾಡಿದ. 

“ಈಗೇನರ್ಥ ಆಯ್ತು?” ಎಂದೆ. 

“ಬ್ಯಾಟ್ ಹಿಡಿದವರು ಮಡಿವಂತರು, ಬೌಲರ್ ಪಾಪಿಷ್ಟ” ಎಂದಳಾಕೆ. 

“ಯಾಕೆ?”

“ಬೌಲರ್ರಿಗೆ ಮಡಿ, ಎಂಜಲು ಎಂಥದ್ದೂ ಇಲ್ಲ. ಕೈಲಿರೋ ಬಾಲಿಗೆ ಉಗೀತಾನೆ, ಅದನ್ನೇ ಪ್ಯಾಂಟಿಗೆ ಉಜ್ಕೋತಾನೆ. ಕೊಳಕ ಅದೇ ಚೆಂಡನ್ನ ಬ್ಯಾಟ್ ಹಿಡಿದವನ ಕಡೆ ಎಸೀತಾನೆ. ಅವನು ಮಡಿವಂತ. ಎಂಜಲಾಗಿರೋ ಚೆಂಡನ್ನ ಮೈಗೆ ತಾಕಿಸ್ಕೊಳ್ಬಾರ್ದು ಅಂತ ಬ್ಯಾಟ್ ತೊಗೊಂಡು ದೂರಕ್ಕೆ ಅಟ್ತಾನೆ. ನಮ್ಮಜ್ಜೀನೂ ಹುಡುಗ್ರು, ತುಡುಗ್ರು, ಮೈಲಿಗೆಪೈಲಿಗೆ ಇಲ್ಲದ ಜಾತಿಯವರನ್ನ ಇದೇ ರೀತಿ ಕಟ್ಟಿಗೆಯ ತುದಿಯಿಂದಲೇ ಮುಟ್ತಿದ್ದಿದ್ದು” ಎಂದಳು ರಂಗಜ್ಜಿ. 

“ಕೆಲವು ಸರತಿ ಬ್ಯಾಟ್ ಹಿಡಿದವನು ಬಾಲ್ ಮುಟ್ಟಲ್ಲ. ಆಗ ವಿಕೆಟ್ ಹಿಂದೆ ಇರೋವ್ನು ಹಿಡೀತಾನಲ್ಲ, ಅವನು ಮಡಿಯವನೋ, ಮೈಲಿಗೆಯವನೋ?” ಸಂದೇಹವೊಂದನ್ನು ಮುಂದಿರಿಸಿದೆ. 

“ಫೀಲ್ಡಲ್ಲಿರೋ ಹನ್ನೊಂದು ಜನರ ಪೈಕಿ ಅವನೊಬ್ಬನೇ ಮಡಿವಂತ. ಬರಿಗೈಯಲ್ಲಿ ಮುಟ್ಟಿದರೆ ಮೈಲಿಗೆ ಅಂತ ಕೈಗೆ ಗ್ಲೌಸ್ ಹಾಕ್ಕೊಂಡಿರೋದಷ್ಟೇ ಅಲ್ಲದೆ ಕಾಲಿಗೆ ಬಿದ್ದರೂ ಮೈಲಿಗೆ ಅಂತ ಪ್ಯಾಡ್ ಕಟ್ಕೊಂಡಿರ್ತಾನೆ” ಮೆಚ್ಚುಗೆಯಿಂದ ವಿಕೆಟ್ ಕೀಪರ್‍ನತ್ತ ನೋಡಿದಳು ಅಜ್ಜಿ. 

“ಗ್ಲೌವ್ಸು, ವಿಕೆಟ್ಟು, ಪ್ಯಾಡು ಎಲ್ಲ ಗೊತ್ತಾ ಅಜ್ಜಿ ನಿನಗೆ?”

“ನಿಮ್ತಾತನ ಬಳುವಳಿ ಅದೆಲ್ಲ. ಮ್ಯಾಚ್ ಶುರು ಆದ್ರೆ ಮನೆಗೆ ಸಾಮಾನು ತರೋದನ್ನೂ ಮರೀತಿದ್ದ ಭೂಪ ನಿನ್ತಾತ. ಅವರು ಇವೆಲ್ಲವನ್ನೂ ತಿಳಿಸಿದ್ದಾರೆ.”

“ಫೀಲ್ಡರ್‍ಗಳು ಮಡಿಯವರೋ, ಮೈಲಿಗೆಯವರೋ?”

“ಅವರು ಮೂಲತಃ ಮಡಿಯವರೇ. ಆದರೆ ಬಹಳ ಮರೆವಿನ ಸ್ವಭಾವದವರು ಅನ್ಸತ್ತೆ.”

“ಯಾಕೆ?”

“ಬ್ಯಾಟ್ಸ್‍ಮನ್ ಹೊಡೆದ ಚೆಂಡು ಮೈಲಿಗೆ ಅನ್ನೋದನ್ನ ಮರೆತು ಅಟ್ಟಿಸಿಕೊಂಡು ಹೋಗಿ ಕೈಗೆ ಎತ್ಕೋತಾರೆ. ಆಗ ಅವರಿಗೆ ಬೌಲರ್ ಚೆಂಡಿಗೆ ಉಗಿದದ್ದು ನೆನಪಾಗತ್ತೆ. ‘ಛಿ! ಎಂಜಲು!’ ಅಂತ ಮನಸ್ಸಲ್ಲೇ ಅನ್ಕೊಂಡು ಅದನ್ನ ಎಂಜಲು ಮಾಡಿದವನ ಕಡೆಗೇ ಎಸೆದುಬಿಡ್ತಾರೆ.”

“ಅಂಪೈರ್ ಕಥೆ ಏನಜ್ಜಿ?”

“ಅವರು ಬೌಲರ್ ಎಂಜಲು ಮಾಡಿದ ಚೆಂಡನ್ನ ಎಸೆಯದಿರಲಿ ಅಂತ ಕೈ ಅಡ್ಡ ಕಟ್ಟಿ ನಿಂತಿರ್ತಾರೆ. ಆದರೆ ಬೌಲರ್ ಓಡಿಬರೋ ಸ್ಪೀಡಿಗೆ ತಮ್ಮ ಕೈ ಜಖಂ ಆದಾತು ಅಂತ ಲಾಸ್ಟ್ ಮಿನಿಟ್ಟಲ್ಲಿ ಕೈ ತೆಗೆದುಬಿಡ್ತಾರೆ, ಮೈಲಿಗೆಯವನು ಚೆಂಡು ಎಸೆದೇಬಿಡ್ತಾನೆ. ಮಡಿ, ಆಚಾರಗಳನ್ನ ಗೌರವಿಸೋವ್ರೇ ಅಂಪೈರು.”

“ಅವರು ಏನೇನೋ ಸನ್ನೆಗಳನ್ನ ಮಾಡ್ತಾರಲ್ಲ, ಅವು ಏನು?”

“ವಿಕೆಟ್ ಕೀಪರ್ ಚೆಂಡನ್ನ ಹಿಡೀದೇ ಇದ್ದಾಗ ‘ಆ ಹಾಳು ಎಂಜಲನ್ನ ಮುಟ್ಟದೆ ಒಳ್ಳೆ ಕೆಲಸ ಮಾಡಿದೆ’ ಅಂತ ಹಾರೈಸಕ್ಕೆ ಕೈ ಮೇಲಕ್ಕೆ ಎತ್ತುತ್ತಾರೆ. ಆಟದಲ್ಲಿ ಅದನ್ನ ಬೈಸ್ ಅಂತಾರೆ. ಇಂಗ್ಲಿಷ್‍ನವರೇ ವಿಚಿತ್ರ. ಎಂಜಲು ಮುಟ್ಟಿ ಬೈಸ್ಕೊಳೋ ಕೆಲಸ ಮಾಡದೆ ಇರೋದಕ್ಕೆ ಬೈಸ್ ಅಂತಾರೆ!” 



“ಲೆಗ್ ಬೈಸು?”

“ಕಟ್ಟಿಗೇಲಿ ಮುಟ್ಟಕ್ಕೂ ಯೋಗ್ಯವಾಗದ ಎಂಜಲು ಚೆಂಡನ್ನ ಒದ್ದು ಹೊರಹಾಕಿದ್ದಕ್ಕೆ ಕಾಣಿಕೆಯಾಗಿ ಕೊಡೋ ರನ್ನುಗಳೇ ಲೆಗ್ ಬೈಸು. ‘ಕಾಲಿಂದ ಒದ್ದು ಒಳ್ಳೆ ಕೆಲಸ ಮಾಡಿದೆ’ ಅಂತ ಅಂಪೈರ್ ಸನ್ನೇ ಮಾಡ್ತಾನೆ.”

“ಅಂಪೈರ್ ಫೋರ್ ತೋರಿಸೋದರ ಹಿನ್ನೆಲೆ ಏನು?”

“ಕೊಳಕರು ತಂದು ಎಸೆದದ್ದು ಗಡಿಯಿಂದ ಹೊರಕ್ಕೆ ತಳ್ಳಕ್ಕೇ ಲಾಯಕ್ಕು ಅಂತ ಸೂಚಿಸೋ ರೀತಿ ಅದು. ಮನೆಯೊಳಗೆ ಬೇಡವಾದವರು ನುಗ್ಗಿದಾಗ ‘ನಡಿ ಹೊರಗೆ’ ಅಂತ ಕೈಮಾಡುವ ರೀತಿಯಲ್ಲೇ ಅವರು ಸನ್ನೆ ಮಾಡೋದು. ಮಿಕ್ಕಿದ್ದೆಲ್ಲ ಸರಿ, ಮಹಿಳೆಯರ ಕ್ರಿಕೆಟ್ ಪಂದ್ಯಗಳಲ್ಲಿ ವೈಡ್ ಬಾಲನ್ನ ಬೇರೆ ರೀತಿ ತೋರಿಸೋದು ಸೂಕ್ತ ಅನ್ಸತ್ತೆ”  ಎಂದರು ಅಜ್ಜಿ. 

“ಯಾಕೆ?”

“ಯಾವುದೋ ಕೌಂಟಿ ಮ್ಯಾಚಲ್ಲಿ ಅಂಪೈರ್ ತನ್ನ ಎರಡೂ ಕೈಗಳನ್ನ ಅಗಲಿಸಿ ಬೌಲರಿಣಿಯ ಕಡೆಗೆ ತಿರುಗಿದನಂತೆ. ಅವಳು ಇವನು ತನ್ನನ್ನು ಹಿಡಿಯಕ್ಕೆ ಬರ್ತಿದಾನೆ ಅಂದ್ಕೊಂಡು ಕೆನ್ನೆಗೆ ಬಾರಿಸಿದಳಂತೆ. ಅಂತಹ ಮಿಸಂಡ್ರಸ್ಟ್ಯಾಂಡಿಂಗ್ ತಪ್ಪಿಸಕ್ಕೆ ವೈಡ್ ಬಾಲ್‍ನ ಸಿಗ್ನಲ್ ಚೇಂಜ್ ಮಾಡೋದ್ವಾಸಿ” ಎಂದಳು ರಂಗಜ್ಜಿ. 

“ಬೌಲ್ಡ್ ಆಗೋದೂಂದ್ರೆ ಏನಜ್ಜಿ?” ಅಜ್ಜಿಯ ವ್ಯಾಖ್ಯಾನಗಳನ್ನು ಮತ್ತಷ್ಟು ಕೇಳುವ ಮನಸ್ಸಾಯಿತು. 

“ಲೈಫ್ ಎಸೆಯೋ ಚಾಲೆಂಜುಗಳನ್ನ ಎದುರಿಸಕ್ಕೆ ಆಗದೆ ಔಟ್ ಆಗೋದೇ ಬೌಲ್ಡು.”

“ಕ್ಯಾಚ್ ಔಟ್ ಆಗೋದು?”

“ಮಹತ್ವಾಕಾಂಕ್ಷೆಯಿಂದ ಎಲ್ಲೋ ತೂರಕ್ಕೋ, ಎಲ್ಲೋ ಹಾರಕ್ಕೋ ಹೋಗಿ ತ್ರಿಶಂಕು ಸ್ಥಿತಿಯನ್ನ ತಲುಪೋದು.”

“ಎಲ್‍ಬಿಡಬ್ಲ್ಯೂ ಅಂದರೆ ಏನು?”

“ಲವ್ ಬಿಫೋರ್ ವೆಡ್ಡಿಂಗ್ ಅಂತ ಕೆಲವರು, ಲೈಫ್ ಬಿಫೋರ್ ವೆಡ್ಡಿಂಗ್ ಅಂತ ಕೆಲವರು ಹೇಳ್ತಾರೆ ಕಣೋ.”

“ನೀನೇನ್ಹೇಳ್ತೀಯ ಅಜ್ಜಿ?”



“ಲರ್ನ್ ಬಿಫೋರ್ ವರ್ಕಿಂಗ್ ಅಂತ. ಕಲಿಯದೆ ಮಾಡುವ ಕೆಲಸವೆಲ್ಲ ಹಾಳು. ಚೆಂಡು ಬಿದ್ದಾಗ ಅದನ್ನ ಎಲ್ಲಿಗೆ ತಿರುಗಿಸಬೇಕು ಅಂತ ಕಲಿತು ಆಡಿದರೆ ಔಟ್ ಆಗಲ್ಲ. ಕಲಿಯದೆ ಆಡಿದರೆ ಚೆಂಡೆಲ್ಲೋ, ಬ್ಯಾಟೆಲ್ಲೋ ಆಗಿ ಔಟ್ ಆಗ್ತಾರೆ.”

“ಹಿಟ್ ವಿಕೆಟ್ಗೂ ಲೈಫ್‍ಗೂ ಏನಾದ್ರೂ ಹೋಲಿಕೆ ಇದೆಯಾ?”

“ಹೂಂ. ಹಿಟ್ ವಿಕೆಟ್ ಸೂಯಿಸೈಡು. ಆಕ್ಸಿಡೆಂಟಲ್ಲಿ ಸಾಯೋದು ರನೌಟು!”

“ಫೀಲ್ಡ್ ಪ್ಲೇಸ್‍ಮೆಂಟ್‍ಗೂ, ಜೀವನಕ್ಕೂ ಹೋಲಿಕೆ ಇದೆಯಾ ಅಜ್ಜಿ?”

“ಇದೆಯಲ್ಲೋ ಮಗೂ! ಜೀವನ ಅಂದ್ರೆ ತಪ್ಪುಗಳ ಸರಮಾಲೆ ಅಲ್ವೇ! ‘ನಡೆವರೆಡಹದೆ ಕುಳಿತವರೆಡಹುವರೆ?’ ಅನ್ನೋದನ್ನ ಜ್ಞಾಪಿಸಕ್ಕೇಂತಾನೇ ಫಸ್ಟ್ ಸ್ಲಿಪ್ಪು, ಸೆಕೆಂಡ್ ಸ್ಲಿಪ್ಪು ಎಲ್ಲಾ ಇರೋದು. ಕೆಲವೊಮ್ಮೆ ಮೊದಲ ಸಾರಿ ಜೀವನದಲ್ಲಿ ಜಾರಿದಾಗಲೇ ಜೀವನ ಮುಗಿಯತ್ತೆ. ಅದೇ ಫಸ್ಟ್ ಸ್ಲಿಪ್. ಕೆಲವರಿಗೆ ಅನೇಕ ತಪ್ಪುಗಳನ್ನ ಮಾಡುವ ಅವಕಾಶ ಇರತ್ತೆ. ಅದನ್ನ ಸೂಚಿಸೋದೇ ಸೆಕೆಂಡ್, ಥರ್ಡ್, ಫೋರ್ತ್ ಸ್ಲಿಪ್ಪುಗಳು.”

“ಲೆಗ್ ಸ್ಲಿಪ್ಪು?”

“ಲೆಗ್ ಸ್ಲಿಪ್ ಆದಾಗಲೇ ಜಾರೋದಲ್ವೇನೋ!”

“ಥರ್ಡ್ ಮ್ಯಾನ್ ಅಂತ ಇರತ್ತಲ್ಲ, ಅದೇನಜ್ಜಿ?”

“ಲೈಫಲ್ಲಿ ಚೆನ್ನಾಗಿರ್ಬೇಕೂಂತ ಆಸೆ ಪಡೋವ್ರು, ಕಷ್ಟ ಪಡೋವ್ರು ಸ್ವಲ್ಪ ಎಡವಿದರೂ, ಜಾರಿದರೂ ಅದನ್ನ ನೋಡಕ್ಕೇಂತ ಕಾಯ್ತಾ ಇರೋ ಜನರೇ ಥರ್ಡ್ ಮ್ಯಾನ್!”

“ಫೈನ್ ಲೆಗ್, ಲಾಂಗ್ ಲೆಗ್?”

“ಇವೆಲ್ಲ ವಿಮೆನ್ಸ್ ಕಾಲೇಜಿನ ಮುಂದೆ ಪಡ್ಡೆಗಳು ಹುಡುಗಿಯರನ್ನ ನೋಡ್ತಾ ಆಡೋ ಪದಗಳು.”

“ಮಿಡ್ ಆನ್, ಮಿಡ್ ಆಫ್?”

“ಮಿಡ್ ಅಂದ್ರೆ ಸೊಂಟ. ಬಳುಕುವ ಸೊಂಟ ಇದ್ದರೆ ಮಿಡ್ (ವಿತ್ ಫ್ಯಾಟ್)  ಆಫ್, ಬಳುಕದ ಸೊಂಟವಾದರೆ ಮಿಡ್ (ವಿತ್ ಫ್ಯಾಟ್) ಆನ್!”

“ಕ್ರಿಕೆಟ್ ಟೀಮಿಗೆ ಎರಡೇ ಲೈನಲ್ಲಿ ಹಾರೈಕೆ ಸಲ್ಲಿಸೋದು ಹೇಗೆ ಅಜ್ಜಿ?”

“ಹೊಸಬಾಲಿನ ಎದುರಲಿ ನಿಂತಿರುವ ಹೊಸಜೋಡಿಗೆ ಶುಭವಾಗಲಿ; ಅದರಾಚೆಗೆ ಆಡಲು ಬರಲಿರುವ ನವಜೋಡಿಗೆ ಶುಭವಾಗಲಿ!”

“ನವಜೋಡಿ ಅಂದರೆ?”

“ಹೊಸಜೋಡಿ ಅಂದರೆ ಓಪನರ್ಸ್; ಆಮೇಲೆ ಬರೋ ಒಂಬತ್ತು ಜೋಡಿಗಳೇ ನವಜೋಡಿಗಳು. ಒಟ್ಟು ಹತ್ತು ಜೋಡಿಗಳ ಅಲ್ವೇನೋ!”

“ಆ ಜೋಡಿಗಳಿಗೂ, ಬದುಕಿನ ಜೋಡಿಗಳಿಗೂ ಏನು ಸಾಮ್ಯ ಅಜ್ಜಿ?”

“ಜೀವನದಲ್ಲಿ ವೇಗವೇ ಇರಲಿ, ಆವೇಗವೇ ಇರಲಿ, ತಿರುವುಗಳೇ (ಸ್ಪಿನ್) ಇರಲಿ, ಅವನ್ನ ಜೋಡಿಯಾಗಿ ಎದುರಿಸೋದು ಮುಖ್ಯ. ತಾಳ್ಮೆಯಿದ್ದಷ್ಟೂ ಜೋಡಿ ಬಲಿಷ್ಠವಾಗತ್ತೆ, ನಂಬಿದ ಟೀಮ್, ಅಂದರೆ ಬಂಧುಬಳಗಕ್ಕೆ, ಒಳ್ಳೆಯದಾಗತ್ತೆ ಅನ್ನೋದೇ ಇವೆರಡರ ಸಾಮ್ಯ” ಎಂದಳು ರಂಗಜ್ಜಿ. 

“ಕೊನೆಯದಾಗಿ, ಬ್ಯಾಟ್ಸ್‍ಮನ್ ಔಟ್ ಆದಾಗ ಅಂಪೈರ್ ಬೆರಳನ್ನ ಮೇಲಕ್ಕೆ ತೋರಿಸೋದು ಯಾಕೆ?”

“ಹೀಗೆಲ್ಲ ಆಡಿದರೆ ನಿನ್ನ ಕೆರಿಯರ್ರನ್ನ ಮೇಲಿನವನೇ ಕಾಪಾಡ್ಬೇಕು ಅಂತ ಸೂಚಿಸಕ್ಕೆ ಕಣೋ.”

“ಇಂಡಿಯಾ ಈ ಸರತಿ ಟೆಸ್ಟ್ ಚಾಂಪಿಯನ್‍ಶಿಪ್‍ ಫೈನಲ್‍ಗೆ ಏಕೆ ತಲುಪಲಿಲ್ಲ?” ಕ್ರಿಕೆಟ್ ಸರ್ವಜ್ಞೆಗೊಂದು ಅಂತಿಮ ಸವಾಲೆಸೆದೆ. 

“ಶಿಪ್ ಅಂದರೆ ಹಡಗು. ದಡದಿಂದ ಹಡಗಿಗೆ ತಲುಪಲು ದೋಣಿ ಬೇಕು. ನಮ್ಮಲ್ಲಿದ್ದ ಏಕೈಕ ದೋಣಿ ರಿಟೈರ್ ಆದ. ಅಂತಹ ದೋಣಿ ಇನ್ನೊಂದು ಸಿಗೋವರ್ಗೂ ಶಿಪ್ ಏರೋದು ಕಷ್ಟ. ದೋಣಿ ಆಡ್ತಿದ್ದ ಹಳೆಯ ಐಪಿಎಲ್ ನೋಡ್ತಾಯಿದ್ದೆ. ಬಾ ನೀನೂ ನೋಡು” ಎನ್ನುತ್ತಾ ಸ್ಕ್ರೀನಿನತ್ತ ತಿರುಗಿದಳು ಅಜ್ಜಿ. 

ಬಾಯಿಬಿಟ್ಟುಕೊಂಡು ಅಜ್ಜಿ ಮ್ಯಾಚ್ ನೋಡುತ್ತಿದ್ದಳು; ನಾನು ಚೀರ್ ಗರ್ಲ್‍ಗಳನ್ನು!    


Comments